ಅಂಕಣಗಳು

ಸರ್ವಜ್ಞ ಮತ್ತು ವೇಮನನ ಸಾಹಿತ್ಯದಲ್ಲಿ ನೀತಿ

ಸರ್ವಜ್ಞ ಮತ್ತು ವೇಮನನ ಸಾಹಿತ್ಯದಲ್ಲಿ ನೀತಿ
Published On :

ಕನ್ನಡದ ಸರ್ವಜ್ಞ ಮತ್ತು ತೆಲುಗಿನ ವೇಮನ ಇಬ್ಬರೂ ದಕ್ಷಿಣ ಭಾರತದ ಬಹು ದೊಡ್ಡ ಪ್ರಜಾ ಕವಿಗಳು, ಭಾರತೀಯ ಸಾಹಿತ್ಯದ ಶ್ರೇಷ್ಠ ಸಂತ ಕವಿಗಳು. ಇವರು ಕಾಲದ ದೃಷ್ಟಿಯಿಂದ ತುಂಬಾ ಹತ್ತಿರದವರು. ಸರ್ವಜ್ಞ 16ನೇ ಶತಮಾನದವನಾದರೆ, ವೇಮನ 17ನೇ ಶತಮಾನದವನು. ಇಬ್ಬರೂ ಸಂಸಾರಿಗಳಲ್ಲ- ಸಂಚಾರಿಗಳು, ಜಂಗಮ ಕವಿಗಳು, ವಿರಕ್ತರು, ವೈರಾಗ್ಯ ಹೊಂದಿದವರು. ಇವರು ಮೊದಲು ಭೋಗಿಗಳಾಗಿದ್ದು, ಅನಂತರ ಯೋಗ ಮಾರ್ಗವನ್ನು ಅನುಸರಿಸಿದ ಆಶುಕವಿಗಳು. ಇವರಿಬ್ಬರೂ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹಾಗೂ ಅದರ ಪತನವನ್ನು ಕಂಡವರು. ಸರ್ವಜ್ಞ ಅರೆಬೆತ್ತಲೆಯ ಲೋಕ ಸಂಚಾರಿಯಾದರೆ ವೇಮನ ಪೂರ್ಣಬೆತ್ತಲೆಯ ಲೋಕ ಸಂಚಾರಿ. ಇಬ್ಬರೂ ಅನುಭಾವಿಗಳೂ ಸಮಾಜಮುಖಿಗಳೂ ಜ್ಞಾನಮುಖಿಗಳೂ ಹಾಗೂ ಮಹೋನ್ನತ ಪ್ರತಿಭೆಯುಳ್ಳವರು. ಇವರು ಜನಸಾಮಾನ್ಯರ ಭಾವನೆಗಳಿಗೆ ಮೂರ್ತಸ್ವರೂಪವನ್ನು ನೀಡಿ ಸಮಾನ ಮನೋಧರ್ಮದ ಜನತಾ ಕವಿಗಳು ಎನಿಸಿಕೊಂಡವರು. ಕವಿ ಸರ್ವಜ್ಞ ತ್ರಿಪದಿ ಛಂದೋಪ್ರಕಾರದಲ್ಲಿ ವಚನಗಳನ್ನು ರಚಿಸಿದರೆ, ಕವಿ ವೇಮನ ಪದ್ಯ ರಚಿಸಿದ್ದು ಚೌಪದಿ ಛಂದೋಪ್ರಕಾರದಲ್ಲಿ. ಇವರಿಬ್ಬರ ಈ ಸಾಹಿತ್ಯ ಪ್ರಕಾರ ಕಿರಿಯದರಲ್ಲಿ ಹಿರಿಯ ಅರ್ಥವನ್ನು ಬೆಳಗಿಸಿದ್ದು ಮಾತ್ರ ವಿಶೇಷ.
ಸರ್ವಜ್ಞ ಕವಿಯನ್ನು ಕೇಳದ, ತಿಳಿಯದ ಕನ್ನಡಿಗನಿಲ್ಲ. ಅಂತೆಯೇ ವೇಮನ ಕವಿಯ ಬಗ್ಗೆ ತಿಳಿಯದ ತೆಲುಗನಿಲ್ಲ. ಕನ್ನಡಿಗರ ಮನೆಮಾತಾಗಿರುವ ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕವಾದಂತೆ ತೆಲುಗರ ಮನೆಮಾತಾಗಿರುವ ವೇಮನನ ಚೌಪದಿಗಳೂ ಸಾರ್ವಕಾಲಿಕ ಸತ್ಯವಾಗಿವೆ. ಇಬ್ಬರ ಸಾಹಿತ್ಯವೂ ಜನಪ್ರಿಯ. ಇವರು ಯಾವ ಸಂಪ್ರದಾಯಕ್ಕೂ, ಜಾತಿ, ವರ್ಗ, ಪಂಗಡ, ಧರ್ಮಗಳ ಸಂಕೋಲೆಗಳಿಗೂ ಸಿಲುಕದೆ ಎಲ್ಲ ಧರ್ಮಗಳ ಸರ್ವ ಸಮಾನ ತತ್ವಗಳನ್ನು ಆಧರಿಸಿದ ಮಾನವೀಯ ಆಶಯವುಳ್ಳ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಆಕಸ್ಮಿಕವಾಗಿ ಯಾವುದೋ ಒಂದು ಧರ್ಮ, ಜಾತಿ, ಭಾಷೆ, ಪ್ರದೇಶದಲ್ಲಿ ಜನಿಸಿದರೂ ಈ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಯನ್ನು ಮೀರಿ ಬೆಳೆದು ನಿಂತ ಸೀಮಾತೀತ ವ್ಯಕ್ತಿತ್ವ ಸರ್ವಜ್ಞ ಮತ್ತು ವೇಮನರದು. ಇವರ ಸಾಹಿತ್ಯದ ಕೇಂದ್ರ ಬಿಂದು ಮನುಷ್ಯ. ಶಾಂತಿಯುತ ನೆಮ್ಮದಿಯ ಬದುಕಿಗೆ ಸರಿಮಾರ್ಗವನ್ನು ತೋರಿಸುವುದು ಹಾಗೂ ಮಾನವ ಕಲ್ಯಾಣದ ಆಶಯ ಇವರ ಸಾಹಿತ್ಯದ ಉದ್ದೇಶವಾಗಿದೆ.
ಕನ್ನಡದ ಸರ್ವಜ್ಞ ಮತ್ತು ತೆಲುಗಿನ ವೇಮನರಲ್ಲಿ ಅನೇಕ ಸಾಮ್ಯತೆಗಳು, ಹೋಲಿಕೆಗಳು ಇವೆ. ಇಬ್ಬರೂ ರಾಜಾಶ್ರಯದ ಹಂಗಿಲ್ಲದೆ ಜನರ ಆಶ್ರಯದಲ್ಲಿ ಬದುಕಿ ಬಾಳಿದ ಮುಕ್ತಕ ಕವಿಗಳು. ಇವರಿಗೆ ಜೀವನವೇ ಒಂದು ಶಾಲೆ. ವೇಮನ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಆಟವೆಲದಿಗಳಲ್ಲಿ ಸತ್ಯಸಾರವನ್ನು ತಿಳಿಸಿದ್ದರೆ, ಸರ್ವಜ್ಞ ಜೀವನ ಪರಮಾರ್ಥವನ್ನು ಅರ್ಥೈಸಿ ತ್ರಿಪದಿ ಮಾರ್ಗ ತ್ರಿವಿಕ್ರಮನೆಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಇವರಿಬ್ಬರೂ ಮುಖ್ಯವಾಗಿ ಜೀವನ ಮಾರ್ಗದರ್ಶನದ ನೇತಾರರು, ನೀತಿ ಬೋಧಕ ಕವಿಗಳು. ಸಮಾಜದ ಲೋಪದೋಷಗಳನ್ನು ಹಾಗೂ ಮನುಷ್ಯನಲ್ಲಿರುವ ವಿಷಮತೆಯನ್ನು ಹೋಗಲಾಡಿಸಿ ವೈಚಾರಿಕತೆಯ ಚಿಕಿತ್ಸೆ ನೀಡಿದವರು. ಜನ ಸಮುದಾಯದಿಂದ ಬಂದು ಜನ ಸಾಮಾನ್ಯರೊಡನೆ ಬೆರೆತು ಜನಪ್ರಿಯ ಕವಿಗಳಾಗಿ ಜನ ಮಾನಸದಲ್ಲಿ ನೆಲೆನಿಂತ ಮಹಾನ್ ದೃಷ್ಟಾರರು. ತಮ್ಮ ಬದುಕಿನುದ್ದಕ್ಕೂ ಸಮಾಜದಲ್ಲಿ ಬೇರೂರಿರುವ ಮೇಲು ಕೀಳು ಎಂಬ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಲು ಶಕ್ತಿ ಮೀರಿ ಶ್ರಮಿಸಿದವರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸದಾ ಹಂಬಲಿಸಿದವರು. ಮತಾತೀತವಾದ ವಿಶಾಲ ದೃಷ್ಟಿ ಹಾಗೂ ಸತ್ಯ ನಿಷ್ಠುರುವಾದ ವ್ಯಕ್ತಿತ್ವವುಳ್ಳ ಇವರು ಸಮಾಜದಲ್ಲಿರುವ ಮೌಢ್ಯತೆಯನ್ನು ಬಯಲಿಗೆಳೆದು ಜನರಲ್ಲಿ ಜಾಗೃತಿ ಮೂಡಿಸಲು ಹಗಲಿರುಳು ಸಂಚರಿಸಿದವರು. ಎಲ್ಲರೂ ಸಮಾನತೆಯಿಂದ ಸರ್ವಸುಖಿಗಳಾಗಿ ಬದುಕು ಸಾಗಿಸಬೇಕೆಂಬ ಆಶಯ ಇವರದು. ಆದ್ದರಿಂದ ಇವರನ್ನು ಸಾಮಾಜಿಕ ವೈದ್ಯರುಗಳೆಂದೂ ಸರ್ವರ ಏಳ್ಗೆ ಬಯಸಿದ ಮಹಾನ್ ದಾರ್ಶನಿಕರುಗಳೆಂದು ಕರೆಯಲಾಗಿದೆ. ಹಾಗೆಯೇ ಇವರು ಬೋಧಿಸಿದ ವಿಚಾರಗಳು ಸರ್ವರೂ ಅನುಸರಿಸಲು ಸರ್ವಕಾಲಕ್ಕೂ ಅರ್ಹವಾಗಿವೆ ಎನ್ನಬಹುದು. ಪ್ರಸ್ತುತ ಲೇಖನ ಸರ್ವಜ್ಞ ಮತ್ತು ವೇಮನರ ಸಾಹಿತ್ಯದಲ್ಲಿ ನೀತಿ ಬೋಧನೆ ಹೇಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.
ಕನ್ನಡ ಮತ್ತು ತೆಲುಗು ಸಾಹಿತ್ಯ ಮಾತ್ರವಲ್ಲದೆ ಇಡೀ ಭಾರತೀಯ ಸಾಹಿತ್ಯದಲ್ಲಿ ನೀತಿ ಬೋಧೆ ಹಾಸು ಹೊಕ್ಕಾಗಿದೆ. ರಾಮಾಯಣ, ಮಹಾಭಾರತ, ಪುರಾಣಗಳು, ಪಂಚತಂತ್ರ ಕಥೆಗಳೆಲ್ಲವೂ ನೀತಿಮಯವಾಗಿವೆ. ನೀತಿ ಬೋಧೆಗಳಿಲ್ಲದ ಕಥೆ, ಕಾವ್ಯ, ಮಹಾಕಾವ್ಯಗಳಿಲ್ಲ. ಕನ್ನಡದಲ್ಲಿ ಪುರಾಣಗಳು, ಕಾವ್ಯಗಳು ಸ್ತೋತ್ರಗಳು, ಶತಕಗಳು, ವಚನಗಳು ಹಾಗೂ ಕೀರ್ತನೆಗಳೆಲ್ಲವೂ ನೀತಿ ಪ್ರಧಾನವಾದವು. ಈ ನೀತಿ ವಾಕ್ಯಗಳು ಚುಟುಕಾಗಿದ್ದರೂ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲವು. ಇಂತಹ ಗಟ್ಟಿ ಸಾಹಿತ್ಯದ ಮೂಲಕ ನೀತಿಯನ್ನು ಹೇಳುವುದು ಭಾರತೀಯರ ವೈಶಿಷ್ಟ್ಯ. ಈ ಹಿನ್ನೆಲೆಯಲ್ಲಿ ಕನ್ನಡದ ಸರ್ವಜ್ಞ ಮತ್ತು ತೆಲುಗಿನ ವೇಮನನ ಸಾಹಿತ್ಯದಲ್ಲಿ ನೀತಿ ಬೋಧೆ ಪ್ರಧಾನವಾಗಿ ಕಂಡುಬರುತ್ತದೆ. ಈ ನೀತಿ ಬೋಧೆ ಎಲ್ಲರಿಗೂ ಹಿತವಾಗಿದ್ದು ಜೀವನ ವಿವೇಕದ ಕನ್ನಡಿಯಂತಿವೆ. ಇವುಗಳನ್ನು ಓದಿದಾಗ ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಇವು ಬದುಕಿನ ಸಮಸ್ತ ವಿಚಾರಗಳನ್ನು ಒಳಗೊಂಡಿರುವುದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ನೀತಿ ಬೋಧಕ ಮಾತುಗಳು ಜವನ ಮೌಲ್ಯಗಳಾಗಿದ್ದು ಸರ್ವರಿಗೂ ಅತ್ಯವಶ್ಯಕವಾಗಿವೆ.
ಕನ್ನಡದ ಸರ್ವಜ್ಞ ಮತ್ತು ತೆಲುಗಿನ ವೇಮನರು ಹೇಳಿದ ನೀತಿ ಬೋಧೆಗಳು ಅತ್ಯಂತ ಜನಪರವೂ, ಜನಪ್ರಿಯವೂ ಆಗಿವೆ. ಜನರಿಗಾಗಿ ಜನರ ಉತ್ತಮ ಬದುಕಿಗಾಗಿ ರಚಿಸಿದ ಈ ನೀತಿ ಬೋಧೆಗಳಲ್ಲಿ ಪರಸ್ಪರ ಸಾಮ್ಯತೆ ಕಂಡು ಬರುತ್ತದೆಯಾದರೂ ತೆಲುಗಿನ ವೇಮನನ ಮೇಲೆ ಕನ್ನಡದ ಸರ್ವಜ್ಞನ ಪ್ರಭಾವವಿದ್ದಿರಬಹುದು ಎನ್ನಿಸುತ್ತದೆ. ಆದರೂ ಈ ಇಬ್ಬರೂ ಮಹಾ ಕವಿಗಳೂ ಸಮ ಪ್ರತಿಭೆಯ ಸಾಮಾಜಿಕ ಚಿಂತಕರಾಗಿದ್ದರು ಎನ್ನುವುದು ಉಚಿತ.
ಒಟ್ಟಿನಲ್ಲಿ ವೇಮನ ಮತ್ತು ಸರ್ವಜ್ಞರ ನೀತಿಬೋಧಕ ವಿಚಾರಗಳು ಅಂಧಕಾರದ ಕಗ್ಗತ್ತಲ್ಲಲ್ಲಿ ಮುಳುಗಿರುವ ಅಜ್ಞಾನಿಗಳಿಗೆ ಜ್ಞಾನ ಜ್ಯೋತಿಗಳಾಗಿ, ಕೈಹಿಡಿದು ನಡೆಸುವ ಕೈದೀವಿಗೆಗಳಾಗಿ, ದಿಕ್ಕು ತೋರದವರಿಗೆ ದಿಕ್ಕು ತೋರುವ ದಿಕ್ಸೂಚಿಗಳಾಗಿವೆ. ಅಲ್ಲದೆ ಇವು ಭಾರತೀಯ ಸಂಸ್ಕೃತಿಯ ಪಡಿಯಿಚ್ಚಿನಂತಿದ್ದು ಎಲ್ಲೆಡೆ ಪ್ರಜ್ವಲಿಸಿ ಪ್ರಜೆಗಳಲ್ಲಿ ಪ್ರಜ್ಞೆ ಮೂಡಿಸಿ ಫಲ ನೀಡಿವೆ ಎನ್ನಬಹುದು.

- ಡಾ. ಸಿ.ಡಿ. ಪರಶುರಾಮ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ವಿವಿಯ ಸಂಜೆ ಕಾಲೇಜು, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.