ಸ್ವಹಿತಾಸಕ್ತಿಗೆ ಪಕ್ಷಭೇದವಿಲ್ಲ!
ಅಮೆರಿಕವು ಭಾರತಕ್ಕಿಂತ ಬಹು ಮೊದಲೇ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದೆ. ಇಂದಿಗೂ ಅಲ್ಲಿನ ಸಂಸತ್ ಸದಸ್ಯರ ಬಹುಪಾಲು ಆದಾಯದ ಮೂಲವೆಂದರೆ ಅವರಿಗೆ ನೀಡಲ್ಪಡುವ ವೇತನ ಮಾತ್ರ. ಒಂದು ಅಂಕಿ-ಅಂಶದ ಪ್ರಕಾರ ಆಡಳಿತಾವಧಿ ಮುಗಿಯುವವರೆಗೆ ಒಟ್ಟೂ ವೇತನವನ್ನು ಹೊರತುಪಡಿಸಿ ಸರಾಸರಿ ಶೇಕಡಾ 15ರಷ್ಟು ಮಾತ್ರ ಅಮೇರಿಕನ್ ಕಾಂಗ್ರೆಸ್ ಸದಸ್ಯರ ಆಸ್ತಿಯಲ್ಲಿ ಹೆಚ್ಚಳವಾಗಿರುತ್ತದೆ. ಇಷ್ಟೊಂದು ಕನಿಷ್ಠಮಟ್ಟದ ಆಸ್ತಿಗಳಿಕೆಯನ್ನು ಮಾಡಿರುವ ನಮ್ಮಲ್ಲಿನ ಸಂಸತ್ ಸದಸ್ಯರನ್ನು ಪ್ರಾಯಶಃ ಭೂತಗನ್ನಡಿ ಹಾಕಿ ಶೋಧಿಸಬೇಕೇನೊ? ಕಳೆದ ಲೋಕಸಭಾ ಚುನಾವಣೆಯನ್ನೇ ಪರಿಗಣಿಸಿದಲ್ಲಿ, 2004ರಲ್ಲಿ ಆಯ್ಕೆಗೊಂಡು ಮತ್ತೆ 2009ರಲ್ಲಿ ಮರುಆಯ್ಕೆ ಬಯಸಿದ್ದ 304 ಸಂಸದರ ಆಸ್ತಿ ಶೇಕಡಾ 300ರಷ್ಟು(ಅಧಿಕೃತವಾಗಿ) ಹೆಚ್ಚಾಗಿತ್ತು. ಇಷ್ಟಾಗಿಯೂ ಅಗಸ್ಟ್ 27, 2010ರಂದು ಲೋಕಸಭಾ ಸದಸ್ಯರು ತಮ್ಮ ವೇತನವನ್ನು ಸರ್ವಾನುಮತಗಳಿಂದ ಸರಿಸುಮಾರು ಮೂರು ಪಟ್ಟು ಹೆಚ್ಚಿಸಿಕೊಂಡರು!
ಹೋಗಲಿ, ಇದಕ್ಕೆ ಸರಿಯಾದ ಉತ್ತರದಾಯಿತ್ವ ಇದೆಯೇ? ಎರಡು ತಿಂಗಳ ಹಿಂದೆ ಕೇಂದ್ರ ಮಾಹಿತಿ ಕಾಯರಾಲಯವು ಕಾಂಗ್ರೆಸ್, ಬಿಜೆಪಿ, ಎನ್ಸಿಪಿ, ಸಿಪಿಐ(ಎಮ್), ಸಿಪಿಐ ಹಾಗೂ ಬಿಎಸ್ಪಿ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳನ್ನು ಆರ್ಟಿಐ ವ್ಯಾಪ್ತಿಗೆ ಸೇರಿಸುವಂತೆ ಶಿಫಾರಸ್ಸು ಮಾಡಿತ್ತು. ತನ್ಮೂಲಕ ಪಕ್ಷಗಳ ಕಾರ್ಯಚಟುವಟಿಕೆಗಳು, ಧನಸಂಗ್ರಹಣೆ, ಅಭ್ಯರ್ಥಿಯ ಆಯ್ಕೆ ಮೊದಲಾದ ವಿವರಗಳೆಲ್ಲ ಜನಸಾಮಾನ್ಯರಿಗೂ ಲಭ್ಯವಾಗಲಿ ಎಂಬುದೇ ಅದರ ಆಶಯವಾಗಿತ್ತು. ಆದರೆ ಎಲ್ಲ ಸಂಸತ್ ಸದಸ್ಯರೂ ಇದನ್ನು ಒಕ್ಕೊರಲಿನಿಂದ ವಿರೋಧಿಸಿದರಲ್ಲದೇ, ಈ ತಿಂಗಳ ಮೊದಲ ವಾರದಲ್ಲಿಯೇ ಕೇಂದ್ರ ಮಂತ್ರಿಮಂಡಲವು ಈ ಸೂಚನೆಯನ್ನು ತಿರಸ್ಕರಿಸಿದೆ.
ಇದೀಗ ಇವುಗಳಿಗಿಂತಲೂ ನಾಚಿಕೆಗೇಡಿನ ಒಗ್ಗಟ್ಟನ್ನು ನಮ್ಮ ಜನಪ್ರತಿನಿಧಿಗಳು ಪ್ರದರ್ಶಿಸಿರುವದು ಕಣ್ಮುಂದಿದೆ. ಇದೇ ಜುಲೈ 10ರಂದು ಸುಪ್ರೀಂಕೋರ್ಟ್ ಕ್ರಿಮಿನಲ್ ಶಿಕ್ಷೆಗೆ ಗುರಿಯಾದ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಮಹತ್ವದ ತೀರ್ಪಿತ್ತಿತು. ಆದರೆ ಕಾನೂನು ಸಚಿವಾಲಯವು ಈ ಜನಪ್ರತಿನಿಧಿ ಕಾಯಿದೆಗೆ ತಿದ್ದುಪಡಿಯನ್ನು ಶಿಫಾರಸ್ಸು ಮಾಡಿತ್ತು. ಅದರಂತೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದು, ಜುಲೈ 10ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ತಿದ್ದುಪಡಿಯ ಪ್ರಕಾರ ಶಿಕ್ಷೆಗೆ ಗುರಿಯಾದ 90 ದಿನಗಳೊಳಗೆ ಮೇಲ್ಮನವಿ ಸಲ್ಲಿಸಿದರೆ ಅಥವಾ ಆ ಶಿಕ್ಷೆಗೆ ನ್ಯಾಯಾಂಗವು ತಡೆಯಾಜ್ಞೆ ನೀಡಿದರೆ ಜನಪ್ರತಿನಿಧಿಯು ಅನರ್ಹತೆಯಿಂದ ಬಚಾವಾಗಬಹುದು. ಇದಲ್ಲದೇ ಇದರಲ್ಲಿ ಜೈಲಿನಲ್ಲಿದ್ದು ಕೂಡಾ ಚುನಾವಣೆಗೆ ಸ್ಪರ್ಧಿಸಬಹುದು, ಮೇಲ್ಮನವಿಯ ತೀರ್ಪು ಹೊರಬೀಳುವವರೆಗೂ ಸ್ಥಾನದಲ್ಲಿಯೇ ಮುಂದುವರಿಯಬಹುದು, ಕಲಾಪಗಳಲ್ಲಿ ಭಾಗವಹಿಸಬಹುದು ಇತ್ಯಾದಿ ಅಂಶಗಳಿದ್ದು, ಇವೆಲ್ಲ ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳಿಗೆ ಅನುಕೂಲಕರ ಉಡುಗೊರೆಗಳಲ್ಲವೇ?
ಸಾಮಾನ್ಯ ಪ್ರಜೆಯೊಬ್ಬ ಸರ್ಕಾರಿ ನೌಕರನಾಗಲು ಆತನಿಗೆ ಕೆಲವೊಂದು ಅರ್ಹತೆಗಳಿರಬೇಕು. ಅವುಗಳಲ್ಲಿ ವಿದ್ಯಾರ್ಹತೆ, ವಯೋವುತಿ, ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವಿಕೆ ಇತ್ಯಾದಿಗಳೆಲ್ಲ ಸೇರಿವೆ. ವಿಚಿತ್ರವೆಂದರೆ ಕೇವಲ ನೌಕರನಿಗೆ ಅವಶ್ಯಕವೆನ್ನಿಸಿರುವ ಇದ್ಯಾವ ಅರ್ಹತೆಗಳೂ ದೇಶವಾಳುವವರಿಗೆ ಅನಿವಾರ್ಯವಾಗಿಲ್ಲ.
- ಪ್ರಿಯದರ್ಶಿನಿ ಎಸ್ ಭಟ್
ಹೊನ್ನಾವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

