ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಚೀನಾದಿಂದ ಬರುವಾಗ ಅಲ್ಲಿ ಜನಪ್ರಿಯವಾಗಿರುವ 'Moral Jokes' (ನೀತಿಕತೆಯುಳ್ಳ ಹಾಸ್ಯಪ್ರಸಂಗ) ಪುಸ್ತಕವನ್ನು ತಂದು ಕೊಟ್ಟರು. ನಿಮಗೆ ಇಷ್ಟವಾಗಬಹುದೆಂದು ಒಂದು ಪ್ರಸಂಗವನ್ನು ಹೇಳುತ್ತೇನೆ.
ಚೀನಾದಲ್ಲಿ ಒಬ್ಬಳು ರೈತ ಮಹಿಳೆಯಿದ್ದಳು. ಅವಳ ಬಳಿ ಎರಡು ಬಿಂದಿಗೆಗಳಿದ್ದವು. ಅವುಗಳಲ್ಲಿ ನೀರನ್ನು ತುಂಬಿಕೊಂಡು ಹೊಲಕ್ಕೆ ನೀರು ಹಾಕುತ್ತಿದ್ದಳು. ಎರಡು ಬಿಂದಿಗೆ (ಕೊಡ)ಗಳ ಪೈಕಿ ಒಂದಕ್ಕೆ ಸಣ್ಣ ತೂತಾಗಿತ್ತು. ಬಾವಿಯಿಂದ ನೀರನ್ನು ಸೇದಿ ಹೊಲಕ್ಕೆ ತಂದು ಹಾಕುವ ಹೊತ್ತಿಗೆ ತೂತಾದ ಬಿಂದಿಗೆಯಿಂದ ನೀರು ಅರ್ಧ ಸೋರಿ ಹೋಗಿರುತ್ತಿತ್ತು. ಇನ್ನೊಂದರಲ್ಲಿ ಪೂರ್ತಿ ಇರುತ್ತಿತ್ತು. ಆ ಮಹಿಳೆಗೆ ಒಂದು ಬಿಂದಿಗೆಯಲ್ಲಿ ಸಣ್ಣ ತೂತಾಗಿರುವ ಸಂಗತಿ ಗೊತ್ತಿತ್ತು. ಆದರೂ ತೂತನ್ನು ಮುಚ್ಚಲು ಕ್ರಮಕೈಗೊಳ್ಳಲಿಲ್ಲ. ಹೊಸ ಬಿಂದಿಗೆಯನ್ನೂ ಖರೀದಿಸಲಿಲ್ಲ.
ಹೀಗೇ ಮೂರ್ನಾಲ್ಕು ವರ್ಷಗಳು ಕಳೆದು ಹೋದವು. ತೂತಾದ ಬಿಂದಿಗೆ ಪ್ರತಿದಿನ ಅವಮಾನಕ್ಕೊಳಗಾಗಿ ಜರ್ಝರಿತವಾಗಿ ಹೋಯಿತು. ನನ್ನ ಪ್ರತಿಸ್ಪರ್ಧಿ ಬಿಂದಿಗೆಗಿಂತ ತಾನು ಕೀಳು ಎಂಬ ಭಾವನೆಯಲ್ಲಿ ಬೇಯುತ್ತಿತ್ತು. ತನ್ನ ಯಜಮಾನಿಗೆ ಮತ್ತೊಂದು ಬಿಂದಿಗೆಯನ್ನು ಕಂಡರೆ ಪ್ರೀತಿ. ಯಾಕೆಂದರೆ ಅದು ಪೂರ್ತಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾನಾದರೆ ಸೋರುವ ಬಿಂದಿಗೆ. ಹೀಗಾಗಿ ತೂತು ಮುಚ್ಚುವ ಸಣ್ಣ ಕೆಲಸವನ್ನೂ ಮಾಡಿಲ್ಲ ಎಂದು ತನ್ನೊಳಗೆ ಕೊರಗುತ್ತಾ ಕುಬ್ಜವಾಗುತ್ತಿತ್ತು. ಅದೇನು ಬೇಕಾದರೂ ಆಗಲಿ, ತನ್ನ ಯಜಮಾನಿಯನ್ನು ಕೈಜಗ್ಗಿ ಕೇಳಿಯೇ ಬಿಡಬೇಕು ಎಂದು ತೂತು ಬಿಂದಿಗೆ ನಿರ್ಧರಿಸಿತು.
'ನನಗೆ ಅತೀವ ದುಃಖವಾಗ್ತಿದೆ. ಅವಮಾನದಿಂದ ಬೇಯುತ್ತಿದ್ದೇನೆ. ನನ್ನ ತೂತಿನಿಂದಾಗಿ ಬಿಂದಿಗೆಯೊಳಗಿನ ನೀರೆಲ್ಲ ಸೋರಿ ಹೋಗ್ತಿದೆ. ಪಕ್ಕದ ಬಿಂದಿಗೆ ನನ್ನನ್ನು ನೋಡಿ ಅಣಕಿಸಿದಂತೆ ಭಾಸವಾಗ್ತಿದೆ. ನನ್ನ ತೂತನ್ನು ಮುಚ್ಚಿದರೆ ನಾನು ಸಹ ಪೂರ್ಣ ಬಿಂದಿಗೆ ನೀರು ತರಬಲ್ಲೆ. ದಯವಿಟ್ಟು ನನ್ನ ತೂತನ್ನು ಮುಚ್ಚಿಬಿಡಿ" ಎಂದು ತೂತು ಬಿಂದಿಗೆ ಕಣ್ಣೀರಿಡುತ್ತಾ ರೈತ ಮಹಿಳೆಯನ್ನು ಕೇಳಿತು.
ಅದಕ್ಕೆ ರೈತ ಮಹಿಳೆ ಜೋರಾಗಿ ನಕ್ಕು ಹೇಳಿದಳು- 'ಅಯ್ಯೋ ಹುಚ್ಚು ಬಿಂದಿಗೆಯೇ! ನನಗೆ ನಿನ್ನ ಮೇಲಿನ ಪ್ರೀತಿಯಿಂದಾಗಿಯೇ ತೂತನ್ನು ಮುಚ್ಚಿಲ್ಲ. ನಿಜ ಹೇಳ್ತೀನಿ ಕೇಳು. ನಾನು ಒಂದು ಕಡೆ ತೂತು ಇಲ್ಲದ ಬಿಂದಿಗೆ, ಇನ್ನೊಂದು ಕಡೆ ತೂತು ಇರುವ ಬಿಂದಿಗೆ ಹಿಡಿದು ನೀರು ಹಾಕುತ್ತೇನೆ ನಿಜ. ಆಗ ನಿನ್ನ ಬಿಂದಿಗೆಯಿಂದ ಅರ್ಧಕ್ಕರ್ಧ ನೀರು ಸೋರಿ ಹೋಗುವುದನ್ನು ಗಮನಿಸಿದ್ದೇನೆ. ಅದು ನನಗೆ ತಿಳಿಯದ ವಿಷಯವೇನಲ್ಲ. ಇಷ್ಟು ವರ್ಷವಾದರೂ ನಿನಗೆ ಗೊತ್ತಿಲ್ಲದ ಒಂದು ವಿಷಯವಿದೆ. ಅದೇನೆಂದರೆ, ನಾನು ಎರಡು ಬಿಂದಿಗೆಯನ್ನು ಏಕಕಾಲಕ್ಕೆ ಎರಡು ಕೈಗಳಲ್ಲಿ ಹಿಡಿದು ನೀರು ಸಾಗಿಸುತ್ತೇನಲ್ಲ, ಆಗ ನೀನಿರುವ ಕಡೆ ಹೂಗಿಡಗಳಿವೆ. ಅದನ್ನು ನೀನು ಗಮನಿಸಿದ್ದೀಯಾ? ತೂತಿಲ್ಲದ ಬಿಂದಿಗೆ ಕಡೆ ಯಾವ ಗಿಡಗಳೂ ಇಲ್ಲದಿರುವುದನ್ನು ಗಮನಿಸಿದ್ದೀಯಾ? ಅದರರ್ಥ ಏನೆಂದರೆ, ನಿನ್ನಿಂದ ನೀರು ಸೋರಿ ವ್ಯರ್ಥವಾಗುತ್ತಿಲ್ಲ. ಅದು ಹೂಗಿಡಗಳ ಮೇಲೆ ಬಿದ್ದು ಸದುಪಯೋಗವಾಗುತ್ತಿದೆ. ಅದೇ ಹೂಗಳನ್ನು ಕಿತ್ತು ನಾನು ದಿನದ ಖರ್ಚಿಗೆ ಸಾಕಾಗುವಷ್ಟು ಹಣವನ್ನು ಗಳಿಸುತ್ತಿರುವುದು. ನಾನು ನಿನ್ನಲ್ಲಿನ ತೂತನ್ನು ಒಂದು ಲೋಪವಾಗಿ ಕಂಡಿಲ್ಲ. ಅದರಿಂದ ನನಗೆ ಪ್ರಯೋಜನವಾಗಿದೆ.'
ತೂತು ಬಿಂದಿಗೆಗೆ ಜ್ಞಾನೋದಯವಾದಂತಾಯಿತು. ಇಷ್ಟು ದಿನ ಯಾವುದನ್ನು ನೆಗೆಟಿವ್ ಎಂದು ಭಾವಿಸಿತ್ತೋ ಅದೇ ತನ್ನ ಸಾಮರ್ಥ್ಯ, ಶಕ್ತಿ ಎಂದೆನಿಸಿತು. ತಾನು ನಿಷ್ಪ್ರಯೋಜಕ ಜೀವನ ಸಾಗಿಸುತ್ತಿಲ್ಲವಲ್ಲ ಎಂದು ಹೆಮ್ಮೆಯೆನಿಸಿತು.
ಈ ಕತೆಯ ನೀತಿ: ನಾವೆಲ್ಲರೂ ಒಂದು ರೀತಿಯಲ್ಲಿ ತೂತು ಬಿಂದಿಗೆಯೇ (ಕ್ರ್ಯಾಕ್ ಪಾಟ್‌ಗಳು). ನಮ್ಮಲ್ಲೂ ಸಹ ಕೆಲವು ತೂತುಗಳು, ನೂನ್ಯತೆಗಳಿರುತ್ತವೆ. ಅದರಿಂದ ಕೊರಗುತ್ತಿರುತ್ತೇವೆ. ಆದರೆ ಆ ಲೋಪಗಳನ್ನು ಲೋಪಗಳೆಂದು ಭಾವಿಸದೇ ಸಕಾರಾತ್ಮಕವಾಗಿ ಸ್ವೀಕರಿಸಿದರೆ ಅದರಿಂದ ಪ್ರಯೋಜನ ಪಡೆಯುವದು ಸಹ ಸಾಧ್ಯವಿದೆ. ತೂತು ಬಿಂದಿಗೆ ಸಹ ನಿಷ್ಪ್ರಯೋಜಕವಲ್ಲ.
ಹುಲಿಯನ್ನು ಸಾಯಿಸುವುದು ಹೇಗೆ?
ಸೊಳ್ಳೆಯನ್ನು ಸಾಯಿಸುವುದು ಹೇಗೆ? ತಿಮಿಂಗಿಲವನ್ನು ಹಿಡಿಯುವುದು ಹೇಗೆ? ಕಾಗೆ ಹಾರಿಸುವುದು ಹೇಗೆ?... ಮುಂತಾದ ಕತೆಗಳನ್ನು ನೀವು ಕೇಳಿರುತ್ತೀರಿ. ಇದೂ ಒಂಥರ ಅದೇ ರೀತಿಯ ಕಥೆಯೇ. ಹುಲಿ ಸಾಯಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಯಾರ್ಯಾರು ಹೇಗೆ ಸಾಯಿಸುತ್ತಾರೆ ಎಂಬುದನ್ನು ಗಮನಿಸೋಣ.
ಪ್ರಧಾನಿ ಮನಮೋಹನಸಿಂಗ್ ಮಾದರಿ- ಹುಲಿ ಜೋರಾಗಿ ಘರ್ಜಿಸುತ್ತದೆ. ಸುಮ್ಮನಿರಬೇಕು. ಮತ್ತಷ್ಟು ಜೋರಾಗಿ ಘರ್ಜಿಸುತ್ತದೆ. ಆಗಲೂ ಸುಮ್ಮನಿರಬೇಕು. ಇದು ಕನಿಷ್ಠ ಹದಿನೈದಿಪ್ಪತ್ತು ಬಾರಿ ಪುನರಾವರ್ತನೆಯಾದರೆ ಹುಲಿ ಹತಾಶೆಯಿಂದ ಸತ್ತು ಹೋಗುತ್ತದೆ.
ಅಕ್ಬರುದ್ದೀನ್ ಓವೈಸಿ ಮಾದರಿ- ಹುಲಿ ಘರ್ಜಿಸುತ್ತದೆ. ಬೋನಿನಿಂದ ಅದನ್ನು ಹೊರಬಿಟ್ಟರೆ ಐದು-ಹತ್ತು ಸೆಕೆಂಡ್‌ಗಳಲ್ಲಿ ಮಟಾಷ್ ಮಾಡಿ ಬಿಡುತ್ತೇನೆಂಬಂತೆ ಜೋರಾಗಿ ವೀರಾವೇಷದ ಭಾಷಣ ಮಾಡಿ ಬಿಡಬೇಕು. ಹುಲಿಗೆ ನಗು ತಡೆಯಲಾಗದೇ ಮಲ್ಟಿಪಲ್ ಆರ್ಗನ್ ಫೇಲ್ಯೂರ್‌ನಿಂದ ಸತ್ತು ಹೋಗುತ್ತದೆ.
ಅಸಾರಾಮ ಬಾಪು ಮಾದರಿ- ಹುಲಿ ಜೋರಾಗಿ ಘರ್ಜಿಸುತ್ತದೆ. ಆಗ ಅದರ ಬಳಿ ಹೋಗಿ 'ಹಲೋ ಹುಲಿ, ಏನಣ್ಣಾ?' ಎಂದು ಕೇಳಬೇಕು. ಆಗ ಹುಲಿಗೆ ತನ್ನ ಸಂತತಿಯನ್ನೇ ತಪ್ಪಾಗಿ ಅರ್ಥೈಸುತ್ತಿದ್ದಾನಲ್ಲ ಎಂಬ ಮಾನಸಿಕ ಹಿಂಸೆಯುಂಟಾಗಿ ಸತ್ತು ಹೋಗುತ್ತದೆ.
ಮೋಹನ ಭಾಗವತರ ಮಾದರಿ-ಹುಲಿ ಘರ್ಜಿಸುತ್ತದೆ. ಆಗ ಅದಕ್ಕೆ, 'ಹುಲಿ ಊರಲ್ಲಿ ಘರ್ಜಿಸುವುದಿಲ್ಲ, ಅದು ಘರ್ಜಿಸುವುದೇನಿದ್ದರೂ ಕಾಡಿನಲ್ಲಿ. ಆದ್ದರಿಂದ ಈಗ ಕಾಡಿಗೆ ಹೋಗು. ಅಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿತು ಇತರೇ ಪ್ರಾಣಿಗಳಿಗೂ ಇದನ್ನು ಕಲಿಸು' ಎಂದು ಹೇಳಬೇಕು. ಹುಲಿ ಗೊಂದಲಕ್ಕೊಳಗಾಗಿ ಸತ್ತು ಹೋಗುತ್ತದೆ.
ಸರ್ದಾರ್ಜಿ ಮಾದರಿ-ಹುಲಿ ಘರ್ಜಿಸುತ್ತದೆ. 'ನಾಯಿ ಬೊಗಳುತ್ತಿದೆ' ಎಂದು ಹೇಳಿದರೆ, ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
ಸುವರ್ಣ ನ್ಯೂಸ್ ತಲೆಹರಟೆ ಮಾದರಿ- ಹುಲಿ ಘರ್ಜಿಸುತ್ತದೆ. ತಲೆಹರಟೆ ಜೋರಾಗಿ 'ಹೊಡಿರಿ ಹಲ್ಗಿ' ಎಂದು ಹೇಳುತ್ತಾನೆ. ಅದು ಹುಲಿಗೆ, 'ಹೊಡಿರಿ ಹುಲಿಗೆ' ಅಂತ ಕೇಳಿಸುತ್ತದೆ. ಬಚಾವ್ ಆಗಲು ಜೋರಾಗಿ ಓಡಿ ಕಣಿವೆಯಲ್ಲಿ ಬಿದ್ದು ಸತ್ತು ಹೋಗುತ್ತದೆ. ಸದಾನಂದಗೌಡ ಮಾದರಿ- ಹುಲಿ ಘರ್ಜಿಸುತ್ತದೆ. ಅದರ ಮುಂದೆ ಜೋರಾಗಿ ಹಲ್ಕಿರಿದು ನಗಬೇಕು. ತನ್ನನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವಲ್ಲ ಎಂಬ ಹತಾಶೆ, ಖಿನ್ನತೆಯಿಂದ ಹುಲಿ ಮಾನಸಿಕವಾಗಿ ಸತ್ತು ಹೋಗುತ್ತದೆ.
ಬಿಜೆಪಿ-ಕೆಜೆಪಿ ಮಾದರಿ- ಹುಲಿ ಘರ್ಜಿಸುತ್ತದೆ. ತಾನು ಟಿಕೆಟ್ ಕೊಡ್ತೇನೆ, ತಾನು ಟಿಕೆಟ್ ಕೊಡ್ತೇನೆ ಎಂದು ಬಿಜೆಪಿ-ಕೆಜೆಪಿ ನಾಯಕರು ಹುಲಿಯನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ಹುಲಿ ಓಡಿ ಓಡಿ ಸುಸ್ತಾಗಿ ಪ್ರಾಣ ಬಿಡುತ್ತದೆ.
ಜೀವನ ಅಂದ್ರೆ ಪಿಜ್ಜಾ ಇದ್ದಂತೆ!
ಹೇಗೆ ಅಂತೀರಾ? ಪಿಜ್ಜಾದ ಮೇಲಿನ ಕವರ್ ಇರುತ್ತಲ್ಲ, ಅದು ಸ್ಕ್ವೇರ್ ಆಕಾರದಲ್ಲಿರುತ್ತದೆ. ಅದನ್ನು ಓಪನ್ ಮಾಡಿದಾಗ ಪಿಜ್ಜಾ ರೌಂಡ್ ಆಗಿರುತ್ತದೆ. ಅದನ್ನು ತಿನ್ನುವಾಗ ಟ್ರಯಾಂಗಲ್ (ತ್ರಿಕೋನ) ಆಕಾರದಲ್ಲಿರುತ್ತದೆ.
ಜೀವನಾನೂ ಹಾಗೆ! ಕಾಣೋದು ಒಂಥರ. ಇರೋದು ಇನ್ನೊಂದು ಥರ. ರುಚಿ ಮತ್ತೊಂದು ಥರ. ಜೀವನವನ್ನೂ ಪಿಜ್ಜಾ ಥರಾನೇ ಬಿಸಿ ಬಿಸಿಯಾಗಿ ಸವಿಯಬೇಕು.
ಹೀಗೊಂದು ಉಪದೇಶ
ಯಾವತ್ತೂ ಪರಿಶೀಲನೆ ಪರಿಧಿಯಿಂದ ದೂರವಿರುವ ಸಂಗತಿಯನ್ನೇ ಮಾತನಾಡಬೇಕು ಎಂದು ಗುರುವೊಬ್ಬರು ಉಪದೇಶಿಸಿದರು. ಅದೇಕೆ ಎಂದು ಇನ್ನೊಬ್ಬ ಗುರು ಪ್ರಶ್ನಿಸಲಾಗಿ ಇವರ ವಿವರಣೆ ಹೀಗೆ ತೆರೆದುಕೊಂಡಿತು. 'ಮಂಗಳದಲ್ಲಿ ಬಹಳಷ್ಟು ವಿಶಿಷ್ಟ ಜೀವಿಗಳಿವೆ. ನಾನು ಅವನ್ನೆಲ್ಲ ಭೇಟಿಯಾಗಿ ಬಂದಿದ್ದೆ' ಎಂದು ಹೇಳಿದರೆ ಯಾರೂ ಅಷ್ಟಾಗಿ ತಲೆ ಹರಟೆ ಮಾಡುವುದಿಲ್ಲ. ಆದರೆ 'ಇವತ್ತು ವಾತಾವರಣ ಚೆನ್ನಾಗಿದೆ' ಎಂದರೆ, ಯಾರೋ ಒಬ್ಬ 'ನಿನ್ನೆಯಷ್ಟಲ್ಲ ಬಿಡಿ' ಎಂದು ಕ್ಯಾತೆ ತೆಗೆಯುತ್ತಾನೆ. ಗೋಡೆ ಬಣ್ಣ ಒಣಗಿಲ್ಲ ಎಂದು ಬೋರ್ಡ್ ಹಾಕಿದರೆ ಓದಿದ ಹೆಚ್ಚಿನವರು ಸುಮ್ಮನಿರುವುದಿಲ್ಲ. ಖಾತ್ರಿ ಪಡಿಸಿಕೊಳ್ಳುವುದಕ್ಕೆ ಎಷ್ಟೆಲ್ಲ ಮಂದಿ ಗೋಡೆ ತಿಕ್ಕಿ ಹೋಗಿದ್ದಾರೆ ಎಂಬುದನ್ನು ಅಲ್ಲಿನ ಬೆರಳಚ್ಚು ನೋಡಿಯೇ ಹೇಳಬಹುದು.
- ವಿಶ್ವೇಶ್ವರ ಭಟ್