ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದ ವಿಷ್ಣುವರ್ಧನ್
1981 ಶ್ರೀರಾಂಪುರದ ಗಲ್ಲಿಗಳಲ್ಲಿ ಆಡುತ್ತಾ ಬೆಳೆಯುತ್ತಾ 10 ವರ್ಷದವನಾಗಿದ್ದ ನಾನು ಆಗ ತಾನೆ ಹೊಸದಾಗಿ ಕಟ್ಟಿದ್ದ ಅರುಣ ಟಾಕೀಸ್‌ಗೆ 'ನಾಗರ ಹಾವು' ಚಿತ್ರ ನೋಡಲು ನಮ್ಮಪ್ಪನೊಂದಿಗೆ ಹೋಗಿದ್ದೆ. ರಾಮಾಚಾರಿ ಪಾತ್ರ ನನ್ನ ಮನಸ್ಸನ್ನು ಅದೇನೋ ಒಂದು ರೀತಿಯ ಉದ್ವೇಗಕ್ಕೆ ತಳ್ಳಿಬಿಟ್ಟಿತ್ತು. 7ನೇ ತರಗತಿ ಮುಗಿಯುವ ಹೊತ್ತಿಗೆ ನನ್ನ ಕಣ್ಣ ಕಾಂತಿ ನಂದಿ ಕತ್ತಲಾವರಿಸಲಾರಂಭಿಸಿ ಅಂಧತ್ವ ಎಡತಾಕಿಕೊಂಡು ಬಂದಂತೆ ವಿಷ್ಣು ಚಿತ್ರಗಳನ್ನು ಕೇಳಿ ಆನಂದಿಸಿ ಅದೇ ಡೈಲಾಗ್‌ಗಳನ್ನು ಮನೆಗೆ ಬಂದ ಮೇಲೆ ವೀರಾವೇಶದಿಂದ ಅಬ್ಬರಿಸುತ್ತಾ, ನನ್ನ ಅಂಧತ್ವದ ನೆನಪೇ ಬಾರದೆ ಉತ್ಸಾಹದ ಚಿಲುಮೆಯಾಗುತ್ತಿದ್ದೆ.
1992 ಸೆಪ್ಟೆಂಬರ್ 18: ನಮ್ಮ ಟೀಚರ್ ಅವರೊಂದಿಗೆ ನನ್ನ ಆರಾಧ್ಯ ದೈವ ವಿಷ್ಣುರನ್ನು ನೇರ ಭೇಟಿಯಾದ ಆ ದಿನ ಮರೆಯುವುದುಂಟೆ! ಸಾರ್, ಶ್ರೀನಿವಾಸ್ ನಿಮ್ಮ ಅಭಿಮಾನಿ ಅಲ್ಲ, ದೊಡ್ಡ ಭಕ್ತ ಎಂದು ಟೀಚರ್ ಹೇಳುತ್ತಿದ್ದಂತೆ ತೋಳು ಹಿಡಿದು ಹತ್ತಿರ ಸೆಳೆದು, ನನ್ನ ಭುಜದ ಮೇಲೆ ಕೈ ಹಾಕಿ ಫೋಟೊ ತೆಗೆಯುವಂತೆ ಹೇಳಿದರು. 'ಅಭಿಮಾನ, ಭಕ್ತಿಯನ್ನು ಹೆಚ್ಚಾಗಿ ದೇಶ-ಭಾಷೆ ಮೇಲೆ ಇಡಬೇಕು. ನೀನಿನ್ನೂ ಚಿಕ್ಕವನು. ಕನ್ನಡದ ಬಗ್ಗೆ ಪ್ರೀತಿ ಇದ್ದರೆ ಸಾಕು. ಹೋರಾಟವೇ ಮಾಡಬೇಕೆಂದೇನೂ ಇಲ್ಲ' ಎಂದರು. ಗಾಳಿಯಲ್ಲಿ ತೇಲುತ್ತಿದ್ದ ನಾನು ದೇವರು ನನ್ನ ಆಯಸ್ಸೆಲ್ಲಾ ನಿಮಗೆ ನೀಡಲಿ ಅಂದಾಗ, ನೋವಾಗದಂತೆ ಕೆನ್ನೆಗೆ ತಟ್ಟಿದ ಆ ಕನ್ನಡದ ಕರ್ಣ "ಎಲ್ಲರೂ ಚೆನ್ನಾಗಿರಬೇಕು" ಎಂದರು. ಮುಂದೆ ವಿಷ್ಣುವರ್ಧನ್‌ರ ಬಗ್ಗೆ ತಿಳಿಯುತ್ತಾ ಹೋದಂತೆ ನನ್ನ ನಡವಳಿಕೆ, ಬದುಕಿನ ರೀತಿ, ಹವ್ಯಾಸಗಳನ್ನೆಲ್ಲ ಬದಲಾಯಿಸಿಕೊಂಡೆ. ಅವರಿಗೆ ಕ್ರಿಕೆಟ್ ಎಂದರೆ ಇಷ್ಟ ಎಂದು ತಿಳಿಯುತ್ತಿದ್ದಂತೆ ದಂಡು ದಾಳಿಯೊಂದಿಗೆ ಮೂರು ಕಡ್ಡಿ ಸಿಕ್ಕಿಸಿ, ಬ್ಯಾಟೆಂಬೊ ದಬ್ಬೆ ಹಿಡಿದು, ಗೋಗರೆದು ತಂದ ಚಂಡಿನೊಂದಿಗೆ ಅಂಗಳದಲ್ಲಿ ಬೆವರಿಳಿಸಿದೆ. ಮುಂದೆ ರಾಷ್ಟ್ರೀಯ ಅಂಧರ ಕ್ರಿಕೆಟ್ ಪಂದ್ಯಾವಳಿ (ದೆಹಲಿಯಲ್ಲಿ) ಕರ್ನಾಟಕ ತಂಡದ ನಾಯಕನಾಗಿ ಪ್ರತಿನಿಧಿಸಲು ದೊರೆತ ಅವಕಾಶಕ್ಕೆ ಪ್ರೇರಣೆಯೇ ಆ ನನ್ನ ಯಜಮಾನ ವಿಷ್ಣು. ದೃಷ್ಟಿಯಿಂದ ಸೃಷ್ಟಿಯನ್ನು ನೋಡಿ ಆನಂದಿಸಲಾಗದಿದ್ದರೂ, ನನ್ನ ಮನಸ್ಸಿನೊಳಗೆ ಮೂಡುತ್ತಿದ್ದ ಬೆರಗುಗಳಿಗೆ ರೆಕ್ಕೆ ಪುಕ್ಕ ಮೂಡಿಸಿ ನನ್ನದೇ ಆದ ಭಾವಗಳಿಗೆ ಜೀವ ತುಂಬಿಕೊಳ್ಳಲು ಶಕ್ತಿ ಸ್ಫುರಿಸುವಂತೆ ಆಗಾಗ ಚೈತನ್ಯದ ಟಾನಿಕ್ ನೀಡುತ್ತಿದ್ದರು ಡಾಕ್ಟರ್ ವಿಷ್ಣುವರ್ಧನ್.
ವಿಷ್ಣವರ್ಧನ್ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಹೋದಾಗ, ಅವರು ಹೇಳಿದ್ದರು- 'ಈ ಸಮಾಜ ಅಂಧ ಸಮುದಾಯಕ್ಕೆ ಬೇಡುವ ವರ್ಗ ಎನ್ನುವ ಮುದ್ರೆ ಒತ್ತಿ ಬಿಟ್ಟಿದೆ. ಆದರೆ ನಾನು ಕಂಡಂತೆ ಅಂಧರಲ್ಲೂ ಅದ್ಭುತ ಪ್ರತಿಭೆಗಳಿವೆ. ಇಂತಹವರ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆಯಬೇಕಾದ ಅವಶ್ಯಕತೆ ಇದೆ. ಪ್ರಾಮಾಣಿಕ ಪ್ರಯತ್ನ ಮಾಡುವವರ ಕೊರತೆಯಿದೆ'. ಅಂದೇನೋ ಕೊಂಚ ಬಿಡುವಿದ್ದಂತೆ ಕುಳಿತ ಅವರ ಮುಂದೆ ಕೆಲಸವೇನು ಇರದೆ ಕುಳಿತಿದ್ದ ನಾನು ಅಂಧ ಸಮುದಾಯದ ಶೋಷಣೆ ವಿರುದ್ಧ ದನಿಯಾಗಬೇಕಾದ ಅಗತ್ಯದ ಬಗ್ಗೆ ಮಾತನಾಡಿದಾಗ ಅವರು "ಶ್ರೀನಿವಾಸ್, ಸ್ವಾರ್ಥ ಇಲ್ಲದೆ ಸೇವೆ ಮಾಡಬಲ್ಲಂತಹ ಸ್ನೇಹಿತರನ್ನು ಸೇರಿಸಿಕೊಂಡು ನೀವೇ ಏಕೆ ಒಂದು ವೇದಿಕೆ ಹುಟ್ಟು ಹಾಕಬಾರದು? ಅಂಧ ಸಮುದಾಯದ ಸ್ವಾಭಿಮಾನಿ ಬದುಕಿಗೆ ಮುನ್ನುಡಿ ಬರೆಯುವ ಉದಾತ್ತ ಧ್ಯೇಯೋದ್ದೇಶ ಇಟ್ಟುಕೊಂಡ ವೇದಿಕೆ ನಿಮ್ಮದಾಗಿರಲಿ. ಯಾವುದೇ ಕಾರಣಕ್ಕೂ ಅಂಧ ಪ್ರತಿಭೆಗಳನ್ನು ಬಳಸಿಕೊಂಡು ಹಣ ಮಾಡುವ ವೇದಿಕೆ ನಿಮ್ಮದಾಗದಿದ್ದರೆ ಖಂಡಿತ ನಾನು ಸದಾ ನಿಮ್ಮೊಂದಿಗಿರುತ್ತೇನೆ" ಎಂದರು. ಅವರ ಅಂದಿನ ಪ್ರತೀ ಮಾತನ್ನು ಚಾಚು ತಪ್ಪದೇ ಕಾರ್ಯ ರೂಪಕ್ಕಿಳಿಸಲು ಮುಂದಾಗಿ ಗೆಳೆಯ ಮುದಿಗೆರೆ ರಮೇಶ್‌ಕುಮಾರ್ ಅವರೊಂದಿಗೆ ಒಂದಾಗಿ ಹುಟ್ಟು ಹಾಕಿದ ವೇದಿಕೆಯೇ "ಕರ್ನಾಟಕ ಅಂಧರ ವಿಮೋಚನಾ ವೇದಿಕೆ". ಅವರ ಅಣತಿಯಂತೆಯೇ ಸೇವೆಗೆ ಮುಂದಡಿಯಿಟ್ಟ ನಾವು ವೇದಿಕೆಯ ದೀಪ ಬೆಳಗಿದ್ದು 2009ರ ಸೆಪ್ಟೆಂಬರ್‌ನಲ್ಲಿ. ಆದರೆ ವಿಷ್ಣು ಎಂಬ ಕನ್ನಡದ ದೀಪ ಆರಿದ್ದು ಡಿಸೆಂಬರ್ 2009ರಲ್ಲಿ. ಅದೂ ಅನಿರೀಕ್ಷಿತವಾಗಿ. ಸ್ವಾಭಿಮಾನಿ ಬದುಕಿಗೆ ದಿಕ್ಸೂಚಿಯಾಗಬಲ್ಲ ವೇದಿಕೆಯೊಂದನ್ನು ಪ್ರಾಮಾಣಿಕ ಪ್ರಯತ್ನದೊಂದಿಗೆ ನಡೆಸುತ್ತಿರುವ ನಮ್ಮ ಸಂಘಟನೆಯ ಹಿಂದಿರುವ ಶಕ್ತಿ, ಸ್ಫೂರ್ತಿ, ಎಲ್ಲವೂ ವಿಷ್ಣುವರ್ಧನ್ ಎಂಬುದೇ ಪರಮ ಸತ್ಯ.
- ಎಸ್ ಶ್ರೀನಿವಾಸಲು,
ರಾಜ್ಯ ಸಂಘಟನಾ ಸಂಚಾಲಕ,
ಕರ್ನಾಟಕ ಅಂಧರ ವಿಮಾಚನಾ ವೇದಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

