ಪ್ರತಿಪಕ್ಷಗಳ ಟೀಕೆಗಳನ್ನೂ ಕೇಳುವ ಸಂಯಮ ಆಡಳಿತ ಪಕ್ಷಕ್ಕಿರಲಿ

6 ತಿಂಗಳ ಹಿಂದಿನವರೆಗೂ...
ಪ್ರತಿಪಕ್ಷಗಳ ಟೀಕೆಗಳನ್ನೂ ಕೇಳುವ ಸಂಯಮ ಆಡಳಿತ ಪಕ್ಷಕ್ಕಿರಲಿ
Updated on: 

ವಿರೋಧ ಪಕ್ಷಗಳು ಬೊಬ್ಬೆ ಹಾಕುವುದು, ಸರ್ಕಾರ ರಾಜಿನಾಮೆ ಕೊಟ್ಟು ಹೋಗಬೇಕು ಎಂದು ಹೇಳುವುದು ಕೂಡ ನಮ್ಮ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಈಗ ಬಿಜೆಪಿ ಮಾಡುತ್ತಿರುವುದೂ ಅದನ್ನೇ. ಆದರೆ ಮುಖ್ಯಮಂತ್ರಿಯಾದವರು, ಆಡಳಿತದಲ್ಲಿರುವವರು ಸಹನೆಯಿಂದಿರಬೇಕು. ಪ್ರತಿಪಕ್ಷಗಳು ಕೂಗಾಡಿದರೆ ಜನ ಏನೂ ಅಂದುಕೊಳ್ಳುವುದಿಲ್ಲ. ಅದೇ ಅಧಿಕಾರದಲ್ಲಿದ್ದವರು ಬೊಬ್ಬೆ ಹೊಡೆದರೆ ಜನ 'ಅಧಿಕಾರದ ಮದ' ಅನ್ನುತ್ತಾರೆ.

6 ತಿಂಗಳ ಹಿಂದಿನವರೆಗೂ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಳೆದ ಬುಧವಾರ ಸದನದಲ್ಲಿ ತಾವು ಇನ್ನೂ ವಿರೋಧ ಪಕ್ಷದ ನಾಯಕರೇನೋ ಎಂಬಂತೆ ವರ್ತಿಸಿದರು.
ಕೈಲಾಗದವನು ಮೈ ಪರಚಿಕೊಂಡ ಎಂಬ ಗಾದೆ ಮಾತು ತುಂಬಾ ಹಳೆಯದು. ಅದು ಗೊತ್ತಿದ್ದೂ ಸಕಲ ಸರ್ಕಾರಿ ಶಕ್ತಿಯ ಅಧಿಪತಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಲಾಗದವರು ವರ್ತಿಸುವಂತೆ ವರ್ತಿಸಿದರು. ರೇಗಾಡಿ, ವಿರೋಧ ಪಕ್ಷಗಳ ವಿರುದ್ಧ ಕೂಗಾಡಿದರು. ಗುರುವಾರವೂ ಇದು ಮತ್ತೊಮ್ಮೆ ನಡೆಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಇರುವುದೇ ಸರ್ಕಾರವನ್ನು ದೂರಲು. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು. ಪ್ರತಿಯೊಂದು ಘಟನೆಗೂ ಸರ್ಕಾರವೇ ಹೊಣೆ ಎಂದು ಕಾಲೆಳೆಯಲು. ಆದರೆ ಸರ್ಕಾರ ಇರುವುದು ವಿರೋಧ ಪಕ್ಷಗಳನ್ನು ದೂರಲು ಅಲ್ಲ. ಸರ್ಕಾರ ಇರುವುದು ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು. ಸಂಕಷ್ಟದ ನಡುವೆಯೂ ಧೃತಿಗೆಡದೇ ಕೆಲಸ ಮಾಡಲು.
ವಿರೋಧ ಪಕ್ಷಗಳು ಬೊಬ್ಬೆ ಹಾಕುವುದು, ಸರ್ಕಾರ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಹೇಳುವುದು ಕೂಡ ನಮ್ಮ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಈಗ ಬಿಜೆಪಿ ಮಾಡುತ್ತಿರುವುದೂ ಅದನ್ನೇ. ಆದರೆ ಮುಖ್ಯಮಂತ್ರಿಯಾದವರು, ಆಡಳಿತದಲ್ಲಿರುವವರು ಸಹನೆಯಿಂದಿರಬೇಕು. ಪ್ರತಿಪಕ್ಷಗಳು ಬೊಬ್ಬೆ ಹೊಡೆದರೆ ಜನ ಏನೂ ಅಂದುಕೊಳ್ಳುವುದಿಲ್ಲ. ಅದೇ ಅಧಿಕಾರದಲ್ಲಿದ್ದವರು ಬೊಬ್ಬೆ ಹೊಡೆದರೆ ಜನ 'ಅಧಿಕಾರದ ಮದ' ಅನ್ನುತ್ತಾರೆ.
ಇದನ್ನೆಲ್ಲ ಮರೆತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು- "ನೀವು ಪ್ರಜಾಪ್ರಭುತ್ವ ವಿರೋಧಿಗಳು. ನೀವು ರೈತ ವಿರೋಧಿಗಳು. ಹಾವೇರಿಯಲ್ಲಿ ಇಬ್ಬರು ರೈತರನ್ನು ಗುಂಡಿಟ್ಟು ಕೊಂದ ನಿಮಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ" ಎಂದು ಅಬ್ಬರಿಸಿದರು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಮಾಡಿದ್ದೇನು? ಈಗ ಬಿಜೆಪಿ ಮಾಡುತ್ತಿರುವುದನ್ನೇ ಅಲ್ಲವೇ!
ಈಗ ರೈತನ ಆತ್ಮಹತ್ಯೆ ಕುರಿತು ತಮ್ಮ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಬಿಜೆಪಿ ಸದಸ್ಯರು ಅಡ್ಡಿ ಪಡಿಸಿದರು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರು ಅವರ ವಿರುದ್ಧ ಅಬ್ಬರಿಸುತ್ತಿದ್ದಾರೆ. ಆದರೆ ಇದೇ ಯಡಿಯೂರಪ್ಪನವರು ಮುಖಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ವಿರೋಧಪಕ್ಷದ ಮುಖಂಡರಾಗಿದ್ದರು. ಆಗ ಯಡಿಯೂರಪ್ಪನವರಿಗೆ ಬಜೆಟ್ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯನವರು ಅವಕಾಶ ನೀಡಿರಲಿಲ್ಲ. ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದೇ, ಉತ್ತರವನ್ನು ದಾಖಲೆಗೋಸ್ಕರ ಮಂಡಿಸಬೇಕಾಯಿತು. ಅಂದು ಹಾಗೆ ಮಾಡಿದವರು ಇಂದು ತಾನು ಮಾತನಾಡುವಾಗ ಯಡಿಯೂರಪ್ಪನವರು ಸುಮ್ಮನೆ ಕುಳಿತು ಕೇಳಬೇಕು ಎಂದು ಹೇಗೆ ಅಪೇಕ್ಷಿಸುತ್ತಾರೆ? ಅಂದು ತಾನು ಮಾಡಿದ್ದನ್ನೇ ಇಂದು ಅವರು ಮಾಡುತ್ತಿದ್ದಾರೆ ಎಂಬ ಸತ್ಯ ಅರ್ಥವಾಗಬೇಕಲ್ಲವೇ? ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ತೋಳು ತಟ್ಟಿದ್ದನ್ನು ಬಹುಶಃ ಜನ ಇನ್ನೂ ಮರೆತಿಲ್ಲ.
ರೈತನ ಆತ್ಮಹತ್ಯೆ ನಂತರ ಕಲಾಪದಲ್ಲಿ ಸಿದ್ದರಾಮಯ್ಯನವರಿಗೆ ಹೂಂಕರಿಸುವ ಯಾವ ಅಗತ್ಯವೂ ಇರಲಿಲ್ಲ. "ರೈತನ ಆತ್ಮಹತ್ಯೆಯಿಂದ ತುಂಬಾ ನೋವಾಗಿದೆ. ನಾವ್ಯಾರೂ ಎಣಿಸದಿದ್ದ ಬೇಸರದ ಘಟನೆಯೊಂದು ನಡೆದುಹೋಗಿದೆ. ಸರ್ಕಾರದಿಂದ ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಲು ಸಿದ್ಧವಿದೆ. ಈಗ ಎಲ್ಲರೂ ಮೃತ ರೈತನಿಗೆ ಶ್ರದ್ಧಾಂಜಲಿ ಅರ್ಪಿಸೋಣ" ಎಂದಷ್ಟೇ ಹೇಳಿ ಕುಳಿತುಕೊಂಡಿದ್ದರೆ ಶಬ್ಬಾಸ್ ಎನಿಸಿಕೊಳ್ಳುತ್ತಿದ್ದರು. ಅದು ಬಿಟ್ಟು ಯಡಿಯೂರಪ್ಪನರು ಅಬ್ಬರಿಸಿದರು ಎಂದು ಅವರನ್ನು ಮೀರಿಸುವಂತೆ ತಾವೂ ಅಬ್ಬರಿಸುವುದೇ?
"ನೀವು ಇಬ್ಬರು ರೈತರನ್ನು ಗುಂಡಿಕ್ಕಿ ಕೊಂದಿಲ್ಲವೇ?" ಎಂದು ಪ್ರಶ್ನಿಸಿದರು. ಇದರರ್ಥವೇನು? ನೀವು ಇಬ್ಬರನ್ನು ಕೊಂದಿದ್ದೀರಿ. ನಾವು ಆಡಳಿತ ನಡೆಸುವಾಗ ಒಬ್ಬ ರೈತ ಮಾತ್ರ ಸತ್ತಿದ್ದು ಎಂದರ್ಥವೇ? ನೀವು ಗುಂಡಿಕ್ಕಿದಿರಿ,  ನಾವು ಅವರೇ ವಿಷ ತೆಗೆದುಕೊಳ್ಳುವಂತೆ ಮಾಡಿದೆವಷ್ಟೇ ಎಂದರ್ಥವೇ? ಈ ರೀತಿಯ ಪ್ರಶ್ನೆ, ಆರೋಪಗಳು ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಕುಗ್ಗಿಸುವುದಿಲ್ಲವೇ?
ಇಂದು ನಿಮಗೆ ಸರ್ಕಾರದ ನಿಲುವು ತಿಳಿಸಲು ಅವಕಾಶ ನೀಡದವರು ಪ್ರಜಾಪ್ರಭುತ್ವ ವಿರೋಧಿಗಳು ಎಂದಾದರೆ, ಅಂದು ನೀವು ಕೂಡ ಪ್ರಜಾಪ್ರಭುತ್ವ ವಿರೋಧಿಗಳೇ ಆಗಿದ್ದಿರಿ ಅಲ್ಲವೇ ಎಂದು ಕೇಳಬೇಕಾಗುತ್ತದೆ.
ಹಾಗೆ ನೋಡಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಕೂಡ ಆಗಿರಲಿಲ್ಲ. ಆದರೂ ಆಗ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರವನ್ನು ದೂರಿದರು. ಅದನ್ನು ತಪ್ಪು ಎಂದು ಹೇಳುತ್ತಿಲ್ಲ. ಆದರೆ ತಾವು ಅಧಿಕಾರಕ್ಕೆ ಬಂದಾಗ ಉಂಟಾಗುವ ಸಮಸ್ಯೆಗಳಿಗೆ ಹಿಂದಿನ ಸರ್ಕಾರವೇ ಕಾರಣ ಎನ್ನುವುದು, ಬೇರೆಯವರು ಅಧಿಕಾರದಲ್ಲಿದ್ದಾಗ ಸಮಸ್ಯೆಗೆ ಅವರೇ ಕಾರಣ ಎಂಬ ದ್ವಿಮುಖ ನೀತಿ ಸರಿಯಲ್ಲ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗಳಿಗೆ ಅನ್ವಯವಾಗುವ ಮಾತು. ಹೀಗೆ ಪರಸ್ಪರ ದೂರುತ್ತ ಹೋದರೆ ಯಾವ ಸಮಸ್ಯೆಗೂ ಪರಿಹಾರ ಸಿಗಲು ಸಾಧ್ಯವಿಲ್ಲ.
ಯಾವುದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಆತ್ಮಹತ್ಯೆ, ಹತ್ಯೆ ಸೇರಿದಂತೆ ಕೆಲವು ಘಟನೆಗಳನ್ನು ತಪ್ಪಿಸಲು ಸಾಧ್ಯವಿಲ್ಲವೇನೋ. ಎಷ್ಟೋ ಘಟನೆಗಳು ಸರ್ಕಾರದ ಕೈಮೀರಿ ನಡೆದುಬಿಡುತ್ತವೆ. ಆದರೆ ಅಂತಹ ಘಟನೆಗಳು ನಡೆದ ನಂತರ ಸರ್ಕಾರ ಅಥವಾ ಆಡಳಿತದಲ್ಲಿರುವವರು ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ಅದೇ ಸರ್ಕಾರದ ಸವಾಲು ಕೂಡ.
ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಸಮಸ್ಯೆಯನ್ನು ಶಾಂತಚಿತ್ತದಿಂದ ಎದುರಿಸಲಾಗದ ಮುಖ್ಯಮಂತ್ರಿ ಇನ್ನೂ ಹೆಚ್ಚು ಸಂಕಷ್ಟದ ಸ್ಥಿತಿ ಬಂದರೆ ಏನು ಮಾಡಿಯಾರು? ಗಂಭೀರ ಸಮಸ್ಯೆಗಳನ್ನು ಅತ್ಯಂತ ಶಿಸ್ತಿನಿಂದ, ಗೌರವಯುತವಾಗಿ ಎದುರಿಸಿದ ಉದಾಹರಣೆ ನಮ್ಮ ರಾಜ್ಯದಲ್ಲಿಯೇ ಇದೆ. ಕಾಂಗ್ರೆಸ್‌ನಲ್ಲಿಯೇ ಇದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂದ ಸಮಸ್ಯೆಗಳನ್ನು ನೋಡಿದರೆ ಸಿದ್ದರಾಮಯ್ಯ ಅವರಿಗೆ ಬಂದ ಸಮಸ್ಯೆ ಏನೇನೂ ಅಲ್ಲ. ರಾಜ್ ಕುಮಾರ್ ಅಪಹರಣವಾಯಿತು. ಅವರನ್ನು ಅಪಹರಣಕಾರಿಂದ ಬಿಡಿಸಿಕೊಂಡು ಬರುವುದು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಹುದೊಡ್ಡ ಸಮಸ್ಯೆ ಮತ್ತು ಸವಾಲು ಅವರ ಎದುರಿತ್ತು. ಅದೂ ಒಂದೆರಡು ದಿನದ ಸಮಸ್ಯೆಯೇ? 108 ದಿನಗಳ ಕಾಲ ಈ ಸಮಸ್ಯೆಯನ್ನು ಅವರು ನಿಭಾಯಿಸಿದರು. ರಾಜ್‌ಕುಮಾರ್ ಅವರನ್ನು ಬಿಡಿಸಿ ಕರೆತರುವ ಜವಾಬ್ದಾರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವ ಜವಾಬ್ದಾರಿ, ಪ್ರತಿಪಕ್ಷಗಳ ಮಾಧ್ಯಮಗಳ ಒತ್ತಡ ಪ್ರತಿಯೊಂದನ್ನೂ ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಆದರೂ ಎಸ್.ಎಂ. ಕೃಷ್ಣ ಅವರು ಎಂದೂ ಯಾರ ಮೇಲೂ ರೇಗಾಡಲಿಲ್ಲ. ವಿರೋಧ ಪಕ್ಷದ ನಾಯಕರನ್ನು ಜರಿಯಲಿಲ್ಲ. ಅವರು ಗದ್ದಲ ಮಾಡಿದಾಗ ತಮ್ಮ ಸಹನೆ ಕಳೆದುಕೊಂಡು ತಾವೂ ಬೊಬ್ಬೆ ಹೊಡೆಯಲಿಲ್ಲ. ವಿರೋಧ ಪಕ್ಷದವರೊಡನೆ ಪೈಪೋಟಿಗಿಳಿದು ತಾವೂ ಬಿ.ಪಿ. ಏರಿಸಿಕೊಳ್ಳಲಿಲ್ಲ. ಸಭ್ಯತೆಯ ಮಿತಿಯನ್ನು ಎಲ್ಲೂ ಮೀರಲಿಲ್ಲ. ಅತ್ಯಂತ ಸಹನೆಯಿಂದ, ಗೌರವಯುತವಾಗಿ ನಡೆದುಕೊಂಡರು. ಹಾಗೆ ನೋಡಿದರೆ ಎಸ್.ಎಂ. ಕೃಷ್ಣ ಅವರು ಸಿದ್ದರಾಮಯ್ಯ ಅವರಿಗಿಂತ ದುಪ್ಪಟ್ಟು ಸಿಟ್ಟಿನಿಂದ ಪ್ರತಿಪಕ್ಷಗಳ ಮೇಲೆ ರೇಗಾಡಬೇಕಿತ್ತು. ಆದರೆ ಅವರು ಪ್ರತಿಪಕ್ಷದವರ ಮೇಲಷ್ಟೇ ಅಲ್ಲ ಯಾರ ಮೇಲೂ ರೇಗಾಡಿದ್ದು ಕಾಣಲಿಲ್ಲ. ಈ ಹಿಂದೆ ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ಎಸ್.ಎಂ.ಕೃಷ್ಣ ಯಾವ ರೀತಿಯ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂಬುದನ್ನು ಹಾಲಿ ಮುಖ್ಯಮಂತ್ರಿಯವರು ತುಸು ಗಮನಿಸಿದರೆ ಅತಿರೇಕಗಳಾಗುವುದು ಖಂಡಿತ ತಪ್ಪುತ್ತದೆ.
ಸಿದ್ದರಾಮಯ್ಯನರು ಅಬ್ಬರಿಸುವ ಕೇವಲ ಒಂದು ದಿನ ಮೊದಲು ಬಿಜೆಪಿಯ ಗೋವಿಂದ ಕಾರಜೋಳ ಅವರು, "ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವಾಗ ಆಡಳಿತ ಪಕ್ಷದವರು ನೋಡಿ ಆನಂದಿಸಬೇಕು" ಎಂಬ ಕಿವಿಮಾತು ಹೇಳಿದ್ದರು. ಅದು ಸತ್ಯಕೂಡ. ಆಡಳಿತ ನಡೆಸುವವರಿಗೆ ಸಹನೆ, ವಿರೋಧ ಪಕ್ಷಗಳ ಮಾತು ಕೇಳುವ ಸಹನೆ ಇರಬೇಕು. ವಿರೋಧ ಪಕ್ಷಗಳಿಗೆ ಪ್ರತಿಭಟನೆ, ಸರ್ಕಾರದ ಮೇಲೆ ಆರೋಪ ಮಾಡುವುದೇ ಪ್ರಮುಖ ಅಸ್ತ್ರ. ಅದು ಬಿಟ್ಟರೆ ಅವರ ಬಳಿ ಬೇರೆ ಯಾವ ಅಸ್ತ್ರವೂ ಇಲ್ಲ. ಆದರೆ ಸರ್ಕಾರಕ್ಕೆ ಹಾಗಲ್ಲ. ಸರ್ಕಾರದ ಬಳಿ ಎಲ್ಲ ಸಂಪನ್ಮೂಲಗಳೂ ಲಭ್ಯವಿರುತ್ತವೆ. ಅದಕ್ಕೆ ಬೇಕಾದ ಕ್ರಮಕೈಗೊಳ್ಳುವ ಅವಕಾಶ ಇರುತ್ತದೆ. ಇದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡಂತೆ ಕಾಣಲಿಲ್ಲ. ನಾಯಕನಾದವನು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದು ಹೆಚ್ಚು ಮುಖ್ಯವಾಗುತ್ತದೆಯೇ ಹೊರತು ಸಾಮಾನ್ಯ ಅಥವಾ ಸಂತಸದ ಪರಿಸ್ಥಿತಿಯಲ್ಲಿ ಹೇಗಿರುತ್ತಾನೆ ಎಂಬುದು ಮುಖ್ಯವಾಗುವುದಿಲ್ಲ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ತಮ್ಮ ವರ್ತನೆಗಳನ್ನು ಸಾಕಷ್ಟು ತಿದ್ದಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರೇ ಹೇಳುತ್ತಾರೆ. ಕೆಲವು ಬದಲಾವಣೆಗಳು ಗೋಚರಿಸುತ್ತವೆ. ಆದರೆ ಬುಧವಾರದ ಕಲಾಪದಲ್ಲಿ ಅವರ ವರ್ತನೆ ನೋಡಿದಾಗ ಬದಲಾಗದಿರುವ ಗುಣಗಳೂ ಇವೆ ಎಂಬುದನ್ನು ಅವರೇ ತೋರಿಸಿಕೊಟ್ಟಂತಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ, ಪ್ರತ್ಯಾರೋಪ, ಪ್ರತಿಪಕ್ಷಗಳ ಹೋರಾಟಗಳು ಸಾಮಾನ್ಯ. ಆದರೆ ಅದು ಸಭ್ಯತೆಯ ಎಲ್ಲೆ ಮೀರಬಾರದು. ಆ ಮಿತಿಯೊಳಗೆ ಇದ್ದರೆ ಎಲ್ಲರಿಗೂ ಶೋಭೆ. ಈ ಹೊಣೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ಮೇಲಿದೆ. ಆಡಳಿತ ಪಕ್ಷದ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಯಾಕೆಂದರೆ ಅವರ ಬಳಿ ಅಧಿಕಾರ ಇರುವುದರಿಂದ ಅವರ ಜವಾಬ್ದಾರಿ ಹೆಚ್ಚಿರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜನಪ್ರತಿನಿಧಿಗಳ ವರ್ತನೆಯನ್ನು ಜನ ಗಮನಿಸುತ್ತಿರುತ್ತಾರೆ ಎಂಬ ಅರಿವು ಕೂಡ ಇರುವುದು ಒಳ್ಳೆಯದು.

- ವಿನಾಯಕ ಭಟ್ಟ ಮೂರೂರು
vakradanta@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com