ಬಹುಸಂಖ್ಯಾತರನ್ನು ವಧಾಸ್ಥಾನಕ್ಕೆ ತರಲೆಂದೇ ರೂಪುಗೊಂಡ ವಿಧೇಯಕವಿದು!

2002ರ ಗುಜರಾತ್ ಗಲಭೆ ನಂತರ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಪ್ರತ್ಯೇಕ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂದು ಬುದ್ಧಿಜೀವಿಗಳು, ಅಕಾಡೆಮಿಶಿಯನ್ಗಳು ಹಾಗೂ ಸಾಮಾಜಿಕ ಹೋರಾಟಗಾರರೆನಿಸಿಕೊಂಡವರು ಒತ್ತಡ ಹೇರತೊಡಗಿದರು. ಪರಿಣಾಮವಾಗಿ ಇದೀಗ 'ಕೋಮು ಹಾಗೂ ಯೋಜಿತ ಹಿಂಸಾಚಾರ ತಡೆ (ನ್ಯಾಯ ಮತ್ತು ಪರಿಹಾರ ಲಭ್ಯತೆ) ಮಸೂದೆ 2011' ಪ್ರಸ್ತಾವಿತವಾಗಿದೆ. ಆದರೆ ಈ ಮಸೂದೆ ತಾರತಮ್ಯವನ್ನೇ ಜೀವಾಳವಾಗಿರಿಸಿಕೊಂಡಿದ್ದು, ಕೋಮು ಹಿಂಸಾಚಾರಗಳಲ್ಲಿ ಬಹುಸಂಖ್ಯಾತ ಸಮುದಾಯದವರನ್ನು ಮಾತ್ರವೇ ಕಟಕಟೆಯಲ್ಲಿ ನಿಲ್ಲಿಸುತ್ತಿದೆ ಎಂಬ ಧ್ವನಿ ಎದ್ದಿದೆ. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರೂ ಈ ಆತಂಕಗಳನ್ನೇ ಎತ್ತಿ ಅದಕ್ಕೆ ಕಾರಣಗಳನ್ನು ನೀಡಿದ್ದಾರೆ.
'ಕೋಮು ಹಾಗೂ ಯೋಜಿತ ಹಿಂಸಾಚಾರ ತಡೆ (ನ್ಯಾಯ ಮತ್ತು ಪರಿಹಾರ ಲಭ್ಯತೆ) ಮಸೂದೆ 2011' ಎಂಬ ಹೆಸರಿನಲ್ಲಿ ವಿಧೇಯಕವೊಂದು ಸಿದ್ಧವಾಗಿದ್ದು ಕಾನೂನಾಗುವುದಕ್ಕೆ ಕಾಯ್ದುಕೊಂಡಿದೆ. ಅದರ ಪ್ರಮುಖಾಂಶಗಳೆಲ್ಲ ಈಗ ಸಾರ್ವಜನಿಕವಾಗಿ ಲಭ್ಯವಾಗಿವೆ. ದೇಶದಲ್ಲಿ ಕೋಮು ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ರೂಪುಗೊಂಡಿರುವುದಾಗಿ ಈ ವಿಧೇಯಕದ ಕರಡು ಪ್ರತಿ ಸಾರುತ್ತದೆ. ಆದರೆ ಮೇಲೆ ತೋರುವಂತೆ ಹೇಳಲಾಗುತ್ತಿರುವ ಕಾರಣ ಇದಾಗಿದ್ದರೂ ಅದರ ಉದ್ದೇಶ ಮಾತ್ರ ವ್ಯತಿರಿಕ್ತವಾಗಿದೆ. ಇದೇನಾದರೂ ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ನಮ್ಮ ಒಕ್ಕೂಟ ವ್ಯವಸ್ಥೆಯನ್ನೇ ಅಲ್ಲಾಡಿಸಲಿದೆಯಲ್ಲದೆ, ಭಾರತದಲ್ಲಿ ನೆಲೆಗೊಂಡಿರುವ ಸಮುದಾಯಗಳ ನಡುವಿನ ಸೌಹಾರ್ದವನ್ನೇ ಕದಡಲಿದೆ.
ವಿಧೇಯಕದಲ್ಲಿ ಬಳಸಲಾಗಿರುವ 'ಸಮೂಹ' ಎಂಬ ಶಬ್ದ ಬಹಳ ಮುಖ್ಯವಾದದ್ದು. ಇವರ ಪ್ರಕಾರ ಗ್ರೂಪ್ ಅಥವಾ ಸಮೂಹದ ವ್ಯಾಖ್ಯಾನ ಎಂದರೆ ಆಯಾ ರಾಜ್ಯದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು. ಅದು ಪರಿಶಿಷ್ಟ ಜಾತಿ ಮತ್ತು ವರ್ಗಗಳನ್ನೂ ಒಳಗೊಡಿದ್ದಿರಬಹುದು. ಎರಡನೇ ಅಧ್ಯಾಯದಲ್ಲಿ ಹೊಸಬಗೆಯ ಅಪರಾಧವನ್ನು ಉಲ್ಲೇಖಿಸಲಾಗಿದೆ. ಅದರ ಆರನೇ ಅಧಿನಿಯಮ ಹೇಳುವುದೇನೆಂದರೆ ಈ ವಿಧೇಯಕದ ಪ್ರಕಾರ ಅಪರಾಧವಾಗಿರುವುದು 1989ರ ದಲಿತ ದೌರ್ಜನ್ಯ ಕಾಯ್ದೆಗೆ ಹೆಚ್ಚುವರಿ ಆಗಿರುವುದು. ಅಂದರೆ ಒಬ್ಬನೇ ವ್ಯಕ್ತಿ ಒಂದು ಅಪರಾಧಕ್ಕೆ ಎರಡು ಬಾರಿ ಶಿಕ್ಷೆಗೊಳಗಾಗುವ ಸಾಧ್ಯತೆಯನ್ನು ಇದು ನೀಡಿದೆ. ಇದು ಸಾಧುವಾಗುತ್ತದೆಯೇ?
ಏಳನೇ ಅಧಿನಿಯಮ ಹೇಳುತ್ತದೆ- ಒಂದು 'ಸಮೂಹ'ದ ವ್ಯಕ್ತಿಯ ವಿರುದ್ಧ ಆತ ಅಥವಾ ಆಕೆ ಎಸಗುವ ಲೈಂಗಿಕ ದೌರ್ಜನ್ಯವನ್ನು ಆಕ್ರಮಣ ಎಂದು ವಿಭಾಗಿಸಲಾಗುವುದು. ಇಲ್ಲಿ ವ್ಯಕ್ತಿಯು ಯಾವ 'ಸಮೂಹ'ಕ್ಕೆ ಸೇರಿದ್ದಾನೆ ಎಂಬುದರ ಮೇಲೆ ಆತ ಅಥವಾ ಆಕೆ ಸಂತ್ರಸ್ತರು ಹೌದೋ ಅಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಎಂಟನೇ ಅಧಿನಿಯಮ ಶಬ್ದ- ಮೌಖಿಕ ಇಲ್ಲವೇ ಬರೆವಣಿಗೆ ರೂಪ, ದೃಶ್ಯ ಮುಖೇನ 'ದ್ವೇಷ ಪ್ರಸರಣ'ವನ್ನು ಅಪರಾಧವನ್ನಾಗಿಸುತ್ತದೆ. ಇಲ್ಲಿಯೂ ವ್ಯಕ್ತಿ ತಪ್ಪಿತಸ್ಥನೇ ಅಥವಾ ಅಲ್ಲವೇ ಎಂದು ನಿರ್ಧರಿಸುವುದಕ್ಕೆ ಆತನ 'ಸಮೂಹ' ನಿರ್ಣಾಯಕವಾಗುತ್ತದೆ. ಅಧಿನಿಯಮ 9 ಹೇಳುವುದೇನೆಂದರೆ ಯಾವುದೇ ವ್ಯಕ್ತಿ ಒಂದು ಸಂಘಟನೆಯ ಪ್ರಭಾವಕ್ಕೆ ಒಳಗಾಗಿ ಅಥವಾ ವ್ಯಕ್ತಿಗತವಾಗಿ ನಿರ್ದಿಷ್ಟ 'ಸಮೂಹ'ದ ವಿರುದ್ಧ ಹಿಂಸಾಚಾರದಲ್ಲಿ ತೊಡಗುವುದು ಅಪರಾಧ ಎನ್ನಿಸಿಕೊಳ್ಳುತ್ತದೆ. ಒಂದು 'ಸಮೂಹ'ದ ವಿರುದ್ಧ ಅಪರಾಧಕ್ಕೆ ಹಣ ಅಥವಾ ಇನ್ಯಾವುದೇ ಬೆಂಬಲ ಒದಗಿಸುವವನು ಅಪರಾಧಿಯಾಗುತ್ತಾನೆ. ಅಧಿನಿಯಮ 12 ಸಹ ಈ 'ಸಮೂಹ'ದ ಪರಿಭಾಷೆಯಲ್ಲೇ ಮಾತನಾಡುತ್ತ, 'ಸಮೂಹ'ಕ್ಕೆ ಸೇರಿದ ವ್ಯಕ್ತಿಗೆ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯು ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾತನೆ ಕೊಡುವುದು ಹಿಂಸೆ ಎಂದೆನಿಸಿಕೊಳ್ಳುವುದು ಎನ್ನಲಾಗಿದೆ. 13ನೇ ಅಧಿನಿಯಮವು ಕರ್ತವ್ಯ ಲೋಪದ ಮೇಲೆ ಸಾರ್ವಜನಿಕ ಸೇವೆಯ ಅಧಿಕಾರಿಯನ್ನು ಶಿಕ್ಷಿಸುತ್ತದೆ. ಸಶಸ್ತ್ರ ಪಡೆ ಇಲ್ಲವೇ ಭದ್ರತಾ ಪಡೆಯು ಜನರನ್ನು ತಹಬಂದಿಗೆ ತರುವಲ್ಲಿ ವಿಫಲವಾದಾಗ ಅವುಗಳ ನೇತೃತ್ವ ವಹಿಸಿರುವ ಅಧಿಕಾರಿಯನ್ನು ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸದ ಕಾರಣಕ್ಕೆ ಶಿಕ್ಷಿಸಬಹುದು ಎಂದು 14ನೇ ಅಧಿನಿಯಮ ಹೇಳುತ್ತದೆ.
15ನೇ ಅಧಿನಿಯಮವಂತೂ ಕಲ್ಪನಾತ್ಮಕ ಹೊಣೆಗಾರಿಕೆಯನ್ನೇ ಹೊರೆಸಿಬಿಡುತ್ತದೆ. ತನ್ನ ಅಧೀನದಲ್ಲಿರುವ ಅಧಿಕಾರಿ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ವಿಫಲನಾದಾಗ, ಈತ ತನ್ನ ಅಧೀನಾಧಿಕಾರಿ ಮೇಲೆ ಹಿಡಿತ ಹೊಂದಿಲ್ಲ ಎಂಬ ಕಾರಣಕ್ಕೆ ಶಿಕ್ಷಿಸಬಹುದಾಗಿದೆ. ಅಂದರೆ ಬೇರೆ ವ್ಯಕ್ತಿ ಮಾಡಿದ ತಪ್ಪಿಗೆ ಈತ ಹೊಣೆಗಾರನಾಗಬೇಕಾಗುತ್ತದೆ. ಇದನ್ನು ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಳ್ಳುವ ಅಧಿಕಾರವನ್ನು 16ನೇ ಅಧಿನಿಯಮ ಕಿತ್ತುಕೊಂಡುಬಿಡುತ್ತದೆ.
ಕೋಮು ಸಂಘರ್ಷದಲ್ಲಿ ವರದಿಯಾಗುವ ಯಾವುದೇ ಅಪರಾಧಗಳು ವಾಸ್ತವದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು. ಕಾನೂನು ಮತ್ತು ಸುವ್ಯವಸ್ಥೆ ನೇರವಾಗಿ ರಾಜ್ಯ ಸರ್ಕಾರಗಳ ಉಸ್ತುವಾರಿಗೆ ಬರುವ ವಿಷಯ. ಕೇಂದ್ರ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಇಲ್ಲವೇ ಈ ವಿಷಯದಲ್ಲಿ ಶಾಸನವನ್ನು ರಚಿಸುವ ಯಾವ ಅಧಿಕಾರವೂ ಇಲ್ಲ. ರಾಜ್ಯ ಸರ್ಕಾರಗಳಿಗೆ ಈ ವಿಷಯದಲ್ಲಿ ಸೂಚನೆಗಳನ್ನು ನೀಡುವ, ಸಂವಿಧಾನದ 356ನೇ ವಿಧಿ ಅನ್ವಯ ರಾಜ್ಯದ ಆಡಳಿತವು ಸಂವಿಧಾನಬದ್ಧವಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸುವ ಅಧಿಕಾರ ಮಾತ್ರವೇ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಈಗ ಪ್ರಸ್ತಾವಿತವಾಗಿರುವ ವಿಧೇಯಕವೇನಾದರೂ ಕಾಯ್ದೆಯಾಗಿ ಬಂದರೆ ಆಗ ರಾಜ್ಯ ಸರ್ಕಾರದ ಅಧಿಕಾರವ್ಯಾಪ್ತಿಯನ್ನೇ ಹತ್ತಿಕ್ಕಿದಂತಾಗುತ್ತದೆ.
ಭಾರತವು ಸಮುದಾಯಗಳ ನಡುವೆ ಸೌಹಾರ್ದವನ್ನು ಬಲಪಡಿಸಿಕೊಳ್ಳುವ ಗುರಿಯತ್ತ ಸಾಗುತ್ತಿದೆ. ಸಣ್ಣಮಟ್ಟದ ಕೋಮು ಸಂಘರ್ಷಗಳು ಹಾಗೂ ಜಾತಿ ನೆಲೆಯ ಘರ್ಷಣೆಗಳು ಆಗುತ್ತಿರುವುದು ಹೌದಾದರೂ ಒಟ್ಟಾರೆ ರಾಷ್ಟ್ರೀಯ ಪ್ರಜ್ಞೆ ಅವನ್ನೆಲ್ಲ ಖಂಡಿಸುವ ಧೋರಣೆಯನ್ನೇ ಹೊಂದಿದೆ. ಸರ್ಕಾರಗಳು, ಮಾಧ್ಯಮ, ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿಭಾಯಿಸುವುದಕ್ಕೆ ಮುಂದಾಗುತ್ತವೆ. ಕೋಮು ಸಂಘರ್ಷದ ಸಂಚುಕೋರರಿಗೆ ಶಿಕ್ಷೆಯಾಗುವುದಕ್ಕೆ ಇವೆಲ್ಲವೂ ಕೆಲಸ ಮಾಡುತ್ತವೆ. ಆದರೆ ಕೋಮು ಹಿಂಸೆ ತಡೆ ವಿಧೇಯಕದ ತೊಂದರೆ ಏನೆಂದರೆ ಇದು ಕೋಮು ಹಿಂಸೆ ಎನ್ನುವುದು ಕೇವಲ ಬಹುಸಂಖ್ಯಾತ ಕೋಮಿಗೆ ಸೇರಿದ ವ್ಯಕ್ತಿಗಳಿಂದ ಮಾತ್ರವೇ ಆಗುವಂಥದ್ದು ಎಂಬುದರ ಮೇಲೆ ರಚನೆಯಾಗಿದೆ. ಹೀಗಾಗಿ ಬಹುಸಂಖ್ಯಾತ ಸಮುದಾಯದ ಪ್ರತಿನಿಧಿಯೊಬ್ಬ ಅಲ್ಪಸಂಖ್ಯಾತ ಕೋಮಿನ ವ್ಯಕ್ತಿ ವಿರುದ್ಧ ಎಸಗುವ ಅಪರಾಧಗಳು ಶಿಕ್ಷಾರ್ಹವಾಗುತ್ತವೆ. ಆದರೆ, ಇದೇ ಬಗೆಯ ಅಪರಾಧವನ್ನು ಅಲ್ಪಸಂಖ್ಯಾತ ಕೋಮಿನ ವ್ಯಕ್ತಿ ಬಹುಸಂಖ್ಯಾತ ಕೋಮಿನ ವ್ಯಕ್ತಿಯ ವಿರುದ್ಧ ಎಸಗಿದಾಗ ಅದು ಈ ಪ್ರಸ್ತಾವಿತ ಕಾಯ್ದೆಯ ಪ್ರಕಾರ ಅಪರಾಧ ಎನ್ನಿಸಿಕೊಳ್ಳುವುದೇ ಇಲ್ಲ!
ಲೈಂಗಿಕ ದೌರ್ಜನ್ಯವೂ ಈ ಕಾಯ್ದೆಯ ಪ್ರಕಾರ ಅಲ್ಪಸಂಖ್ಯಾತ ಕೋಮಿನ ವಿರುದ್ಧ ಎಸಗಲಾಗಿದ್ದರಷ್ಟೇ ಅಪರಾಧ ಎನ್ನಿಸಿಕೊಳ್ಳುತ್ತದೆ. ಯಾವುದೇ ರಾಜ್ಯದ ಬಹುಸಂಖ್ಯಾತ ವ್ಯಕ್ತಿ 'ಸಮೂಹ' ಎಂಬ ವ್ಯಾಖ್ಯೆಯ ಒಳಗೆ ಬರುವುದೇ ಇಲ್ಲ. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಆಗುವ 'ದ್ವೇಷ ಪ್ರಚಾರ'ವಷ್ಟೇ ಶಿಕ್ಷಾರ್ಹವೇ ಹೊರತು ಉಳಿದ್ದಿದ್ದಲ್ಲ. ಸಂಘಟಿತ ಹಾಗೂ ಯೋಜಿತ ಹಿಂಸೆ, ಇಂಥವಕ್ಕೆ ಹಣಕಾಸಿನ ನೆರವು, ಸಾರ್ವಜನಿಕ ಅಧಿಕಾರಿಯ ಕರ್ತವ್ಯ ಲೋಪ ಇವೆಲ್ಲವೂ ಈ ಕಾಯ್ದೆಯ ಪ್ರಕಾರ ಶಿಕ್ಷಾರ್ಹವಾಗುವುದು ಯಾವಾಗಲೆಂದರೆ ಇಂಥವೆಲ್ಲ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಡೆದಿರಬೇಕು. ಬಹುಸಂಖ್ಯೇತ ಸಮುದಾಯದ ಯಾವೊಬ್ಬ ಸದಸ್ಯನೂ ಸಂತ್ರಸ್ತ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅಪರಾಧ ಕೃತ್ಯವನ್ನು ತಾರತಮ್ಯದ ನೆಲೆಯಲ್ಲಿ ನೋಡುವ ನಿಟ್ಟಿನಲ್ಲಿಯೇ ಈ ವಿಧೇಯಕದ ಕರಡು ಪ್ರತಿಯನ್ನು ರಚಿಸಲಾಗಿದೆ. ಬಹುಸಂಖ್ಯಾತ ಸಮುದಾಯ ವಿರುದ್ಧ ಇಂಥದೊಂದು ಅಪರಾಧ ಎಸಗಲಾಗಿದೆ ಎಂದು ಯಾವೊಬ್ಬ ವ್ಯಕ್ತಿಯನ್ನು ಈ ಪ್ರಸ್ತಾವಿತ ಕಾಯ್ದೆ ಅಡಿ ಶಿಕ್ಷಿಸುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಕೋಮು ಹಿಂಸಾಚಾರಕ್ಕೆ ಕಾರಣರಾಗುವವರು ಬಹುಸಂಖ್ಯಾತ ಸಮುದಾಯದವರು ಮಾತ್ರ ಎಂದು ನಿರ್ಧಾರಕ್ಕೆ ಬಂದುಬಿಟ್ಟಂತಿರುವ ಕರಡು ವಿಧೇಯಕವು ಅಪರಾಧ ಮತ್ತು ಶಿಕ್ಷೆಗಳನ್ನು ಈ ಸಮುದಾಯದ ವ್ಯಕ್ತಿಗಳಿಗೆ ಆರೋಪಿಸುವುದಕ್ಕಷ್ಟೇ ಇಲ್ಲಿನ ಎಲ್ಲ ನಿಯಮಗಳನ್ನು ರೂಪಿಸಲಾಗಿದೆ. ಈ ಕಾಯ್ದೆಯನ್ನು ಇದೇ ರೂಪದಲ್ಲಿ ಜಾರಿಗೆ ತಂದಿದ್ದೇ ಆದರೆ ಅದು ಸಮುದಾಯವೊಂದಕ್ಕೆ ಅಪರಾಧ ಕೃತ್ಯಗಳಲ್ಲಿ ಎಗ್ಗಿಲ್ಲದೇ ಭಾಗವಹಿಸುವುದಕ್ಕೆ ನೀಡಿದ ಪ್ರಚೋದನೆ ಆಗುತ್ತದೆ. ಏಕೆಂದರೆ ಅವರು ಮಾಡಿದ ಅಪರಾಧಗಳಿಗೆ ಈ ಕಾಯ್ದೆಯಲ್ಲಿ ಶಿಕ್ಷೆಯೇ ಇಲ್ಲವಲ್ಲ.
ಭಯೋತ್ಪಾದಕ ಗುಂಪುಗಳಿಗೆ ಉಗ್ರಗಾಮಿ ಕೆಲಸಗಳಿಗಾಗಿ ತಮ್ಮ ಶ್ರಮವನ್ನು ಖರ್ಚು ಮಾಡಬೇಕಾದ ಅಗತ್ಯವೇ ಬರದು. ಬಹಳ ಸುಲಭವಾಗಿ ಅವು ಕೋಮು ಹಿಂಸೆಯನ್ನು ಹರಡುವುದರ ಮೂಲಕ ತಮ್ಮ ಉದ್ದೇಶದ ಈಡೇರಿಕೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಏಕೆಂದರೆ ಜಿಹಾದಿ ಗುಂಪುಗಳನ್ನೂ ಈ ಪ್ರಸ್ತಾವಿತ ಕಾಯ್ದೆ ಶಿಕ್ಷಿಸುವುದಿಲ್ಲ. ಅದೇಕೆ ಒಂದು ಕಾನೂನು ಧರ್ಮ ಮತ್ತು ಜಾತಿ ಆಧಾರದ ಮೇಲೆ ತಾರತಮ್ಯಕ್ಕೆ ಅನುವು ಮಾಡಿಕೊಡಬೇಕು? ಅಪರಾಧ ಅದು ಯಾವುದೇ ಸಮುದಾಯದವನು ಮಾಡಿದ್ದರೂ ಶಿಕ್ಷಾರ್ಹವೇ ಆಗಬೇಕಲ್ಲವೇ?
ಈ ಕಾಯ್ದೆಯ ಅನುಷ್ಠಾನದ ಹೊಣೆ ಯಾರದ್ದು? ಕೋಮು ಸೌಹಾರ್ದ, ನ್ಯಾಯ ಮತ್ತು ಪರಿಹಾರಕ್ಕೆ ಏಳು ಸದಸ್ಯರ ರಾಷ್ಟ್ರೀಯ ಪ್ರಾಧಿಕಾರ ರಚನೆ ಎಂಬುದಾಗಿ ವಿಧೇಯಕ ಹೇಳುತ್ತದೆ. ಈ ಏಳು ಸದಸ್ಯರ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಕನಿಷ್ಠ ನಾಲ್ವರು 'ಸಮೂಹ'ಕ್ಕೆ (ಅಲ್ಪಸಂಖ್ಯಾತ ವರ್ಗ) ಸೇರಿರಬೇಕು ಎಂದು ಅದು ಹೇಳುತ್ತದೆ. ಇಂಥದೇ ಪ್ರಾಧಿಕಾರವನ್ನು ರಾಜ್ಯಗಳಲ್ಲೂ ರಚಿಸಬೇಕೆಂದು ವಿಧೇಯಕ ಹೇಳುತ್ತದೆ. ಅಂದರೆ ಇಡೀ ಪ್ರಾಧಿಕಾರದ ನೇಮಕವೇ ಧಾರ್ಮಿಕ ಮತ್ತು ಜಾತಿಯ ನೆಲೆಯಲ್ಲಿ ಆಗುತ್ತದೆ ಎಂದಾಯಿತು. ಈ ವ್ಯವಸ್ಥೆಯಲ್ಲಿ ಕೇವಲ ಬಹುಸಂಖ್ಯಾತ ವರ್ಗಕ್ಕೆ ಸೇರಿದವರಷ್ಟೇ ತಪ್ಪಿತಸ್ಥರು ಎನ್ನಿಸಿಕೊಳ್ಳುತ್ತಾರೆ. ಈ ಪ್ರಾಧಿಕಾರಕ್ಕೆ ಪೊಲೀಸರು ಮತ್ತು ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿವರಣೆಗೆ ಹಾಜರಾಗಬೇಕಾಗುತ್ತದೆ. ಇದು ಯಾವುದೇ ಕಟ್ಟಡವನ್ನು ಪ್ರವೇಶಿಸುವ, ತನಿಖೆ ಕೈಗೊಳ್ಳುವ, ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರಗಳನ್ನು ಪಡೆದುಕೊಳ್ಳುತ್ತದೆ. ಸಶಸ್ತ್ರ ಪಡೆಯೊಂದಿಗೆ ವ್ಯವಹರಿಸುವುದಕ್ಕೂ ಅದಕ್ಕೆ ಅಧಿಕಾರ ಪ್ರಾಪ್ತವಾಗಿಬಿಡುತ್ತದೆ.
ಇದು ನಡೆಸಬಹುದಾದ ತನಿಖೆ ವಿಧಾನಗಳಂತೂ ಭಾರಿ ಜೋರಿನದು. ಕ್ರಿಮಿನಲ್ ಪ್ರೊಸೀಡಿಂಗ್ನ 161ನೇ ವಿಧಿ ಅಡಿ ಯಾವುದೇ ಹೇಳಿಕೆ ದಾಖಲಿಸಿಕೊಳ್ಳಲಾಗುವುದಿಲ್ಲ. ಸಂತ್ರಸ್ತನ ಹೇಳಿಕೆಯನ್ನು ಕೋರ್ಟ್ ಎದುರಿಗಷ್ಟೇ ದಾಖಲಿಸಲಾಗುತ್ತದೆ. ಈ ಕಾಯ್ದೆ ಅಡಿಯಲ್ಲಿ ಸರ್ಕಾರವು ಯಾರ ದೂರವಾಣಿ ಸಂಭಾಷಣೆಯನ್ನಾದರೂ ಕದ್ದಾಲಿಸಬಹುದಾಗಿದೆ. ಇದರ 74ನೇ ಅಧಿನಿಯಮದ ಪ್ರಕಾರ ಯಾರ ವಿರುದ್ಧವಾದರೂ ದ್ವೇಷ ಪ್ರಚಾರದ ಆರೋಪ ಹೊರಿಸಿದರೆ ಅದನ್ನು ಅಲ್ಲಗೆಳೆಯುವ ಹೊಣೆ ಅವನ ಮೇಲೆಯೇ ಬೀಳುತ್ತದೆ. ಅಲ್ಲಿಯವರೆಗೂ ಆತನನ್ನು ತಪ್ಪಿತಸ್ಥ ಎಂದೇ ನಿರ್ಧರಿಸಲಾಗುತ್ತದೆ. ಬಹುಶಃ ಇಂಥದೊಂದು ವಿಧೇಯಕದ ಕರಡು ಸಿದ್ಧಪಡಿಸುವಲ್ಲಿ ಗುಜರಾತ್ನ ನಾಯಕರನ್ನು ಹೇಗಾದರೂ ಸಿಕ್ಕಿಸಬೇಕು ಎಂಬ ತಥಾಕಥಿತ ಹೋರಾಟಗಾರರ ಛಾಯೆಯೇ ಇದ್ದಂತಿದೆ. ಈ ಕಾಯ್ದೆ ಅಡಿ ಅಪರಾಧದ ವ್ಯಾಖ್ಯಾನವೂ ಅಸ್ಪಷ್ಟ. ಕೋಮು ಹಿಂಸೆ ಇಲ್ಲವೇ ಯೋಜಿತ ಹಿಂಸಾಚಾರ ಯಾವುದಾಗುತ್ತದೆ ಎಂದರೆ ಯಾವುದು ದೇಶದ 'ಜಾತ್ಯತೀತ ಚೌಕಟ್ಟನ್ನು ನಾಶಗೊಳಿಸುವುದೋ' ಅಂಥದ್ದು ಎನ್ನಲಾಗಿದೆ. ಈ ಸೆಕ್ಯುಲರಿಸಂ ಅಂದರೆ ಏನು ಎಂಬ ಬಗ್ಗೆ ಈಗಾಗಲೇ ಗಂಭೀರ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಯಾರ ವ್ಯಾಖ್ಯಾನವನ್ನು ಜಡ್ಜ್ ಒಪ್ಪಬೇಕು?
ಈ ದೇಶದಲ್ಲಿ ಕೋಮು ಸಂಘರ್ಷ ಎಂದರೆ ಬಹುಸಂಖ್ಯಾತರಿಂದ ಮಾತ್ರ ಆಗುವಂಥದ್ದು, ಅವರನ್ನೇ ವಧಾಸ್ಥಾನದಲ್ಲಿ ನಿಲ್ಲಿಸಬೇಕು ಎಂಬ ಪೂರ್ವನಿರ್ಧಾರ ಹೊತ್ತ ಕರಡು ವಿಧೇಯಕ ಇದಾಗಿದೆ. ಇದು ಕಾಯ್ದೆಯಾಗಿದ್ದೇ ಆದರೆ ಈ ದೇಶದ ಕೋಮು ಸೌಹಾರ್ದಕ್ಕೆ ಕೊಡಲಿಪೆಟ್ಟು ಬೀಳಲಿದೆ ಎಂಬ ಬಗ್ಗೆ ಅನುಮಾನಗಳೇ ಬೇಡ. ಇಂಥ ಅಪಾಯಕಾರಿ ಕಾಯ್ದೆಯ ಕರಡು ತಯಾರಿಸಿದ ಕುಖ್ಯಾತಿ ರಾಷ್ಟ್ರೀಯ ಸಲಹಾ ಸಮಿತಿಗೆ ಸಲ್ಲುತ್ತದೆ. ಅದರ ರಾಜಕೀಯ ಮುಖ್ಯಸ್ಥರು ಹೇಗೆ ಇಂಥ ಅಪದ್ಧವನ್ನು ಒಪ್ಪಿದರು ಎಂಬುದು ಪ್ರಶ್ನೆಯಾಗುತ್ತದೆ. ಟಾಡಾ, ಪೋಟಾದಂಥ ಉಗ್ರ ವಿರೋಧಿ ಕಾನೂನುಗಳನ್ನು ವಿರೋಧಿಸಿ, ಭಯೋತ್ಪಾದಕರನ್ನು ಸಾಮಾನ್ಯ ಕಾನೂನಿನ ಮೂಲಕವೇ ವಿಚಾರಣೆಗೆ ಒಳಪಡಿಸಿದರೆ ಸಾಕು ಎಂಬ ನಿಲುವು ತಾಳಿದ್ದು ಇದೇ ಯುಪಿಎ. ಆದರೆ ಬಹುಸಂಖ್ಯಾತರ ಪಾಲಿಗೆ ಮಾತ್ರ ಮಾರಣಾಂತಿಕವೆನ್ನಬಹುದಾದ ಕಾಯ್ದೆಯನ್ನು ತರುವ ಉಮೇದು ಅದರದ್ದು.
- ಅರುಣ್ ಜೇಟ್ಲಿ
ರಾಜ್ಯಸಭೆ ಪ್ರತಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


