ಅಂಕಣಗಳು

ಆರ್‌ಬಿಐ-ಯುಪಿಎ ನಡುವೆ ಇದೆಂಥ ತಿಕ್ಕಾಟ?

Published On :

ವಿತ್ತೀಯ ನೀತಿಯನ್ನು ರೂಪಿಸಿ ಜಾರಿಗೊಳಿಸುವಲ್ಲಿ ಪೂರ್ಣ ಪ್ರಮಾಣದ ಸ್ವಾತಂತ್ರ್ಯವಿರುವ ಕೇಂದ್ರ ಸರ್ಕಾರ ಮತ್ತು ಹಣಕಾಸಿನ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಅರೆಬರೆ ಅಧಿಕಾರವುಳ್ಳ ರಿಸರ್ವ್ ಬ್ಯಾಂಕ್ (ಆರ್.ಬಿ.ಐ.) ನಡುವಣ ತಿಕ್ಕಾಟದಿಂದ ಆದ ಹಾನಿ ಸಣ್ಣದಲ್ಲ. ಈಗ ದೇಶ ಭೀತಿ ಹುಟ್ಟಿಸುವ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಈಗೊಮ್ಮೆಯಾದರೂ ಈ ತಿಕ್ಕಾಟ ಇಲ್ಲವಾದರೆ ದೊಡ್ಡ ಉಪಕಾರವಾಗಲಿದೆ.  1935 ಎಪ್ರಿಲ್ ತಿಂಗಳಿನಲ್ಲಿ ಭಾರತದ ಕೇಂದ್ರ ಬ್ಯಾಂಕ್ ಆದ ಆರ್.ಬಿ.ಐ. ಖಾಸಗಿ ಪಾಲುದಾರ ಬ್ಯಾಂಕ್ ಆಗಿ ಜನ್ಮ ತಾಳಿತು. ಹಣಕಾಸಿನ ನಿರ್ವಹಣೆ ಮತ್ತು ಹಣಕಾಸಿನ ಸ್ಥಿರತೆ ಎಂಬ ಸೀಮಿತ ಉದ್ದೇಶಗಳೊಂದಿಗೆ ಬ್ಯಾಂಕಿನ ಸ್ಥಾಪನೆ. 1949 ಜನವರಿ 1ರಂದು ಇದರ ರಾಷ್ಟ್ರೀಕರಣ. ಬ್ಯಾಂಕಿನ ಆಡಳಿತವನ್ನು ಕೇಂದ್ರ ನಿರ್ದೇಶಕರ ಮಂಡಳಿಗೆ ವಹಿಸಲಾಗಿದೆ. ಮಂಡಳಿಯ 21 ಸದಸ್ಯರನ್ನು ಒಬ್ಬ ಗವರ್ನರ್ ಮತ್ತು 4 ಡೆಪ್ಯೂಟಿ ಗವರ್ನರ್‌ಗಳು ಸೇರಿದಂತೆ  ಕೇಂದ್ರ ಸರ್ಕಾರ ನೇಮಿಸುತ್ತದೆ. ಆಡಳಿತ ವ್ಯವಸ್ಥೆಯನ್ನು ಪರಿಗಣಿಸಿದರೆ ಆರ್.ಬಿ.ಐ. ಹಿಂದಿನಿಂದ ಇಂದಿನ ತನಕ ನೂರಕ್ಕೆ ನೂರರಷ್ಟು ಸರ್ಕಾರಿ ಬ್ಯಾಂಕ್. ಗವರ್ನರರಿಗೆ ತಮಗೆ ಸರಿಯಾಗಿ ನೆರವಾಗಬಲ್ಲ ಒಬ್ಬ ಬ್ಯಾಂಕಿಂಗ್ ತಜ್ಞನನ್ನು ಕೂಡ ಮಂಡಳಿಗೆ ಸೇರಿಸಿಕೊಳ್ಳುವ ಅಧಿಕಾರವಿಲ್ಲ.
ಉದಾರೀಕರಣದ ಯುಗ ಪ್ರಾರಂಭವಾದ ನಂತರವೂ ರಿಸರ್ವ್ ಬ್ಯಾಂಕಿನ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಿಲ್ಲ. ಆರ್ಥಿಕ ಸುಧಾರಣೆಗಳ ಜೊತೆಗೆ ಬ್ಯಾಂಕಿಂಗ್ ರಂಗಗಳ ಸುಧಾರಣೆಗಳು ಅನುಷ್ಠಾನಗೊಂಡವು. ನಂತರ ಸಾರ್ವಜನಿಕ ರಂಗದ ವಾಣಿಜ್ಯ ಬ್ಯಾಂಕುಗಳಿಗೆ ಠೇವಣಿ ಮತ್ತು ಸಾಲದ ಬಡ್ಡಿ ದರಗಳನ್ನು ಮಾರುಕಟ್ಟೆ ಶಕ್ತಿಗಳಿಗನುಗುಣವಾಗಿ ನಿರ್ಧರಿಸುವ ಮಟ್ಟಿಗೆ ಸ್ವಾಯತ್ತೆ ಬಂದಿದೆ. ಹೇಳಿಕೊಳ್ಳುವ ಯಾವ ಸ್ವಾಯತ್ತೆಯೂ ಆರ್.ಬಿ.ಐ.ಗೆ ದೊರೆತಿಲ್ಲ. 1951ರ ನಂತರ ಸಾಂಪ್ರದಾಯಿಕ ಕೇಂದ್ರ ಬ್ಯಾಂಕಿನ ಕಾರ್ಯಗಳಲ್ಲದೆ ಅಭಿವೃದ್ಧಿ ಮತ್ತು ಪ್ರವರ್ತನಾ ಕಾರ್ಯಗಳ ಹೊಣೆಗಾರಿಕೆಯನ್ನೂ ಆರ್.ಬಿ.ಐ.ಗೆ ವಹಿಸಲಾಯಿತು. ಅದರ ಜವಾಬ್ದಾರಿಗಳ ಕಕ್ಷೆ ದೊಡ್ಡದು, ಅಧಿಕಾರವ್ಯಾಪ್ತಿ ಸಣ್ಣದು.
ಕಳೆದ 2 ವರ್ಷಗಳಿಂದ ಆರ್ಥಿಕ ಬೆಳವಣಿಗೆಯ ದರ ಕುಂಠಿತಗೊಂಡಿತು. ತನ್ನ ಇಮೇಜಿಗೆ ಭಂಗ ಬಂದಿದ್ದರಿಂದ ಕೇಂದ್ರ ವಿತ್ತ ಸಚಿವಾಲಯ ಈ ದರವನ್ನು ಹೆಚ್ಚಿಸಲು ಮಿತಿ ಮೀರಿದ ಸಹಕಾರವನ್ನು ಆರ್.ಬಿ.ಐ.ಯಿಂದ ಬಯಸುತ್ತಿದೆ. ಬೆಲೆಯೇರಿಕೆಯನ್ನು ನಿಗ್ರಹಿಸಿ ಹಣಕಾಸಿನ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಆರ್.ಬಿ.ಐ. ಕ್ರಮ ಕೈಗೊಳ್ಳಬೇಕಾಯಿತು. ವಿತ್ತ ಸಚಿವಾಲಯಕ್ಕೆ ಬೇಕಾದ ಸಹಕಾರ ಸಹಜವಾಗಿ ದೊರಕಲಿಲ್ಲ. ಬೆಳವಣಿಗೆಗೆ ಪೂರಕವಾದ ಸಾಲದ ನೀತಿಯನ್ನು ರೂಪಿಸಲು ಆರ್.ಬಿ.ಐ. ಹಿಂದೇಟು ಹಾಕಿದೆಯೆಂದು ಪಿ. ಚಿದಂಬರಂ ಕೆಂಡಕಾರಿದ್ದುಂಟು. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚುತ್ತಿರುವ ಬೆಲೆಯೇರಿಕೆಯ ವೇಗವನ್ನು ಗಮನಿಸಿ ಕೈಗಾರಿಕಾ ರಂಗಕ್ಕೆ ಅನುಕೂಲಕರವಾದ ಕಡಿಮೆ ಬಡ್ಡಿದರದ ಸಾಲದ ನೀತಿಯನ್ನು ಆರ್.ಬಿ.ಐ. ಸಾರಲಿಲ್ಲ. ಬೇಕಾದರೆ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಲು ಕೇಂದ್ರ ಸರ್ಕಾರ ಏಕಾಂಗಿಯಾಗಿ ತನ್ನ ಪ್ರಯತ್ನವನ್ನು ಮುಂದುವರಿಸಲಿದೆಯೆಂದು ಚಿದಂಬರಂ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆರ್.ಬಿ.ಐ. ವಿರುದ್ಧ ತಮಗಿದ್ದ ಅಸಮಾಧಾನವನ್ನು ಹೊರಹಾಕಿದರು. ರಿಸರ್ವ್ ಬ್ಯಾಂಕನ್ನು ಅವರೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟರು.
ಡಾಲರ್ ವಿರುದ್ಧ ರುಪಾಯಿಯ ಮೌಲ್ಯ ಕುಸಿತವಾಗುವ ಲಕ್ಷಣ, ಹೆಚ್ಚುತ್ತಿದ್ದ ಚಾಲ್ತಿ ಲೆಕ್ಕದ ಕೊರತೆ ಮತ್ತು ನೇರ ವಿದೇಶಿ ಬಂಡವಾಳದ ಹರಿವಿನಲ್ಲಿ ಇಳಿಕೆಗಳಿಂದ ದೇಶದಲ್ಲಿ ಒಟ್ಟಾರೆ ಹೂಡಿಕೆಯ ಪ್ರಮಾಣ ಕಡಿಮೆಯಾದಾಗ ಹಿಂದಿನ ವಿತ್ತ ಸಚಿವ ಪ್ರಣಬ್ ಮುಖರ್ಜಿ ಸ್ವಲ್ಪ ಕಕ್ಕಾಬಿಕ್ಕಿಯಾದರು. 2012 ಮೇ 31ರಂದು ನವದೆಹಲಿಯಲ್ಲಿ ಈ ಕಳವಳಕಾರಿ ಪರಿಸ್ಥಿತಿ ಬರಲು ರಿಸರ್ವ್ ಬ್ಯಾಂಕಿನ ಬಿಗುವಾದ ಹಣಕಾಸಿನ ನೀತಿ ಕೂಡ ಕಾರಣವೆಂದು ಗಟ್ಟಿಯಾಗಿ ಹೇಳಿದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಸಾಧನೆ ಶೂನ್ಯ. ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಯಿದೆಯೆಂಬ ಭಾವನೆ ಸಹ ಈಗ ಬರುವುದಿಲ್ಲ. ಅಪೇಕ್ಷಿತ ದರವನ್ನು ಕಡಿತಗೊಳಿಸುವಲ್ಲಿ ಯೋಜನಾ ಆಯೋಗ ಹಿಡಿತ ಸಾಧಿಸಿದೆ ಸೇರ್ಪಡೆಯುಳ್ಳ ಆರ್ಥಿಕ ಬೆಳವಣಿಗೆಯ ಹೆಸರಿನಲ್ಲಿ 11ನೆಯ ಯೋಜನೆಯ ಕುರಿತು ಉನ್ನತ ಶಿಕ್ಷಣ ಸಂಸ್ಥೆಗಳು ವಿಚಾರ ಸಂಕಿರಣಗಳನ್ನು ನಡೆಸುತ್ತಿದ್ದವು. ಅಪರಕ್ರಿಯೆಯನ್ನು ನೆನಪಿಸುವ 12ನೆಯ ಯೋಜನೆಗೆ ವಿಚಾರ ಸಂಕಿರಣಗಳ ಭಾಗ್ಯವೂ ಇಲ್ಲ. ಆದರೂ ಮಾಂಟೆಕ್, ಆರ್ಥಿಕ ಬೆಳವಣಿಗೆಯ ವಿಚಾರವನ್ನು ಮುಂದಿಟ್ಟುಕೊಂಡು ಆರ್.ಬಿ.ಐ.ನ ಹಣಕಾಸು ನೀತಿಯನ್ನು ಟೀಕಿಸಿ ತಮ್ಮ ಸ್ವಾಮಿ ನಿಷ್ಠೆ ಪ್ರದರ್ಶಿಸಿದ್ದಾರೆ.
ಸ್ಥಿರತೆಯನ್ನು ಸಾಧಿಸುವ ಗುರಿಯುಳ್ಳ ರಿಸರ್ವ್ ಬ್ಯಾಂಕಿನ ಸಾಲ ನಿಯಂತ್ರಣ ಕ್ರಮಗಳು ನಿತ್ರಾಣದಿಂದ ಬಳಲುತ್ತಿರುವುದು ಸತ್ಯ. ಈ ಸಾಲ ನಿಯಂತ್ರಣ ವಿಧಾನಗಳನ್ನು ಪ್ರಮಾಣಾತ್ಮಕ ಮತ್ತು ಗುಣಾತ್ಮಕ ವಿಧಾನಗಳೆಂದು ವರ್ಗೀಕರಿಸಲಾಗಿದೆ. ಪರಂಪರೆಯ ದಾರಿಯಲ್ಲಿ ನಡೆದು ಬಂದ ಬ್ಯಾಂಕ್ ದರದ ನೀತಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತವಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳ ನೀತಿ, ಮುಕ್ತ ಮಾರುಕಟ್ಟೆಯ ವ್ಯವಹಾರ, ನಗದು ಮೀಸಲು ಅನುಪಾತ ಮತ್ತು ಶಾಸನಬದ್ಧ ನಗದು ಅನುಪಾತ ಇವು ಒಟ್ಟು ಸಾಲದ ಪ್ರಮಾಣ ಮತ್ತು ಬಡ್ಡಿ ದರಗಳನ್ನು ನಿಯಂತ್ರಿಸುವ ಪ್ರಮಾಣಾತ್ಮಕ ಕ್ರಮಗಳು. ರಿಸರ್ವ್ ಬ್ಯಾಂಕು ರೆಪೊ ಮತ್ತು ರಿವರ್ಸ್ ರೆಪೊದರಗಳಲ್ಲಿ ಬದಲಾವಣೆ ಮಾಡಿದಾಗ ಸರ್ಕಾರಿ ವಾಣಿಜ್ಯ ಬ್ಯಾಂಕುಗಳು ಪೂರಕವಾದ ಬದಲಾವಣೆ ಮಾಡಲು ನಿರಾಕರಿಸಿದ ಸಂದರ್ಭಗಳು ದಾಖಲಾಗಿವೆ. ಕಳೆದ ಜುಲೈ 4ರಂದು ನವದೆಹಲಿಯಲ್ಲಿ ಚಿದಂಬರಂ ನೀಡಿದ ಹೇಳಿಕೆ ನಮ್ಮ ಕೇಂದ್ರ ಬ್ಯಾಂಕಿನ ಶಕ್ತಿಹೀನತೆಗೆ ಸಾಕ್ಷಿ ಒದಗಿಸುವಂತಿತ್ತು. 2012 ಜನವರಿಯಿಂದ 2013 ಜುಲೈವರೆಗೆ ಆರ್.ಬಿ.ಐ. ಮೂಲ ಬಡ್ಡಿದರವನ್ನು ಶೇ.1.25ರಷ್ಟು ಇಳಿಸಿದ್ದರೂ ಇದರ ಪ್ರಯೋಜನವನ್ನು ವಾಣಿಜ್ಯ ಬ್ಯಾಂಕುಗಳು ಸರಿಯಾಗಿ ಗ್ರಾಹಕರಿಗೆ ದಾಟಿಸಿಲ್ಲವೆಂಬ ಧಾಟಿಯಲ್ಲಿ ಅವರು ಮಾತನಾಡಿದರು. ಆರ್.ಬಿ.ಐ.ನ ಸಾಲದ ನೀತಿಗೆ ವಾಣಿಜ್ಯ ಬ್ಯಾಂಕುಗಳ ಒಲವು ಇಲ್ಲ. ಹೀಗಾಗಿ ಅದಕ್ಕೆ ಬಲವೇ ಇಲ್ಲ!
ಸಾಲಗಳಿಗೆ ಭದ್ರತಾ ಮಿತಿ ಏರಿಸುವುದು, ಮುಂಗಡದ ಗರಿಷ್ಠ ಮಿತಿ ನಿಗದಿಪಡಿಸುವುದು, ಅತೀವ ಬೆಲೆಯೇರಿಕೆಗೆ ಕಾರಣವಾಗಬಲ್ಲ ಉದ್ದೇಶಗಳಿಗೆ ಸಾಲಗಳ ಪ್ರಮಾಣಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು ಮತ್ತು ಕೆಲವು ವಿಧದ ಸಾಲಗಳ ಮೇಲೆ ತಾರತಮ್ಯದ ಬಡ್ಡಿ ದರಗಳನ್ನು ವಿಧಿಸುವುದು-ಇವೆಲ್ಲ ಗುಣಾತ್ಮಕ ಸಾಲನಿಯಂತ್ರಣದ ಕ್ರಮಗಳು. ಅದರ ಗುಣಾತ್ಮಕ ಸಾಲ ನಿಯಂತ್ರಣದ ಆದೇಶಗಳನ್ನು ವಾಣಿಜ್ಯ ಬ್ಯಾಂಕುಗಳು ಸುಲಭವಾಗಿ ಉಲ್ಲಂಘಿಸಿ ಬಿಡುತ್ತವೆ. ಈ ಆದೇಶಗಳಿಗೆ ಅರ್ಥಶಾಸ್ತ್ರದ ಪಠ್ಯ ಪುಸ್ತಕಗಳ ಪುಟಗಳನ್ನು ತುಂಬಿಸುವ ಅದೃಷ್ಟ ಮಾತ್ರ ದೊರೆತಿದೆ. ಪ್ರಾಯೋಗಿಕವಾಗಿ ಈ ಆದೇಶಗಳು ಪರದೇಶಿಗಳು
ಸರ್ಕಾರದ ಒಡೆತನದಲ್ಲಿರುವ ಸ್ಟೇಟ್, ರಿಸರ್ವ್ ಬ್ಯಾಂಕಿನ ಸಾಲದ ನೀತಿಯನ್ನು ಟೀಕಿಸುವಾಗ ಸದಾ ಮುಂದಿನ ಸಾಲಿನಲ್ಲಿರುತ್ತದೆ. 2008-12ರ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಾಲ ನೀಡುವಾಗ ಸ್ಟೇಟ್ ಬ್ಯಾಂಕ್ ತನ್ನ ಆದೇಶಗಳನ್ನು ಉಲ್ಲಂಘಿಸಿದೆಯೆಂದು ಆರ್.ಬಿ.ಐ. ಸಿಡಿಮಿಡಿಗೊಂಡಿತ್ತು. ಇತರ ಬ್ಯಾಂಕುಗಳು ಕೂಡ ಈ ಆದೇಶಗಳನ್ನು ಸಲೀಸಾಗಿ ಉಲ್ಲಂಘಿಸಿರಬಹುದು. ಆರ್.ಬಿ.ಐ. ಈಗ ಪಾರುಪತ್ಯ ಮಾಡಲಾಗದ ನಾಮ್ಕೇ ವಾಸ್ತೇ ಪಾರುಪತ್ಯಗಾರ. ಪರಿಸ್ಥಿತಿ ಹೀಗಾಗಲು ಕೇವಲ ಲಾಭ - ಹಾನಿಗಳ ಲೆಕ್ಕಾಚಾರಗಳುಳ್ಳ ಕೆಲವೊಮ್ಮೆ ಗೋಚರಿಸುವ ಮತ್ತು ಕೆಲವೊಮ್ಮೆ ಪ್ರಚ್ಛನ್ನವಾಗಿರುವ ಕೇಂದ್ರ ಸರ್ಕಾರದ ಧೋರಣೆಗಳು ಕಾರಣ.
 ಆರ್.ಬಿ.ಐ. ಮಾಜಿ ಗವರ್ನರ್ ವೈ.ವಿ. ರೆಡ್ಡಿ ಮತ್ತು ಚಿದಂಬರಂ ನಡುವೆ ತಿಕ್ಕಾಟವಾಗಿತ್ತು. ಆರ್.ಬಿ.ಐ.ಗೆ ಸ್ವಾಯತ್ತೆ ಇಲ್ಲವೆಂಬ ಕೊರಗು ರೆಡ್ಡಿಯವರನ್ನು ಕಾಡಿತ್ತು. ಅವರ ಉತ್ತರಾಧಿಕಾರಿ ಚಿದಂಬರಂ ಅವರ ಕೆಂಗಣ್ಣಿಗೆ ಟಾರ್ಗೆಟ್ ಆದ ಡಿ. ಸುಬ್ಬರಾವ್ ರಿಸರ್ವ್ ಬ್ಯಾಂಕಿಗೆ ಸ್ವಾಯತ್ತೆ ಬೇಕೆಂಬ ಕೂಗೆತ್ತಿದ್ದಾರೆ. 2011 ಜೂನ್ 10ರಂದು ಕೇರಳದ ಕುಮಾರಕೋಂನಲ್ಲಿ ಸಾರ್ಕ್ ದೇಶಗಳ ಕೇಂದ್ರ ಬ್ಯಾಂಕುಗಳ ಗವರ್ನರರು ಸೇರಿದ ವಿಚಾರ ಸಂಕಿರಣದಲ್ಲಿ ಹಣಕಾಸಿನ ಸ್ಥಿರತೆ ಕಾಪಾಡಿಕೊಳ್ಳಲು ಕೇಂದ್ರ ಬ್ಯಾಂಕುಗಳಿಗೆ ಸ್ವಾಯತ್ತೆ ಬೇಕೆಂದು ಹೇಳಿ ಸುಬ್ಬರಾವ್ ವಿತ್ತ ಸಚಿವಾಲಯಕ್ಕೆ ಶಾಕ್ ನೀಡಿದ್ದರು. 2013 ಜುಲೈ 3ರಂದು ಚೆನ್ನೈನಲ್ಲಿ ರಿಸರ್ವ್ ಬ್ಯಾಂಕಿನ ಸಿಬ್ಬಂದಿ ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸುಬ್ಬರಾವ್ ಮಾತನಾಡಿದರು. ಅಲ್ಲೂ ಆರ್.ಬಿ.ಐ. ಸ್ವಾಯತ್ತ ಸಂಸ್ಥೆಯ ಅನುಕೂಲಗಳನ್ನು ಅನುಭವಿಸುವಂತಾಗಬೇಕೆಂದು ಹೇಳಿ ತೃಪ್ತಿಪಟ್ಟರು.
ನಿಜಕ್ಕೂ ಗಂಭೀರವಾದ ಆರ್ಥಿಕ ಸಮಸ್ಯೆಗಳು ಈಗ ಸರ್ವಾಂಗ ಸುಂದರ ಕವಾಯತು ಮಾಡುತ್ತಿವೆ. ಆರ್ಥಿಕತೆಯ ಮೂಲಾಧಾರಗಳು ಭದ್ರವಾಗಿವೆಯೆಂದು ಹೇಳುವ ಧೈರ್ಯ ವಿತ್ತ ಸಚಿವಾಲಯಕ್ಕಿಲ್ಲ. 2014ರ ಚುನಾವಣೆಯ ಮೇಲೆ ಕಣ್ಣಿಟ್ಟು ಕುಳಿತಿರುವ ಯು.ಪಿ.ಎ. ಸರ್ಕಾರ ಸಮಸ್ಯೆಗಳನ್ನು ಪರಿಹರಿಸಲು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಲಿಕ್ಕಿಲ್ಲ. ಆರ್.ಬಿ.ಐ.ಗೆ ಪರಿಸ್ಥಿತಿಯನ್ನು ನಿಭಾಯಿಸಲು ಸರಿಯಾದ ಮತ್ತು ಗಟ್ಟಿಯಾದ ಅಧಿಕಾರ ಇಲ್ಲವಾದರೆ ಆರ್ಥಿಕತೆಯ ಮೂಲಾಧಾರಗಳು ಮತ್ತಷ್ಟು ಶಿಥಿಲವಾಗಲಿವೆ.
ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಗಳನ್ನು ಮಾಡಿದ ಅನುಭವಿ ಆರ್ಥಿಕ ತಜ್ಞ ರಘುರಾಂ ಜಿ. ರಾಜನ್ ಆರ್.ಬಿ.ಐ.ನ ನೂತನ ಗವರ್ನರ್ ಆಗಿ ನೇಮಕಗೊಂಡಿದ್ದು ಸ್ವಾಗತಾರ್ಹ ಬೆಳವಣಿಗೆ. ತಿಕ್ಕಾಟದ ಅನಾಹುತಗಳನ್ನು ಸರಿಯಾಗಿ ತಿಳಿದುಕೊಂಡ ವ್ಯಕ್ತಿ ಅವರು. ಅ.6ರಂದು ತಿಕ್ಕಾಟದ ಪ್ರವೃತ್ತಿಗೆ ಹೆಸರಾದ ಹಸ್ತಿನಾವತಿಯಲ್ಲಿ ಚುಟುಕು ಸುದ್ದಿಗೋಷ್ಠಿಯಲ್ಲಿ ರಘುರಾಂ ರಾಜನ್ ಮಾತನಾಡಿದರು. ಸದ್ಯ ದೇಶದ ಆರ್ಥಿಕ ಸ್ಥಿತಿ ಭಾರೀ ಸವಾಲುಗಳ ಸಂದರ್ಭದಲ್ಲಿದೆ, ಕೇಂದ್ರ ಸರ್ಕಾರ ಮತ್ತು ಆರ್.ಬಿ.ಐ. ಜತೆಯಾಗಿ ಸಮಸ್ಯೆಗಳನ್ನು ಪರಿಹರಿಸಲಿವೆಯೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ವಿಶ್ವಾಸ ಎಷ್ಟು ಕಾಲ ದೀರ್ಘವಾಗಿ ಶ್ವಾಸೋಚ್ಛಾಸ ಮಾಡಬಲ್ಲುದು ಎಂಬುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

- ಪ್ರೊ. ಜಿ.ವಿ. ಜೋಶಿ ನಿಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.