ಅಂಕಣಗಳು

ಎಲ್ಲ ಸುಧಾರಣೆಗಳಲ್ಲೂ ನೇತಾರರು ಹೊರಗೆ!

Published On :

ನ್ಯಾಯಮೂರ್ತಿ ವರ್ಮ ಸಮಿತಿ ಒಂದೇ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಲೈಂಗಿಕ ಅತ್ಯಾಚಾರ ನಿಗ್ರಹಿಸಲು ಕಠಿಣ ಕಾನೂನು ರೂಪಿಸಲು ಸೂಕ್ತ ಶಿಫಾರಸು ಮಾಡಲು ನೇಮಕಗೊಂಡ ಈ ಸಮಿತಿ ಅತೀ ಕಡಿಮೆ ಅವಧಿಯಲ್ಲಿ ವಿಸ್ತೃತವಾದ ವರದಿ ಸಲ್ಲಿಸಿರುವುದು ಅಯೋಗ ಅಥವಾ ಸಮಿತಿಗಳ ಇತಿಹಾಸದಲ್ಲಿಯೇ ಹೊಸ ದೃಷ್ಟಾಂತವೆಂದರೆ ತಪ್ಪಾಗಲಾರದು.
ಇತ್ತ ಈ ವಿಚಾರದಲ್ಲಿ ಸರ್ಕಾರವೂ ತೀರಾ ಆಸಕ್ತಿ ಹೊಂದಿದೆ. ಸಮಿತಿಯ ವರದಿಯಲ್ಲಿ ಇಲ್ಲದ ಕಠಿಣ ಶಿಕ್ಷೆಯನ್ನು ಸೇರಿಸಿ ಕಾನೂನು ರೂಪಿಸಲು ಮುಂದಾಗಿದೆ. ನ್ಯಾಯಮೂರ್ತಿ ವರ್ಮ ಸಮಿತಿಯ ಶಿಫಾರಸಿನಲ್ಲಿ ಅತಿ ಕ್ರೂರತನದಲ್ಲಿ ಅತ್ಯಾಚಾರ ಎಸಗಿದವರಿಗೂ ಗಲ್ಲು ಶಿಕ್ಷೆ ಶಿಫಾರಸು ಮಾಡಿಲ್ಲ. ಆದರೆ ಸರ್ಕಾರ ರೂಪಿಸಿದ ಕಾನೂನಿನಲ್ಲಿ ಗಲ್ಲು ಶಿಕ್ಷೆ ಸೇರಿಸಲಾಗಿದೆ. ಕಿಂಚಿತ್ತೂ ವಿಳಂಬವಾಗಬಾರದೆಂದು ಸುಗ್ರೀವಾಜ್ಞೆಯ ಮೂಲಕ ಕಾನೂನು ಜಾರಿಗೆ ತಂದಿದೆ. ತನ್ಮೂಲಕ ತನಗಿರುವ ಅತೀವ ಕಳಕಳಿಯನ್ನು ಸರ್ಕಾರ ವ್ಯಕ್ತಪಡಿಸಿದೆ. ಆಶ್ಚರ್ಯವೆಂದರೆ ಸರ್ಕಾರ ಜ. ವರ್ಮ ಸಮಿತಿಯ ವರದಿಯನ್ನು ಸಂಪೂರ್ಣವಾಗಿ ಸ್ವೀಕರಿಸಲಿಲ್ಲ. ಲೈಂಗಿಕ ಆರೋಪ ಎದುರಿಸುತ್ತಿರುವ ರಾಜಕಾರಣಿ/ಚುನಾಯಿತ ಪ್ರತಿನಿಧಿಯನ್ನು ಅಮಾನತ್‌ಗೊಳಿಸುವ ಅಥವಾ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯದಂತೆ ತಡೆಯುವ ಸಮಿತಿಯು ಶಿಫಾರಸ್ಸನ್ನು ಸರ್ಕಾರ ಸ್ವೀಕರಿಸಲೇ ಇಲ್ಲ. ವರದಿ ಸಲ್ಲಿಸಿದ ದಿನದಂದೇ ಓರ್ವ ಕಾಂಗ್ರೆಸ್ ನಾಯಕರು ರಾಜಕಾರಣಿಗಳನ್ನು ಸಂರಕ್ಷಿಸುವ ತಮ್ಮ ಇಂಗಿತದ ಸಂದೇಶವನ್ನು ದೂರದರ್ಶನದ ಮೂಲಕ ದೇಶಕ್ಕೆ ರವಾನಿಸಿದ್ದಾರೆ. ಆರೋಪಿತ ರಾಜಕಾರಣಿಗಳನ್ನು ನಿಯಂತ್ರಿಸುವ ಶಿಫಾರಸ್ ಒಂದನ್ನು ಬಿಟ್ಟು ಉಳಿದಂತೆ ಸಮಿತಿಯ ವರದಿಯನ್ನು ಸ್ವೀಕರಿಸಲಾಗುವುದು. ಸಕ್ರಿಯ ರಾಜಕಾರಣದಲ್ಲಿದ್ದ ವ್ಯಕ್ತಿಯನ್ನು ಲೈಂಗಿಕ ಆರೋಪದ ಹಿನ್ನೆಲೆಯಲ್ಲಿ ನಿಯಂತ್ರಿಸಲು ಕಾನೂನಿನಲ್ಲಿ ಅಡಚಣೆಯುಂಟು ಎಂದು ಹೇಳಿಕೆ ನೀಡಿದ್ದಾರೆ.
ಪ್ರಸ್ತಾಪಿತ ಶಿಫಾರಸ್ಸನ್ನು ಸರ್ಕಾರ ಒಪ್ಪಿದ್ದರೆ ಒಂದು ಉತ್ತಮ, ಜನ ಮೆಚ್ಚುವ ಚುನಾವಣಾ ಸುಧಾರಣೆ (Electoral Reforms) ಆಗುತ್ತಿತ್ತು. ಸರ್ಕಾರ ಒಪ್ಪಲಿಲ್ಲ. ಆದರೆ ಆ ಸರ್ಕಾರಿ ವಕ್ತಾರರು ಕಾನೂನಿನ ಅಡಚಣೆಯ ಸ್ವರೂಪವನ್ನು ವಿವರಿಸಲಿಲ್ಲ. ಹಾಗಾಗಿ ಹೇಳಿಕೆ ಒಗಟಿನಂತಿದೆ. ಯಾಕೆಂದರೆ ಚುನಾಯಿತ ಪ್ರತಿನಿಧಿ ಸಾರ್ವಜನಿಕ ಸೇವಕ ಎಂದು ನ್ಯಾಯಾಲಯವೇ ಘೋಷಿಸಿದೆ. ಅದು ಮುಗಿದ ಅಧ್ಯಾಯ. ಚರ್ಚೆ ಬಾಕಿ ಇಲ್ಲ. ಅಂದ ಮೇಲೆ ಸಾಮಾನ್ಯ ಸಾರ್ವಜನಿಕ ನೌಕರನಿಗೆ ಅನ್ವಯಿಸುವ ಕಾನೂನು ನಮ್ಮ ರಾಜಕಾರಣಿ ಮಿತ್ರರಿಗೂ ಅನ್ವಯಿಸಬೇಕಲ್ಲವೇ? ಈ ನೆಲದ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ! ಓರ್ವ ಸರ್ಕಾರಿ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಅನುಸಂಧಾನವಾದ ತಕ್ಷಣ ಅರ್ಥಾತ್ ಆರೋಪ ಹೇರಲ್ಪಟ್ಟ ಘಳಿಗೆಯಿಂದಲೇ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು. ಕರ್ತವ್ಯದಿಂದ ವಿರಹತಪಡಿಸಲಾಗುವುದು. ಈ ನಿಯಮ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸುವುದು ಎಷ್ಟು ಸಮರ್ಥನೀಯ. ಯಾಕೆ ಈ ತಾರತಮ್ಯ. ಆರೋಪಕ್ಕೊಳಗಾಗಿಯೂ ಸಕ್ರಿಯ ರಾಜಕಾರಣದಲ್ಲಿ ಅಬಾಧಿತವಾಗಿ ಮುಂದುವರಿಯುವ ಹುನ್ನಾರ ಇವರ ಭಾವಶುದ್ಧಿಯನ್ನು ಪ್ರಶ್ನಿಸುತ್ತದೆ.
ಸ್ವಾತಂತ್ರ್ಯಾನಂತರದ ಆರು ದಶಕಗಳಲ್ಲಿ ಯಾವ ಸರ್ಕಾರವೂ ಕ್ರಾಂತಿಕಾರಿ ಚುನಾವಣಾ ಸುಧಾರಣೆಗಳನ್ನು ತರುವ ಪ್ರಯತ್ನ ಮಾಡಿಲ್ಲ. ಈ ವಿಫಲತೆಯ ಬಹುಪಾಲು ಹೊಣೆ ಕಾಂಗ್ರೆಸ್ ಪಕ್ಷ ಹೊರಬೇಕೆಂದರೆ ತಪ್ಪಾಗಲಾರದು. ಯಾಕೆಂದರೆ ಸ್ವತಂತ್ರ ಭಾರತದ ಮೊದಲ ಮೂವತ್ತು ವರ್ಷ ಸತತವಾಗಿ ಹಾಗೂ ಆನಂತರದ ಮೂವತ್ತು ವರ್ಷಗಳ ಬಹುತೇಕ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ದೇಶದಲ್ಲಿ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ತರಲಾದ ಸುಧಾರಣೆಗಳೆಲ್ಲ ಚುನಾವಣಾ ಅಕ್ರಮಗಳು ಸಂಭವಿಸದಂತೆ, ಕೇವಲ ಸಾರ್ವಜನಿಕರನ್ನು ನಿಯಂತ್ರಿಸಲು ಹೆಚ್ಚು ಒತ್ತು ಕೊಟ್ಟಂತಿದೆ. ಉದಾ: ನಿಂದನಾತ್ಮಕ ಭಾಷಣದ ನಿರ್ಬಂಧ, ಭಿತ್ತಿ ಪತ್ರ ಹಚ್ಚಿ ಪರಿಸರ ಮಾಲಿನ್ಯವಾಗುವುದನ್ನು ತಡೆಯುವುದು, ಹೊತ್ತು ಗೊತ್ತಿಲ್ಲದೆ ಸ್ಲೋಗನ್ ಕೂಗುವುದಕ್ಕೆ ತಡೆ ಇತ್ಯಾದಿ. ಇವುಗಳಾವುವೂ ಚುನಾವಣೆಯ ಗುಣಮಟ್ಟ (quality)ಉತ್ತಮವಾಗಲು ಸಹಕಾರಿಯಾಗಬಲ್ಲವುಗಳಾಗಿಲ್ಲ.
ಅಲ್ಲದೆ ಈ ನಿರ್ಬಂಧಗಳಿಂದ ಸರ್ಕಾರ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಗ್ಗೆ ತಳೆದಿರುವ ಕಲ್ಪನೆ ಪ್ರಜಾಸತ್ತಾತ್ಮಕ ತತ್ವಕ್ಕೆ ವಿರೋಧವೆಂಬ ಹಾಗೆ ಕಂಡು ಬರುತ್ತದೆ. ಪ್ರಜಾಸತ್ತೆಯಲ್ಲಿ ಸಾರ್ವತ್ರಿಕ ಚುನಾವಣೆ ಒಂದು ರಾಷ್ಟ್ರೀಯ ಹಬ್ಬದಂತಿರಬೇಕೆಂದು ರಾಜನೀತಿ ಕೋವಿದರ ಅಭಿಮತ. ಚುನಾವಣೆಯ ನಿಕಟಪೂರ್ವ ದಿನಗಳಲ್ಲಿ ಮುಕ್ತ ಹಾಗೂ ಸಡಗರದ ವಾತಾವರಣ ಇರಬೇಕಾದುದು ಅಪೇಕ್ಷಣೀಯ. ಸಾಮಾನ್ಯವಾಗಿ ಪ್ರತಿಷ್ಠಿತ ವ್ಯಕ್ತಿಗಳ ದೋಷ, ಅವರ ಮೇಲಿನ ಆರೋಪಗಳು ಮಾಧ್ಯಮಗಳಲ್ಲಿಯೂ ವರದಿಯಾಗುವುದಿಲ್ಲ. ತಮ್ಮ ಹಣಬಲ, ತೋಳ್ಬಲದಲ್ಲಿ ಆರೋಪ ಸಾಬೀತಾಗದಂತೆ ತಡೆಯುವಲ್ಲಿ ಅವರು ಯಶಸ್ವಿಯಾಗಿರುತ್ತಾರೆ. ಆದರೆ ವಿಚಾರ ಸಾರ್ವಜನಿಕರ ಗ್ರಹಿಕೆಯಲ್ಲಿ ಸುಪ್ತವಾಗಿರುತ್ತದೆ. ಅನಿರ್ಬಂಧಿತ ವಾಕ್ ಸ್ವಾತಂತ್ರ್ಯ ಇಂಥಹ ಮಾಹಿತಿಗಳನ್ನು ಹೊರಹಾಕಲು ಸಹಕಾರಿ. ಕಾಲಮಿತಿ ಇರಲಿ. ಚುನಾವಣಾ ಪ್ರಚಾರದ ವೇಳೆ ರಾಜಕಾರಣಿಗಳಾಗಲಿ, ಸಾರ್ವಜನಿಕರಾಗಲೀ ನುಡಿದ ಕಟಕಿ, ಮಾಡಿದ ಟೀಕೆಗಳನ್ನು ನಿಂದನೆ ಎಂದು ಪರಿಗಣಿಸದೆ ಸಾರ್ವಜನಿಕರ ಗ್ರಹಿಕೆಗೆ ಬಿಡಬೇಕು. ಈ ಅವಕಾಶದಿಂದ ಅನುಚಿತ ಹಾಗೂ ಅನಿಯಂತ್ರಿತ ನಿಂದನೆಗಳು ಅಧಿಕವಾದೀತು, ಪರಿಣಾಮವಾಗಿ ಗಲಭೆಗೆ ಹೇತುವಾದೀತು ಎಂಬ ವಾದದಲ್ಲಿ ಹುರುಳಿಲ್ಲ. ಈ ಮುಕ್ತ ಸ್ವಾತಂತ್ರ್ಯವೇ ಒಬ್ಬರನ್ನೊಬ್ಬರು ವಿನಾಕಾರಣ ನಿಂದಿಸುವ ಅವಕಾಶವನ್ನು ಸ್ವಯಂ ನಿಯಂತ್ರಿಸುತ್ತದೆ.
ಸರ್ಕಾರ ಹೀಗೆ ನಿರರ್ಥಕವಾದ ಕೆಲವು ಸುಧಾರಣೆಗಳನ್ನು ಮಾತ್ರ ಇಲ್ಲಿಯ ತನಕ ತಂದಿದೆ. ಹೊರತಾಗಿ ರಾಜಕಾರಣವನ್ನು ಶುಚಿಗೊಳಿಸುವ ಉದಾ: ಕ್ರಿಮಿನಲ್‌ಗಳ ರಾಜಕೀಯ ಪ್ರವೇಶ ತಡೆಗಟ್ಟುವ ಮಹತ್ವಪೂರ್ಣವಾದ ಯಾವ ಕಾನೂನನ್ನೂ ರೂಪಿಸಲಿಲ್ಲ. ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು, ಆರೋಪದ ಹಿನ್ನೆಲೆಯಲ್ಲಿ ಬಂಧನದಲ್ಲಿರುವವರೂ ನಿರಾತಂಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಗೆದ್ದು ಸದನದಲ್ಲಿ ರಾರಾಜಿಸುತ್ತಿದ್ದಾರೆ. ಅಪರಾಧಿ ಮಾತ್ರ ಅನರ್ಹವೆಂಬ ಉದಾರತೆಯ ತತ್ವ ಭಾರತೀಯ ರಾಜಕಾರಣಿಗಳಿಗೆ ವರ. ಇದು ಪ್ರಜಾಸತ್ತೆಗೆ ಶೋಭೆ ತರುವಂತದ್ದಲ್ಲ. ಅದಾಗ್ಯೂ ಅವರನ್ನು ಸಂರಕ್ಷಿಸುವ ಕೆಲಸ ನಿರಾತಂಕವಾಗಿ ಸಾಗುತ್ತಿದೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳ ನಡುವೆ ಸಹಮತವಿದೆ. ಇದಕ್ಕೆ ನ್ಯಾಯಮೂರ್ತಿ ವರ್ಮ ಸಮಿತಿ ವರದಿಯೇ ಸಾಕ್ಷಿ. ಲೈಂಗಿಕ ಆರೋಪಗಳನ್ನು ಹೊತ್ತ ರಾಜಕಾರಣಿಗಳನ್ನು ರಾಜಕೀಯದಿಂದ ದೂರವಿಡುವ ಸಮಿತಿಯ ಪ್ರಸ್ತಾಪಗಳಿಗೆ ಬಿಜೆಪಿಯೂ ಕೂಡ ಪ್ರಬಲ ಬೆಂಬಲ ನೀಡಲಿಲ್ಲ. ಸುರಿಸಿರುವುದು ಮೊಸಳೆ ಕಣ್ಣೀರು ಮಾತ್ರ. ವಿವಾಹಿತ ದಂಪತಿಗಳ ನಡುವೆ ನಡೆಯಬಹುದಾದ ಬಲಾತ್ಕಾರದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲು ಸಮಿತಿ ಮಾಡಿದ ಶಿಫಾರಸ್ಸನ್ನು ವಿರೋಧಿಸುವ ಹಾಗೂ ವಿಶ್ಲೇಷಿಸುವ ವಿಚಾರದಲ್ಲಿ ಬಿಜೆಪಿ ವ್ಯಸ್ತವಾಗಿದೆಯೇ ಹೊರತು ಲೈಂಗಿಕ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳನ್ನು ನಿಯಂತ್ರಿಸುವ ಪ್ರಸ್ತಾಪದಲ್ಲಿ ಹೆಚ್ಚು ಆಸಕ್ತಿ ತೋರಿಸಲಿಲ್ಲ.
ಪರಿಣಾಮಕಾರಿ ಚುನಾವಣಾ ಸುಧಾರಣೆ ಯಾವ ರಾಜಕೀಯ ಪಕ್ಷಕ್ಕೂ ಬೇಡ. ಕಾನೂನು ರೂಪಿಸುವುದು ಇವರೇ ತಾನೆ. ತಮ್ಮ ಅನುಕೂಲ ಹಾಗೂ ಹಿತಾಸಕ್ತಿಗೆ ಧಕ್ಕೆಯಾಗುವ ಕಾನೂನು ರೂಪಿಸಲು ಸಿದ್ಧರಾಗುವವರೇ ಈ ರಾಜಕಾರಣಿಗಳು. ಕಾನೂನು ಮಾಡುವುದು ಸಂಸತ್ತಿನ ಪರಮಾಧಿಕಾರ. ನಾಗರಿಕ ಸಮುದಾಯ ನುಡಿದಂತೆ ನಡೆಯುವವರು ನಾವಲ್ಲ. ಹಾಗೆ ನಡೆದಲ್ಲಿ ಸಂಸತ್ತಿನ ಘನತೆ ಕುಂಠಿತವಾದೀತು ಎಂಬಿತ್ಯಾದಿ ಹೇಳಿಕೆಯನ್ನು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಸಂಘಟನೆಯ ಚಳವಳಿಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರು ನೀಡಿರುವುದು ಸಾರ್ವಜನಿಕರ ಕಿವಿಯಲ್ಲಿ ಈಗಲೂ ಮಾರ್ದನಿಸುತ್ತಿಲ್ಲವೇ! ಇವರ ಸ್ಪಂದನವೇನೆಂಬುದು ಈಗ ಸ್ವಯಂವೇದ್ಯ.
ಭಾರತದಲ್ಲಿರುವಷ್ಟು ಸರಳ, ಅತಿ ಕಡಿಮೆ ನಿರ್ಬಂಧವುಳ್ಳ ರಾಜಕೀಯ ವ್ಯವಸ್ಥೆ ಬೇರೆ ಯಾವ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿಯೂ ಇರಲಾರದು. ಇಲ್ಲಿ ಸಾರ್ವಜನಿಕರಿಂದ ಆಯ್ಕೆಯಾದ ವ್ಯಕ್ತಿ, ತನ್ನ ಸದಸ್ಯತ್ವಕ್ಕೆ ಅವಧಿಗೆ ಮುನ್ನ ರಾಜೀನಾಮೆ ನೀಡಬಹುದು. ಅದೇ ಮರು ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಸೇವಾ ಮನೋಭಾವ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಅವರು ಸ್ಪರ್ಧಿಸುತ್ತಾರೆ ಎಂಬ ನಮ್ಮ ಗ್ರಹಿಕೆ ತಪ್ಪು. ಅದು ಅವರ ಹಕ್ಕು, ಅವಕಾಶ, ಇದು ಸತ್ಯ. ಇಂದು ರಸ್ತೆ ತಡೆಗಟ್ಟುವ ಉದ್ದೇಶದಿಂದ ರೂಪುಗೊಂಡ ಸಂಘಟನೆ ನಾಳೆ ರಾಜಕೀಯ ಪಕ್ಷವೆಂಬ ಮಾನ್ಯತೆ ಪಡೆಯುತ್ತದೆ. ಮಾನ್ಯತೆ ದೊರೆಯಬೇಕಾದರೆ ಪಕ್ಷ ತಾನು ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತೇನೆ ಎಂಬ ಅಂಶಗಳನ್ನು ತನ್ನ ಸಿದ್ಧಾಂತದಲ್ಲಿ ಸಾದರ ಪಡಿಸಬೇಕು ಎಂಬ ನಮ್ಮ ಗ್ರಹಿಕೆ ತಪ್ಪು. ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 29(ಎ) ರಂತೆ ಅರ್ಜಿ ಬಂದಿದೆಯೋ? ಸಾಕು. ಗ್ರ್ಯಾಂಟೆಡ್, ಇದು ಸತ್ಯ. ಇಷ್ಟು ವಿಪುಲ ಅವಕಾಶ ಅನುಭವಿಸುತ್ತಿರುವ ನಮ್ಮ ರಾಜಕಾರಣಿಗಳು ಇಂಥ ಅವಕಾಶಗಳನ್ನು ಮೊಟಕುಗೊಳಿಸುವ ಚುನಾವಣಾ ಸುಧಾರಣೆಗಳನ್ನು ತರಬಯಸುವರೇ? ಆದರೆ ಸಾರ್ವಜನಿಕರಿಗಾಗಿ, ಸಾರ್ವಜನಿಕ ಹಿತಾಸಕ್ತಿಯ ಹೆಸರಲ್ಲಿ ಯಾವ ಕಠಿಣ ಕಾನೂನು ರೂಪಿಸುವುದಕ್ಕೂ ಹಿಂಜರಿಯುವುದಿಲ್ಲ. ನಮ್ಮ ದೇಶದಲ್ಲಿ ಪರಿಣಾಮಕಾರೀ ಚುನಾವಣಾ ಸುಧಾರಣೆಯಾಗದೇ ಬೇಕಾಬಿಟ್ಟಿ ರೂಪಿಸುವ ಕಾನೂನುಗಳೆಲ್ಲ ದಾಸರು ಹೇಳಿದಂತೆ "ಉದರ ವೈರಾಗ್ಯವಿದು" ಎಂಬ ಸತ್ಯವನ್ನು ಸಾರ್ವಜನಿಕರು ತಡವಾಗಿಯಾದರೂ ಅರ್ಥಮಾಡಿಕೊಳ್ಳುತ್ತಿದ್ದಾರೆ.

- ಬೇಳೂರು ರಾಘವಶೆಟ್ಟಿ
ಉಡುಪಿ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.