ಅಂಕಣಗಳು

ಯುಪಿಎ 'ಬಿಟ್ಟಿಮಾರ್ಗ'ವೇ ಆಪ್‌ನ ಆಯ್ಕೆ!

ಯುಪಿಎ 'ಬಿಟ್ಟಿಮಾರ್ಗ'ವೇ ಆಪ್‌ನ ಆಯ್ಕೆ!
Published On :

ಪ್ರಾಮಾಣಿಕತೆ ಮತ್ತು ಪರಿಶುದ್ಧತೆಯನ್ನೇ ಆಧಾರವಾಗಿರಿಸಿಕೊಂಡು ವ್ಯವಸ್ಥೆಯನ್ನು ಬದಲಿಸುವುದಾಗಿ ಆಮ್ ಆದ್ಮಿ ಪಕ್ಷ (ಆಪ್) ಹೇಳುತ್ತದೆ. ಆದರ್ಶವಾದದ ಮೂಲಕ ಅಲ್ಪಾವಧಿಗೆ ರಾಜಕೀಯದಲ್ಲಿ ಮುಂದಡಿ ಇಡಬಹುದಾದರೂ ದೀರ್ಘಾವಧಿಯಲ್ಲಿ ಕೇವಲ ಉನ್ನತ ಉದ್ದೇಶಗಳನ್ನು ಇರಿಸಿಕೊಂಡೇ ಮುಂದುವರಿಯಲು ಆಗುವುದಿಲ್ಲ.
ವಾಸ್ತವ ಏನೆಂದರೆ, ಆಪ್‌ನ ಹಲವಷ್ಟು ನೀತಿಗಳು ಭ್ರಷ್ಟಾಚಾರವನ್ನು ಇಳಿಸುವುದಿರಲಿ, ಹೆಚ್ಚಿಸುವುದಕ್ಕೆ ಕಾರಣವಾಗುವಂತಿವೆ. ಇವತ್ತಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನದೆಡೆ ಸಾಗಿದೆ ಎಂದಾದರೆ, ರಾಷ್ಟ್ರೀಯ ಸಲಹಾ ಮಂಡಳಿ ಉಪದೇಶಕ್ಕೆ ಅನುಗುಣವಾಗಿ ಬಿಟ್ಟಿ ಕೊಡುಗೆಗಳನ್ನು ಘೋಷಿಸಿದ್ದೇ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗಳ ಪರಿಣಾಮ ಹುಟ್ಟುವುದಕ್ಕೆ ಹಾದಿಯಾಗಿದ್ದು. ಇದೀಗ ಅರವಿಂದ್ ಕೇಜ್ರಿವಾಲ್ ಅಂಥದೇ ಪ್ರಯೋಗವನ್ನು ಮಾಡುವುದಕ್ಕೆ ಮುಂದಾಗಿದ್ದಾರೆಯೇ? ಒಂದು ಕೆಟ್ಟ ಐಡಿಯಾವನ್ನು ಎಷ್ಟೇ ಪ್ರಾಮಾಣಿಕತೆಯಿಂದ ಜಾರಿಗೊಳಿಸಿದರೂ ಅದು ಕೆಟ್ಟ ಐಡಿಯಾ ಅಂತಲೇ ಅನ್ನಿಸಿಕೊಳ್ಳುತ್ತದೆ. ಇದು ಮನದಟ್ಟಾಗಬೇಕಾದರೆ ಬಿಟ್ಟಿ ಕೊಡುಗೆ ಎಂಬುದು ಭ್ರಷ್ಟಾಚಾರವನ್ನು ಹೇಗೆ ಹೆಚ್ಚಿಸಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಪ್ರತಿಯಾಗಿ ಯಾವುದೇ ಬೆಲೆಯನ್ನು ಇಲ್ಲವೇ ಸಮರ್ಪಕ ಬೆಲೆಯನ್ನು ಅಪೇಕ್ಷಿಸದೇ ನೀಡುವ ಕೊಡುಗೆಯೇ ಉಡುಗೊರೆ ಆರ್ಥಿಕತೆ ಎನಿಸಿಕೊಳ್ಳುತ್ತದೆ. ಒಂದು ಕೆ.ಜಿ. ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡುವುದಕ್ಕೆ 14-15 ರುಪಾಯಿಗಳು ತಗುಲುತ್ತದೆ ಎಂದಾದರೆ ಅದನ್ನು 3 ರುಪಾಯಿಗೆ ಮಾರುವುದು ಭ್ರಷ್ಟಾಚಾರಕ್ಕೆ ಆಹ್ವಾನ ಕೊಟ್ಟಂತೆಯೇ. ಇದನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಿ, ಬಡವರಿಗೆ ಆ ಕೊಡುಗೆ ಸಿಗದಂತೆ ಮಾಡುವುದರಲ್ಲೇ ಎಲ್ಲ ಶಕ್ತಿಗಳೂ ಕಾರ್ಯನಿರತವಾಗುತ್ತವೆ. ಕೊನೆಗೂ ಮೂರೇ ರುಪಾಯಿಗಳಿಗೆ ಕೆಜಿ ಅಕ್ಕಿಯನ್ನು ಪಡೆಯುವಲ್ಲಿ ಸಫಲರಾದವರೂ ಅದನ್ನು ಮಾರಿ ಇನ್ನೇನೋ ಕೊಳ್ಳುವುದಕ್ಕೆ ಹೋಗುತ್ತಾರೆ. ಇದನ್ನೇ ನೇರವಾಗಿ ಹೇಳುವುದಾದರೆ, ಉಡುಗೊರೆ ನೀತಿಯನ್ನೇ ದೀರ್ಘಾವಧಿಗೆ ಮುಂದುವರಿಸಿದ್ದೇ ಆದರೆ ಅದು ಎಲ್ಲರನ್ನೂ ಭ್ರಷ್ಟರನ್ನಾಗಿ ಮಾಡುತ್ತದೆ, ಬಡವರನ್ನೂ ಬಿಡದೇ.  
ಪೆಟ್ರೋಲಿಗಿಂತ ತುಂಬ ಅಗ್ಗದಲ್ಲಿ ಡಿಸೇಲ್ ಸಿಗುತ್ತದೆ ಹಾಗೂ ಅದಕ್ಕಿಂತ ಅಗ್ಗದಲ್ಲಿ ಸೀಮೆಎಣ್ಣೆ ಸಿಗುತ್ತದೆ ಎಂದಾದಾಗ ಕಲಬೆರಕೆ ಎಂಬುದು ನಡೆದೇ ತೀರುತ್ತದೆ. ಒಕ್ಸಸ್ ಇನ್‌ವೆಸ್ಟ್‌ಮೆಂಟ್‌ನ ಸುರ್ಜಿತ್ ಭಲ್ಲಾ ಹೇಳುವಂತೆ ಆಪ್ ಪ್ರಣಾಳಿಕೆಯ ಅಂಶಗಳು ವಿಧ್ವಂಸಕ ಗುಣವನ್ನು ಪ್ರತಿಫಲಿಸುತ್ತವೆ. ಖಾಸಗಿಕರಣಕ್ಕೆ ವಿರೋಧ, ನೀರು, ವಿದ್ಯುತ್, ಆಹಾರಗಳಂಥ ಸಾಮಾನ್ಯನ ಅಗತ್ಯಗಳಿಗೆ ಸಬ್ಸಿಡಿ, ಶ್ರೀಮಂತರು ಮತ್ತು ಮಧ್ಯಮವರ್ಗಕ್ಕೆ ಮತ್ತಷ್ಟು ತೆರಿಗೆ ಹಾಕುವುದು... ಹೀಗೆ. ಶ್ರೀಮಂತರಿಗೆ ತೆರಿಗೆ ಹೆಚ್ಚಿಸುವ ಕತೆ ಹಾಗಿರಲಿ, ಆಪ್ ಕೈಗೆ ಅಧಿಕಾರ ಸೂತ್ರ ಸಿಕ್ಕಿದಲ್ಲಿ ಅದು ಸಬ್ಸಿಡಿಗಳನ್ನು ಏರಿಸುವುದಾಗಿ ನೀಡುತ್ತಿರುವ ಭರವಸೆ ಯಾವುದೇ ವಿಚಾರವಂತ ಮನುಷ್ಯನನ್ನು ಆತಂಕಕ್ಕೆ ಸಿಲುಕಿಸುವಂಥದ್ದು. ಯುಪಿಎ-2ರಿಂದ ಆಪ್ ಯಾವ ಪಾಠವನ್ನೂ ಕಲಿತಿಲ್ಲ ಎಂದೆನಿಸುತ್ತದೆ. ಏಕೆಂದರೆ ವಿಚಾರಹೀನ ಸಬ್ಸಿಡಿ ನೀತಿಗಳೇ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟದ್ದನ್ನು ಸುಲಭವಾಗಿ ಗ್ರಹಿಸಬಹುದು. ಉಡುಗೊರೆ ಮತ್ತು ಭ್ರಷ್ಟಾಚಾರಗಳು ನೇರ ಸಂಪರ್ಕ ಹೊಂದಿದಂಥವು. ಆದರೆ ಈ ಉಡುಗೊರೆಗಳನ್ನು ಬಡವರ ಹೆಸರಲ್ಲಿ ಕೊಡುತ್ತಿರುವುದರಿಂದ ರಾಜಕೀಯ ನೆಲೆಯಲ್ಲಿ ಅವನ್ನು ಸುಲಭವಾಗಿ ಸಮರ್ಥಿಸಿಕೊಳ್ಳಲಾಗುತ್ತಿದೆ ಅಷ್ಟೆ.  ಹೀಗಾಗಿಯೇ ರಾಜಕಾರಣವು ಉಡುಗೊರೆ ಸಂಸ್ಕೃತಿಯನ್ನು ನೆಚ್ಚಿಕೊಂಡಿದೆ ಹಾಗೂ ಕೇಜ್ರಿವಾಲ್ ಸಹ ಎಲ್ಲ ರಾಜಕಾರಣಿಗಳಂತೆಯೇ ಯೋಚಿಸುತ್ತಿದ್ದಾರೆ. ಉಡುಗೊರೆಗೆ ಒಮ್ಮೆ ಬದ್ಧರಾದಿರಿ ಎಂದಾದರೆ, ವಸ್ತು ಮತ್ತು ಸೇವೆಗಳ ಬೆಲೆ ನಿರ್ಧಾರಕ್ಕೆ ಮಾರುಕಟ್ಟೆ ಶಕ್ತಿಗಳೊಂದಿಗೆ ಮಧ್ಯಪ್ರವೇಶಿಸುವುದರಿಂದ ಭ್ರಷ್ಟಾಚಾರ ಪ್ರಕ್ರಿಯೆಗೂ ನಿಮ್ಮನ್ನು ನೀವು ಒಳಪಡಿಸಿಕೊಂಡಿರಿ ಎಂದೇ ಅರ್ಥ.
ಯುಪಿಎ-2ರಲ್ಲಿ ಅತ್ಯುಗ್ರ ಮಟ್ಟದ ಭ್ರಷ್ಟಾಚಾರ ನಡೆಯಿತು ಹಾಗೂ ಉಡುಗೊರೆ ಘೋಷಿಸಿದ ಮಟ್ಟವೂ ಉನ್ನತವಾಗಿತ್ತು ಎಂಬುದು ಕಾಕತಾಳೀಯವೇನೂ ಅಲ್ಲ. 2ಜಿ ಹಾಗೂ ಕೋಲ್ಗೇಟ್‌ಗಳೆಂಬ ದೈತ್ಯ ಹಗರಣಗಳನ್ನೇ ಗಮನಿಸೋಣ. ಅವೆರಡೂ ವಿದ್ಯುತ್ ದರ ತಗ್ಗಿಸಿ ಬಡವರಿಗೆ ಸಹಕರಿಸುವ ಉದ್ದೇಶವನ್ನೇ ಹೊಂದಿದ್ದವು. ಇದು ಕೇಜ್ರಿವಾಲ್ ಆಶಯಕ್ಕೆ ಒಗ್ಗುವಂಥದ್ದು. 2008ರ ತರಂಗಗುಚ್ಛವನ್ನು 2001ರ ಬೆಲೆಗೆ ಮಾರಿದ್ದಕ್ಕೆ ಎ. ರಾಜಾ ಕೊಟ್ಟ ಕಾರಣವಾದರೂ ಏನು ಹೇಳಿ? ಸಾಮಾನ್ಯ ಮನುಷ್ಯನಿಗೆ ಮೊಬೈಲ್ ದೂರವಾಣಿ ಸೇವೆ ಸಿಗುವಂತಾಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದರು. ಸಮರ್ಥನೆಗೆ ಬೇರೆ ಯಾವ ಮಾರ್ಗಗಳೂ ಇಲ್ಲವಾದ್ದರಿಂದ ಯುಪಿಎ ಪ್ರಮುಖರೂ ಇದೇ ಧಾಟಿಯಲ್ಲಿ ಮಾತನಾಡುತ್ತಾರೆ.
ಅಂದರೆ ಬಡವರ ಪರ ಎಂದು ರಾಗ ತೆಗೆಯುವುದು ತಮ್ಮೆಲ್ಲ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳುವುದಕ್ಕಿರುವ ಮಾರ್ಗ ಎಂದಾಯಿತು. ತರಂಗಗುಚ್ಛಗಳನ್ನು ಮಾರುಕಟ್ಟೆ ದರಕ್ಕಿಂತ ಅಗ್ಗದಲ್ಲಿ ಮಾರಿದ್ದೇ ಭ್ರಷ್ಟಾಚಾರಕ್ಕೆ ನಾಂದಿಯಾಯಿತು. 2ಜಿ ಬಗ್ಗೆ ಹರಿಹಾಯುತ್ತಲೇ ಕೇಜ್ರಿವಾಲರು ಸಬ್ಸಿಡಿ ಕ್ರಮವನ್ನು ನೆಚ್ಚಿಕೊಳ್ಳುವುದರಲ್ಲಿ ಯಾವ ಅರ್ಥವಿದೆ? ಪ್ರಧಾನಿ ಉಸ್ತುವಾರಿ ಅಡಿಯಲ್ಲೇ ಕಲ್ಲಿದ್ದಲು ಹಗರಣ ನಡೆಯಿತು. ಹರಾಜಿನ ಮೂಲಕ ವಿತರಿಸಬೇಕಾಗಿದ್ದ ಕಲ್ಲಿದ್ದಲು ಘಟಕಗಳನ್ನು ಪುಕ್ಕಟೆಯಾಗಿ, ಅಪಾರದರ್ಶಕವಾಗಿ ವಿತರಿಸಿದ್ದೇ ಅಗಾಧ ಭ್ರಷ್ಟಾಚಾರಕ್ಕೆ ಕಾರಣವಾಯಿತು. ಹೀಗೇಕೆ ಮಾಡಿದಿರಿ ಅಂತ ಕೇಳಿದರೆ ಅಲ್ಲಿಯೂ ಹೇಳಿದ್ದು, ಕಡಿಮೆ ದರಕ್ಕೆ ವಿದ್ಯುತ್ ಕೊಡಬಹುದಲ್ಲಾ ಎಂದು. ಆದರೆ ಸಿಕ್ಕಿದ್ದು ವಿದ್ಯುತ್ತೋ, ಭ್ರಷ್ಟಾಚಾರವೋ ಎಂಬುದು ಎಲ್ಲರಿಗೂ ತಿಳಿದಿದೆ.
ಎಲ್ಲ ಸರ್ಕಾರಗಳೂ ರೈತರಿಗೆ ಬೇಕಾಬಿಟ್ಟಿ ದರದಲ್ಲಿ ವಿದ್ಯುತ್ ಕೊಡುತ್ತವೆ. ಫಲಿತಾಂಶ ಏನಾಗಿದೆಯೆಂದರೆ ಹೀಗೆ ಅಗ್ಗದ ದರದಲ್ಲಿ ವಿದ್ಯುತ್ ಪೂರೈಸುವ ಗ್ರಿಡ್‌ಗಳಿಂದ ವಿದ್ಯುತ್ ಕಳ್ಳತನ. ಬಡರೈತರ ಹೆಸರಲ್ಲಿ ಇನ್ಯಾರೋ ದೋಚುವ ಕ್ರಿಯೆ. ಹೀಗಾಗಿ ಕೇಜ್ರಿವಾಲ್ ಅವರ ಅಗ್ಗದ ವಿದ್ಯುತ್ ಮತ್ತು ಪುಕ್ಕಟೆ ನೀರು ಯೋಜನೆಗಳೂ ಫಟಿಂಗರ ಅಭ್ಯುದಯಕ್ಕೆ ಕೊಡುಗೆ ನೀಡಬಲ್ಲವು ಎಂಬುದು ಖಾತ್ರಿ. ನೀರಿನ ಮಾಫಿಯಾ ಹಾಗೂ ವಿದ್ಯುತ್ ಕಳ್ಳತನಗಳು ಮುಗಿಲು ಮುಟ್ಟುವುದರಲ್ಲಿ ಸಂದೇಹವಿಲ್ಲ. ಈ ನೀರು ಮತ್ತು ವಿದ್ಯುತ್ ಅರ್ಹರಿಗೇ ತಲುಪುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜನಲೋಕಪಾಲ ಹುದ್ದೆಯೊಂದನ್ನು ಇರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡುಬಿಡುತ್ತೇವೆ ಎಂದು ಆಪ್‌ನ ಬೆಂಬಲಿಗರು ಯಾರಾದರೂ ಹೇಳಲು ಸಾಧ್ಯವೇ? ಈ ಲೋಕ್ಪಾಲ್ ಏಜೆಂಟ್‌ಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ಮಾಡಿ ಭ್ರಷ್ಟಾಚಾರ ನಿಗ್ರಹಿಸಿಬಿಡುತ್ತಾರೆ ಎಂದು ಹೇಗೆ ನಂಬುವಿರಿ?
ಒಂದೇ ಪರ್ಯಾಯ ಮಾರ್ಗವೆಂದರೆ ಉಡುಗೊರೆಗಳನ್ನು ಅತ್ಯಂತ ಅಗತ್ಯದಲ್ಲಿರುವವರಿಗೆ ಮಾತ್ರವೇ ಸೀಮಿತಗೊಳಿಸುವುದು. ಸುಮ್ಮನೆ ಇಂಥದೊಂದು ವರ್ಗದ ಎಲ್ಲರಿಗೂ ನೀಡುತ್ತೇವೆ ಎಂದು ಹೊರಟಾಗ ಅದು ಆತ್ಮವಿಧ್ವಂಸಕ ನಡೆಯಾಗುತ್ತದೆ. ಇದಕ್ಕೆ ಉದ್ಯೋಗ ಖಾತ್ರಿ ಯೋಜನೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. 1999-2004ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯೇನೂ ಇರಲಿಲ್ಲ. ಆದರೆ ಅವತ್ತಿನ ಎನ್‌ಡಿಎ ಸರ್ಕಾರ ಮೂಲಸೌಕರ್ಯ ವಲಯದಲ್ಲಿ ಭಾರಿ ಹೂಡಿಕೆ ಮಾಡಿದ್ದರಿಂದ ವ್ಯಾಪಕ ಉದ್ಯೋಗ ಸೃಷ್ಟಿಯಾಯಿತು. ಆಗ ಆರು ಕೋಟಿಯವರೆಗೆ ಆದ ಉದ್ಯೋಗ ಸೃಷ್ಟಿ, ಯುಪಿಎ ಸರ್ಕಾರದ ಉದ್ಯೋಗ ಖಾತ್ರಿ ಪರ್ವದಲ್ಲಿ ಅಕ್ಷರಶಃ ಆವಿಯಾಗಿ ಹೋಯಿತಷ್ಟೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೂಲಿ ಹೆಚ್ಚಳಕ್ಕೆ ಕಾರಣವಾದ ಯೋಜನೆ, ಮಹಿಳೆಯರನ್ನು ಕಾರ್ಮಿಕ ಪಡೆಯಿಂದ ಹೊರಗಿರಿಸುವುದಕ್ಕೂ ಪರೋಕ್ಷ ಕಾರಣವಾಯಿತು. ಉದ್ಯೋಗ ಯೋಜನೆಯೊಂದರ ಗುರಿಯೇ ಮಾರುಕಟ್ಟೆಯಲ್ಲಿರುವ ನೈಜ ಉದ್ಯೋಗಗಳನ್ನು ಕೊಲ್ಲುವುದಾಗಿಬಿಟ್ಟರೆ? ಅಲ್ಲದೇ ಪಡಿತರ ವಿತರಣೆ ವ್ಯವಸ್ಥೆ ನಂತರದ ಅತಿಹೆಚ್ಚಿನ ಭ್ರಷ್ಟಾಚಾರ ಇರುವುದು ಉದ್ಯೋಗ ಖಾತ್ರಿ ಯೋಜನೆಯಲ್ಲೇ.
ಭ್ರಷ್ಟತೆಯನ್ನೇ ಅಂತರಂಗದಲ್ಲಿರಿಸಿಕೊಂಡು ಜನಪ್ರಿಯತೆ ಸೋಗಿನಲ್ಲಿರುವ ಹಳೆ ಯೋಜನೆಗಳನ್ನೇ ಕೇಜ್ರಿವಾಲ್ ಅಪ್ಪಿಕೊಳ್ಳುತ್ತಿದ್ದಾರೆ. ಕೇಜ್ರಿವಾಲ್ ಭರವಸೆಯ ರಾಜಕಾರಣಿಯಾಗಿ ಹೊರಹೊಮ್ಮಿರುವುದು ಹೌದಾದರೂ ಇಂಥದೇ ಸ್ವಚ್ಛ ಚಹರೆಯ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕಾರಣಿಗಳು ಜನಪ್ರಿಯ ಯೋಜನೆಗಳ ಹಿಂದೆ ಬಿದ್ದು ಹಾಳಾಗಿದ್ದಾರೆ. ಉಡುಗೊರೆ ನೀತಿ ಮತ್ತು ಭ್ರಷ್ಟಾಚಾರಗಳು ಒಂದರೊಟ್ಟಿಗೆ ಇನ್ನೊಂದು ಸಾಗುತ್ತವೆ. ಅವುಗಳ ಸ್ನೇಹವನ್ನು ಜನಲೋಕಪಾಲ್‌ದಿಂದಲೂ ಛಿದ್ರಗೊಳಿಸಲು ಸಾಧ್ಯವಿಲ್ಲ.

- ಆರ್. ಜಗನ್ನಾಥನ್
ಸಂಪಾದಕರು, ಫಸ್ಟ್‌ಪೋಸ್ಟ್ ಡಾಟ್‌ಕಾಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.