

ನಮ್ಮ ಪಕ್ಕದ ಮನೆಯವನೇನೋ ಎಂಬಂತಿರುವ ಹುಡುಗ ಒಂದು ಬರ್ಮುಡಾ ಚಡ್ಡಿ ಹಾಕಿ, ಅಂಗಿಯಿಲ್ಲದ ಹೆಗಲಿಗೊಂದು ಲುಂಗಿ ಹೊದ್ದು ಏನನ್ನೋ ಮೆಲ್ಲುತ್ತಿದ್ದಾನೆ. ಅದ್ಯಾವುದೋ ಉಗ್ರಾಣದಲ್ಲಿ ಕುಳಿತಿರುವಂತೆ ತೋರುವ ಆ ಭಂಗಿ, ಶಾಲೆಗೆ ಚಕ್ಕರ್ ಹಾಕಿದ ಹುಡುಗ ಸಾಮಾನು-ಸರಂಜಾಮುಗಳನ್ನಿಡುವ ಕೋಣೆಯಲ್ಲಿ ಒಬ್ಬನೇ ಕುಳಿತು ಯಾರಾದರೂ ಬಂದುಬಿಟ್ಟಾರೋ ಎಂದು ನೋಡುತ್ತ ತಿಂಡಿ ಪೊಟ್ಟಣ ಬಿಚ್ಚಿದಂತಿದೆ.
ದೃಶ್ಯ ಬದಲಾಗುತ್ತದೆ....
ಕಲ್ಲು-ಮಣ್ಣಿನ ಹಾಸಿನ ಮೇಲೆ ಮಲಗಿದ್ದಾನೆ ಆ ಹುಡುಗ. ಉಗ್ರಾಣದಲ್ಲಿ ಕುಳಿತಿದ್ದಾಗ ಧರಿಸಿದ್ದ ಅದೇ ಬರ್ಮುಡಾ. ಉಳಿದಂತೆ ನಗ್ನ. ಎದೆ ಮೇಲೆ ಅಲ್ಲಲ್ಲಿ ಕೆಂಪುಶಾಯಿ ಬಳಿದಂಥ ಗುರುತುಗಳು. ಅವನನ್ನು ಕೊಲ್ಲಲಾಗಿದೆ!
ಎಲ್‌ಟಿಟಿಇಯ ಉಗ್ರ ಪ್ರಭಾಕರನ್‌ನ 12 ವರ್ಷದ ಮಗ ಬಾಲಚಂದ್ರನ್‌ನ ಅಂತ್ಯ ಹೀಗಾಯಿತು ಅನ್ನುತ್ತಿದೆ ವಾರದ ಹಿಂದೆ ಇಂಗ್ಲೆಂಡ್‌ನ 'ಚಾನೆಲ್ 4' ಬಿಡುಗಡೆ ಮಾಡಿರುವ ಸಾಕ್ಷ್ಯ ಚಿತ್ರ. ಎಲ್ಲಿಂದಲೋ ಬಂದ ಗುಂಡು ಈ ಬಾಲಕನನ್ನು ಆಹುತಿ ತೆಗೆದುಕೊಳ್ಳಲಿಲ್ಲ; ಶ್ರೀಲಂಕಾದ ಭದ್ರತಾ ಪಡೆ ಇವನನ್ನು ತನ್ನ ಸೆರೆಯಲ್ಲಿ ಇಟ್ಟುಕೊಂಡು, ಅದೊಂದಿನ ಬಂದೂಕಿನ ನಳಿಗೆಗೆ ತೀರ ಹತ್ತಿರದಲ್ಲಿ ಈ ಹುಡುಗನನ್ನು ನಿಲ್ಲಿಸಿ ಟ್ರಿಗರ್ ಅಮುಕಿತು ಎಂಬುದು ಸಾಕ್ಷ್ಯ ಚಿತ್ರದ ಆರೋಪ. 2009ರಲ್ಲಿ ನಡೆದಿದೆ ಎನ್ನಲಾದ ಈ ಆಫಾತಕಾರಿ ವಿದ್ಯಮಾನವನ್ನು ಶ್ರೀಲಂಕಾ ಸರ್ಕಾರ ಅಲ್ಲಗೆಳೆದಿದೆ. ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾ ಸರ್ಕಾರದ ವಿರುದ್ಧ ಮಾನವಹಕ್ಕು ಉಲ್ಲಂಘನೆ ನಿರ್ಣಯವೊಂದು ಮಂಡನೆಯಾಗಲಿರುವ ಸಂದರ್ಭದಲ್ಲೇ ಇಂಥ ವಿವರಗಳು ಹೊರಬರುತ್ತಿರುವುದರ ಹಿಂದಿನ ಜಾಗತಿಕ ರಾಜಕೀಯದ ಕಣ್ಕಟ್ಟು ಆಟಗಳು ಅವೇನೇ ಇದ್ದಿರಬಹುದು. ಆದರೆ ಆ ಹುಡುಗ ಹಾಗೆ ನಿಸ್ತೇಜವಾಗಿ ಬಿದ್ದಿರುವ ಚಿತ್ರವು ಕಲಕಿರುವ ಕಳವಳ- ಖಿನ್ನತೆಗಳಿಗೆ ಇವ್ಯಾವ ಅಂಶಗಳೂ ಸಮಾಧಾನ ಹೇಳುವುದಿಲ್ಲ. ಹಾಗೊಂದು ಮಾನವೀಯ ಸ್ಪಂದನ ಇರಿಸಿಕೊಂಡಾಗ, ಎಲ್‌ಟಿಟಿಇ ಸಾಚಾನಾ, ಲಂಕಾ ಸರ್ಕಾರದ್ದೂ ತಪ್ಪಲ್ವಾ ಎಂಬೆಲ್ಲ ಪ್ರಶ್ನೆಗಳ ಆಚೆಗಿನ ನಿಸ್ಸಹಾಯಕ ಪ್ರಪಂಚವೊಂದು ಕಣ್ಣಿಗೆ ಬೀಳುತ್ತದೆ. ಆ ಜಗತ್ತಿನಲ್ಲಿ ಎದ್ದು ನಿಲ್ಲುವಂಥವುಗಳೆಲ್ಲ ಅರಗಿಸಿಕೊಳ್ಳಲಾಗದ ಪ್ರಶ್ನೆಗಳೇ.
ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ ಎಂಬ ಮಾತೇ ಇದೆ. ಸಂಘರ್ಷ ಹೊತ್ತಿಕೊಂಡಿರುವ ಯಾವುದೇ ಪ್ರದೇಶದಲ್ಲಿ ಆಗುವುದು ಹೀಗೆಯೇ. ಸರ್ಕಾರ ತನ್ನ ಸಮರದಲ್ಲಿ, ಬಂಡುಕೋರರು ತಮ್ಮ ಉನ್ಮಾದದಲ್ಲಿ, ಎಲ್ಲರೂ ತಮ್ಮ ತಮ್ಮ 'ಸರಿ'ಗಳಲ್ಲಿ ಮುನ್ನುಗ್ಗುತ್ತಾರೆ. ಮಾನವ ಹಕ್ಕು ಎಂಬ ಪರಿಕಲ್ಪನೆ ಎರಡೂ ಕಡೆಗಳಿಂದಲೂ ಉಲ್ಲಂಘನೆಯಾಗಿರುತ್ತದೆ. ಯುದ್ಧದಲ್ಲಿ ಯಾವುದೋ ಒಂದು ಪಾಳಯ 'ಸರಿ' ಎನ್ನಿಸಿಕೊಳ್ಳುವ ವೇಳೆಗೆ, 'ಪ್ರೀತಿ'ಯ ವಿಷಯದಲ್ಲಿ ಯಾವುದೂ ಸರಿ ಆಗಿರುವುದಿಲ್ಲ. ಸಂಘರ್ಷ ಕೊಡಮಾಡುವ ನೋವು-ದುಃಖಗಳಿಗೆ ವಯಸ್ಸು, ಲಿಂಗ ಇನ್ಯಾವುದೇ ಪರಿಗಣನೆಗಳಿರುವುದಿಲ್ಲ ಖರೆ. ಆದರೆ ಬಾಲ್ಯದ ಮೇಲಿನ ಇದರ ಬರ್ಬರತೆ ಮಾತ್ರ ಅಕ್ಷರಗಳಲ್ಲಿ ಹಿಡಿದಿಡಲು ಆಗದ್ದು. ಪ್ರಕ್ಷುಬ್ಧ ನೆಲದಲ್ಲಿ ಜನಿಸುವ ಮಕ್ಕಳ ಬದುಕು ಕ್ರೌರ್ಯದಲ್ಲೇ ಶುರುವಾಗಿ ಅದರೊಂದಿಗೇ ಮುಕ್ತಾಯವಾಗಿ ಬಿಡುತ್ತದೆ. ಬಾಳಿನ ಇನ್ಯಾವುದೇ ಮಗ್ಗುಲುಗಳನ್ನು ಸ್ಪರ್ಶಿಸುವ ಆಯ್ಕೆಯೇ ಅವರೆದುರಿಗಿಲ್ಲ. ಸಿಡಿಮದ್ದುಗಳ ಮೊರೆತ ಹಾಗೂ ನೆತ್ತರಿನ ಓಕುಳಿಗಳ ನಡುವೆ ಅತ್ಯಲ್ಪ ಅವಧಿಯಲ್ಲಿ ಇಹಲೋಕ ಯಾತ್ರೆ ಮುಗಿಸುವ ಇವರಿಗೆ, ಪರಲೋಕದಲ್ಲಿ ಯಾರಾದರೂ 'ಹೇಗಿತ್ತಪ್ಪಾ, ನೀ ಹೋಗಿ ಬಂದ ಜಗತ್ತು?' ಅಂತ ಪ್ರಶ್ನಿಸಿದರೆ ಬಹುಶಃ ಕೇಳಿದವನ ಕೆನ್ನೆ ಚದುರಿಸುವಂಥ ತಪರಾಕಿಯೇ ಈ ಆತ್ಮಗಳ ಉತ್ತರವಾಗಿದ್ದಿರಬಹುದು!
ಅದೊಂದು ಅತಿಕ್ರೂರ ವ್ಯಂಗ್ಯಗಳೇ ತುಂಬಿರುವ ಲೋಕ. ಪ್ರಭಾಕರನ್‌ನ ಮಗ ಎಂಬುದೊಂದೇ ಆ ಹನ್ನೆರಡು ವರ್ಷದ ಬಾಲಕನ ಜೀವಕ್ಕೆ ಎರವಾಯಿತು. ಪ್ರಭಾಕರನ್ ನೇತೃತ್ವದ ಇದೇ ಎಲ್‌ಟಿಟಿಇ ಪೆನ್ನು ಹಿಡಿಯಬೇಕಾದ ಬಾಲ್ಯದ ಬೆರಳುಗಳಿಗೆ ಬಂದೂಕು ಹಿಡಿಸಿದ ಕುಖ್ಯಾತಿ ಹೊಂದಿದೆ. ಏನೂ ಅರಿಯದ, ಆಯ್ಕೆಗಳನ್ನು ನಿರ್ಧರಿಸಲಾಗದ ಎಳೆ ಮಿದುಳುಗಳಿಗೆ ಪ್ರತ್ಯೇಕತವಾದದ ತಿದಿ ಒತ್ತಿ ಅವರನ್ನು ತನ್ನ 'ರಕ್ಷಾ ಕವಚ'ವನ್ನಾಗಿ ಮಾಡಿಕೊಂಡ ಎಲ್‌ಟಿಟಿಇ ಹಿಂಸಾ ವಿನೋದದ ಪಾಪಕ್ಕೆ ಎಣೆಯುಂಟೆ? ಐದು ಸಾವಿರದ ಸಂಖ್ಯೆಯಲ್ಲಿ 'ಮಕ್ಕಳ ಕದನ ಪಡೆ' ಹೊಂದಿದ್ದ, ತಮ್ಮ ಉಗ್ರಪಥವನ್ನು ಅನುಮೋದಿಸದ ತಮಿಳರನ್ನೂ ನಿರ್ದಯವಾಗಿ ಹತ್ಯೆಗೈದ, ಇವತ್ತಿನ ಜಿಹಾದಿ ಉಗ್ರರು ಅನುಸರಿಸುತ್ತಿರುವ ಆತ್ಮಹತ್ಯಾ ದಾಳಿಯನ್ನು ಬಹಳ ಮೊದಲೇ ಪರಿಚಯಿಸಿದ್ದ ಎಲ್‌ಟಿಟಿಇ ಅದ್ಯಾವ ಆಯಾಮದಲ್ಲೂ ಸಹ್ಯವಲ್ಲ. ಆದರೆ ಆ ಹುಡುಗನ ಹತ್ಯೆಗೆ ಇವೆಲ್ಲ ಸಮರ್ಥನೆಯಾಗುವುದಿಲ್ಲ. ಆದರೆ ರಣಕಹಳೆ ಮೊಳಗಿಸಿದ ಮನಸ್ಸು ತುಡಿಯುವುದು ಸೇಡಿಗೇ ಹೊರತು ತತ್ವಗಳಿಗೆ, ತರ್ಕಗಳಿಗಲ್ಲ. ಇದೇ ಕ್ರೂರ ವ್ಯಂಗ್ಯ.
ಇದು ಬರೀ ಲಂಕೆಯ ವ್ಯಥೆಯಲ್ಲ. ನಮ್ಮ ಮನೆಯ ಕಂದಮ್ಮಗಳು ವಿಡಿಯೋಗೇವ್‌ನಲ್ಲಿ ವಿಲನ್‌ನನ್ನು ಹುಡುಕಿ ಕೊಲ್ಲುವ ಆಟ ಶುರು ಮಾಡಿರುವ ಇದೇ ಹೊತ್ತಿನಲ್ಲಿ, ಆಫ್ರಿಕಾ-ಏಷ್ಯ-ಲ್ಯಾಟಿನ್ ಅಮೆರಿಕದ ಸಂದಿಗೊಂದಿಗಳಲ್ಲಿ ಆರು-ಹತ್ತು ವಯೋವಾನದ ಮಕ್ಕಳು ಎ.ಕೆ. 47 ಹೆಗಲಿಗೇರಿಸಿದ್ದಾರೆ.
'ಚೈಲ್ಡ್ ಸೋಲ್ಜರ್ಸ್' ಎಂಬ ದಿಗ್ಭ್ರಮೆಯ ಪದದಲ್ಲಿ ಅವರ ತಲ್ಲಣಗಳನ್ನು ವ್ಯಾಖ್ಯಾನಿಸುವ ಕಷ್ಟಕ್ಕೆ ಬಿದ್ದಿದೆ ಜಗತ್ತು. ಕೆಲ ವರ್ಷಗಳ ಹಿಂದೆ ಬಂದ 'ಬ್ಲಡ್ ಡೈಮಂಡ್' ಚಿತ್ರದಲ್ಲಿ ಮಕ್ಕಳ ಪಡೆಯ ಮನಕಲಕುವ ಚಿತ್ರಣ ನೀಡಲಾಗಿತ್ತು. ವಜ್ರದ ನಿಕ್ಷೇಪಕ್ಕಾಗಿ ಬಂಡುಕೋರರು ಹಾಗೂ ಸರ್ಕಾರ ಕಿತ್ತಾಡುತ್ತಿರುವ ಆಫ್ರಿಕಾದ ಸಿಯೋರ ಲಿಯಾನ್ ದೇಶವೊಂದರಲ್ಲೇ ಚೈಲ್ಡ್ ಸೋಲ್ಜರ್‌ಗಳ ಸಂಖ್ಯೆ ಎರಡು ಲಕ್ಷ ಎಂದರೆ ಒಟ್ಟಾರೆ ಪ್ರಪಂಚದ ಲೆಕ್ಕವೆಷ್ಟಿದ್ದೀತು? ಬರ್ಮಾ, ಸುಡಾನ್‌ನಂಥ ದೇಶಗಳಲ್ಲಿ ಸರ್ಕಾರಿ ಪಡೆಯಲ್ಲೇ ಮಕ್ಕಳ ನೇಮಕವಿದೆ. ಬುರುಂಡಿ, ಚಾದ್, ಕಾಂಗೋ, ರ್ವಾಂಡಾ, ಉಗಾಂಡ, ಸೋಮಾಲಿಯಾ ಇಂಥ ಕದನವೇ ಜೀವನವಾಗಿರುವ ದೇಶಗಳಲ್ಲಿ ಮಕ್ಕಳು ಹುಟ್ಟುವುದೇ ಬಂದೂಕು ಕೈಗೆತ್ತಿಕೊಳ್ಳಲು. ಅಫಘಾನಿಸ್ತಾನದ ತಾಲಿಬಾನಿಗಳ ನಿಯಂತ್ರಣದಲ್ಲಿರುವ ಮಕ್ಕಳಿಗೆ ಸಂಭ್ರಮಿಸಬೇಕಿರುವುದು ಬದುಕಿಗೇ ಹೊರತು ಸಾವಿಗಲ್ಲ ಎಂಬ ಸಾಮಾನ್ಯ ಸಂಗತಿಯೇ ತಿಳಿದಂತಿಲ್ಲ. ಅಷ್ಟರಮಟ್ಟಿಗೆ ಅವರು ಬ್ರೈನ್‌ವಾಷ್‌ಗೆ ಒಳಗಾಗಿದ್ದಾರೆ. ಒಣಗಲು ಹರಡಿರುವ ಅಡಕೆ ಕಾಯುವುದಕ್ಕೆ ಅಂಗಳಕ್ಕೆ ಹೋಗಿ ಮಲಗುತ್ತಿದ್ದೇನೆ ಎಂಬಷ್ಟೇ ಸಹಜವಾಗಿ ಅವರು ಅಮೆರಿಕನ್ ಪಡೆಯ ದೈತ್ಯ ಟ್ಯಾಂಕರುಗಳ ದವಡೆಗೆ ಮೈ ಚೆಲ್ಲಿ ತಮ್ಮನ್ನೇ ಸ್ಫೋಟಿಸಿಕೊಳ್ಳುತ್ತಾರೆ.
ಇಂಥ ಸಂಘರ್ಷದ ಕುದಿಗಳಿಂದ ಮಕ್ಕಳನ್ನು ಬಚಾವು ಮಾಡಿ ಅವರಿಗೆ ಭವಿಷ್ಯ ಒದಗಿಸುವ ಕಾರ್ಯದಲ್ಲಿ ಜಾಗತಿಕವಾಗಿ ಅನೇಕ ಸಂಘಟನೆಗಳು ತೊಡಗಿಸಿಕೊಂಡಿವೆ. ಕೊಲ್ಲುವುದರ ಹೊರತಾಗಿಯೂ ಬೇರೊಂದು ಜಗತ್ತಿದೆ ಎಂಬ ಅರಿವೇ ಇರದ ಅವರಿಗೆಲ್ಲ ಇನ್ನೊಂದು ಬದುಕಿಗೆ ಅಣಿ ಮಾಡುವುದು ಮಹಾ ಪ್ರಯಾಸದ ಕೆಲಸ ಎಂಬುದು ಅವರೆಲ್ಲರ ಅನುಭವ. ಯುದ್ಧೋನ್ಮಾದಿಗಳು ತಮ್ಮ ಪಡೆಗೆ ಮಕ್ಕಳನ್ನು ಸೇರಿಸಿಕೊಳ್ಳುವ ಉದ್ದೇಶವೂ ಅದೇ. ಪಾಪಪ್ರಜ್ಞೆ, ಸರಿ-ತಪ್ಪು, ಆತಂಕಗಳ ಯಾವ ಭಾವವೂ ಮಕ್ಕಳ ಎದೆಯಲ್ಲಿ ನಾಟಿಯಾಗಿರುವುದಿಲ್ಲ. ಇವರ ತರಬೇತಿಯೇ ಅವರ ಪಾಲಿನ ವೇದ. ಪ್ರಕ್ಷುಬ್ಧ ಪ್ರದೇಶಗಳಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗಿ ಹುಡುಗರಿಗೆ ಬಂದೂಕನ್ನೂ, ಹುಡುಗಿಯರಿಗೆ ಕಾಮತೃಷೆ ಆರಿಸುವ ಕೆಲಸವನ್ನೂ ಹೇರುವುದು ಅವರ ಬದುಕಿನ ಒಂದು ದುರಂತವಾದರೆ, ಇಂಥವರನ್ನು ಹೇಗೋ ಹೊರಗೆಳೆದುಕೊಂಡು ಬಂದ ಸಂದರ್ಭದಲ್ಲಿ ಅವರಿಗಿಲ್ಲಿ ಹೊಂದಾಣಿಕೆಯೇ ಸಾಧ್ಯವಾಗದೇ ತಮ್ಮ ಮೊದಲಿನ ಜಗತ್ತೇ ಸಹಜವಾಗಿತ್ತು ಎಂದೆನಿಸಿಬಿಡುವುದು ಮಹಾ ದುರಂತ. ಬಂಡುಕೋರರು ಇವರಿಗೆ ಬಂದೂಕನ್ನಷ್ಟೇ ನೀಡದೆ ಡ್ರಗ್ಸ್ ರುಚಿಯನ್ನೂ ಹತ್ತಿಸಿರುವುದರಿಂದ ಸಹಜ ಪ್ರಪಂಚಕ್ಕೆ ತರುವ ಸಾಹಸ ಇನ್ನಷ್ಟು ಸಂಕೀರ್ಣ.
---
ಇವೆಲ್ಲ ಸಂಘರ್ಷ ಸೀಮೆಯ ಕತೆಯಾಯಿತು. ನಮ್ಮೆದುರಿಗೆ ಒಂದಿಷ್ಟು ಅಂಕಿ-ಅಂಶಗಳಿವೆ. ಅವುಗಳ ಒಡಲಲ್ಲಿರುವ ಕತೆಗಳನ್ನೂ ನಾವು ದಕ್ಕಿಸಿಕೊಳ್ಳಬೇಕು. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಲಭ್ಯವಿರುವ 2011ರ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಆ ವರ್ಷ ಕಾಣೆಯಾದ ಮಕ್ಕಳ ಸಂಖ್ಯೆ 60 ಸಾವಿರ. ಆ ಪೈಕಿ 22 ಸಾವಿರ ಮಕ್ಕಳು ಇನ್ನೂ ಪತ್ತೆಯಾಗಿಲ್ಲವಂತೆ. ಆದರೆ ಮಕ್ಕಳು ಕಾಣೆಯಾಗುವ ಪ್ರಕರಣಗಳಲ್ಲಿ ಅರ್ಧದಷ್ಟು ಮಾತ್ರ ವರದಿಯಾಗುತ್ತವೆ. ಹೀಗಾಗಿ ಮುನಿಸಿಕೊಂಡು ಮನೆಬಿಟ್ಟವರು, ಅಪಹರಣಕ್ಕೆ ಒಳಗಾದವರು, ಕಾರಣ ತಿಳಿಯದಂತೆ ನಾಪತ್ತೆಯಾದವರು ಈ ಎಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ವರ್ಷಕ್ಕೆ ಸುಮಾರು 90 ಸಾವಿರ ಮಕ್ಕಳು ಮಿಸ್ಸಿಂಗ್ ಎನ್ನುತ್ತದೆ 'ಬಚ್ಪನ್ ಬಚಾವೋ' ಆಂದೋಲನ. ಈ ಪೈಕಿ ವರ್ಷಗಳುರುಳಿದರೂ ಪತ್ತೆಯಾಗದವರು ಹೋಗುವುದೆಲ್ಲಿ ಎಂದು ತಿಳಿದುಕೊಳ್ಳುವುದಕ್ಕೆ ತೀರ ತಲೆ ತುರಿಸಿಕೊಳ್ಳಬೇಕಿಲ್ಲ ಎನಿಸುತ್ತದೆ.
ಕೆಲ ವರ್ಷಗಳ ಕೆಳಗೆ ವಾಣಿ ವಿಲಾಸ ಆಸ್ಪತ್ರೆಯಿಂದ ಕಾಣೆಯಾಗಿದ್ದ ಮಗು ಇಷ್ಟೊತ್ತಿಗಾಲೇ ಮಂಗಳೂರಿನ ಕಾಲೇಜು ಕ್ಯಾಂಪಸ್‌ಗಳಿಗೆ ಡ್ರಗ್ ಪೂರೈಸುವ ಜಾಲದ ಭಾಗವಾಗಿದ್ದಿರಬಹುದೇ? ಅಥವಾ ಮುಂಬೈನ ಜನಸಂದಣಿಯಲ್ಲಿ ಯಾವುದೋ ಗ್ಯಾಂಗ್ ಪರವಾಗಿ ಭಿಕ್ಷೆ ಎತ್ತುತ್ತಿರಬಹುದೇ? ಇವೆಲ್ಲವನ್ನೂ ಮೀರಿ ಅದಾಗಲೇ ಕರಿ ಪಿಸ್ತೂಲ್ ಒಂದರತ್ತ ಕಣ್ಣು ಹಾಯಿಸಿರಬಹುದೇ....? ತೆರೆದುಕೊಳ್ಳುವವೆಲ್ಲ ಆತಂಕದ ಸಾಧ್ಯತೆಗಳೇ.
---
ಸೃಷ್ಟಿಯ ಆರಂಭದ ಮೊಳಕೆಗಳು ಮುರಿಯುತ್ತಿರುವ ಅಸಹನೀಯ ಸದ್ದು. ಜಗತ್ತು ಪ್ರಳಯವಾಗುತ್ತಲೇ ಇದೆ ಯಾವುದೋ ಮೂಲೆಯಲ್ಲಿ, ಜ್ಯೋತಿಷಿಗಳ ಅವಗಾಹನೆಗೆ ಸಿಗದೆ. ಇನ್ನೊಂದು ಮೂಲೆಯಲ್ಲಿ ಹತ್ತೆಂಟು ಬಗೆಯ ವೃತ್ತಿಸೌಧ ಕಟ್ಟಿಕೊಳ್ಳಲೆಂದು ಓದಿ ಓದಿ ಹೈರಾಣಾಗುತ್ತಿರುವವರ ಸಿಲೆಬಸ್‌ಗಳಲ್ಲಿ ಈ ಪ್ರಳಯದ ಕತೆಗಳಿಲ್ಲ.
-ಚೈತನ್ಯ ಹೆಗಡೆ
cchegde@gmail.com