ಆಸ್ಟ್ರೇಲಿಯಾದಲ್ಲಿನ ವಿದ್ಯಾರ್ಥಿ ಜೀವನದ ಅನುಭವ
ಶಾಲಿನಿ: ಧಾರವಾಡ ಜಿಲ್ಲೆಯಲ್ಲಿ ನಾನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿರುವಾಗ ನನ್ನ ಪಿ.ಎಚ್.ಡಿ. ಅಧ್ಯಯನದ ಶಿಫಾರಸುಗಳನ್ನು ನಾನೇ ಪ್ರಾಮಾಣಿಕವಾಗಿ ಅನುಸರಿಸಿ ಅದರ ಪ್ರತಿಫಲ ನೋಡಬೇಕೆಂದು ಇಚ್ಛಿಸಿದ್ದೆ. ಆದರೆ 1999 ರಲ್ಲಿ ನನಗೆ ಕೇಂದ್ರ ಸರ್ಕಾರದ ವತಿಯಿಂದ ಆಸ್ಟ್ರೇಲಿಯಾದಲ್ಲಿ ಎಂ.ಬಿ.ಎ. ಪದವಿಗೆ ನೇಮಿಸಲಾಯಿತು. ನಾನು ಮತ್ತು ರಜನೀಶ್ರವರು ದೆಹಲಿಯಲ್ಲಿರುವಾಗ ಒಟ್ಟಿಗೇ ಎಂ.ಬಿ.ಎ. ವ್ಯಾಸಂಗಕ್ಕಾಗಿ ಅರ್ಜಿ ಹಾಕಿದ್ದೆವು. ಆದರೆ ನನ್ನ ಆಯ್ಕೆ ಮಾತ್ರ ಆಯಿತು. ಮದುವೆಯಾದ ಮೇಲೆ ಮೊದಲನೇ ಸಲ ಅವರನ್ನು ಬಿಟ್ಟು ದೂರ ಹೋಗುವುದಕ್ಕೆ ಮನಸ್ಸು ತಯಾರಿರಲಿಲ್ಲ. ಆದರೆ ರಜನೀಶ್ ಇಂತಹ ಸುವರ್ಣಾವಕಾಶ ಯಾವತ್ತೂ ಸಿಗುವುದಿಲ್ಲ, ಯಾವುದೇ ಸಂಕೋಚವಿಲ್ಲದೆ ಉನ್ನತ ವ್ಯಾಸಂಗಕ್ಕೆ ಹೋಗುವುದಕ್ಕೆ ಸಿದ್ಧಳಾಗು ಎಂದು ಹೇಳಿದರು. ಅದಕ್ಕೇ ಹೇಳುವುದು ಮಹಿಳೆಯರ ಯಶಸ್ಸಿನ ಹಿಂದೆ ಒಬ್ಬ ಪುರುಷನ ಪ್ರೋತ್ಸಾಹ ಇರಲೇಬೇಕು ಎಂದು. ನನ್ನ ಪತಿಯ ಸಹಕಾರ ಇಲ್ಲದಿದ್ದರೆ ನನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶಗಳು ಕಳೆದು ಹೋಗುತ್ತಿದ್ದವು ಎನಿಸುತ್ತದೆ. ಅದರಂತೆ ವಿದೇಶಕ್ಕೆ ಹೋಗಲು ನನ್ನ ತಯಾರಿ ನಡೆದಿತ್ತು.
ವಿದೇಶದಲ್ಲಿ ದೀರ್ಘಕಾಲದ ವರೆಗೆ ವಾಸಿಸಬೇಕಾದ ಮೊದಲನೇ ಸಂದರ್ಭ ಅದಾಗಿತ್ತು. ನಮ್ಮ ದೇಶ ಹಾಗೂ ಆಸ್ಟ್ರೇಲಿಯಾ ದೇಶದ ಸಂಸ್ಕೃತಿ ಮತ್ತು ಆಚಾರ-ವಿಚಾರದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ಪ್ರಶಾಸನಗಳೆರಡೂ ಬ್ರಿಟಿಷ್ ಸಾಮ್ರಾಜ್ಯದ ಅಧೀನವಾಗಿದ್ದುದರಿಂದ ಆಡಳಿತದಲ್ಲಿ ಬಹಳಷ್ಟು ಹೋಲಿಕೆಗಳನ್ನು ಹೊಂದಿದ್ದವು. ನಮಗೆ ಆಸ್ಟ್ರೇಲಿಯಾಕ್ಕೆ ಹೋಗುವ ಮುಂಚೆ ಮೆಲ್ಬರ್ನ್ನಲ್ಲಿ ಸ್ಥಾಪಿತವಾದ ಲಟ್ರೋಬ್ ವಿಶ್ವವಿದ್ಯಾನಿಲಯದ ಬಗ್ಗೆ ಸಮರ್ಪಕ ವಿವರಗಳನ್ನು ನೀಡಲಾಯಿತು. ನಾವು ವಸತಿ ನಿಲಯದಲ್ಲಿ ನಮ್ಮ ಕೊಠಡಿಯನ್ನು ಮುಂಚಿತವಾಗಿ ಕಾಯ್ದಿರಿಸಬೇಕಾಗಿತ್ತು. ಅಂತರ್ಜಾಲದಲ್ಲಿ ಈ ಮಹಾ ವಿಶ್ವವಿದ್ಯಾನಿಲಯದ ವಸತಿ ನಿಲಯಕ್ಕೆ ಸಂಬಂಧಪಟ್ಟ ನಿಯಮಗಳನ್ನು ನೋಡಿದಾಗ ಬಹಳ ಆಶ್ಚರ್ಯವಾಯಿತು. ಅಲ್ಲಿಯ ನಿಯಮಗಳ ಪ್ರಕಾರ ಒಂದೇ ಕೊಠಡಿಯಲ್ಲಿ ಮಹಿಳೆಯರು ಹಾಗೂ ಪುರುಷರು ಒಟ್ಟಿಗೆ ವಾಸ ಮಾಡಬೇಕಾಗಿತ್ತು. ಆದರೆ ನಮ್ಮ ಸಂಸ್ಕೃತಿಗೆ ಇದು ಸರಿಹೊಂದುವಂತಹುದಲ್ಲ. ಆಗ ನಾನು ಒಂದು ಕೊಠಡಿಗೆ ಇಬ್ಬರು ವಿದ್ಯಾರ್ಥಿಗಳ ಶುಲ್ಕ ಭರಿಸುವುದಾಗಿ ಮನವಿ ಮಾಡಿಕೊಂಡು ಒಂದು ಪ್ರತ್ಯೇಕ ಕೊಠಡಿ ನೀಡುವಂತೆ ಕೇಳಿಕೊಂಡೆ ಅಥವಾ ಇನ್ನೊಬ್ಬ ಮಹಿಳಾ ಅಭ್ಯರ್ಥಿ ಜೊತೆಗೆ ಇರಲು ಅವಕಾಶ ನೀಡಬೇಕೆಂದು ಕೋರಿದೆ.
ಆಸ್ಟ್ರೇಲಿಯಾ ರಾಯಭಾರ ಕಚೇರಿಯಲ್ಲಿ ವೀಸಾ ತೆಗೆದುಕೊಳ್ಳಲು ಹೋದಾಗ ನಮಗೆ ಆ ದೇಶದ ಸಂಸ್ಕೃತಿ ಬಗ್ಗೆ ಕೆಲವು ವಿವರಗಳನ್ನು ತಿಳಿಸಲಾಯಿತು. ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಬೇರೆಬೇರೆ ಕಡೆಯಿಂದ, ವಿಶೇಷವಾಗಿ ಯೂರೋಪ್ನಿಂದ ಜನ ಅಲ್ಲಿ ಬಂದು ನೆಲೆಗೊಂಡರು. ಅದೇ ರೀತಿ ಜನಸಂಖ್ಯೆಯಲ್ಲಿ ವಿಯೆಟ್ನಾಂ ಮತ್ತು ಚೈನಾ ಜನಾಂಗದವರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಇದ್ದರು. ಆಸ್ಟ್ರೇಲಿಯಾ ನಾಗರಿಕರು ಬಹಳ ಸ್ವಚ್ಛಂದ ಪ್ರಕೃತಿಯವರು ಹಾಗೂ ಭಾರತೀಯರ ಬಗ್ಗೆ ಅವರಿಗೆ ತುಂಬಾ ಗೌರವ ಇದೆಯೆಂದು ತಿಳಿಸಿದರು. ಏಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿರುವ ಪ್ರೊಫೆಸರ್ಗಳು ಹಾಗೂ ವೈದ್ಯರುಗಳು ಭಾರತೀಯರೇ ಆಗಿದ್ದರು. ಇತ್ತೀಚೆಗೆ ಬಹಳಷ್ಟು ವಿದ್ಯಾರ್ಥಿಗಳು ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದಾರೆ. ನಮಗೆ ಅಲ್ಲಿ ಒಂದು ವಿಶೇಷ ಸೂಚನೆ ನೀಡಿದರು. ಅದೇನೆಂದರೆ ನೀವು ಭಾರತದಲ್ಲಿರುವಾಗ ಹೊಸಬರ ಪರಿಚಯವಾದರೆ ಅವರನ್ನು 'ನೀವು ಏನು ಕೆಲಸ ಮಾಡುತ್ತಿದ್ದೀರಿ, ನಿಮ್ಮ ಆದಾಯ ಎಷ್ಟು, ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ' ಮುಂತಾದ ಖಾಸಗಿ ಪ್ರಶ್ನೆಗಳನ್ನು ಸಂಕೋಚವಿಲ್ಲದೆ ಕೇಳಿರುತ್ತೀರಿ. ಆದರೆ ಆಸ್ಟ್ರೇಲಿಯಾದಲ್ಲಿ ಈ ರೀತಿ ಮಾಡುವ ಹಾಗಿಲ್ಲ. ಏಕೆಂದರೆ ಇನ್ನೊಬ್ಬರ ವೈಯಕ್ತಿಕ ವಿಷಯಗಳನ್ನು ತನಿಖೆ ಮಾಡುವುದು ಒಳ್ಳೆಯ ಶಿಷ್ಟಾಚಾರ ಅಲ್ಲ ಎಂದು ಪರಿಗಣಿಸಲಾಗುತ್ತದೆ.
ಆಸ್ಟ್ರೇಲಿಯಾಕ್ಕೆ ನಾನು ಹೋಗಿ ಅಲ್ಲಿ ವಸತಿ ನಿಲಯದಲ್ಲಿ ನೆಲೆಗೊಂಡು ನನ್ನ ಅಧ್ಯಯನವನ್ನು ಪ್ರಾರಂಭ ಮಾಡಿದೆ. ನನ್ನ ಜೊತೆಗೆ ಸುಮಾರು ಐದಾರು ಭಾರತೀಯ ವಿದ್ಯಾರ್ಥಿಗಳು ಇದ್ದರು ಮತ್ತು ಭಾರತದ ನಾಲ್ಕೈದು ವಿವಿಧ ಸೇವೆಯಲ್ಲಿದ್ದ ಅಧಿಕಾರಿಗಳು ಉದಾ- ಭಾರತೀಯ ಆಡಳಿತ ಸೇವೆ, ರೈಲ್ವೇ ಸೇವೆ, ಆಡಿಟ್ ಅಕೌಂಟೆಂಟ್ ಸೇವೆಗಳ ಅಧಿಕಾರಿಗಳು ವ್ಯಾಸಂಗಕ್ಕಾಗಿ ಬಂದಿದ್ದರು. ನಾವು ಎಲ್ಲರೂ ಸೇರಿ ಒಂದು ಪುಟ್ಟ ಭಾರತವನ್ನು ಅಲ್ಲಿ ರಚನೆ ಮಾಡಿಕೊಂಡಿದ್ದೆವು. ನಮ್ಮ ತರಗತಿಯಲ್ಲಿ ನಲವತ್ತು ನಲವತ್ತೈದು ವಯಸ್ಸಿನ ವಿದ್ಯಾರ್ಥಿಗಳೂ ಸಹ ಇದ್ದರು. ಮೊದಲನೇ ದಿನ ತರಗತಿಯಲ್ಲಿ ಆಶ್ಚರ್ಯಪಡುವಂಥ ಒಂದು ಪ್ರಸಂಗ ನೋಡಿದೆ. ಅದೇನೆಂದರೆ, ತರಗತಿಯಲ್ಲಿ ವಿದ್ಯಾರ್ಥಿಗಳು ಬರ್ಗರ್ ತಿನ್ನುತ್ತಾ, ಕೋಕ್ ಕುಡಿಯುತ್ತಾ ಓದುತ್ತಿದ್ದರು. ಈ ಬಗ್ಗೆ ಗುರುಗಳು ಯಾವುದೇ ಆಕ್ಷೇಪಣೆ ಮಾಡುತ್ತಿರಲಿಲ್ಲ, ಮಾತ್ರವಲ್ಲ, ವಿದ್ಯಾರ್ಥಿಗಳು ಗುರುಗಳನ್ನು ವಿದ್ಯಾರ್ಥಿಗಳು ಅವರ ಹೆಸರು ಹಿಡಿದೇ ಸಂಭೋದಿಸುತ್ತಿದ್ದರು. ನಮ್ಮ ದೇಶದಲ್ಲಿ ಗುರುಗಳು ಎಂದರೆ ದೇವರ ಸಮಾನ ಮತ್ತು ಶಾಲೆ ಎಂದರೆ ಒಂದು ದೇವಾಲಯವಿದ್ದಂತೆ ಎಂದು ಭಾವಿಸಲಾಗುತ್ತದೆ. ಆದರೆ ಅಲ್ಲಿಯ ಅನೌಪಚಾರಿಕ ವಾತಾವರಣ ನೋಡಿ ಒಂದುರೀತಿ ದಂಗುಬಡಿದಂತಾಯಿತು ಹಾಗೂ ವಾಸ್ತವ್ಯಕ್ಕೆ ಬರಲು ಕ್ಷಣಕಾಲ ಬೇಕಾಯಿತು. ಸ್ವಲ್ಪ ಸಮಯದ ನಂತರ ನಾನು ಆ ವಾತಾವರಣಕ್ಕೆ ಹೊಂದಿಕೊಂಡೆ. ಬಹುಶಃ ಉನ್ನತ ವ್ಯಾಸಂಗ, ಅದರಲ್ಲೂ ವೃತ್ತಿಪರ ಕೋರ್ಸ್ಗಳಲ್ಲಿ ಗುರುಗಳು ಮತ್ತು ವಿದ್ಯಾರ್ಥಿಗಳ ನಡುವೆ ಪಾರಂಪರಿಕವಾಗಿ ದೊಡ್ಡವರು-ಚಿಕ್ಕವರು ಎಂಬ ಬೇಧ ಇರುವಂಥಹುದಲ್ಲ, ಎಲ್ಲರೂ ಪರಸ್ಪರ ಕಲಿಯುವಂತಹ ಸನ್ನಿವೇಶ ಅಲ್ಲಿ ಕಂಡು ಬಂದಿತ್ತು. ಏಕೆಂದರೆ ಎಂ.ಬಿ.ಎ. ಕೋರ್ಸ್ಗೆ ಸೇರಬೇಕಾದರೆ ಕೆಲಸದ ಅನುಭವವೂ ಬೇಕಾಗಿತ್ತು.
ವಿದೇಶದಲ್ಲಿನ ವ್ಯಾಸಂಗದಲ್ಲಿ ಅತಿ ಮುಖ್ಯವಾಗಿ ನಾವು ಕಲಿತಿದ್ದೇನೆಂದರೆ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಎಂಬುದು. ಅದು ಓದುವುದಾಗಿರಬಹುದು, ಟಿಪ್ಪಣಿಗಳನ್ನು ಟೈಪ್ ಮಾಡುವುದಾಗಿರಬಹುದು ಅಥವಾ ಅಡಿಗೆ ಮಾಡಿ, ಪಾತ್ರೆಗಳನ್ನು ಸ್ವಚ್ಛ ಮಾಡುವುದಾಗಿರಬಹುದು. ವಿದೇಶದಲ್ಲಿ ಭಾರತದಲ್ಲಿರುವಂತೆ ಆಪ್ತ ಸಹಾಯಕರಾಗಲೀ, ಅಡುಗೆಯವರಾಗಲೀ, ಕಸ ಗುಡಿಸುವವರಾಗಲೀ ಇಲ್ಲದಿದ್ದುದರಿಂದ ಅಲ್ಲಿಂದ ತಿರುಗಿಬಂದ ಮೇಲೆ ನಮ್ಮ ಕೆಲಸಗಳಿಗಾಗಿ ಬೇರೆಯವರ ಮೇಲೆ ಅವಲಂಬಿಸುವ ಪರಿಪಾಠ ಬಹುತೇಕ ಇಲ್ಲವಾಯಿತು.
ಅಲ್ಲಿನ ಶಿಕ್ಷಣ ಪದ್ಧತಿಯ ಅತಿ ಮುಖ್ಯ ಅಂಶವೆಂದರೆ ನರ್ಸರಿಯಿಂದ ಹಿಡಿದು ವೃತ್ತಿಪರ ವ್ಯಾಸಂಗದವರೆಗೆ ವಿದ್ಯಾರ್ಥಿಗಳನ್ನು ತಮ್ಮ ಅಧ್ಯಯನವನ್ನು ತಾವೇ ಮಾಡಿಕೊಳ್ಳಲು ಸಿದ್ಧಗೊಳಿಸುವುದು. ಈ ಪದ್ಧತಿ ನಮ್ಮಲ್ಲಿ ಇದ್ದರೆ ಎಲ್ಲರೂ ಐ.ಎ.ಎಸ್. ಪರೀಕ್ಷೆಗೆ ತಾವಾಗಿಯೇ ಸಿದ್ಧರಾಗಬಹುದು, ಮಾತ್ರವಲ್ಲ ಯಾರಾದರೂ ಇನ್ನೊಬ್ಬರ ಕೆಲಸವನ್ನು ನಕಲು ಮಾಡಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಲು ಕಠಿಣ ಕ್ರಮಗಳ ವ್ಯವಸ್ಥೆಯೂ ಅಲ್ಲಿದೆ. ಇನ್ನು ವಿದ್ಯಾರ್ಥಿಗಳು ತಯಾರಿಸಿದ ಟಿಪ್ಪಣಿಗಳನ್ನು ಮಂಡಿಸಲು ಯಾವಾಗ ಬೇಕಾದರೂ ಕರೆ ಬರುವ ಸಂಭವವಿತ್ತು. ಅವರ ಮಂಡನೆಯ ಮೇಲೆ ಅಂಕಗಳನ್ನು ಕೊಡಲಾಗುತ್ತಿತ್ತು. ನಮ್ಮಲ್ಲಿ ಈ ಪದ್ಧತಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳು ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಕೇವಲ ಪರೀಕ್ಷೆಯ ಸಮಯದಲ್ಲಿ ಮಾತ್ರ ಓದುವುದನ್ನು ಬಿಟ್ಟು ಪ್ರತಿನಿತ್ಯ ಓದುವುದರಲ್ಲಿ ತಲ್ಲೀನರಾಗಬಹುದು.
ಈ ವ್ಯಾಸಂಗದಲ್ಲಿ ನನಗೆ ಅತೀ ಒಳ್ಳೆಯ ಮತ್ತು ಮೆಚ್ಚುಗೆಯಾದ ಅಂಶವೆಂದರೆ 'ಒಂದು ಉತ್ತಮ ವ್ಯಾಪಾರವೆಂದರೆ ಅದು ನೈತಿಕತೆಯಿಂದ ಮಾಡುವ ವ್ಯಾಪಾರವಾಗಿರಬೇಕು' ಎನ್ನುವುದು. ನಾವು ಉತ್ತಮವಾಗಿ ವ್ಯಾಪಾರ ಮಾಡಬೇಕಾದರೆ ನ್ಯಾಯಪರವಾಗಿ ಇರಬೇಕು. ನ್ಯಾಯಪರವಾಗಿ ಇಲ್ಲದೇ ಇರುವಾಗ ಆ ವಿಷಯ ನಮ್ಮ ಗ್ರಾಹಕರಿಗೆ ಗೊತ್ತಿಲ್ಲದಿದ್ದರೆ ಮುಂದೆ ಎಂದೋ ಒಂದು ದಿನ ಗೊತ್ತಾಗುತ್ತದೆ. ಆಗ ಅವರು ನಮ್ಮ ಮೇಲೆ ಇಟ್ಟಿದ್ದ ಭರವಸೆ, ವಿಶ್ವಾಸ ದೂರವಾಗಿಬಿಡುತ್ತದೆ. ಭರವಸೆ, ವಿಶ್ವಾಸ ಹೋದರೆ ನಮ್ಮ ವ್ಯಾಪಾರ ನಡೆಯುವುದಿಲ್ಲ. ನಂತರ ನಾವು ಎಷ್ಟೇ ನ್ಯಾಯವಾಗಿ ಸೇವೆಗಳನ್ನು ನೀಡಿದರೂ ಸಹ, ಅವರು ಅವುಗಳನ್ನು ನಮ್ಮಲ್ಲಿ ಪಡೆಯುವುದಕ್ಕೆ ಇಷ್ಟಪಡುವುದಿಲ್ಲ. ಆಗ ನಮ್ಮ ವ್ಯಾಪಾರ ಇನ್ನೊಬ್ಬ ವ್ಯಾಪಾರಿಗೆ ಹೋಗಿಬಿಡುತ್ತದೆ. ನೂರು ವರ್ಷದಿಂದ ಅಸ್ತಿತ್ವದಲ್ಲಿರುವ ಜಿ.ಎಂ. ಮೊಟಾರ್ಸ್ನಂತಹ ಪ್ರತಿಷ್ಠಿತ ಕಂಪೆನಿಗಳು ಇಂದಿಗೂ ಇರುವುದಕ್ಕೆ ಮುಖ್ಯ ಕಾರಣ ಏನೆಂದರೆ ವ್ಯಾಪಾರದ ನೀತಿಸಂಹಿತೆ. ಈ ಮಾತು ಅಕ್ಷರಶಃ ಎಲ್ಲರ ಜೀವನಕ್ಕೂ ಅನ್ವಯವಾಗುತ್ತದೆ. ಅವರು ಸರ್ಕಾರಿ ನೌಕರರಾಗಿರಬಹುದು, ಖಾಸಗೀ ಕೆಲಸಗಾರರಿರಬಹುದು, ಮಾಧ್ಯಮ ಪ್ರತಿನಿಧಿಗಳಾಗಿರಬಹುದು ಅಥವಾ ಜನಪ್ರತಿನಿಧಿಗಳಾಗಿರಬಹುದು .
(ಮುಂದುವರೆಯುವುದು)
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

