ಆರ್ಥಿಕ ಸಮೀಕ್ಷೆ ಓದಿದ್ದೀರಾ ಸೋನಿಯಾ?
ರಘುರಾಮ್ ಗೋವಿಂದ್ ರಾಜನ್. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಇವರ ಮಾತು ನೇರಾ ನೇರ. ಅಲನ್ ಗ್ರೀನ್ ಎಂಬ ಪ್ರಖ್ಯಾತ ಅರ್ಥಶಾಸ್ತ್ರಜ್ಞನ ಆರ್ಥಿಕ ನೀತಿಗಳನ್ನು ಸಾರ್ವಜನಿಕವಾಗಿ ಟೀಕಿಸಿದ ವ್ಯಕ್ತಿ ಇವರು. 2005ರ ಕಾನ್ಫರೆನ್ಸೊಂದರಲ್ಲಿ ಮಾತನಾಡುತ್ತಾ ರಾಜನ್: 'ಇಂದಿನ ಬ್ಯಾಂಕುಗಳು ಉತ್ತಮ ಬಂಡವಾಳವನ್ನು ಹೊಂದಿದ್ದರೂ ಸಹ ಹಿಂದಿನಂತೆಯೇ ರಿಸ್ಕ್ ತಂದೊಡ್ಡಬಲ್ಲವು. ಇಂಟರ್ ಬ್ಯಾಂಕ್ ಮಾರುಕಟ್ಟೆ ಸ್ತಂಭಿಸಿ, ಬೃಹತ್ ಆರ್ಥಿಕ ಬಿಕ್ಕಟ್ಟು ಬಂದೆರಗಬಹುದು' ಎಂದು ಹೇಳಿದ್ದರು.
ಅಮೆರಿಕದ ರಿಯಲ್ ಎಸ್ಟೇಟ್ ಉದ್ಯಮ ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ರಾಜನ್ ಈ ಭಾಷಣ ಮಾಡಿದ್ದು. ಸಮಯದಲ್ಲಿ ಎಲ್ಲರೂ ಮಸ್ತಿಯ ಮೂಡ್ನಲ್ಲಿದ್ದುದರಿಂದ ಯಾರಿಗೂ ಇಂತಹ ಮಾತುಗಳನ್ನು ಕೇಳುವ ಮನಸ್ಸಿರಲಿಲ್ಲ. ಅದನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಯೂ ಇರಲಿಲ್ಲ. ಆರ್ಥಿಕ ವಲಯದಲ್ಲಂತೂ ಆಗ ಅಲನ್ ಗ್ರೀನ್ಸ್ಪ್ಯಾನ್ರನ್ನು ಸಾಕ್ಷಾತ್ ಭಗವಂತನಂತೆಯೇ ನೋಡಲಾಗುತ್ತಿತ್ತು. ಹಾಗಾಗೇ ಅಮೆರಿಕದ ಆರ್ಥಿಕ ಸ್ಥಿತಿಯನ್ನು ವಿಮರ್ಶೆ ಮಾಡುವುದನ್ನು ಗ್ರೀನ್ಸ್ಪ್ಯಾನ್ರನ್ನು ಪ್ರಶ್ನಿಸುವ ಉದ್ಧಟತನ ತೋರಿಸಿದಂತೆಯೇ ನೋಡಲಾಗುತ್ತಿತ್ತು. ರಾಜನ್ರ ಮೇಲೆ ಆಗ ಎಲ್ಲರೂ ಮುಗುಚಿಕೊಂಡು ಬಿದ್ದರಾದರೂ, ಕೊನೆಗೆ ಯಾರ ಮಾತು ಸತ್ಯವಾಯಿತು ಎನ್ನುವುದು ಪ್ರತ್ಯೇಕವಾಗಿ ಹೇಳಬೇಕೇ? ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ರಾಜನ್ ತಮ್ಮ ಪುಸ್ತಕ 'ಫಾಲ್ಟ್ ಲೈನ್ಸ್'ನಲ್ಲಿ ಬರೆಯುತ್ತಾರೆ: 'ಆ ದಿನ ನಾನು ಹಸಿದ ಹುಲಿಗಳ ಬೋನಿನೊಳಗೆ ಸಿಕ್ಕಿಬಿದ್ದೆನೇನೋ ಅನ್ನಿಸಿದ್ದು ಸುಳ್ಳಲ್ಲ. ಎಲ್ಲರೂ ನನ್ನ ಮಾತು ಕೇಳಿ ಉಗ್ರರಾದರು. ನನಗೂ ಇರುಸುಮುರುಸಾಗತೊಡಗಿತು. ಆದರೆ ನನಗೆ ಹಾಗೆ ಆಗಿದ್ದು, ಅವರೆಲ್ಲರೂ ನನ್ನನ್ನು ವಿರೋಧಿಸುತ್ತಿದ್ದಾರೆ ಎನ್ನುವ ಕಾರಣಕ್ಕಲ್ಲ, ಬದಲಾಗಿ ಕಣ್ಣೆದುರಿಗಿರುವ ಸತ್ಯವನ್ನು ನೋಡಲು ಸಿದ್ಧರಿಲ್ಲವಲ್ಲ ಎನ್ನುವ ಕಾರಣಕ್ಕೆ.'
ಇದರ ತಾತ್ಪರ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತಾವು ಹಾಗೆ ಮಾತನಾಡುವುದು ರಾಜಕೀಯವಾಗಿ ತಪ್ಪು ಎನ್ನುವುದರ ಅರಿವಿದ್ದರೂ ರಾಜನ್ ತಮ್ಮ ಕಣ್ಣೆದುರಿಗೆ ಘಟಿಸುತ್ತಿರುವುದನ್ನು ನಿಷ್ಠುರವಾಗಿ ಹೇಳುವುದಕ್ಕೆ ಹಿಂಜರಿಯಲಿಲ್ಲ. 2012-2013ರ ಆರ್ಥಿಕ ಸಮೀಕ್ಷೆಯಲ್ಲಿ ಈ ಅಂಶ ಎದ್ದು ಕಾಣುತ್ತದೆ. 'ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿದ ಸಬ್ಸಿಡಿಗಳ ಬಿಲ್ ಹೆಚ್ಚಿದಂತೆ ಹಣಕಾಸಿನ ಗುರಿಗಳಿಗೆ ಗಣನೀಯ ಪೆಟ್ಟು ಬೀಳುತ್ತದೆ. ಹಣದುಬ್ಬರವನ್ನು ಹತೋಟಿಯಲ್ಲಿಡಬೇಕಾದರೆ ಸರ್ಕಾರ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು' ಎಂದು ಹೇಳಿದ್ದಾರೆ.
ಮೇಲಿನ ಪ್ಯಾರಾದ ಕೊನೆಯ ಸಾಲು ನಿಜಕ್ಕೂ ಕುತೂಹಲ ಮೂಡಿಸುತ್ತವೆ. ಏಕೆಂದರೆ, ಯುಪಿಎ ಸರ್ಕಾರ ಎರಡನೆಯ ಅವಧಿಯಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡಿದ್ದರಿಂದ ಹಣದುಬ್ಬರದ ಸಮಸ್ಯೆ ಎದುರಾಗುವ ಸನ್ನಿವೇಶ ಮೂಡಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬ ಸಾರ್ವಜನಿಕವಾಗಿ ಹೇಳಿರುವುದು ಬಹುಶಃ ಇದೇ ಮೊದಲ ಬಾರಿಯಿರಬಹುದು.
ಇನ್ನು ಆ ಸಮೀಕ್ಷೆಯಲ್ಲಿ ಹೇಳಿರುವಂತಹ ಸ್ಥಿತಿಯೇ ಕಳೆದ 5 ವರ್ಷದಿಂದ ಭಾರತದಲ್ಲಿ ನಿರ್ಮಾಣವಾಗಿದೆ. ಸಬ್ಸಿಡಿಗಳ ಬಗ್ಗೆ ರಾಜನ್ ಅವರಿಗೆ ಹೆಚ್ಚು ಒಲವಿಲ್ಲ. ಅದು ಕೇವಲ ಅಲ್ಪಾವಧಿಯ ಅವಶ್ಯಕತೆಯಷ್ಟೇ ಎಂದವರು ಭಾವಿಸುತ್ತಾರೆ. 'ಫಾಲ್ಟ್ ಲೈನ್ಸ್' ಪುಸ್ತಕ ಬಿಡುಗಡೆಯಾದ ನಂತರ ಡಿಎನ್ಎ ಪತ್ರಿಕೆಗಾಗಿ ನಾನು ಅವರ ಸಂದರ್ಶನ ಮಾಡಿದ್ದೆ. ಭಾರತ ಕಲ್ಯಾಣ ರಾಜ್ಯವಾಗುವುದಕ್ಕೆ ಸಾಧ್ಯವೇ? ಎಂದು ನಾನವರನ್ನು ಪ್ರಶ್ನಿಸಿದಾಗ, 'ರಾಜಕಾರಣಿಗಳು ಆಪೇಕ್ಷಿಸುವ ಮಟ್ಟಕ್ಕಲ್ಲ' ಎಂದವರು ಉತ್ತರಿಸಿದ್ದರು. ಇನ್ನು 2008ರಲ್ಲಿ ನಡೆಸಿದ ಇನ್ನೊಂದು ಸಂದರ್ಶನದಲ್ಲಿ ಅವರು: 'ಅತಿ ದೊಡ್ಡ ಸಮಸ್ಯೆಯೆಂದರೆ ಭಾರತ ಸರ್ಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ನೀತಿಯ ಬಗ್ಗೆ ನನಗೆ ಸಹಮತವಿಲ್ಲ. ಸಬ್ಸಿಡಿಯಲ್ಲಿ ವ್ಯಯದ ಇಳಿತಾಯ ಮಾಡಿದಾಗ, ಸಾರ್ವಜನಿಕ ಹೂಡಿಕೆಯನ್ನು ಕೃಷಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ವ್ಯಯಿಸಬಹುದು' ಎಂದು ಹೇಳಿದ್ದರು.
ರಾಜನ್ರ ಯೋಚನೆಗಳು ಎಕನಾಮಿಕ್ ಸರ್ವೆಯಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ. 2012-13ರ ಸಬ್ಸಿಡಿ ಬಿಲ್(ಪ್ರಮುಖವಾಗಿ ತೈಲ, ಆಹಾರ, ರಸಗೊಬ್ಬರ) ಸುಮಾರು 1,90,015 ಕೋಟಿ ರುಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತ ಕಡಿಮೆಯಾಗಬೇಕು. ಸಬ್ಸಿಡಿಯ ಮೇಲೆ ಮಾಡುವ ವೆಚ್ಚದ ಮೇಲೆ ನಿಯಂತ್ರಣ ಸಾಧಿಸುವುದು ಅತಿ ಅವಶ್ಯಕ. ಪೆಟ್ರೋಲಿಯಂ ಉತ್ಪನ್ನಗಳು, ಮುಖ್ಯವಾಗಿ ಡೀಸೆಲ್ ಮತ್ತು ಎಲ್ಪಿಜಿಯ ದೇಶೀಯ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸಾಲಿಗೆ ನೇರವಾಗಿ ಏರಿಸಬೇಕು. ಈ ಕೆಲಸಕ್ಕೆ ಚಾಲನೆ ದೊರೆತಿದೆ. ಸೆ. 2012ರಂದು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಮಾಡಲಾಯಿತು ಮತ್ತು ಜನವರಿ 2013ರಲ್ಲಿ ಮತ್ತೊಮ್ಮೆ ತೈಲ ಮಾರುಕಟ್ಟೆ ಕಂಪನಿಗಳಿಗೆ ನಿಯಮಿತ ಅಂತರದಲ್ಲಿ ತೈಲ ಬೆಲೆಯಲ್ಲಿ ಸಣ್ಣ ಏರಿಕೆಗೆ ಅನುವು ಮಾಡಿಕೊಡಲಾಯಿತು'.
ಆದರೆ ಇದಿಷ್ಟು ಮಾಡಿದರೆ ಸಾಕೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆ ಎಣ್ಣೆಯನ್ನು ಲುಕ್ಸಾನು ದರದಲ್ಲಿ ಮಾರುವುದರಿಂದ ಅವುಗಳಿಗೆ ಸಬ್ಸಿಡಿ ಕೊಡಲಾಗುತ್ತದೆ. ಅದೇನೇ ಇದ್ದರು ಹಣಕಾಸಿನ ವರ್ಷದ ಮೊದಲ 9 ತಿಂಗಳು ತೈಲ ಸಬ್ಸಿಡಿ ಬಿಲ್ 81,000 ಕೋಟಿ ರುಪಾಯಿಗೂ ಮೀರಿ ನಿಂತಿದೆ. ವರ್ಷದ ಕೊನೆಯಲ್ಲಿ ಅದು ಸುಮಾರು 1,00,000 ಕೋಟಿ ರುಪಾಯಿಗೆ ತಲುಪಿದರೂ ಆಶ್ಚರ್ಯ ಪಡಬೇಕಿಲ್ಲ. ಇದನ್ನೆಲ್ಲ ಮುಚ್ಚಿಡಬೇಕಿದ್ದರೆ ಚಾಣಾಕ್ಷ ಲೆಕ್ಕ ಪರಿಶೋಧಕರೇ ಬೇಕೇನೋ!
ಹಾಗಾಗೆ ಮುಂಬರುವ ವರ್ಷಗಳಲ್ಲಿ ಇಂತಹ ಸಬ್ಸಿಡಿಗಳಿಗೆ ಕತ್ತರಿ ಬೀಳಲೇಬೇಕು. '2011-12 ಮತ್ತು 2012-13ರ ಆರ್ಥಿಕ ಪರಿಣಾಮಗಳಿಂದ ಉದ್ಭವವಾಗುವ ಪ್ರಮುಖ ಪಾಠವೆಂದರೆ, ಅನಿಶ್ಚಿತತೆ ಹೆಚ್ಚಾಗಿ ಕಾಡುತ್ತಿರುವ ಸಮಯದಲ್ಲಿ ಸೂಕ್ಷ್ಮ ಪರಿಶೀಲನೆಯ ಮೂಲಕ ಅಪಾಯದ ಮೂಲ್ಯಾಂಕನವನ್ನು ನಿರಂತರವಾಗಿ ಮಾಡುತ್ತಿರಬೇಕು ಮತ್ತು ಸರಿಯಾದ ಕ್ರಮಗಳನ್ನು ಅನುಸರಿಸಿ ಉತ್ತಮ ಆರ್ಥಿಕ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಎಂಬುದು. ಇನ್ನು ಅನ್ಕ್ಯಾಪ್ಡ್ ಸಬ್ಸಿಡಿಗಳು ಪ್ರಮುಖ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.' ಬಹುಶಃ ಇಂತಹ ಮಾತನ್ನು ಕೇಳುವುದಕ್ಕೆ ಕಾಂಗ್ರೆಸ್ನ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಇಷ್ಟಪಡುವುದಿಲ್ಲವೇನೋ? ಅದರಲ್ಲೂ ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪಕ್ಷಕ್ಕೆ ಕುತ್ತು ತರುವ ಯಾವ ನಿರ್ಧಾರಕ್ಕೂ ಅವರು ಮುಂದಾಗುವುದಿಲ್ಲ. ಸಬ್ಸಿಡಿ ನೀಡುವ ಮೂಲಕ ಸಾರ್ವಜನಿಕರನ್ನು ತಮ್ಮತ್ತ ಸೆಳೆದುಕೊಳ್ಳುವಕೆಲಸವನ್ನು ಯುಪಿಎ ಅದ್ಹೇಗೆ ಬಿಟ್ಟೀತು?
-ವಿವೇಕ್ ಕೌಲ್, ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

