ಅಂಗವಿಕಲರಿಗೆ ಸ್ವಾವಲಂಬಿಯಾಗಲು ಸಹಾಯ ಮಾಡೋಣ

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಒಮ್ಮೆ ಬಳ್ಳಾರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದೆ. ಅಲ್ಲಿ ಒಂದು ಹಳ್ಳಿಯಲ್ಲಿ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಾದಾಗ ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಸುಮಾರು ಹದಿನೈದು ವಿಕಲಚೇತನರು, ತಮಗೆ ಸಹಾಯ ಬೇಕೆಂದು ಮನವಿ ಮಾಡಿಕೊಂಡರು. ಅಂದು ಅವರನ್ನೆಲ್ಲಾ ಕಂಡು ಆ ಗ್ರಾಮಸಭೆಯಲ್ಲಿ ಕೇವಲ ವಿಕಲಚೇತನರಿಗೆ ಸರ್ಕಾರ ಕೊಡುತ್ತಿರುವ ಸವಲತ್ತುಗಳ ಬಗ್ಗೆ ಮತ್ತು ಹೇಗೆ ಗ್ರಾಮಗಳಲ್ಲಿ ಅಂಗವಿಕಲತೆಯನ್ನು ತಡೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂಬುದರ ಬಗ್ಗೆಯೇ ಮಾತನಾಡಿದೆ. ಅದನ್ನು ಇಂದು ನಿಮ್ಮೊಡನೆಯೂ ಹಂಚಿಕೊಳ್ಳುತ್ತಿದ್ದೇನೆ...
2001ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 9,40,643 ಜನ ಅಂಗವಿಕಲರಿದ್ದಾರೆ. ಇವರಲ್ಲಿ 6,61,139 ಜನರು ಹಳ್ಳಿಯಲ್ಲೂ, 2,79,904 ಜನರು ಪಟ್ಟಣಗಳಲ್ಲೂ ವಾಸಿಸುತ್ತಿದ್ದಾರೆ. ಇದರಲ್ಲಿ ಕೇವಲ ಶೇ. 51.40 ಅಂದರೆ 4,73,844 ಅಂಗವಿಕಲರು ಅಕ್ಷರಸ್ಥರು. ಇವರು ಹೆಚ್ಚಾಗಿ ಬಡತನದ ರೇಖೆಗಿಂತ ಕೆಳಗಿರುವುದರಿಂದ ಶಿಕ್ಷಣ, ತರಬೇತಿ, ಉದ್ಯೋಗ ಮತ್ತು ಅವಕಾಶಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ವಿಕಲತೆಯ ಜೊತೆಗೆ ಖಿನ್ನ ಮನಸ್ಕರೂ ಆಗಿರುತ್ತಾರೆ. 2011ರ ಜನಗಣತಿಯಲ್ಲಿ ಅಂಗವಿಕಲರ ಸಂಖ್ಯೆಯನ್ನು ಕೊಟ್ಟಿಲ್ಲ. ಹಾಗಾಗಿ ಈಗ ಅಂಗವಿಕರಲ ಪ್ರಮಾಣ ಹೆಚ್ಚಾಗಿರುವುದಂತೂ ಖಂಡಿತ. ಅಂಗವಿಕಲತೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂಬ ಸತ್ಯ ಬಹಳ ಮಂದಿಗೆ ತಿಳಿಯದು. 4000 ಕ್ಕಿಂತಲೂ ಹೆಚ್ಚಿನ ವಿಧದ ಅಂಗವಿಕಲತೆಗಳನ್ನು ಗುರುತಿಸಲಾಗಿದೆ. ಅಂಗವಿಕಲತೆಗೆ ಮುಖ್ಯವಾಗಿ ನೈಸರ್ಗಿಕ ಕಾರಣಗಳು, ಅನುವಂಶಿಕತೆ ಅಥವಾ ಹಾಗೂ ಇನ್ನಿತರ ಗುರುತಿಸಲಾಗದ ಕಾರಣಗಳು ಇರಬಹುದು.
ನೈಸರ್ಗಿಕ ಕಾರಣಗಳೆಂದರೆ ಗರ್ಭ ಧರಿಸಿದ ನಂತರ ಯಾವುದಾದರೂ ಸೋಂಕಿನಿಂದ ಬಳಲುವುದು, ಸ್ವಚ್ಛ ಪರಿಸರದಲ್ಲಿ ಇಲ್ಲದಿರುವುದು, ಸಿಗರೇಟ್, ಬೀಡಿ, ಮುಂತಾದ ಹೊಗೆಯ ಪರಿಸರದಲ್ಲಿರುವುದು, ಹೆಂಡ ಕುಡಿಯುವುದು, ಅಪೌಷ್ಟಿಕತೆಯಿಂದ ಬಳಲುವುದು, ವೈದ್ಯರು ಹೇಳಿದ ಔಷಧಿಗಳನ್ನು ತೆಗೆದುಕೊಳ್ಳದಿರುವುದು, ವೈದ್ಯರ ಬಳಿ ತಪಾಸಣೆಗೆ ಹೋಗದೇ ಇರುವುದು, ವೈದ್ಯರನ್ನು ಕೇಳದೆ ಕೆಲವು ಔಷಧಿಗಳನ್ನು ಅಂಗಡಿಗಳಿಂದ ಕೊಂಡು ತಂದು ಉಪಯೋಗಿಸುವುದು ಮುಂತಾದವುಗಳು. ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನವರಾಗಿದ್ದಾಗಲೇ ಅವರ ಮದುವೆ ಮಾಡುವುದು, ಅಪ್ರಾಪ್ತ ವಯಸ್ಸಿನ ಜೊತೆ ಅಪೌಷ್ಟಿಕತೆಯೂ ಸೇರಿ ಆರೋಗ್ಯಕರವಾದ ಮಗು ಜನಿಸದಿರುವುದನ್ನು ಕಾಣಬಹುದು. ತಡವಾಗಿ ಮದುವೆಯಾದ ಪ್ರತಿ ನಲವತ್ತು ಜನರಿಗೆ, ಒಂದು ಮಗು ಅಂಗವಿಕಲತೆಯಿಂದ ಹುಟ್ಟುತ್ತದೆ. ಹತ್ತಿರ ಸಂಬಂಧದಲ್ಲಿ ಮದುವೆ ಮಾಡುವುದು ಅಂಗವಿಕಲ ಮಕ್ಕಳನ್ನು ಪಡೆಯುವುದರ ಬಹು ಮುಖ್ಯ ಕಾರಣ.
ಅನುವಂಶಿಕತೆಯಿಂದ ಅಂಗವಿಕಲತೆ ಉಂಟಾಗುತ್ತದೆ. ವಂಶವಾಹಿನಿಯಲ್ಲಿ ಹಲವು ರೋಗಗಳು ಅಡಕವಾಗಿದ್ದರೆ ಗರ್ಭ ಧರಿಸುವ ಮುನ್ನವೇ ವೈದ್ಯರ ಸಲಹೆಯನ್ನು ಪಡೆಯುವುದು ಬಹಳ ಮುಖ್ಯ. ಗರ್ಭ ಧರಿಸಿದ ನಂತರವೂ ವಂಶವಾಹಿನಿಯ ವರ್ಣತಂತುವಿನ ಪರೀಕ್ಷೆ ನಡೆಸಿ ವೈದ್ಯರು ಸಲಹೆ ನೀಡುತ್ತಾರೆ. ಅವರ ಸಲಹೆಯ ಮೇರೆಗೆ ತೀರ್ಮಾನ ತೆಗೆದುಕೊಳ್ಳುವುದರಿಂದ ಹುಟ್ಟುವ ಮಗುವಿನ ಅಂಗವಿಕಲತೆಯನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ಅಂಧತ್ವ, ಸೀಳು ತುಟಿ, ಕಿವುಡುತನ, ಹೃದಯ ಸಂಬಂಧಿ ಕಾಯಿಲೆಗಳು, ಕುಂಟು, ಈ ರೀತಿ ಹಲವಾರು ಕಾಯಿಲೆಗಳು ಅನುವಂಶಿಕ ಕಾರಣಗಳಿಂದ ಬರುತ್ತವೆ.
ನನಗೆ ಮನವಿ ಸಲ್ಲಿಸಲು ಬಂದ ಒಂದು ಹೆಣ್ಣು ಮಗು ಅಂಗವಿಕಲಳಾಗಲು ಕಾರಣ, ಆಕೆಯ ತಾಯಿಯ ಹೆರಿಗೆ ಮಾಡಿಸಿದ ದಾದಿ, ಮಗುವನ್ನು ತೊಳೆಯಲು ಹೊತ್ತೊಯ್ಯುವಾಗ ಕೈ ಜಾರಿ ಅದರ ತಲೆ ನೆಲಕ್ಕಪ್ಪಳಿಸಿ, ಆ ಮಗು ಅಂಗವಿಕಲವಾಗಿ ಬಿಟ್ಟಿತ್ತು. ಆದುದರಿಂದ ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಬೇಕು.
ಕಚೇರಿಯಲ್ಲಿ ದಿನ ನಿತ್ಯ ನನಗೆ ಬರುವ ದೂರುಗಳು ಏನೆಂದರೆ, 'ಸರ್ಕಾರ ವಿಕಲಚೇತನರಿಗೆ ಪಿಂಚಣಿ ನೀಡಲು ಯೋಜನೆ ಮಾಡಿದ್ದರೂ, ಅದನ್ನು ಪಡೆಯುವುದು ಕಷ್ಟ. ಮೊದಲು ಗುರುತಿನ ಚೀಟಿ ಪಡೆಯಲು ವೈದ್ಯರ ಬಳಿ ಹೋಗಬೇಕು. ನಂತರ ಅಂಗವಿಕಲ ಕಲ್ಯಾಣ ಅಧಿಕಾರಿಯಿಂದ ಗುರುತಿನ ಚೀಟಿ ಪಡೆಯಬೇಕು. ವರ್ಷಗಟ್ಟಲೆ ಇದಕ್ಕಾಗಿ ಸುತ್ತಾಡಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅನಂತರ ಪಿಂಚಣಿ ಸಿಗುವುದೊ ಇಲ್ಲವೋ ಖಾತ್ರಿ ಇಲ್ಲ. ಅಲ್ಲಿಯವರೆಗೆ ಬದುಕುವುದು ಹೇಗೆ ಪ್ರತಿ ಹಂತದಲ್ಲೂ ಸಿಬ್ಬಂದಿಗಳು ಲಂಚವನ್ನು ಕೇಳುತ್ತಾರೆ. ನಾವು ಬದುಕಲು ಸರ್ಕಾರದ ಸಹಾಯವನ್ನು ಯಾಚಿಸುತ್ತಿರುವಾಗ ಲಂಚವನ್ನು ಎಲ್ಲಿಂದ ಕೊಡುವುದು?' ಎಂಬುದು.
ಅವರ ಮಾತುಗಳನ್ನು ಕೇಳಿ ನಾನು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕರೆದು ಆಡಳಿತ ಸರಳೀಕರಣಕ್ಕೆ ಸಮಾಲೋಚನೆ ನಡೆಸಿದೆ. ಅದರಂತೆ ಇಂದು ವಿಕಲಚೇತನರು ತೊಂದರೆಯಿಲ್ಲದೆ ಅರ್ಜಿಯನ್ನು ಸಲ್ಲಿಸಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ನಿಗದಿತ ವಾರದ ಒಂದು ದಿನ ಪರಿಣಿತ ವೈದ್ಯರಿಂದ ಪರೀಕ್ಷೆಗೊಳಪಟ್ಟು ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಅಂಗವಿಕಲ ಕಲ್ಯಾಣ ಇಲಾಖೆ ಅರ್ಜಿಗಳನ್ನು ಕಂದಾಯ ಇಲಾಖೆಗೆ ಕಳಿಸಿ, ಅದು ಮಂಜೂರಾಗಿ ಖಜಾನೆಯಿಂದ ಮನಿ ಆರ್ಡರ್ ಅಥವಾ ಈಗ ಬ್ಯಾಂಕ್ ಖಾತೆಗೇ ನೇರವಾಗಿ ಹಾಕುವುದರ ಮೂಲಕ ವಿತರಣೆ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರವು ಇಡೀ ದೇಶದಲ್ಲಿಯೇ ವಿಕಲಚೇತನರಿಗೆ ಮಾಸಿಕ ಜೀವನಾಂಶವನ್ನು ಕೊಡುವ ಮೊದಲ ರಾಜ್ಯವಾಗಿದೆ. ನಾಲ್ಕು ಲಕ್ಷ ವಿಕಲಚೇತನರು ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳೂ ನಾಲ್ಕು ನೂರು ರುಪಾಯಿಯ ಜೀವನಾಂಶವನ್ನು ಪಡೆಯುತ್ತಿದ್ದಾರೆ. ಅಂಗವಿಕಲತೆ ಶೇಕಡಾ ಎಪ್ಪತ್ತೈದಕ್ಕಿಂತ ಹೆಚ್ಚಿಗೆ ಇದ್ದರೆ ಅಂಥಹ ವಿಕಲಚೇತನರಿಗೆ ತಿಂಗಳಿಗೆ ಒಂದು ಸಾವಿರ ರು.ಗಳ ಜೀವನಾಂಶವನ್ನು ಕೊಡಲಾಗುತ್ತದೆ.
ವಿಕಲಚೇತನರು ಸಾಮಾನ್ಯ ಜೀವನ ನಡೆಸಬೇಕಾದರೆ, ಇವತ್ತು ಸುಮಾರು ತಾಂತ್ರಿಕ ಅವಿಷ್ಕಾರಗಳು ಆಗಿವೆ. ಸರ್ಕಾರದ ವತಿಯಿಂದ ವಿಕಲಚೇತನರಿಗೆ ಉಪಕರಣಗಳನ್ನು ಕೊಳ್ಳಲು ಸಹಾಯಧನವನ್ನು ನೀಡಲಾಗುತ್ತಿದೆ. ಉಪಕರಣವನ್ನು ಕೊಳ್ಳಲು ಓಡಾಡಬೇಕಾದ ಮತ್ತು ತಂಗಲು ತಗಲುವ ವೆಚ್ಚವನ್ನೂ ಸಹ ಕೊಡಲಾಗುವುದು. ಈ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಮುಖಾಂತರ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ, ವೈದ್ಯರ ಪರೀಕ್ಷೆಗೆ ಅನುಗುಣವಾಗಿ ಉಪಕರಣಗಳನ್ನು ಒಂದು ಸಮಯದಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.
ನ್ಯೂನ್ಯತೆಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಗಳಿಗೆ ಸಹ ಸರ್ಕಾರ ಸಹಾಯಧನವನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ 'ಸ್ಪರ್ಶ್' ಆಸ್ಪತ್ರೆ ಹುಟ್ಟಿನಿಂದ ಸೊಟ್ಟ ಕಾಲುಗಳಿದ್ದವರಿಗೆ ಎಲ್ಲರಂತೆ ಸಾಮಾನ್ಯವಾಗಿ ಓಡಾಡುವಂತೆ ಮಾಡಲು ಶಸ್ತ್ರ ಚಿಕಿತ್ಸೆ ಮಾಡಲು ಮುಂದೆ ಬಂದರು. ಇದರಿಂದ ಸಾವಿರಾರು ಮಕ್ಕಳು ಇಂದು ಎಲ್ಲರಂತೆ ಓಡಾಡುತ್ತಿದ್ದಾರೆ.
ನನ್ನ ಅವಧಿಯಲ್ಲಿ ಅಂಗವಿಕಲತೆಯನ್ನು ತಡೆಯಲು ರಾಜ್ಯ ಸಂಪನ್ಮೂಲ ಕೇಂದ್ರ, ಸ್ಪಾಸ್ಟಿಕ್ಸ್ ಸೊಸೈಟಿಯೊಂದಿಗೆ ತಾಂತ್ರಿಕ ಸಲಹಾ ಕೇಂದ್ರ ಸ್ಥಾಪಿಸಿ ವಿಶೇಷ ಶಿಕ್ಷಣ ತಜ್ಞರನ್ನು ತಯಾರು ಮಾಡಿ, ಒಂದೇ ಸೂರಿನಡಿ ಎಲ್ಲಾ ನ್ಯೂನ್ಯತೆಗಳ ಬಗ್ಗೆ ಸಲಹೆ ದೊರೆಯುವಂತೆ ಮಾಡಲು ಅನುವಂಶಿಕ ಸಲಹಾ ಕೇಂದ್ರಗಳನ್ನು ತೆರೆಯಲು ಯೋಜನೆಗಳನ್ನು ರೂಪಿಸಿದ್ದೆ. ರಕ್ತ ಸಂಬಂಧದಲ್ಲಿ ಮದುವೆಯಾಗುವುದರಿಂದ ಅಂಗವಿಕಲತೆ ಉಂಟಾಗುವುದರ ಬಗ್ಗೆ ವ್ಯಾಪಕ ಪ್ರಚಾರವನ್ನು ಹಮ್ಮಿಕೊಂಡಿದ್ದೆ. ಸರ್ವ ಶಿಕ್ಷಣ ಅಭಿಯಾನದ ಸಮೀಕ್ಷೆಯ ಪ್ರಕಾರ ಮಾನಸಿಕ ವಿಕಲ ಮಕ್ಕಳಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ವಿಶೇಷ ಶಾಲೆಗಳನ್ನು ತೆರೆಯುವ ಯೋಜನೆಯನ್ನು ಉಪಯೋಗಿಸಿದೆ.
ವಿಕಲಚೇತನರು ಯಾರದೇ ಅನುಕಂಪವನ್ನು ನಿರೀಕ್ಷಿಸುವುದಿಲ್ಲ. ಅವರೂ ಸಹ ಆತ್ಮಾಭಿಮಾನದಿಂದ ಬದುಕಲು ಬಯಸುತ್ತಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರು ಸ್ವಾವಲಂಬಿಗಳಾಗಿ ಕೆಲಸ ಮಾಡಲು ಇಚ್ಛಿಸುತ್ತಾರೆ. ಕೇಂದ್ರ ಸರ್ಕಾರದ ಕಾಯಿದೆಯಂತೆ ವಿಕಲಚೇತನರ ಪುನರ್ವಸತಿಗಾಗಿ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರಿಯಲ್ಲಿ ಕಡ್ಡಾಯವಾಗಿ ಎ ಮತ್ತು ಬಿ ಗುಂಪಿನ ಹುದ್ದೆಗಳಿಗೆ ಶೇ. ಮೂರರಷ್ಟು ಹಾಗೂ ಸಿ ಮತ್ತು ಡಿ ಗುಂಪುಗಳಿಗೆ ಶೇಕಡಾ ಐದರಷ್ಟು ಮೀಸಲಾತಿ ಕಲ್ಪಿಸಿದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ವಿಕಲ ಚೇತನ ನೌಕರರ ಭವಿಷ್ಯ ನಿಧಿಗೆ ಉದ್ಯೋಗದಾತರ ಪಾಲನ್ನು ಹಾಗೂ ರಾಜ್ಯ ವಿಕಲ ಚೇತನ ನೌಕರರ ವಿಮಾ ಹಣವನ್ನು ಮೂರ ವರ್ಷಗಳ ಕಾಲ ತಾನೇ ಭರಿಸುತ್ತದೆ. ವಿಕಲಚೇತನ ನೌಕರರ ಭವಿಷ್ಯ ನಿಧಿಗೆ ಸಂಬಂಧಪಟ್ಟ ಶೇಕಡಾ 1.1 ರಷ್ಟು ಆಡಳಿತ ವೆಚ್ಚ ಹಾಗೂ ಮತ್ತಿತರ ನಿಬಂಧನೆ ನಿಯಮದಂತೆ ತಗಲುವ ಇತರ ವೆಚ್ಚಗಳನ್ನು ಉದ್ಯೋಗದಾತರೇ ಭರಿಸಬೇಕಾಗಿದೆ. ಖಾಸಗಿ ವಲಯಗಳಲ್ಲಿ ವಿಕಲಚೇತನರಿಗೆ ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ನೌಕರಿಯನ್ನು ನೀಡುವ ಸಂಸ್ಥೆಗಳಿಗೆ ವರ್ಷಕ್ಕೆ ಇಪ್ಪತ್ತೈದು ಸಾವಿರ ರು.ಗಳ ಪ್ರೋತ್ಸಾಹ ಧನವನ್ನು ಕೇಂದ್ರ ಸರ್ಕಾರವೇ ನೀಡುತ್ತದೆ. ಈ ಅವಕಾಶವನ್ನು ಜನಪ್ರಿಯಗೊಳಿಸಲು ಭಾರತದ ಕೈಗಾರಿಕಾ ಒಕ್ಕೂಟ ಮತ್ತು ಸ್ವಯಂ ಸೇವಾ ಸಂಸ್ಥೆಯಾದ ಪಾರ್ಟ್ನರ್ಸ್ ಇನ್ಚೇಂಜ್ನ ಸಹಭಾಗಿತ್ವದಲ್ಲಿ'. www.karnatakapwdjobs.com ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿದೆ.
ಜಿಲ್ಲಾ ಪಂಚಾಯತಿಯಲ್ಲಿ ಕಡ್ಡಾಯವಾಗಿ ಶೇ. ಮೂರರಷ್ಟು ಸರ್ಕಾರದ ಅನುದಾನವನ್ನು ವಿಕಲಚೇತನರಿಗಾಗಿ ಮೀಸಲಿಡಲಾಗಿದೆ. ಸರ್ಕಾರದ ಸುಮಾರು ಯೋಜನೆಗಳು ಇದ್ದರೂ, ಬೇಕಾದವರಿಗೆ ಸರಿಯಾಗಿ ತಲುಪಿಸುವುದು ಒಂದು ದೊಡ್ಡ ಸವಾಲು. ಇದನ್ನು ಎದುರಿಸಲು ಎಲ್ಲಾ ಇಲಾಖೆಗಳ ಸಹಯೋಗದಿಂದ ವಿಕಲಚೇತನರ ಸಮೀಕ್ಷೆಯನ್ನು ನಡೆಸಿ, ಅವರ ಅಪೇಕ್ಷೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ಒದಗಿಸಲು ಗ್ರಾಮೀಣ ಪುನರ್ವಸತಿ ಯೋಜನೆಯನ್ನು ರೂಪಿಸಲಾಯಿತು. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಗ್ರಾಮೀಣ ಪುನರ್ವಸತಿ ನೌಕರರನ್ನು, ಹಾಗೂ ಪ್ರತಿ ತಾಲೂಕು ಪಂಚಾಯತಿಯಲ್ಲೂ ವಿವಿಧೋದ್ದೇಶ ಪುನರ್ವಸತಿ ನೌಕರರನ್ನು ನೇಮಕ ಮಾಡಲಾಗಿದೆ. ಅಂಧರು, ದೃಷ್ಟಿ ಕಡಿಮೆಯುಳ್ಳವರು, ಕಿವುಡರು ಮತ್ತು ಮೂಳೆ ತೊಂದರೆಯಿಂದ ಬಳಲುವ ವಿಕಲ ಚೇತನರಿಗೆ ಗುರುತಿನ ಚೀಟಿ, ತಿಂಗಳ ಜೀವನಾಂಶ, ಬಸ್ ಪಾಸುಗಳು, ನ್ಯೂನ್ಯತೆಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಮತ್ತಿತರ ಸಲಕರಣೆಗಳನ್ನು ಗ್ರಾಮ ಪಂಚಾಯತಿಯಲ್ಲಿ ನಡೆಸುವ ಆರೋಗ್ಯ ಶಿಬಿರಗಳಲ್ಲಿ ನೀಡಲಾಗುವುದು. ಜಿಲ್ಲೆಯ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ವಿಕಲಚೇತನರು ಮತ್ತು ಅವರ ತಂದೆ ತಾಯಿಯರು ಈ ಯೋಜನೆಯಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಅವರ ಸಂವೇದನಾಶೀಲ ಪ್ರವೃತ್ತಿಯೂ ಹೆಚ್ಚಿ, ಯೋಜನೆಗಳ ಯಶಸ್ಸಿಗೆ ಸಹಕಾರಿಯಾಗಿದೆ.
ಎಲ್ಲ ಅಂಗಗಳನ್ನೂ ಪಡೆದಿರುವ ನಾವು, ಊನದಿಂದ ಬಳಲುತ್ತಿರುವ ವಿಕಲಚೇತನರ ಅಗತ್ಯಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕಾದುದು ನಮ್ಮ ಧರ್ಮ. ಉದಾಹರಣೆಗೆ ನಮ್ಮ ದೇಶದಲ್ಲಿ ಸುಮಾರು ಅರವತ್ತೇಳು ಲಕ್ಷ ಅಂಧರು ಇದ್ದಾರೆ. ಪ್ರತಿ ತಿಂಗಳೂ ಕನಿಷ್ಠ ಐದಾರು ಲಕ್ಷ ಜನ ಮರಣವನ್ನುಪ್ಪುತ್ತಾರೆ. ನಾವು ಎಲ್ಲರೂ ನಮ್ಮ ಅಂಗಗಳನ್ನು, ಅದರಲ್ಲೂ ವಿಶೇಷವಾಗಿ ಕಣ್ಣುಗಳನ್ನು ದಾನ ಮಾಡಿದರೆ, ಯಾರೂ ನೇತ್ರಹೀನರಾಗಿ ಉಳಿಯುವುದಿಲ್ಲ. ನಾನು ನನ್ನ ಕಣ್ಣುಗಳನ್ನು ದಾನ ಮಾಡಲು ಕಣ್ಣಿನ ಆಸ್ಪತ್ರೆಗೆ ಪತ್ರ ಬರೆದುಕೊಟ್ಟಿದ್ದೇನೆ. ಮತ್ತು ಉಯಿಲಿನಲ್ಲಿಯೂ ಬರೆದಿದ್ದೇನೆ. ನೀವೂ ಕಣ್ಣುಗಳ ದಾನ ಪತ್ರಕ್ಕೆ ಸಹಿ ಮಾಡಿ ಕೊಟ್ಟಿದ್ದೀರಾ?
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


