ಈ ಕೈಗಡಿಯಾರಕ್ಕೆ ಕೀಲಿ ಕೊಡುವುದು ಸಾಧ್ಯವಾದರೆ ಅದು ಕಾಲದೊಂದಿಗೆ ಸೆಣೆಸುವ ಅಂತಃಶಕ್ತಿಗೆ ಸಾಕ್ಷಿ

ಬೆಂಗಳೂರಿನಲ್ಲಿ 60 - 70 ರ ದಶಕದಲ್ಲಿ ಆರಂಭಗೊಂಡ ಹಲವು ಬೃಹತ್ ಕೇಂದ್ರೋದ್ಯಮಗಳು ನಗರವನ್ನು ಒಂದು ದೊಡ್ಡ ಕಾರ್ಖಾನೆಗಳ ನಗರವಾಗಿಯೇ ಮಾಡಿತು. ಹೆಚ್.ಏ.ಎಲ್, ಐ.ಟಿ.ಐ, ಬಿ.ಇ.ಎಲ್, ಬಿಹೆಚ್.ಇ.ಎಲ್, ಬಿ.ಇಎಮ್.ಎಲ್ ಹೀಗೆ ಪ್ರತಿಯೊಂದೂ ತಮ್ಮದೇ ಆದ ಉತ್ಪನ್ನಗಳ ತಯಾರಿಕೆಯಿಂದ ದೇಶದ ಆರ್ಥಿಕ ಪ್ರಗತಿಗೆ ಅನುಪಮ ಕಾಣಿಕೆಯನ್ನೇ ನೀಡಿವೆ. ಪ್ರತಿಯೊಂದೂ ಒಂದೊಂದು ರತ್ನಗಳೇ. ಇವುಗಳ ಸಾಲಿಗೆ ಹೆಚ್.ಎಮ್.ಟಿ ಕಾರ್ಖಾನೆ ಕೂಡ ಸೇರುತ್ತದೆ. ಮೊದಲಿಗೆ ಯಂತ್ರೋಪಕರಣ ತಯಾರಿಕೆಯಿಂದ ಪಾದಾರ್ಪಣೆ ಮಾಡಿದ ಹೆಚ್.ಎಮ್.ಟಿ ಕ್ರಮೇಣ ವಿದ್ಯುತ್ ದೀಪಗಳು ಮೊದಲಾಗಿ ಟ್ರಾಕ್ಟರ್ನಂತಹ ದೊಡ್ಡ ಸಾಧನಗಳೇ ಅಲ್ಲದೇ ಕೈ ಗಡಿಯಾರ ತಯಾರಿಕೆಯಲ್ಲಿ ಮುಂಚೂಣಿ ವಹಿಸಿತ್ತು. ಹೆಚ್.ಎಮ್.ಟಿ ಎಂಬ ಹೆಸರಿನ ಕಿಮ್ಮತ್ತು (ಬ್ರಾಂಡ್ ಇಮೇಜ್) ಈ ಕಾರ್ಖಾನೆಯಲ್ಲಿ ತಯಾರಾದ ವಸ್ತುಗಳಿಗೆ ದೊರೆತಿದ್ದೇ ಈ ಸಮಯ ಮಾಪಕ ಗಳಿಂದ. ಇದು ಉತ್ತುಂಗಕ್ಕೆ ಏರಲು ಹಲವಾರು ಹಿರಿಯ ಅಧಿಕಾರಿಗಳಿಂದ ಮೊದಲಾಗಿ ಸಾವಿರಾರು ಜನ ವಿವಿಧ ಮಜಲಿನ ಕೆಲಸಗಾರರ ಮತ್ತು ಇತರೆ ಸಣ್ಣ ಕೈಗಾರಿಕಾ ಘಟಕಗಳು ಇದಕ್ಕೆ ಪೂರಕವಾಗಿ ಮಾಡಿದ ಪರಿಶ್ರಮ ಕಾರಣ.
ಈ ಕೈ ಗಡಿಯಾರ ವಿಭಾಗ ಒಮ್ಮೆ ತನ್ನ ಅಂಗ ಸಂಸ್ಥೆಗಳಿಗೆ ಆಸರೆಯಾಗಿದ್ದಿತು. ಆದರೆ, ಅದರ ಈಗಿನ ಪರಿಸ್ಥಿತಿಯಲ್ಲಿ ತನ್ನದೇ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕಾಗಿದೆ. ಇದೊಂದು ವಿಡಂಬನೆಯೇ ಸರಿ. ಇದಕ್ಕೆ ಕಾರಣ ಸರ್ಕಾರವೂ ಸೇರಿದಂತೆ ಇದನ್ನು ಮುನ್ನಡೆಸಬೇಕಾಗಿರುವವರು ಅನುಸರಿಸುತ್ತಿರುವ ಅಸಮರ್ಪಕ ನೀತಿಗಳು. ಸಂಸ್ಥೆಯ ನೀತಿ ನಿರೂಪಕರಿಗೆ ತಮ್ಮ ವಸ್ತುಗಳ ಮಾರುಕಟ್ಟೆಯ ಮನಸ್ಥಿತಿಯನ್ನೇ ತಿಳಿದುಕೊಳ್ಳುವ ಇರಾದೆ ಇದ್ದಂತಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಜನ ಸಾಮಾನ್ಯರು ಬಳಸುವ ವಸ್ತುಗಳ ತಯಾರಿಕೆಯಲ್ಲಿ ಹೆಚ್.ಎಮ್.ಟಿ ಬಿಟ್ಟರೆ ಐ.ಟಿ.ಐ ಮಾತ್ರವಿದ್ದಿತು. ಅಸಮರ್ಪಕ ನೀತಿಯಿಂದಾಗಿ ಇವೆರಡೂ ತಯಾರಿಕ ಸಂಸ್ಥೆಗಳೂ ಮಾರುಕಟ್ಟೆಯಲ್ಲಿ ತಮ್ಮ ಉಳಿವನ್ನೇ ಕಳೆದುಕೊಂಡಿದೆ. ಕೆಲವು ವರ್ಷಗಳ ಹಿಂದೆ ಎಚ್.ಎ.ಎಲ್ ಕೂಡ ಕೆಲಸಗಾರರಿಗೆ ಬಹುಪಾಲು ಕೆಲಸವಿಲ್ಲದೇ ಇರುವಂತೆ ಮಾಡಿತ್ತು. ಆದರೆ, ಈಗ ಅದು ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. ಎಚ್.ಎ.ಎಲ್ನಂತಹ ಸೀಮಿತ ಮಾರುಕಟ್ಟೆ ಇರುವ ತಯಾರಿಕ ಸಂಸ್ಥೆ ಔನತ್ಯದ ದಿನಗಳನ್ನು ಕಾಣ ಬಹುದಾದರೆ ವಿಸ್ತೃತ ಮಾರುಕಟ್ಟೆ ಇರುವ ಎಚ್.ಎಮ್.ಟಿ ಯ ಯಂತ್ರೋಪಕರಣ ಮತ್ತು ಗಡಿಯಾರ ಘಟಕಗಳಿಗೆ ಇದು ಸಾಧ್ಯವಾಗುವುದಿಲ್ಲವೇ?
ಮಾರುಕಟ್ಟೆಯಲ್ಲಿ ಕೈ ಗಡಿಯಾರಗಳು ಸದಾ ಕಾಲ ಬೇಡಿಕೆ ಹೊಂದಿದೆ. ಇಲ್ಲಿ ಯಾವಾಗಲೂ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರೆ ಇದ್ದೇ ಇದೆ. ಎಂಭತ್ತರ ಆಸುಪಾಸಿನಲ್ಲಿ ಕ್ವಾಟ್ಚ್ರ್ ಗಡಿಯಾರಗಳ ತಯಾರಿಕೆ ಆರಂಭಗೊಂಡ ನಂತರ ಮಾರುಕಟ್ಟೆ ಹೊಸತನವನ್ನೇ ಕಂಡುಕೊಂಡಿತು. ಈ ಗಡಿಯಾರಗಳ ಜೋಡಣೆ ಅದರ ದೊಡ್ಡಕ್ಕನಾದ ಕೀಲಿ ಕೊಡುವ ತಯಾರಿಕೆಗೆ ಹೋಲಿಸಿದರೆ ಕಷ್ಟಕರವಲ್ಲ. ಜೊತೆಗೆ ತೊಂಭತ್ತರ ದಶಕದಲ್ಲಿ ಸುಲಭಗೊಂಡ ದೇಶದ ಆರ್ಥಿಕ ನೀತಿಗಳು ಇಂತಹ ಗಡಿಯಾರಗಳ ತಯಾರಿಕೆಗೆ ಉತ್ತೇಜನವಾಯಿತು. ಇವುಗಳು ಹಲವು ನಮೂನೆಯಲ್ಲಿ ಸಿಗುವಂತಾಗಿ ಕೈ ಗಡಿಯಾರದ ಮಾರುಕಟ್ಟೆಗೆ ಮತ್ತು ಅದನ್ನು ಧರಿಸುವವರ ಕಲ್ಪನೆಗೆ ಹೊಸ ಆಯಾಮ ಕೊಟ್ಟಂತಾಯಿತು.
ಎಚ್.ಎಮ್.ಟಿ ಯಲ್ಲಿ ಆಡಳಿತ ನಡೆಸುವ ಹಿರಿಯ ಅಧಿಕಾರಿ ವರ್ಗ ಕಾಲಾಂತರದಲ್ಲಿ ಮಾರುಕಟ್ಟೆಯ ನಾಡಿಯನ್ನು ಗುರುತಿಸುವಲ್ಲಿ ವಿಫಲವಾಗಿದ್ದೇ ಅಲ್ಲದೇ ಆ ಅಂಗಳದ ತನ್ನ ಪ್ರತಿಸ್ಫರ್ಧಿಗಳಂತಿದ್ದವರ ಬಗ್ಗೆ ಉಡಾಫೆ ಮನೋಭಾವ ತಾಳಿತು. ಇದೇ ಅಲ್ಲದೇ ಇನ್ನೂ ಹಲವು ಹತ್ತು ಕಾರಣಗಳು ಇದು ಮಾರುಕಟ್ಟೆ ಯಲ್ಲಿನ ತನ್ನ ಸ್ಥಾನವನ್ನು ಕಳೆದುಕೊಳ್ಳಲು ಕಾರಣವಾಯಿತು. ಇವರುಗಳು ತನ್ನ ನಂಬಿಕಾರ್ಹ ಗ್ರಾಹಕ ವರ್ಗವನ್ನು ಹೇಗೆ ತನ್ನೆಡೆಗೆ ಸೆಳೆಯಬೇಕು ಎಂಬ ವಿಚಾರದಲ್ಲಿ ಸೂಕ್ತ ತಂತ್ರ ರೂಪಿಸುವಲ್ಲಿ ಪ್ರಯತ್ನವನ್ನೇ ಮಾಡಲಿಲ್ಲ. ಜೊತೆಯಲ್ಲಿ ತನ್ನಲ್ಲಿದ್ದ ಕುಶಲ ಕೆಲಸಗಾರರನ್ನು ಅಕಾರಣವಾಗಿ ದೂರ ಮಾಡಿಕೊಂಡಿತು ಎಂಬ ವಿಚಾರಗಳೂ ಸಂಸ್ಥೆಯ ಇಂದಿನ ಸ್ಥಿತಿಗೆ ಕಾರಣಗಳಾಗುತ್ತದೆ.
ಈ ನೀಳ್ಗತೆಯ ಎಚ್ಎಮ್ಟಿ ತನ್ನ ಹಿಂದಿನ ದಿನಗಳಿಗೆ ಬರಲು ಖಂಡಿತಾ ಸಾಧ್ಯವಿದೆ. ಇದು ಸುಲಭವಾಗಿ ಆಗುವ ಕಾರ್ಯವಲ್ಲ. ಅದಕ್ಕೆ ಬೇಕಾಗಿರುವುದು ಸಮರ್ಪಣಾ ಭಾವದಿಂದ ಪರಿಶ್ರಮ ವಹಿಸಿ ಕೆಲಸ ರೂಪಿಸಿ ಮಾಡುವ ಆಡಳಿತ ವರ್ಗ.
ಮೊಬೈಲ್ ಮತ್ತಿತರ ಆಧುನಿಕ ಉಪಕರಣಗಳು ಜನಸಾಮಾನ್ಯರ ಕೈಯಲ್ಲಿ ಬಂದಿದ್ದರೂ ಕೈ ಗಡಿಯಾರದ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇದೆ ಎಂದರೆ ಅತಿಶಯೋಕ್ತಿ ಅಲ್ಲ. ಅದಿನ್ನೂ ಮಾರುಕಟ್ಟೆಯಲ್ಲಿ ತನ್ನ ಪಾದವನ್ನು ಗಟ್ಟಿಯಾಗಿಯೇ ಊರಿ ನಿಂತಿದೆ ಎನ್ನ ಬಹುದು. ಈಗಲೂ ಸಹ ಯಾವುದೆ ವಯಸ್ಸಿನವರಾಗಿರಲಿ ಗಂಡು ಅಥವ ಹೆಣ್ಣೇ ಆಗಿರಲಿ ಉತ್ತಮ ಮತ್ತು ಆಕರ್ಷಕ ಕೈಗಡಿಯಾರವನ್ನು ಹೊಂದಿರುವುದು ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈಗಂತೂ ಅದೊಂದು ಫ್ಯಾಷನ್ ಆಭರಣವಾಗಿದ್ದು, ತಮ್ಮ ಪೋಷಾಕಿಗೆ ಮತ್ತು ಭಾಗವಹಿಸುವ ಸಮಾರಂಭಗಳಿಗೆ ತಕ್ಕಂತೆ ಸೂಕ್ತ ಕೈ ಗಡಿಯಾರಗಳನ್ನು ಧರಿಸುವುದು ಸ್ಟೈಲ್ ಸ್ಟೇಟ್ಮೆಂಟ್ ಎನ್ನಿಸಿಕೊಳ್ಳುತ್ತದೆ.
ಇತ್ತೀಚಿನ ಅನೇಕ ಮಾರುಕಟ್ಟೆ ಸಮೀಕ್ಷೆಗಳಂತೆ ಸ್ತ್ರೀಯರೂ ಸಹ ತಾವು ಧರಿಸುವ ಕೈ ಗಡಿಯಾರಗಳ ಡಯಲ್ ದೊಡ್ಡದಾಗಿರ ಬೇಕೆಂದು ಅಪೇಕ್ಷಿಸುತ್ತಾರೆ. ಹೀಗಾಗಿ ಅನೇಕ ವಿಶ್ವ ವಿಖ್ಯಾತ ಗಡಿಯಾರ ತಯಾರಕರು ಈ ಹೊಸ ಬದಲಾವಣೆಗೆ ತಕ್ಕಂತೆ ತಮ್ಮ ಗಡಿಯಾರಗಳ ಮುಖ(ಡಯಲ್) ಅನ್ನೇ ದೊಡ್ಡದಾಗಿಸುತ್ತಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿ ಕೀಲಿ ಕೊಡುವ ಕೈ ಗಡಿಯಾರಗಳ ತಯಾರಿಕೆಯಲ್ಲಿ ಎಚ್.ಎಮ್.ಟಿ ಬಿಟ್ಟರೆ ಇನ್ನೊಂದಿಲ್ಲ. ಅದಕ್ಕೆ ಬೇಕಾದ ತಾಂತ್ರಿಕ ಜ್ಞಾನ ಮತ್ತು ಯಂತ್ರೋಪಕರಣಗಳು ಇಲ್ಲಿ ಮಾತ್ರ ಲಭ್ಯ. ತಯಾರಿಕೆಯ ಮೊದಲ ದಿನದಿಂದಿಲೇ ಈ ರೀತಿಯ ಮೆಕ್ಯಾನಿಕಲ್ ಗಡಿಯಾರಗಳು ಆ ಸಂಸ್ಥೆಯ ಹೆಮ್ಮೆಯ ಕೊಡುಗೆ ಎನ್ನಬಹುದು. ಒಂದು ಸಮೀಕ್ಷೆಯಂತೆ ಈ ಮಾದರಿ ಗಡಿಯಾರಗಳಿಗೆ ಈಗಲೂ ಬೇಡಿಕೆಯಿದ್ದು ಸಂಸ್ಥೆ ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಅನೇಕ ನಮೂನೆಗಳ ಗಡಿಯಾರಗಳು ಮಾರುಕಟ್ಟೆಯಲ್ಲಿ ಇದ್ದರೂ ಮತ್ತೆ ಮತ್ತೆ ಹೊಸತನವನ್ನು ಅಪೇಕ್ಷಿಸುತ್ತಿರುವುದು ಈ ಮಾರುಕಟ್ಟೆಯ ಒಂದು ವಿಶೇಷ. ಹಿಂದೆಯೇ ಹೇಳಿದಂತೆ ಕೈ ಗಡಿಯಾರಗಳ ಬೇಡಿಕೆ ಪೂರೈಕೆ ಮಧ್ಯೆ ಬಹಳ ಅಂತರವಿದ್ದೇ ಇದೆ. ಎಷ್ಟೇ ಹೊಸ ನಮೂನೆಗಳು ಬಂದರೂ ಗ್ರಾಹಕರ ಆಸೆಯನ್ನು ತಣಿಸುವುದು ಸಾಧ್ಯವಾಗುತ್ತಿಲ್ಲ.
ಇಂತಹ ಸನ್ನಿವೇಶದಲ್ಲಿ ಎಚ್.ಎಮ್.ಟಿ ಈ ಅಂತರವನ್ನು ತುಂಬಲು ಖಂಡಿತಾ ಸಾಧ್ಯವಿದೆ. ತನ್ನ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಅದು ತನ್ನ ಮೂಲ ಮಂತ್ರವಾದ ಕೀಲಿ ಕೊಡುವ ಗಡಿಯಾರ, ಆಟೋಮ್ಯಾಟಿಕ್ ಗಡಿಯಾರಗಳ ತಯಾರಿಕೆಗೆ ಉತ್ತೇಜನ ಕೊಡುವುದರ ಬಗ್ಗೆ ಗಮನ ಹರಿಸಬೇಕು. ಇದರಿಂದ ಅದಕ್ಕೆ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆ ದೊರೆಯುತ್ತದೆ. ಇದರಲ್ಲಿ ಹೊಸ ಮಾದರಿ ನಮೂನೆಗಳನ್ನು ಆಕರ್ಷಕ ಬೆಲೆಯಲ್ಲಿ ದೊರಕುವಂತೆ ಮಾಡಿದರೆ ಅದರಿಂದ ಗ್ರಾಹಕರು ಅದನ್ನು ಕೊಳ್ಳಬಹುದು ಎನ್ನುವ ಮನಸ್ಸಿನಿಂದ ಕೊಳ್ಳಲೇಬೇಕು ಎಂಬ ನಿರ್ಧಾರ ಮಾಡುವಂತಾಗಬೇಕು. ಇದನ್ನು ಎಲೆಕ್ಟ್ರಾನಿಕ್ ಗಡಿಯಾರಗಳ ತಯಾರಿಕೆಯ ಜೊತೆಗೇ ಮಾಡಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ತುಂಬಿಕೊಳ್ಳಬಹುದು.
ಈ ಆಶಯಗಳು ನಿಜವಾಗಬೇಕಾದರೆ ಗುರಿ ಸಾಧಿಸಲೇ ಬೇಕು ಎಂಬ ಸಂಕಲ್ಪವಿರುವ ಅಧಿಕಾರಿ-ತಾಂತ್ರಿಕ ವರ್ಗ ಮತ್ತು ನೈಜ ಕಲ್ಪನೆಯುಳ್ಳ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಳ್ಳುವ ಚಾಕಚಕ್ಯತೆಯೂ ಮುಖ್ಯ. ಈ ರೀತಿಯ ಗೆಲುವಿನ ಹಾದಿ ನೈಸ್ರ್ಸ್ತೆಯಷ್ಟು ನುಣುಪಾಗಿರುವುದಿಲ್ಲ. ಆದರೆ ಅಡೆತಡೆಗಳನ್ನು ದಾಟಿ ಎಚ್ಎಮ್ಟಿಯಂಥ ಬ್ರಾಂಡ್ ಒಂದರ ಪುನರುಜ್ಜೀವನವನ್ನು ಸಾಧ್ಯ ಮಾಡಿದ್ದೇ ಹೌದಾದರೆ ಅದು ಕೇವಲ ಆ ಉದ್ದಿಮೆಯ ಯಶಸ್ಸು ಎನ್ನಿಸುವುದಿಲ್ಲ, ಬದಲಿಗೆ ಸಾರ್ವಜನಿಕ ವಲಯದ ಅಂತಃಶಕ್ತಿಯ ದರ್ಶನವಾಗುತ್ತದೆ. ಸರ್ಕಾರಕ್ಕೆ 'ಬ್ರಾಂಡ್' ಒಂದನ್ನು ಉಳಿಸುವ ಬೆಳೆಸುವ ಛಾತಿ ಇದೆ ಎಂದು ನಿರೂಪಿಸಿದಂತಾಗುತ್ತದೆ. ಇಂಥದೇ ಎಷ್ಟೋ ಉದ್ದಿಮೆಗಳಿಗೆ ನವಚೈತನ್ಯದ ಮಾದರಿ ಹಾದಿ ತೆರೆದುಕೊಂಡೀತು. ಇದು ಯಕಃಶ್ಚಿತ್ ಗಡಿಯಾರದ ಸಂಗತಿ ಅಲ್ಲವೇ ಅಲ್ಲ, ಕಾಲದ ಓಟದಲ್ಲಿ ಮರುಅನ್ವೇಷಣೆಯ ತಾಕತ್ತಿನ ಪ್ರದರ್ಶನ.
- ಕೆ.ಎಸ್.ಸೋಮೇಶ್ವರ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


