ಫ್ರಂಟ್ ಪೇಜ್ ಎಂಬ ಪ್ರತಿದಿನದ ಮಧುರ ಯಾತನೆ

ಅಮೆರಿಕದ ಖ್ಯಾತ ಪತ್ರಕರ್ತ ಬೆಂಜಮಿನ್ ಬ್ರಾಡ್ಲಿಯನ್ನು ಸಹೋದ್ಯೋಗಿಯೊಬ್ಬ...
Updated on: 

ಅಮೆರಿಕದ ಖ್ಯಾತ ಪತ್ರಕರ್ತ ಬೆಂಜಮಿನ್ ಬ್ರಾಡ್ಲಿಯನ್ನು ಸಹೋದ್ಯೋಗಿಯೊಬ್ಬ ಒಮ್ಮೆ ಕೇಳಿದನಂತೆ-'ಸಂಪಾದಕನಾದವನಿಗೆ ಯಾವುದು ಇಷ್ಟ?' ಅದಕ್ಕೆ ಬ್ರಾಡ್ಲಿ ಹೇಳಿದ್ದು- 'ಫ್ರಂಟ್ ಪೇಜ್‌'.
'ಅದ್ಸರಿ, ಸಂಪಾದಕನಾದವನು ಯಾವುದಕ್ಕೆ ದಿನಾಲೂ ತಲೆಕೆಡಿಸಿಕೊಳ್ಳುತ್ತಾನೆ?' ಎಂಬ ಮತ್ತೊಂದು ಪ್ರಶ್ನೆಗೂ ಬ್ರಾಡ್ಲಿ ಹೇಳಿದ್ದು-'ಫ್ರಂಟ್ ಪೇಜ್‌'.
'ಅದೂ ಸರಿ. ಸಂಪಾದಕನಾದವನು ಪ್ರತಿದಿನ ಒಂದೇ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದು ಎಷ್ಟು ಸರಿ?' ಎಂದು ಆತ ಪುನಃ ಕೇಳಿದಾಗ, ಬ್ರಾಡ್ಲಿ ಹೇಳಿದ್ದು- 'ಪತ್ರಿಕೆಯಲ್ಲಿ ದಿನಾಲೂ ಫ್ರಂಟ್‌ಪೇಜ್ ಇರುತ್ತಲ್ಲಾ! ಎಲ್ಲಿಯತನಕ ಫ್ರಂಟ್‌ಪೇಜ್ ಇರುತ್ತೋ ಅಲ್ಲಿ ತನಕ ಈ ತಲೆಕೆಡಿಸಿಕೊಳ್ಳುವುದು ತಪ್ಪೊಲ್ಲ.'
'ದಿ ನ್ಯೂಯಾರ್ಕ್ ಟೈಮ್ಸ್‌' ಪತ್ರಿಕೆ ಒಂದು ಪುಸ್ತಕವನ್ನು ಪ್ರಕಟಿಸಿದೆ. ಪ್ರತಿ ಪತ್ರಕರ್ತರೂ ಅದರಲ್ಲೂ ಸಂಪಾದಕರಾದವರು ಓದಲೇಬೇಕಾದ/ ನೋಡಲೇಬೇಕಾದ ಪುಸ್ತಕವಿದು. ಹಾಗೆ ನೋಡಿದರೆ ಪತ್ರಿಕೆ ಓದಬೇಕಾದವರೂ ಇದನ್ನು ಓದಬೇಕು. ಈ ಕೃತಿಯ ಹೆಸರು- The Newyork Times: The Complete Front Pages(1851-2009). ಸುಮಾರು ಐವತ್ತೆಂಟು ವರ್ಷಗಳ ಮುಖಪುಟವನ್ನು ಸಂಗ್ರಹಿಸಿ ಈ ಕೃತಿಯಲ್ಲಿ ನೀಡಲಾಗಿದೆ.
ಈ ಪುಸ್ತಕಕ್ಕೆ ಮುನ್ನುಡಿ ಬರೆದ 'ನ್ಯೂಯಾರ್ಕ್ ಟೈಮ್‌' ಪತ್ರಿಕೆಯ ಸಂಪಾದಕರಾಗಿದ್ದ ಬಿಲ್‌ಕೆಲ್ಲರ್ ಒಂದೆಡೆ ಹೇಳುತ್ತಾರೆ- 'ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕ ತನ್ನ ಹೆಂಡತಿ, ಮನೆ, ಮಕ್ಕಳ ಬಗ್ಗೆ ಎಷ್ಟು ಯೋಚಿಸುತ್ತಾನೋ ಗೊತ್ತಿಲ್ಲ, ಆದರೆ ಪತ್ರಿಕೆಯ ಫ್ರಂಟ್‌ಪೇಜ್ ಬಗ್ಗೆ ಬೆಳಗಿನಿಂದಲೇ ತಲೆಕೆಡಿಸಿಕೊಳ್ಳುತ್ತಾನೆ. ಪತ್ರಿಕೆ ಮುದ್ರಣಕ್ಕೆ ಹೋದ ನಂತರವೂ ಸಮಾಧಾನವಿಲ್ಲ. ತಾನು ಮುಖಪುಟಕ್ಕೆ ನಿರ್ಧರಿಸಿದ ಸುದ್ದಿ ಬಗ್ಗೆ ಸದಾ ತನ್ನೊಂದಿಗೇ ತರ್ಕಕ್ಕೆ ಬಿದ್ದಿರುತ್ತಾನೆ.
ಏನೂ ತಕರಾರಿಲ್ಲದೇ ಮುಖಪುಟವನ್ನು ಸಿದ್ಧಪಡಿಸಿದ ನಿದರ್ಶನಗಳು ಅಪರೂಪ. ಪತ್ರಿಕೆ ಪ್ರಿಂಟ್ ಆಗಿ ಮರುದಿನ ಬರುತ್ತಲೇ ಶುರುವಾಗುತ್ತದೆ. ಹಾಗಾಗಬೇಕಿತ್ತು, ಹೀಗಿರಬೇಕಿತ್ತು ಎಂಬ ಟೀಕೆ-ಟಿಪ್ಪಣಿ. ಸಂಪಾದಕನಾದವನಿಗೆ ಫ್ರಂಟ್‌ಪೇಜ್ ಆಚೆಗೂ ಒಂದು ಜಗತ್ತು ಇದೆ ಎಂಬುದು ಮರೆತು ಹೋಗುತ್ತದೆ. ಯಾಕೆಂದರೆ ಅವನ ಪಾಲಿಗೆ ಫ್ರಂಟ್‌ಪೇಜೇ ಜಗತ್ತಾಗಿರುತ್ತದೆ ಅಥವಾ ಜಗತ್ತನ್ನು ಕುಗ್ಗಿಸಿ ಫ್ರಂಟ್‌ಪೇಜಿನಲ್ಲಿ ಕೊಟ್ಟಿದ್ದೇನೆಂದು ಭಾವಿಸಿರುತ್ತಾನೆ.'
'ಪತ್ರಿಕೆಯ ಮುಖಪುಟ ಆ ದಿನದ ಇತಿಹಾಸ' ಎಂಬ ಮಾತಿದೆ. ನ್ಯೂಯಾರ್ಕ್ ಟೈಮ್ಸ್ ಮುಖಪುಟಗಳನ್ನು ನೋಡುತ್ತಿದ್ದರೆ ಇತಿಹಾಸದ ಪುಟಗಳಿಂದ ಪುಟಗಳಿಗೆ ಜೀಕಿದ ಅನುಭವವಾಗುತ್ತದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಫ್ರಂಟ್‌ಪೇಜಿನ ವೈಶಿಷ್ಟ್ಯವೇನೆಂದರೆ, ಮಹತ್ವದ ಘಟನೆಗಳು ಸಂಭವಿಸಿದಾಗ ಅದರ ಮುಖಪುಟ ಗೋಡೆಯ ಮೇಲೆ ನೇತು ಹಾಕಬಹುದಾದ ಕಲಾಕೃತಿಯಾಗುತ್ತದೆ. ಮುಖಪುಟಕ್ಕೆ ಫ್ರೇಮು ಹಾಕಿಸಿ ಮಾರಾಟ ಮಾಡುವ ಸಂಪ್ರದಾಯ ಈಗಲೂ ಜನಪ್ರಿಯವಾಗಿದೆ.
ಚಂದ್ರನ ಮೇಲೆ ಮಾನವ ಮೊದಲ ಬಾರಿಗೆ ಹೆಜ್ಜೆಯಿಟ್ಟಾಗ 'ನ್ಯೂಯಾರ್ಕ್ ಟೈಮ್ಸ್‌' ನೀಡಿದ ಹೆಡ್‌ಲೈನ್ Men walked on moonಬಹಳ ಪ್ರಶಂಸೆಗೆ ಪಾತ್ರವಾಗಿತ್ತು. ಹಾಗೇ ಅಂದು ರೂಪಿಸಿದ ಫ್ರಂಟ್‌ಪೇಜ್ ಸಹ.
ಆರಂಭದ ದಿನಗಳಲ್ಲಿ 'ನ್ಯೂಯಾರ್ಕ್ ಟೈಮ್ಸ್‌'ನ ಮುಖಪುಟದಲ್ಲಿ ಫೋಟೋವನ್ನು ಬಳಸುತ್ತಿರಲಿಲ್ಲ. ಹೆಡ್‌ಲೈನ್‌ಗಳೂ ಇರುತ್ತಿರಲಿಲ್ಲ. ಏನಿಲ್ಲವೆಂದರೂ ಫ್ರಂಟ್‌ಪೇಜಿನಲ್ಲಿ ಐವತ್ತಕ್ಕೂ ಹೆಚ್ಚು ವರದಿಗಳಿರುತ್ತಿದ್ದವು. ಒಂದೇ ಒಂದು ಅಕ್ಷರವನ್ನು ಪ್ರಕಟಿಸದೇ ಇಡೀ ಪುಟವನ್ನು ಫೋಟೋದಿಂದ ತುಂಬಿದ ನಿದರ್ಶನವೂ ಉಂಟು.
ಪತ್ರಿಕೋದ್ಯಮ 'ನ್ಯೂಯಾರ್ಕ್ ಟೈಮ್ಸ್‌'ನ ಚೌಕಟ್ಟನ್ನು ದಾಟಿ ಬಹಳ ದೂರ ಸಾಗಿದೆ. ಅದಕ್ಕಿಂತ ಸುಂದರ ಫ್ರಂಟ್ ಪೇಜ್ ರೂಪಿಸುವ ಸಾಕಷ್ಟು ಪತ್ರಿಕೆಗಳಿವೆ. ರೂಪ, ವಿನ್ಯಾಸ, ಅಂದ-ಚೆಂದದಲ್ಲಿ ಅದನ್ನು ಮೀರಿಸುವ ಪತ್ರಿಕೆಗಳಿವೆ. ಆದರೂ 'ನ್ಯೂಯಾರ್ಕ್ ಟೈಮ್ಸ್‌'ನ ಖದರೇ ಬೇರೆ.
ಹುಲಿ ಸಾಯಿಸುವುದು ಹೇಗೆ?
ಹುಲಿ ಸಂತತಿ ನಶಿಸುತ್ತಿದೆ, ಅದನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ನೀವು ಹುಲಿ ಸಾಯಿಸೋದು ಹೇಗೆ ಎಂದು ಕೇಳುತ್ತಾ, ಬೇರೆ ಬೇರೆ ಮಾದರಿಗಳನ್ನು ವಾರವಾರ ಕೊಡುತ್ತಿದ್ದೀರಲ್ಲಾ ಎಂದು ಕೇಳಬಹುದು. ನೂರಾರು ಓದುಗರು ಹುಲಿ ಸಾಯಿಸೋದು ಹೇಗೆ ಎಂಬ ಪ್ರಶ್ನೆಗೆ ಸ್ವಾರಸ್ಯವಾಗಿ ಬರೆದಿದ್ದಾರೆ. ಆ ಪೈಕಿ ಈ ವಾರ ಪುತ್ತೂರಿನ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಕಳಿಸಿದ್ದನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದ್ದೇನೆ.
ಹುಲಿ ಸಂಹಾರಕ್ಕೆ ಹನ್ನೆರಡು ದೇಶಗಳ ಹನ್ನೆರಡು ಸೂತ್ರಗಳು:
1. ಇಸ್ರೇಲೀ ಮಾದರಿ: ತಕ್ಷಣ ಶೂಟ್ ಮಾಡಿ ಹುಲಿಯನ್ನು ಸಾಯಿಸಿ 'ಇನ್ನು ಯಾರ್ಯಾರಿದ್ದೀರೋ... ಬನ್ರೋ...' ಎಂದು ವಿಶ್ವಕ್ಕೇ ಕೇಳಿಸುವಂತೆ ಗುಡುಗುವುದು!
2. ಅಮೆರಿಕನ್ ಮಾದರಿ: ಯಾರಿಗೂ ಗೊತ್ತಾಗದಂತೆ ಕಮಾಂಡೋಗಳ ಮೂಲಕ ಸುತ್ತುವರೆದು ಹುಲಿಯನ್ನು ಸಾಯಿಸಿ, ಮೃತದೇಹವನ್ನು ಸಮುದ್ರದಲ್ಲಿ ಬಿಸಾಕಿ ನಂತರ ಜಗತ್ತಿಗೆ ಡಂಗುರ ಸಾರುವುದು!
3. ಅರಬ್ ಜಗತ್ತಿನ ಮಾದರಿ: ಇನ್ನೊಂದು ಬಲಿಷ್ಠ ಹುಲಿಯನ್ನು ಕರೆತಂದು ಮೊದಲ ಹುಲಿಯನ್ನು ಕೊಲ್ಲಿಸುವುದು!
4. ಬ್ರಿಟಿಷ್ ಮಾದರಿ: ಮೊದಲು ಹುಲಿಯ ಜತೆ ಸ್ನೇಹ ಬೆಳೆಸಿ ವ್ಯಾಪಾರ ಕುದುರಿಸುವುದು ನಂತರ ರಾಜ್ಯಭಾರ. ಕೊನೆಗೆ ಹುಲಿಯ ಸ್ನೇಹಿತ-ಸಂಬಂಧಿಕರನ್ನು ಎತ್ತಿಕಟ್ಟಿ ಹುಲಿಯನ್ನು ಕೊಲ್ಲಿಸುವುದು ಇಲ್ಲವೇ ರಾಜದ್ರೋಹದ ಆರೋಪ ಹೊರಿಸಿ ತಾವೇ ಕೊಲ್ಲುವುದು!
5. ಆಫ್ರಿಕನ್ ಮಾದರಿ: ಬಿಲ್ಲು-ಬಾಣ, ಈಟಿ, ಕಲ್ಲಿನ ಅಥವಾ ಮೂಳೆಯ ಆಯುಧಗಳನ್ನು ಬಳಸಿ ಹುಲಿಯನ್ನು ಅಟ್ಟಾಡಿಸಿ ಕೊಲ್ಲುವುದು!
6. ಪಾಕಿಸ್ತಾನೀ ಮಾದರಿ: ಮಾನವ ಬಾಂಬರನ್ನು ಕಳುಹಿಸಿ ಹುಲಿಯು ಆಕ್ರಮಣ ಮಾಡುವಂತೆ ಆಹ್ವಾನಿಸುವುದು!
7. ಚೀನೀ ಮಾದರಿ: ಅತ್ಯಂತ ಅಗ್ಗದ ಆಟಿಕೆಯ ಜಿಂಕೆ, ಕೋಣ, ದನ, ಕುರಿ ಇತ್ಯಾದಿಗಳನ್ನು ತಯಾರಿಸಿ ಸಾಲದ ಮೂಲಕ ಹುಲಿ ಖರೀದಿಸುವಂತೆ ಮಾಡುವುದು. ಸಾಲ ತೀರಿಸಲಾಗದ ಹುಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
8. ರಶಿಯನ್ ಮಾದರಿ: ನಾವೆಲ್ಲರೂ ಸಮಾನರು ಎಂಬ ಸಮತಾವಾದವನ್ನು ಹುಲಿಯ ಮುಂದಿಡುವುದು. ಹುಲಿಯು ಒಪ್ಪಿಕೊಂಡ ನಂತರ ಬಂಡವಾಳಶಾಹಿಗಳ ಜತೆ ಶಾಮೀಲಾಗಿ ಹುಲಿಯು ತಾನಾಗಿಯೇ ಸಾಯುವಂತೆ ನೋಡಿಕೊಳ್ಳುವುದು.
9. ಜಪಾನಿ ಮಾದರಿ: ಹೆಚ್ಚು ದುಡಿಯುವಂತೆ ಪ್ರೇರೇಪಿಸುವುದು. ದುಡಿದು ದುಡಿದು ಹೈರಾಣಾದ ಹುಲಿ ತ್ಸುನಾಮಿಯ ತೆಕ್ಕೆಗೆ ಸಿಲುಕಿ ಸಾಯುತ್ತದೆ.
10. ಸಿಂಹಳೀಯರ ಮಾದರಿ: 'ನೀನೇ ಪ್ರಚಂಡ ವ್ಯಾಘ್ರ' ಎಂದು ಹೊಗಳಿ ಸಿಂಹಗಳ ವಿರುದ್ಧ ಪಿತೂರಿ ನಡೆಸುವಂತೆ ಮತ್ತು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸುವುದು. ಕೊನೆಗೆ
ಹೋರಾಟದಿಂದಲೇ ಹುಲಿ ಕೊನೆಗಾಣುತ್ತದೆ.
11. ಯೂರೋಪಿಯನ್ ಮಾದರಿ: ಹುಲಿಗೆ ಪರಿಸರದ ಬಗ್ಗೆ ಕಾಳಜಿ ಹುಟ್ಟುವಂತೆ ಮಾಡುವುದು, ಶಾಂತಿಮಂತ್ರ ಉಪದೇಶ ಮಾಡುವುದು ಮತ್ತು ಮಾನವ ಹಕ್ಕುಗಳ ದಹನವಾಗದಂತೆ ನೋಡಿಕೊಂಡರೆ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡುವ ಆಸೆ ಹುಟ್ಟಿಸುವುದು. ಇದರಿಂದ ಗೊಂದಲಕ್ಕಾಗಿ ಕುಸಿದು ಬಿದ್ದ ಹುಲಿ ಮೇಲೇಳಲಾರದು.
12. ಭಾರತೀಯ ಮಾದರಿ: ಹುಲಿಯ ವಿರುದ್ಧ ದೋಷಾರೋಪಣೆ ಪಟ್ಟಿ ಮಾಡಿ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಯಾಗುವಂತೆ ಮಾಡುವುದು. ರಾಷ್ಟ್ರಪತಿಯವರ ಕ್ಷಮಾದಾನದ ನೆಪದಲ್ಲಿ 10 ವರ್ಷ ದಿನ ದೂಡುವುದು. ಕೊನೆಗೆ ಹುಲಿ ಸಾವನ್ನಪ್ಪುವ ಸಮಯ ಬಂದಾಗ ಗಲ್ಲಿಗೇರಿಸಿ ಬೆನ್ನು ತಟ್ಟಿಕೊಳ್ಳುವುದು.
ರಜನಿ ಜೋಕ್‌ಗಳು
ರಜನಿ ಜೋಕ್‌ಗಳಿಗೆ ಬರವಿಲ್ಲ. ಅಣೆಕಟ್ಟುಗಳಲ್ಲಿ ನೀರಿಲ್ಲದಿರಬಹುದು, ಆದರೆ ಜೋಕುಕಟ್ಟೆಯಲ್ಲಿ ರಜನಿಯದೇ ಧಾರೆ. ಹಿಂದಿನ ವಾರದ ರಜನಿ ಜೋಕುಗಳಿಂದ ಪ್ರಭಾವಿತರಾದ ಎಚ್. ಆನಂದರಾಮ ಶಾಸ್ತ್ರಿ ತಮ್ಮ ಓರಿಜಿನಲ್ ಜೋಕುಗಳನ್ನು ಕಳಿಸಿಕೊಟ್ಟಿದ್ದಾರೆ.
 ಇನ್ನು ನಾವು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾಗಿಲ್ಲ. ತಮಿಳುನಾಡಿನ ಮೇಲೆ ಗಂಗೆಯನ್ನು ಸುರಿಸುವಂತೆ ರಜನಿಕಾಂತ್ ಈಶ್ವರನಿಗೆ ಆರ್ಡರ್ ಮಾಡಿದ್ದಾನೆ.
 ರಹಸ್ಯವೀಗ ಬಯಲಾಗಿದೆ. ಯಲಹಂಕ ಏರ್‌ಶೋನಲ್ಲಿ ಕಸರತ್ತು ನಡೆಸಿದ ಎಲ್ಲ ವಿಮಾನಗಳನ್ನು ಚೆನ್ನೈನಲ್ಲಿ ಕುಳಿತೇ ಚಾಲನೆ ಮಾಡುತ್ತಿದ್ದುದು ರಜನಿಕಾಂತ್.
 ರಜನಿಕಾಂತ್ ಬಂದ್ರು ಅಂತ ಯಾರೋ ಹಬ್ಬಿಸಿದ ಸುಳ್ಳು ಸುದ್ದಿಯನ್ನು ನಿಜ ಅಂತ ನಂಬಿದ ಪೊಲೀಸರು ಗಡಿಬಿಡಿಗೊಳಗಾಗಿ ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಪುಂಡಲೀಕ ಹಾಲಂಬಿ, ನಲ್ಲೂರು ಪ್ರಸಾದ್, ಬರಗೂರು ರಾಮಚಂದ್ರಪ್ಪ ಮೊದಲಾದ ಗಣ್ಯರನ್ನು ಕೂಡ ವೇದಿಕೆಗೆ ಬಿಡಲು ನಿರಾಕರಿಸಿದ್ದರಂತೆ.
 ರಜನಿಕಾಂತ್‌ಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದೇ ಇದ್ದರೂ 'ಬಸ್ ಕಂಡಕ್ಟರ್‌' ಎಂಬ ನಗೆನಾಟಕವು ದಶಕಗಳಿಂದಲೂ, ತುಂಬಿದ ಥಿಯೇಟರ್‌ಗಳಲ್ಲಿ ಪ್ರದರ್ಶಿತವಾಗುತ್ತಿರುವುದು ರಜನಿ ಅಭಿಮಾನಿಗಳ ಹಾಜರಾತಿಯಿಂದಾಗಿ.
 ಕೆಜೆಪಿ ಪ್ರಚಾರಕ್ಕೆ ಬರುವಂತೆ ರಜನಿಯನ್ನು ವಿನಂತಿಸಲು ಯಡಿಯೂರಪ್ಪ ನಿರ್ಧರಿಸಿದ್ದರು. '225ರ ಬದಲು 450 ಸೀಟು ಗೆದ್ದು ನಮ್ಮ ಪಕ್ಷಕ್ಕೆ ಫಜೀತಿಯಾಗಿಬಿಟ್ಟೀತು', ಎಂದು ರೇಣುಕಾಚಾರ್ಯ ಎಚ್ಚರಿಸಿದ್ದರಿಂದ ನಿರ್ಧಾರ ಕೈಬಿಟ್ಟರು.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com