ಅಂಕಣಗಳು

ಹಫೀಜ್‌ಗೆ ಕ್ಲೀನ್‌ಚಿಟ್ ಕೊಡುವುದಕ್ಕೆ ಹಿಂದು ಭಯೋತ್ಪಾದನೆಯ ಬೊಬ್ಬೆ?

Published On :

ಕಾಂಗ್ರೆಸ್‌ನ ಚಿಂತನ ಶಿಬಿರವು ರಾಹುಲ್ ಗಾಂಧಿಯವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಿದ ಬೆನ್ನಲ್ಲೇ ಅದೇ ಸಭೆಯಲ್ಲಿ ಅವರ ನಂತರ ಗೃಹ ಸಚಿವ ಸುಶೀಲ ಕುಮಾರ ಶಿಂಧೆ ಮಾತನಾಡುತ್ತ ಹೇಳಿದ್ದು ಹೀಗಿತ್ತು- 'ಒಂದು ಕಡೆ ನಾವು ಈ ದೇಶದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳುತ್ತಿದ್ದೇವೆ. ಅಲ್ಪಸಂಖ್ಯಾತರ ವಿರುದ್ಧವಾಗುತ್ತಿರುವ ಅನ್ಯಾಯಗಳಿಗೆ ಕ್ರಮ ತೆಗೆದುಕೊಳ್ಳುತ್ತಲೇ ಒಳನುಸುಳುವಿಕೆ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಎಲ್ಲದರ ನಡುವೆ ನಮ್ಮ ತನಿಖಾ ವರದಿಗಳು ಹೇಳುವ ಪ್ರಕಾರ ಆರೆಸ್ಸೆಸ್ ಅಥವಾ ಬಿಜೆಪಿ ತಮ್ಮ ತರಬೇತು ಘಟಕಗಳಲ್ಲಿ ಹಿಂದು ಭಯೋತ್ಪಾದನೆಯನ್ನು ತಯಾರು ಮಾಡುತ್ತಿವೆ. ಈ ಬಗ್ಗೆಯೂ ನಾವು ತೀವ್ರ ನಿಗಾ ಇರಿಸಿದ್ದೇವೆ.'
ಗೃಹ ಸಚಿವರಿಂದ ಹೊರಬಿದ್ದ ಅದ್ಭುತ ಹೇಳಿಕೆ ಇದಾಗಿದೆ. ಸಂಪುಟ ಸಚಿವರಾಗಿ ತಾವು ಹೇಳುತ್ತಿರುವುದೇನು ಹಾಗೂ ಅದು ಉಂಟುಮಾಡುವ ಪರಿಣಾಮಗಳೇನು ಎಂಬ ಬಗ್ಗೆ ಅವರಿಗೆ ಗೊತ್ತಿತ್ತು ಎಂದೇ ಪರಿಗಣಿಸಬೇಕಾಗುತ್ತದೆ. ಆತ್ಮರಕ್ಷಣೆಯ ತರಬೇತಿ ಬಗ್ಗೆ ಮಾತನಾಡಿ, ಅದನ್ನು ಪಡೆದುಕೊಳ್ಳುತ್ತಿರುವವರನ್ನೇ ಉಗ್ರವಾದಿಗಳು ಎಂದು ಅರ್ಥೈಸುವ ಮಾತುಗಳನ್ನು ಅವರು ಆಡಿಲ್ಲ ಎಂದುಕೊಳ್ಳಬೇಕಾಗುತ್ತದೆ. ಅಂದಮೇಲೆ ಶಿಂಧೆ ಅವರ ಹೇಳಿಕೆ ಸ್ಥಿರವಾಗಬೇಕಾದರೆ ಆರೆಸ್ಸೆಸ್ ಅಥವಾ ಬಿಜೆಪಿ ಸಾಂಘಿಕವಾಗಿ ಭಯೋತ್ಪಾದನಾ ಕೃತ್ಯದೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಸಾಬೀತುಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏಳುವ ಮೊದಲ ಪ್ರಶ್ನೆಯೇ ಆರೆಸ್ಸೆಸ್ ಅಥವಾ ಬಿಜೆಪಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಗೃಹ ಸಚಿವಾಲಯಕ್ಕೆ ಮಾಹಿತಿ ಇದ್ದಿದ್ದೇ ಆದರೆ ಇನ್ನೂ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿಲ್ಲವೇಕೆ? ಶಿಂಧೆ ಹೇಳಿಕೆಯಲ್ಲಿ ಸತ್ಯವಿರುವುದೇ ಹೌದಾಗಿದ್ದರೆ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರ ಕರ್ತವ್ಯಲೋಪವನ್ನು ಎಸಗಿದ್ದು ಅದು ಅಧಿಕಾರದಲ್ಲಿ ಮುಂದುವರಿಯುವುದಕ್ಕೇ ಯೋಗ್ಯವಾಗಿಲ್ಲ ಎಂಬುದು ನಿರ್ವಿವಾದ.
ಆದರೆ ಶಿಂಧೆ ಈ ವಿಷಯದಲ್ಲಿ ಬಹಳ ಗಂಭೀರವಾಗಿಯೇ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ಅವರ ಸಂಪುಟ ಸಹೋದ್ಯೋಗಿ, ವಿದೇಶ ಸಚಿವ ಸಲ್ಮಾನ್ ಖುರ್ಷಿದ್ ಮಾಧ್ಯಮದೆದುರಿನ ತಮ್ಮ ಹೇಳಿಕೆಯಲ್ಲಿ ದೃಢಪಡಿಸುತ್ತಾರೆ. 'ಗೃಹಸಚಿವರು ಹಾಗೂ ಈ ಹಿಂದಿನ ಗೃಹ ಸಚಿವರು ಬಿಂಬಿಸಿರುವ ನಮ್ಮ ನಿಲುವಿನ ಬಗ್ಗೆ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಆ ನಿಲುವು ತನಿಖಾ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲೇ ತಾಳಿರುವುದಾಗಿದೆ.'
ಖುರ್ಷಿದ್ ಹೇಳುತ್ತಿದ್ದದ್ದು ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ), ಗೃಹ ಇಲಾಖೆಗೆ ಸಲ್ಲಿಸಿದ ವರದಿ ಬಗ್ಗೆ. ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್ ಹೇಳಿದ್ದು- 'ನಿಜ, ಆಧಾರಗಳು ಇವೆ. ಸಂಝೌತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸ್ಜಿದ್ ಹಾಗೂ ಅಜ್ಮೀರ್ ದರ್ಗಾ ಶರೀಫ್‌ಗಳಲ್ಲಿ ನಡೆದ ಸ್ಫೋಟಗಳಲ್ಲಿ ಭಾಗಿಯಾದವರ ಕನಿಷ್ಠ 10 ಹೆಸರುಗಳು ನಮ್ಮ ಬಳಿ ಇವೆ. ಇವರೆಲ್ಲ ಒಂದು ಹಂತದಲ್ಲಿ ಆರೆಸ್ಸೆಸ್ ಜತೆ ಸಂಪರ್ಕ ಹೊಂದಿದವರೇ ಆಗಿದ್ದರು.' ಆದರೆ ಇದೇ ಎನ್‌ಐಎ ಮುಂದುವರಿದು ಸ್ಪಷ್ಟನೆ ನೀಡುತ್ತದೆ- 'ಆರೆಸ್ಸೆಸ್ ಅಥವಾ ಬಿಜೆಪಿ ನೇರವಾಗಿ ಭಯೋತ್ಪಾದಕ ಕೃತ್ಯಗಳ ತರಬೇತಿಯಲ್ಲಿ ತೊಡಗಿಕೊಂಡಿವೆ ಎಂಬುದಕ್ಕೆ ಯಾವುದೇ ಆಧಾರಗಳೂ ಇಲ್ಲ.'
ಹಾಗಾದರೆ ಯುಪಿಎ ಸಚಿವರು ಈ ದೇಶದ ಪ್ರಧಾನ ಪ್ರತಿಪಕ್ಷ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದೆ ಎಂದು ಹೇಗೆ ಬಹಿರಂಗವಾಗಿ ಆರೋಪಿಸುತ್ತಾರೆ? ಉತ್ತರವೇನೆಂದರೆ, ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣವು ಹಿಂದು ಭಯೋತ್ಪಾದನೆಯಿಂದ ಆಗಿದ್ದು ಎಂದು ಎನ್‌ಐ ಹಾಗೂ ಯುಪಿಎಗಳು ಅದಾಗಲೇ ಹೇಳಿಬಿಟ್ಟಿವೆ. ವೈಯಕ್ತಿಕ ನೆಲೆಯಲ್ಲಿ ಈ ಲೇಖಕನಿಗೂ ಹಿಂದು ಭಯೋತ್ಪಾದನೆ ಅನ್ನುವಂಥದ್ದು ಒಂದಿದೆ ಎಂಬುದಕ್ಕೆ ಸಹಮತವಿದೆ. ಆದರೆ ಅದರ ಕ್ಷುಲ್ಲಕ ವ್ಯಾಪ್ತಿಯನ್ನು ಜಾಗತಿಕವಾದ ಜಿಹಾದಿ ಉಗ್ರವಾದದೊಂದಿಗೆ ಹೋಲಿಸುವುದು ನಗೆಪಾಟಲಿನ ಸಂಗತಿ. ಅದರಲ್ಲೂ ಸಂಝೋತಾ ಸ್ಫೋಟದಲ್ಲಿ ಹಿಂದೂ ಉಗ್ರವಾದಿಗಳು ಪಾಲ್ಗೊಂಡರು ಎಂಬುದು ನಂಬಲಾಗದ ಸಂಗತಿ. ಈ ಪ್ರಕರಣದಲ್ಲಿ ಕಣ್ಣಿಗೆ ರಾಚುವಂತೆ ಇರುವ ವೈರುಧ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳಲು ಸರ್ಕಾರ, ಮಾಧ್ಯಮ, ಪ್ರತಿಪಕ್ಷ ಎಲ್ಲವೂ ನಿರಾಕರಿಸುತ್ತಿವೆ.
ವಿಶ್ವಸಂಸ್ಥೆಯ ಭದ್ರತಾ ಸಭೆಯ 1267 ಸಮಿತಿಯು ಅಲ್ ಖೈದಾ ಹಾಗೂ ತಾಲಿಬಾನ್‌ಗಳ ಮೇಲೆ ನಿಷೇಧವನ್ನು ಹೇರಿತು. ಈ ಸಂಬಂಧದ ಪತ್ರಿಕಾ ಹೇಳಿಕೆಯಲ್ಲೇ ಅದು ಲಷ್ಕರೆ ತಯ್ಬಾ 'ಮುಂಬೈನ ಟ್ರೇನ್ ಬಾಂಬಿಂಗ್ ಹಾಗೂ 2007ರ ಫೆಬ್ರವರಿಯಲ್ಲಿ ಸಂಝೋತಾ ಬಾಂಬ್ ಪ್ರಕರಣದಲ್ಲಿ ಭಾಗಿಯಾಗಿದೆ' ಎಂದು ಹೇಳಿತ್ತು. ಇಲ್ಲಿಯೇ ನಮ್ಮ ಸರ್ಕಾರದ ಪ್ರತಿಪಾದನೆಯೊಂದಿಗೆ ವೈರುಧ್ಯ ತಲೆ ಎತ್ತುತ್ತದೆ. ಇದನ್ನೇ ವಿಸ್ತರಿಸಿ ಹೇಳುವುದಾದರೆ ವಿಶ್ವಸಂಸ್ಥೆಯು ಪಾಕಿಸ್ತಾನದ ಹಫೀಜ್ ಸಯೀದ್‌ನನ್ನು ರಕ್ಷಿಸುತ್ತಿರುವವರ ವಿರುದ್ಧ ಎಚ್ಚರಿಕೆಯ ನಿಷೇಧಕ್ಕೆ ಮುಂದಾಗಿದ್ದು. ಆದರೆ ಇದನ್ನು ತನ್ನ ವಿಟೋ ಅಧಿಕಾರದ ಮೂಲಕ ವಿರೋಧಿಸಿದ ರಾಷ್ಟ್ರ ಚೀನಾ! ಹಾಗಾದರೆ ಯುಪಿಎ ಸರ್ಕಾರವೂ ಚೀನಾದ ಒಡಗೂಡಿ ಹಫೀಜ್‌ನನ್ನು ರಕ್ಷಿಸುವುದಕ್ಕೆ ಮುಂದಾಗುತ್ತಿದೆ ಎಂಬ ಸಂದೇಶ ರವಾನೆಯಾಗುತ್ತಿಲ್ಲವೇ?
ಸಂಝೋತಾ ಸ್ಫೋಟ ಪ್ರಕರಣದ ಕುತೂಹಲದ ಅಂಶ ಎಂದರೆ ಅಲ್ಲಿ ಸತ್ತವರು ಭಾರತೀಯ ಮುಸ್ಲಿಮರಾಗಿರದೇ ಪಾಕಿಸ್ತಾನಿ ಮುಸ್ಲಿಮರಾಗಿದ್ದರು. ಹಿಂದು ಟೆರರ್ ಅನ್ನುವುದು ಭಾರತೀಯ ಮುಸ್ಲಿಮರ ವಿರುದ್ಧ ಬಳಕೆಯಾಗಿದೆ ಎಂಬುದು ಕೊಡುವ ಅರ್ಥವೇ ಬೇರೆ. ಅಸೀಮಾನಂದ ವಿರುದ್ಧ ಇರುವ ಆರೋಪಗಳೆಲ್ಲವೂ ತಪ್ಪೊಪ್ಪಿಗೆ ಹೇಳಿಕೆಯನ್ನೇ ಆಧರಿಸಿ ನೀಡಿರುವಂಥದ್ದು. ಸಂಝೋತಾಬಾಂಬ್ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದರಿಂದ ಪಡೆದಿರುವ ಹೇಳಿಕೆ ಪೊಲೀಸ್ ಒತ್ತಡವನ್ನು ಬಳಸಿ ಪಡೆದಿರುವಂಥದ್ದು ಎಂದು ಆರೋಪಿಯ ವಕೀಲರು ಪ್ರತಿಪಾದಿಸಿದ್ದಾರೆ. ಇದನ್ನು ತೃಪ್ತಿಕರವಾಗಿ ಅಲ್ಲಗೆಳೆಯುವ ಯಾವ ಪ್ರಯತ್ನಗಳೂ ಸರ್ಕಾರದಿಂದ ಆಗುತ್ತಿಲ್ಲ.
ಹಾಗಾದರೆ ಸರ್ಕಾರವು ಪಾಕಿಸ್ತಾನದೊಂದಿಗೆ ನೇಪಥ್ಯದಲ್ಲಿ ಕೆಟ್ಟದೊಂದು ಶಾಂತಿ ಸಂಧಾನ ನಡೆಸುತ್ತಿದೆಯೇ? ಆರೆಸ್ಸೆಸ್, ಬಿಜೆಪಿಗಳು ಭಯೋತ್ಪಾದಕ ತರಬೇತಿಯ ಕ್ಯಾಂಪ್ ನಡೆಸುತ್ತಿವೆ ಎಂಬ ಶಿಂದೆ ಹೇಳಿಕೆ ಹೊರಬಿದ್ದ ಕೇವಲ ತಾಸಿನೊಳಗೆ ಪಾಕಿಸ್ತಾನದಿಂದ ಹಫೀಜ್ ಸಯೀದ್ ಪ್ರತಿಕ್ರಿಯಿಸುತ್ತಾನೆ. ಅವನು ಹೇಳಿದ್ದು: 'ಸಂಝೌತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಮುಗ್ಧ ಪಾಕಿಸ್ತಾನಿಯರು ಸತ್ತರು. ಭಾರತದ ಕರ್ನಲ್ ಈ ಸ್ಫೋಟದಲ್ಲಿ ಭಾಗಿ ಹಾಗೂ ಅವರ ಗೃಹ ಸಚಿವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಶಿಂದೆ ಕೊನೆಗೂ ನಿಜ ಹೇಳಿದ್ದಾರೆ. ಗೃಹ ಮಂತ್ರಿಗಳ ಈ ಪ್ರಾಮಾಣಿಕ ತಪ್ಪೊಪ್ಪಿಗೆ ನಂತರವಾದರೂ ಜಗತ್ತು, ಭಾರತವು ತನ್ನ ಮಣ್ಣಿನಲ್ಲಿ ಉಗ್ರವಾದವನ್ನು ಬೆಳೆಸುತ್ತಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು.'
ಶಿಂದೆ ಅವರ ಹೇಳಿಕೆ ಮತ್ತು ಅದಕ್ಕೆ ವ್ಯಕ್ತವಾದ ಹಫೀಜ್ ಪ್ರತಿ ಹೇಳಿಕೆ ಕಾರಣದಿಂದ ಜೈಪುರದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದೂ ಮರೆವಿಗೆ ಸರಿಯಿತು. ಹಾಗಾದರೆ ಹಫೀಜ್ ಸಯೀದ್ ಮತ್ತು ಲಷ್ಕರೆ ತಯ್ಬಾ ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಕಾರಣ ಎಂದು ವಿಶ್ವಸಂಸ್ಥೆ ಸುಳ್ಳು ಹೇಳುತ್ತಿದೆ ಎಂದು ರಾಹುಲ್ ಗಾಂಧಿ ಪರಿಗಣಿಸುತ್ತಾರೆಯೇ? ಆರೆಸ್ಸೆಸ್ ಅಥವಾ ಬಿಜೆಪಿ ಉಗ್ರಕೃತ್ಯಗಳಲ್ಲಿ ಭಾಗಿಯಾಗಿರು ಬಗ್ಗೆ ನೇರ ಸಾಕ್ಷ್ಯಗಳಿಲ್ಲ ಎಂದು ಎನ್‌ಐಎ ಹೇಳಿರುವುದು ತನ್ನದೇ ಸರ್ಕಾರದ ಗೃಹಸಚಿವರ ಮಾತಿಗೆ ವಿರುದ್ಧವಾಗಿದೆ ಎಂಬುದನ್ನು ರಾಹುಲ್ ಒಪ್ಪಿಕೊಳ್ಳುತ್ತಾರೆಯೇ? ಬೇಕಿದೆ ಉತ್ತರ.
(ಮೂಲತಃ ಇಂಡಿಯನ್ ಡಿಫೆನ್ಸ್ ರಿವ್ಯೂ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನ).

- ರಾಜಿಂದರ್ ಪುರಿ
ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.