ರೇಲ್ವೆ ಉದ್ಧಾರವಾಗಬೇಕೇ? ರಾಜಕೀಯ ಬಿಡಿ
ದೇಶದಲ್ಲಿ 1853ರಲ್ಲಿ ರೇಲ್ವೆ ಜಾಲ ಆರಂಭವಾಗಿ ಸ್ವಾತಂತ್ರ್ಯಾ ನಂತರ ಕೇಂದ್ರ ಸರ್ಕಾರದ ಅಧೀನಕ್ಕೆ ಬಂದದ್ದು 1951ರಲ್ಲಿ. ಈ ಮೂಲಕ ಅದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಮಾರ್ಪಾಡಾಯಿತು. ಸಂತೋಷ ಮತ್ತು ಹೆಮ್ಮೆಯ ವಿಚಾರವೆಂದರೆ ನಮ್ಮ ದೇಶದ ರೇಲ್ವೆ ವ್ಯವಸ್ಥೆ ಅತ್ಯಂತ ದೊಡ್ಡ ರೇಲ್ವೆ ವ್ಯವಸ್ಥೆಯಲ್ಲಿ ಒಂದು ಎಂಬ ಹೆಗ್ಗಳಿಕೆ. ಈ ವ್ಯವಸ್ಥೆಯಲ್ಲಿ 14 ಲಕ್ಷ ಮಂದಿ ವಿವಿಧ ಹಂತದಲ್ಲಿ ಕೆಲಸದಲ್ಲಿದ್ದಾರೆ. ಇಂಥಾ ಸಂಸ್ಥೆ 63 ಸಾವಿರ ಕಿ.ಮೀ ಮಾರ್ಗ ಹೊಂದಿದೆ. ಆದರೆ ಅತ್ಯಂತ ದುಃಖದಾಯಕ ವಿಚಾರವೆಂದರೆ ಕಾಲಕಾಲಕ್ಕೆ ತಕ್ಕಂತೆ ರೇಲ್ವೆ ಇಲಾಖೆ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಲ್ಲ. ಸರಕು ಸಾಗಣೆ ಮತ್ತು ಪ್ರಯಾಣಿಕರಿಗೆ ನೀಡಲಾಗುವ ಟಿಕೆಟ್ನಿಂದ ಹೇರಳ ಲಾಭ ಸಿಗುತ್ತಿದ್ದರೂ ಅದರ ಸದುಪಯೋಗ ಮಾತ್ರ ರೇಲ್ವೆ ಇಲಾಖೆ ಮೇಲೆ ಆಗುತ್ತಿಲ್ಲ.
ರೇಲ್ವೆ ಇಲಾಖೆಯ ಹಣಕಾಸಿನ ವಿಚಾರಕ್ಕೆ ಬಂದರೆ ತೀರಾ ಶೋಚನೀಯವಾಗಿದೆ. ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ ಎನ್ನುವುದು ಗಮನಾರ್ಹ. ಹೀಗಾಗಿ, ವಿಶ್ವದಲ್ಲಿ ನಾಲ್ಕನೇ ಅತ್ಯಂತ ದೊಡ್ಡ ರೇಲ್ವೆ ವ್ಯವಸ್ಥೆಯಾಗಿರುವ ಭಾರತೀಯ ರೇಲ್ವೆಯ ಭವಿಷ್ಯದ ದಿನಗಳು ಕಳೆಗುಂದಲಿವೆ ಎನ್ನುವ ಆತಂಕ ಕಾಡುತ್ತಿದೆ. ಲಕ್ಷಾಂತರ ಮಂದಿ ಪ್ರಯಾಣಿಕರು ಓಡಾಡುವ ರೇಲ್ವೆ ವ್ಯವಸ್ಥೆಯಲ್ಲಿ ಸಂಘಟಿತ ಹಾಗೂ ಕಾರ್ಯಸಾಧುವಾಗಿರುವ ರಕ್ಷಣಾ ವ್ಯವಸ್ಥೆ ಇಲ್ಲವೇ ಇಲ್ಲ ಎಂದರೆ ಅಚ್ಚರಿಯಾದೀತು. ಇದು ಅತ್ಯಂತ ಕಳವಳಕಾರಿಯಾಗಿದೆ.
ಕೇಂದ್ರ ಸರ್ಕಾರ ರೇಲ್ವೆ ಇಲಾಖೆಯಲ್ಲಿ ತುಂಬಿರುವ ರಾಜಕೀಯವನ್ನು ಕಿತ್ತೊಗೆಯಲು ಕ್ರಮ ಕೈಗೊಳ್ಳಬೇಕು. ರೇಲ್ವೆಯ ಒಟ್ಟೂ ವ್ಯವಸ್ಥೆಯನ್ನು ವೃತ್ತಿಪರವಾಗಿರುವವರ ಕೈಗೆ ಒಪ್ಪಿಸುವಂತಾಗಬೇಕು. ರಾಜಕೀಯ ಕ್ಷೇತ್ರದ ನಾಯಕರ ಪ್ರವೇಶ ಕೇವಲ ನೀತಿ ನಿಯಮಗಳ ರೂಪಿಸುವಿಕೆಯಲ್ಲಿ ಮಾತ್ರ ಇರಬೇಕೇ ಹೊರತು ಬೇರೆ ವಿಚಾರಗಳಲ್ಲಿ ಇರಲೇಬಾರದು.
ದೂರದ ನವದೆಹಲಿಯಲ್ಲಿರುವ ರೇಲ್ವೆ ಮಂಡಳಿ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಅದರ ರಚನೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಾಗಿದೆ. ಈ ಬಗೆ ್ಗಕೇಂದ್ರ ಸರ್ಕಾರ ಮನಸ್ಸು ಮಾಡಬೇಕಾಗಿದೆ. ಈಗಾಗಲೇ ಹೇಳಿರುವಂತೆ ವೃತ್ತಿಪರವಾಗಿರುವವರಿಂದಲೇ ರೇಲ್ವೆ ಮಂಡಳಿ ಕರ್ತವ್ಯ ನಿರ್ವಹಿಸಬೇಕು. ಕಾರ್ಯಾಚರಣೆ, ಉಸ್ತುವಾರಿ ಮತ್ತು ಉತ್ಪಾದನೆ, ಸುರಕ್ಷತೆ ಮತ್ತು ದಕ್ಷತೆ ಈ ಅಂಶಗಳನ್ನು ರೇಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಇತರ ಉದ್ಯೋಗಿಗಳಲ್ಲಿ ಬರುವಂತೆ ಮಾಡಬೇಕು. ಇದರ ಜತೆ ಪ್ರಯಾಣಿಕರಿಗೆ ನೀಡಬೇಕಾಗಿರುವ ಉತ್ತಮ ಸೇವೆಗಳ ಬಗ್ಗೆಯೂ ಹೆಚ್ಚಿನ ಅರಿವು ಮೂಡುವಂತೆ ಮಾಡಬೇಕು.
ಇನ್ನು ರೇಲ್ವೆ ಖಾತೆ ಸಚಿವರ ವಿಚಾರಕ್ಕೆ ಬಂದರೆ ಈ ಖಾತೆ ರಾಜಕೀಯ ದಾಳವನ್ನಾಗಿ ಉಪಯೋಗಿಸದಂತೆ ಎಚ್ಚರ ವಹಿಸಬೇಕು. ಮೈತ್ರಿಕೂಟ ರಾಜಕೀಯದಲ್ಲಿ ಅಂಥ ಬೆಳವಣಿಗೆಯಾಗುತ್ತಿದೆ. ರೇಲ್ವೆ ಖಾತೆ ಸಚಿವರಾಗಿ ನೇಮಕಗೊಂಡವರು ಹೆಚ್ಚಿನ ಪ್ರಮಾಣದಲ್ಲಿ ಖಾತೆಗೆ ನ್ಯಾಯ ಒದಗಿಸುತ್ತಾರೆಯೋ, ತಮ್ಮ ಹೆಚ್ಚಿನ ಸಮಯವನ್ನು ಅದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚಿಂತಿಸುವಲ್ಲಿ ವಿನಿಯೋಗ ಮಾಡುತ್ತಾರೆಯೇ ಎನ್ನುವುದನ್ನು ಗಮನಿಸಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಸಚಿವರಾಗಿ ನೇಮಕಗೊಂಡ ವ್ಯಕ್ತಿ ಅದಕ್ಕೆ ಸಮರ್ಥನೇ ಎನ್ನುವುದು ಗಮನಾರ್ಹ. ಆ ವ್ಯಕ್ತಿ ಪಕ್ಷ ರಾಜಕೀಯದಲ್ಲಿ ತೊಡಗಬಾರದು.
ಇದಕ್ಕೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಂಸದ ಮುಕುಲ್ ರಾಯ್ ರೇಲ್ವೆ ಸಚಿವರಾಗಿದ್ದ 6 ತಿಂಗಳಲ್ಲಿ ಅವರು ಕಚೇರಿಗೆ ಹಾಜರಾದದ್ದು ಕೇವಲ 22 ದಿನಗಳು ಮಾತ್ರ. ಉಳಿದ ದಿನಗಳನ್ನು ಅವರು ಪಶ್ಚಿಮಬಂಗಾಳದಲ್ಲೇ ಕಳೆದರು. ಇಂಥ ವಾತಾವರಣ ರೇಲ್ವೆ ಇಲಾಖೆಯ ಕೆಲಸಗಳು ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತವೆ. ಸಚಿವರೇ ಕಚೇರಿಗೆ ಬರಲಿಲ್ಲ ಎಂದಾದರೆ ನವದೆಹಲಿಯಲ್ಲಿರುವ ರೇಲ್ವೆ ಭವನದಲ್ಲಿರುವ ಉದ್ಯೋಗಸ್ಥರಲ್ಲೂ ಉದಾಸೀನತೆಯ ಮನೋಭಾವ ಕಂಡುಬರುತ್ತದೆ.
1996ರ ಬಳಿಕ ದೇಶದಲ್ಲಿ ಕಂಡುಬಂದ ಮೈತ್ರಿ ಕೂಟ ರಾಜಕಾರಣದ ಪರಿಣಾಮ ರೇಲ್ವೆ ಇಲಾಖೆ ಮೇಲೂ ಉಂಟಾಯಿತು.
ಮೈತ್ರಿ ರಾಜಕಾರಣದ ಪ್ರಮುಖ ಪಾತ್ರ ವಹಿಸಿದ್ದ ಜೆಡಿಯು, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್ನ ನಾಯಕರು ರೇಲ್ವೆ ಸಚಿವರಾಗಿದ್ದರು. ಸಂಯುಕ್ತ ರಂಗ ಸರ್ಕಾರ, ಎನ್ಡಿಎ ಮತ್ತು ಯುಪಿಎ ಸರ್ಕಾರಗಳ ಅವಧಿಯಲ್ಲಿ
ಪ್ರಾದೇಶಿಕ ಪಕ್ಷಗಳ ನಾಯಕರೇ ರೇಲ್ವೆ ಸಚಿವರಾಗಿದ್ದರು. ರಾಮ್ವಿಲಾಸ್ ಪಾಸ್ವಾನ್, 13 ದಿನಗಳ ಆಡಳಿತದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡ ರೇಲ್ವೆ ಸಚಿವರಾಗಿದ್ದರು. ಮಮತಾ ಬ್ಯಾನರ್ಜಿ ಎನ್ಡಿಎ ಅವಧಿಯಲ್ಲಿ ಮೊದಲ ಬಾರಿಗೆ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ 2ನೇ ಬಾರಿಗೆ ರೇಲ್ವೆ ಸಚಿವರಾಗಿದ್ದರು. ಜತೆಗೆ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ದಿನೇಶ್ ತ್ರಿವೇದಿ ಮತ್ತು ಮುಕುಲ್ ರಾಯ್ ಈ ಖಾತೆಯ ಸಚಿವರಾಗಿದ್ದರು. 1996 ರಿಂದ 2012ರ ಅವಧಿಯಲ್ಲಿ ಬಿಹಾರದಿಂದ ಮತ್ತು ಪಶ್ಚಿಮ ಬಂಗಾಳದಿಂದ ಮೂವರು ರೇಲ್ವೆ ಸಚಿವರಾಗಿದ್ದರು. ಅದರ ಪ್ರಭಾವವೇ ರೇಲ್ವೆ ಇಲಾಖೆಯಲ್ಲಿನ ಯಾವುದೇ ಹೊಸ ಯೋಜನೆಗಳು, ಹೊಸ ರೈಲುಗಳು, ಹಣ ಬಿಡುಗಡೆ ಏನಿದ್ದರೂ ಆ ಎರಡು ರಾಜ್ಯಗಳಿಗೆ ಸೀಮಿತಗೊಂಡಿತ್ತು. ರೇಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಮತ್ತು ಲಾಲು ಪ್ರಸಾದ್ ಯಾದವ್ ತಮ್ಮ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡಿಕೊಂಡುಬರಲು ಡೀಸೆಲ್ ಬೆಲೆಯಲ್ಲಿ ಏರಿಕೆಯಾದರೂ ರೇಲ್ವೆ ದರದಲ್ಲಿ ಪರಿಷ್ಕರಣೆ ಮಾಡಲೇ ಇಲ್ಲ. ಹೀಗಾಗಿ, ರೇಲ್ವೆಯ ಉದ್ಯೋಗಿಗಳ ವೇತನ, ರೈಲುಗಳ ಉಸ್ತುವಾರಿ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಏರುಪೇರಾಯಿತಲ್ಲದೆ, ಹಣಕಾಸಿನ ಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
2012-13ನೇ ಸಾಲಿನ ರೇಲ್ವೆ ಮುಂಗಡ ಪತ್ರದಲ್ಲಿ ಆಯ್ದ ದರಗಳ ಪರಿಷ್ಕರಣೆ ಮಾಡಿದ ರೇಲ್ವೆ ಖಾತೆ ಮಾಜಿ ಸಚಿವ ದಿನೇಶ್ ತ್ರಿವೇದಿ ಪರಿಸ್ಥಿತಿ ಏನಾಯಿತು ಎಂದು ಗಮನಿಸೋಣ. ದರ ಪರಿಷ್ಕರಣೆ ಮೂಲಕ ಹದಗೆಟ್ಟಿದ್ದ ರೇಲ್ವೆ ಇಲಾಖೆಯ ಹಣಕಾಸು ಪರಿಸ್ಥಿತಿಯನ್ನು ಸುಸ್ಥಿತಿಗೆ ತರಲು ಮುಂದಾದ ತ್ರಿವೇದಿ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಗಾದೆ ತೆಗೆದರು. ದರ ಪರಿಷ್ಕರಣೆಗೆ ಮುನ್ನ ತಮ್ಮ ಅನುಮತಿ ಕೇಳಿಯೇ ಇಲ್ಲ ಎಂದು ಹುಯಿಲೆಬ್ಬಿಸಿದರು. ಈ ಕಾರಣಕ್ಕಾಗಿಯೇ ತ್ರಿವೇದಿಯವರಿಂದ ರಾಜಿನಾಮೆ ಕೊಡಿಸಿ, ತಮ್ಮ ವಿಶ್ವಾಸಿ ಮುಕುಲ್ ರಾಯ್ ಅವರನ್ನು ರೇಲ್ವೆ ಸಚಿವರನ್ನಾಗಿ ನೇಮಿಸಿದರು. ತಮ್ಮ ನಾಯಕಿಯನ್ನು ತೃಪ್ತಿಪಡಿಸುವ ಏಕೈಕ ದೃಷ್ಟಿಯಿಂದ ಹೆಚ್ಚಳವಾಗಿದ್ದ ದರವನ್ನು ಹಿಂಪಡೆದರು. ಪರಿಸ್ಥಿತಿ ಹೀಗಿರುವಾಗ ರೇಲ್ವೆ ಇಲಾಖೆಯಲ್ಲಿ ಸುಧಾರಣೆ ಕಾಣುವುದಾದರೂ ಹೇಗೆ?
ತಕ್ಷಣದಲ್ಲಿ ಆಗಬೇಕಾದ ಕೆಲಸವೇನೆಂದರೆ ರೇಲ್ವೆ ಇಲಾಖೆಯ ಎಲ್ಲ ವಿಭಾಗಗಳ ಆಡಿಟ್ ನಡೆಯಬೇಕು. ದೇಶಾದ್ಯಂತ ರೇಲ್ವೆ ಹಳಿಗಳು ಯಾವ ಪ್ರಮಾಣದಲ್ಲಿ ಸುಸ್ಥಿತಿಯಲ್ಲಿವೆ ಎನ್ನುವುದರ ಅಧ್ಯಯನ ನಡೆಯಬೇಕಿದೆ. ಈ ಮೂಲಕ ಹೊಸ ತಂತ್ರಜ್ಞಾನ ಅಳವಡಿಸುವ ಬಗ್ಗೆ ಹೆಚ್ಚಿನ ಮುತುವರ್ಜಿ ಬೇಕಾಗಿದೆ.
ರೇಲ್ವೆ ಇಲಾಖೆ ಹೊಸ ಯೋಜನೆಗಳಿಗೆ ಹಣದ ಕೊರತೆ, ಮಾನವ ಸಹಜ ತಪ್ಪು, ಅದು ಹಿಂದಿನ ಸರ್ಕಾರಗಳು ಮಾಡಿದ ಎಡವಟ್ಟು ಇಂಥ ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಯೇ ಪ್ರಯಾಣಿಸುವ ಲಕ್ಷಾಂತರ ಸಾರ್ವಜನಿಕರ ಜೀವದ ಬಗ್ಗೆ ಹಗುರ ಧೋರಣೆ ತಳೆದರೆ ಅದರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಮೂಡುವಂಥ ಪರಿಸ್ಥಿತಿ ಬಂದೊದಗೀತು.
ರೇಲ್ವೆಯ ಅಭಿವೃದ್ಧಿಯಲ್ಲಿ ಪ್ರಧಾನಮಂತ್ರಿಗಳ ಕಚೇರಿ, ರೇಲ್ವೆ ಸಚಿವರ ಕಚೇರಿ, ರೇಲ್ವೆಯ ಎಲ್ಲ ವಿಭಾಗಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ದೇಶದ ಜನರ ಪಾತ್ರ ಮುಖ್ಯವಾಗಿದೆ. ಅದುವೇ ರಾಷ್ಟ್ರದ ಪ್ರಮುಖ ಗುರಿಯಾಗಬೇಕು.
ಧನಾತ್ಮಕ ಚಿಂತನೆ ಯಾವತ್ತೂ ಧನಾತ್ಮಕ ಕೆಲಸಗಳಿಗೆ ಕಾರಣವಾಗುತ್ತದೆ. ಧನಾತ್ಮಕ ಕೆಲಸ ಉತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ.
-ಪ್ರಕಾಶ್ ಮೆಂಡೋತ್
ವಲಯ ರೇಲ್ವೆ ಪ್ರಯಾಣಿಕರ ಸಲಹಾ ಸಮಿತಿ ಮಾಜಿ ಸದಸ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

