ಸ್ಪರ್ಧಾತ್ಮಕತೆಗೆ ತಕ್ಕಂತಿದೆಯೇ ನಮ್ಮ ಬೋಧನಾ ಮಟ್ಟ?
ಅಖಿಲ ಭಾರತ ಮಟ್ಟದಲ್ಲಿ ನಡೆದ 2012ರ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(ಸಿಟಿಇಟಿ) ಶೇ.99 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇನ್ನೊಂದು ಸುದ್ದಿಯಂತೆ 8ನೇ ತರಗತಿ ಬೋಧಿಸುವ ಶಿಕ್ಷಕರಿಗೇ ಗಣಿತ ಕಬ್ಬಿಣದ ಕಡಲೆಯಂತಾಗಿರುವುದು
ಇತ್ತೀಚೆಗೆ ಪತ್ರಿಕೆಗಳಲ್ಲಿ ಬಂದಿದ್ದ ಒಂದೆರಡು ಸುದ್ದಿಗಳನ್ನು ಗಮನಿಸಿದಾಗ ನಮ್ಮ ಶಿಕ್ಷಣ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಈ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ನಮ್ಮ ಮಕ್ಕಳ ಮುಂದಿನ ನಡೆ ಹೇಗಿರಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಅವರ ಮುಂದಿನ ದಾರಿ ಎತ್ತ ಸಾಗಬಹುದು ಎಂಬುದನ್ನು ವಿಚಾರ ಮಾಡುವ ಜರೂರತ್ತು ಎದುರಾಗಿದೆ.
ಇಷ್ಟಕ್ಕೂ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ಏನು ಎಂಬುದನ್ನು ಮೊದಲು ನೋಡೋಣ. ರಾಜ್ಯ ಸರ್ಕಾರ ಪ್ರಸ್ತುತ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿರುವ ಐ.ಐ.ಎಸ್ಸಿ.ಯಲ್ಲಿ ಪುನರ್ಮನನ ತರಬೇತಿಯನ್ನು ಆಯೋಜಿಸಿತ್ತು. ಈ ತರಬೇತಿಯ ಆರಂಭದಲ್ಲಿ ನಮ್ಮ ಉಪನ್ಯಾಸಕರಿಗೆ ಅವರು ತರಗತಿಯಲ್ಲಿ ಬೋಧಿಸುವ ವಿಷಯವನ್ನೇ ಆಧರಿಸಿ ಒಂದು ಪರೀಕ್ಷೆಯನ್ನು ಕೈಗೊಂಡಿತ್ತು. ಇದು ಎಲ್ಲಾ ತರಬೇತಿ ಸಂದರ್ಭದಲ್ಲಿಯೂ ಕೈಗೊಳ್ಳುವ ಸಾಮಾನ್ಯ ಕಾರ್ಯಕ್ರಮ. ಆದರೆ ಈ ಪರೀಕ್ಷೆಯ ಫಲಿತಾಂಶ ಮಾತ್ರ ಅಚ್ಚರಿ ಮೂಡಿಸುವಂತಿತ್ತು. ಅದೆಂದರೆ ನಮ್ಮ ಉಪನ್ಯಾಸಕರು ಬೋಧಿಸುವ ವಿಷಯದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧಕ್ಕಿಂತಲೂ ಹೆಚ್ಚು ಉಪನ್ಯಾಸಕರು ಶೇ.35 ಕ್ಕಿಂತಲೂ ಕಡಿಮೆ ಅಂಕ ಪಡೆದಿರುವುದು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಗಣಿತ ವಿಷಯದ ಉಪನ್ಯಾಸಕರೊಬ್ಬರು ಶೂನ್ಯ ಅಂಕ ಗಳಿಸಿರುವುದು.
ಅಖಿಲ ಭಾರತ ಮಟ್ಟದಲ್ಲಿ ನಡೆದ 2012ರ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(ಸಿಟಿಇಟಿ) ಶೇ.99 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಸಿಟಿಇಟಿ ಪರೀಕ್ಷೆಗೆ ಹಾಜರಾಗಲು ಬಿ.ಇಡಿ. ಪದವಿ ಕಡ್ಡಾಯವಾಗಿದ್ದು, 2012ರ ಪರೀಕ್ಷೆಗೆ ಹಾಜರಾಗಿರುವ 7.96 ಲಕ್ಷ ಅಭ್ಯರ್ಥಿಗಳಲ್ಲಿ ಪ್ರಶ್ನೆ ಪತ್ರಿಕೆ 1 ಅಥವಾ 2 ಅಥವಾ 2 ರಲ್ಲೂ 4,849 ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಇವರಲ್ಲಿಯೇ ಭಾವಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಅಂದರೆ ಇಲ್ಲಿ ನಾವು ಗಮನಿಸಬೇಕಾದ ಅಂಶ ಪ್ರಸ್ತುತ ವ್ಯವಸ್ಥೆಯಲ್ಲಿ ಬಿ.ಇಡಿ. ಪದವಿಪ್ರದಾನ ವ್ಯವಸ್ಥೆ ಹಾಗೂ ಸದರಿ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳ ಜ್ಞಾನದ ಮಟ್ಟ. ಈ ಅಭ್ಯರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲದಿದ್ದರೂ ನಮ್ಮ ರಾಜ್ಯ ಮಟ್ಟದಲ್ಲಿ ನಡೆಯುವ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಕರಾಗಿ ನೇಮಕ ಹೊಂದಲು ಯಾವುದೇ ಅಭ್ಯಂತರವಿಲ್ಲ.ಅದೇ ರೀತಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾಗಿ(ಪ್ರೊಬೆಷನರಿ ಅಧಿಕಾರಿ) ಆಯ್ಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗೆ ಆಯ್ಕೆಯಾಗುವ ಇಂತಹ ಶಿಕ್ಷಕರಿಂದ ಗುಣಮಟ್ಟದ ಬೋಧನೆ ಹೇಗೆ ಸಾಧ್ಯ?
ಇನ್ನೊಂದು ಸುದ್ದಿಯಂತೆ 8ನೇ ತರಗತಿ ಬೋಧಿಸುವ ಶಿಕ್ಷಕರಿಗೇ ಗಣಿತ ಕಬ್ಬಿಣದ ಕಡಲೆಯಂತಾಗಿರುವುದು. ಈಗಾಗಲೇ ರಾಷ್ಟ್ರೀಯ ಪಠ್ಯ ಅಳವಡಿಸುವಿಕೆ ಬಹಳಷ್ಟು ರಾಜ್ಯಗಳಲ್ಲಿ ಪ್ರಗತಿಯಲ್ಲಿದೆ. ಹೀಗಿರುವಾಗ ನಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಸಹ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗೆ ಸಜ್ಜುಗೊಳಿಸುವ ಹೊಣೆ ನಮ್ಮ ಶಿಕ್ಷಕರ ಮೇಲಿದೆ. ಆದರೆ ನಮ್ಮ ಶಿಕ್ಷಕರು ನೇಮಕಗೊಳ್ಳುವಾಗ ಅವರು ವ್ಯಾಸಂಗ ಮಾಡಿರುವ ಪಠ್ಯಕ್ರಮಕ್ಕೂ ಪ್ರಸ್ತುತ ಕಲಿಸಲಾಗುತ್ತಿರುವ ಪಠ್ಯಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದರೆ ಸದರಿ ಶಿಕ್ಷಕರು ಸೇವೆಗೆ ಸೇರುವಾಗ ಎಸ್.ಎಸ್.ಎಲ್.ಸಿ-ಪಿ.ಯು.ಸಿ. ಮಟ್ಟದ ಜ್ಞಾನವನ್ನು ಹೊಂದಿದ್ದು, ಪ್ರಸ್ತುತ ಬಂದಿರುವ ಪಠ್ಯಕ್ರಮವು ಪದವಿ-ಸ್ನಾತಕೋತ್ತರ ಪದವಿ ಮಟ್ಟದ ಜ್ಞಾನವನ್ನು ನಿರೀಕ್ಷಿಸುತ್ತದೆ. ಆದ್ದರಿಂದ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ 15 ದಿನ ಅಥವಾ 30 ದಿನಗಳ ತರಬೇತಿ ನೀಡಿದರೆ ಅವರು ಪದವಿ ಹಂತಕ್ಕೆ ಬರುವುದು ಕಷ್ಟಸಾಧ್ಯ. ಬದಲಾಗಿ ಇಂತಹ ಶಿಕ್ಷಕರಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಿ , ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸೂಕ್ತ ಹುದ್ದೆಗಳಿಗೆ ನೇಮಕ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾದೀತು.
ಈ ಉಪನ್ಯಾಸಕರು ಬೋಧಿಸುವುದು ಬಹುತೇಕ ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ. ಅದೇ ರೀತಿ ಬಿ.ಇಡಿ. ಪದವಿ ಪಡೆದವರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಬೋಧಿಸಲಿದ್ದಾರೆ. ಸರ್ಕಾರಿ ಶಾಲಾ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಉಪನ್ಯಾಸಕರ ಸಾಮರ್ಥ್ಯದ ಕೊರತೆ ಇವರ ಭವಿಷ್ಯಕ್ಕೆ ತೊಡಕಾಗದೇ? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವರು ಎದುರಿಸುವುದು ಹೇಗೆ? ಮುಂದೆ ಅವರ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಲ್ಲರು? ಇವರಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಮೊರೆ ಹೋಗಬಹುದು. ಆದರೆ ಉಳಿದ ವಿದ್ಯಾರ್ಥಿಗಳ ಹಿತಕಾಯುವವರು ಯಾರು ಎಂಬುದನ್ನು ಪ್ರಜ್ಞಾವಂತ ಸಮಾಜ ಹಾಗೂ ಆಡಳಿತಗಾರರು ಯೋಚಿಸಬೇಕಾಗಿದೆ ಹಾಗೂ ಕಾಲ ಮೀರುವ ಮೊದಲೇ ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ.
ಈ ಸಮಸ್ಯೆಯ ಮೂಲಕ್ಕೆ ಬಂದರೆ ಇಂತಹ ಉಪನ್ಯಾಸಕರಲ್ಲಿ-ಶಿಕ್ಷಕರಲ್ಲಿ ನಿರಂತರ ಅಧ್ಯಯನದ ಕೊರತೆ ಮುಖ್ಯ ಕಾರಣವೆನ್ನಬಹುದು. ಅದರ ಹೊರತಾಗಿ ಈ ಉಪನ್ಯಾಸಕರ ಆಯ್ಕೆಯ ವಿಧಾನ ಅಥವಾ ನೇಮಕಾತಿ ವಿಧಾನವನ್ನು ಪುನರ್ ಪರಿಶೀಲಿಸುವುದು ಅತ್ಯಗತ್ಯ. ಇಂದು ಸಮಾಜದ ಎಲ್ಲಾ ಜಾತಿ-ವರ್ಗಗಳಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ ಈ ಪ್ರತಿಭಾವಂತರೆಲ್ಲರೂ ಅವರ ಕೌಟುಂಬಿಕ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯ ಒಳಹೊಕ್ಕು ಯಶಸ್ವಿಯಾಗಿ ಹೊರಬರುವ ಸಾಮರ್ಥ್ಯವನ್ನು ಹೊಂದಿರಲಾರರು. ಹೀಗಿರುವಾಗ ಪ್ರತಿಭಾವಂತರ ಸೇವೆ ನಮ್ಮ ವಿದ್ಯಾರ್ಥಿಗಳಿಗೆ ಲಭ್ಯವಾಗುವುದಿಲ್ಲ. ಯಾವಾಗ ಪ್ರತಿಭಾವಂತರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಲಭ್ಯವಾಗುವುದಿಲ್ಲವೋ ಅಂತಹ ಸ್ಥಾನಗಳನ್ನು ವಾಸ್ತವವಾಗಿ ಪ್ರತಿಭಾವಂತರಲ್ಲದವರು ಆಕ್ರಮಿಸಿಕೊಳ್ಳುತ್ತಾರೆ. ಈ ರೀತಿಯ ಆಯ್ಕೆ ಪ್ರಕ್ರಿಯೆಯ ನೇರ ಪರಿಣಾಮವನ್ನು ನಾವು ಮೇಲಿನ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಉದಾಹರಣೆಗಳಲ್ಲಿ ಕಾಣುವಂತಾಗಿದೆ. ಆದರೆ ಸಾರಾಸಗಟಾಗಿ ಎಲ್ಲಾ ಉಪನ್ಯಾಸಕರು ಹೀಗಿರಲು ಸಾಧ್ಯವಿಲ್ಲ. ಸರ್ಕಾರಿ ಕಾಲೇಜುಗಳಲ್ಲಿನ ಬಹಳಷ್ಟು ಉಪನ್ಯಾಸಕರು-ಶಿಕ್ಷಕರು ನಿರಂತರ ಅಧ್ಯಯನದಲ್ಲಿ ತೊಡಗಿದ್ದು, ಅವರು ಬೋಧಿಸುವ ವಿಷಯದಲ್ಲಿ ಪ್ರಚಲಿತ ವಿದ್ಯಮಾನಗಳ ಸಹಿತ ಉತ್ತಮ ಬೋಧನಾ ಕೌಶಲ್ಯವನ್ನು ಹೊಂದಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆನ್ನುವುದು ಸಮಾಧಾನದ ಸಂಗತಿ.
ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಸ್ತುತ ಇರುವ ವ್ಯವಸ್ಥೆಗಿಂತ ಹೆಚ್ಚು ಪಾರದರ್ಶಕವಾದ ವ್ಯವಸ್ಥೆಯನ್ನು ಜಾರಿಗೆ ತರುವುದು ಜರೂರಾಗಿ ಆಗಬೇಕಾಗಿದೆ. ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಹೆಚ್ಚು-ಕಮ್ಮಿ ಎಲ್ಲಾ ನೇಮಕಾತಿಗಳಲ್ಲಿಯೂ ಜಾರಿಗೆ ಬಂದಿದೆ. ಆದರೆ ಅರ್ಜಿ ಸಲ್ಲಿಸಿದ ನಂತರದ ಹಂತವಾದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಈ ವ್ಯವಸ್ಥೆ ಕೆಲವು ಖಾಸಗಿ ಕಂಪನಿಗಳ ಹೊರತಾಗಿ ಸರ್ಕಾರದ ವ್ಯವಸ್ಥೆಯಲ್ಲಿ ಜಾರಿಗೆ ಬಂದಿಲ್ಲ. ಈ ದಿಸೆಯಲ್ಲಿ ಕಾರ್ಯೋನ್ಮುಖವಾಗುವುದು ಆಧುನಿಕ ತಂತ್ರಜ್ಞಾನದ ದೃಷ್ಟಿಯಿಂದ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ಪ್ರಸ್ತುತವಾಗಿದೆ.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಉನ್ನತೀಕರಣಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರುಪಾಯಿಗಳನ್ನು ಖರ್ಚುಮಾಡುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಗುಣಮಟ್ಟದ ನಿರೀಕ್ಷೆ ಅಪೇಕ್ಷಣೀಯ. ಹೀಗಿರುವಾಗ ಈ ಉನ್ನತೀಕರಣದಲ್ಲಿ ಪಾಲ್ಗೊಳ್ಳವವರನ್ನೂ ಗುಣಮಟ್ಟದಲ್ಲಿ ರಾಜಿಯಿಲ್ಲದೆ ಆಯ್ಕೆ ಮಾಡುವುದು ಅತ್ಯಗತ್ಯ. ಶಿಕ್ಷಕ ತರಬೇತಿಗೆ ಸೇರಲಿಚ್ಚಿಸುವ ಅಭ್ಯರ್ಥಿಯು ಕನಿಷ್ಠ 75 ಅಂಕಗಳನ್ನು ಪಡೆದಿರುವುದು ಕಡ್ಡಾಯವಾಗಬೇಕು. ಅಂತಹ ಅಭ್ಯರ್ಥಿಗೆ ಖಾಸಗಿ ವಲಯದಲ್ಲಿ ಅಳವಡಿಸಿರುವ ಕ್ರಮದಂತೆ ಆನ್ಲೈನ್ನಲ್ಲಿ ಆಪ್ಟಿಟ್ಯೂಡ್ ಪರೀಕ್ಷೆಯನ್ನು ನಡೆಸಿ, ಸದರಿ ಪರೀಕ್ಷೆಯ ಫಲಿತಾಂಶವು ತಕ್ಷಣ ಡಿಸ್ಪ್ಲೇ ಬೋರ್ಡ್ನಲ್ಲಿ ಪ್ರಕಟವಾಗುವಂತೆ ವ್ಯವಸ್ಥೆ ಮಾಡಬೇಕು. ತರಬೇತಿ ನಂತರ ಉದ್ಯೋಗಕ್ಕೆ ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆನ್ಲೈನ್ನಲ್ಲಿ ಆಪ್ಟಿಟ್ಯೂಡ್ ಪರೀಕ್ಷೆಯನ್ನು ನಡೆಸಿ, ಸದರಿ ಪರೀಕ್ಷೆಯ ಫಲಿತಾಂಶವು ತಕ್ಷಣ ಡಿಸ್ಪ್ಲೇ ಬೋರ್ಡ್ನಲ್ಲಿ ಪ್ರಟವಾಗುವ ವ್ಯವಸ್ಥೆಯೊಂದಿಗೆ, ಪ್ರಾಯೋಗಿಕ ಬೋಧನಾ ಪರೀಕ್ಷೆಯನ್ನು ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲು ತಾಂತ್ರಿಕ ಪರಿಣಿತರ ನೆರವನ್ನು ಪಡೆದುಕೊಂಡು, ಸಿ.ಇ.ಟಿ.ವ್ಯವಸ್ಥೆಯನ್ನು ಜಾರಿಗೆ ತಂದಿರುವಂತೆ, ಅಡಿಗೆ ಅನಿಲ ನೋಂದಣಿಯಲ್ಲಿ ಸರಳತೆ ಹಾಗೂ ಪಾರದರ್ಶಕತೆಯನ್ನು ತಂದಿರುವಂತೆ ಉಪನ್ಯಾಸಕರ-ಶಿಕ್ಷಕರ ಆಯ್ಕೆ ಹಾಗೂ ನೇಮಕಾತಿಯಲ್ಲಿಯೂ ಉನ್ನತ ಜ್ಞಾನವನ್ನು ಹೊಂದಿದ ಸ್ಪರ್ಧೆಯನ್ನು ಪಾರದರ್ಶಕವಾಗಿ ನಡೆಸುವ ಕ್ರಮವನ್ನು ಜಾರಿಗೆ ತಂದಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಪ್ರಪಂಚ ಪ್ರವೇಶಿಸಲು ಅನುಕೂಲವಾದೀತು.
- ಕೆ.ಎಸ್.ರವಿಶಂಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

