ಅಂಕಣಗಳು

ಈ ಜನಾಂಗಗಳ ಬಗ್ಗೆ ನಮಗೆಷ್ಟು ಗೊತ್ತು?

Published On :

ಈ ಜನಾಂಗಗಳು ಎಂತಹ ಸಂದರ್ಭದಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಅವರು ಜೀವನದ ಸನ್ನಿವೇಶಗಳಿಂದ ಪಲಾಯನ ಮಾಡುವುದಿಲ್ಲ. ಎಂಥದೇ ಕಠಿಣ ಪ್ರಸಂಗ ಬಂದರೂ ದೇವರ ಇಚ್ಛೆ ಎಂದೋ, ನಮ್ಮ ಹಣೆಯಬರಹ ಎಂದೋ ಆ ಕಠಿಣ ಸನ್ನಿವೇಶಗಳನ್ನು ಸ್ವೀಕರಿಸಿಬಿಡುತ್ತಾರೆ. ಇದರಿಂದಾಗಿ ಅವರು ಹತಾಶೆಯ ಪ್ರಪಾತಕ್ಕೆ ಬೀಳುವುದಿಲ್ಲ.
ಅಷ್ಟೇ ಅಲ್ಲ, ನಾಗರಿಕ ಸಮಾಜದಲ್ಲಿ, ಅದರಲ್ಲೂ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳಲ್ಲಿ ಹೆಚ್ಚಾಗಿ ಕಂಡುಬರುವ ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳು ಈ ಜನಾಂಗಗಳಲ್ಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಅನುಸರಿಸುವ ಆಹಾರ ಪದ್ಧತಿ ಎನ್ನುತ್ತಾರೆ ಅವರ ಮಧ್ಯೆ ಕೆಲಸ ಮಾಡುತ್ತಿರುವ ಹೆಗ್ಗಡದೇವನಕೋಟೆಯ ವಿವೇಕಾನಂದ ಯೂತ್ ಮೂವ್ಮೆಂಟ್ನ ಡಾ. ಬಾಲಸುಬ್ರಹ್ಮಣ್ಯ ಅವರು. ಈ ಜನಾಂಗಗಳು ತಮ್ಮ ಆಹಾರದಲ್ಲಿ ಕಾಡಿನಲ್ಲಿ ಸಿಗುವ ವಿವಿಧ ಬಗೆಯ ಸೊಪ್ಪುಗಳನ್ನು, ಕಂದಮೂಲಗಳನ್ನು ಮತ್ತು ಗಡ್ಡೆಗೆಣಸುಗಳನ್ನು ಪ್ರಧಾನವಾಗಿ ಬಳಸುತ್ತಾರೆ. ರಾಗಿ ಕೂಡ ಅವರ ಇನ್ನೊಂದು ಮುಖ್ಯ ಆಹಾರ. ಅಕ್ಕಿ, ಗೋಧಿ, ಸಕ್ಕರೆ ಮುಂತಾದವುಗಳ ಉಪಯೋಗ ತುಂಬ ಕಡಿಮೆ. ಇದು ಅವರ ಆರೋಗ್ಯಕ್ಕೆ ಕಾರಣ ಎನ್ನುವುದು ಡಾ. ಬಾಲಸುಬ್ರಹ್ಮಣ್ಯ ಅವರ ಅಭಿಪ್ರಾಯ.
ಯಾವುದೀ ಜನಾಂಗಗಳು? ಇವರ ಬಗ್ಗೆ ನಮಗೆಷ್ಟು ಗೊತ್ತಿದೆ? ನಗರವಾಸಿಗಳಿಗಂತೂ ಇವರ ಬಗ್ಗೆ ಹೆಚ್ಚಿಗೆ ತಿಳಿದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಆದರೆ ಗ್ರಾಮವಾಸಿಗಳಿಗೆ ಇವರ ಬಗ್ಗೆ ಕೆಲವು ಭಾಗ ಗೊತ್ತಿದೆ. ಇವರು ಯಾರೆಂದರೆ ವನವಾಸಿಗಳು. ಅರ್ಥಾತ್ ಸುದೂರದ ಗಿರಿ-ಕೊಳ್ಳಗಳಲ್ಲಿ, ವನ-ಕಾನನಗಳಲ್ಲಿ ವಾಸಿಸುವ ನಮ್ಮವರೇ ಆಗಿರುವ ಜನರು  ನಮಗೆ ಅಪರಿಚಿತರಾಗಿರುವ ಗಿರಿಜನರು. ಅವರ ವೈಶಿಷ್ಟ್ಯಗಳ ಬಗ್ಗೆ ಇನ್ನೂ ಕೆಲವು ಉದಾಹರಣೆಗಳು:
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವಾಸಿಸುವ ಸೋಲಿಗರದ್ದೊಂದು ವಿಶೇಷ. ಅವರು ರಾತ್ರಿ ಹೊತ್ತು ಕಣ್ಣಿಗೆ ಒಂದು ರೀತಿಯ ವನೌಷಧವನ್ನು ಹಚ್ಚಿಕೊಂಡರೆಂದರೆ ಕತ್ತಲಲ್ಲಿ ಬೆಳಕಿನ ಸಹಾಯವಿಲ್ಲದೆ ನಡೆದಾಡಬಲ್ಲರು. ಅಮಾವಾಸ್ಯೆಯ ಕತ್ತಲಲ್ಲಿ ಕೂಡ ಈ ಔಷಧದ ಸಹಾಯದಿಂದ ಅವರು ಕಾಡಿನಲ್ಲಿ ಸಂಚರಿಸುತ್ತಾರೆ ಎನ್ನುತ್ತಾರೆ ಸೋಲಿಗ ಸಮುದಾಯದ ಪ್ರಮುಖ ಪುಟ್ಟಸ್ವಾಮಿ. ಮೈಸೂರಿನಲ್ಲಿ ನಡೆದ ಸಮಾವೇಶ ಒಂದರಲ್ಲಿ ಅವರು ಈ ಅಂಶವನ್ನು ಬಹಿರಂಗಪಡಿಸಿದರು. ವನವಾಸಿಗಳಲ್ಲಿ ಎಂತಹ ಅದ್ಭುತ ವಿದ್ಯೆ ಹುದುಗಿದೆ ಎಂಬುದಕ್ಕೆ ಇದೊಂದು ನಿದರ್ಶನ. ಗಿರಿಜನರು ಸದೃಢ ಮೈಕಟ್ಟುಳ್ಳವರು. ಅವರ ಶಕ್ತಿ-ಸಾಮರ್ಥ್ಯಗಳು ಅದ್ಭುತ. ಆಟೋಟಗಳಲ್ಲಿ ವನವಾಸಿ ಮಕ್ಕಳನ್ನು ಸರಿಗಟ್ಟುವವರು ಇಲ್ಲವೇ ಇಲ್ಲ. ಯೋಗ್ಯ ತರಬೇತಿ ಸಿಕ್ಕರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಬಾಚಿಕೊಂಡು ತರಬಲ್ಲರು.
ವನವಾಸಿ ಪಂಗಡಗಳು ಮೌಲ್ಯಗಳಿಗೆ ಮಹತ್ವ ಕೊಡುತ್ತವೆ. ಇಲ್ಲೊಂದು ಉದಾಹರಣೆ ನೋಡಿ. ಕೆಲವು ವನವಾಸಿ ಪಂಗಡಗಳು ಸಾಕಿದ ಪ್ರಾಣಿಗಳನ್ನು ತಿನ್ನುವುದಿಲ್ಲ. ಆ ಕಾರಣಕ್ಕಾಗಿ ಅವರು ಕೊಲ್ಲುವುದಕ್ಕಾಗಿ ಪ್ರಾಣಿಗಳನ್ನು ಸಾಕುವುದಿಲ್ಲ. ಮನೆಯ ಮಕ್ಕಳಂತೆ ಪ್ರೀತಿಯಿಂದ ಸಾಕಿದ ಪ್ರಾಣಿಗಳನ್ನು ಕೈಯಾರೆ ಕೊಲ್ಲುವುದಾದರೂ ಹೇಗೆ? ಇದು ಅವರ ಹೃದಯವಂತಿಕೆ ಅಂಥ ವನವಾಸಿ ಪಂಗಡಗಳು ಸಂಪೂರ್ಣ ಸಸ್ಯಾಹಾರಿಗಳು ಎಂದೇನೂ ಅಲ್ಲ. ತಮಗೆ ಬೇಕೆಂದಾಗ ಕಾಡಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸ ತಿನ್ನುತ್ತಾರೆ. ಈ ಮಾತಿಗೆ ಒಂದು ನಿದರ್ಶನವೆಂದರೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ವಾಸಿಸುವ ಕುಣಬಿಗಳು.
ವನವಾಸಿಗಳಿಗೆ ಅವರದ್ದೇ ಆದ ಕಲೆಗಾರಿಕೆ ಇದೆ. ಪ್ರತಿಯೊಂದು ವನವಾಸಿ ಪಂಗಡಕ್ಕೂ ಅದರದ್ದೇ ಆದ ನೃತ್ಯ ಶೈಲಿಗಳಿರುತ್ತವೆ. ವಿಶೇಷ ಹಬ್ಬಗಳ ಸಂದರ್ಭದಲ್ಲಿ ನೃತ್ಯದ ಮೂಲಕ ತಮ್ಮ ದೇವರ ಆರಾಧನೆ ಮಾಡುವುದು ಮತ್ತು ಮನರಂಜನೆ ಪಡೆಯುವುದು ಅವರ ಕ್ರಮ.  ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳ ಡಮಾಮಿ ನೃತ್ಯ, ಗೌಳಿಗಳ ಪುಗಡಿ ನೃತ್ಯ, ಕುಂಬ್ರಿ ಮರಾಠಿಗಳ ವಿಶಿಷ್ಟ ಶೈಲಿಯ ಕುಣಿತ ಇವೆಲ್ಲ ಪ್ರಸಿದ್ಧಿ ಪಡೆದಿವೆ. ಹಾಲಕ್ಕಿ ಜನಾಂಗದ ಸುಗ್ಗಿ ಕುಣಿತವಂತೂ ರಾಷ್ಟ್ರದ ರಾಜಧಾನಿ ದಿಲ್ಲಿಗೂ ಹೋಗಿ ರಾಷ್ಟ್ರಪತಿ ಭವನದ ಅಂಗಳದಲ್ಲಿ ವಿಜೃಂಭಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪಸರಿಸಿರುವ ಗೌಳಿಗರು ನವರಾತ್ರಿಯ ಸಂದರ್ಭದಲ್ಲಿ ಇಡೀ ರಾತ್ರಿ ನೃತ್ಯ ಮಾಡುತ್ತಾರೆ. ಹೆಚ್ಚಿನ ಎಲ್ಲ ವನವಾಸಿ ಪಂಗಡಗಳಿಗೆ ಈ ರೀತಿ ನೃತ್ಯ ಮಾಡುವಾಗ ಆಯಾಸ ಇರುವುದಿಲ್ಲ. ವನವಾಸಿಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದ ಎಂಬುದು ಇನ್ನೊಂದು ಮುಖ್ಯ ಅಂಶ. ನೃತ್ಯ, ತಮ್ಮದೇ ಶೈಲಿಯ ಹಾಡುಗಾರಿಕೆ, ವಾದನಗಳ ನುಡಿಸುವಿಕೆ ಈ ಪೈಕಿ ಯಾವುದಾದರೂ ಒಂದರಲ್ಲಿ ಪರಿಣಿತಿಯನ್ನು ಗಳಿಸಿಕೊಂಡಿರುತ್ತಾರೆ.
ವನವಾಸಿ ಕ್ಷೇತ್ರ ಭಾರತೀಯ ಸಂಸ್ಕೃತಿಯ ತೊಟ್ಟಿಲು ಎನ್ನುತ್ತಾರೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ್ವರ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು. ಭಾರತೀಯ ಸಂಸ್ಕೃತಿಯು ವೇದ, ಉಪನಿಷತ್, ಪುರಾಣಗಳು, ಋಷಿಗಳ ತಪೋಜೀವನ, ಋಷಿಗಳ ಮಾರ್ಗದರ್ಶನದಲ್ಲಿ ರೂಪಗೊಂಡ ನಾಗರಿಕ ಜೀವನ ಇವುಗಳ ಒಟ್ಟೂ ಮೊತ್ತವಾಗಿದೆ. ವೇದ, ಉಪನಿಷತ್ಗಳೆಲ್ಲ ರಚನೆಯಾಗಿದ್ದುದು ವನಜೀವನದಲ್ಲಿ. ಎಷ್ಟರಮಟ್ಟಿಗೆ ಎಂದರೆ ವೇದ ಸಾಹಿತ್ಯದಲ್ಲಿ ಬರುವ ಒಂದು ಪ್ರಮುಖ ಭಾಗಕ್ಕೆ ಅರಣ್ಯಕಗಳೆಂದು ಹೆಸರು. ಅವನ್ನು ಜಗತ್ತಿಗೆ ನೀಡಿದ ಋಷಿಮುನಿಗಳ ಸಾಂಗತ್ಯದಲ್ಲೇ ಇದ್ದವರು ವನವಾಸಿಗಳು. ಋಷಿಗಳು ಪ್ರತಿಪಾದಿಸಿದ ಜೀವನಮೌಲ್ಯಗಳೆಲ್ಲ ಬೇರೆ ಬೇರೆ ಸ್ವರೂಪದಲ್ಲಿ ವನವಾಸಿ ಜೀವನಗಳಲ್ಲಿ ಇಂದಿಗೂ ಜೀವಂತವಾಗಿವೆ. ಇದರಲ್ಲಿ ಮುಖ್ಯವಾದದ್ದು ಅತಿಥಿ ದೇವೋಭವ ಎನ್ನುವುದು. ಭಾರತದ ಪೂರ್ವ ಭಾಗದಲ್ಲಿರುವ ಅದೆಷ್ಟೋ ವನವಾಸಿ ಪಂಗಡಗಳು ಇಂದಿಗೂ ಮನೆಗೆ ಬಂದ ಅತಿಥಿಗಳ ಪಾದ ತೊಳೆದು ಪೂಜಿಸುವ ಪದ್ಧತಿಯನ್ನು ಇಟ್ಟುಕೊಂಡಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ವನವಾಸಿ ಪಂಗಡಗಳು ತಾವು ಬೇಟೆಯಾಡಿದ ಪ್ರಾಣಿಯ ಮಾಂಸದ ಚೂರೊಂದನ್ನು ಮೊದಲು ಭೂಮಿತಾಯಿಗೆ ಅರ್ಪಿಸುವ ಪರಿಪಾಠವನ್ನಿಟ್ಟುಕೊಂಡಿವೆ. ಭೂಮಿಯನ್ನು ಮಾತೆ ಎಂದು ಪೂಜಿಸುವುದು ಋಷಿಪ್ರಣೀತ ಸಂಸ್ಕೃತಿಯ ಇನ್ನೊಂದು ಮೌಲ್ಯ. ಅದು ವನವಾಸಿ ಪಂಗಡಗಳಲ್ಲಿ ಹೇಗೆ ಅಭಿವ್ಯಕ್ತಿಗೊಂಡಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಸ್ವಲ್ಪ ತಮಾಷೆ ಎನಿಸಿದರೂ ಇಂತಹುದೆ ಇನ್ನೊಂದು ಉದಾಹರಣೆ ನೋಡಿ. ಕೆಲವು ವನವಾಸಿ ಪಂಗಡಗಳ ಜನರು ಕುಡಿತದ ಹವ್ಯಾಸವನ್ನಿಟ್ಟುಕೊಂಡಿರುತ್ತಾರೆ. ಅವರು ತಾವು ಕುಡಿತ ಆರಂಭಿಸುವ ಮುನ್ನ ಮದ್ಯದ ಕೆಲವು ಹನಿಗಳನ್ನು ಭೂಮಿತಾಯಿಗೆ ಅರ್ಪಿಸುತ್ತಾರೆ.
ಇದು ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದ ಘಟನೆ. ಹಳಿಯಾಳದ ಪರಶುರಾಮ ಎಂಬಾತ ವನವಾಸಿ ಕಲ್ಯಾಣದ ಪೂರ್ಣಕಾಲೀನ ಕಾರ್ಯಕರ್ತನಾಗಿ ಗುಂಡ್ಲುಪೇಟೆ ಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಮಧ್ಯರಾತ್ರಿಯ ಹೊತ್ತಿನಲ್ಲಿ ನಾಗರಹಾವು ಕಚ್ಚಿತು. ಆ ಊರಿನಲ್ಲಿ ಮದ್ದು ಕೊಡುವ ಒಬ್ಬ ವನವಾಸಿ ವೃದ್ಧೆ ಇದ್ದಳು. ಆಕೆ ಬಂದು ಪರಶುರಾಮನಿಗೆ ಚಿಕಿತ್ಸೆ ನೀಡಿದಳು. ಬಳಿಕ ಆಕೆ ಹೇಳಿದ್ದಿಷ್ಟು, ನಾನು ನೀಡಿದ ಚಿಕಿತ್ಸೆ ಕೇವಲ ವಿಷ ಏರದಂತೆ ಮಾತ್ರ ತಡೆಯಬಲ್ಲುದು. ಆದರೆ ಸಂಪೂರ್ಣ ವಿಷ ನಿವಾರಣೆ ಅದರಿಂದ ಸಾಧ್ಯವಾಗುವುದಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ ಒಬ್ಬ ವನವಾಸಿ ವೃದ್ಧನಿದ್ದಾನೆ. ಆತ ಸಂಪೂರ್ಣ ವಿಷ ನಿವಾರಣೆ ಮಾಡಬಲ್ಲ. ನೀವು ಹೋಗಿ ಆತನನ್ನು ಕರೆತನ್ನಿ. ಅದರಂತೆ ಊರಿನ ಜನ ಆ ವಿಷ ಚಿಕಿತ್ಸಕ ವನವಾಸಿ ವೃದ್ಧನಿದ್ದಲ್ಲಿಗೆ ಹೋಗಿ ಆತನನ್ನು ಕರೆದುಕೊಂಡು ಬಂದರು. ಇಷ್ಟಾಗುವಾಗ ಅನೇಕ ತಾಸುಗಳ ಸಮಯ ಸಂದಿತ್ತು. ಆ ವೃದ್ಧ ಬಂದವನು ವಿಷ ನಿವಾರಣೆಯ ಚಿಕಿತ್ಸೆ ನೀಡಿದ. ಅದು ಸಂಪೂರ್ಣ ಫಲಿಸಿತು. ಸ್ವಲ್ಪೇ ಕಾಲದಲ್ಲಿ ಪರಶುರಾಮ ಸಂಪೂರ್ಣ ಗುಣಮುಖನಾದ. ಇದು ನಡೆದದ್ದು ಸುಮಾರು ಒಂದು ದಶಕದ ಹಿಂದೆ.
ಭಾರತದಲ್ಲಿ ವನವಾಸಿಗಳ ಸುಮಾರು 400 ಕ್ಕೂ ಹೆಚ್ಚು ಜನಜಾತಿಗಳಿವೆ. ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗುಡ್ಡಗಾಡುಗಳಲ್ಲಿ ಮತ್ತು ವನಪ್ರದೇಶಗಳಲ್ಲಿ ವಾಸಿಸುವ ಭೀಲರು 50 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದು ವನವಾಸಿಗಳ ಪೈಕಿ ಅತಿದೊಡ್ಡ ಜನಜಾತಿ ಎನಿಸಿದ್ದಾರೆ. ಅಂಡಮಾನ್ ನಡುಗಡ್ಡೆಯಲ್ಲಿರುವ ಒಂದು ಜನಾಂಗ  ಗ್ರೇಟ್ ಅಂಡಮಾನೀಸ್ ಎಂದು ಇವರನ್ನು ಆಧುನಿಕರು ಕರೆಯುತ್ತಾರೆ  ಅತಿ ಸಣ್ಣ ಜನಜಾತಿಯಾಗಿದೆ. ಇವರ ಸಂಖ್ಯೆ ಕೇವಲ 20 ಎಂದು ಅಂದಾಜಿಸಲಾಗಿದೆ. ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ವನವಾಸಿ ಜನಜಾತಿಗಳಿವೆ. ವನವಾಸಿಗಳೇ ಬಹುಸಂಖ್ಯಾತರಾಗಿರುವ ರಾಜ್ಯಗಳೂ ಹಲವು ಇವೆ. ಜಾರ್ಖಂಡ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೊರಾಂ, ಮಣಿಪುರ ಮತ್ತು ಅಂಡಮಾನ ಹಾಗೂ ನಿಕೋಬಾರ್ ನಡುಗಡ್ಡೆಗಳು ವನವಾಸಿಗಳೇ ಬಹುಸಂಖ್ಯಾತರಾಗಿರುವ ಪ್ರಾಂತಗಳು. ನಮ್ಮ ದೇಶದ ಒಟ್ಟೂ ಜನಸಂಖ್ಯೆಯಲ್ಲಿ ವನವಾಸಿಗಳು ಸುಮಾರು 10 ಕೋಟಿಯಷ್ಟಿದ್ದಾರೆ. ಕರ್ನಾಟಕದಲ್ಲಿ ಇವರ ಸಂಖ್ಯೆ 60 ಲಕ್ಷಕ್ಕೆ ಹತ್ತಿರವಾಗಿದೆ. ನಮ್ಮ ರಾಜ್ಯದಲ್ಲಿ 50 ವನವಾಸಿ ಜನಜಾತಿಗಳಿವೆ. ಇವು ಮುಖ್ಯವಾಗಿ ಕಂಡುಬರುವುದು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ. ಚಾಮರಾಜನಗರ ಜಿಲ್ಲೆಯಿಂದ ಆರಂಭಿಸಿ ಬೆಳಗಾವಿ ಜಿಲ್ಲೆಯ ತನಕ ಸೋಲಿಗ, ಬೆಟ್ಟಕುರುಬ, ಜೇನುಕುರುಬ, ಯರವ, ಮಲೆಕುಡಿಯ, ಗೌಡ್ಲು, ಕೊರಗ, ಕುಂಬ್ರಿ ಮರಾಠಿ, ಹಸಲರು, ಕರಿಒಕ್ಕಲಿಗರು, ಸಿದ್ದಿ, ಗೌಳಿ, ಕುಣಬಿ, ಹಾಲಕ್ಕಿ ಒಕ್ಕಲು, ಗೊಂಡರು ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದಾಗಿದೆ. ರಾಜ್ಯದ ಬಯಲುಸೀಮೆಯಲ್ಲಿಯೂ ನಾಯಕ, ಬೇಡ, ರಾಜಗೊಂಡ ಮುಂತಾದ ಜನಜಾತಿಗಳಿವೆ.
ವನವಾಸಿಗಳನ್ನು ಸಮಾಜದ ಮುಖ್ಯವಾಹಿನಿಯ ಜನರು ತಮ್ಮ ಜೊತೆ ಕರೆದೊಯ್ಯಬೇಕಾಗಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ತಮ್ಮ ಸಂಗಡ ಅವರನ್ನೂ ಪಾಲುದಾರರನ್ನಾಗಿಸಬೇಕಾಗಿದೆ. ಮತಾಂತರಕ್ಕೆ ಪ್ರತಿಯಾಗಿ ತಮ್ಮ ಸಂಸ್ಕೃತಿಯಲ್ಲಿ ಅವರಿಗೆ ಸ್ವಾಭಿಮಾನ ಜಾಗೃತಿಯನ್ನು ಉಂಟುಮಾಡಬೇಕಾಗಿದೆ. ವಿದೇಶಿ ಕ್ರೈಸ್ತ ಮಿಶನರಿಗಳು ಅಥವಾ ಹಿಂಸಾವಾದಿಗಳಾದ ನಕ್ಸಲೀಯರ ಪ್ರಭಾವಕ್ಕೆ ಅವರು ಒಳಗಾಗದಂತೆ, ಅವರ ಕೈಯೊಳಗಿನ ದಾಳಗಳಾಗದಂತೆ ಅವರ ಸುತ್ತ ಸಾಂಸ್ಕೃತಿಕ ರಕ್ಷಣಾ ಕವಚವನ್ನು ನಿರ್ಮಿಸಬೇಕಾಗಿದೆ. ತಲೆತಲಾಂತರದಿಂದ ಅವರು ವಾಸಿಸುತ್ತಿರುವ ನೆಲದ ಮೇಲಿನ ಹಕ್ಕನ್ನು ಅವರಿಗೆ ದೊರಕಿಸಿಕೊಡಬೇಕಾಗಿದೆ. ಒಟ್ಟಾರೆ ಹೇಳುವುದಾದರೆ ವನವಾಸಿ-ಗ್ರಾಮವಾಸಿ-ನಗರವಾಸಿ ಎಲ್ಲರೂ ಭಾರತವಾಸಿಗಳು ಎಂಬ ಭಾವ ಜಾಗೃತವಾಗಬೇಕಾಗಿದೆ. ಆ ಕೆಲಸವನ್ನು ಕಳೆದ ಅರವತ್ತು ವರ್ಷಗಳಿಂದ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಮಾಡಿಕೊಂಡು ಬರುತ್ತಿದೆ. ವನವಾಸಿಗಳ ಮಟ್ಟಿಗೆ ಹೇಳುವುದಾದರೆ ಈ ಸಂಗತಿ ಅವರಿಗೆ ಬೆಳಕು ತೋರಿಸುವ ದಾರಿದೀಪವಾಗಿದೆ.

(ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ಸಂಸ್ಥಾಪಕರಾದ ಬಾಳಾಸಾಹೇಬ್ ದೇಶಪಾಂಡೆ ಅವರ ಜನ್ಮಶತಾಬ್ಧಿ ಆಚರಣೆ ಇಂದು ಮೈಸೂರಿನಲ್ಲಿ ನಡೆಯಲಿದ್ದು, ಆ ನೆನಕೆಗೆ ಪೂರಕ ಲೇಖನವಿದು.)

- ಸಚ್ಚಿದಾನಂದ ಹೆಗಡೆ
ವಿಶ್ವಸ್ತರು, ವನವಾಸಿ ಕಲ್ಯಾಣ, ಕರ್ನಾಟಕ

anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.