ಹಕ್ಕುಚ್ಯುತಿ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ನಿರ್ಬಂಧವೇಕೆ?
ನಾವು ಶಾಸಕಾಂಗ ವ್ಯವಸ್ಥೆಯನ್ನು ಬ್ರಿಟನ್ನಿಂದ ಎರವಲು ಪಡೆದಿದ್ದೇವೆ. ಬಕಿಂಗ್ ಹ್ಯಾಮ್ ಪ್ಯಾಲೆಸ್ನಲ್ಲಿ ಅಧಿವೇಶನ ಪ್ರಾರಂಭವಾದರೆ ಜಗತ್ತಿನ ದೃಷ್ಟಿ ಅತ್ತ ನೆಡುತ್ತದೆ. ಆದರೆ ನಮ್ಮಲ್ಲಿ ಸಂಸದೀಯ ನಡಾವಳಿಗಳು ಅವಸಾನದತ್ತ ಸಾಗಿವೆ. ಅವಕಾಶವಾದ ಮಸೂದೆ ಮಂಡನೆ ಮತ್ತು ಚರ್ಚೆ ಹೊರತುಪಡಿಸಿ ಮತ್ತೆ ಅಲ್ಲೇನು ಉಳಿದಿರುವುದಿಲ್ಲ. ಬಹುಪಾಲು ಮಸೂದೆಗಳು ಅಂಗೀಕಾರವಾಗುವುದು ಧ್ವನಿಮತದ ಮೂಲಕವೇ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಳಿವನ್ನು ಸೂಚಿಸುತ್ತದೆ. ಗಂಭೀರ ಚರ್ಚೆಗಳು, ವಾಸ್ತವ ಯೋಜನೆಗಳ ಸೃಷ್ಟಿಯ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತಿಲ್ಲ. ಮೊನ್ನೆ ಬೆಳಗಾವಿ ಶಾಸಕ ಸಾಂಬಾಜಿ, ಜನಪ್ರತಿನಿಧಿ ಕಾಯ್ದೆ 1951 ನ್ನು ಸ್ಪಷ್ಠವಾಗಿ ಉಲ್ಲಂಘಿಸಿ, ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿದಾಗ, ಆತನ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲಾಗದ ಶಾಸಕಾಂಗ ಸದನ, ಪ್ರಸ್ತುತ ಕಳಂಕಿತರು, ಭ್ರಷ್ಟಾಚಾರಿಗಳ ಬಗೆಗೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ, ಹಿರೇಮಠರವರ ಮೇಲೆ ಹಕ್ಕುಚ್ಯುತಿ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವುದು ವಿಪರ್ಯಾಸದ ಸಂಗತಿ. ಸಂವಿಧಾನದ 5 ರಿಂದ 11ನೇ ವಿಧಿಗಳ ಷರತ್ತಿನಂತೆ ಸಾಂಬಾಜಿಯ ಪೌರತ್ವ ಕಸಿದುಕೊಳ್ಳಲು ಅವಕಾಶವಿತ್ತು. ಬಂಧಿಸುವ ಅವಕಾಶವಿತ್ತು. ಆತನ ವಿಷಯದಲ್ಲಿ ತೋರದ ಜರೂರನ್ನು ಹಿರೇಮಠರ ಮೇಲೆ ತುರ್ತಾಗಿ ಹೇರುವ ಅಗತ್ಯವೇನಿತ್ತು?
ಭಾರತೀಯ ಶಾಸಕಾಂಗದ ಸದಸ್ಯನೊಬ್ಬ, ಸಮಿತಿ ಅಥವಾ ಕೌನ್ಸಿಲ್ ಅಥವಾ ಸದಸ್ಯನೊಬ್ಬನ ಹಕ್ಕು ಚ್ಯುತಿಯಾಗಿದೆ ಎಂದು ಪ್ರಶ್ನೆಯೆತ್ತಬಹುದು. ಈ ನಿಟ್ಟಿನಲ್ಲಿ ಸಂವಿಧಾನದ 105(2) ಮತ್ತು 194 ನೇ ವಿಧಿಗಳು ಶಾಸಕಾಂಗ ಸದಸ್ಯರಿಗೆ ವಿಶೇಷ ರಕ್ಷಣೆ ನೀಡಿವೆ ನಿಜ. ಆದರೆ ಜನಪ್ರತಿನಿಧಿ ದರೋಡೆ ಮಾಡಬಹುದೇ? ಭ್ರಷ್ಟಾಚಾರ ಮಾಡಬಹುದೇ? ಸಾರ್ವಜನಿಕ ಸ್ವತನ್ನು ಕಬಳಿಸಬಹುದೇ? ಯಾವುದೇ ಜನಪ್ರತಿನಿಧಿಯ ಅಕ್ರಮದ ವಿರುದ್ಧ ಸಾರ್ವಜನಿಕ ಧ್ವನಿ ಎತ್ತಬಾರದು ಎಂದು ಯಾವ ನಿಯಮ ಹೇಳುತ್ತದೆ? ಸಂವಿಧಾನವೇ 19(1)ಎ ನೇ ವಿಧಿಯಲ್ಲಿ ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವ ಪ್ರಯತ್ನವೇಕೆ ಮಾಡಲಾಗುತ್ತಿದೆ? ಹಾಗೆ ನೋಡಿದರೆ ತುರ್ತು ಪರಿಸ್ಥಿತಿ ವೇಳೆಯನ್ನು ಹೊರತುಪಡಿಸಿ, ಉಳಿದ ಯಾವುದೇ ಸಂದರ್ಭದಲ್ಲೂ ಶಾಸಕಾಂಗ ಅಥವಾ ಕಾರ್ಯಾಂಗಗಳಿಗೆ ಈ ಹಕ್ಕನ್ನು ನಿರ್ಬಂಧಿಸುವ ಅಧಿಕಾರ ಇಲ್ಲವೇ ಇಲ. ಜೊತೆಗೆ 1971 ರಿಂದ 24 ನೇ ತಿದ್ದುಪಡಿ ಅನ್ವಯ ಶಾಸಕಾಂಗ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಹೊಂದಿದ್ದರೂ, ಅದು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ 1975ರ ಕೇಶವಾನಂದ ಭಾರತಿ ಗ/ಖ ಕೇರಳ ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ಹಿನ್ನಲೆಯಲ್ಲಿ ಹಿರೇಮಠ್ರವರು ನ್ಯಾಯಾಲಯದ ಮೂಲಕ 32ನೇ ವಿಧಿಯನ್ವಯ ರಕ್ಷಣೆ ಪಡೆಯಬಹುದು. "ಹಿರೇಮಠ್ ಏನು ರಾಷ್ಟ್ರಪತಿಗಳೇ, ರಾಜ್ಯಪಾಲರೇ, ಮುಖ್ಯಮಂತ್ರಿಗಳೇ?" ಎಂದು ಪ್ರಶ್ನಿಸಲಾಗಿದೆ. ಆದರೆ ಹಿರೇಮಠ್ ಇದಾವುದು ಅಲ್ಲ, ಅವರು ಈ ರಾಷ್ಟ್ರದ ಸಾಮಾನ್ಯ ಪ್ರಜೆ. ಸಾಮಾನ್ಯಪ್ರಜೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ? ಇಷ್ಟಕ್ಕೂ ಹಿರೇಮಠ್ ಮಾಡಿರು ತಪ್ಪಾದರೂ ಏನು?
ಹಾಗೆ ನೋಡಿದರೆ ಸಂವಿಧಾನದ 14ನೇ ವಿಧಿಯನ್ವಯ ಸಾಮಾನ್ಯ ಪ್ರಜೆ ಮತ್ತು ರಾಷ್ಟ್ರಪತಿಯವರ ನಡುವೆ ಯಾವುದೇ ಬೇಧವಿಲ್ಲ. ಸಂವಿಧಾನದ 21 ನೇ ವಿಧಿಯು ನೀಡಿರುವ ವೈಯಕ್ತಿಕ ಸ್ವಾತಂತ್ರ್ಯದ ಅಡಿಯಲ್ಲಿ ಹಿರೇಮಠ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಹೀಗೆಯೇ ಇರಬೇಕು ಎಂದು ಹೇಳುವ ಅಧಿಕಾರ ಸದನಕ್ಕಿರುವುದಿಲ್ಲ. ಅದಾಗಲೇ ಹೇಳಿದಂತೆ ಈ ಹಕ್ಕನ್ನು ತುರ್ತುಪರಿಸ್ಥಿತಿಯ ವೇಳೆಯಲ್ಲಿಯೂ ನಿರ್ಬಂಧಿಸುವಂತಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಹಿಂದೆ ಅಕ್ರಮದ ವಿರುದ್ಧ ವರದಿ ನೀಡಿದ್ದ ವಿ.ಬಾಲಸುಬ್ರಮಣ್ಯರವರ ವಿರುದ್ಧವೂ, ಈ ಹಕ್ಕುಚ್ಯುತಿ ಅಸ್ತ್ರವನ್ನು ಬಳಸಲಾಗಿತ್ತು. ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಂಣ್ಯ ಅವರ ವಿರುದ್ಧ ಜುಲೈ ತಿಂಗಳಲ್ಲಿ ನಿಲುವಳಿ ತಾಳಲಾಗಿತ್ತು. ಇದಕ್ಕೆ ಕಾರಣವೇನು ಗೊತ್ತೆ? ಅವರು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಜಕಾರಣಿಗಳ ಪ್ರಮಾಣಿಕತೆಯನ್ನು ಪ್ರಶ್ನಿಸಿದ್ದರು. ಹಕ್ಕುಚ್ಯುತಿಯಡಿಯಲ್ಲಿ ಬಾಲಸುಬ್ರಮಣ್ಯಂ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಕೈ ಜೋಡಿಸಿದ್ದವು. ಇದೇನೇ ಇದ್ದರೂ ಹಿರೇಮಠರ ವಿಷಯದಲ್ಲಿ ನಾವು ಒದಂಶವನ್ನು ನೋಡಬೇಕು. ಸಾಂವಿಧಾನಿಕ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರ ಜನಪ್ರತಿನಿಧಿಗಳಿಗೆ ಇಲ್ಲ. ಹಿರೇಮಠರ ಆರೋಪದಲ್ಲಿ ಸತ್ಯಾಂಶವಿಲ್ಲದಿದ್ದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ. ಅದರ ಹೊರತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ನಡೆ ಸಕ್ರಮವಲ್ಲ. ಪ್ರಜೆಗಳ ಹಕ್ಕು ಕಸಿದುಕೊಳ್ಳಲು ನ್ಯಾಯಾಲಯ ಅವಕಾಶ ನೀಡುವುದಿಲ್ಲ. ಒಂದು ವೇಳೆ ಅನಧೀಕೃತವಾಗಿ ಹಿರೇಮಠ್ರ ಮೇಲೆ ಸದನ ಕ್ರಮ ಕೈಗೊಂಡರೆ, ಅದನ್ನು ಅಸಿಂಧುಗೊಳಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಸುಪ್ರೀಂಕೋರ್ಟ್ ಈ ಹಿಂದೆ ಹಲವು ಪ್ರಕರಣಗಳನ್ನು ಅಸಿಂಧುಗೊಳಿಸಿದ ಉದಾಹರಣೆಗಳಿವೆ.( ಸೆಪ್ಟೆಂಬರ್ 7, 1970 ರಂದು ಬಿರುದು ನಿಷೇಧ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದೆ. 1967 ರ ಪಂಜಾಬ್ಗ/ಖಗೋಲಕ್ನಾಥ್ ಪ್ರಕರಣದಲ್ಲಿ ಸಂಸತ್ತಿನ ಆದೇಶವನ್ನು ತಿರಸ್ಕರಿಸಿದೆ. ಆದ್ದರಿಂದ ಹಿರೇಮಠ್ರವರು ತಮ್ಮ ಸಾಮಾಜಿಕ ಕಾರ್ಯದಲ್ಲಿ ನಿರ್ಭಯವಾಗಿ ಮುಂದುವರೆಯಬಹುದು ಎಂಬುದು ಪ್ರಜ್ಞಾವಂತ ನಾಗರಿಕರ ಸಲಹೆ.
-ಸುಧಾಕರ ಹೊಸಳ್ಳಿ
ಪ್ರಾದೇಶಿಕ ನಿರ್ದೇಶಕರು
ಕರ್ನಾಟಕ ರಾಜ್ಯ ಮುಕ್ತ ವಿವಿ
ಕಾರವಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

