ಅಂಕಣಗಳು

ಈ ವಿಜಯದ ನಗೆಯ ತುಂಬ ನೋವಿನದ್ದೇ ಚೀತ್ಕಾರ!

ಈ ವಿಜಯದ ನಗೆಯ ತುಂಬ ನೋವಿನದ್ದೇ ಚೀತ್ಕಾರ!
Published On :

ಡಿಸೆಂಬರ್ 16. ಪಾಕಿಸ್ತಾನದ ದಮನದಿಂದ ಮುಕ್ತವಾದ ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶವಾಗಿ ಅವತರಿಸಿದ ದಿನ. ಈ ಐತಿಹಾಸಿಕ ಘಟ್ಟಕ್ಕೆ ಭಾರತದ ಕೊಡುಗೆ ದೊಡ್ಡದಿದೆ. 1971ರ ಡಿಸೆಂಬರ್‌ನಿಂದ ಈ ಡಿಸೆಂಬರ್‌ವರೆಗೆ ಬಾಂಗ್ಲಾದೇಶ ಹೊರಳಿಕೊಂಡಿರುವ ಬಗೆ, ಭಾರತಕ್ಕೆ ತಟ್ಟಿರುವ ಬಿಸಿ ಇವೆಲ್ಲದರ ಬಿಂಬ ಈ ಲೇಖನಗಳಲ್ಲಿದೆ. ಅವತ್ತಿನ ಶೌರ್ಯ, ತ್ಯಾಗ, ಇಂದಿನ ರಾಜಕೀಯದ ಓಘ ಇವೆಲ್ಲ ಪಕ್ಕ ಪಕ್ಕ ಇಟ್ಟು ನೋಡುತ್ತಿದ್ದರೆ ಕೊರಳ ಸೆರೆ ಉಬ್ಬುವುದು ಖುಷಿಗೋ, ವಿಷಾದಕ್ಕೋ...?

ಡಿಸೆಂಬರ್ 1971ರ ಬಾಂಗ್ಲಾದೇಶ ವಿಮೋಚನೆ ಹಲವು ವಿಧದಲ್ಲಿ ಐತಿಹಾಸಿಕ ಎನ್ನಿಸಿಕೊಳ್ಳುತ್ತದೆ. ಧಾರ್ಮಿಕ ಮೂಲಭೂತವಾದದ ಮೇಲೆಯೇ ಸೃಷ್ಟಿಯಾದ ಪಾಕಿಸ್ತಾನವೆಂಬ ದೇಶ ಹೇರಿದ ಧಾರ್ಮಿಕ ಮೂಲಭೂತವಾದದ ವಿರುದ್ಧ ಪೂರ್ವ ಪಾಕಿಸ್ತಾನದ ರಾಷ್ಟ್ರವಾದವು ಜಯ ಸಾಧಿಸಿದ ದಿನ ಇದಾಗಿದೆ. ಪಾಕಿಸ್ತಾನದ ಕ್ರೂರ ಆಡಳಿತದ ವಿರುದ್ಧ ಸಹಸ್ರಾರು ಮಂದಿಯ ಪ್ರಾಣತ್ಯಾಗದ ನಂತರ ಬಾಂಗ್ಲಾದೇಶದ ಉದಯವಾಯಿತು. ಪಾಕಿಸ್ತಾನವು ಪ್ರಾರಂಭಿಸಿದ ಹತ್ಯಾಕಾಂಡದಲ್ಲಿ ಲಕ್ಷಗಟ್ಟಲೇ ಮುಗ್ಧರ ಮಾರಣಹೋಮವೇ ನಡೆದುಹೋಯಿತು. 1946ರಲ್ಲಿ ಜಿನ್ನಾ 'ಡೈರೆಕ್ಟ್ ಆ್ಯಕ್ಶನ್‌'ಗೆ ಕರೆ ಕೊಟ್ಟಾಗಲೂ ಹಿಂದುಗಳ ಮೇಲೆ, ಹಿಂದು ಸ್ತ್ರೀಯರು ಮತ್ತು ಮಕ್ಕಳ ಮೇಲೆ ಇದೇ ಬಗೆಯ ಎಗ್ಗಿಲ್ಲದ ಅತ್ಯಾಚಾರ, ದೌರ್ಜನ್ಯ ಹಾಗೂ ಕಗ್ಗೊಲೆ ನಡೆದಿತ್ತು. 1970ರ ಬಾಂಗ್ಲಾದೇಶದ ಪರಿಸ್ಥಿತಿ ಈ ಅರ್ಥದಲ್ಲಿ 1946ರ ಯಾತನಾಗಾಥೆಯ ಮರುಕಳಿಸುವಿಕೆಯೇ ಆಗಿತ್ತು.
ಭಾರತವು ತನ್ನ ಅನಾದಿಕಾಲದ ಮೌಲ್ಯ ಪರಂಪರೆಯನ್ನು ಬಿಟ್ಟುಕೊಡಲಿಲ್ಲ. ಬಾಂಗ್ಲಾದೇಶದ ಹಿಂಸೆ- ಹತ್ಯೆಗಳಿಂದ ನಲುಗಿದ ಮಂದಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾರತದ ಗಡಿಯೊಳಗೆ ಬಂದರು. ಅವರೆಲ್ಲರಿಗೂ ಆಶ್ರಯ ನೀಡಿತು ಈ ದೇಶ. ಭಾರತದ ಜನರಿಂದ ಯುದ್ಧ ತೆರಿಗೆ ಸಂಗ್ರಹಿಸಲಾಯಿತು. ತನಗೆ ಆರ್ಥಿಕ ಹೊರೆಯಾಗುತ್ತಿದ್ದರೂ ಈ ದೇಶದ ಪ್ರಜೆ ಅತ್ಯಂತ ದೃಢವಾಗಿ ಪೂರ್ವ ಪಾಕಿಸ್ತಾನದ ರಾಷ್ಟ್ರವಾದಿಗಳ ಹೋರಾಟದ ಪರ ನಿಂತ! ಪಾಕಿಸ್ತಾನದ ಸೇನೆ ಹಾಗೂ ಇಸ್ಲಾಂ ಮತೀಯವಾದಿಗಳ ಹಿಂಸಾಚಾರ-ಅತ್ಯಾಚಾರಗಳಿಗೆ ಕೊನೆ ಇಲ್ಲವಾದಾಗ, ಬಾಂಗ್ಲಾ ವಿಮೋಚನಾ ಹೋರಾಟಕ್ಕೆ ಮಿಲಿಟರಿ ನೆರವನ್ನು ನೀಡುವುದು ಭಾರತಕ್ಕೆ ಅನಿವಾರ್ಯವಾಯಿತು. ರಾವಲ್ಪಿಂಡಿಯ ಯಾಹ್ಯಾಖಾನ್‌ನ ಹತ್ಯಾಕಾಂಡವನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದ ಅಮೆರಿಕವೆಂಬ ದೈತ್ಯಶಕ್ತಿಯನ್ನು ಎದುರು ಹಾಕಿಕೊಳ್ಳುವುದಕ್ಕೂ ಭಾರತ ಹಿಂಜರಿಯಲಿಲ್ಲ. 1971ರ ಆ ಯುದ್ಧವನ್ನು ಬಾಂಗ್ಲಾದ ಪರವಾಗಿ ಸೆಣೆಸಿದ ಭಾರತಕ್ಕೆ ತನ್ನ ರಾಷ್ಟ್ರದ ಹಿತಾಸಕ್ತಿ ಸಾಧಿಸಿಕೊಳ್ಳುವ, ಇಲ್ಲವೇ ಪಕ್ಕದ ದೇಶವನ್ನು ತನ್ನ ಸಾಮ್ರಾಜ್ಯಶಾಹಿ ನೆರಳಿಗೆ ಒಳಪಡಿಸುವ ಯಾವ ಸಂಕುಚಿತ ಉದ್ದೇಶಗಳೂ ಇರಲಿಲ್ಲ. ಅವೆಷ್ಟೋ ಶತಮಾನಗಳ ಹಿಂದೆ ರಾವಣನ ವಿರುದ್ಧ ರಾಮನೂ ಹೋರಾಡಿದ್ದ. ಆತನ ಉದ್ದೇಶ ಲಂಕೆಯನ್ನು ತನ್ನದನ್ನಾಗಿ ಮಾಡಿಕೊಳ್ಳುವುದಾಗಿರಲಿಲ್ಲ. ಅಲ್ಲಿ ಧರ್ಮವನ್ನು, ನ್ಯಾಯವನ್ನು ಸಂಸ್ಥಾಪಿಸುವುದಷ್ಟೇ ರಾಮನ ಗುರಿ. ಲಂಕೆಯನ್ನು ವಶಪಡಿಸಿಕೊಂಡು ಅಲ್ಲಿನ ವ್ಯವಸ್ಥೆಯನ್ನು ತಹಬಂದಿಗೆ ತಂದ ಮೇಲೆ ಅಧಿಕಾರವನ್ನು ಸ್ಥಳೀಯರಿಗೆ, ಆಡಳಿತ ಚುಕ್ಕಾಣಿಯನ್ನು ವಿಭೀಷಣನಿಗೆ ವಹಿಸಿ ಹಿಂತಿರುಗುತ್ತಾನೆ ರಾಮ. ಬಾಂಗ್ಲಾದಲ್ಲಿ ಪ್ರಾರಂಭವಾಗಿದ್ದ ಹತ್ಯಾಕಾಂಡ, ಮತೀಯ ಹಿಂಸೆ, ಪ್ರತ್ಯೇಕತೆಗಳ ವಿರುದ್ಧ ಭಾರತ ಗೆಲವನ್ನು ಮುನ್ನೆಡೆಸಿತು. ಇಲ್ಲಿಯೂ ನಮ್ಮ ವಿಜಯ ಅಧಿಕಾರಕ್ಕಾಗಿರಲಿಲ್ಲ, ಬೇರೆಯವರ ನೋವಿಗೆ ಪ್ರತಿಸ್ಪಂದಿಸುವ ಉನ್ನತ ಮೌಲ್ಯಕ್ಕಾಗಿ ನಡೆಸಿದ ಸೆಣೆಸಾಟವಾಗಿತ್ತದು.  
ಇಷ್ಟೆಲ್ಲ ಆದರೂ... ಹೊಸದಾಗಿ ಉದಯಿಸಿದ ಆ ದೇಶ ಕ್ರಮೇಣ ಇಸ್ಲಾಂ ತೀವ್ರವಾದಕ್ಕೆ ರತ್ನಗಂಬಳಿ ಹಾಸಿದ್ದು ಎಂಥ ದುರದೃಷ್ಟಕರ! 80ರ ದಶಕದಲ್ಲಂತೂ ಈ ಮತೀಯವಾದ ಉತ್ತುಂಗವನ್ನೇ ತಲುಪಿತು. ಆ ದೇಶದ ಹಿಂದುಗಳ ಪ್ರಾಣ ಮತ್ತು ಆಸ್ತಿಗಳ ಮೇಲೆ ಪ್ರಹಾರಗೈಯುವುದಕ್ಕೆ ಜಿಹಾದಿಗಳು ಒಂದಿನಿತೂ ಹಿಂದೆಮುಂದೆ ನೋಡಲಿಲ್ಲ. ಹಿಂದುಗಳಿಗೆ ಹೀಗೆ ಹತ್ಯೆ- ಹಿಂಸೆಗಳಿಗೆ ಒಳಗಾಗುವುದು ಹೊಸ ಅನುಭವವೇನೂ ಅಲ್ಲ ಬಿಡಿ. 1922-23ರಲ್ಲಿ ಕೇರಳದಲ್ಲಿ ನಡೆದ ಮಾಪಿಳ್ಳೆ ದಂಗೆ, ಖಲೀಫತ್ ಚಳವಳಿ ಕುಸಿಯುತ್ತಲೇ ಮುಸ್ಲಿಂಲೀಗ್ ಹಾಗೂ ಅದರ ಸಮಾನ ಮನಸ್ಕ ಮತೀಯವಾದಿಗಳು ಸೇರಿ ಪಂಜಾಬ್, ಸಿಂಧ್ ಮತ್ತು ಬಂಗಾಳದ ಹಿಂದುಗಳ ಮೇಲೆ ನಡೆಸಿದ ಹಿಂಸಾಕಾಂಡ ಹೀಗೆ ಅವಿಭಜಿತ ಭಾರತದಲ್ಲಿ ಹಲವು ಉದಾಹರಣೆಗಳಿವೆ.
ದುರಂತವೆಂದರೆ ಬಾಂಗ್ಲಾದೇಶದಲ್ಲಿ ಹಿಂದುಗಳ ಆಸ್ತಿ- ಜೀವನ ಯಾವುದಕ್ಕೂ ಸುರಕ್ಷತೆ ಇಲ್ಲ. ಕೆಲವೊಮ್ಮೆ ಹಿಂದುಗಳ ವಿರುದ್ಧದ ಅನಾಚಾರವನ್ನು ಅಲ್ಲಿನ ಸರ್ಕಾರವೇ ಪ್ರಾಯೋಜಿಸಿದೆ. ಧರ್ಮದ ಹೆಸರಿನಲ್ಲಿ ಹಿಂದು ಹೆಂಗಸರ ಅತ್ಯಾಚಾರ, ಮಕ್ಕಳ ಮಾರಣಹೋಮ ತಡೆಯಿಲ್ಲದೇ ಸಾಗಿ ಬಂದಿದೆ. ಪಾಕಿಸ್ತಾನದಲ್ಲಿ ಹಿಂದು ಜನಸಂಖ್ಯೆ ಕುಗ್ಗಿದೆ ಎನ್ನುತ್ತೇವಲ್ಲ, ಬಾಂಗ್ಲಾದೇಶದ ಕತೆಯೂ ಭಿನ್ನವಾಗಿಯೇನೂ ಇಲ್ಲ. ಆಗಾಗ ಹಿಂದು ದೇವಾಲಯಗಳ ಧ್ವಂಸ, ವಿಗ್ರಹಗಳ ಭಗ್ನತೆ ಆಗುತ್ತಲೇ ಇರುತ್ತದೆ. ಇವೆಲ್ಲದರಿಂದ ತಪ್ಪಿಸಿಕೊಳ್ಳುವುದಕ್ಕೆ ಅಲ್ಲಿನ ಹಿಂದುಗಳಿಗೆ ಇರುವ ಏಕಮೇವ ಆಯ್ಕೆ ಎಂದರೆ ಇಸ್ಲಾಮ್‌ಗೆ ಮತಾಂತರವಾಗುವುದು.
'ಅದು ಬಾಂಗ್ಲಾದೇಶದ ಆಂತರಿಕ ವಿಷಯ. ನಾವೇನು ಮಾಡೋಕಾಗುತ್ತೆ' ಅಂತ ಭಾರತದ ಬೌದ್ಧಿಕ ವರ್ಗ ನಿಟ್ಟುಸಿರಿಟ್ಟುಬಿಡುತ್ತದೆ. ಹಿಂದುಪರ ಎಂದು ತೋರಿಸಿಕೊಳ್ಳುವುದಕ್ಕೇ ಇಲ್ಲಿ ಇನ್ನಿಲ್ಲದ ಅಳುಕು. ವಾಸ್ತವದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಭಾರತಕ್ಕೆ ಇದ್ದೇ ಇದೆ. ಏಕೆಂದರೆ ಅಲ್ಲಿನ ಎಲ್ಲ ಕರ್ಮಕಾಂಡಗಳೂ ನಮ್ಮ ದೇಶದ ಮೇಲೆ ಕರಿಛಾಯೆ ಬೀರುವಂಥವೇ ಆಗಿವೆ.
ನೆರೆಯ ಬಾಂಗ್ಲಾದಲ್ಲಿ ಹಿಂದುಗಳ ಯಾತನೆಯನ್ನು ಸಾರುವ ಹಲವು ಪುಸ್ತಕಗಳು ಬಂದಿವೆ. ಎಸ್. ಕೆ. ಭಟ್ಟಾಚಾರ್ಯ ಬರೆದಿರುವ 'ಜಿನೊಸೈಡ್ ಇನ್ ಈಸ್ಟ್ ಪಾಕಿಸ್ತಾನ್: ಅ ಹಾರರ್ ಸ್ಟೋರಿ', ನಿವೃತ್ತ ಐಪಿಎಸ್ ಅಧಿಕಾರಿ ಬಲ್ಜೀತ್ ರಾಯ್ ಬರೆದಿರುವ 'ಡೆಮಾಗ್ರಫಿಕ್ ಅಗ್ರೆಷನ್ ಅಗೆನಸ್ಟ್ ಇಂಡಿಯಾ' (1993), ಆರ್‌ಎನ್‌ಪಿ ಸಿಂಗ್ ಅವರು ಬರೆದಿರುವ 'ಬಾಂಗ್ಲಾದೇಶ್ ಡಿಕೋಡೆಡ್‌' (2006)- ಇವೆಲ್ಲ ಬಾಂಗ್ಲಾದೇಶದ ರಾಜಕೀಯ, ಮಿಲಿಟರಿ ಹಾಗೂ ಧಾರ್ಮಿಕ ವ್ಯವಸ್ಥೆ ಮೇಲೆ ಹೆಚ್ಚುತ್ತಿರುವ ಜಿಹಾದಿ ಉಗ್ರ ಹಿಡಿತವನ್ನು ಚಿತ್ರಿಸಿವೆ. ಬಾಂಗ್ಲಾದೇಶದ 2001ರ ಜನಗಣತಿಯಿಂದ ಇಲ್ಲಿಯವರೆಗೆ 'ಕಾಣದೇ ಉಳಿದಿರುವ' 40 ಲಕ್ಷಕ್ಕೂ ಹೆಚ್ಚು ಹಿಂದುಗಳ ಬಗ್ಗೆ 2008ರಲ್ಲಿ ಡಾ. ಸಚಿ ಜಿ. ದಸ್ತಿದಾರ್ ಹೊರತಂದ ಪುಸ್ತಕ 'ದ ಎಂಪೈರ್ಸ್ ಲಾಸ್ಟ್ ಕ್ಯಾಸ್ವಲ್ಟಿ: ಇಂಡಿಯಾ ಸಬ್‌ಕಾಂಟಿನೆಂಟ್ಸ್ ವ್ಯಾನಿಶಿಂಗ್ ಹಿಂದೂಸ್ ಆ್ಯಂಡ್ ಅದರ್ ಮೈನಾರಿಟೀಸ್‌'. ಡಾ. ರಿಚರ್ಡ್ ಎಲ್. ಬೆನ್‌ಕಿನ್ ಅವರ 'ಅ ಕ್ವಯಟ್ ಕೇಸ್ ಆಫ್ ಎಥ್ನಿಕ್ ಕ್ಲಿನ್ಸಿಂಗ್: ದ ಮರ್ಡರ್ ಆಫ್ ಬಾಂಗ್ಲಾದೇಶ್ ಹಿಂದೂಸ್‌' (2012) ಸಹ ಪ್ರಮುಖವಾದದ್ದು.
ದುರಂತವೆಂದರೆ, ಭಾರತದ ಬೌದ್ಧಿಕ ವರ್ಗ ಇಂಥದೊಂದು ಮಾನವ ಹಕ್ಕು ಕಗ್ಗೊಲೆ ಬಗ್ಗೆ ಚರ್ಚೆಯನ್ನೇ ಹುಟ್ಟುಹಾಕದೆ ನೋಡಿಯೂ ನೋಡದಂತೆ ಕುಳಿತಿದೆ. ತಮ್ಮನ್ನು 'ಸೆಕ್ಯುಲರ್‌', 'ಪ್ರಜಾಪ್ರಭುತ್ವವಾದಿ' ಎಂದು ಕರೆದುಕೊಂಡು ಪ್ಯಾಲಸ್ತೀನ್ ಮತ್ತು ಸಿರಿಯಾ ಬಿಕ್ಕಟ್ಟುಗಳ ಬಗ್ಗೆ ಆಗಾಗ ಬೊಂಬ್ಡಾ ಹೊಡೆದುಕೊಂಡಿರುವ ವರ್ಗವು ತನ್ನದೇ ನೆರಮನೆಯ ಭಯಾನಕ ಹತ್ಯಾಕಾಂಡದ ಬಗೆಗೂ ಮಾತನಾಡುವ, ಚರ್ಚಿಸುವ ಛಾತಿ ತೋರಲಿ.

- ಪ್ರೊ. ರಾಕೇಶ್ ಸಿನ್ಹಾ
ಇಂಡಿಯಾ ಪಾಲಿಸಿ ಫೌಂಡೇಶನ್‌ನ ನಿರ್ದೇಶಕ

==========

1971. ಇಪತ್ಮೂರು ವರ್ಷದ ಅಬ್ದುಲ್ ಖಾದರ್ ಮುಲ್ಲಾ ಮತ್ತು ಆತನ ಅಲ್ ಬದರ್ ಎಂಬ ಗುಂಪಿನ ಗೂಂಡಾಗಳು ಎರಡು ವರ್ಷದ ಮಗುವೊಂದನ್ನು ನೆಲಕ್ಕೆ ಅಪ್ಪಳಿಸಿ ಕೊಂದುಹಾಕಿದರು, ಆ ಮಗುವಿನ ಗರ್ಭಿಣಿ ತಾಯಿ ಮತ್ತು ಇಬ್ಬರ ಸಹೋದರಿಯರ ಕುತ್ತಿಗೆ ಸೀಳಿ ಕೊಂದದ್ದೂ ಅಲ್ಲದೆ, ಇನ್ನೂ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿದರು. ಅದರಲ್ಲಿ ಒಬ್ಬಾಕೆ ತೀವ್ರ ರಕ್ತಸ್ರಾವದಿಂದ ಪ್ರಾಣಬಿಟ್ಟಳು.
ಈ ಹಿಂಸೆಗೆ ಕಾರಣವೇನೆಂದುಕೊಂಡಿರಿ? ಆ ಮಗುವಿನ ತಂದೆ, ಹಝರತ್ ಅಲಿ ಅಸ್ಗರ್ ಎಂಬ ಸಾಮಾನ್ಯ ದರ್ಜಿ, ಆವಾಮಿ ಲೀಗ್ ಮತ್ತು ಶೇಕ್ ಮಜಿಬುರ್ ರೆಹಮಾನ್‌ರ ಬೆಂಬಲಿಗನಾಗಿದ್ದ ಎನ್ನುವ ಕಾರಣಕ್ಕೆ!
42 ವರ್ಷಗಳ ನಂತರ ಆ ಕುಟುಂಬವನ್ನು ನಾಶ ಮಾಡಿದ ಪಾತಕಿಗೆ ಸರಿಯಾದ ಶಿಕ್ಷೆಯಾಗಿದೆ. ಇದೇ ಡಿಸೆಂಬರ್ 12ರಂದು ರಾತ್ರಿ 10.31ಕ್ಕೆ 65 ವರ್ಷದ ಅಬ್ದುಲ್ ಕಾದರ್ ಮುಲ್ಲಾನನ್ನು ನೇಣಿಗೇರಿಸಲಾಗಿದೆ. ಈತ ಆ ಹತ್ಯಾಕಾಂಡದ ವೇಳೆ ಜಮಾತೆ ಇಸ್ಲಾಮಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿದ್ದ. ಬಾಂಗ್ಲಾದೇಶವನ್ನು ಆಕ್ರಮಿಸಿದ್ದ ಪಾಕಿಸ್ತಾನಿ ಸೇನೆಯ ಸಹಾಯಕ ಸೇನೆಯಾಗಿದ್ದ ಕುಖ್ಯಾತ ಅಲ್-ಬದರ್‌ನ ಸಂಘಟಕನಾಗಿದ್ದ. ವಿಮೋಚನಾ ಯುದ್ಧದ ವೇಳೆ ನಡೆಸಿದ ಕ್ರೌರ್ಯಕ್ಕಾಗಿ ಈತನಿಗೆ 'ಮೀರ್‌ಪುರರ್ ಕೋಶಾಯ್‌' (ಮೀರ್‌ಪುರದ ಕಟುಕ) ಎಂಬ ಅಡ್ಡ ಹೆಸರು ಬಂದಿತ್ತು!
ಯುದ್ಧಾಪರಾಧಕ್ಕಾಗಿ ಬಾಂಗ್ಲಾದೇಶದಲ್ಲಿ ನೇಣುಗಂಬವೇರಿದ ಮೊದಲನೆಯ ವ್ಯಕ್ತಿ ಮುಲ್ಲಾ. ಈತನ ವಿರುದ್ಧ ಬಾಂಗ್ಲಾದೇಶದ ಯುವಜನತೆ ಎಷ್ಟು ರೋಸಿಹೋಗಿದ್ದರೆನ್ನುವುದು, ಶಾಭಾಗ್ ಪ್ರತಿಭಟನೆಯಲ್ಲೇ ಸ್ಪಷ್ಟವಾಗಿ ಗೋಚರವಾಗಿತ್ತು. ನ್ಯಾಯಾಲಯ ಮುಲ್ಲಾಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗ ಯುವಜನತೆ ಈತನಿಗೆ ಮರಣದಂಡನೆ ವಿಧಿಸಬೇಕೆಂದು ಶಾಭಾಗ್ ಚೌಕದಲ್ಲಿ ನಡೆಸಿದ ಐತಿಹಾಸಿಕ ಹೋರಾಟವೇ ಶಾಭಾಗ್ ಪ್ರತಿಭಟನೆ.
ಮೇ 28, 2012ರಂದು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ(ಐಸಿಟಿ) ಮುಲ್ಲಾನ ವಿರುದ್ಧ ಸಲ್ಲಿಕೆಯಾದ ಆರು ಆರೋಪಗಳನ್ನು ಪರಿಶೀಲಿಸಿ ತೀರ್ಪಿತ್ತಿತ್ತು: ಮಿರ್‌ಪುರ್ ಬಾಂಗ್ಲಾ ಕಾಲೇಜಿನ ವಿದ್ಯಾರ್ಥಿ ಪಲ್ಲಬ್‌ನ ಕೊಲೆ; ಕವಿಯತ್ರಿ ಮೆಹರುನ್ನೀಸಾ, ಆಕೆಯ ತಾಯಿ ಮತ್ತು ಇಬ್ಬರು ಸಹೋದರರ ಕೊಲೆ; ಪತ್ರಕರ್ತ ಖಂಡೇಕರ್ ಅಬು ತಲೇಬ್‌ನ ಕೊಲೆ; ಕೆರಾನಿ ಗಂಜ್‌ನ ಘತಾರ್‌ಚಾರ್‌ನಲ್ಲಿನ ಹತ್ಯಾಕಾಂಡ; ಮೀರ್‌ಪುರ್‌ನ ಅಲುಬ್ದಿ ಗ್ರಾಮದಲ್ಲಿ 344 ಜನರ ಕೊಲೆ ಮತ್ತು ಹಝರತ್ ಅಲಿ ಅಸ್ಗರ್, ಆತನ ಗರ್ಭಿಣಿ ಪತ್ನಿ, ಮೂವರು ಹೆಣ್ಣು ಮಕ್ಕಳು ಮತ್ತು 2 ವರ್ಷದ ಮಗನ ಕೊಲೆ.
ಆದರೆ ಈ 6 ಆರೋಪಗಳಲ್ಲಿ 5ರಲ್ಲಿ ಮಾತ್ರ ಮುಲ್ಲಾ ತಪ್ಪಿತಸ್ಥ, ಘತಾರ್‌ಚಾರ್‌ನ ಹತ್ಯಾಕಾಂಡದಲ್ಲಿ ಆತನ ಪಾತ್ರವಿಲ್ಲ ಎಂದು ತೀರ್ಪಿತ್ತ ಐಸಿಟಿ, ಮುಲ್ಲಾನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.  ಆದರೆ ಈ ಎಲ್ಲಾ ಹತ್ಯೆಗಳಲ್ಲಿಯೂ ಮುಲ್ಲಾನ ಪಾತ್ರವಿದೆ ಎಂದು ತೀರ್ಪಿತ್ತ ಸುಪ್ರೀಂಕೋರ್ಟ್ ಹಝರತ್ ಲಸ್ಕರ್ ಮತ್ತು ಆತನ ಕುಟುಂಬದ ಕೊಲೆಗಾಗಿ ಮುಲ್ಲಾನಿಗೆ ಮರಣದಂಡನೆ ವಿಧಿಸಿತ್ತು.  ಇದೇ ಸಂದರ್ಭದಲ್ಲಿ ಅನೇಕರು ಮುಲ್ಲಾನ ಸಾವಿಗಾಗಿ ಮರುಗುತ್ತಿದ್ದಾರೆ. ಕಾನೂನು ಪಂಡಿತರು, ಈ ತೀರ್ಪು ಮತ್ತು ಮರಣದಂಡನೆಯ ಕುರಿತು ಚರ್ಚೆ ಶುರುಮಾಡಿದ್ದಾರೆ. ಶೇಖ್ ಹಸೀನಾ ಮತ್ತು ಆವಾಮಿ ಲೀಗ್‌ನ ಮೇಲೆ ವೃಥಾ ಆರೋಪ ಹೊರಿಸಲಾಗುತ್ತಿದೆ. ಆದರೆ ಹಸೀನಾರ ಸರ್ಕಾರ ನ್ಯಾಯಾಲಯಗಳ ಯಾವುದೇ ನಡೆಯಲ್ಲೂ ಮೂಗು ತೂರಿಸಲಿಲ್ಲ, ತನಿಖೆ ಪಾರದರ್ಶಕವಾಗಿಯೇ ನಡೆಯಿತು ಎನ್ನುವುದು ಸತ್ಯ.
ಈ ಕುರಿತು ಡೈಲಿ ಸ್ಟಾರ್ ಪತ್ರಿಕೆ ಡಿಸೆಂಬರ್ 13ರಂದು ಪ್ರಕಟಿಸಿದ ಸೈಯದ್ ಬದ್ರೂಲ್ ಎಹಸಾನ್ ಎನ್ನುವವರ ಲೇಖನದಲ್ಲಿ ಮಾನವೀಯತೆಯ ಮೇಲೆ ಮುಲ್ಲಾ ನಡೆಸಿದ ದೌರ್ಜನ್ಯ, ಆತ ನೇಣುಗಂಬವೇರಿದ್ದಕ್ಕೆ ಬಾಂಗ್ಲಾದೇಶಿಯರಿಗಾದ ಸಂತೋಷವನ್ನು ಮನಮುಟ್ಟುವಂತೆ ಬರೆಯಲಾಗಿದೆ. ಎಹಸಾನ್ ಹೇಳುತ್ತಾರೆ: "ನಲವತ್ಮೂರು ವರ್ಷಗಳ ಸ್ವಾತಂತ್ರ್ಯವನ್ನು ನಾವು ಅನುಭವಿಸಿದ್ದೇವೆ. ಈ ಸಮಯದಲ್ಲೇ ನೀಚ ಯುದ್ಧಾಪರಾಧಿಯೊಬ್ಬನ ಕಥೆ ಮುಗಿದಿದೆ. ಒಂದು ರಾಷ್ಟ್ರವಾಗಿ ನಾವು ನಮ್ಮ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವುದಕ್ಕೆ ಇನ್ನೂ ಮಾಡಬೇಕಿರುವ ಕೆಲಸ ಬಹಳಷ್ಟಿವೆ. ನಮ್ಮ ರಾಷ್ಟ್ರದ ಅತ್ಯುತ್ತಮ ಬುದ್ಧಿಜೀವಿಗಳನ್ನು, ವೃತ್ತಿಪರರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು, ಎಲ್ಲಾ ಸ್ತರದ ಜನರನ್ನು ಕೊಲೈಗೈದ ಪಾತಕಿಗಳು 42 ವರ್ಷಗಳಿಂದಲೂ ಇದೇ ನೆಲದಲ್ಲಿ, ನಮ್ಮ ಕಣ್ಣೆದುರಿನಲ್ಲೇ ಬಿಂಕದಿಂದ ಅಡ್ಡಾಡಿಕೊಂಡಿದ್ದರು. ಈಗ ಮುಲ್ಲಾ ಸತ್ತಿದ್ದಾನೆ, ಆತನಂತೆಯೇ ನಮ್ಮ ನೆಲದಲ್ಲಿ ರಕ್ತಹರಿಸಿದವರೆಲ್ಲರೂ ನೇಣು ಗಂಬದತ್ತ ಹೆಜ್ಜೆ ಹಾಕಲಿದ್ದಾರೆ. ನಾವು 16 ಕೋಟಿ ಬಾಂಗ್ಲಾದೇಶಿಯರು, ಅಂದು ನಮಗಾಗಿ ಮಡಿದವರನ್ನು ನೆನಪು ಮಾಡಿಕೊಳ್ಳೋಣ. ಅವರ ಅತ್ಯುನ್ನತ ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ ಎಂದು ಅವರ ಆತ್ಮಗಳಿಗೆ ಸಂದೇಶ ಕಳುಹಿಸೋಣ. ಶ್ರೇಯಸ್ಸು ಸಲ್ಲಬೇಕಾದದ್ದು ಈ ರಾಷ್ಟ್ರಕ್ಕೆ. ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದರೂ ಬಾಂಗ್ಲಾದೇಶ ತನ್ನ ಇತಿಹಾಸವನ್ನು ಮರೆತಿಲ್ಲ. ನ್ಯಾಯವನ್ನು ಅದು ಕಡೆಗಣಿಸಲಿಲ್ಲ ಎನ್ನುವುದನ್ನು ನಾವು ಪ್ರಪಂಚಕ್ಕೆ ಸಾರಿದ್ದೇವೆ"

- ಸಲೀಂ ಹಕ್
ಎಎನ್‌ಐ ಸುದ್ದಿಸಂಸ್ಥೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.