'ಅಲ್ಲಲೇ, ಇಡೀ ದೇಸದ ಜವಾಬ್ದಾರಿ ವೊತ್ಕಂಡಿರೋ ಪ್ರೈಮ್ ಮಿನಿಸ್ಟ್ರು ಆ ಮನಮೋಹನ ಸಿಂಗೇ ನಂಗೂ ದೇಸುಕ್ಕೂ ಸಂಬಂಧ ಇಲ್ಲ ಅನ್ನೋ ಥರುಕ್ಕೆ ಇದ್ದೋಯ್ತರೆ. ಅಂಥದ್ರಾಗೆ ನಿಂಗೇನ್ಲಾ ಬಂದಿರಾದು ದೊಡ್ ರೋಗ. ನಡೀಲಾ ವೋಗಾಣ'
ಯಾಕೋ ಏನೋ ಮೈಲಾರಿ ಮೂಡು ಅಪ್ಸೆಟ್ಟು ಮಾಡ್ಕಂಡು ಮನೆ ಮುಂದೆ ಕೂತ್ಕಂಡಿದ್ದ. ಎತ್ಲಾಗೋ ವೋಯ್ತಾಯಿದ್ದೋನು ಮೈಲಾರಿ ಮಖ ನೋಡಿ ಬಂದ.
'ಇದ್ಯಾಕಲಾ ಮೈಲಾರಿ, ವೊಳ್ಳೆ ಇಂಗು ತಿಂದಿರೋ ಮಂಗನಂಗೆ ಕೂತಿದ್ದೀಯ. ವೊಟ್ಟೆಗೆ ಏನರ ಬಿತ್ತೋ ಇಲ್ಲಲೇ. ವೋಗ್ಲಿ ಬಾ, ವೋಟ್ಲುಗೆ ವೋಗಿ ಬೆಣ್ಣೆ ದ್ವಾಸೆ ತಿನ್ಕಂಡು ಬರಾಣ' ಅಂತೇಳಿ ಅಮಾಸೆ ಆಫರ್ ಕೊಟ್ಟ. 'ಏನೂ ತಿನ್ನೋ ಮೂಡ್ನಾಗೆ ಇಲ್ಲಪ್ಪೋ. ಯಾಕೋ ತಲೆ ಕೆಟ್ಟು ಕೆರ ಹಿಡ್ದೋಬುಟ್ಟದೆ ಏನ್ ಮಾಡಾದು ?' ಅಂತೇಳ್ದ ಮೈಲಾರಿ. 'ಅಲ್ಲಲೇ, ಇಡೀ ದೇಸದ ಜವಾಬ್ದಾರಿ ವೊತ್ಕಂಡಿರೋ ಪ್ರೈಮ್ ಮಿನಿಸ್ಟ್ರು ಆ ಮನಮೋಹನ ಸಿಂಗೇ ನಂಗೂ ದೇಸುಕ್ಕೂ ಸಂಬಂಧ ಇಲ್ಲ ಅನ್ನೋ ಥರುಕ್ಕೆ ಇದ್ದೋಯ್ತರೆ. ಅಂಥದ್ರಾಗೆ ನಿಂಗೇನ್ಲಾ ಬಂದಿರಾದು ದೊಡ್ ರೋಗ. ನಡೀಲಾ ವೋಗಾಣ' ಅಂದ ಆಮಾಸೆ.
'ಮನಮೋಹನ ಸಿಂಗು ತೆಪ್ಗೆ ಕುಂತ್ಕಂಡ್ರೆ ನೋಡ್ಕಳಕ್ಕೆ ಸೋನಿಯಾ ಮೇಡಮ್ಮು ಅವ್ರೆ. ನಂಗೆ ಯಾರ್ಲಾ ಅವ್ರೆ. ನಾನೇ ತಾನೆ ಬಿದ್ದು ಎದ್ದೇಳ್ಬೇಕು' ಅಂದ ಮೈಲಾರಿ. 'ವೋಗತ್ತಗೆ, ಸೆಂಟಿಮೆಂಟ್ನಾಗೆ ಕೊಲ್ತಾಯಿದ್ದೀಯಲ್ಲೋ ಪಾಪಿ. ಅದೇನಾಗದೆ ಅಂತ ವಸಿ ಬುಡ್ಸಿ ಯೋಳು ಮುಂಡೇದೆ' ಅಂತೇಳಿ ಅಮಾಸೆ ಬೈದ.
'ಪಾಪ ಕಣ್ಲಾ ನಮ್ ಬಳ್ಳಾರಿ ಮೆಘಾಸ್ಟಾರ್ ಜನಾರ್ದನ ರೆಡ್ಡಿಗಾರು ಆಸ್ತಿಪಾಸ್ತೀನ ಶಿಬಿಐದೋರು ಮುಟ್ಗೋಲು ಹಾಕ್ಕತರಂತೆ. ಇಸ್ಯ ಕೇಳಿ ಬ್ಯಾಸ್ರ ಆಗೋಯ್ತು ಕಣ್ಲಾ ಆಮಾಸೆ' ಅಂತೇಳಿ ಮೈಲಾರಿ ಯೋಳ್ದ.
'ಲೇ, ನಿನ್ ಮಖದ ಮೇಲೆ ಬೆರಣಿ ತಟ್ಟೋಗ. ಅದುಕ್ಕೆ ಈ ಪಾಟಿ ತಲೆ ಕೆಡಿಸ್ಕಂಡು ಕೂತಿದ್ದಿಯಲ್ಲೋ. ಇದು ಸ್ಯಾನೆ ಆಯ್ತು ಬುಡು. ಅವ್ರು ಆಸ್ತೀನಾ ಮುಟ್ಗೋಲು ಹಾಕ್ಕಂಡ್ರೆ ನಿಂಗೇನು, ಯಾರರ ವೊಂತ್ಕಂಡು ವೋಡೋದ್ರೆ ನಿಂಗೇನು ? ಅದುನ್ನ ನೋಡ್ಕಳಕ್ಕೆ ಪೂರ್ ಪೀಪಲ್ಸ್ ಸ್ಟಾರ್ ಸೀರಾಮ್ಲು ಅವ್ರೆ ಬುಡ್ಲಾ' ಅಂದ ಅಮಾಸೆ. 'ಪೂರ್ ಪೀಪಲ್ಸ್ ಸ್ಟಾರ್ ಅಂದ್ರೆ ಏನಲಾ ?' ಅಂತ ಮೈಲಾರಿ ಕೇಳ್ದ. 'ಅದೇ ಕಣ್ಲಾ ಬಡುವ್ರು, ಸ್ರಮಿಕ್ರು ಪಾರ್ಟಿ ಅಂತ ಅವ್ರೇ ಹೆಸ್ರು ಮಡಿಕ್ಕಂಡಿಲ್ವಾ ?' ಅಂದ ಆಮಾಸೆ.
'ಏನರ ಆಗ್ಲಿ ಕಣ್ಲಾ, ಆ ಪಾಟಿ ಆಸ್ತೀನಾ ಮುಟ್ಗೋಲು ಹಾಕ್ಕಂಬುಟ್ರೆ ಹೆಂಗೆ ?' ಅಂತೇಳಿ ಮೈಲಾರಿ ತಿರ್ಗಾ ಕೇಳ್ದ. 'ಲೇ ಇದ್ಯಾಕಲೇ ನಿಂದೇ ಆಸ್ತಿ ವೊತ್ಕಂಡು ವೋದೋರು ಥರ ಆಡ್ತಾಯಿದ್ದೀಯ. ಅಲ್ಲಲೇ, ಅವ್ರು ಏನರ ಬೆವ್ರು ಹರ್ಸಿ, ಸಿಕ್ಕಾಪಟ್ಟೆ ಕಷ್ಟಪಟ್ಟು, ಹಗ್ಲು ರಾತ್ರಿ ದುಡ್ದು ಆಸ್ತಿ ಮಾಡಿದ್ರಾ ? ಮಣ್ಣಾಗೆ ಬಂತು, ಈವಾಗ ಅದೇ ಮಣ್ಣು ಮುಚ್ಕಂಡು ವೋಯ್ತಾ ಐತೆ ಅಷ್ಟೇಯಾ' ಅಂದ ಅಮಾಸೆ.
ವೋಗಿ ವೋಗಿ ನಿಂತಾವ ಯೋಳ್ತೀನಲ್ಲ. ನನ್ ಕೆರ ತಕ್ಕಂಡು ನಾನೇ ವೊಡ್ಕಬೇಕು ವೊಳ್ಳೇ ತ್ಯಾಪೆ ನನ್ಮಗ ಕಣ್ಲಾ ನೀನು ಅಂತೇಳಿ ಮೈಲಾರಿ ಬಯ್ತಾಯಿದ್ದಂಗೆ ಪಾರೀನ್ ಕಾರು ರೊಯ್ಯಂತ ಬಂದು ನಿಂತ್ಕತು. ಯಾರಪ್ಪಾ ಈಟೋತ್ನಾಗೆ ಬಂದಿರಾದು ಅಂತೇಳಿ ಮೈಲಾರಿ ಹತ್ರ ವೋಗಿ ನೋಡ್ದ.
ಸಿಗ್ರೇಟು ವೊಗೆ ಹಂಗೇ ಮುಖುಕ್ಕೆ ಬಡೀತು. ವೊಳ್ಗಿದ್ದೋರು ಗಾಜು ಕೆಳುಕ್ಕೆ ಇಳ್ಸುದ್ರು. ನೋಡುದ್ರೆ ರೆಬೆಲ್ ಸ್ಟಾರ್ ಅಂಬ್ರೀಸಣ್ಣ. ಯಾಕೋ ಏನೋ ಅಣ್ಣ ಮಾತಾಡ್ದೇ ಹಂಗೇ ಕೂತಿತ್ತು. ಮೈಲಾರಿ 'ಅಣ್ಣ, ಯಾಕಣ್ಣ' ಅಂತ ಕೇಳುದ್ರೂ ಬರೇ ವೊಗೆ ಬುಟ್ಕಂಡೇ ಇದ್ದೋದ್ರು ಅಂಬ್ರೀಸಣ್ಣ.
'ಯಾಕಣ್ಣ ಮಾತಾಡಕಿಲ್ವಾ ?' ಅಂತೇಳಿ ಮೈಲಾರಿ ಕೇಳ್ದ. ಆವಾಗ ಅಂಬ್ರೀಸಣ್ಣ 'ಮಾತಾಡುದ್ರೆ ಎಡ್ವಟ್ಟು ಆಗೋಯ್ತದೆ ಅದುಕ್ಕೆ ಸುಮ್ಕೆ ಇದ್ದೋಗಿದ್ದೀನಿ. ಎಲೆಕ್ಸನ್ ಗಲಾಟಿ ಮುಗೀತು. ವಸಿ ರೆಸ್ಟು ತಕ್ಕಂಡು ವೋಗಾಣ ಅಂತೇಳಿ ಬಂದೆ' ಅಂದ್ರು.
'ಯಾವ್ದಾರ ರೆಸಾರ್ಟು, ಸ್ಟಾರು ವೋಟ್ಲುಗೆ ವೋಗಾದಲ್ವಾ?' ಅಂದ ಮೈಲಾರಿ. 'ಅಲ್ಲೆಲ್ಲಾ ಜನ ಇರ್ತರೆ ಬಡ್ಡೆತ್ತದೆ. ಏನರ ಕೇಳ್ತರೆ. ನಾನು ಏನರ ಯೋಳ್ತೀನಿ. ಟೀವಿನಾಗೆ, ಪೇಪ್ರಾಗೆ ಅದುನ್ನ ಹಾಕ್ಕಂಬುಡ್ತರೆ. ಆವಾಗ ಬತ್ತದೆ ನೋಡಪ್ಪ ಪೋನುಗ್ಳು. ಬ್ಯಾಡ ಕಣ್ಲಾ, ಕಿವಿ ಕಿತ್ತೋಯ್ತದೆ. ಸಿನ್ಮಾದಾಗೆ ಏಟೋಂದು ಡೈಲಾಗು ಬುಟ್ಟಿದ್ದೀನಿ. ಜನ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಕೇಳುಸ್ಕಂಡವ್ರೆ. ಈ ಸುಡ್ಗಾಡು ರಾಜ್ಕೀಯದಾಗೆ ವೊಂದು ಯೋಳುದ್ರೆ ಹೆಚ್ಚು, ವೊಂದು ಯೋಳುದ್ರೆ ಕಮ್ಮಿ ಅನ್ನಂಗೆ ಆಗೋಗದೆ' ಅಂದ್ರು ಅಂಬ್ರೀಸಣ್ಣ.
'ವೋಗ್ಲಿ ಬುಡಣ್ಣ, ನಮ್ಮೂರ್ಗೆ ಮೋದಿ ಯಾವಾಗ ಬತ್ತಾರೇಳು?' ಅಂದ ಮೈಲಾರಿ. 'ಗುಜ್ರಾತ್ನಾಗೆ ಅವ್ರೆ ವೋಗಿ ಕೇಳು' ಅಂದ್ರು ಅಂಬ್ರೀಸಣ್ಣ. 'ನಾನು ಕೇಳಿದ್ದು ಕರ್ನಾಟಕದ ಮೋದಿ ಕಣಣ್ಣೋ' ಅಂದ ಮೈಲಾರಿ. ಅಂಬ್ರೀಸಣ್ಣ ಬೈದ್ರು ಮೈಲಾರಿ ಕಿವಿ ಮುಚ್ಕಂಡ.
-ಕೆ.ವಿ.ಪ್ರಭಾಕರ್
prabhukolar@yahoo.com