

ಈ ದೇಶದಲ್ಲಿ ಹಿಂದುಗಳಾಗಿ ಹುಟ್ಟುವುದೇ ತಪ್ಪಾ? ಗರ್ವದಿಂದ ಹೇಳಿ ಹಿಂದು ಎಂಬ ಮಾತುಗಳಿಗೆ ಬೆಲೆಯೇ ಇಲ್ವಾ? ಬಹುಸಂಖ್ಯಾತರು ನಾವು ಎಂದು ಹೇಳಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಯಾವ ಸೌಲಭ್ಯವೂ ಈ ದೇಶದಲ್ಲಿ ನಿಮಗೆ ಕೇವಲ ಹಿಂದುವಾಗಿ ಸಿಗದು. ಇದನ್ನು ನೋಡಿಯೇ ಇರಬೇಕು ನಮ್ಮ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಜನಿಸಬೇಕು ಎಂದಿದ್ದು! ಹಾಗೆ ಹೇಳಿಯೂ ಜಾತ್ಯತೀತವಾದಿಯಾದದ್ದು!!
ನಮ್ಮ ದೇಶದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದರೆ ಜಾತ್ಯತೀತ. ದೀಪಾವಳಿ, ಯುಗಾದಿಗೆ ಊಟ ಹಾಕಿಸಿದರೆ ಜಾತಿವಾದಿ! ಮುಸ್ಲಿಮರನ್ನು ಟೀಕಿಸಿದರೆ ಕೋಮುವಾದಿ. ಮುಸ್ಲಿಮರಿಗೆ ನೀಡುವ ಸೌಲಭ್ಯಗಳನ್ನು, ಅವರ ಕ್ರಮಗಳನ್ನು ಪ್ರಶ್ನಿಸಿದರೂ ಅದೇ ಪಟ್ಟಿಗೆ ಸೇರಿಸುತ್ತಾರೆ. ಆದರೆ ಹಿಂದುಗಳನ್ನು ಟೀಕಿಸಿದರೆ, ಅವರ ರೀತಿ ರಿವಾಜುಗಳನ್ನು ಟೀಕಿಸಿದರೆ ಅವರು ಪ್ರಗತಿಪರರು.
ಇದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮ ಕೇಂದ್ರ ಸರ್ಕಾರದ ಹೊಸ ಚಿಂತನೆ. ಜೈಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಕಾನೂನು ನೆರವು ನೀಡಲು ಉದ್ದೇಶಿಸಲಾಗಿದೆಯಂತೆ!
ಮುಸ್ಲಿಂ ಯುವಕರ ಮೇಲೆ ಹೆಚ್ಚಿನ ಪ್ರಕರಣಗಳಿವೆ. ಅವರಲ್ಲಿ ಅಮಾಯಕರೂ ಇರಬಹುದು. ಆದ್ದರಿಂದ ಅವರಿಗೆ ಸಹಾಯ ಮಾಡಲೆಂದು ಅವರಿಗೆ ಕಾನೂನು ನೆರವು ನೀಡುವ ಔದಾರ್ಯ ತೋರಲು ಕೇಂದ್ರ ಸರ್ಕಾರ ಮುಂದಾಗಿದೆಯಂತೆ. ಹಾಗಂತ ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂದೆ ಹೇಳಿದ್ದಾರೆ. ಇದೊಂಥರ ಮಗುವನ್ನು ಚಿವುಟುವುದೂ ಇವರೇ, ಸಮಾಧಾನ ಮಾಡುವುದೂ ಇವರೇ ಎಂಬಂತಾಗಿದೆ. ಯಾಕೆಂದರೆ ಪೊಲೀಸ್, ಸಿಬಿಐ, ಎನ್ಐಎ ಇವುಗಳೆಲ್ಲ ಸರ್ಕಾರದ ವ್ಯಾಪ್ತಿಯಲ್ಲಿಯೇ ಬರುತ್ತವೆ. ಅಂದರೆ ಇವರೆಲ್ಲ ಗೃಹ ಇಲಾಖೆ ಪರವಾಗಿಯೇ ಕೆಲಸ ಮಾಡುತ್ತಿರುತ್ತಾರೆ. ಸರ್ಕಾರವೇ ಹಿಡಿದು ಒಳಗೆ ಹಾಕಿದವರನ್ನು ಸರ್ಕಾರವೇ ಸಹಾಯ ಮಾಡಿ ಬಿಡಿಸುವ ಹುಚ್ಚು ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರದ ಗೃಹ ಇಲಾಖೆ ಮೂಲಕ ಕಾಂಗ್ರೆಸ್ ಪಕ್ಷ ಇಂತಹ ಕುತ್ಸಿತ ಯೋಜನೆಯೊಂದನ್ನು ಜಾರಿ ಮಾಡಲು ಹೊರಟಿದೆ. ಈ ನೆಪದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಕನ್ನ ಹಾಕುವುದು ಕಾಂಗ್ರೆಸ್ ಚಿಂತನೆ. ಮತ ಕೇಳಲು ಬೇರೇನೂ ಇಲ್ಲದಿದ್ದಾಗ ಇನ್ನೇನು ಮಾಡಿಯಾರು? ಹಿಂದುಗಳ ಪರವಾಗಿ ಮಾತನಾಡುವ ಬಿಜೆಪಿಯನ್ನು ಕಾಂಗ್ರೆಸ್ಸಿಗರು ಕೋಮುವಾದಿ ಎಂದು ಟೀಕಿಸುವುದಾದರೆ, ಮುಂಸ್ಲಿ ಕೈದಿಗಳಿಗೆ ಸಹಾಯ ಮಾಡಲು ಹೊರಟಿರುವ ಕಾಂಗ್ರೆಸ್ಸನ್ನು ಯಾಕೆ ಕೋಮುವಾದಿ ಎಂದು ಕರೆಯಬಾರದು?
ಓಲೈಕೆ ರಾಜಕಾರಣ ಇರಬೇಕು. ತಮಗೆ ಮತ ಹಾಕುವವರಿಗೆ ಅಧಿಕಾರದಲ್ಲಿದ್ದಾಗ ಕೊಂಚ ಮಟ್ಟಿನ ಸಹಾಯ ಮಾಡುವುದು ಖಂಡಿತ ತಪ್ಪಲ್ಲ. ಆದರೆ ಆ ಓಲೈಕೆ ದೇಶದ ಹಿತಕ್ಕೇ ಮಾರಕವಾಗುವಂತಿರಬಾರದು.
ಇಷ್ಟಕ್ಕೂ ವಿಚಾರಣಾಧೀನ ಕೈದಿಗಳಾಗಿರುವ ಹಿಂದುಗಳು ಮಾಡಿದ ತಪ್ಪೇನು? ಹಿಂದುಗಳಾಗಿ ಹುಟ್ಟಿದ್ದೇ ಅವರ ತಪ್ಪಾ? ಕೈದಿಗಳಲ್ಲೂ ಹಿಂದು-ಮುಸ್ಲಿ-ಕೈಸ್ತ ಎಂದು ಬೇಧ ಮಾಡುವುದನ್ನು ಯಾವ ದೇಶದ ಸಂವಿಧಾನ ಸಮರ್ಥಿಸುತ್ತದೆ? ಕೈದಿಗಳನ್ನು ಕೇವಲ ಕೈದಿಗಳನ್ನಾಗಿ ನೋಡಲು ಯಾಕೆ ನಮ್ಮ ರಾಜಕಾರಣಿಗಳಿಗೆಸಾಧ್ಯವಿಲ್ಲ? ವಿಚಾರಾಣಾಧೀನ ಕೈದಿಗಳನ್ನು ಹೊರತಂದರೆ ಅವರು ಕಾಂಗ್ರೆಸ್ಗೇ ಮತ ಹಾಕುತ್ತಾರೆ ಎಂಬ ಲಾಭದ ಲೆಕ್ಕಾಚಾರವೇ? ಹಿಂದು ಕೈದಿಗಳು ಹೊರಬಂದು ಬಿಜೆಪಿಗೆ ಮತ ಹಾಕುವುದಕ್ಕಿಂತ ಜೈಲಿನಲ್ಲಿಯೇ ಕೊಳೆಯಲಿ ಬಿಡು ಎಂಬ ತಾತ್ಸಾರವೇ? ಇದು ಅಧಿಕಾರದ ದುರ್ಬಳಕೆಯಲ್ಲವೇ? ಇದು ಪಕ್ಷಪಾತ ಮಾಡಿದಂತಲ್ಲವೇ? ಪಕ್ಷಪಾತ ಮಾಡುವುದು ಇದೇ ಸಚಿವರು ತೆಗೆದುಕೊಂಡ ಪ್ರಮಾಣಕ್ಕೆ ವಿರುದ್ಧವಲ್ಲವೇ?
ವಿಚಾರಣೆ ಎದುರಿಸುತ್ತಿರುವ ಕೈದಿಗಳಲ್ಲಿ ಮುಸ್ಲಿಮರೇ ಹೆಚ್ಚಿದ್ದಾರೆ ಎಂದಾದರೆ ಅದು ಬಿಜೆಪಿಯವರ ಪಿತೂರಿಯಾ? ಅಥವಾ ಹಿಂದುಗಳು ಅವರ ವಿರುದ್ಧ ಪಿತೂರಿ ಮಾಡಿ ಅವರನ್ನು ಜೈಲಿಗೆ ಕಳುಹಿಸಿದ್ದಾರಾ? ಅಥವಾ ದೇಶದಲ್ಲಿರುವ ಪೊಲೀಸರೆಲ್ಲಾ ಕೋಮುವಾದಿಗಳಾ?
ಅಪರಾಧ ಕೃತ್ಯಗಳು ನಡೆದಾಗ, ತನಿಖೆಯಲ್ಲಿ ಕಂಡುಬಂದಂತೆ ಆರೋಪಿಗಳನ್ನು ಬಂಧಿಸಿರುತ್ತಾರೆ. ಮುಸ್ಲಿಮರ ಸಂಖ್ಯೆ ಹೆಚ್ಚಿದ್ದರೆ ಅದು ಕಾಕತಾಳೀಯವಷ್ಟೇ. ನನ್ನ ಪೊಲೀಸ್ ಗೆಳೆಯರೊಬ್ಬರು ಯಾವಾಗಲೂ ಹೇಳುತ್ತಿದ್ದರು 'ದೇಶದಲ್ಲಿ ಧರ್ಮಾಂಧರು ಇಲ್ಲದಿದ್ದರೆ ಈಗಿರುವುದಕ್ಕಿಂತ ಶೇ.40ರಷ್ಟು ಕಡಿಮೆ ಪೊಲೀಸರು ಸಾಕಿತ್ತು' ಎಂದು. ಅಂದರೆ ಒಂದು ಸಮುದಾಯದವರು ಕಾನೂನು ಬಾಹಿರ ಕೃತ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಮುಸ್ಲಿಮ್ ಕೈದಿಗಳಲ್ಲಿ ಅಮಾಯಕರೂ ಇರಬಹುದು ಎಂದಾದರೆ, ಹಿಂದು ಕೈದಿಗಳಲ್ಲೂ ಇರಬಹುದಲ್ಲಾ? ಅದು ಹೇಗೆ ಕೇಂದ್ರ ಸರ್ಕಾರ ಮುಸ್ಲಿಮ್ ಕೈದಿಗಳಲ್ಲೇ ಅಮಾಯಕರು ಇರುತ್ತಾರೆ ಎಂದು ತೀರ್ಮಾನಿಸಿತು? ಒಂದೊಮ್ಮೆ ಹಾಗೆ ತೀರ್ಮಾನಿಸಿದಲ್ಲಿ ಇಡೀ ದೇಶದ ಪೊಲೀಸ್ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ಪಕ್ಷಪಾತದ ಆರೋಪ ಹೊರಿಸಿದಂತಾಗಲಿಲ್ಲವೇ? ಕೇವಲ ಮತದಾಸೆಗೆ ಸರ್ಕಾರದ ಪರವಾಗಿಯೇ ಕೆಲಸ ಮಾಡುವ ಪೊಲೀಸ್ ಇಲಾಖೆಯನ್ನು ಸರ್ಕಾರವೇ ಅಪಮೌಲ್ಯ ಮಾಡಿದಂತಾಗಲಿಲ್ಲವೇ? ಅವರದ್ದೇ ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲ ಅಂತ ಒಪ್ಪಿಕೊಂಡ ಹಾಗಲ್ಲವೇ?
ಇಂತಹ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮತ್ತು ಅದರ ನಾಯಕತ್ವ ವಹಿಸಿರುವ ಕಾಂಗ್ರೆಸ್ಗೆ ನಾಚಿಕೆಯಾಗಬೇಕು.
ಹೆಸರಿಗೆ ಜಾತ್ಯತೀತ ರಾಷ್ಟ್ರ. ಶಾಲೆಗೆ ಸೇರಿಸುವಲ್ಲಿಂದ ಆರಂಭಿಸಿ ಸರ್ಕಾರಿ ಸೌಲಭ್ಯಗಳವರೆಗೆ ಎಲ್ಲವೂ ಜಾತಿ-ಧರ್ಮ ಆಧಾರಿತ! ಕಾಂಗ್ರೆಸ್ ಪಕ್ಷಕ್ಕೆ 'ಐಡಿಯಾ'ಗಳ ಕೊರತೆ ಕಾಡುತ್ತಿದೆ. ದೇಶದ ಹಿತ ಬಲಿಕೊಟ್ಟಾದರೂ ಮತದಾರರನ್ನು ಸೆಳೆಯಬೇಕು, ಮತ್ತೆ ಗದ್ದುಗೆ ಏರಬೇಕು ಎಂದು ಹೊರಟಿರುವ ಅದು, ದೇಶಕ್ಕೇ ಮಾರಕವಾಗಬಲ್ಲ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ.
ನಮ್ಮ ದೇಶದಲ್ಲಿ 3 ಕೋಟಿಗೂ ಹೆಚ್ಚು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಕನಿಷ್ಠ ಅದರ ದುಪ್ಪಟ್ಟು ಸಂಖ್ಯೆಯ ಜನರು ಪ್ರಕರಣ ಎದುರಿಸುತ್ತಿದ್ದಾರೆ. 1983ರ ದಿಲ್ಲಿ ಬಾಂಬ್ ಸ್ಫೋಟ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಅದೆಷ್ಟೋ ವರ್ಷಗಳಿಂದ ಬಾಕಿ ಇರುವ ಲಕ್ಷಾಂತರ ಪ್ರಕರಣಗಳನ್ನು ಪ್ರತಿ ರಾಜ್ಯದಲ್ಲೂ ಕಾಣಬಹುದು.
ಎಷ್ಟೋ ಕೈದಿಗಳು ನ್ಯಾಯಾಲದಲ್ಲಿ ಅಪರಾಧಿ ಎಂದು ಘೋಷಣೆಯಾದರೆ ಎಷ್ಟು ವರ್ಷ ಜೈಲು ಶಿಕ್ಷೆಯಾಗುವುದೋ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾರೆ. ಇದಕ್ಕೆ ಒಂದು ಕಾರಣ ನ್ಯಾಯಾಲಯದಲ್ಲಿ ಪ್ರಕರಣ ಬೇಗ ಇತ್ಯರ್ಥವಾಗದಿರುವುದು. ಇನ್ನೊಂದು ಕಾರಣ ಜಾಮೀನು ಸಿಗದಿರುವುದು. ಬಡವರು ಜಾಮೀನು ಪಡೆಯುವುದು ಕೂಡ ಕಷ್ಟ. ನ್ಯಾಯಾಲಯ ಸೂಚಿಸಿದಷ್ಟು ಮೊತ್ತದ ಬಾಂಡ್ ನೀಡಲು ಸಾಧ್ಯವಾಗದೇ ಇದ್ದಲ್ಲಿ ಅಂತಹ ವ್ಯಕ್ತಿಗೆ ಜಾಮೀನು ಸಿಗುವುದಿಲ್ಲ. ಈ ಕಾರಣಕ್ಕಾಗಿ ಜಾಮೀನು ಪಡೆಯಲಾಗದೇ ಜೈಲುಗಳಲ್ಲೇ ಉಳಿದಿರುವ ಅಸಂಖ್ಯಾತ (ಅಲ್ಪಸಂಖ್ಯಾತರಲ್ಲ) ಜನರಿದ್ದಾರೆ. ಈ ವ್ಯವಸ್ಥೆಯನ್ನು ಬದಲಿಸಲಿ.
ಇದೂ ಸಾಧ್ಯವಾಗದಿದ್ದರೆ ವಯಸ್ಸಿನ ಆಧಾರದಲ್ಲಿ ವಿಚಾರಣಾಧೀನ ಕೈದಿಗಳ ವಿಚಾರಣೆ ಚುರುಕುಗೊಳಿಸಲಿ. ಅಂದರೆ 30-35 ವರ್ಷದೊಳಗಿನ ಕೈದಿಗಳು ಇರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲಿ. ಅಂತಹ ಪ್ರಕರಣಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡಲಿ. ಅದಿಲ್ಲವಾದಲ್ಲಿ ಅಷ್ಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೈದಿಗಳ ಜಾಮೀನು ನೀತಿ ಸರಳಗೊಳಿಸಲಿ. ಯಾಕೆಂದರೆ ಅವರ ಮುಂದೆ ಸಾಕಷ್ಟು ವರ್ಷಗಳ ಜೀವನವಿದೆ. ಅದನ್ನು ರೂಪಿಸಿಕೊಳ್ಳಲು ಅವರಿಗೊಂದು ಅವಕಾಶ ನೀಡಿದಂತಾಗುತ್ತದೆ.
ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ವಿಚಾರಣಾಧೀನ ಕೈದಿಗಳ ಕುರಿತು ಕಾಳಜಿ ಇದ್ದರೆ ಇಂತಹ ಪ್ರಕರಣಗಳ ಶೀಘ್ರ ಇತ್ಯರ್ಥವೇ ಸರಿಯಾದ ಕ್ರಮ. ಹೆಚ್ಚು ನ್ಯಾಯಾಧೀಶರನ್ನು ನೇಮಿಸಲಿ. ನ್ಯಾಯಾಲಯಗಳನ್ನು ಸ್ಥಾಪಿಸಲಿ. ಪ್ರಕರಣಗಳ ತ್ವರಿತ ವಿಚಾರಣೆಗೆ ಅಗತ್ಯ ಕ್ರಮ ಕೈಗೊಂಡರೆ ದೂರುದಾರರಿಗೆ ಮತ್ತು ಆರೋಪಿಗಳಿಗೆ ಇಬ್ಬರಿಗೂ ನ್ಯಾಯ ಒದಗಿಸಿದಂತಾಗುತ್ತದೆ.
ಆರೋಪಿಗಳು ವಿಚಾರಣೆ ನೆಪದಲ್ಲಿ ಜೈಲಿನಲ್ಲಿದ್ದಾರೆ ಎಂದು ಕರುಣೆ ತೋರಿಸಿ ಅವರಿಗೆ ಕಾನೂನು ನೆರವು ನೀಡಿದರೆ, ಬಾಂಬ್ ಸ್ಫೋಟದಲ್ಲಿ ಸತ್ತ, ಕೊಲೆಯಾದ, ಅತ್ಯಾಚಾರಕ್ಕೊಳಗಾದವರ ಗತಿಯೇನು? ಅವರ ಸಾವು, ನೋವಿಗೆ ಬೆಲೆಯಿಲ್ಲವೇ? ಅವರಿಗೆ ಅಥವಾ ಅವರ ಸಂಬಂಧಿಗಳಿಗೆ ನ್ಯಾಯ ಕೊಡಿಸಬೇಕಾದ ಸರ್ಕಾರವೇ ಆರೋಪಿಗಳಿಗೆ ಕಾನೂನು ನೆರವು ನೀಡಿದರೆ, ನೊಂದವರಿಗೆ ನ್ಯಾಯ ಕೊಡಿಸುವವರು ಯಾರು? ಇಂತಹ ದ್ವಂದ್ವಗಳಿಗೆ ಮುಸ್ಲಿಮರ ಮನವೊಲಿಸಲು ಹೊರಟಿರುವ ಕೇಂದ್ರ ಸರ್ಕಾರದ ಬಳಿ ಉತ್ತರವಿದೆಯೇ?
ಪ್ರಜೆಗಳ ಹಣದಲ್ಲಿ ಒಂದು ಸಮುದಾಯಕ್ಕೆ ಸಹಾಯ ಮಾಡಲು ಹೊರಟಿರುವ ಸರ್ಕಾರ ಪ್ರಜೆಗಳ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಕನಿಷ್ಠ ಸೌಜನ್ಯವನ್ನಾದರೂ ತೋರಬೇಡವೇ?
ಇದೆಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯತ್ತ ಗಮನಹರಿಸಲಿ. ಯಾವ ರೀತಿಯ ಅಭಿವೃದ್ಧಿ ಅಂದರೆ ಆ ಸಮುದಾಯದ ಯುವಕರು ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಮಾಡುವಂತಹ ಅಭಿವೃದ್ಧಿಯತ್ತ ಗಮನಹರಿಸಲಿ. ಅವರು ಕಾನೂನು ಬಾಹಿರ ಕೃತ್ಯಗಳನ್ನು ಮಾಡಿ, ಬಂಧಿತರಾಗಿ ನಂತರ ಅವರಿಗೆ ಸರ್ಕಾರ ಸಾರ್ವಜನಿಕರ ಹಣ ಕರ್ಚು ಮಾಡಿ ನೆರವು ನೀಡುವ ಬದಲು, ಅವರು ಅಪರಾಧ ಕೃತ್ಯಗಳನ್ನು ಎಸಗದಂತೆ ಮಾಡುವತ್ತ ಹೆಚ್ಚು ಗಮನಹರಿಸಲಿ. ಆಗ ದೇಶಕ್ಕೂ ಒಳ್ಳೆಯದಾಗುತ್ತದೆ.
ಸರ್ವಾಂಗೀಣ ಅಭಿವೃದ್ಧಿಯ ಕ್ರಮಗಳನ್ನು ಬಿಟ್ಟು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಬೆಳೆಸಿಕೊಳ್ಳುವುದನ್ನು ಬಿಟ್ಟು, ಕೇವಲ ಒಂದು ಸಮುದಾಯಕ್ಕೆ ಸೇರಿದ ಕೈದಿಗಳಿಗೆ ಮಾತ್ರ ಕಾನೂನು ನೆರವು ನೀಡುತ್ತೇವೆ ಎಂಬುದು ಖಂಡಿತ ಕೋಮುವಾದಿ ಮತ್ತು ಸಂಕುಚಿತ ಮನಸ್ಸಿನ ನಿರ್ಧಾರವಾಗುತ್ತದೆ. ಅಲ್ಲದೇ ಇದರಿಂದ ದೇಶದಲ್ಲಿ ಎರಡು ಕೋಮುಗಳ ನಡುವೆ ಕಂದಕ ದೊಡ್ಡದಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.
- ವಿನಾಯಕ ಭಟ್ ಮೂರೂರು
vakradanta@gmail.com