ಇತ್ತೀಚಿಗೆ ಭಾರತದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ, ಇದಕ್ಕೆ ಕಾರಣವೇನು? ಹೀಗೆಂದು ಭಾರತದ ಜನ ಪ್ರಶ್ನಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೋರ್ಟ್ನ ದ್ವಿಸದಸ್ಯ ಪೀಠವು
'ನಮಗೆ ದಿಗ್ಭ್ರಮೆಯಾಗಿದೆ' ಎಂದೂ ಹೇಳಿತ್ತು. ನಮ್ಮ ಸಮಾಜಕ್ಕೆ ಏನಾಗಿದೆ? ಸದ್ಯ ನಮ್ಮ ವ್ಯವಸ್ಥೆ ಎತ್ತ ಸಾಗಿದೆ?ಇದು ಸಮಾಜದಲ್ಲಿನ ನೈತಿಕ ಮೌಲ್ಯಗಳ ಅಧಃಪತನ, ಕಾನೂನಿನ ಕೊರತೆ ಅಥವಾ ಕಾನೂನು ಸರಿಯಾಗಿ ಜಾರಿಯಾಗುತ್ತಿಲ್ಲವೇ ಎಂದೂ ಅದು ತೀರಾ ಬೇಸರವಾಗಿ ಪ್ರಶ್ನಿಸಿತ್ತು.
ಆದರೆ ನಮ್ಮ ರಾಜಕಾರಣಿಗಳು ಕೋರ್ಟ್ನ ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರಿಸುವುದಿಲ್ಲ. ಅವರಿಗಾಗಿಯೇ ಇಲ್ಲೊಂದು ಉತ್ತಮ ಸುದ್ದಿ ಇದೆ. ಮಹಿಳೆಯರ ದೌರ್ಜನ್ಯದ ದೃಷ್ಟಿಯಲ್ಲಿ ಭಾರತದ ಸ್ಥಿತಿ ಅಷ್ಟೇನೂ ಕೆಟ್ಟದಾಗಿ ಇಲ್ಲ. ಹೀಗಂತ ಸ್ವತಃ ವಿಶ್ವಸಂಸ್ಥೆ ನಡೆಸಿದ ಸಮೀಕ್ಷೆಯೇ ಹೇಳಿದೆ. ಮಹಿಳೆಯರಿಗೆ ಅತ್ಯಂತ ಕೆಟ್ಟ ದೇಶವೆಂದರೆ ಅದು ಆಫ್ಘಾನಿಸ್ತಾನ. ಇಲ್ಲಿ ಮಹಿಳೆಯರು ಹಿಂಸೆ, ಕೆಟ್ಟ ಆರೋಗ್ಯ ಸುರಕ್ಷೆ ಮತ್ತು ಅತ್ಯಂತ ದೈನೇಸಿ ಸ್ಥಿತಿಯಲ್ಲಿರುವ ಬಡತನ ಎದುರಿಸುತ್ತಿದ್ದಾರೆ. ಕಾಂಗೋ ದೇಶ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅತ್ಯಂತ ಹೆಚ್ಚಾಗಿವೆ. ಬಹಳಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ಆಸ್ಟ್ರೇಲಿಯಾ, ಬೋಟ್ಸ್ವಾನಾ ಮತ್ತು ಲೆಸಾಥೋ ದೇಶಗಳಲ್ಲಿ. ಈ ಪಟ್ಟಿಯಲ್ಲಿ ಭಾರತದ ಸ್ಥಾನವಿರುವುದು ಕೌಟುಂಬಿಕ ದೌರ್ಜನ್ಯ, ಆರ್ಥಿಕ ಅಸಮಾನತೆ ಮತ್ತು ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ಮಾತ್ರ. ಇಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಅದೇ ಸೋಮಾಲಿಯಾ ಮೂರನೇ ಸ್ಥಾನ ಪಡೆದು ಕೊಂಡಿದೆ.
ಇದು ಸಮಾಧಾನ ತರುವ ವಿಚಾರವೇ? ರಾಜಕೀಯ ವರ್ಗದವರಿಗೆ ಇದು ಸಮಾಧಾನ ತರಲಿಕ್ಕೂ ಸಾಕು. ಅವರ ಸ್ವಾರ್ಥ ಮತ್ತು ಬೇಜವಾಬ್ದಾರಿತನ ಇದಕ್ಕೆ ಕಾರಣವೂ ಆಗಬಹುದು. ಆದರೆ ಜೀವನದ ಅಂಶಗಳ ಪ್ರಕಾರ ಭಾರತ ತನ್ನತನ ಕಳೆದುಕೊಂಡಿದೆ. ಅಂದರೆ ಇಲ್ಲಿ ಅಪ್ಪಂದಿರು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರ, ಗಂಡ ಹೆಂಡತಿಯನ್ನು ಕೊಲ್ಲುತ್ತಾನೆ, 'ಧಾರ್ಮಿಕ' ಪುರುಷರು ದೇವರ ಹೆಸರಲ್ಲಿ ಭಕ್ತರ ಮೇಲೆ ದೌರ್ಜನ್ಯನಡೆಸುತ್ತಾರೆ ಮತ್ತು ಗೂಂಡಾಗಳು ಮಹಿಳೆಯರನ್ನು ಬಳಸಿ ಎಸೆಯುವ ವಸ್ತುಗಳಾಗಿ ಮಾಡಿಕೊಂಡಿದ್ದಾರೆ. 1990ರಿಂದ 2008ರ ವರೆಗೆ ಭಾರತದಲ್ಲಿ ಒಟ್ಟಾರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಮುಂಬೈ ನಗರದಲ್ಲಿ ಕಳೆದ 2012 ರಿಂದ 2013ರ ಮಧ್ಯಂತರದ ವರೆಗೆ ಅತ್ಯಾಚಾರಗಳ ಸಂಖ್ಯೆ ದ್ವಿಗುಣವಾಗಿವೆ. ಅಂಕಿ ಅಂಶಗಳನ್ನು ಇಟ್ಟುಕೊಂಡು ಹೇಳುವುದಾದರೆ, ದೇಶದಲ್ಲಿ ವಿಜಯವಾಡವೇ ಅತ್ಯಂತ ಅಸುರಕ್ಷಿತ ನಗರ ಎಂದು ಗುರುತಿಸಿಕೊಂಡಿದೆ. ಇಲ್ಲಿ ಒಂದು ಲಕ್ಷ ಮಹಿಳೆಯರಿಗೆ 256 ಮಹಿಳೆಯರು ಅತ್ಯಾಚಾರಕ್ಕೆ ಈಡಾಗಿದ್ದಾರೆ. ಈ ಅಂಕಿಅಂಶಗಳು ವ್ಯಕ್ತಿಗಳಿಗೆ ಸಂಬಂಧಿಸದ ಮತ್ತು ಶುಷ್ಕವಾಗಿವೆ. ಇವು ಪ್ರತಿ ಸಂತ್ರಸ್ತರ ಶೋಷಣೆ, ನೋವು, ಅಪಮಾನ, ರಕ್ತಸಿಕ್ತತೆ ಯಾವ ರೀತಿ ಇರುತ್ತವೆ ಎಂಬ ಬಗ್ಗೆ ಹೇಳುವುದಿಲ್ಲ. ಮಾಧ್ಯಮಗಳು ದೆಹಲಿ ಬಸ್, ಮಣಿಪಾಲ್ ಮೆಡಿಕಲ್ ಕಾಲೇಜು ಮತ್ತು ಮುಂಬೈ ಛಾಯಾಗ್ರಾಹಕಿ ಮೇಲಿನ ಸಾಮೂಹಿಕ ಅತ್ಯಾಚಾರದ ಬಗ್ಗೆಯಷ್ಟೇ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಪ್ರಸಾರ ಮಾಡುವ ಮೂಲಕ ಸಾರ್ವಜನಿಕ ಕೋಪ ಹೆಚ್ಚಲು ಕಾರಣವಾಗಿವೆ. ಹೀಗಾಗಿ ಸರ್ಕಾರ ಒಂದಷ್ಟು ಶಬ್ಧ ಹೋರಡಿಸಿತಾದರೂ, ಅಲ್ಲಿಗೆ ಸುಮ್ಮನಾಯಿತು.
ಆಳುವ ವರ್ಗದಲ್ಲಿನ ಅನೈತಿಕತೆ ಮತ್ತು ಇತರರ ಹುಳುಕುಗಳನ್ನು ಹುಡುಕುವ ಜಾಯಮಾನವು ನೈತಿಕತೆಯ ಅಧಃಪತನಕ್ಕೆ ಮತ್ತು ಅಪರಾಧೀಕರಣವು ಹೆಚ್ಚಾಗಲು ಕಾರಣವಾಯಿತು. ದೇಶದ ಹಿತಾಸಕ್ತಿಯನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಸರ್ಕಾರ ಹಲವಾರು ವರ್ಷಗಳಿಂದ ಕೆಲಸ ಮಾಡದೇ ಕುಳಿತಿದೆ. ವಿಐಪಿ ನಾಯಕರು ಮತ್ತು ವಿಐಪಿ ಕಾರ್ಪೊರೇಟ್ಗಳ ಹಿತಾಸಕ್ತಿ ಕಾಯುವ ಕೆಲಸವನ್ನು ತುಸು ಹೆಚ್ಚಾಗಿಯೇ ಮಾಡುತ್ತಿದೆ. ಈ ಲೋಪದ ಕಾರಣದಿಂದಾಗಿ ದೇಶದ ಅತೃಪ್ತ ಶಕ್ತಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿಯೇ ಸುಪ್ರೀಂಕೋರ್ಟ್ ಸಾಮಾಜಿಕ ಮೌಲ್ಯಗಳ ಒಟ್ಟಾರೆ ಅಧಃಪತನ ಎಂದು ಹೇಳಿದ್ದು.
ಹೀಗಾಗಿ ರಾಜಕೀಯ ವರ್ಗಗಳ ಸಿನಿಕತನ ಮತ್ತು ಸ್ವಾರ್ಥದ ಉದಾಹರಣೆಗಳನ್ನು ತೆಗೆದುಕೊಳ್ಳಬಹುದು. ಒಟ್ಟಾಗಿ ಸೇರದ ರಾಜಕೀಯ ಪಕ್ಷಗಳು ಅವರ ಒಳಗೇ ಇರುವ ಅಪರಾಧಿಗಳ ರಕ್ಷಣೆಗಾಗಿ ಒಂದಾಗಿ ನಿಲ್ಲುತ್ತವೆ. ಒಬ್ಬ ಸಂಸದ ಅಪರಾಧಿ ಎಂದು ಘೋಷಿತವಾದರೂ ಮತ್ತು ಆತಜೈಲಿನಲ್ಲಿದ್ದರೂ ತನ್ನ ಸ್ಥಾನ ಉಳಿಸಿಕೊಳ್ಳಬಹುದು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸರಿಬರದ ಕೋರ್ಟ್ನ ಆದೇಶಗಳನ್ನು ಬೇಕಾದರೆ ಇಲ್ಲದಂತೆ ಮಾಡಿಬಿಡಬಹುದು. ಇದಕ್ಕಿಂತ ಹೆಚ್ಚಾಗಿ, ರಾಜಕೀಯ ನಾಯಕರು ಮತ ನೀಡಿ ಎಂದು ಜನರ ಬಳಿ ಹೋಗಬಹುದು, ಆದರೆ ಅವರಿಗೆ ಯಾವುದೇ ಮಾಹಿತಿ ನೀಡುವ ವಿಚಾರದಲ್ಲಿ ಮಾತ್ರ ನಾವು ಜವಾಬ್ದಾರರಲ್ಲ ಎಂದು ಹೇಳಬಹುದು. ಹೀಗಾಗಿ ಆರ್ಟಿಐನಿಂದ ವಿಮುಕ್ತಿ ನೀಡಿ ಎಂದು ಎಲ್ಲರೂ ಕೇಳಿಕೊಂಡದ್ದು. ಇದರ ಜೊತೆಗೆ ಚುನಾವಣೆ ಸಂದರ್ಭದಲ್ಲಿ ಅವರು ಅಫಿಡವಿಟ್ನಲ್ಲಿ 10, 50 ಅಥವಾ 100 ವರ್ಷಗಳ ಹಿಂದಿನ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ತಮ್ಮ ಆಸ್ತಿ ಘೋಷಣೆ ಮಾಡಿಬಿಡಬಹುದು.
ಕೆಲವೊಂದು ಸಂಗತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಘಟಿಸಲು ಸಾಧ್ಯವೇ ಇಲ್ಲ. ಆದರೆ ಭಾರತದಲ್ಲಿ ಮಾತ್ರ ಅಂಥ ಸಂಗತಿಗಳು ಘಟಿಸಿಬಿಡುತ್ತವೆ. ಇಲ್ಲಿ ಪ್ರಜಾಪ್ರಭುತ್ವದ ಆಧಾರದಲ್ಲೇ ಸುಲಿಗೆ ಮಾಡಬಹುದು. ಅಧಿಕಾರ ಹಿಡಿದವರು ಬೇಕಾದರೆ ಅವರಿಗೆ ಬೇಕಾದಂತೆ ಮೌಲ್ಯಯುತ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬಹುದು. ಹರ್ಯಾಣದಲ್ಲಿ ನಕಲಿಯಾಗಿ ಭೂಮಿಯನ್ನು ವರ್ಗಾವಣೆ ಮಾಡಿಕೊಳ್ಳಬಹುದು ಅಥವಾ ಕಲ್ಲಿದ್ದಲು ಸಂಪನ್ಮೂಲಗಳನ್ನು ಅಕ್ರಮವಾಗಿ ಮಾರಾಟ ಮಾಡಬಹುದು. ತಮ್ಮ ಸಮೀಪ ಇದ್ದವರ ಮೇಲೆ ಅತ್ಯಾಚಾರ ಮಾಡಬಹುದು ಅಥವಾ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಬಹುದು. ವಿನಾಯಿತಿ ಇರುವ ಅಪರಾಧಿಗಳು ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದರೆ, ಕಡಿಮೆ ವಿನಾಯಿತಿ ಇರುವವರು ಕೊಂಚ ಕೆಳಗೆ ಇರುತ್ತಾರೆ ಅಷ್ಟೇ.
ಸುಪ್ರೀಂಕೋರ್ಟ್ ಕೇಳಿರುವ ಪ್ರಶ್ನೆಗಳು ಸ್ಪಷ್ಟವಾಗಿವೆ. ಏಕೆಂದರೆ ಸಮಸ್ಯೆಗಳೂ ಕೂಡ ಅಷ್ಟೇ ಸ್ಪಷ್ಟವಾಗಿವೆ. ಯಾವಾಗ ನಮಗೆ ಆರ್ಥಿಕ ನಾಯಕ ಬೇಕಾದರೆ ಮನಮೋಹನ್ ಸಿಂಗ್, ಯಾವಾಗ ನಮಗೆ ಮಾದರಿ ನಾಯಕರು ಬೇಕಾದರೆ ಸೋನಿಯಾ ಗಾಂಧಿ ಮತ್ತು ಮಕ್ಕಳು ಮತ್ತು ಅಳಿಯ, ಯಾವಾಗ ನಮಗೆ ಏಕೀಕೃತ ನಾಯಕ ಬೇಕಾದರೆ ನರೇಂದ್ರ ಮೋದಿ, ಯಾವಾಗ ನಮಗೆ ಸಾಮಾಜಿಕ ಬದಲಾವಣೆ ಹರಿಕಾರ ಬೇಕಾದರೆ ಅಸಾರಾಮ್ ಬಾಪು ಸಿಗುತ್ತಾರಲ್ಲವೇ.
-ಟಿ.ಜೆ.ಎಸ್ ಜಾರ್ಜ್