ಅಂಕಣಗಳು

ಮಹಿಳಾ ಸೂಪರ್ ಮಾರ್ಕೆಟ್ ಎಂಬ ಅದ್ಭುತ ಪ್ರಯತ್ನ

ಮಹಿಳಾ ಸೂಪರ್ ಮಾರ್ಕೆಟ್ ಎಂಬ ಅದ್ಭುತ ಪ್ರಯತ್ನ
Published On :

ಈ ಹಿಂದೆ ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ವ್ಯಾಪಕವಾಗಿ ಸ್ವಸಹಾಯ ಗುಂಪುಗಳ ರಚನೆ, ತರಬೇತಿ ಮತ್ತು ಮಹಿಳೆಯರು ತಯಾರಿಸುವ ವಸ್ತುಗಳ ಮಾರಾಟ ವ್ಯವಸ್ಥೆ ಮುಂತಾದವುಗಳನ್ನು ಮಾಡಿದ್ದರ ಅನುಭವದ ಮೇರೆಗೆ ಗುಲ್ಬರ್ಗಾ ಮತ್ತಿತರ ಜಿಲ್ಲೆಗಳ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರನ್ನು ಭೇಟಿ ಮಾಡಿ ಅವರ ಸ್ಥಿತಿಗತಿಗಳನ್ನು ತಿಳಿದುಕೊಂಡೆ. ನಂತರ ನಮ್ಮ ಕೇಂದ್ರದ ಸಭೆಯಲ್ಲಿ ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಗುಲ್ಬರ್ಗಾ ಜಿಲ್ಲೆಯೊಂದರಲ್ಲಿಯೇ ಸುಮಾರು 8500 ಕ್ಕಿಂತ ಹೆಚ್ಚು ಸ್ವಸಹಾಯ ಗುಂಪುಗಳು ಸ್ತ್ರೀ ಶಕ್ತಿ ಕಾರ್ಯಕ್ರಮಗಳಿಂದ ಸ್ಥಾಪನೆಯಾಗಿದ್ದವು. ಅಲ್ಲದೆ ಹೆಚ್ಚಿನ ಸ್ವಸಹಾಯ ಗುಂಪುಗಳು ಸರ್ಕಾರೇತರ ಸಂಸ್ಥೆಗಳಾದ ಮೈರಾಡಾ, ಮಹಿಳಾ ಸಮಖ್ಯ, ಮುಂತಾದವುಗಳ ಸಹಾಯದಿಂದ ಸ್ಥಾಪನೆಯಾಗಿದ್ದವು. ಗುಲ್ಬರ್ಗಾ ತಾಲೂಕಿನಲ್ಲಿ ಇಪ್ಪತ್ತೇಳು ಸ್ವಸಹಾಯ ಗುಂಪುಗಳು ಬೊಕೆ ತಯಾರಿಕೆ, ಫೈಲ್, ಅಗರಬತ್ತಿ ತಯಾರಿಕೆಯಲ್ಲಿ ತಿಂಗಳಿಗೆ ಹತ್ತು ಸಾವಿರ ರು.ಗಳ ವರಮಾನವನ್ನು ಗಳಿಸುತ್ತಿದ್ದವು. ವಿವಿಧ ಸ್ವಸಹಾಯ ಗುಂಪುಗಳು ಬೇರೆ ಬೇರೆ ತಾಲೂಕುಗಳಲ್ಲಿ ಖಾರದಪುಡಿ ತಯಾರಿಕೆ ಮತ್ತು ಧಾನ್ಯಗಳ ವ್ಯಾಪಾರ, ಶಾವಿಗೆ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಪರದಾ ಎಣಿಕೆ, ಲಂಬಾಣಿ ಕಸೂತಿ, ಹಾಲಿನಿಂದ ಖೋವಾ ತಯಾರಿಕೆ, ಎಂಬ್ರಾಯಿಡರಿ, ಸಿದ್ಧ ಉಡುಪು ತಯಾರಿಕೆ, ಉಲ್ಲನ್ ಮತ್ತು ವೈರ್ ಬುಟ್ಟಿಗಳ ತಯಾರಿಕೆ, ಬಟ್ಟೆ ವ್ಯಾಪಾರ, ಹಪ್ಪಳ, ಸಂಡಿಗೆ ತಯಾರಿಕೆ, ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವು. ತಿಂಗಳ ವರಮಾನ ಸಾವಿರದ ಐನೂರು ರು.ಗಳಿಂದ ಹಿಡಿದು ಆರು ಸಾವಿರದವರೆಗೂ ಇತ್ತು. ದಿನ ಬೆಳಗಾದರೆ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಎದುರಾಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಹಾಗಾಗಿ ಅವರ ಸಮಸ್ಯೆಗಳನ್ನು ನಾವು ಪರಿಶೀಲಿಸಿದಾಗ ಈ ಅಂಶಗಳು ಗೋಚರವಾದವು.
* ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಗುರುತಿಸುವಿಕೆ ಹಾಗೂ ಮಾರಾಟಕ್ಕೆ ಸರಿಯಾದ ಸ್ಥಳ ಲಭ್ಯವಿಲ್ಲದಿರುವುದು. * ಉತ್ಪಾದನೆಗಳ ವಿಕೇಂದ್ರಿಕರಣದಿಂದಾಗಿ ಉತ್ಪನ್ನಗಳ ಸರಬರಾಜು ನಿರಂತರವಾಗಿಲ್ಲದಿರುವುದು. * ಜಾಹೀರಾತಿನ ಕೊರತೆ  * ಮಹಿಳೆಯರಿಗೆ ಮಾರಕಟ್ಟೆಯ ಸಂಪರ್ಕ ಕಡಿಮೆ ಇರುವುದರಿಂದ ಅವರಿಗೆ ಉತ್ಪನ್ನಗಳನ್ನು ಹೆಚ್ಚಿಸುವ ಮೂಲ ತಿಳಿಯದಿರುವುದು(ಮಾರ್ಗದರ್ಶನದ ಕೊರತೆ) * ಸ್ವ ಸಹಾಯ ಗುಂಪುಗಳಿಗೆ ಗ್ರಾಹಕರಿಗೆ ಬೇಕಾಗುವ ಹೊಸ ತಂತ್ರಾಂಶಗಳ ಅರಿವಿಲ್ಲದಿರುವುದು(ಆಧುನಿಕ ಕೌಶಲ್ಯದ ಕೊರತೆ) * ಹೆಚ್ಚಿನ ಮೊತ್ತದ ಹೂಡಿಕೆ ಇಲ್ಲದೇ ಇದ್ದ ಕಾರಣ ಹೆಚ್ಚಿನ ಪ್ರಮಾಣದ ಸರಬರಾಜು ಮಾಡುವಲ್ಲಿ ಹಿಂದೇಟು ಹಾಕಲಾಗುತ್ತಿರುವುದು
ಆ ಮಹಿಳೆಯರ ಸಾಮರ್ಥ್ಯ ಬಲಪಡಿಸಲು ಏನು ಮಾಡಬಹುದು ಎಂದು ಯೋಚಿಸಿದೆ. ಅವರ ಸಮಸ್ಯೆಗಳ ಸ್ವಾಟ್ (SWOT) ವಿಶ್ಲೇಷಣೆಯನ್ನು ಮಾಡಿದಾಗ ಈ ಅಂಶಗಳು ಕಂಡು ಬಂದವು.

ಸಾಮರ್ಥ್ಯಗಳು:  * ಸರ್ಕಾರದ ವಿವಿಧ ಯೋಜನೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ವಸಹಾಯ ಗುಂಪುಗಳು ಅಸ್ತಿತ್ವಕ್ಕೆ ಬಂದಿರುವುದು. * ಸರ್ಕಾರದಲ್ಲಿ ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯ ಯೋಜನೆಗಳು ಸ್ವಸಹಾಯ ಗುಂಪುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದು. * ಈ ಭಾಗದ ಸುತ್ತಮುತ್ತ ಮಾರುಕಟ್ಟೆಯ ಲಭ್ಯತೆಯಿರುವುದು ಟ ಸ್ವಸಹಾಯ ಗುಂಪುಗಳಿಗೆ ಲಭ್ಯವಿರುವ ಪರಿಣತರಿಂದ ಹಾಗೂ ಸಂಸ್ಥೆಗಳು ಬೆಂಬಲ ಸಿಗುವಂತೆ ಮಾಡುವ ಸಾಧ್ಯತೆ ಇರುವುದು.

ದೌರ್ಬಲ್ಯಗಳು: ಗೃಹ ಆಧಾರಿತ ಉತ್ಪಾದನೆ ಹಾಗೂ ಮಾರುಕಟ್ಟೆಗಳ ಪದ್ಧತಿಯ ಕೊರತೆ, ನ್ಯೂನತೆ, ಸಣ್ಣ ಮಾಧ್ಯಮದ ಉತ್ಪಾದನೆಗಳ ಸಂಗ್ರಹಣೆ ಹಾಗೂ ಸಾಗಿಸುವ ಕೊರತೆ, ಉತ್ಪಾದನೆಗಳ ಏಕರೂಪ, ಗುಣಮಟ್ಟ ಪ್ರಮಾಣೀಕರಿಸುವಲ್ಲಿ ಕೊರತೆ, ದರಗಳ ಹಾಗೂ ಹೆಚ್ಚುವರಿ ಮೌಲ್ಯ ನಿರ್ಧರಿಸುವ ಸಮಸ್ಯೆ, ಉತ್ಪನ್ನಗಳ ಮಾರಾಟಕ್ಕೆ ಸರಿಯಾದ ಮಾರುಕಟ್ಟೆ ಲಭ್ಯವಿಲ್ಲದಿರುವುದು. ಸರ್ಕಾರ ನೀಡಿದ ಮಾರುಕಟ್ಟೆ ನಗರದ ಹೊರ ಭಾಗದಲ್ಲಿ ಇದ್ದದ್ದು.

ಅವಕಾಶಗಳು: ಬೇರೆಯವರಿಂದ ಮಹಿಳೆಯರು ಮಾರಿದ ವಸ್ತುಗಳ ದರ ತುಂಬ ಕಡಿಮೆ ಇರುವುದರಿಂದ ಗ್ರಾಹಕರನ್ನು ಆಕರ್ಷಿಸುವುದು, ಜಾಗತಿಕ ಮಟ್ಟದಲ್ಲಿ ಕೈಮಗ್ಗ ಉದ್ಯಮದ ಮಾರುಕಟ್ಟೆ ವಿಸ್ತರಿಸುವುದು, ಗ್ರಾಹಕರು ಇಚ್ಛಿಸುವಂತೆ ಗುಣಮಟ್ಟ ಆಧಾರಿತ ಬೆಲೆಗಳನ್ನು ನಿರ್ಧರಿಸುವುದು, ಸ್ವಸಹಾಯ ಗುಂಪುಗಳ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡುವುದು.

ಅಪಾಯಗಳು: ಸ್ವ ಸಹಾಯ ಗುಂಪುಗಳ ಕಡಿಮೆ ಸಾಮರ್ಥ್ಯ * ಗ್ರಾಹಕರ ಆದ್ಯತೆಯಲ್ಲಿ ಉತ್ಪನ್ನಗಳ ತಯಾರಿಕೆ ಹಾಗೂ ವಿನ್ಯಾಸಗಳ ನಡುವೆ ವ್ಯತ್ಯಾಸ ಇರುವುದು. * ಸ್ವ ಸಹಾಯ ಗುಂಪುಗಳ ಸದಸ್ಯರಲ್ಲಿ ಕಡಿಮೆ ಕೌಶಲ್ಯವಿರುವುದು * ಮನೆ ಬಿಟ್ಟು ಸತತವಾಗಿ ಅಂಗಡಿಯಲ್ಲಿ ಕುಳಿತುಕೊಳ್ಳುವುದು ಕಷ್ಟ.
ಸ್ವಾಟ್ ವಿಶ್ಲೇಷಣೆಯನ್ನು ನೋಡಿದಾಗ ಸ್ವ ಸಹಾಯ ಗುಂಪುಗಳಿಗೆ ಮುಖ್ಯವಾಗಿ ನಾಲ್ಕು ಮೂಲ ಅವಶ್ಯಕತೆಗಳು ಇವೆ ಎಂದು ನನಗನ್ನಿಸಿತು. ಅವುಗಳು ಯಾವುವೆಂದರೆ:* ಉತ್ಪಾದನೆಯ ಮೂಲ ವಿಸ್ತರಿಸುವುದು. * ಉತ್ಪಾದನೆಯ ಮೌಲ್ಯ ವರ್ಧಿಸುವುದು.* ಗುಣಮಟ್ಟ ಆಧಾರಿತ ವರ್ಗೀಕರಣ  ಉದಾ: ಕೌಶಲ್ಯ ಅಭಿವೃದ್ಧಿ ತರಬೇತಿ, ಉತ್ಪಾದನೆಗಳ ಶ್ರೇಣಿ.
ಹೆಚ್ಚು ಜನ ಬರುವ ಕಡೆ ಮಾರುಕಟ್ಟೆ ತೆರೆಯುವುದು.
ಆದುದರಿಂದ ಸ್ವ ಸಹಾಯ ಗುಂಪುಗಳಿಗೆ ಸತತವಾಗಿ ಸಹಾಯ ಹಾಗೂ ಮಾರ್ಗದರ್ಶನ ನೀಡಬೇಕಾಗುತ್ತದೆ. ಇದರಿಂದ ತಯಾರಿಸಿದ ವಸ್ತುಗಳ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಅಂತೆಯೇ ಮೊದಲ ಆದ್ಯತೆಯಾಗಿ ಉತ್ಪನ್ನಗಳಿಗೆ ಮಾರುಕಟ್ಟೆ ತರಬೇತಿ ಹಾಗೂ ಗುಣಮಟ್ಟ ಸುಧಾರಿಸಲು ಕಾರ್ಯಕ್ರಮವನ್ನು ಏರ್ಪಡಿಸಿದೆ. ಕಾರ್ಯಾಗಾರದಲ್ಲಿ ಚರ್ಚಿಸಿ ಸ್ವ ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳಾ ಸೂಪರ್ ಮಾರ್ಕೆಟ್ಟನ್ನು ಸ್ಥಾಪಿಸಲು ಉದ್ದೇಶಿಸಿದೆ. ಸರ್ಕಾರೇತರ ಸಂಸ್ಥೆಯ ಮೂಲಕ ಮಾರುಕಟ್ಟೆಯ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು, ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಗುಣಮಟ್ಟ ಹಾಗೂ ಮಾರಾಟ ಮಾಡಲು ಸಹಾಯ ಮಾಡಬೇಕೆಂದು ಸೂಚಿಸಿದೆ. ಈ ಕೆಲಸಕ್ಕೆ ಒಂದು ಸಂಸ್ಥೆ ಮುಂದೆ ಬಂತು. ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಈ ನಿಟ್ಟಿನಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರದ ವತಿಯಿಂದ ಗುಲ್ಬರ್ಗಾ ನಗರದ ಜನತಾ ಬಜಾರ್ ಮೇಲಿನ ಅಂತಸ್ತಿನಲ್ಲಿ ಕಟ್ಟಡವನ್ನು ಲೀಸ್ ಆಧಾರದ ಮೇಲೆ(2,300 ಚದರ ಅಡಿ) ಸ್ಥಳ ಪಡೆದು ಮಹಿಳಾ ಸೂಪರ್ ಮಾರ್ಕೆಟ್ ಅನ್ನು ಸ್ಥಾಪಿಸಲಾಯಿತು. ಸರ್ಕಾರೇತರ ಸಂಸ್ಥೆಯಾದ ಶಿವರುದ್ರ  ಟ್ರಸ್ಟ್‌ಗೆ ಈ ಮಾರುಕಟ್ಟೆಯ ನಿರ್ವಹಣೆಯ ಜವಾಬ್ದಾರಿಯನ್ನು ನಡೆಸುವ ಅಧಿಕಾರವನ್ನು ವಹಿಸಿಕೊಟ್ಟು, ಸ್ವಸಹಾಯ ಗುಂಪುಗಳ ಉತ್ಪಾದನೆಯ ಮೌಲ್ಯ ವರ್ಧಿಸಲು ಹಾಗೂ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡಲಾಯಿತು. ಜುಲೈ 2009 ರ ಅಂತ್ಯಕ್ಕೆ ಮಹಿಳಾ ಸೂಪರ್ ಮಾರ್ಕೆಟ್ ಕಾರ್ಯರೂಪಕ್ಕೆ ಬಂದಿದ್ದು, ಅದರಲ್ಲಿ ಸ್ವಸಹಾಯ ಗುಂಪುಗಳ, ಸದಸ್ಯರುಗಳಿಗೆ ಬೇಕಾಗುವ ಮಳಿಗೆಗಳನ್ನು ವಶಪಡಿಸಿಕೊಂಡಿರುತ್ತಾರೆ. ಯುಗಾಂತ್ರಿ ಎಂಬ ಮಹಿಳೆ ಇದರಲ್ಲಿ ವಿಶೇಷ ಆಸಕ್ತಿ ವಹಿಸಿದರು.
 ಮಹಿಳಾ ಸ್ವಸಹಾಯ ಗುಂಪುಗಳಿಗೆ ಉತ್ತೇಜನ ನೀಡುವುದಕ್ಕಾಗಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಒಂದು ಕೇಂದ್ರ ಇತ್ತು. ಅದರ ಮೂಲಕ ಮಹಿಳಾ ಮಾರುಕಟ್ಟೆ ಸ್ವಸಹಾಯ ಗುಂಪುಗಳಿಗೆ ಆರ್ಥಿಕವಾಗಿ ಐವತ್ತು ಸಾವಿರ ರು.ನಿಂದ ಒಂದು ಲಕ್ಷದವರೆಗೆ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಿಂದ ಸಹಾಯ ದೊರಕಿಸಿಕೊಟ್ಟೆವು. ಮಹಿಳಾ ಮಾರುಕಟ್ಟೆಗೆ ಒಂದು ವರ್ಷದ ಅವಧಿಯವರೆಗೆ ಬಾಡಿಗೆ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ಸೇರಿ ಒಟ್ಟು ಖರ್ಚು ಸುಮಾರು ರೂ. 33,000- ಗಳ ಪ್ರತಿತಿಂಗಳ ಜವಾಬ್ದಾರಿಯನ್ನು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರ ವಹಿಸಿಕೊಂಡಿತ್ತು. ಮುಂದೆ ಬಾಡಿಗೆಯ ಖರ್ಚನ್ನು ಸ್ವತಃ ಸ್ವಸಹಾಯ ಸಂಘಗಳ ಸದಸ್ಯರು ಭರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು.
ಮಾರುಕಟ್ಟೆಯ ಹೊಸ ವಿಧಾನಗಳನ್ನು ಕಲಿಸಲು ಶರಣಬಸವೇಶ್ವರ ಸಂಸ್ಥೆಯ ಎಂ.ಎ. ಮತ್ತು  ಬಿ.ಎ. ವಿದ್ಯಾರ್ಥಿಗಳನ್ನು  ಗೊತ್ತುಮಾಡಿಕೊಳ್ಳಲಾಯಿತು. ಹತ್ತು ಯುವತಿಯರು ಮತ್ತು ಹತ್ತು ಯುವಕರು ಪ್ರತಿಯೊಬ್ಬ ಮಹಿಳೆಯ ಜೊತೆಯಲ್ಲಿ ಕುಳಿತುಕೊಂಡು ಅವರ ಉತ್ಪನ್ನಗಳ ಫೋಟೋಗಳನ್ನು ತೆಗೆದರು. ಆ ಉತ್ಪನ್ನಗಳ ಮಾಹಿತಿ ಕೈಪಿಡಿಯನ್ನು ತಯಾರು ಮಾಡಿದರು. ಅವುಗಳ ಬೆಲೆ, ಉತ್ಪನ್ನಗಳ ವಿಷಯ, ಅವುಗಳ ವಿಶೇಷತೆ ಮುಂತಾದ ಮಾಹಿತಿಗಳೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಹೊರಕವಚಗಳನ್ನು ತಯಾರಿಸುವುದರಿಂದ ಮಾರಾಟ ಸುಲಭವಾಗುವಂತೆ ಮಾಡಿದರು. ಪ್ರತಿಯೊಬ್ಬರಿಗೆ ಒಂದು ಸಂದರ್ಶನದ ಕಾರ್ಡುಗಳನ್ನು ಕೊಟ್ಟು, ಮುಂದಿನ ದಿವಸಗಳಲ್ಲಿ ಇಂಟರ್‌ನೆಟ್ ಸಹಾಯದೊಂದಿಗೆ ಮಾರಾಟ ಮಾಡಲು ಯೋಚಿಸಲಾಯಿತು. ಅವರ ಪ್ರಾಂಶುಪಾಲರಾದ ಗಣಪತಿಯವರು ಸ್ವತಃ ಈ ಕಾರ್ಯ ನಿಯೋಜನೆಯ ಬಗ್ಗೆ ತುಂಬಾ ಆಸಕ್ತಿ ವಹಿಸಿದರು. ಸುಮಾರು ಒಂದು ತಿಂಗಳ ನಂತರ ವಿದ್ಯಾರ್ಥಿಗಳು ಈ ಮಹಿಳೆಯರಿಗಾಗಿ ವ್ಯಾಪಾರಾಭಿವೃದ್ಧಿಯ ಯೋಜನೆಗಳನ್ನು ರಚಿಸಿದರು. ಇದು ನಿಜವಾಗಿ ಒಂದು ವಿನೂತನ ಪ್ರಯತ್ನವಾಯಿತು. ಯಾವುದೇ ಸಲಹಾಕಾರರ ಮೇಲೆ ಹಣವನ್ನು ಖರ್ಚು ಮಾಡದೆ ಮಹಿಳೆಯರ ಬೆಳವಣಿಗೆಯೂ ಆಯಿತು ಮತ್ತು ಉತ್ಸಾಹೀ ಯುವ ವಿದ್ಯಾರ್ಥಿಗಳ ಪ್ರಾಮಾಣಿಕ ಕಲಿಕೆಯೂ ಆಯಿತು.
ಸ್ವಸಹಾಯ ಗುಂಪುಗಳು ತಯಾರಿಸಿದ ಶೇಕಡಾ ಎಂಭತ್ತರಷ್ಟು ಉತ್ಪನ್ನಗಳು ಸಾಂಪ್ರದಾಯಿಕ ವಸ್ತುಗಳಾಗಿರುತ್ತವೆ. ಸ್ವಸಹಾಯ ಗುಂಪುಗಳಿಗೆ ಆಧುನಿಕ ವಸ್ತುಗಳು ತಯಾರಿಸಲು ತರಬೇತಿ ಇರುವುದಿಲ್ಲ. ಅವರಿಗೆ ಸರಿಯಾದ ತರಬೇತಿ ಹಾಗೂ ಅನುಕೂಲ ಮಾಡಿಕೊಟ್ಟಲ್ಲಿ ಹೊಸ ವಸ್ತುಗಳನ್ನು, ಉತ್ಪನ್ನಗಳನ್ನು ತಯಾರಿಸಲು ಹೊಸ ದಾರಿಗಳನ್ನು ಅನುಸರಿಸಬಹುದು. ಸ್ವ ಸಹಾಯ ಗುಂಪುಗಳಿಗೆ ಬ್ಯಾಚ್ ಪೇಪರ್ ಬ್ಯಾಗ್ಸ್, ಸಿದ್ದ ಉಡುಪಗಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ ಮುಂತಾದವುಗಳ ತರಬೇತಿಯನ್ನು ನೀಡಲು ಆಯೋಜಿಸಲಾಯಿತು.
ಮುಂದಿನ ದಿನಗಳಲ್ಲಿ ವಿವಿಧ ಉತ್ಪನ್ನಗಳು ಹಾಗೂ ಹೆಚ್ಚಿನ ಸ್ವಸಹಾಯ ಗುಂಪುಗಳನ್ನು ಸೇರಿಸಿ ಮಹಿಳಾ ಮಾರ್ಕೆಟ್ ವಿಸ್ತರಿಸುವುದು, ಹೈದ್ರಾಬಾದ್ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಯೋಜನೆಯನ್ನು ವಿಸ್ತರಿಸುವುದು, ಸ್ವಸಹಾಯ ಗುಂಪುಗಳಿಗೆ ಸೂಪರ್ ಮಾರ್ಕೆಟ್‌ನ ಸ್ವಂತ ನಿರ್ವಹಣೆ ಕುರಿತು ತರಬೇತಿ ನೀಡುವುದು, ಸರ್ಕಾರೇತರ ಸಂಸ್ಥೆಗಳ ಸಹಾಯವಿಲ್ಲದೆ ಸ್ವಸಹಾಯ ಗುಂಪುಗಳು ಸ್ವಂತ ಸೂಪರ್ ಮಾರ್ಕೆಟ್ ನಡೆಸಿಕೊಂಡು ಹೋಗುವಂತೆ ಮಾಡುವುದರ ಬಗ್ಗೆ ಕನಸು ಕಂಡಿದ್ದೆ.

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.