ಅಂಕಣಗಳು

ಹಬ್ಬಬೇಕಿದೆ ಕೋಮು ಸಾಮರಸ್ಯದ ಬಳ್ಳಿ

Published On :

ಎಂಟು ದಿನಗಳ ಹಿಂದೆ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಿಂದ 16 ಮಂದಿ ಮೃತಪಟ್ಟರು. 115ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡರು. ಇತ್ತೀಚಿನ ವರ್ಷದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ಇಂಥ ಸರಣಿ ಸ್ಫೋಟದ ಸುದ್ದಿ ಕಿವಿಗೆ ಬಿದ್ದರೆ, ವರ್ಷ ವರ್ಷವೂ ಇಂಥದೊಂದು ಅನಾಹುತ ನಡೀತಾನೇ ಇರ್ತದೆ. ಇದೇನೂ ಹೊಸದಲ್ಲವಲ್ಲ ಎನ್ನುವಂಥ ಮನಸ್ಥಿತಿಗೆ ಜನ ತಲುಪಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ, ಸರಣಿ ಬಾಂಬ್ ಸ್ಫೋಟದಂಥ ಪ್ರಕರಣಗಳಿಂದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆಯ ಭಾರತದಲ್ಲಿ ಕೋಮು ಸಾಮರಸ್ಯವೆಂಬ ಪದವೇ ಹಳಿ ತಪ್ಪತೊಡಗಿದೆ.
ದೆಹಲಿ, ಪೂನಾ, ಮಾಲೆಗಾಂವ್, ಮೆಕ್ಕಾ ಮಸೀದಿ, ಅಜ್ಮೀರ್ ಮುಂತಾದ ಕಡೆಗಳಲ್ಲೆಲ್ಲ ಬಾಂಬ್ ಸ್ಫೋಟದ ದುರ್ಘಟನೆ ನಡೆದಿದೆ. ಪ್ರತಿಯೊಂದು ಬಾರಿ ಬಾಂಬ್ ಸ್ಫೋಟ ನಡೆದಾಗಲೂ ಆ ಭಾಗದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಕ್ಷೋಭೆ ಕಾಣಿಸಿಕೊಂಡಿದೆ. ಸ್ಫೋಟ ನಡೆದ ಒಂದೆರಡು ದಿನಗಳ ನಂತರ ದುರ್ಘಟನೆಯ ಹಿಂದೆ ದೇಶದ ಗಡಿಯಾಚೆ ಇರುವ ಮುಸ್ಲಿಂ ಸಂಘಟನೆಗಳ ಕೈವಾಡವಿರುವುದು ಎಲ್ಲರಿಗೂ ಗೊತ್ತಾಗುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ, ಇಂಥದೊಂದು ದುಷ್ಕೃತ್ಯವನ್ನು ನಾವೇ ಮಾಡಿದ್ದು ಎಂದು ಕೆಲವು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಬಹಿರಂಗವಾಗಿಯೇ ಹೇಳಿಕೊಳ್ಳುತ್ತವೆ. ಭಾರತದಲ್ಲಿರುವ ಸ್ಥಳೀಯ ಜನರ ನೆರವು ಪಡೆದೇ ಬಾಂಬ್ ಸ್ಫೋಟದ ಸ್ಕೆಚ್ ತಯಾರಿಸಿದೆವು ಎನ್ನುವ ಮಟ್ಟಕ್ಕೂ ಕೆಲವು ಸಂಘಟನೆಗಳು ಪ್ರತಿಕ್ರಿಯೆ ನೀಡಿವೆ.
ದೇಶದ ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟದಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿರುವುದನ್ನು ಕಂಡ ನಂತರ ಭಾರತದ ಕೋಟ್ಯಂತರ ಮಂದಿ ಭಯದ ಮಧ್ಯೆ, ಅಭದ್ರತೆಯ ಮಧ್ಯೆ, ಬದುಕಿದ್ದಾರೆ. ತಮ್ಮ ಸುತ್ತಮುತ್ತ ನಡೆಯುತ್ತಿರುವ ಕ್ರೌರ್ಯದ, ಹಿಂಸಾತ್ಮಕ ಚಟುವಟಿಕೆಗಳನ್ನು ಕಂಡು ತಲ್ಲಣಿಸಿದ್ದಾರೆ. ಇಂಥ ಸಂದರ್ಭದಲ್ಲಿ ಧರ್ಮ ಎಂಬುದು ಅಪೀಮಿನಂತೆ ಎಲ್ಲರನ್ನೂ ಸುತ್ತುವರಿದಿದೆ. ಧರ್ಮವನ್ನು ಸೃಷ್ಟಿಸಿದ್ದು ಮನುಷ್ಯನೇ ವಿನಃ ಇಂಥ ಮನುಷ್ಯ ಇಂಥದೇ ಧರ್ಮಕ್ಕೆ ಸೇರಿದವನು ಎಂಬ ವಿಂಗಡಣೆಯನ್ನು ಯಾವ ಧರ್ಮವೂ ಮಾಡಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ.
ಈಗ, ಜಗತ್ತಿಗೆ ಗೊತ್ತಿರುವಂತೆ, ಭಾರತ ಎಲ್ಲ ಧರ್ಮಗಳ ನೆಲೆವೀಡು. ಹಿಂದೂ, ಬೌದ್ಧರು, ಜೈನರು, ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿದಂತೆ ಜಗತ್ತಿನ ಎಲ್ಲ ಧರ್ಮೀಯರಿಗೂ ನೆಲೆ ಕೊಟ್ಟ ಹೆಗ್ಗಳಿಕೆ ಭಾರತದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವೊಂದು ಸಂದರ್ಭದಲ್ಲಿ ವಿವಿಧ ಧರ್ಮಗಳ ನಾಯಕರ ಮಧ್ಯೆ ಅಭಿಪ್ರಾಯ ಬೇಧ ಕಾಣಿಸಿಕೊಂಡಿರುವುದು ನಿಜ. ಆದರೆ ದೇಶದ ಏಕತೆಯ ವಿಷಯ ಬಂದಾಗ ಎಲ್ಲ ಧರ್ಮದ ನಾಯಕರೂ ಒಟ್ಟಾಗಿಯೇ ಕಣಕ್ಕೆ ಇಳಿಯುತ್ತಿದ್ದರು. ಆ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶವನ್ನು ದೇಶದ ನಾಗರಿಕರಿಗೆ ನೀಡುತ್ತಿದ್ದರು. ತಮ್ಮ ಅನುಪಮ ಕಾವ್ಯ ಶಕ್ತಿಯಿಂದ ಸಮಸ್ತ ಭಾರತೀಯರನ್ನೂ ಖುಷಿಪಡಿಸಿದ ಕವಿಗಳೆಂದರೆ ಸಂತ ಕಬೀರ ಮತ್ತು ಅಮೀರ್ ಖುಸ್ರೂ. ನೂರಾರು ಭಕ್ತಿಗೀತೆಗಳಿಂದ ಮೋಡಿ ಮಾಡಿದ ಸೂಫಿ ಸಂತರನ್ನು ಮರೆಯುವುದಾದರೂ ಹೇಗೆ? ಅವರನ್ನು ಮುಸ್ಲಿಂ ಎಂಬ ಕಾರಣಕ್ಕೇ ತಿರಸ್ಕರಿಸಲು ಸಾಧ್ಯವೇ? ವಾಸ್ತವವಾಗಿ, ಭಾರತದಲ್ಲಿ ಕೋಮು ದ್ವೇಷ ಅಥವಾ ಹಿಂದೂ-ಮುಸ್ಲಿಂ ಎಂಬ ಮಾತು ವಿಪರೀತ ಎಂಬಷ್ಟು ವೇಗ ಪಡೆದುಕೊಂಡದ್ದು 1947ರಲ್ಲಿ ಪಾಕಿಸ್ತಾನದ ರಚನೆಯಾದ ನಂತರ. ದೇಶ ವಿಭಜನೆಯ ಹೆಸರಲ್ಲಿ ಅಂದು ನಡೆದ ಮಾರಣ ಹೋಮಕ್ಕೆ , ತಪ್ಪುಗಳಿಗೆ ಎಣೆಯಿಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಕೆಲವು ಅವಘಡಗಳಿಂದ ನಾವು ಕೆಲವೊಂದು ಪಾಠ ಕಲಿತಿದ್ದು ನಿಜ. ಆದರೆ ಹಿಂದೂ-ಮುಸ್ಲಿಂ ಜನಾಂಗದ ಮಧ್ಯೆ ಶಾಂತಿಯ ಸಸಿ ನೆಡಲು ಯಾರಿಗೂ ಸಾಧ್ಯವಾಗಲೇ ಇಲ್ಲ.
ಒಂದು ಕಾಲದಲ್ಲಿ ದೇಶದ ಏಕತೆ, ರಕ್ಷಣೆಗಾಗಿ ಶ್ರಮಿಸಿದ ಪ್ರಮುಖರ ಹೆಸರು ಹೇಳುವಾಗ ಚಕ್ರವರ್ತಿಗಳಾದ ಅಶೋಕ, ಅಕ್ಬರ್, ಧಾರಾಶಿಕೋ, ರಾಜಕೀಯ ನಾಯಕರಾದ ಮಹಾತ್ಮ ಗಾಂಧಿ, ನೆಹರೂ, ಶಾಸ್ತ್ರಿ, ಪಟೇಲ್ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈ ಹಿಂದೆ ಒಂದು ಆದರ್ಶದಂತೆ ಉಳಿದಿದ್ದ ನಾಯಕರ ಗುಣಗಳಿಗೆ ತದ್ವಿರುದ್ಧ ಗುಣ ಹೊಂದಿರುವ ನಾಯಕರೇ ಎಲ್ಲ ಕಡೆಯೂ ತುಂಬಿ ಹೋಗಿದ್ದಾರೆ.
ಹೆಸರಾಂತ ಕಮ್ಯೂನಿಸ್ಟ್ ನಾಯಕ ಸೀತಾರಾಂ ಯಚೂರಿ, 1998ರಲ್ಲಿ ಪ್ರಕಟವಾದ ಬರಹವೊಂದರಲ್ಲಿ ಹೇಳಿದ್ದರು: ಹಿಂದೂ-ಮುಸ್ಲಿಮರ ಮಧ್ಯೆ ಸಾಮರಸ್ಯ ಉಂಟಾಗದಿರಲು ಮುಖ್ಯ ಕಾರಣವೆಂದರೆ ಎರಡೂ ಕಡೆಯ ಜನರಲ್ಲಿರುವ ದುರಭಿಮಾನ, ಸೌಹಾರ್ದದ ಬಾಳ್ವೆಗಾಗಿ ಒಂದು ಬಾರಿ ನಾವೇ ಸೋಲೋಣ ಎಂಬ ಯೋಚನೆಯನ್ನು ಈ ಕಡೆ ಹಿಂದೂಗಳು ಮಾಡುವುದಿಲ್ಲ. ಆ ಕಡೆ ಮುಸ್ಲಿಮರೂ ಹೀಗೊಂದು ಸಾಮರಸ್ಯದ ಯೋಚನೆ ಮಾಡುವುದಿಲ್ಲ. ಎರಡೂ ಧರ್ಮದವರು ಪರಸ್ಪರರನ್ನು ಶತ್ರು ಎಂದೇ ಭಾವಿಸುತ್ತಾರೆ. ಎರಡೂ ಕಡೆಯವರು ತಮ್ಮ ಮೂಗಿನ ನೇರಕ್ಕೇ ಯೋಚಿಸುತ್ತಾರೆ. ಹೀಗಾದರೆ ಕೋಮು ಸಾಮರಸ್ಯ ಎಂಬ ಪದಕ್ಕೆ ಅರ್ಥವನ್ನು ಹುಡುಕುವುದಾದರೂ ಹೇಗೆ?
ಭಾರತದ ನೆಲದಲ್ಲಿ ವಾಸಿಸುತ್ತಿರುವುದರಿಂದ ಮುಸ್ಲಿಂ ವ್ಯಕ್ತಿ ಕೂಡ ಭಾರತೀಯನೇ. ಈ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ಬರೆಯುತ್ತಾರೆ ಸೀತಾರಾಂ ಯಚೂರಿ. ಮುಂದುವರಿದು ಅವರು ಹೇಳುತ್ತಾರೆ: ಗಣರಾಜ್ಯೋತ್ಸವದ ದಿನದ ಸಮಾರಂಭವನ್ನು ಬಹಿಷ್ಕರಿಸಬೇಕು ಎಂದು ಕೆಲವು ಮೂಲಭೂತವಾದಿ ಮುಸ್ಲಿಂ ನಾಯಕರು ಮೂರು ದಶಕದ ಹಿಂದೆ ಭಾರತದಲ್ಲಿದ್ದುಕೊಂಡೇ ಹೇಳಿಕೆ ನೀಡಿದ್ದುಂಟು. ಆದರೆ ಅಂಥ 'ಆದೇಶ'ಗಳಿಗೆ ಭಾರತದ ಮುಸ್ಲಿಮರು ಮಣಿಯಲಿಲ್ಲ. ಗಣರಾಜ್ಯೋತ್ಸವ ಸಮಾರಂಭಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ನಡೆದು ಬಂದು ದೇಶಾಭಿಮಾನ ಮೆರೆದರು. ಶಾ ಭಾನು ಪ್ರಕರಣದಲ್ಲಿ ಮೂಲಭೂತವಾದಿ ಮುಸ್ಲಿಂ ನಾಯಕರು ವಿನಾಕಾರಣ ಮೂಗು ತೂರಿಸಿ ನ್ಯಾಯಾಂಗ ಹಾಗೂ ಸಂಸತ್‌ನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದನ್ನೂ ಇದೇ ಸಂದರ್ಭದಲ್ಲಿ ತಮ್ಮ ಬರಹದಲ್ಲಿ ಸೀತಾರಾಂ ಯಚೂರಿ ಉಲ್ಲೇಖಿಸಿದ್ದರು.
ಭಾರತದ ನೆಲದಲ್ಲಿ ಆಶ್ರಯ ಪಡೆದುಕೊಂಡೇ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುವುದನ್ನು ಕಂಡು ಬಹುಸಂಖ್ಯಾತ ಭಾರತೀಯ ಮನಸ್ಸುಗಳು ಕುದ್ದು ಹೋಗಿರುವುದು ನಿಜ. ಭಾರತೀಯ ದೇಶಭಕ್ತರ ಮನದೊಳಗೆ ಗುಪ್ತ ಗಾಮಿನಿಯಂತೆ ಹರಿಯುತ್ತಿದ್ದ ಈ ಕಿಚ್ಚು ಸ್ಫೋಟಕ ಗುಣ ಪಡೆದುಕೊಂಡದ್ದು ರಾಮಜನ್ಮ ಭೂಮಿಗಾಗಿ ನಡೆದ ಹೋರಾಟದ ಸಂದರ್ಭದಲ್ಲಿ. ಅವತ್ತು ಯುವ ಮನಸ್ಸುಗಳ ಸಿಟ್ಟಿನ ಕಾವು ಬಾಬ್ರಿ ಮಸೀದಿ ಉರುಳಿಸುವುದರ ಮೂಲಕ ಅಂತ್ಯವಾಯಿತು. ಇದರ ಪರಿಣಾಮ ಮಾತ್ರ ಕೆಟ್ಟದಾಗಿತ್ತು. ಘೋರವಾಗಿತ್ತು. ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ್ದಕ್ಕೆ ಪ್ರತೀಕಾರವೆಂಬಂತೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟವಾಯಿತು. ಸಾವಿರಾರು ಕುಟುಂಬಗಳ ಬದುಕು ನರಕವಾಯಿತು. ಹಿಂದೂ-ಮುಸ್ಲಿಂರ ಮಧ್ಯೆ ಸಾಮರಸ್ಯ ಏರ್ಪಡಬೇಕು ಎಂಬ ಮಾತಿಗೆ ಅರ್ಥವೇ ಇಲ್ಲ ಎಂಬಂಥ ವಾತಾವರಣ ಮುಸ್ಲಿಂ ಮೂಲಭೂತವಾದಿಗಳ ಕ್ರೌರ್ಯದ ನಡೆಯಿಂದ ಸೃಷ್ಟಿಯಾಗಿ ಹೋಯಿತು.
ಸತ್ಯದ ಮಾತು ಏನೆಂದರೆ, ಭಾರತದಲ್ಲಿರುವ ಮುಸ್ಲಿಮರಿಗೆ ಹಿಂಸೆ ಬೇಕಾಗಿಲ್ಲ. ಆದರೆ ಅವರುಗಳನ್ನು ಮುಸ್ಲಿಂ ಮೂಲಭೂತವಾದಿಗಳು ಸುಮ್ಮನಿರಲು ಬಿಡುತ್ತಿಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿದ್ದಾರೆ. ಶಿಕ್ಷಣಕ್ಕೆ, ಬದುಕಿಗೆ ಸಹಾಯ ಮಾಡುವ ನೆಪದಲ್ಲಿ ಮುಸ್ಲಿಂ ಯುವಕರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ. ದಾರಿ ತಪ್ಪಿಸುತ್ತಿದ್ದಾರೆ.
ದುರಂತವೆಂದರೆ ಈ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿಯೂ ಮೂಲಭೂತವಾದಿಗಳು ಹುಟ್ಟಿಕೊಂಡಿದ್ದಾರೆ. ಅವರು ಶಿಕ್ಷಣದ ಪಠ್ಯಗಳಲ್ಲಿ ಸುಳ್ಳು ಮಾಹಿತಿಗಳನ್ನು ತುಂಬಿ ಮಕ್ಕಳ ಮನಸ್ಸು ಕೆಡಿಸುತ್ತಿದ್ದಾರೆ. ಪರಿಣಾಮವಾಗಿ, ನೂರಾರು ವರ್ಷಗಳ ಹಿಂದೆ ಭಾರತವನ್ನು ಆಳಿದ ಮುಸ್ಲಿಂ ದೊರೆಗಳನ್ನು ಸಂಸ್ಕೃತಿಹೀನರೆಂದು, ಮತಾಂಧರೆಂದು, ಪರಮ ಕ್ರೂರಿಗಳೆಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಂತಾಗಿದೆ. ಇದರ ಒಟ್ಟು ಪರಿಣಾಮ ಏನೆಂದರೆ, ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ.
ಹೌದು. ಇಂಥ ನೋವಿನ, ಸಂಕಟದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಪ್ರೀತಿಯ ಹೂ ಅರಳಬೇಕಾಗಿದೆ. ಸಾಮರಸ್ಯದ ಬಳ್ಳಿ ಹಬ್ಬಬೇಕಾಗಿದೆ. ಕೋಮುವಾದ ಹಾಗೂ ಮೂಲಭೂತವಾದವನ್ನು ಬೇರು ಸಹಿತ ಕಿತ್ತು ಎಸೆಯಬೇಕಾಗಿದೆ. ಒಂದು ಮಾತಂತೂ ಸತ್ಯ: ಕೋಮುವಾದವನ್ನು ಮಟ್ಟ ಹಾಕುವ ತನಕ ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ.
ಇಂಥ ಸಂದರ್ಭದಲ್ಲಿ ದೊಡ್ಡದೊಂದು ಬದಲಾವಣೆ ಆಗಬೇಕಾದರೆ, ಭಯೋತ್ಪಾದನೆ ನಿಗ್ರಹದ ರಾಷ್ಟ್ರೀಯ ವೇದಿಕೆಯೊಂದು ಅಸ್ತಿತ್ವಕ್ಕೆ ಬರಬೇಕು. ಸರ್ಕಾರಗಳು 'ರಾಜಕೀಯ' ಬಿಟ್ಟು, ಹಿಂದೂ-ಮುಸ್ಲಿಂ ಮನಸ್ಸುಗಳ ಮಧ್ಯೆ ಬಾಂಧವ್ಯ ಬೆಳೆಸಲು ಮುಂದಾಗಬೇಕು. ಅಗತ್ಯ ಬಿದ್ದರೆ ಸಮಾಜ ಸೇವಾ ಸಂಸ್ಥೆಗಳು, ಎನ್‌ಜಿಒಗಳ ನೆರವು ಪಡೆದು, ಎರಡೂ ಧರ್ಮದ ಯುವಕರು, ಶಾಂತಿ-ಸಾಮರಸ್ಯಕ್ಕೆ ಹಂಬಲಿಸುವವರನ್ನು ಮುಖಾಮುಖಿಯಾಗಿಸಬೇಕು.  ಹೀಗೆ ಮಾಡಿದಾಗ ಮಾತ್ರ ದೇಶದ ಎರಡು ಪ್ರಬಲ ಕೋಮುಗಳ ಮಧ್ಯೆ ಸಾಮರಸ್ಯ ಉಂಟು ಮಾಡಲು ಪ್ರಯತ್ನಿಸಬಹುದು. ಅಂಥದೊಂದು ಸಂದರ್ಭ ಬೇಗ ಬರಲಿ ಎಂಬುದು ಈ ಕ್ಷಣದ ಪ್ರಾರ್ಥನೆ.

-ನಜೀಬ್ ಜಂಗ್
ಉಪಕುಲಪತಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.