ಅಂಕಣಗಳು

ಪೌರುಷವು ಸಮಾಜದ ಅಭಿವೃದ್ಧಿಯಲ್ಲಿ ಕಾಣಲಿ, ಹೆಣ್ಣಿನ ಮೇಲಿನ ಕ್ರೌರ್ಯದಲ್ಲಲ್ಲ!

Published On :

ಡಿಸೆಂಬರ್ 16ರ ರಾತ್ರಿ ದೆಹಲಿಯಲ್ಲಿ ನಡೆದ 23 ವರ್ಷದ ಸಹೋದರಿ ನಿರ್ಭಯ(?)ಳ ಮೇಲೆ ನಡೆದ ಘೋರ ಕೃತ್ಯ ಮರೆಯಲು ಸಾಧ್ಯವೇ ಇಲ್ಲ. ಪ್ರಾಣಿಗಳು ಸಹ ಇಂತಹ ಹೇಸಿಗೆ ಕೆಲಸವನ್ನು ದಾರಿಯಲ್ಲಿ ಮಾಡದೇ ಇರುವಂತಹ ಕೃತ್ಯವಿದು. ಭಾರತ, ಸಂಸ್ಕೃತಿಗಳ ನಾಡು. ಸಂಸ್ಕಾರವನ್ನು ಹಾಸಿ ಹೊದೆದು ಜೀವಿಸುತ್ತಿದ್ದೇವೆ ಎಂಬಂತೆ ಬದುಕುತ್ತಿರುವವರು ನಾವೆಲ್ಲ. ಆದರೂ ಸಹ ಭಾರತ ಇಂದು ಅತ್ಯಾಚಾರ ಎಸಗುವ ರಾಷ್ಟ್ರಗಳಲ್ಲಿ ಮೂರನೆಯ ಸ್ಥಾನ ಪಡೆದಿದೆ. ಇದನ್ನು ನಾವು ಖಂಡಿಸಬೇಕು ಎಂದು ಕೂಗುತ್ತಲೇ, ಮತ್ತೆ ರಾಜಕಾರಣ ಶುರುವಾಗುತ್ತದೆ. ಕೇವಲ ಮತಕ್ಕೋಸ್ಕರ ದೇಶದ ಮೇಲೆ ಆಕ್ರಮಣ ಮಾಡಿದವರನ್ನೇ ಪರ ವಹಿಸಿಕೊಂಡು ಮಾತನಾಡುವವರು, ಈ ಪ್ರಕರಣದಲ್ಲಿಯೂ ಸಹ ಮೊದಲು ಮುಂದೆ ಬಂದು ಮಾತನಾಡಲಿಲ್ಲ. ಆದರೆ ದೆಹಲಿಯ ಯುವ ಸಮೂಹ ನ್ಯಾಯಕ್ಕಾಗಿ ಬೀದಿಗಿಳಿದಿದ್ದರು. ಜೊತೆಗೆ ಇಡೀ ರಾಷ್ಟ್ರವೇ ಈ ಘೋರ ಘಟನೆಯ ವಿರುದ್ಧ ತಿರುಗಿ ಬಿದ್ದಿತು. ರಾತ್ರಿ-ಹಗಲು ಪ್ರತಿಭಟನೆ ನಡೆದಿತ್ತು. ಆಗಲೇ ಸರ್ಕಾರ- ನ್ಯಾಯಾಲಯಗಳು ಎಚ್ಚೆತ್ತಿದ್ದು. ಇಲ್ಲೂ ಸಹ ಆ ಆಕ್ರೋಶಗೊಂಡ ಯುವಜನತೆಯನ್ನು ಹತ್ತಿಕ್ಕುವ ಕೆಲಸ ನಡೆಯಿತು. ಮುಂದಿನ ಹಂತಗಳು, ನಿಮಗೆ ತಿಳಿದೇ ಇದೆ.
ಬಟ್ಟೆ ಇಲ್ಲದೇ, ನಗ್ನವಾಗಿ ದಾರಿಯಲ್ಲಿ ಬಿದ್ದಿದ್ದರೂ, ಸಹಾಯಕ್ಕಾಗಿ ಎಲ್ಲರನ್ನೂ ಗೋಗರೆಯುತ್ತಿದ್ದರೂ, ಯಾರೂ ಸಹಾಯಕ್ಕೆ ಬರಲಿಲ್ಲ. ನಾಗರಿಕರು ತೋರಲಿಲ್ಲ ಮಾನವೀಯತೆ. ಪೊಲೀಸರು ಈ ಕೇಸು ಯಾವ ಠಾಣೆಗೆ ಬರುತ್ತೆ ಎಂದು ಅರ್ಧ ಗಂಟೆ ಚರ್ಚಿಸುತ್ತಲೇ ಇದ್ದರೇ ಹೊರತು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲೇ ಇಲ್ಲ ಎಂದು ಆಕೆಯ ಸ್ನೇಹಿತ ಹೇಳಿರುವುದನ್ನು ಕೇಳಿದ ಮೇಲೆ, ಕಾನೂನು ಎಷ್ಟು ಸಡಿಲವಾಗಿದೆ ಎಂದು ಚಿಂತಿಸಬೇಕಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಿರ್ಭಯ ಎರಡು ಬಾರಿ ಹೇಳಿಕೆ ಕೊಟ್ಟಿದ್ದಳು, ಎನ್ನುವ ಅಂಶವೂ ಗಮನಕ್ಕೆ ಬಂದಿದೆ. ಇದೆಲ್ಲದರ ಮಧ್ಯೆ ತಮ್ಮ ನಾಲಿಗೆ ಚಪಲ ತೀರಿಸಿಕೊಳ್ಳುವ ಒಂದಿಬ್ಬರು ಹರಕು ರಾಜಕಾರಣಿಗಳ ಬಾಯಿಗೆ ತಕ್ಷಣವೇ ಬ್ರೇಕ್ ಬೀಳುವಷ್ಟು ಪ್ರತಿಭಟನೆಗಳು ತೀವ್ರವಾದಾಗ, ನ್ಯಾಯಾಲಯ ಕೂಡಾ ಎಚ್ಚೆತ್ತುಕೊಂಡಿತ್ತು. ನ್ಯಾಯಾಲಯದ ಒತ್ತಡಕ್ಕೆ ಸರ್ಕಾರ ಕೂಡಾ ಸ್ಪಂದಿಸಿತ್ತು. ಇವರೆಷ್ಟೇ ಮಾಡಿದರೂ, ಆ ಹುಡುಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಇಡೀ ರಾಷ್ಟ್ರ ಕಾನೂನಿನ ವಿರುದ್ಧ ಹೋರಾಟ ನಡೆಸಿತ್ತು. ಆರೋಪಿಗಳು ಎಲ್ಲಿ ತಪ್ಪಿಸಿಕೊಂಡು ಬಿಡುತ್ತಾರೋ ಎನ್ನುವ ಆತಂಕ ಸೃಷ್ಟಿಯಾಗಿತ್ತು. ಎಲ್ಲರ ಬಾಯಲ್ಲಿ ಅಫ್ಜಲ್ ಮತ್ತು ಕಸಬ್ ಬರುತ್ತಿದ್ದರು. ಅಂತಹವರನ್ನೇ ಗಲ್ಲಿಗೇರಿಸಲು ಮೀನಮೇಷ ಎಣಿಸುತ್ತಿರುವ ಸರ್ಕಾರ ಇವರನ್ನು ಶಿಕ್ಷಿಸಲು ಮುಂದಾಗುವುದಿಲ್ಲ ಎನ್ನುವ ಸಂಶಯ ಕಾಡತೊಡಗಿತ್ತು. ಇದಕ್ಕಾಗಿಯೇ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಸಂಬಂಧಪಟ್ಟಂತೆ ಕ್ರಿಮಿನಲ್ ಕಾನೂನು ತಿದ್ದುಪಡಿಗಾಗಿ ಮಾನ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ವರ್ಮಾ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ದೇಶಾದ್ಯಂತ ಇದರ ಬಗ್ಗೆ ಚರ್ಚೆಗಳು ನಡೆದವು. ಅದರಲ್ಲಿ ಅನೇಕ ಸಲಹೆಗಳು ಸಹ ಬಂದಿವೆ. ಕಾನೂನಿನ ಪ್ರಕಾರ ಆರೋಪಿಗಳನ್ನು ಎಷ್ಟರ ಮಟ್ಟಿಗೆ ಶಿಕ್ಷಿಸಬಹುದು ಎನ್ನುವ ಯೋಚನೆ ಬಂದಾಗ, ನಮ್ಮ ದೇಶದ ಸಡಿಲ ಕಾನೂನು ಮೊದಲು ಬದಲಾಗಬೇಕು ಎಂಬ ಕೂಗೇ ಎಲ್ಲೆಡೆ ಕೇಳಿ ಬರುತ್ತಿದೆ. ಯಾಕೆಂದರೆ ವಿಕೃತಕಾಮಿ ಉಮೇಶ್ ರೆಡ್ಡಿ (ಹಲವಾರು ಹೆಣ್ಣುಮಕ್ಕಳ ಮೇಲೆ ನಡೆಸಿದ ಅತ್ಯಾಚಾರ ಸಾಬೀತಾಗಿದ್ದರೂ) ಈಗಲೂ ಶಿಕ್ಷೆಗೆ ಗುರಿಯಾಗದೇ ಕ್ಷಮಾದಾನಕ್ಕಾಗಿ ಕಾದು ಕುಳಿತಿರುವುದು ನಮ್ಮ ಕಣ್ಣ ಮುಂದೆ ಬರುತ್ತದೆ.
ಕಾನೂನಿನಡಿಯಲ್ಲಿ ಶಿಕ್ಷೆಗಿಂತ ಸಾರ್ವಜನಿಕವಾಗಿ ನಾವೇ ಶಿಕ್ಷಿಸುತ್ತೇವೆ ಎಂದು ಜನರು ಕೂಗಿದಾಗ, ಕಾನೂನಿನ ಮೇಲೆ ಅವರಿಗೆಷ್ಟು ನಂಬಿಕೆಯಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅರಬ್ ದೇಶಗಳಲ್ಲಿ ಸಾರ್ವಜನಿಕವಾಗಿ ಇಂತಹವರನ್ನು ಸಾಯಿಸುತ್ತಾರೆ. ಕೆಲವು ದೇಶಗಳಲ್ಲಿ ಕೆಮಿಕಲ್ ಕ್ಯಾಸ್ಟ್ರೇಷನ್ ಶಿಕ್ಷೆ ಇದೆ. ಆದರೆ ನಮ್ಮಲ್ಲಿ? ಇಂತಹ ಕೃತ್ಯಕ್ಕೆ ಒಳಗಾದ ಹೆಣ್ಣು ಇಡೀ ಜೀವನ ಕೊರಗುತ್ತಾ ಬಾಳಬೇಕಾಗುತ್ತದೆ. ಇಂದು ಇದನ್ನೇ ಎಲ್ಲರೂ ಪ್ರಶ್ನಿಸುತ್ತಿರುವುದು. ಕಾನೂನಿನಲ್ಲಿ ಇರುವ ಸಡಿಲ ಅಂಶಗಳು ಗೊತ್ತಿರುವುದಕ್ಕೆ ಅತ್ಯಾಚಾರಗಳು ಗಂಟೆಗೊಂದರಂತೆ ನಡೆಯುತ್ತಿವೆ. ಅವರ್ಯಾರೂ ಕಾನೂನಿನ ಕಪಿಮುಷ್ಠಿಗೆ ಸಿಲುಕುವುದೇ ಇಲ್ಲ. ಅಲ್ಲಿಯೇ ಮುಚ್ಚಿ ಹೋಗಿ ಬಿಡುತ್ತವೆ. ಈ ಪ್ರಕರಣದ ನಂತರ ಪೊಲೀಸರು ಅತ್ಯಾಚಾರದ ದೂರುಗಳನ್ನು ತಕ್ಷಣವೇ ದಾಖಲಿಸಿಕೊಂಡು ಅಪರಾಧಿಯನ್ನು ಬಂಧಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾದರೂ ಸಹ ಇಂತಹವುಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡಬೇಕಾಗಿದೆ. ಈಗ ಅತ್ಯಾಚಾರಿಗಳಿಗೆ ಆಗಿರುವ ಶಿಕ್ಷೆ ಇನ್ನೊಬ್ಬರಿಗೆ ಪಾಠವಾಗಲಿ. ಮಹಿಳೆಯರಿಗೆ ರಕ್ಷಣೆ ನೀಡುವಂತಹ ಇನ್ನಷ್ಟು ಬಲವಾದ ಕಾನೂನುಗಳು ಬರಬೇಕಾಗಿವೆ. ಮೊನ್ನೆ ನಡೆದ ಒಂದು ಪ್ರತಿಭಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಹೇಳುತ್ತಿದ್ದಳು- 'ಏಡ್ಸ್ ಇರುವಂತಹ ವ್ಯಕ್ತಿಯ ರಕ್ತ ತೆಗೆದು ಅತ್ಯಾಚಾರಿಗಳಿಗೆ ಹಾಕಿ.' ಇನ್ನೊಬ್ಬಳು 'ಅವರನ್ನು ನಪುಂಸಕರನ್ನಾಗಿ ಮಾಡಿ ಯುವತಿಯರ ಮಧ್ಯೆ ಬಿಡಿ, ಒದ್ದಾಡಿ ಸಾಯಬೇಕು.' ಅವರುಗಳ ಆಕ್ರೋಶ ನೋಡಿ, ಮತ್ತೊಬ್ಬಳು ಹೇಳುತ್ತಾಳೆ 'ಈಗ ಯಾವ ಗಂಡಸನ್ನೇ ನೋಡಿದರೂ ಆ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಕಾಮಿಗಳ ತರಹವೇ ಕಾಣಿಸುತ್ತಿದ್ದಾರೆ'.
ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ. ಮಹಿಳೆಯರನ್ನು ಗೌರವಿಸುವ ಕೆಲಸ ಮನೆಯಿಂದಲೇ ಆಗಬೇಕು. ಪುರುಷರ ಅಟ್ಟಹಾಸ ದೇಶದ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಆಗಲಿ, ಹೆಣ್ಣಿನ ಮೇಲಲ್ಲ. ಹೆಣ್ಣು ತಿರುಗಿ ಬಿದ್ದರೆ ಏನು ಎನ್ನುವುದು ಈಗ ಅನೇಕ ಕಡೆಗೆ ಸಾಬೀತಾಗುತ್ತಿದೆ. ಅದು ಅತಿರೇಕಕ್ಕೆ ಹೋಗಬಾರದು.


  -ಶೋಭಾ ಹೆಚ್.ಜಿ.
ಸಂಪಾದಕರು
ಸ್ತ್ರೀ ಜಾಗೃತಿ ಮಾಸಪತ್ರಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.