ಅಂಕಣಗಳು

ಜಾತೀಯತೆಯನ್ನು ಓಡಿಸಲು ಮಾರ್ಗವಿಲ್ಲವೋ, ಮನಸ್ಸಿಲ್ಲವೋ?

ಜಾತೀಯತೆಯನ್ನು ಓಡಿಸಲು ಮಾರ್ಗವಿಲ್ಲವೋ, ಮನಸ್ಸಿಲ್ಲವೋ?
Published On :

ಹಿಂದು ಧರ್ಮವನ್ನು ಹೀಗಳೆಯಲು ಎಲ್ಲರೂ ಬಳಸಿಕೊಳ್ಳುವ ಏಕಮೇವ ಟೀಕಾಸ್ತ್ರ ಜಾತೀಯತೆ. ಪ್ರಗತಿಪರರು, ಬುದ್ಧಿಜೀವಿಗಳು, ಮಾಧ್ಯಮದವರು, ಅಷ್ಟೇ ಏಕೆ ಪೇಜಾವರ ಶ್ರೀಗಳಾದಿಯಾಗಿ ಎಲ್ಲರೂ ಜಾತೀಯತೆಯನ್ನು ಒಂದು ಅನಿಷ್ಟ ಪದ್ಧತಿಯೆಂದೇ ವಾದಿಸುತ್ತಾರೆ. ಕೆಲವರಂತೂ ಇನ್ನೂ ಮುಂದೆ ಹೋಗಿ ಇಂಥ ಕೆಟ್ಟ ವ್ಯವಸ್ಥೆ ಹೊಂದಿರುವ ಹಿಂದು ಧರ್ಮವೇ ನಮಗೆ ಬೇಡ ಎನ್ನುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಟೈಂಪಾಸ್ ಚರ್ಚೆಗಳಿಗೊಮ್ಮೆ ಕಿವಿಗೊಟ್ಟು ನೋಡಿ, ಅಲ್ಲಿ ಕೂಡ ಜನರು "ನೂರಾರು ಜಾತಿಗಳಿಂದ ಕೂಡಿರೋ ಈ ದೇಶ ಉದ್ಧಾರ ಆಗಲ್ಲ. ಈ ದೇಶ ಉದ್ಧಾರ ಆಗಬೇಕಾದ್ರೆ ಜಾತಿಪದ್ದತಿ ತೊಲಗಬೇಕು" ಎಂದೇ ಮಾತಾಡುತ್ತಿರುತ್ತಾರೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅನಿಷ್ಟ ಅಂತ ಅನ್ನಿಸಿರೋ ಈ ಜಾತೀಯತೆ ಪಳೆಯುಳಿಕೆಯೂ ಇಲ್ಲದಂತೆ ಎಂದೋ ನಾಮಾವಶೇಷವಾಗಬೇಕಿತ್ತು. ಹಾಗಾಗದೆ, ಆಲದ ಮರದಂತೆ ಹೊಸ ಹೊಸ ಬೇರುಗಳನ್ನು ಬಿಡುತ್ತಾ ಹೆಚ್ಚೆಚ್ಚು ಬಿಳಿಲುಗಳನ್ನು ಬೆಳೆಸುತ್ತಾ ವಿರಾಟ ರೂಪ ತೋರುತ್ತಿದೆ.
ಹೀಗೇಕೆಂಬ ಪ್ರಶ್ನೆಗೆ ಉತ್ತರ ತುಂಬಾ ಸರಳ. ಜಾತಿವ್ಯವಸ್ಥೆಯಿಂದ ದೇಶದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಥರದ ಲಾಭವಾಗುತ್ತಿರುವುದರಿಂದ ಆಂತರ್ಯದಲ್ಲಿ ಇದು ಎಲ್ಲರಿಗೂ ಇಷ್ಟವಾದ ವ್ಯವಸ್ಥೆಯೇ. ತಾವು ಸಂಕುಚಿತ ಮನೋಭಾವ ಹೊಂದಿಲ್ಲ ಎಂದು ತೋರಿಸಿಕೊಳ್ಳಲು ಮೇಲು ನೋಟಕ್ಕೆ ಇದನ್ನು ಅನಿಷ್ಟ ಪದ್ಧತಿ ಎಂದು ಕೆಲವರು ಮೂದಲಿಸುತ್ತಾರೆ. ಇದಕ್ಕೆ ಸಾಕ್ಷ್ಯ ಬೇಕೆಂದರೆ ಭಾರತ ಜಾತ್ಯತೀತ ರಾಷ್ಟ್ರವಾಗುವ ಮುನ್ನ ಎಷ್ಟು ಜಾತಿಗಳಿದ್ದವು, ಎಷ್ಟು ಮಠಗಳಿದ್ದವು, ಎಷ್ಟು ಧರ್ಮಗುರುಗಳಿದ್ದರು, ಜಾತ್ಯತೀತವಾದ ಮೇಲೆ ಎಷ್ಟು ಜಾತಿ, ಮಠ, ಧರ್ಮಗುರುಗಳು ಹುಟ್ಟಿಕೊಂಡಿದ್ದಾರೆ ಲೆಕ್ಕ ಹಾಕಿ ನೋಡಿ!
ಜಾತೀಯತೆಯನ್ನು ಒಂದು ಸಾಮಾಜಿಕ ಪಿಡುಗೆಂದು ಗುಡುಗುವವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅದನ್ನು ಪಾಲನೆ ಪೋಷಣೆ ಮಾಡುತ್ತಲೇ ಇದ್ದಾರೆ. ಸರ್ಕಾರ (ಯಾವುದೇ ಪಕ್ಷದ್ದಾದರೂ ಸರಿ)ದ ನೀತಿ ನಿಯಮಗಳನ್ನೇ ತೆಗೆದುಕೊಳ್ಳಿ, ಜಾತಿ ಆಧಾರಿತ ಮೀಸಲು ವ್ಯವಸ್ಥೆಯನ್ನು ಅಪ್ಪಿಕೊಂಡು ಜಾತ್ಯತೀತರಾಗಲು ಹೊರಟಿರುವುದೇ ಒಂದು ವಿಪರ್ಯಾಸ. ಬಡತನ, ದೌರ್ಬಲ್ಯ ಆಯಾ ವ್ಯಕ್ತಿಯ ಆಯಾ ಕುಟುಂಬದ ಸಮಸ್ಯೆಯೇ ಹೊರತು ಒಟ್ಟಾರೆ ಒಂದು ಸಮುದಾಯದ ಸಮಸ್ಯೆಯಾಗಲು ಸಾಧ್ಯವಿಲ್ಲ. ಒಂದು ಸಮುದಾಯದಲ್ಲಿ ಹುಟ್ಟಿದವರೆಲ್ಲಾ ಬುದ್ಧಿವಂತರು, ಶ್ರೀಮಂತರು ಆಗಿರಲು ಸಾಧ್ಯವಿಲ್ಲ. ಅದೇ ರೀತಿ ಇನ್ನೊಂದು ಸಮುದಾಯದಲ್ಲಿ ಹುಟ್ಟಿದವರೆಲ್ಲ ಬಡವರು ದಡ್ಡರಾಗಿರಲೂ ಸಾಧ್ಯವಿಲ್ಲ. ಹೀಗಿರುವಾಗ ಸಾಮಾಜಿಕ ನ್ಯಾಯದಡಿಯಲ್ಲಿ ಸಮಪಾಲು-ಸಮಬಾಳು ಎನ್ನುವ ಘೋಷ ವಾಕ್ಯದೊಡನೆ ಸಾಮಾಜಿಕ ಸಮತೋಲನ ಸಾಧಿಸಲು ಹೊರಡುವ ಸರ್ಕಾರ ಫಲಾನುಭವಿಗಳನ್ನು ಗುರುತಿಸಲು ಆಯೋಗಗಳನ್ನು ಸಮಿತಿಗಳನ್ನು ರಚಿಸುತ್ತದೆ. ಆದರೆ ಅವುಗಳಿಗೆ ಮಾನದಂಡ ಜಾತಿಯೇ ಆಗಿರುತ್ತದೆ. ಹಾಗಾಗಿ ಆ ಆಯೋಗಗಳು, ಸಮಿತಿಗಳು ಸಮಾಜದಲ್ಲಿನ ನಂಬಿಕೆಗಳು ಶ್ರದ್ಧೆ ಆಚಾರ ವಿಚಾರಗಳನ್ನೆಲ್ಲಾ ಕೆದಕುತ್ತಾ ಜಾತಿ ಉಪಜಾತಿ ಪಂಗಡ ಒಳಪಂಗಡ ಹೀಗೆ ವಿಭಾಗಿಸುತ್ತಾ ಸಾಗುತ್ತವೆ. ತಮ್ಮ ಕುಲ ಕಸುಬು ಆಚಾರ, ವಿಚಾರ ಸಂಪ್ರದಾಯಗಳು ಎಲ್ಲವನ್ನು ಮರೆತು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಭೇದಭಾವವಿಲ್ಲದೆ ಸಮೃದ್ಧವಾಗಿ ಬದುಕುತ್ತಿರುವವರಿಗೂ ಅವರವರ ಜಾತಿಗಳನ್ನು ಜ್ಞಾಪಿಸಿ ನೀನು ನಿನ್ನ ಜಾತಿಯನ್ನು ಪಟ್ಟಾಗಿ ಹಿಡಿದುಕೊಂಡರೆ ನಿನಗೆ ಸರ್ಕಾರದಿಂದ ಲಾಭವಿದೆ ಎಂಬ ಸಂದೇಶವನ್ನು ರವಾನಿಸುತ್ತಾರೆ. ಹಾಗಿರಬೇಕಾದರೆ 'ಬಿಟ್ಟಿ ಸಿಕ್ಕರೆ ಬಿಡೋರ್ಯಾರು?' ಎಂಬಂತೆ ಜಾತ್ಯತೀತರಾಗಲು ಯಾರು ಬಯಸುತ್ತಾರೆ?
ರಾಜಕಾರಣಿಗಳ ದೃಷ್ಟಿಯಲ್ಲಿ ಒಬ್ಬ ಪ್ರಜೆ ಎಂದರೆ ಒಂದು ಮತ (ವೋಟು).  ಹೀಗಿರುವಾಗ ಚುನಾವಣಾ ರಾಜಕಾರಣದಲ್ಲಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವರಿಗೆ ಬೇಕಾಗುವುದು ಗುಂಪು, ಸಮೂಹ ಸಂಘಟನೆಗಳು. ಒಂದು ಗುಂಪಿನ ನಾಯಕನನ್ನು ಓಲೈಸಿಕೊಂಡರೆ ಸಾಕು ಅವರಿಗೆ ಸಿಗಬಹುದಾದ ಮತಗಳ ಲೆಕ್ಕಾಚಾರ ಹಾಕಲು ಸುಲಭವಾಗುತ್ತದೆ. ಹಾಗಾಗಿ ಅವರು ಓಲೈಕೆಗಾಗಿ ಸಾಮಾಜಿಕ ಸಂಘಟನೆ,  ಧಾರ್ಮಿಕ ಸಂಘಟನೆ, ಭಾಷಾ ಸಂಘಟನೆ ಕಾರ್ಮಿಕ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳ ಬೆನ್ನು ಹತ್ತುತ್ತಾರೆ. ರಾಜಕಾರಣದಲ್ಲಿ ತಮ್ಮ ಪ್ರಭಾವ ಬೆಳೆಸಿಕೊಳ್ಳಬಯಸುವವರು, ಇಂಥಾ ಸಂಘಟನೆಗಳನ್ನು ಹುಟ್ಟುಹಾಕಿ ನಾಯಕರೆನಿಸಿಕೊಳ್ಳುತ್ತಾರೆ. ಅದಕ್ಕೇ ನೋಡಿ, ಹೋರಾಟಗಾರರಲ್ಲಿ ಎಷ್ಟೊಂದು ಗುಂಪುಗಳಿವೆ.
ಕನ್ನಡದ ಹಿತ ಕಾಯುವುದೇ ಕನ್ನಡಪರ ಹೋರಾಟಗಾರರ ಮೂಲೋದ್ದೇಶವಾದರೆ, ರೈತರ ಹಿತಕಾಯುವುದೇ ರೈತಪರ ಹೋರಾಟಗಾರರ ಧ್ಯೇಯೋದ್ದೇಶವಾದರೆ ಅವರವರಲ್ಲೇ ಇಷ್ಟೊಂದು ಗುಂಪುಗಳೇಕೆ? ಭಾಷಾ ಸಮಸ್ಯೆ, ರೈತ ಸಮಸ್ಯೆ ಎದುರಾದಾಗ ಈ ಎಲ್ಲಾ ಹೋರಾಟಗಾರರೂ ಒಂದೇ ವೇದಿಕೆಯಡಿ ಬಂದು ಹೋರಾಟ ಮಾಡುವುದಿಲ್ಲವೇಕೆ? ಕಾರಣ ಇಷ್ಟೇ, ಒಂದೊಂದು ಗುಂಪುಗಳು ಒಂದೊಂದು ರಾಜಕೀಯ ಪಕ್ಷದಿಂದ ಪೋಷಿಸಲ್ಪಟ್ಟಿರುತ್ತವೆ. ಇದೇ ರೀತಿಯಲ್ಲಿ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ಹುಟ್ಟಿಕೊಂಡ ಧಾರ್ಮಿಕ ಸಂಘಟನೆಗಳ ಇನ್ನೊಂದು ರೂಪವೇ ಮಠಗಳು. ಅದರ ನಾಯಕರೇ ಮಠಾಧೀಶರು. ಅದಕ್ಕೇ ಅವರುಗಳು ಧರ್ಮಗುರುಗಳೆಂಬುದನ್ನು ಮರೆತು ಗುಂಪುಕಟ್ಟಿಕೊಳ್ಳುವುದು, ಪರಸ್ಪರ ಟೀಕೆಗಳನ್ನು ಮಾಡುವುದು.
ಇದಕ್ಕೆ ಇನ್ನೂ ಒಂದು ಕಾರಣವಿದೆ, ಅಲ್ಪಸಂಖ್ಯಾತರು ಎಂದು ಕರೆಸಿಕೊಳ್ಳುವುವರು ಧಾರ್ಮಿಕ ಶ್ರದ್ಧೆಯಿಂದ ಪ್ರಾರ್ಥನೆ ಮಾಡಲು ಸೇರುವುದನ್ನೂ ಸಹ ನಮ್ಮ ರಾಜಕಾರಣಿಗಳು ರಾಜಕೀಯ ದೃಷ್ಟಿಯಿಂದಲೇ ನೋಡಿ ಓಲೈಕೆ ರಾಜಕಾರಣಕ್ಕೆ ಮುಂದಾಗುತ್ತಾರೆ. ಹಜ್ ಯಾತ್ರೆಗೆ ಹಣ ಕೊಡುವುದು, ಅವರನ್ನು ಬೀಳ್ಕೊಡಲು ಮತ್ತು ಸ್ವಾಗತಿಸಲು ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ಹೋಗುವುದು, ಪವಿತ್ರ ದಿನಗಳಲ್ಲಿ ಪೈಪೋಟಿಯ ಮೇಲೆ ಇಫ್ತಾರ್ ಕೂಟಗಳನ್ನೇರ್ಪಡಿಸಿ ಟೋಪಿ ಹಾಕಿಕೊಂಡು ಫೋಟೋ ಪೋಸ್ ಕೊಡುವುದು, ಅವರ ಮುಖಂಡರು ಯಾವುದಾದರೂ ಒಂದು ವಿಷಯದ ವಿರುದ್ಧ ಕೂಗು ಹಾಕಿದರೆ ಇಡೀ ಸರ್ಕಾರವೇ ಬೆಚ್ಚಿಬಿದ್ದು ಪ್ರತಿಕ್ರಿಯಿಸುವುದು, ಯಾವ ವೇದಿಕೆ ಸಿಕ್ಕರೂ ಅಲ್ಪಸಂಖ್ಯಾತರ ಏಳಿಗೆಗೆ ಘೋಷಣೆಗಳನ್ನು ಮಾಡುವುದು ಇವುಗಳೆಲ್ಲಾ ಬಹುಸಂಖ್ಯಾತರ ಮೇಲೆ ಬೇರೊಂದು ರೀತಿಯ ಪರಿಣಮವನ್ನೇ ಬೀರಿದೆ. ನಾವೂ ಆ ರೀತಿ ಒಗ್ಗಟ್ಟು ಪ್ರದರ್ಶಿಸಿದರೆ ರಾಜಕಾರಣಿಗಳು ನಮ್ಮ ಮುಂದೆಯೂ ಮಂಡಿಯೂರಿ ಕೂಡುತ್ತಾರೆ ಎಂಬ ಆಲೋಚನೆಯನ್ನು ಹುಟ್ಟುಹಾಕಿದೆ. ಆದರೆ ವೈವಿಧ್ಯಮಯ ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಹೊಂದಿರುವ ಎಲ್ಲರನ್ನೂ ಒಂದೇ ಲಾಂಛನದಡಿಯಲ್ಲಿ ಸಂಘಟಿಸುವುದಾದರೂ ಹೇಗೆ? ಅದಕ್ಕೆ ಒಂದೊಂದೇ ಸಮುದಾಯದವರು ಜಾತಿಯ ಹೆಸರಿನಲ್ಲಿ ಸಂಘಟಿತರಾಗಿ ಮಠ ಮತ್ತು ಮಠಾಧೀಶರನ್ನು ಮಾಡಿಕೊಂಡು ಸರ್ಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಯಾವ ಯಾವ ಜಾತಿಯವರು ಯಾವ ಯಾವ ಪಕ್ಷಗಳಿಂದ ಲಾಭ ಹೊಂದುತ್ತಾರೋ ಆಯಾ ಜಾತಿಗಳು ಆಯಾ ರಾಜಕೀಯ ಪಕ್ಷಗಳಿಗೆ ಬೆಂಬಲವಾಗಿ ನಿಲ್ಲುತ್ತವೆ. ಹೀಗೆ ಚುನಾವಣಾ ರಾಜಕಾರಣದಲ್ಲಿ ಜಾತಿಗಳ ಸಮೀಕರಣ ಲೆಕ್ಕಾಚಾರ ಶುರುವಾಗುತ್ತದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಹೆಚ್ಚು ಜಾತಿಗಳು ಒಂದು ರಾಜಕೀಯ ಪಕ್ಷಕ್ಕೆ ಬೆಂಬಲವಾಗಿ ನಿಂತರೆ ಇತರೆ ಪಕ್ಷಗಳು ಆ ಜಾತಿಗಳ ಒಗ್ಗಟ್ಟನ್ನು ಒಡೆಯಲು ಒಳ ಮೀಸಲಾತಿ ಎಂಬ ಆಮಿಷ ತೋರಿಸಿ ಅವುಗಳನ್ನು ಉಪಜಾತಿ ಪಂಗಡ, ಒಳಪಂಗಡಗಳಾಗಿ  ಒಡೆದು ಎಲ್ಲದಕ್ಕೂ ಒಂದೊಂದು ಮಠಗಳು ಮಠಾಧೀಶರು ಉದ್ಭವವಾಗುವಂತೆ ಮಾಡುತ್ತಾರೆ.
ಇನ್ನು ಮಾಧ್ಯಮಗಳ ವಿಚಾರಕ್ಕೆ ಬಂದರೆ ಅವರ ನಡೆ ಹೇಗಿರುತ್ತದೆಂದರೆ ಯಾವುದು ದೇಶಕ್ಕೆ ಅನಿಷ್ಟ, ಯಾವುದನ್ನು ಜನರು ಮರೆಯಬೇಕು ಅಂತ ಇವರು ಬಯಸುತ್ತಾರೋ ಅದನ್ನು ಜನರಿಗೆ ಪದೇ ಪದೇ ಜ್ಞಾಪಿಸುವವರೇ ಇವರು. ಚುನಾವಣೆ ಬಂತೆಂದರೆ ಕ್ಷೇತ್ರವಾರು ಜಾತಿಗಳ ಸಮೀಕ್ಷೆ, ಅವುಗಳ ಸಮೀಕರಣ, ವಿವಿಧ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದಾಗ ಅವರು ಜಾತಿಯನ್ನು ಗಣನೆಗೆ ತೆಗೆದುಕೊಂಡಿರುತ್ತಾರೋ ಬಿಟ್ಟಿರುತ್ತಾರೋ ಮಾಧ್ಯಮದವರು ಮಾತ್ರ ಅದನ್ನು  ವಿಶ್ಲೇಷಿಸುವುದು ಜಾತಿ ಆಧಾರದ ಮೇಲೆಯೇ. ಒಂದು ಪಕ್ಷ ಅಧಿಕಾರಕ್ಕೆ ಬಂದು ಮಂತ್ರಿಮಂಡಲ ರಚನೆಯಾದಾಗಲಂತೂ ಯಾವ ಯಾವ ಜಾತಿಗೆ ಎಷ್ಟೆಷ್ಟು ಮಂತ್ರಿಸ್ಥಾನ ಸಿಕ್ಕಿದೆ ಯಾವ ಜಾತಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬುದನ್ನು ಒತ್ತಿ ಒತ್ತಿ ವರ್ಣರಂಜಿತವಾಗಿ ಹೇಳಿ ಆಯಾ ಜಾತಿಯವರಿಗೆ ಆದ ಲಾಭ-ನಷ್ಟಗಳನ್ನು ಬೆರಳು ಮಾಡಿ ತೋರಿಸುತ್ತಾ ಅವರು ಜಾತಿ ಹೆಸರಲ್ಲಿ ಮತ್ತಷ್ಟು ಸಂಘಟಿತರಾಗುವಂತೆ ಮಾಡುತ್ತಾರೆ ಮಾಧ್ಯಮದವರು. ಮಾಧ್ಯಮದವರ ರಾಜಕೀಯ ಸುದ್ದಿ ಸಮಾಚಾರಗಳಿಗೆ ರುಚಿ ಸಿಗುವುದೇ ಜಾತಿ ಲೆಕ್ಕಾಚಾರವೆಂಬ ಗರಂ ಮಸಾಲೆಯಿಂದ.
ಜಾತ್ಯತೀತ ರಾಷ್ಟ್ರದಲ್ಲಿ ಜಾತ್ಯತೀತರಿಗೆ ಜಾಗವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಅಣಕನುಡಿಯಾಗಿ ಕಂಡರೂ ವಾಸ್ತವದಲ್ಲಿ ನೂರಕ್ಕೆ ನೂರು ಸತ್ಯ. ಸರ್ಕಾರದ ಯಾವುದೇ ಅರ್ಜಿಗಳಲ್ಲೂ ಜಾತಿ ಎಂಬ ಕಾಲಂ ಇರುತ್ತದೆ. ಅದನ್ನು ಭರ್ತಿ ಮಾಡುವವರು ಆ ಕಾಲಂನಲ್ಲಿ ತಮ್ಮ ತಮ್ಮ ಜಾತಿಗಳನ್ನು ಹೆಸರಿಸುತ್ತಾರೆ. ಜಾತ್ಯತೀತರಿಗೆ ಅಂಥಾ ಒಂದು ಅವಕಾಶವೇ ಇರುವುದಿಲ್ಲ. ತಾವು ಜಾತೀಯತೆಯನ್ನು ಧಿಕ್ಕರಿಸುವವರು, ಜಾತಿಗಳಿಂದ ಹೊರತಾದವರು ಎಂದು ತೋರಿಸಿಕೊಳ್ಳಲು ಆ ಕಾಲಂನಲ್ಲಿ ಜಾತ್ಯತೀತ ಎಂದು ನಮೂದಿಸಲಿ ನೋಡೋಣ? ಅವರ ಅರ್ಜಿ ಪುರಸ್ಕೃತವಾಗುತ್ತದೋ ತಿರಸ್ಕೃತವಾಗುತ್ತದೋ ಗೊತ್ತಾಗುತ್ತದೆ.
ಈಗಂತೂ ಜಾತಿ ಆಧಾರಿತ ಜನಗಣನೆಗೆ ಆದೇಶ ಕೊಟ್ಟಿರುವ ಸರ್ಕಾರ ಯಾರನ್ನೂ ಜಾತ್ಯತೀತರನ್ನಾಗಿ ಬಿಡಬಾರದು ಎಂದು ನಿರ್ಧರಿಸಿದಂತಿದೆ. ನಿಜವಾಗಲೂ ಜಾತಿ ಹೆಸರಿನಲ್ಲಿ ಗುರುತಿಸಿಕೊಳ್ಳಬಯಸದವರನ್ನು ಕೂಡ ಒಂದೊಂದು ಜಾತಿಯ ಹೆಸರಿನಲ್ಲಿ ಬಲವಂತವಾಗಿ ಬಂಧಿಸಿಡುವ ಪ್ರಯತ್ನ ಇದಾಗಿದೆ. ತಮ್ಮ ತಮ್ಮ ಜಾತಿಗಳನ್ನು ಧಿಕ್ಕರಿಸುವ ಸಲುವಾಗಿ ಅಂತರ್ಜಾತಿ ವಿವಾಹಗಳನ್ನು ಮಾಡಿಕೊಂಡವರನ್ನು ಬಲವಂತವಾಗಿ ತಂತಮ್ಮ ಜಾತಿಯಡಿಯಲ್ಲೇ ಗುರುತಿಸಿಕೊಳ್ಳಬೇಕು, ಅವರ ಮಕ್ಕಳಿಗೂ ಯಾವುದಾದರೂ ಒಂದು ಜಾತಿಯ ಹಣೆಪಟ್ಟಿ ಕಟ್ಟಲೇಬೇಕಾದ ಅನಿವಾರ್ಯ ದುರವಸ್ಥೆಯನ್ನು ಇದು ತಂದೊಡ್ಡಿದೆ. ಆದರೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಜಾತ್ಯತೀತವಾದದ ಬಗ್ಗೆ ಪುಂಖಾನುಪುಂಖವಾಗಿ ಲೆಕ್ಚರ್ ಕೊಡುವ ಯಾವ ಬುದ್ಧಿಜೀವಿಗಳೂ ಇದರ ಬಗೆ ಚಕಾರವೆತ್ತುತ್ತಿಲ್ಲ. ಬಹುಶಃ ಜಾತೀಯತೆಯೆಂಬುದು ಜೀವಂತವಾಗಿರಲೇಬೇಕು ಅದರ ವಿರುದ್ಧ ಮಾತಾಡುವ ಮೂಲಕ ತಾವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುತ್ತಿರಬೇಕು ಎಂಬುದೇ ಇವರ ನಿಲುವು  ಆಗಿರಬೆಕು.
ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಯಲ್ಲಿ ಃಕಖಿಆ ಅನ್ನು ಪರಿಚಯಿಸಿದಂತೆ ಸರ್ಕಾರ ಕೂಡ ಸರ್ಕಾರಿ ಅರ್ಜಿಗಳಲ್ಲಿ, ಜಾತಿ ಆಧಾರಿತ ಜನಗಣತಿಯಲ್ಲಿ "ಜಾತ್ಯತೀತ" ಎಂಬ ಕಾಲಂ ಅನ್ನು ಸೇರಿಸಲಿ. ಈ ದೇಶದಲ್ಲಿ ಎಷ್ಟು ಮಂದಿ ಅಸಲೀ ಜಾತ್ಯತೀತರಿದ್ದಾರೆಂದಾದರೂ ತಿಳಿಯುತ್ತದೆ. ಈಗಾಗಲೇ ಸರ್ಕಾರಿ ಸವಲತ್ತುಗಳಿಂದ ಹೊರ ಉಳಿದವರೆಲ್ಲಾ ಅಲ್ಲಿ ಗುರುತಿಸಿಕೊಳ್ಳಬಯಸುತ್ತಾರೆ. ಅದೇ ಜಾತ್ಯತೀತರಿಗೆ ಯಾರಿಗೂ ಇಲ್ಲದಷ್ಟು ಮೀಸಲಾತಿ ಸವಲತ್ತುಗಳನ್ನು ಘೋಷಿಸಿ ನೋಡಲಿ, ಎಲ್ಲರೂ ತಮ್ಮ ಜಾತಿಯನ್ನು ಬಿಟ್ಟು ಜಾತ್ಯತೀತರೆಂದು  ಗುರುತಿಸಿಕೊಳ್ಳಲು ಮುಂದೆ ಬರುತ್ತಾರೆ. ಹೀಗೆ ಲಾಭ ಇದ್ದ ಕಡೆ ಜನ ವಾಲುತ್ತಾರೆ. ಇಂದಿನಂತೆ ಅಂದೂ ಸಹ ಜಾತೀಯತೆ ಲಾಭದಾಯಕವಾಗಿ ಕಂಡಿದ್ದರಿಂದಲೇ ಅದನ್ನು ಸಾವಿರಾರು ವರ್ಷಗಳ ಕಾಲ ಅನುಸರಿಸಿಕೊಂಡು  ಬಂದಿದ್ದಾರೆ. ಅದನ್ನು ಅಳಿಸಿ ಹಾಕುವುದು ಸರ್ಕಾರ ಮತ್ತು ಸಾರ್ವಜನಿಕರ ಇಚ್ಛಾಶಕ್ತಿ. ಕ್ರಿಯಾಶಕ್ತಿಯಿಂದಷ್ಟೇ ಸಾಧ್ಯವೇ ಹೊರತು ವೃಥಾ ನಮ್ಮ ಪೂರ್ವಜರನ್ನು, ಧರ್ಮವನ್ನು ಹೀಗಳೆಯುವುದರಿಂದಲ್ಲ.

- ಫಣಿರಾಮಚಂದ್ರ
ಚಲನಚಿತ್ರ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.