ವೊರೆ ವೊತ್ಕಂಡಿರೋ ಲೇಡೀಸು ಪಕ್ಸದ ಲೀಡ್ರು ಕುಮಾರಣ್ಣ ಪುಲ್ ತಲೆಬಿಸಿ ಮಾಡ್ಕಂಡು ವೋಯ್ತಾಯಿದ್ರು. ಮೈಲಾರಿ ನೋಡ್ಬುಟ್ಟು 'ಅಣ್ಣೋ ಇದ್ಯಾಕೆ ಪುಲ್ ಸ್ಪೀಡ್ನಾಗೆ ವೋಯ್ತಾಯಿದ್ದೀರಿ. ವಸಿ ಇರಿ, ಕಾಪಿ, ಟೀ ಏನರ ಕುಡ್ಕಂಡು ವೋಗೀರಂತೆ' ಅಂದ.
'ಲೇ ಅಲ್ಲಿ ಪಾರ್ಟಿನಾಗೆ ಬೆಂಕಿ ವೊತ್ಕಂಡು ವುರೀತಾದೆ, ನಿಂದೊಳ್ಳೆ ಸಾವಾಸ ಆಯ್ತು' ಅಂದ್ರು ಕುಮಾರಣ್ಣ. 'ಅಲ್ಲಣ್ಣೋ ಬೆಂಕಿ ಬಿದ್ದಿದ್ರೆ ಪೈರ್ ಆಪೀಸ್ನೋರ್ಗೆ ಪೋನಾಕೋದು ಬುಟ್ಟು ನೀವು ತಲೆ ಬಿಸಿ ಮಾಡ್ಕಂಡು ವೋದ್ರೆ ಆಯ್ತದಾ? ವೋಗ್ಲಿ ನಾನು ಪೋನಾಕ್ಲಾ?' ನಂಬರೇಳಿ ಅಂದ ಮೈಲಾರಿ.
'ಲೇ ಸುಟ್ಟೋಗಿರೋ ಬದನೇಕಾಯಿ ಮಖದೋನೆ ನಿಂತಾವ ಮಾತಾಡಕ್ಕೆ ನಾನು ಏಳು ಕೆರೆ ನೀರು ಕುಡೀಬೇಕು. ಏನ್ಮಾಡೋದು ಯೋಳು. ಎಲೆಕ್ಸನ್ನಾಗೆ ಜನ ಎಪ್ಪತ್ತು ಕೆರೆ ನೀರು ಕುಡ್ಸಾಕವ್ರೆ' ಅಂದ್ರು ಕುಮಾರಣ್ಣ. 'ಸಂದಾಕಿ ಯೋಳ್ತೀಯ ಕಣಣ್ಣಾ. ಹೆಂಗೂವೆ ಪಾರ್ಟಿನಾಗೆ ಬೆಂಕಿ ಬಿದ್ದದೆ ಅಂತಾಯಿದ್ದೀರ. ಕುಡ್ದಿರೋ ಕೆರೆ ನೀರು ಅಲ್ಲೋಗಿ ಬುಟ್ರೆ ತಣ್ಗೆ ಆಗಾಕಿಲ್ವಾ?' ಅಂದ ಮೈಲಾರಿ.
'ಅಯ್ಯೋ, ವೊಳ್ಳೆ ಗಿರಾಕಿ ತಗ್ಲಾಕ್ಕಂಬುಟ್ನಪ್ಪ ನಂಗೆ. ಲೇ ಬಡ್ಡೆತ್ತದೆ, ಬೆಂಕಿ ಬಿದ್ದದೆ ಅಂತ ಮಾತ್ಗೆ ಅಂದ್ರೆ ಬೆಂಕಿ ಬಿದ್ದೋಯ್ತದ? ಮಂಡ್ಯ, ಬೆಂಗ್ಳೂರು ರೂರಲ್ ಪಾರ್ಲಿಮೆಂಟು ಕ್ಷೇತ್ರುಕ್ಕೆ ನಡೀತಲ್ಲ ಎಲೆಕ್ಸನ್, ಅದ್ರಾಗೆ ನಮ್ ಪಕ್ಸ ದಬ್ಬಾಕ್ಕಂಬುಟ್ಟದೆ. ಮಂಡ್ಯದೋರು ಈ ಪಾಟಿ ನಮ್ಗೆ ಕೈ ಕೊಡ್ತರೆ ಅಂತ ಕನಸ್ನಾಗೂ ಅನ್ಕಂಡಿರಿಲ್ಲ ಕಣ್ಲಾ. ನಮ್ ಕ್ಯಾಂಡೇಟುಗ್ಳು ಸೋತೋಬುಟ್ಟವ್ರೆ. ನಾನು ಪಾರ್ಟಿಗೆ ಅಧ್ಯಕ್ಸ ಅಲ್ವಾ? ಅದುಕ್ಕೆ ಎಲ್ಲಾರೂವೆ ನನ್ನುನ್ನೇ ಆಡ್ಕತಾವ್ರೆ. ದ್ಯಾವೇಗೌಡ್ರಂತೂ ಹೆಬ್ಬಾವು ಥರ ಬುಸುಗುಟ್ಟುತಾವ್ರೆ. ಚೋಟಾ ಮೋಟಾ ಲೀಡ್ರುಸೂ ಕಣ್ಣು ಕೆಂಪ್ಗೆ ಮಾಡ್ಕಂಡು ಬೆಂಕಿ ಬುಡ್ತಾವ್ರೆ. ಅದುನ್ನ ಹಿಂಗತ ಯೋಳ್ದೆ ಹಳೇ ಬೇವಾರ್ಸಿ' ಅಂದ್ರು ಕುಮಾರಣ್ಣ. 'ಈ ಪಾಟಿ ಡೀಟೇಲ್ಸು ಮಡಿಕ್ಕಂಡು ಬೆಂಕಿ ಬಿದ್ದೋಗದೆ ಬೆಂಕಿ ಬಿದ್ದೋಗದೆ ಅಂದ್ರೆ ಹೆಂಗೆ? ಅದುಕ್ಕೆ ಯೋಳಾದು ಪಾರ್ಟಿ ಆಪೀಸು ಕಾಂಪೋಂಡ್ನಾಗೆ ಬಾವಿ ತೋಡಿಸ್ಕಳಿ, ಇಲ್ಲ ಬೋರ್ವೆಲ್ ಹಾಕಿಸ್ಕಳಿ ಅಂತ. ನನ್ ಮಾತು ಎಲ್ಲಿ ಕೇಳ್ತೀರಿ ಬುಡಿ ನೀವು. ವೋಗ್ಲಿ ವೊಂದು ಕೆಲ್ಸ ಮಾಡ್ಕಳಿ ಆಪೀಸ್ಗೋಗಿ ಎಲ್ಲಾರ್ಗೂವೆ ಕೂಲ್ ಡ್ರಿಂಕ್ಸು ಕುಡುಸ್ಬುಡಿ ಎಲ್ಲ ತಣ್ಗೆ ಆಗೋಯ್ತರೆ' ಅಂದ ಮೈಲಾರಿ.
'ಲೇ ನಿನ್ ಬಾಯ್ಗೆ ಯಾವ್ದಾರ ದೊಡ್ ಬೀಗ ತಂದು ಹಾಕ್ಬೇಕು ಮುಂಡೇದೆ. ನಂಗೆ ತಲೆ ಕೆಟ್ಟೋಗದೆ' ಅಂದ್ರು ಕುಮಾರಣ್ಣ. 'ಆಯ್ಯೋ ತಲೆ ಕೆಟ್ಟೋಗದೆ ಕೆಟ್ಟೋಗದೆ ಅಂತ ಕೂಗ್ತಾಯಿದ್ರೆ ಸರಿವೋಯ್ತದಾ? ವೋಗ್ಲಿ ನವರತ್ನ ತೈಲ ತಂದು ತಿಕ್ಲಾ?' ಅಂತ ಮೈಲಾರಿ ಕೇಳ್ದ. 'ಜಾಡ್ಸಿ ವೊದ್ರೆ ಮೈನಾಗಿರೋ ಮೂಳೆ ಲಟಲಟ ಅಂತ ಮುರ್ದೋಬೇಕು. ಅರ್ಜೆಂಟಾಗಿ ಪಾರ್ಟಿ ಆಪೀಸ್ಗೋಗಿ ಎಲ್ಲ ಪೋಸ್ಟುಗೆ ರಾಜಿನಾಮೆ ಕೊಟ್ಟಾಕ್ತೀನಿ' ಅಂದ್ರು ಕುಮಾರಣ್ಣ.
'ಎಡಗೈನಾಗೆ ಕೊಡಿ, ಬಲಗೈನಾಗಿ ವಾಪ್ಸು ತಕ್ಕಳಿ' ಅಂದ ಮೈಲಾರಿ. 'ಏನ್ಲಾ ಹಂಗಂದ್ರೆ?' ಅಂತ ಕುಮಾರಣ್ಣ ಕೇಳುದ್ರು. 'ಇನ್ನೇನಣ್ಣ, ನೀವೋಗಿ ರಾಜಿನಾಮೆ ವಗಾಯಿಸ್ತೀರಿ. ನಿಮ್ ಸಾಸ್ಕರು ಅಣ್ಣಾ ನೀವಿಲ್ದೆ ಹೆಂಗೆ ಅಂತರೆ, ಸಾಸ್ಕರು ಗೋಗರೀತಾವ್ರೆ ವಾಪ್ಸು ತಕ್ಕತೀನಿ ಅಂತ ನೀವು ಪೇಪರ್ನೋರು ಮುಂದ್ಲಾಗಡೆ ಯೋಳ್ತೀರಿ. ಅಲ್ಗೆ ಖೇಲ್ ಖತಂ ನಾಟಕ್ ಬಂದ್. ಇದೆಲ್ಲಾ ಬೇಕಾ?' ಅಂದ ಮೈಲಾರಿ.
'ಪರ್ವಾಗಿಲ್ಲ ಕಣ್ಲಾ ಏನೋ ಅನ್ಕಂಬುಟ್ಟಿದ್ದೆ ನಿನ್ನುನ್ನ. ಬೋ ಸಂದಾಕಿ ಯೋಳ್ತೀಯ. ಈವಾಗ ನಮ್ ಪಾರ್ಟಿ ಆಪೀಸ್ನಾಗೆ ನೀನು ಯೋಳಿರೋ ಸೀನು ಹಂಗೇ ನಡ್ದೋಯ್ತದೆ ನೋಡ್ತಾಯಿರು' ಅಂದ್ರು ಕುಮಾರಣ್ಣ. 'ನಮ್ ದೇವ್ರು ಸತ್ಯ ನಮ್ಗೆ ಗೊತ್ತಿಲ್ವಾ? ಅಲ್ಲ ಈವಾಗ ಕಮ್ಲ ಪಕ್ಸುದೋರು ಇಚಾರ ಹೆಂಗೆ? ಪ್ರೆಂಡ್‌ಸಿಪ್ಪು ಕಡ್ದೋಯ್ತದಾ ?' ಅಂತ ಮೈಲಾರಿ ಕೇಳ್ದ.
'ಇನ್ನೇನ್ ಮಾಡಾವ, ಎಲೆಕ್ಸನ್ ಮುಗುದ್ಮೇಕೆ ಪ್ರೆಂಡ್‌ಸಿಪ್ ಮಡಿಕ್ಕಂಡು ವುಪ್ಪು-ಖಾರ ಹಾಕಿ ನೆಕ್ಕಕ್ಕೆ ಆಯ್ತದಾ?' ಅಂದ್ರು ಕುಮಾರಣ್ಣ. 'ವೋ ಇದು, ಬೇಕಾದಾಗ ಬೆರ್ಕಳಾದು, ಸಾಕಾದಾಗ ಸರ್ಕಳಾದು ಅಲ್ವಾ?' ಅಂದ ಮೈಲಾರಿ. 'ನೂರುಕ್ಕೆ ನೂರು ದಿಟ ಕಣ್ಲಾ. ಮುಂದಿನ ಎಲೆಕ್ಸನ್ನಾಗೂ ಹಿಂಗೆ ಕಮಲ ಕಮಲ ಅಂತ ವೋದ್ರೆ ಜನ ಈವಾಗ ಎರ್ಡು ಕಡೆ ಮಲಗ್ಸವ್ಲೆ. ಅಮ್ಯಾಲೆ ಎಲ್ಲಾ ಕಡೆ ಪರ್ಮೆನೆಂಟಾಗಿ ಮಲುಗ್ಸಿ ಲಾಲಿ ಹಾಡ್ತರೆ. ನಾನು ಬತ್ತೀನಪ್ಪ' ಅಂದ್ರು ಕುಮಾರಣ್ಣ. 'ವೊಳ್ಳೇದಾಗ್ಲಿ ವೋಬನ್ನಿ' ಅಂತೇಳಿ ಕುಮಾರಣ್ಣುನ್ನ ಮೈಲಾರಿ ಕಳುಸ್ಕೊಟ್ಟ.
-ಕೆ.ವಿ.ಪ್ರಭಾಕರ್
prabhukolar@yahoo.com