ಅಕ್ಷರ ಸಾಂಗತ್ಯ ಸಾಕೇ, ಸಮ್ಮೇಳನಗಳಲ್ಲಿ ಊಟವೂ ಬೇಕೇ?
ವಿಜಾಪುರದಲ್ಲಿ ನಡೆದ ಅಖಿಲ ಭಾರತ 79ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯಲ್ಲಿ ಸಾಕಷ್ಟು ಅಸ್ತವ್ಯಸ್ತವಾದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ದಾಸೋಹ ಇರಬೇಕೆ ಬೇಡವೆ ಎನ್ನುವ ಕುರಿತಂತೆ ಹಿರಿಯ ಸಾಹಿತಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಚರ್ಚೆ ನಡೆದಿದೆ. ಅದರಲ್ಲೂ ಹಿರಿಯ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿಯವರು ಸಾಹಿತ್ಯ ಸಮ್ಮೇಳನದಲ್ಲಿ ಸಾಮೂಹಿಕ ಅನ್ನದಾನ ಬೇಡ ಎಂದು ಖಡಾಖಂಡಿತವಾಗಿ ನುಡಿದರೆ, ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪನವರು ಸಾಮೂಹಿಕ ದಾಸೋಹ ನಿಲ್ಲಿಸುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗೆ ಬೇಕು-ಬೇಡ ಎನ್ನುವ ಎರಡು ಚರ್ಚಾ ತಂಡಗಳೇ ಹುಟ್ಟಿಕೊಳ್ಳುವುದಕ್ಕೆ ವಿಜಾಪುರದ ಸಾಹಿತ್ಯ ಸಮ್ಮೇಳನ ಕಾರಣವಾಯಿತು.
ಇದರಲ್ಲಿ ಮೊದಲನೆಯದಾಗಿ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಸಾಮೂಹಿಕ ಊಟದ ವ್ಯವಸ್ಥೆಯನ್ನು ದಾಸೋಹ ಎಂದು ಕರೆಯುವುದೇ ತಪ್ಪು. ಶರಣರ ಕಾರ್ಯಕ್ಷೇತ್ರವಾದ ವಿಜಾಪುರದಲ್ಲಿ ಇದು ನಡೆದಿದ್ದರಿಂದ ಸಹಜವಾಗಿ ಭಾವನಾತ್ಮಕ ನೆಲೆಯಿಂದ ಬಂದ ಆ ಶಬ್ಧ ಮಾಧ್ಯಮಗಳ ಮೂಲಕ ಹೆಚ್ಚು ಪ್ರಯೋಗಗೊಂಡು, ಎಲ್ಲರೂ ಹಾಗೆಯೇ ಕರೆಯುವಂತಾಯಿತು. ಆದರೆ ದಾಸೋಹದ ಪರಿಕಲ್ಪನೆಯೇ ಬೇರೆ, ಅಲ್ಲಿ ಎಲ್ಲರೂ ಶರಣರೇ ಸೇರುವುದರಿಂದ ಭಕ್ತಿ ಭಾವನೆ ಪ್ರಧಾನವಾಗಿ, ಅನ್ನಕ್ಕೆ ಪ್ರಸಾದದ ಸ್ವರೂಪ ನೀಡಲಾಗಿರುತ್ತದೆ. ಹಾಗಾಗಿ ಅಲ್ಲಿ ಅಂಥ ಅವ್ಯವಸ್ಥೆಗಳಿಗೆ ಅವಕಾಶವೇ ಇರುವುದಿಲ್ಲ. ಒಂದು ವೇಳೆ ಅಸ್ತವ್ಯಸ್ತವಾದರೂ ಅದನ್ನು ಎಲ್ಲರೂ ಸಮಾನ ಭಾವದಿಂದ ಸರಿಪಡಿಸಿಕೊಳ್ಳುವ ವ್ಯವಧಾನತೆ ಇರುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಇಂಥ ವಾತಾವರಣ ನಿರ್ಮಾಣಗೊಳ್ಳಲಿಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಅದನ್ನು ಹೇಗೆ ದಾಸೋಹ ಎನ್ನುವುದು? ಅದನ್ನು ಸಾಮೂಹಿಕ ಭೋಜನ ಎನ್ನುವುದೇ ಸರಿ.
ಮೊದಲಿಗೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಮಾತ್ರ ಸೇರುತ್ತಿದ್ದದ್ದರಿಂದ, ಆ ಸಂಖ್ಯೆ ಸೀಮಿತವಾಗಿದ್ದರಿಂದ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಸಂಖ್ಯೆ ಹೆಚ್ಚಾದಂತೆಲ್ಲ ಅದಕ್ಕೆ ಪ್ರತಿನಿಧಿ ಶುಲ್ಕ ಪಡೆದು ಸರಿಯಾದ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಾ ಬರಲಾಯಿತು. ಆದರೆ ಬರಬರುತ್ತ ಸಮ್ಮೇಳನ ಜಾತ್ರಾ ಸ್ವರೂಪ ಪಡೆದಂತೆಲ್ಲ ಸಮ್ಮೇಳನ ನಡೆಸುವವರಲ್ಲಿಯ ದಕ್ಷತೆ, ಅಧ್ಯಕ್ಷತೆಯ ಮೇರೆಗೆ ಕೆಲವೆಡೆ ಉತ್ತಮ ವ್ಯವಸ್ಥೆ, ಮತ್ತೊಂದೆಡೆ ಅವ್ಯವಸ್ಥೆ ಕಾಣತೊಡಗಿತು.
ನಾನು ಕಂಡ ಹತ್ತಾರು ಸಮ್ಮೇಳನಗಳಲ್ಲಿ ಉಡುಪಿ ಜಿಲ್ಲೆಯ ಮೂಡಬಿದರೆಯಲ್ಲಿ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಂಡಂಥ ಅಚ್ಚುಕಟ್ಟುತನ ಹಾಗೂ ರುಚಿಕಟ್ಟಾದ ಊಟದ ವ್ಯವಸ್ಥೆಯನ್ನು ಬೇರೆಲ್ಲಿಯೂ ಕಂಡಿಲ್ಲ. ಅವೆರಡೂ ಜಿಲ್ಲಾ ಕೇಂದ್ರಗಳಾಗಿರದೆ ತಾಲೂಕಾ ಕೇಂದ್ರಗಳಾಗಿದ್ದವೆನ್ನುವುದು ಗಮನಾರ್ಹ. ಅದಕ್ಕೆ ಕಾರಣ ಅಲ್ಲಿ ಊಟದ ಜವಾಬ್ದಾರಿ ವಹಿಸಿಕೊಂಡವರ ಸೇವಾ ಭಾವನೆ ಮತ್ತು ಕಾರ್ಯಕರ್ತರ ಕ್ರಿಯಾಶೀಲತೆ. ಈ ಎರಡು ಕಡೆಗಳಲ್ಲಿ ವಿ.ಐ.ಪಿ.ಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಾದರೆ, ಪ್ರತಿನಿಧಿಗಳಿಗೆ ಮತ್ತೊಂದೆಡೆಯಾಗಿತ್ತು. ಸಾರ್ವಜನಿಕರಿಗೆ ಮಗದೊಂದು ಕಡೆ ನಿರಂತರ ಊಟವಿರುತ್ತಿತ್ತು. ಆದರೆ ಊಟದಲ್ಲಿ ತಾರತಮ್ಯವಿಲ್ಲದೆ ಎಲ್ಲಕಡೆ ಅದೇ ಊಟವಿರುತ್ತಿತ್ತು. ಹಾಗಾಗಿ ಇಲ್ಲಿ ಊಟಕ್ಕಾಗಿ ಪರದಾಡಬೇಕಾದ ಪರಿಸ್ಥಿತಿಯೇ ಇರಲಿಲ್ಲ. ಗಂಗಾವತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮದವರಿಗೆ ಅವರಿರುವ ಸ್ಥಳದಲ್ಲಿಯೇ ಅನುಕೂಲ ಕಲ್ಪಿಸಲಾಗಿತ್ತು.
ಇಂಥವರ ಮಾರ್ಗದರ್ಶನ ಪಡೆಯದೆ ಚಿತ್ರದುರ್ಗದಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿಯೆ ಊಟದ ವ್ಯವಸ್ಥೆಯನ್ನು ಕೆಡಿಸಿದರೆಂದು ಹೇಳಲಾಗುತ್ತಿದೆ. ವಿಜಾಪುರದಲ್ಲಿ ಎಲ್ಲರಿಗೂ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿ ನೂಕು ನುಗ್ಗಲಿಗೆ ಅವಕಾಶ ಮಾಡಿದ್ದರಿಂದ ಬಲವಿದ್ದವರೇ ಊಟ ಪಡೆಯುವಂತಾಯಿತು. ಇಲ್ಲಿ ಪ್ರತಿನಿಧಿ ಶುಲ್ಕ ಯಾಕೆ ಪಡೆದರೆಂಬುದೇ ತಿಳಿಯಲಿಲ್ಲ. ಪ್ರತಿನಿಧಿಗಳಿಗೆ ಊಟ, ಕಿಟ್ಸ್ಗಳಂಥದ್ದು ಇರಲಿ, ಅದರಲ್ಲಿ ಭಾಗವಹಿಸಿದ್ದ ಪ್ರಮಾಣ ಪತ್ರ ಪಡೆಯಲು ಪರದಾಡಿದ ಸರ್ಕಾರಿ ನೌಕರರ ಮೇಲೆ ಲಾಠಿ ಪ್ರಹಾರವಾಯಿತೆಂದರೆ ಈ ಸಾಹಿತ್ಯ ಸಮ್ಮೇಳನದ ಸಾರ್ಥಕತೆಯೇನು?
ಲಕ್ಷ ಸಂಖ್ಯೆಯ ಜನರಿಗೆ ಬಳಸಿ ಎಸೆಯುವ ಪಾತ್ರೆ ಕೊಡದೆ ತಾಟುತೊಳೆದು ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ತಾಟು ತೊಳೆಯುವವರೂ ಸಾಕಷ್ಟು ಸಂಖ್ಯೆಯಲ್ಲಿರದೆ ಕೈ ಕೈಯಿಂದ ತಾಟನ್ನು ಕಸಿಯುವುದಾಯಿತು. ಅನಿವಾರ್ಯ ಪರಿಸ್ಥಿತಿಯಿದ್ದವರು ಇಲ್ಲಿ ಉಣ್ಣಲು ಸಾಧ್ಯವೇ ಹೊರತು ಹೊರಗಿನಿಂದ ಬಂದವರು, ಪ್ರತಿನಿಧಿಗಳು, ಸೂಕ್ಷ್ಮ ವ್ಯಕ್ತಿಗಳು ನುಗ್ಗಲು, ಇಲ್ಲವೇ ನೂರಿನ್ನೂರ ಜನರ ಸಾಲಿನಲ್ಲಿ ನಿಂತು ಊಟ ಮಾಡಲು ಸಾಧ್ಯವಿಲ್ಲ. ಹೀಗಿದ್ದಾಗ ಇದನ್ನು ದಾಸೋಹ ಎನ್ನಲು ಆದೀತೆ? ಇಲ್ಲಿ ಸ್ವಯಂಸೇವಕರ ಕೊರತೆ ಎದ್ದು ಕಾಣುತ್ತಿತ್ತು. ಇಂಥದನ್ನೆಲ್ಲ ಮೊದಲಿಗೆ ಆಲೋಚಿಸಿ ಸರಿಯಾದ ವ್ಯವಸ್ಥೆ ಮಾಡಿದ್ದರೆ, ಪ್ರತಿನಿಧಿಗಳಿಗೆ ಪ್ರತ್ಯೇಕ ಊಟ ನೀಡಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಇಲ್ಲಿಯವರಿಗೆ ಹೇಗಾದರೂ ಮಾಡಿ ಸಮ್ಮೇಳನ ಮಾಡಬೇಕೆನ್ನುವ ಆತುರತೆಯಿತ್ತೇ ವಿನಹ ಅಚ್ಚುಕಟ್ಟಾಗಿ ಮಾಡಬೇಕೆನ್ನುವ ಆಲೋಚನೆಯಿಲ್ಲದ್ದರಿಂದಲೇ ಹಾಗಾಗಿದೆ. ಇದೆಲ್ಲ ಮುಂದೆ ಸಮ್ಮೇಳನ ಮಾಡುವವರಿಗೆ ಪಾಠವಾಗಬೇಕು.
ಊಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತುಕೊಳ್ಳುವ ವ್ಯಕ್ತಿಗಳು ಸಮರ್ಥರಾಗಿದ್ದರೆ ಇಂಥ ಸಮಸ್ಯೆಗಳು ತಲೆದೋರಲು ಸಾಧ್ಯವಿಲ್ಲ. ಮೂಡಬಿದರೆಯಲ್ಲಿ ಅದು ಯಶಸ್ವಿ ಆಗಲಿಕ್ಕೆ ಅಲ್ಲಿಯ ಜವಾಬ್ದಾರಿಯನ್ನು ಧರ್ಮಸ್ಥಳದ ವೀರೇಂದ್ರ ಹೆಗಡೆಯಂಥವರು ವಹಿಸಿದ್ದರೆ, ಗಂಗಾವತಿಯಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಮುಖಂಡರಾದ ಕೆ.ಕಾಳಪ್ಪನವರು ವಹಿಸಿಕೊಂಡು ದೊಡ್ಡ ಕಾರ್ಯಪಡೆಯನ್ನು ಜತೆಗೆ ಕಟ್ಟಿಕೊಂಡು ತಮ್ಮ ಸಂಘದಿಂದಲೇ ಅದರ ಖರ್ಚು ವೆಚ್ಚವನ್ನು ಭರಿಸಿ ಹಗಲಿರುಳು ಶ್ರಮಿಸಿದ್ದೇ ಅಲ್ಲಿ ಸಮರ್ಥವಾಗಿ ಊಟದ ವ್ಯವಸ್ಥೆ ನಡೆಯಲು ಸಾಧ್ಯವಾಯಿತು.
ಇನ್ನು ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಇರಬೇಕೆನ್ನುವುದಾದರೆ, ಈಗಾಗಲೇ ಹೇಳಿದಂತೆ ಅದಕ್ಕೆ ಸಮರ್ಥವಾದ ಸಮಿತಿಯನ್ನು ಮೊದಲಿಗೇ ರೂಪಿಸಬೇಕು. ಎಲ್ಲ ಸಮಿತಿಗಳಲ್ಲಿ ಅದೇ ಪ್ರಧಾನವಾದದ್ದು. ಅದರಲ್ಲಿ ಸಾರ್ವಜನಿಕರಿಗೆ ಸಾಧ್ಯವಾದರೆ ಪ್ರತ್ಯೇಕವಾಗಿ ಮಾಡಬೇಕು. ಇಲ್ಲವಾದರೆ ಅದನ್ನು ಜಾತ್ರೆ ಮಾಡದೆ ಕೇವಲ ಸಾಹಿತ್ಯ ಸಮ್ಮೇಳನ ಮಾಡುವುದಾದರೆ ಪ್ರತಿನಿಧಿಗಳಿಗಷ್ಟೇ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಇದರಿಂದ ಅನಗತ್ಯ ಜನ ಬರುವುದನ್ನೂ ನಿಯಂತ್ರಿಸಿದಂತಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಮೊದಲಿಗೇ ಮಾಧ್ಯಮದಲ್ಲಿ ಊಟದ ವ್ಯವಸ್ಥೆಯನ್ನು ಹಾಗೆ ಮಾಡಲಾಗಿದೆ, ಹೀಗೆ ಮಾಡಲಾಗಿದೆ, ಇಂಥ ಅಡುಗೆ ಮಾಡಿಸಲಾಗುತ್ತದೆ ಎಂದೆಲ್ಲ ಬಾಯಲ್ಲಿ ನೀರೂರುವಂತೆ ಪ್ರಚಾರ ಕೊಡುವುದನ್ನು ನಿಲ್ಲಿಸಬೇಕು. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ವೈಭವೀಕರಣವಾಗಬೇಕೇ ಹೊರತು ಊಟದ ವೈಭವೀಕರಣವಾಗಬಾರದು. ಇದರಿಂದ ಸಮ್ಮೇಳನದ ಸ್ವರೂಪವೇ ವಿಕೃತಗೊಳ್ಳುತ್ತದೆ.
ಇನ್ನು ಊಟದ ವ್ಯವಸ್ಥೆ ಮಾಡುವುದು ಬೇಡವೆಂದರೆ ಮಹಾರಾಷ್ಟ್ರದವರ ಮರಾಠಿ ಸಾಹಿತ್ಯ ಸಮ್ಮೇಳನದಂತೆ ಅವರವರೇ ಬುತ್ತಿಕಟ್ಟಿಕೊಂಡು ಬರುವಂತೆ ಹಾಗೂ ಅವರಿಗೆ ಪ್ರತ್ಯೇಕ ಕೂತು ಊಟ ಮಾಡಲು ಜತೆಗೆ ನೀರಿನ ವ್ಯವಸ್ಥೆ ಮಾಡಿ ಶಿಸ್ತು ಪಾಲಿಸಬೇಕು. ಇದರಿಂದ ಎಲ್ಲರೂ ಒಟ್ಟಿಗೆ ಹಂಚಿಕೊಂಡು ವೈವಿಧ್ಯಮಯ ಊಟ ಮಾಡಲು ಅವಕಾಶವಾಗುವುದಲ್ಲದೆ, ಇಲ್ಲಿ ನೂಕು ನುಗ್ಗಲಿನ ಪ್ರಶ್ನೆಯೇ ಇರುವುದಿಲ್ಲ ಮತ್ತು ಯಾರಿಗೂ ಆರೋಪ ಮಾಡಲು ಅವಕಾಶವಿರುವುದಿಲ್ಲ. ಮತ್ತೊಂದು ಉಪಾಯವೆಂದರೆ, ಕೆಲವು ಹೊಟೇಲ್ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಿಯಾಯ್ತಿ ದರದಲ್ಲಿ ಸರಿಯಾದ ಊಟ ಪೂರೈಸುವಂತೆ ಮಾಡುವುದು. ಅಲ್ಲಿಯೂ ಸಹಿತ ಪ್ರತಿನಿಧಿಗಳ ಸಂಖ್ಯೆಯನ್ನು ಮೊದಲಿಗೆ ಲೆಕ್ಕಹಾಕಿ ನೂಕು ನುಗ್ಗಲಿಗೆ ಅಥವಾ ಕಳಪೆ ಆಹಾರಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ವಹಿಸಬೇಕು. ಊಟದಂಥ ಜವಾಬ್ದಾರಿ ಹೊತ್ತುಕೊಳ್ಳುವವರಲ್ಲಿ ಮೊದಲಿಗೇನೇ ಸ್ವಾರ್ಥಿಗಳನ್ನು, ಭ್ರಷ್ಟರನ್ನು, ಸೇವಾ ಭಾವನೆ ಇಲ್ಲದವರನ್ನು ಗುರುತಿಸಿ ದೂರವಿಡಬೇಕು. ಅಂದಾಗ ಮಾತ್ರ ಸಮ್ಮೇಳನವೂ ಸರಿಯಾಗಿ ನಡೆಯುತ್ತದೆ. ಊಟದ ವ್ಯವಸ್ಥೆಯೂ ನಿರುಮ್ಮಳವಾಗಿ ನಡೆಯುತ್ತದೆ. ಈ ರೀತಿಯಾದಾಗ ಕೋ.ಚೆ. ಹೇಳಿದಂತೆ ವಾರಕ್ಕೊಂದು ಸಮ್ಮೇಳನವಾದರೂ ನಡೆಯಲಿ. ವರ್ಷಕ್ಕೊಮ್ಮೆಯಾದರೂ ನಡೆಯಲಿ, ಆದರೆ ದಾಸೋಹ ಎಂದುಕೊಂಡು ಮತ್ತೊಂದೆಡೆ ಅವ್ಯವಸ್ಥೆಯ ಆಗರ ಆಗುವುದು ಬೇಡ. ಎರಡರ ಸಮ್ಮಿಲನ ಇಂತಾದರೆ ಸಮ್ಮೇಳನದ ಸ್ವರೂಪವೇ ಬದಲಾಗುತ್ತದೆ. ಮುಂದೆ ಇದನ್ನು ಆಲೋಚಿಸುವಂತಾದೀತೆಂದು ಭಾವನೆ.
- ವಿಠ್ಠಪ್ಪ ಗೋರಂಟ್ಲಿ
ಪತ್ರಕರ್ತರು, ಕೊಪ್ಪಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

