ಅಂಕಣಗಳು

ಕೊಲ್ಲೋರು ಕೊಲ್ಲುತ್ತಿರಲಿ, ಸಾಯೋರದ್ದು ಅವರ ಕರ್ಮ ಎಂಬ ಉರಿಮಾತು!

Published On :

ಅಗ್ನಿ ಶ್ರೀಧರ್‌ರೇ,
ನಿಮ್ಮ ಲೇಖನ ಓದಿದೆ. ಮೊದಲ ಕೆಲವು ಪ್ಯಾರಾಗಳನ್ನು ಓದಿ ಕೊನೆಯ ಪ್ಯಾರಾ ಓದುವ ಹೊತ್ತಿಗೆ ನಿಮಗೆ ಅದೇನು ಪುಕ್ಕಲುತನವೋ, ಅಭಿಮಾನಿಗಳು(!) ಇದ್ದ ಪಕ್ಷದಲ್ಲಿ ತಪ್ಪಿ ಹೋದಾರೆಂಬ ಭಯದಿಂದಲೋ ಸಂಪೂರ್ಣ ಉಲ್ಟಾ ಹೊಡೆಯುವ ಕಡೆಯ ಪ್ಯಾರಾ ಆಗಿರುತ್ತೆ. ಹಿಂದಿನ ಗಿರೀಶ್ ಕಾರ್ನಾಡ್- ಎಸ್. ಎಲ್. ಭೈರಪ್ಪ ನವರ ಬಗ್ಗೆ ಲೇಖನ ಬರೆದಾಗಲೂ ಇಂತಹದ್ದೇ ನಿಲುವು ನಿಮ್ಮದು. 'ಎದೆಗಾರಿಕೆ'ಯಿಂದ ನಿಲ್ಲಿ....'ಆ ದಿನಗಳು' ಮರೆತುಹೋದವೇ?
ಒಬ್ಬ ಮುಸ್ಲಿಮ್, ಹಿಂದು, ಸಿಖ್, ಕ್ರೈಸ್ತ, ಪಾರ್ಸಿ ಯಾರೇ ಆಗಲಿ ದೇಶದ್ರೋಹ ಎಸಗಿದರೆ ಅದು ಅಕ್ಷಮ್ಯ ಅಪರಾಧವೇ. ದೇಶದ್ರೋಹವೆಂದರೆ ದೇಶಕ್ಕೆ ಮಾರಕವಾಗಿ ನಡೆದುಕೊಳ್ಳುವುದು. ಉದಾಹರಣೆಗೆ ಅಫ್ಜಲ್ ಗುರು, ಅಜ್ಮಲ್ ಕಸಬ್.
ಇವರು ಮುಸ್ಲಿಮರು ಎಂದು ಯಾರೂ ದೂರುತ್ತಿಲ್ಲ. ಮುಸ್ಲಿಮರಾಗಿ ಇದ್ದುಕೊಂಡು ದೇಶಕ್ಕೆ ಸಹಾಯ, ಸೇವೆ ಮಾಡಿದವರು ತುಂಬಾ ಜನರಿದ್ದಾರೆ. ಒಳ್ಳೆಯ ಹುದ್ದೆಗೆ ಏರಿದ್ದಾರೆ. ಸಾಧನೆ ಮಾಡುತ್ತಾ ಇದ್ದಾರೆ. ಹಲವರಿಗೆ ಮಾದರಿಯಾಗಿದ್ದಾರೆ. ಅಂತಹವರನ್ನು ಎಲ್ಲರೂ ಹೊಗಳುತ್ತಾರೆ. ನಿತ್ಯ ಸ್ಮರಿಸುತ್ತಾರೆ. ಆದರೆ ಅಫ್ಜಲ್‌ನನ್ನು ದೃಢ ನಾಯಕನಂತೆ ಬಿಂಬಿಸಿ ಮಾತನಾಡುವ ನಿಮಗೆ ಒಳ್ಳೆಯದಾವುದು ಕೆಟ್ಟದಾವುದು ಎಂಬುದು ತಿಳಿಯುವುದೇ ಇಲ್ಲವೇ? ಯಾವ ರಾಜಕೀಯಪಕ್ಷದವರೂ ಅಫ್ಜಲ್ ಒಬ್ಬ ಮುಸ್ಲಿಮ್ ಎಂಬ ಕಾರಣಕ್ಕೆ ಮರಣ ದಂಡನೆ ವಿಧಿಸಿ ಎಂದು ಒತ್ತಾಯಿಸುತ್ತಿರಲಿಲ್ಲ. ಅವನೊಬ್ಬ ದೇಶದ್ರೋಹಿ ಎಂದರು. ಅವನಿಗೆ ತಕ್ಕ ಶಾಸ್ತಿಯಾದರೆ ಅವನಂತೆ ದೇಶ ಒಡೆಯುವ ಸಂಚಿನಲ್ಲಿ ನಿರತ ನೀಚರು ಭಯ ಬೀಳುತ್ತಾರೆ ಎಂದರು.
'ಆ ದಿನಗಳಲ್ಲಿ' ಕೊತ್ವಾಲ್ ರಾಮಚಂದ್ರನನ್ನು ಕೊಂದು ಸಾಕ್ಷಾಧಾರಗಳಿರದ ಕಾರಣ ಖುಲಾಸೆ ಯಾದ ಕಥೆ ಎಲ್ಲರ ಜೀವನದಲ್ಲೂ ನಡೆಯಲಿ ಎಂದು ಆಸೆ ಪಡುತ್ತೀರಲ್ಲ. ತಪ್ಪು ಮಾಡುವವರು ಇದ್ದಾರೆ. ಕೊಲ್ಲುವವರು ಕೊಲ್ಲುತ್ತಿರಲಿ. ಸಾಯುವವರು ಸಾಯುತ್ತಿರಲಿ. ಆದರೆ ಕೊಂದವರನ್ನು ಯಾಕೆ ನೇಣು ಹಾಕುತ್ತೀರಿ. ಬದುಕಲು ಬಿಡಿ, ಅವರು ಅಮಾಯಕರು ಅನ್ನುವ ನಿಮ್ಮ ವಾದ ಬಾಲಿಶ. ಸತ್ತು ಹೋದ ಮುಗ್ಧ ಜೀವಿಗಳು ಏನು ತಪ್ಪು ಮಾಡಿದ್ದರು? ಅವರ ಬಗ್ಗೆಯೂ ಮಾತನಾಡಿ ನೋಡೋಣ. ಅವರ ಕರ್ಮ, ಸತ್ತರು ಎಂಬಂತೆ ವರ್ತಿಸಿ ಕೈ ತೊಳೆದುಕೊಳ್ಳುವ ಪ್ರವೃತ್ತಿ ನಿಮ್ಮಂತಹ ಹಲವು ಬುದ್ಧಿಜೀವಿಗಳದ್ದು. (ಸಾರಿ ಬುದ್ಧಿಗೇಡಿಗಳದ್ದು ಎಂದು ಓದಿಕೊಳ್ಳಿ) ದಂಡುಪಾಳ್ಯದವರು ತಪ್ಪುಮಾಡಿಲ್ಲ. ಅಫ್ಜಲ್ ಗುರು ನಿರ್ದೋಷಿ ಎಂಬಂತೆ ಬರೆದುಕೊಂಡದ್ದು ಸರಿಯೇ? ಯಾರೋ ದಾರಿ ಹೋಕರನ್ನು ಕರೆದುಕೊಂಡು ಬಂದು ಇವರು ದಂಡುಪಾಳ್ಯದವರು ಎಂದು ಹೆಸರಿಸಿದರೆ ನಮ್ಮ ಪೊಲೀಸರು? ಅವರ ಬಳಿ ಸಾಕ್ಷಿಗಳಿಲ್ಲವೇ? ಅಮಾಯಕ ಹೆಣ್ಣು ಮಕ್ಕಳು, ವೃದ್ಧರನ್ನು ಕೊಂದರಲ್ಲ.... ಅವರೆಲ್ಲ ನಿಮ್ಮ ಏಜೆಂಟರೇ?
ಇನ್ನು ಅಫ್ಜಲ್ ಗುರು ಕಾಶ್ಮೀರದ ಸಂಗೊಳ್ಳಿ ರಾಯಣ್ಣ ಎಂಬ ನಿಮ್ಮ ವಾದಕ್ಕೆ ಹುರುಳಿಲ್ಲ. ಭಾರತ ಬ್ರಿಟಿಷರ ಕೈಯಲ್ಲಿತ್ತು. ತಮಗೆ ಬೇಕಾದ ಹಾಗೆ ನ್ಯಾಯ ಬರೆದುಕೊಳ್ಳುತ್ತಿದ್ದರು. ಈ ದೇಶವನ್ನು ಲೂಟಿ ಮಾಡುವುದೇ ಅವರ ಮೂಲ ಗುರಿ. ಅಂತಹ ಬ್ರಿಟಿಷರ ವಿರುದ್ಧ ಸಂಗೊಳ್ಳಿ ರಾಯಣ್ಣ ಹೋರಾಡಿದ್ದ. ಸಂಗೊಳ್ಳಿ ರಾಯಣ್ಣ ಒಬ್ಬ ಯೋಧ, ದೇಶಕ್ಕಾಗಿ ಪ್ರಾಣಕೊಟ್ಟವನು. ನಿಮ್ಮ ಗುರು - ಅಫ್ಜಲ್ ನಮ್ಮ ದೇಶದ ಏಕತೆಯನ್ನು ಮುರಿಯಲು ಮುಂದಾದವನು. ನಮ್ಮ ದೇಶದ ವಿರುದ್ಧ ಸಮರ ಸಾರಲು ಹೊರಟ ಮೂಲಭೂತವಾದಿ. ಭಯೋತ್ಪಾದಕ ಸಂಸ್ಥೆಗಳಿಗೆ ಸಹಾಯ ಮಾಡಿ, ಶಸ್ತ್ರಾಸ್ತ್ರವನ್ನು ಒದಗಿಸಲು ಸಹಾಯ ಮಾಡಿದ ದುರುಳ. ಇಂತಹವನ ಪರವಾಗಿ ನಿಲ್ಲುವ ಭಯೋತ್ಪಾದಕರು ಇನ್ನೂ ಇದ್ದಾರೆ. ನೀವುಗಳೂ ಇದ್ದೀರಿ. ವ್ಯತ್ಯಾಸವೇನು ನಮಗೆ ಗೊತ್ತಾಗುತ್ತಿಲ್ಲ.
ನಮ್ಮ ದೇಶದ ಭದ್ರತೆಗೆ ಸವಾಲು ಹಾಕುವವರಿಗೆ ಒಂದು ಸ್ಪಷ್ಟ ಸಂದೇಶ ನೀಡಬೇಕು ಎಂದು ನಿಮಗೇಕೆ ಅನ್ನಿಸುವುದಿಲ್ಲ? ದೇಶದ ಭದ್ರತೆಯ ವಿಷಯದಲ್ಲಿ ಇಂಥ ಕೆಲ ಘಟನೆಗಳು ದೇಶವನ್ನು ಕುಗ್ಗಿಸುತ್ತದೆ. ಆದರೆ ನಾವು ತಕ್ಕ ಪ್ರತ್ಯುತ್ತರ ಕೊಡದಿದ್ದರೆ ಮತ್ತೆ ಈ ದೇಶ ಬೇರೆಯವರ ಪಾಲಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕಾಗುತ್ತದೆ. ಲಷ್ಕರೆ ತಯ್ಬಾ, ಜೈಷ್ ಎ ಮೊಹಮ್ಮದ್ ಸಂಘಟನೆಗಳು ಸಂಸತ್ ಭವನದ ಮೇಲೆ ದಾಳಿ ಮಾಡಿದರು. ಏಳು ಮಂದಿ ಭದ್ರತಾ ಸಿಬ್ಬಂದಿ ಮೃತರಾದರು. ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಬೇಕು ಎಂಬ ಹಂಬಲವಷ್ಟೇ ಅಲ್ಲದೇ ಪಾಕಿಸ್ತಾನಕ್ಕೆ ಸಹಾಯ ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು. ಅಸಲಿಗೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ ಖ್ಝಟ್ಜಿಟಜ ಠ್ಟ್ಝಟಿಡಿ ಛ್ಜಜಟಿಜಛ ಅವರದ್ದಾಗಿತ್ತು. ನಿಮ್ಮ ಪ್ರಕಾರ ಇದು ತಪ್ಪಲ್ಲ ಎಂದರೆ ಬ್ರಿಟಿಷರನ್ನು ಹೊರಹಾಕಿದ್ದು ತಪ್ಪೇ. ನಮ್ಮ ದೇಶದೂಳಗೆ ನುಗ್ಗಿ ನಮ್ಮ ದೇಶವನ್ನು ಉದ್ಧಾರವಾಗದಂತೆ ಮಾಡಿದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಬಡಿದು, ಕೊಂದು ಈ ದೇಶದಲ್ಲಿ ಸಾರ್ವಭೌಮತ್ವ ಸಾಧಿಸಿದ ಬ್ರಿಟಿಷರ ತಪ್ಪೇನು ಇಲ್ಲ ಅಲ್ಲವೇ ಶ್ರೀಧರ್? ದಾಳಿಗಳ ಮೇಲೆ ದಾಳಿ ಎಸಗಿ ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದ, ನಮ್ಮ ಜನರನ್ನು ಹಿಂಸಿಸಿದ ನಮ್ಮ ದೇಗುಲಗಳನ್ನು ಕೆಡವಿದ, ಕ್ರೂರಿಗಳಾದ ಮಹಮ್ಮದ್ ಘಜನಿ, ಮಹಮ್ಮದ್ ಘೋರಿ ಯಾವ ತಪ್ಪೂ ಮಾಡಿಲ್ಲವಲ್ಲವೇ?
ಪೊಲೀಸರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರನ್ನು ಶಿಕ್ಷಿಸುತ್ತಾರೆ. ಅವರ ವಶದಲ್ಲಿದ್ದವರು ಪೋಲೀಸರು ಹೇಳಿದಂತೆ- ನಿರ್ದೇಶಿಸಿದಂತೆ ಹೇಳಿಕೆ ಕೊಡುತ್ತಾರೆ ಅಂತೀರಲ್ಲ...  ನಿಮಗೇಕೆ ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ, ನ್ಯಾಯಾಲಯದಲ್ಲಿ, ಪೊಲೀಸರಲ್ಲಿ, ದೇಶದ ಹಿತ ಕೋರುವ ಯಾರಲ್ಲೂ ನಂಬಿಕೆ ಇಲ್ಲ?  ನೀವು ಅದು ಹೇಗೋ ಅಂಡರ್ ವರ್ಲ್ಡ್‌ನಲ್ಲಿ ಸಿಕ್ಕಿಕೊಂಡಿರಿ. ಅದೇ ನಮ್ಮ ಪುಣ್ಯ. ಅದೇ ಮನಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಜಡ್ಜ್, ಪೊಲೀಸ್ ಸೇವೆಯಲ್ಲಿ ಹಿರಿಯ ಅಧಿಕಾರದಲ್ಲಿರುವುದಕ್ಕಿಂತ ಅಲ್ಲಿದ್ದಿದ್ದೇ ಮೇಲು! ಸಯೀದ್ ಗಿಲಾನಿ ನಿಮ್ಮ ಮುಂದೆ ಬೇಡಿಕೊಂಡು ಬಿಟ್ಟರೆ ಅವರು ನಿರ್ದೋಶಿಗಳೆಂದು ಭಾವಿಸಿಬಿಡಬೇಕಾ? ನೀವೇನು ದೇವರಾ? ಸಂಸತ್ ಭವನದ ದಾಳಿಯಲ್ಲಿ ಗಿಲಾನಿಯ ಪಾತ್ರ ಸಾಬೀತಾಗಲಿಲ್ಲವೆಂದು ನ್ಯಾಯಾಲಯ ಅವರನ್ನು ಬಿಟ್ಟಿತೇ ಹೊರತು ಬೇರ್ಯಾವ ಕಾರಣದಿಂದಲೂ ಅಲ್ಲ. ನಿಮ್ಮನ್ನು ನ್ಯಾಯ ಪೀಠದಲ್ಲಿ ಕೂರಿಸಿದರೆ ಮುಂದೆ ಗತಿ ಏನು ಎಂದು ಯೋಚಿಸುತ್ತಿದ್ದೆ. ಆರೋಪಿಯ ಕಣ್ಣಲ್ಲಿ ನೀರಿತ್ತಾ, ಗಡ್ಡ ನುಣ್ಣಗೆ ಬೋಳಿಸಿದ್ದನಾ, ಕುಂಕುಮ ಇಟ್ಟಿದ್ದನಾ, ಕಾವಿ ತೊಟ್ಟಿದ್ದನಾ ಎಂಬ ತರ್ಕ ಕೂಡಿಸಿ ನ್ಯಾಯಾಲಯದಲ್ಲಿ ವಿಚಾರಣೆ ಆಗುವುದಿಲ್ಲವೆಂದುಕೊಂಡಿದ್ದೀನಿ. ನ್ಯಾಯಾಲಯಕ್ಕೆ ಬೇಕಾದ ಸಾಕ್ಷಿ ಸಿಕ್ಕಿತು. ಸಾಕ್ಷ್ಯವು ನ್ಯಾಯಾಲಯಕ್ಕೆ ಅಫ್ಜಲ್ ದೋಷಿ ಎಂದು ಬೊಟ್ಟು ಮಾಡಿ ತೋರಿಸುತ್ತಿತ್ತು. ಅದರಿಂದ ಅಫ್ಜಲ್‌ಗೆ ಮರಣ ದಂಡನೆ ವಿಧಿಸಿತು. ಅದಿರಲಿ, ಅಫ್ಜಲ್ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಮೊದಲು ಅಫ್ಜಲ್‌ಗೆ ಗಡ್ಡ ಇತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಪ್ರಾಯಶಃ ಅಫ್ಜಲ್‌ನ ನಾಪಿತ ನಿಮ್ಮ ಸಂದರ್ಶನಕ್ಕೆ ಸಿಗಲಿಲ್ಲವೆನಿಸುತ್ತೆ. ಇಲ್ಲವಾದರೆ ಇನ್ನಷ್ಟು ಬರೆಯುತ್ತಿದ್ದಿರಿ. ನೀವು ಪರೋಕ್ಷವಾಗಿ ಹೇಳುವ ಹಾಗೆ ಅಫ್ಜಲ್ ಜೈಲಿನಲ್ಲಿದ್ದ ಬಳಿಕ ಮೂಲಭೂತವಾದಿಯಂತೆ ಕಾಣುತ್ತಿದ್ದುದು ಒಂದೊಳ್ಳೆಯ joke.
ಅದಿರಲಿ RAW  ಬಗ್ಗೆ ಹೇಳಿದಿರಲ್ಲ. ಒಂದು ಒಳ್ಳೆಯ ಕಾದಂಬರಿ ವಸ್ತುವಿದೆ. ಬೇಗ ಬರೆದು ಚಲನಚಿತ್ರ ಮಾಡಿರಿ. ಜನರು ನೋಡಿದ್ರೂ ನೋಡಬಹುದು...

- ಪ್ರವೀಣ ಪಟವರ್ಧನ್
ಲೇಖಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.