ಅಂಕಣಗಳು

ಪುಂಡನನ್ನು ಬುದ್ಧಿಜೀವಿಗಳು ಸಂಶೋಧಕನೆನ್ನುತ್ತಾರೆ!

ಪುಂಡನನ್ನು ಬುದ್ಧಿಜೀವಿಗಳು ಸಂಶೋಧಕನೆನ್ನುತ್ತಾರೆ!
Published On :

ಸಂಶೋಧನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬರವಣಿಗೆಯ ವ್ಯಭಿಚಾರ ಸಲ್ಲ. ಬೀದಿಯಲ್ಲಿ ಕುಡುಕನೊಬ್ಬ ಅಶ್ಲೀಲವಾಗಿ ಚೀರಾಡುತ್ತಿದ್ದರೆ ಆತನಿಗೆ ಸಂಶೋಧಕನ ಪಟ್ಟವನ್ನು ಬುದ್ಧಿಜೀವಿಗಳು ನೀಡುತ್ತಾರೆ ಎಂದರೆ ಒಪ್ಪಲು ಸಾಧ್ಯವಿಲ್ಲ. ಸಂಶೋಧನೆ, ಧಾರ್ಮಿಕ ವಿಚಾರ ಹಾಗೂ ಸಾಹಿತ್ಯಕ್ಕೆ ಬರಹಗಾರರು ತಾವೆ ಮಿತಿ ಹಾಕಿಕೊಳ್ಳಬೇಕು. ದೇಶದ ಕೋಟ್ಯಾಂತರ ಜನರ ನಂಬಿಕೆಗೆ ಘಾಸಿ ಮಾಡುವ ಕೃತಿಗಳನ್ನು ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ಓದಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಖಡಕ್ ಆಗಿ ಹೇಳಿದ್ದಾರೆ.
-    ಯೋಗೇಶ್ ಮಾಸ್ಟರ್ ಅವರ ಢುಂಢಿ ಕೃತಿಯನ್ನು ತಾವು ಹೇಗೆ ನೋಡುತ್ತೀರಿ?
ಪುಸ್ತಕವನ್ನು ಓದುತ್ತಾ ಸಾಗಿದರೆ ಇದೊಂದು ಸಂಶೋಧನೆ ಕೃತಿಯಿಲ್ಲ, ಕೇವಲ ಕಲ್ಪಿತ ವಿಚಾರಗಳ ಕಾದಂಬರಿಗೆ ಸಂಶೋಧನೆ ಎಂಬ ಲೇಪ ನೀಡಲಾಗಿರುವುದು ಖಾತರಿಯಾಗುತ್ತದೆ. ಆದರೆ ಕಾದಂಬರಿ ಅಥವಾ ಸಂಶೋಧನೆಯ ಹೆಸರಲ್ಲಿ ಇಷ್ಟೊಂದು ತುಚ್ಛವಾಗಿಯೂ ಬರವಣಿಗೆ ಮಾಡಬಹುದು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಹಿಂದೂ ಧರ್ಮದ ಕೋಟ್ಯಂತರ ಜನರ ಪ್ರಥಮ ಪೂಜಕನೆಂದು ಸಾವಿರಾರು ವರ್ಷಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗಟ್ಟು ಮೂಡಿಸಲು ಬಾಲಗಂಗಾಧರ ತಿಲಕ್ ಗಣೇಶನ ಉತ್ಸವ ಆರಂಭಿಸಿದರು. ಹಿಂದೂ ಪರಂಪರೆಯಲ್ಲಿ ಗಣೇಶನಿಗೆ ಅಂತಹ ಸ್ಥಾನಮಾನವಿದೆ. ಆದರೆ ಈ ಕೃತಿಯನ್ನು ಓದಿದರೆ ಗಣೇಶನ ಹುಟ್ಟು, ಬೆಳವಣಿಗೆ ಸೇರಿದಂತೆ ಪ್ರತಿ ವಿಚಾರದಲ್ಲೂ ಅಪಸ್ವರ ಎತ್ತಲಾಗಿದೆ.

-    ಈ ಕೃತಿ ಕುರಿತಂತೆ ನಿಮ್ಮ ಆಕ್ಷೇಪಣೆಗಳೇನು?
ಗಣೇಶನ ಹುಟ್ಟು ಹೇಗಾಯಿತು ಎಂದು ಆತನ ತಾಯಿಗೆ ಗೊತ್ತಿಲ್ಲ. ಯಾರ ಸಂಪರ್ಕದಿಂದ ಗಣೇಶ ಹುಟ್ಟಿದ ಎನ್ನುವುದು ತಿಳಿದಿರಲಿಲ್ಲ. ಈ ಮೂಲಕ ಭಾರತೀಯರ ಪ್ರಥಮ ಪೂಜಕನ ತಾಯಿಯ ಬಗೆಗೂ ಅವಹೇಳನ ಮಾಡಲಾಗಿದೆ. ಇದು ಕೃತಿಕಾರನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಇನ್ನು ಗಣಪತಿಯನ್ನು ಕ್ರೂರಿ, ಅನಾರ್ಯ, ಉಗ್ರ ಎಂದೆಲ್ಲ ಜರಿಯಲಾಗಿದೆ. ಆದರೆ ಇದ್ಯಾವುದಕ್ಕೂ ಕಾದಂಬರಿಯಲ್ಲಿ ಸಾಕ್ಷ್ಯಗಳನ್ನು ನೀಡಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ವಾದ ಮಂಡಿಸಲು ಒಂದು ಧರ್ಮದ ದೇವರನ್ನು ಆರಿಸಿಕೊಳ್ಳುವುದು ಸೂಕ್ತವಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಕೀಳು ಹಂತಕ್ಕೆ ಲೇಖಕರು ಇಳಿದಿರುವುದು ಸಾಬೀತಾಗುತ್ತದೆ. ಒಂದೊಮ್ಮೆ ಅವರಿಗೆ ಸತ್ಯವನ್ನು ತಿಳಿಸಬೇಕೆಂದಿದ್ದರೆ ಅಷ್ಟೊಂದು ಪ್ರಮಾಣದ ಸಾಕ್ಷ್ಯಗಳನ್ನು ನೀಡುತ್ತಿದ್ದರು. ಇದಲ್ಲದೇ ಧಾರ್ಮಿಕ ವಿಚಾರಗಳಲ್ಲಿ ಭೌತಿಕ ಹಾಗೂ ಭಾವನಾತ್ಮಕ ಸತ್ಯಗಳೆಂಬ ವಿಚಾರಗಳಿರುತ್ತವೆ. ಭಾವನಾತ್ಮಕ ಸತ್ಯಗಳ ಬಗ್ಗೆ ಸಂಶೋಧನೆ ಮಾಡುವುದು ಬುದ್ಧಗೇಡಿತನವಾಗುತ್ತದೆ.

-    ಹಾಗಿದ್ದರೆ ಸಾಹಿತ್ಯ ವಲಯದಲ್ಲಿ ಇಂತಹ ವಿಚಾರಗಳ ಬಗ್ಗೆ ವೈರುಧ್ಯವಿರಲು ಕಾರಣವೇನು?
ದೇವರ ವಿರುದ್ಧ ಬರುತ್ತಿರುವ ಕೃತಿಗಳು ಇದು ಮೊದಲಲ್ಲ. ಭಾರತದಲ್ಲಿ ಕೆಲವು ಹಣೆಪಟ್ಟಿ ಧರಿಸಿದ ಬುದ್ಧಿಜೀವಿಗಳು, ಜಾತ್ಯಾತೀತವಾದಿಗಳು ಇಂತಹ ಕುಲಗೆಟ್ಟ ಕೆಲಸಕ್ಕೆ ಬೆಂಬಲ ನೀಡುವವರಿದ್ದಾರೆ. ತಿಲಕ್ ಅವರು ಗಣೇಶನ ಉತ್ಸವ ಪ್ರಾರಂಭಿಸಿದರು ಎಂಬ ಕಾರಣಕ್ಕೆ ಕೋಮುವಾದಿ ಎಂದು ಬಿಂಬಿಸಿದರು. ಹಾಗಿದ್ದರೆ ಗಾಂಧೀಜಿ ಹರೇ ರಾಮ್ ಎಂದು ಹೇಳಿದರು, ರಾಮನನ್ನು ಬಹಳ ಇಷ್ಟಪಡುತ್ತಾರೆ ಎಂದು ಆ ರೀತಿ ಹೇಳಲು ಆಗುವುದಿಲ್ಲ. ಒಂದು ಶಿಲ್ಪವು ಗರ್ಭಗುಡಿಗೆ ಹೋದರೆ ಭಕ್ತಿಯ ಭಾವನೆ ನೀಡುವುದು ಭಾರತೀಯ ಸಂಸ್ಕೃತಿಯ ಸಂಕೇತ. ಆದರೆ ಇಂತಹ ವಿಚಾರಗಳಿಗೆ ಕೋಮುವಾದದ ಬಣ್ಣ ಹಚ್ಚುವುದು ಹೇಸಿಗೆಯ ವಿಚಾರ.

-    ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಪದೇ ಪದೆ ಬಹುಸಂಖ್ಯಾತರ ದೇವರುಗಳನ್ನು ಹೀಯಾಳಿಸಲು ಕಾರಣವೇನು?
ಇಂತಹ ಬುದ್ಧಿಜೀವಿಗಳು ಹಾಗೂ ಸಂಶೋಧಕರಿಗೆ ಅಲ್ಪಸಂಖ್ಯಾತ ದೇವರುಗಳ ಬಗ್ಗೆ ಸಂಶೋಧನೆ ಮಾಡುವ ಧೈರ್ಯವಿಲ್ಲ. ಇಂತಹ ಚಪಲಗಳಿದ್ದರೆ ಎಲ್ಲ ಧರ್ಮದ ಆರಾಧ್ಯ ದೈವದ ಬಗ್ಗೆ ಸಂಶೋಧನೆ ಮಾಡಬಹುದಲ್ಲವೇ? ಇವರಿಗೆ ಅಲ್ಲಾ, ಏಸು ಏಕೆ ಕಾಣಿಸುವುದಿಲ್ಲ. ಅವರ ಬಗ್ಗೆ ಏನಾದರೂ ಬರೆದರೆ ಆಗುವ ಪರಿಣಾಮದ ಬಗ್ಗೆ ಅರಿವಿದೆ. ಈ ವೈರುಧ್ಯಗಳೇ ಎಲ್ಲದಕ್ಕೂ ಉತ್ತರ ನೀಡುತ್ತದೆ. ಇದಲ್ಲದೇ ಹಿಂದೂ ದೇವರನ್ನು ಹೀಯಾಳಿಸುವ ಕೃತಿಗಳನ್ನು ವಿರೋಧಿಸುವರೆಲ್ಲರೂ ಕೋಮುವಾದಿಗಳು, ಅವರ ವಿರುದ್ಧ ಬರೆಯುವವರು ಬುದ್ಧಿಜೀವಿಗಳೆಂಬ ಕೆಲ ಸ್ಥಾಪಿತ ಮನೋಭಾವನೆಗಳಿವೆ.

-    ಹಾಗಿದ್ದರೆ ಸಾಹಿತ್ಯ ವಲಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೇನು?
ಯಾವುದೇ ಲೇಖನ ಅಥವಾ ಕಾದಂಬರಿ ಬರೆಯುವ ಮುಂಚೆ ಆಯಾ ಲೇಖಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚಿಂತಿಸಬೇಕು. ಭಾರತದ ರಾಷ್ಟ್ರ ಧ್ವಜದಲ್ಲಿ 3 ಬಣ್ಣವಿದೆ, ಚಕ್ರವಿದೆ, ಪ್ರತಿಯೊಂದು ಬಣ್ಣಕ್ಕೂ ಅದರದೇ ಅರ್ಥವಿದೆ. ಸ್ವಾತಂತ್ರ್ಯ ಬಂದ ಬಳಿಕ ನಮ್ಮದೇ ಆದ ಭಾವನೆಯನ್ನು ಬೆಳೆಸಿಕೊಂಡಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಅಮಲಲ್ಲಿ ರಾಷ್ಟ್ರ ಧ್ವಜದ ಬಗ್ಗೆ ಕೀಳಾಗಿ ಬರೆಯುವುದು ಅಥವಾ ಸುಡುವುದು ಅಕ್ಷಮ್ಯ ಅಪರಾಧ. ಈ ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಹಾಗೆಯೇ ಕುಡಿದು ಬೀದಿಯಲ್ಲಿ ತೇಲಾಡುತ್ತಾ ಅಶ್ಲೀಲ ಮಾತನಾಡುವವರಿಗೂ ಸ್ವಾತಂತ್ರ್ಯವಿದೆ. ಆದರೆ ಅವರಾಡುವ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಅದಕ್ಕೆ ಅರ್ಥವೂ ಇರುವುದಿಲ್ಲ. ಆದರೆ ಈ ಕುಡುಕರ ಮಾತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ 'ಕುಡುಕ' ಬುದ್ಧಿಜೀವಿಗಳಿದ್ದಾರೆ. ಬಾಯಿಗೆ ಬಂದ ಹಾಗೆ ಬರೆಯುವುದೆಲ್ಲ ಸ್ವಾತಂತ್ರ್ಯವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ನಾನು ವಿರೋಧಿಸುವ ವ್ಯಕ್ತಿಯನ್ನು ಕೀಳಾಗಿ ಬಿಂಬಿಸಿದರೆ ಅದರ ಪರಿಣಾಮವನ್ನು ನಾನು ಎದುರಿಸಬೇಕಾಗುತ್ತದೆ. ಬಹುಸಂಖ್ಯಾತರ ಬಗ್ಗೆ ಬರೆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಬರೆದರೆ ಕೋಮುವಾದಿ ಎಂದು ಈ ಬುದ್ಧಿಜೀವಿಗಳು ಗೋಗರೆಯುತ್ತಾರೆ. ಇದೇ ಬುದ್ಧಿಜೀವಿಗಳು ಹಿಂದೊಮ್ಮೆ ಗಣಪತಿಗೆ ಚಪ್ಪಲಿ ಹಾಕಿ ನಡೆಸಿದ್ದರು.

-    ಬಹುಸಂಖ್ಯಾತರ ವಿರುದ್ಧವಾಗಿ ಮಾತನಾಡಿದರೆ ಮಾತ್ರ ಬುದ್ಧಿಜೀವಿಯೆಂಬ ನಾಮಫಲಕವನ್ನು ಸಾಹಿತ್ಯ ವಲಯದಲ್ಲಿ ನೀಡಲಾಗುತ್ತದೆಯೇ?
ಈ ಬುದ್ಧಿಜೀವಿಗಳಿಗೆ ಹಾಗೂ ಯೋಗೇಶ್ ಮಾಸ್ಟರ್‌ನಂತಹ ಕೃತಿಕಾರರಿಗೆ ಪ್ರಚಾರದ ಗೀಳು ಹೆಚ್ಚಿದೆ. ಇಂತಹ ವಿಚಾರಗಳಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ವಿರುದ್ಧವಾಗಿ ಮಾತನಾಡಿ ಪ್ರಗತಿಪರರು ಎಂದು ಹಣೆಪಟ್ಟಿ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ. ಇದನ್ನು ವಿರೋಧಿಸಿ ಸತ್ಯವನ್ನು ಹೇಳುವ ನಮಗೆ ಪ್ರಗತಿ ವಿರೋಧಕರು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪುಸ್ತಕವನ್ನು ವಿರೋಧಿಸುವ ಬಳಗವನ್ನು ಕೋಮುವಾದಿಗಳ ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹ ಕೋಮುವಾದವನ್ನು ನಾನೆಂದೂ ನಂಬುವುದಿಲ್ಲ.

-    ಎಸ್.ಎಲ್.ಭೈರಪ್ಪ ಅವರ ಆವರಣ ಕೃತಿ ಬಿಡುಗಡೆಯಾದಾಗ ನಿಷೇಧಿಸಬೇಕೆಂಬ ಕೂಗಾಟ ಸಾಹಿತ್ಯ ವರ್ಗದಿಂದ ಕೇಳಿಬಂತು. ಸಾಹಿತಿಗಳು ಕೇವಲ ಯಾವುದೋ ಒಂದು ಸ್ಥಾಪಿತ ಹಿತಾಸಕ್ತಿಗಳ ಪರ ಧ್ವನಿಯೇ?
ಸಾಹಿತ್ಯದ ಒಂದು ವರ್ಗ ಎನ್ನುವುದಕ್ಕಿಂತ ಈ ಬುದ್ಧಿಜೀವಿಗಳು ಕೇವಲ ಪ್ರಚಾರವಿದಲ್ಲಿ ಮಾತ್ರ ಹೋಗುವ ಜನರು. ಸತ್ಯದ ಬಗ್ಗೆ ಇವರು ಆಲೋಚನೆಯನ್ನು ಮಾಡುವುದಿಲ್ಲ. ಕೆಲ ಕಾರಣಗಳಿಂದ ಆವರಣವನ್ನು ವಿರೋಧಿಸಬೇಕಿತ್ತು, ವಿರೋಧಿಸಿದರು. ಕೆಲ ಕಾರಣಗಳಿಂದ ಢುಂಢಿ ಹಾಗೂ ಕೃತಿಕಾರನನ್ನು ಬೆಂಬಲಿಸಬೇಕು, ಬೆಂಬಲಿಸುತ್ತಾರೆ.

-    ಢುಂಢಿ ಕೃತಿಯನ್ನು ಸಧ್ಯದ ಮಟ್ಟಿಗೆ ಕೋರ್ಟ್ ನಿಷೇಧಿಸಿದೆ, ಸರ್ಕಾರದ ಪಾತ್ರ ಏನಾಗಿರಬೇಕು?
ಕೃತಿಯಲ್ಲಿನ ಅಂಶಗಳನ್ನು ಗಮನಿಸಿರುವ ಕೋರ್ಟ್ ಪುಸ್ತಕ ಮಾರಾಟಕ್ಕೆ ಕೋರ್ಟ್ ನಿಷೇಧ ಹೇರಿದೆ. ಆದರೆ ಇಂತಹ ವಿಚಾರಗಳಲ್ಲಿ ಸರ್ಕಾರದ ಪಾತ್ರವೂ ಹೆಚ್ಚಿದೆ. ಪ್ರಕರಣವನ್ನು ಮುಚ್ಚಿಹಾಕಲು ಅಥವಾ ನಿಷೇಧಿಸುವ ಕುರಿತಂತೆ ತಮಗೆ ಬೇಕಾದ ತಜ್ಞರ ಸಮಿತಿ ರಚಿಸಿ ರಂಪಾಟ ಮಾಡುವ ಬದಲು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರುಗಳು ಪುಸ್ತಕವನ್ನು ಓದಲಿ. ಆಗ ಕೃತಿಯಲ್ಲಿನ ಹೇಸಿಗೆಗಳು ಅರ್ಥವಾಗುತ್ತವೆ. ಆ ಬಳಿಕ ಅವರೇ ನಿರ್ಧಾರ ತೆಗೆದುಕೊಳ್ಳಲಿ. ಸತ್ಯವನ್ನು ಎತ್ತಿ ಹಿಡಿಯುವ ಹಾಗೂ ಜನರ ಭಾವನೆಗಳಿಗೆ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಧಾರ್ಮಿಕ ನಂಬಿಕೆ ಎನ್ನುವುದು ಕೇವಲ ಅಲ್ಪಸಂಖ್ಯಾತರ ಸ್ವತ್ತಲ್ಲ. ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ರಾಜಕೀಯ ಬಣ್ಣವನ್ನು ಬದಿಗಿರಿಸಿ ಸ್ಪಂದಿಸುವ ಕಾರ್ಯ ಮಾಡಬೇಕು.

-    ಸಂಶೋಧನೆ ಅಥವಾ ಕಾದಂಬರಿಗಳಿಗೆ ಯಾವುದೆ ಇತಿಮಿತಿಯಿಲ್ಲವೇ? ಇಂತಹ ವಿವಾದ ಹಾಗೂ ನಂಬಿಕೆಗಳೊಂದಿಗೆ ಪ್ರಚಾರ ಪಡೆಯುವಷ್ಟು ಸಾಹಿತ್ಯ ವಲಯ ಬರಡಾಗಿದೆಯೇ?
ಕೆಲವೊಮ್ಮೆ ಹೌದು ಎನಿಸುತ್ತದೆ. ಆದರೆ ಸಾಹಿತ್ಯದ ಬರ ಎನ್ನುವುದಕ್ಕಿಂತ ಪ್ರಚಾರದ ಸೋಗಲಾಡಿತನ ಎನ್ನಬೇಕು. ಪ್ರಚಾರದ ಅಮಲಿಗೆ ಬಿದ್ದು ಇಂತಹ ಕೆಲಸಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ನಾನು ಸಂಶೋಧನೆ ಮಾಡಿದ್ದೇನೆ. ಅದಕ್ಕೆ ಪೂರಕವಾದ ಆಧಾರ ನೀಡಿದ್ದೇನೆ. ಮೊದಲು ಸಂಶೋಧನೆ ಎಂದು ಬಳಿಕ ಕಲ್ಪನೆ ಎಂದು ಓಡಿ ಹೋಗಿಲ್ಲ. ಸಂಶೋಧನೆಗೆ ವಿರೋಧ ವ್ಯಕ್ತವಾದಾಗ ಸಾರ್ವಜನಿಕವಾಗಿ ಸ್ಪಷ್ಟ ದಾಖಲೆಗಳೊಂದಿಗೆ ಉತ್ತರ ನೀಡಿದ್ದೇನೆ.  ಪ್ರಚಾರದೊಂದಿಗೆ ವ್ಯಭಿಚಾರ ಮಾಡುವುದನ್ನು ಬಿಟ್ಟು ವಾಸ್ತವದಲ್ಲಿ ಆಲೋಚನೆ ಮಾಡುವುದನ್ನು ಹಣೆಪಟ್ಟಿ ಕಟ್ಟಿಕೊಂಡಿರುವ 'ಬುದ್ಧಿಜೀವಿಗಳು' ಹಾಗೂ 'ಜಾತ್ಯತೀತವಾದಿಗಳು' ಕಲಿಯಲಿ.


- ರಾಜೀವ್ ಹೆಗಡೆ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.