ಅಂಕಣಗಳು

'ಮನಸ್ವಿನಿ', 'ಮೈತ್ರಿ' ಗುರಿ ಮುಟ್ಟಲು ಬೇಕಿದೆ ಅನುಷ್ಠಾನ ಮಾರ್ಗ

'ಮನಸ್ವಿನಿ', 'ಮೈತ್ರಿ' ಗುರಿ ಮುಟ್ಟಲು ಬೇಕಿದೆ ಅನುಷ್ಠಾನ ಮಾರ್ಗ
Published On :

ಸಮಾಜದ ಆಶೋತ್ತರಗಳ ಚಿಂತನೆ ಮಾಡಿ ಪ್ರತಿ ಸರ್ಕಾರವೂ ಹೊಸ ಕಾರ್ಯಕ್ರಮಗಳನ್ನು ರೂಪಿಸುವುದಲ್ಲಿ ನಿರತವಾಗಿರುತ್ತದೆ. ಬಜೆಟ್ ಸಂದರ್ಭದಲ್ಲಿ ಏನು ಸಿಗಬಹುದೆಂಬ ಕುತೂಹಲ ಅಕ್ಷರಸ್ತರಲ್ಲಿ ಕಾಣಿಸಿಕೊಂಡರೂ, ಮಂಡಿಸಿದ ಹಲವು ಯೋಜನೆಗಳಲ್ಲಿ ತಮಗೆ ಸಂಬಂಧಿಸಿದ್ದನ್ನು ಮಾತ್ರ ಹೆಚ್ಚು ಆಸ್ತೆಯಿಂದ ನೋಡುತ್ತಾರೆ. ಉಳಿದದ್ದನ್ನು ಲೆಕ್ಕಿಸುವುದಿಲ್ಲ. ಹೀಗೆ ತಮ್ಮ ತಮ್ಮ ಹಿತಾಸಕ್ತಿಯಂತೆ ಆರಿಸಿಕೊಳ್ಳುತ್ತಾರೆ. ಯೋಜನೆಗಳು ಬಂದರೆ ಹೇಳಿದವರ ಬಾಯಿಂದ ಕೇಳಿಕೊಳ್ಳುವವರು ಬಹಳ ಮಂದಿ ಇದ್ದಾರೆ. ಪ್ರಮುಖವಾಗಿ ಗ್ರಾಮೀಣಪ್ರದೇಶದ ಅನಕ್ಷರಸ್ತ ಬಡಜನರಿಗಂತೂ ಎಷ್ಟೋ ಬಾರಿ ಸಾಯುವ ಮುನ್ನವೂ ಅರಿವಿಗೆ ಬರುವುದಿಲ್ಲ. ಇನ್ನುಳಿದವರು ಬದುಕಿರುವಾಗ ಸೌಲಭ್ಯವಂಚಿತರಾಗಿ ಕಷ್ಟದ ಜೊತೆ ಸಾವನ್ನಪ್ಪುತ್ತಾರೆ.
ಮುಂಚಾಪುರದ ಚಡಸಮ್ಮನ (79) ಗಂಡ ಸತ್ತು 25 ವರ್ಷವಾಗಿದ್ದರೂ ವಿಧವಾವೇತನವಾಗಲಿ ವೃದ್ಧಾಪ್ಯವೇತನವಾಗಲಿ  ಸಿಕ್ಕಿರಲಿಲ್ಲ. ಮೂಳೆ ಚಕ್ಕಳವಾಗಿದ್ದ ಮುದುಕಿ ಊಟಕ್ಕೂ ಗತಿ ಇಲ್ಲದೆ ಬದುಕುಳಿದಿದ್ದಳು. ಮೂರು ತಿಂಗಳ ನಂತರ ಮಂಜೂರು ಮಾಡಿಸಬೇಕೆಂದು ನಾ ಹೋದ ದಿನ ಅವಳ ತಿಥಿ ಆ ಊರಿನಲ್ಲಿ ಜರುಗಿತ್ತು!
ಹೋದ ಡಿಸೆಂಬರಿನಲ್ಲಿ ನಡೆದ ರಾಷ್ಟ್ರೀಯ ಸಾಮಾಜಿಕ ಭದ್ರತಾ ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ 10 ವರ್ಷದ ಹಿಂದೆ ಆನೆ ತುಳಿತಕ್ಕೆ ಸಿಕ್ಕಿ ಅಂಗವಿಕಲಳಾಗಿ ಒಂದು ಬಂಡೆಯ ಮೇಲೆ ವಾಸ ಮಾಡುತ್ತಿರುವ ಸೋಲಿಗ ನಂಜಮ್ಮನ ಸಾಕ್ಷ್ಯ ಚಿತ್ರವನ್ನೂ ನೆರೆದಿದ್ದವರಿಗೆಲ್ಲರಿಗೂ ಕೇಳುವಂತೆ, ನೋಡುವಂತೆ ಮಾಡಿದ್ದಾಗ್ಯೂ ಅಲ್ಲಿದ್ದವರು, 'ಹೌದಾ ಹೀಗಿದೆಯಾ ಪರಿಸ್ಥಿತಿ?' ಎಂದು ಸೋಜಿಗ ವ್ಯಕ್ತಪಡಿಸಿದರಷ್ಟೆ ಹೊರತು ಮುಂದೇನೂ ಮಾಡಲಿಲ್ಲ. ಸದುದ್ದೇಶದಿಂದ ರೂಪಿಸಿದ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನವಾಗದೇ ಇರುವ ಕಾರಣಗಳನ್ನು ಹೆಕ್ಕಿ ಸರಿಪಡಿಸುವ ನಿರ್ಣಯವಾಗಬೇಕೆಂಬುದು ನನ್ನ ಈ ಲೇಖನದ ಉದ್ದೇಶ.
ಪ್ರಸ್ತುತ ಸರ್ಕಾರವು 'ಮನಸ್ವಿನಿ', 'ಮೈತ್ರಿ' ಎಂಬ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವುಗಳು ಈ ಹಿಂದಿನ ವೃದ್ಧಾಪ್ಯವೇತನ, ಅಂಗವಿಕಲರ ವೇತನ ಮತ್ತು ವಿಧವಾ ವೇತನ ಪಡೆಯುವಲ್ಲಿ ಫಲಾನುಭವಿಗಳಿಗೆ ಅನೇಕ ಎಡರು ತೊಡರುಗಳನ್ನು ಎದುರಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದಲೇ ಈ ವಿಷಯವನ್ನು ಈಗಲೇ ಸೂಕ್ಷ್ಮವಾಗಿ ಚಿಂತಿಸಬೇಕಾದ ಅನಿವಾರ್ಯತೆಯಿದೆ ಎಂಬುದನ್ನು ಮನಗಂಡು ಸಂಬಂಧಪಟ್ಟವರನ್ನು ಜಾಗೃತಗೊಳಿಸಬೇಕೆಂದುಕೊಂಡಿರುವೆ. ಚಾಮರಾಜನಗರ ತಾಲ್ಲೂಕಿನ 171 ಹಳ್ಳಿಗಳನ್ನು ಸುತ್ತಿ ವಿಸ್ತೃತ ಸಮೀಕ್ಷೆ ನಡೆಸಿ ದುಃಸ್ಥಿತಿಯಲ್ಲಿರುವ ಅವಿವಾಹಿತ ಮಹಿಳೆಯರಿಗಾಗಿ ಸುಮಂಗಳ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಪರಿತ್ಯಕ್ತ ಮಹಿಳೆಯರಿಗೂ ಸಾಮಾಜಿಕ ಭದ್ರತೆ ಒದಗಿಸಲು ಕೋರಲಾಗಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರವು 40 ವರ್ಷ ಮೀರಿದ ನಿರ್ಗತಿಕ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವುದು ಮತ್ತು ಪರಿತ್ಯಕ್ತ (ಗಂಡ ಬಿಟ್ಟಿರುವ) ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವ ಹಂತದಲ್ಲಿದೆ. ಅವಿವಾಹಿತ ಮಹಿಳೆಯರ ಮತ್ತು ಪರಿತ್ಯಕ್ತ ಮಹಿಳೆಯರು ಉಳಿದ ಮಹಿಳೆಯರಿಗಿಂತಲೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ವರ್ಗವಾಗಿರುವುದರಿಂದ ಅವರಿಗೆ ಕನಿಷ್ಟ 1000 ರು ಮಾಸಾಶನ ನೀಡುವುದು ಸೂಕ್ತವಾಗಿದೆ. ಸಮಾಜದ ಯಾವುದೋ ಮೂಲೆಯಲ್ಲಿ ನಿರ್ಲಕ್ಷಿತರಾಗಿ ಬದುಕುತ್ತಿರುವ ಮಹಿಳೆಯರ ಬಗ್ಗೆ ಈವರೆವಿಗೂ ಗುರುತಿಸದೇ ಉಳಿದಿರುವುದು ವಿಷಾದದ ಸಂಗತಿ. ಸರ್ಕಾರಕ್ಕೆ ಶಿಫಾರಸು ಮಾಡುವ ಮುನ್ನ, ಹೀಗೊಮ್ಮೆ ಸಮಾಜಶಾಸ್ತ್ರ ತಜ್ಞರೊಡನೆ, ಈ ವರ್ಗದವರ ಬಗ್ಗೆ ಅಧ್ಯಯನ ಮಾಡಿ ಇವರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು. 'ಸಾರ್, I am jealous of y ! ನಾವು ಮಾಡಬೇಕಾದ ಕೆಲಸವನ್ನು ನೀವು ಮಾಡಿದ್ದೀರಿ. ನನ್ನ ಅಕ್ಕನ ಮಗಳ ಗೋಳನ್ನೇ ನಾನು ನೋಡಿದ್ದೇನೆ. ನೀವು ಈ ಕೆಲಸ ಮುಂದುವರಿಸಿ ದೇವರು ಒಳ್ಳೇದು ಮಾಡುತ್ತಾನೆ' ಎಂದರು. ಗ್ರಾಮೀಣ ಪ್ರದೇಶದಲ್ಲಿರುವ ಸಾಂಪ್ರದಾಯಿಕ ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಆರ್ಥಿಕ ಸಂಕಷ್ಟಗಳನ್ನು ಎದುರಿಸಲಾಗದೆ ಮದುವೆಯಾಗದೆ ನಿಂತುಹೋಗಿರುವ ಹೆಂಗಸರ ಗತಿ ಹೇಳ ತೀರದು. ದಿನೇ ದಿನೇ ಕುಗ್ಗುವ ಬದುಕು ಅವರದು. ಅಪ್ಪ ಅಮ್ಮ ಇರುವವರೆಗೆ ಅಷ್ಟೆ. ಆಮೇಲೆ ಅವರನ್ನು ದೇವರೇ ಕಾಪಾಡಬೇಕು. ನಾವು ಹುಟ್ಟಿದ್ದೇ ಶಾಪ ಎಂದು ಕೊರಗುತ್ತಾ ಸಾಯದೇ ಬದುಕುಳಿದಿದ್ದಾರೆ.
ಹಾಗೆಯೇ ಒಂದಿಲ್ಲೊಂದು ಕಾರಣಕ್ಕಾಗಿ ಗಂಡ ಬಿಟ್ಟ ನೋವಿನಲ್ಲಿ ಅಸಹಾಯಕವಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ ಅವರ ಬದುಕು ಅತಂತ್ರವಾಗುತ್ತ ಹೋಗಿದೆ. ವಿಚಿತ್ರವೆಂದರೆ ಮನೆಯವರೂ ರಾಜಿಯಾಗುವುದಿಲ್ಲ ಹೊರಗಿನವರೂ ಅನುಕಂಪ ತೋರಿಸುವುದಿಲ್ಲ. ಇಂತಹ ಮಹಿಳೆಯರ ಕೈ ಹಿಡಿಯುವ ಕೆಲಸಕ್ಕೆ ಸರ್ಕಾರ ಮುಂದೆ ಬಂದಿರುವುದು ಸ್ತುತ್ಯಾರ್ಹ. ಅಂತಹುದೇ ದುಃಸ್ಥಿತಿಯಲ್ಲಿ ಕಾಲ ಹಾಕುತ್ತಿರುವ ಮಂಗಳ ಮುಖಿಯರ ಬದುಕು ನಿರಾಶಾದಾಯಕವಾಗಿ ಪರಿಣಮಿಸಿದೆ.
ಅವರಿಗಾಗಿ ಸರ್ಕಾರವು 'ಮನಸ್ವಿನಿ' ಮತ್ತು 'ಮೈತ್ರಿ' ರೂಪದಲ್ಲಿ ನೆರವಿಗೆ ಬರಲು ಉದ್ದೇಶಿಸಿದೆ. ಆದರೆ ನಮ್ಮ ಮುಂದಿರುವ ಸಹಜ ಪ್ರಶ್ನೆಯೆಂದರೆ-  ಅನುಷ್ಠಾನ ಹೇಗೆ ಮಾಡಬೇಕು ಎಂಬುದು. ಕಾರಣ ಜಾರಿಯಲ್ಲಿರುವ ವೃದ್ಧಾಪ್ಯವೇತನ, ಅಂಗವಿಕಲರ ವೇತನ ಮತ್ತು ವಿಧವಾ ವೇತನಗಳಂತಹ ಕಾರ್ಯಕ್ರಮಗಳ ಸೌಲಭ್ಯ ಇಂದಿನವರೆಗೂ ಎಲ್ಲಾ ಅರ್ಹ ಫಲಾನುಭವಿಗಳಿಗೂ ತಲುಪಿಲ್ಲದಿರುವುದು ಮತ್ತು ಅನರ್ಹರು ಪಡೆದುಕೊಂಡಿರುವುದು ನಮ್ಮ ಅನುಭವಕ್ಕೆ ಬಂದಿದೆ ಹಾಗೂ ಅಧ್ಯಯನದಿಂದ ಸಾಬೀತಾಗಿದೆ. ಅದಕ್ಕಾಗಿಯೇ ಭವಿಷ್ಯದಯೋಜನೆಗಳಲ್ಲಿ ಯಾವೊಬ್ಬ ಅರ್ಹ ಫಲಾನುಭವಿಯೂ ವಂಚಿತರಾಗದಂತೆ ಎಚ್ಚರವಹಿಸಿ ಕಾರ್ಯಯೋಜನೆ ತಯಾರಿಸುವುದು ನಮ್ಮ ಆದ್ಯಕರ್ತವ್ಯ. ಈ ಸಾಮಾಜಿಕ ಭದ್ರತಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ನನ್ನ ಅನುಭವವನ್ನು ವಿವರಿಸಿದರೆ ಸುಲಭವಾಗಿ ಕಾರ್ಯೋನ್ಮುಖವಾಗಲು ನೆರವಾಗಬಹುದೆಂಬ ಆಶಯ ನನ್ನದು.
ಏಪ್ರಿಲ್ 1984ರಲ್ಲಿ ನಿರ್ಗತಿಕ ವಿಧವಾ ವೇತನ ಕಾರ್ಯಕ್ರಮ ಜಾರಿಗೆ ಬಂದಾಗ ಮದ್ದೂರು ತಾಲ್ಲೂಕು ತಹಶೀಲ್ದಾರನಾಗಿ ನಾನು ಮಾಡಿದ್ದನ್ನು ವಿವರಿಸಿದರೆ ಸಾಕು ಅನ್ನಿಸುತ್ತೆ. ಆಯಾ ಗ್ರಾಮಲೆಕ್ಕಿಗರಿಗೆ ಒಂದು ವಿವರವಾದ ಅರ್ಹತಾ ಫಾರ್ಮ್ಯಾಟ್ ಅನ್ನು ತಯಾರಿಸಿಕೊಟ್ಟು ಸಂಬಂದಪಟ್ಟ ಹಳ್ಳಿಗಳಲ್ಲಿ ಇರುವ ನಿರ್ಗತಿಕ ವಿಧವೆಯರನ್ನು ಗ್ರಾಮಲೆಕ್ಕಿಗರು ಖುದ್ದು ಬೇಟಿಮಾಡಿ ಬೇಕಾದ ವಿವರಗಳನ್ನು ನಮೂದಿಸಿ ಅವರ ಸಹಿಪಡೆಯುವಂತೆ ಮಾಡಲಾಯ್ತು. ಒಂದು ವಾರದೊಳಗಾಗಿ ತಾಲ್ಲೂಕಿನ ಎಲ್ಲ ಹಳ್ಳಿಯಲ್ಲಿರುವ ನಿರ್ಗತಿಕ ವಿಧವೆಯರ ಸಮೀಕ್ಷೆ ಪೂರ್ಣಗೊಂಡಿತು. ಆ ವಿವರಗಳನ್ನು ತಾಲ್ಲೂಕು ಕಚೇರಿಗೆ ತರಿಸಿ ಒಂದು ನಿಗದಿತ ದಿನ ಲಭ್ಯವಿದ್ದ ವಿವರಗಳ ಆಧಾರದ ಮೇಲೆ ನಿಗದಿತ ಅರ್ಜಿಯಲ್ಲಿ ಫಲಾನುಭವಿಯ ವಿವರಗಳನ್ನು ತುಂಬಿಸಲಾಯ್ತು. ಅಂದರೆ ಆ ತಾಲ್ಲೂಕಿನಲ್ಲಿರುವ ಎಲ್ಲಾ  ಅರ್ಹ ವಿಧವೆಯರ ಅರ್ಜಿ ತಯಾರಾದಂತಾಯ್ತು. ಅರ್ಹರಾದವರ ಹೆಸರನ್ನು ಪಟ್ಟಿಯಲ್ಲಿ ಟಿಕ್ ಮಾಡಲಾಯ್ತು. ಮಂಜೂರು ಮಾಡುವ ಪ್ರಕ್ರಿಯೆ ಕಾರ್ಯಕ್ರಮ ರೂಪಿಸುವ ಸಲುವಾಗಿ ಫಲಾನುಭವಿಗಳು ಫೋಟೊ ತೆಗೆಸಿ ಸಿದ್ಧವಿರಲು ಗ್ರಾಮ ಲೆಕ್ಕಿಗರಿಗೆ ಸೂಚಿಸಲಾಗಿತ್ತು. ಎರಡು ಮೂರು ಹಳ್ಳಿಗಳ ವಿಧವೆಯರನ್ನು ಸ್ಕೂಲು, ಸೊಸೈಟಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸುವಂತೆ ಹೇಳಿಟ್ಟಿದ್ದೆ. ಆ ದಿನ ಕಚೇರಿಯ ಶಿರಸ್ತೆದಾರರು ಗುಮಾಸ್ತರನ್ನು ಖಾಲಿ ಆದೇಶದ ಫಾರಂ ಸಹಿತ ಕರೆದುಕೊಂಡು ಹೋಗಿ ಚಾವಡಿ ಮೇಲೆ ಕುಳಿತು ಗ್ರಾಮಸ್ತರ ಸಮಕ್ಷಮದಲ್ಲಿ ನಾನು ಖುದ್ದು ವಿಚಾರಣೆ ಮಾಡಿ ಮಾಸಾಶನ ಅನುಮೋದಿಸಿದೆ. ಅಂತಹ ಊರಿನ ತುಂಬಿದ ಸಭೆಯಲ್ಲಿ ಸಾಮಾನ್ಯವಾಗಿ ವಿಧವೆಯರು ಸುಳ್ಳು ಹೇಳುವ ಧೈರ್ಯ ಮಾಡಲು ಆಸ್ಪದವಿರುತ್ತಿರಲಿಲ್ಲ. ಸ್ಥಳದಲ್ಲಿಯೇ ಮಂಜೂರು ಮಾಡಿ ಆದೇಶಕ್ಕೆ ಫೋಟೊ ಅಂಟಿಸಿ ಗ್ರಾಮಸ್ತರ ಮುಂದೆಯೆ ನೀಡಲಾಯ್ತು. ಕೊನೆಯಲ್ಲಿ ಒಂದು ಪುಟ್ಟ ತಿಳಿವಳಿಕೆ ಭಾಷಣ ಕೊಡುತ್ತಿದ್ದೆ.  ನೀವು ಅರ್ಹರಾಗಿರುವುದರಿಂದ ನಿಮಗೆ ಮಾಸಾಶನ ಮಂಜೂರು ಮಾಡಿದ್ದೇನೆ. ಯಾರಿಗೂ ಒಂದು ಕಾಸು ಕೊಡಬೇಡಿ. ಇದನ್ನು ಯಾರೂ ಹೇಳಿ ಮಾಡಿಸಿಲ್ಲ. ನಿಮ್ಮೂರಿನವರಾಗಲಿ ಅಥವಾ ಅಧಿಕಾರಿಗಳಾಗಲಿ ವಜಾ ಮಾಡಿಸುವೆ ಅಥವಾ ನಿಲ್ಲಿಸಿ ಬಿಡುವೆ ಎಂದು ಹೆದರಿಸಿದರೆ ಹೆದರಬೇಡಿ. ನಾನು ವಜಾಮಾಡುವುದಿಲ್ಲ ಎಂದು ಧೈರ್ಯತುಂಬುತ್ತಿದ್ದೆ. ಹೀಗೆ ಮನೆ ಬಾಗಿಲಿಗೆ ಬಂದು ನೀಡಿದ ಸೌಲಭ್ಯದ ಬಗ್ಗೆ ಎಲ್ಲರ ಮೆಚ್ಚುಗೆ ಮನೆ ಮಾತಾಯ್ತು
ಒಂದು ಸಾಮೂಹಿಕ ಡ್ರೈವ್ ಮಾದರಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಅವರಿರುವಲ್ಲಿಯೇ ಮಾಡಿದ್ದರಿಂದಾದ ಪ್ರಯೋಜನಗಳು ಹಲವು. ಮುಖ್ಯವಾಗಿ ಫಲಾನುಭವಿಗಳು ತಾಲ್ಲೂಕು ಕಚೇರಿಗೆ ಬಂದು ಅರ್ಜಿ ಹಾಕುವುದು ತಪ್ಪಿತು. ಏಜೆಂಟ್‌ಗಳಾಗಿ ವರ್ತಿಸುವ ಮುಖಂಡರು ಮಾಯವಾದರು. ಅಧಿಕಾರಿ ವರ್ಗದವರು ಅಲೆದಾಡಿಸುವುದು ಇಲ್ಲವಾಯಿತು. ಹಣದ ಸುಲಿಗೆ ತಡೆಗಟ್ಟಿದಂತಾಯ್ತು. ತಾಲ್ಲೂಕಿನಲ್ಲಿರುವ ಸಮಗ್ರ ನಿರ್ಗತಿಕ ವಿಧವೆಯರನ್ನು ಒಮ್ಮೆಲೆ ಗುರುತಿಸಿ ಎಲ್ಲರಿಗೂ ಏಕಕಾಲದಲ್ಲೇ ಸೌಲಭ್ಯ ನೀಡಿದ್ದರಿಂದ ವರದಾನವಾಗಿ ಪರಿಣಮಿಸಿತು. ಅಜರ್ ಹಾಕುವ ಪ್ರಮೇಯವೇ ಇಲ್ಲದಾಯ್ತು.  ಪ್ರತಿ ತಿಂಗಳು ಜಿಲ್ಲಾ ವಿಮರ್ಶಾ ಸಭೆಯಲ್ಲಿ ಉಳಿಕೆ (ಪೆಂಡೆನ್ಸಿ) ನಿಲ್ ಎಂಬ ದಾಖಲೆಯಾಯ್ತು! ಇಂಥಹ ಮುಕ್ತ, ಪಾರದರ್ಶಕ, ಪ್ರತ್ಯಕ್ಷ ಮತ್ತು ಸಮರ್ಥನೀಯ ವಿಧಾನ ನಮ್ಮ ಮುಂದಿದೆ. ಪ್ರಸ್ತುತ 'ಮನಸ್ವಿನಿ' ಮತ್ತು 'ಮೈತ್ರಿ' ಸಾಮಾಜಿಕ ಭದ್ರತಾ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವ ಮತ್ತು ಗ್ರಾಮ ಲೆಕ್ಕಿಗರ ಕ್ರಿಯಾಶೀಲತೆ ಪ್ರಮುಖ ಪಾತ್ರವಹಿಸಿದರೆ ಮಾತ್ರ  ಅಬಲೆಯರಿಗೆ ಸುಭದ್ರತೆ ನೀಡಲು ಸಾಧ್ಯ ಎನ್ನಬಹುದು. ಭದ್ರತಾ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಸರ್ಕಾರವು ಆತುರವಾಗಿ ಅರ್ಜಿ ಪಡೆಯದೆ ಒಂದೆರಡು ತಿಂಗಳಲ್ಲಿ ಅರ್ಹರ ಸಮೀಕ್ಷೆ ನಡೆಸಿ ಜಾಗರೂಕವಾಗಿ ಮೇಲಿನ ವಿಧಾನ ಅನುಸರಿಸುವುದು ಒಳ್ಳೆಯದು. ಇಲ್ಲವಾದರೆ ಮುಗ್ಗರಿಸಿದಂತಾಗುತ್ತದೆ. ಅನರ್ಹರಾದಿಯಾಗಿ ಅರ್ಜಿ ಹಾಕಿ ಎಂದಿನಂತೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಮತ್ತು ಆತಂಕ ಹೆಚ್ಚು. ಪ್ರಮುಖವಾಗಿ ದಳ್ಳಾಳಿಗಳು ಮತ್ತು ಅಧಿಕಾರಿಗಳಿಂದ ಯೋಜನೆ ದುರುಪಯೋಗವಾಗುವುದನ್ನು ತಪ್ಪಿಸಬೇಕೆಂದರೆ, ಪಾರದರ್ಶಕತೆ ತಂದು ಸರಳೋಪಾಯ ಮತ್ತು ವೈಜ್ಞಾನಿಕ ವಿಧಾನವನ್ನು ಅನುಸರಿಸಿದರೆ ಸರ್ಕಾರಕ್ಕೂ ಒಳ್ಳೆ ಹೆಸರು ಬರಲು ಸಾಧ್ಯವಾದೀತು.
ಇನ್ನು ಮಾಸಾಶನ ಸಕಾಲದಲ್ಲಿ ಸಲ್ಲಿಕೆಯಾಗುವುದು, ಫಲಾನುಭವಿಗಳಿಗೆ ಪೂರ್ಣ ಪೆನ್ಷನ್ ತಲುಪುವುದು ಮಂಜೂರಿಯಷ್ಟೇ ಮುಖ್ಯವಾದದ್ದು. ಅದಕ್ಕಾಗಿ ಮಂಜೂರಾದ ಫಲಾನುಭವಿಗಳನ್ನು ಊರಿನ ಒಂದು ಸಾರ್ವಜನಿಕ ಕಟ್ಟಡ, ಅಥವಾ ಜಗುಲಿಗೆ ಕರೆಸಿ ಎಲ್ಲರ ಎದುರಿಗೆ ಮಾಸಾಶನ ನೀಡುವುದು ಒಳ್ಳೆಯದು. ಅವರಿಗೆ ಸಲ್ಲುವ ಪೂರ್ಣ ಮಾಸಾಶನ ಅವರ ಕೈಸೇರುವಂತಾಗಬೇಕು. ಮನೆ ಮನೆಗೆ ಹೋಗಿ ಕೊಟ್ಟರೆ, ಮಾಮೂಲಿ 20-50 ರೂಪಾಯಿ ಕಟಾಯಿಸಿ ಕೊಡುವ ದುಷ್ಟ ಪದ್ಧತಿ ಮುಂದುವರೆಯುತ್ತದೆಂಬ ಎಂಬ ಆತಂಕ ನನಗೆ. ಇಂಥಹ ಪಾದರ್ಶಕ ವಿಧಾನವನ್ನು ಅನುಸರಿಸಲೆಂದು ಅಧಿಕಾರಿಗಳಿಗೆ ಇದೊಂದು ಕಿವಿಮಾತು ಏನೆಂದರೆ, ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ ಒಂದು ಎರಡು ತಿಂಗಳ ಅವಧಿಯಲ್ಲಿ ಸಂಪೂರ್ಣ ಅನುಷ್ಠಾನ ಮಾಡಿ ಬಚತ್ ರಾಜ್ಯವನ್ನಾಗಿ ಘೋಷಿಸಬಹುದಲ್ಲದೆ, ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಅವಿವಾಹಿತ ಮಹಿಳೆಯರ ಮತ್ತು ಪರಿತ್ಯಕ್ತ ಮಹಿಳೆಯರ ಸಾಮಾಜಿಕ ಭದ್ರತೆ ನೀಡಿದ ಕರ್ನಾಟಕ ರಾಜ್ಯವೆನಿಸಿಕೊಳ್ಳಬಹುದು ಎಂಬುದು ನನ್ನ ಆಶಯ.

- ಡಾ. ಬಿ.ಎಸ್. ಕೃಷ್ಣಪ್ರಸಾದ್
ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ
krishnaprasadz@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.