ಕಳೆದ ಒಂದೇ ಒಂದು ವಾರದಲ್ಲಿ - ದೇಶದಲ್ಲಿ ರಾಜ್ಯದಲ್ಲಿ ಆಗಿರುವ ಬದಲಾವಣೆಗಳೆಲ್ಲವೂ ಸದ್ಯದಲ್ಲಿನ ಮೇಲ್ನೋಟಕ್ಕೆ ಅಂತಹ ಮಹತ್ವದ್ದೇನೂ ಅಲ್ಲ ಎನಿಸಿದರೂ, ವಾಸ್ತವದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡ ರೀತಿಯ ಬದಲಾವಣೆಯನ್ನು ಜಾರಿಗೆ ತರುವಂತಹದ್ದೇ. ಅದರಲ್ಲಿ ಅನುಮಾನವೇ ಬೇಡ.
ಈಗಾಗಲೇ ಸಾಕಷ್ಟು ಚರ್ಚೆಗೆ, ಭಾವೋದ್ವೇಗದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವ ಬದಲಾವಣೆ ಎಂದರೆ ಹಲವು ವರ್ಷಗಳಿಂದಲೂ ಈಗ- ಆಗ ಎಂದು ಹೇಳಿಕೊಂಡು ಮುಂದಕ್ಕೆ ಹಾಕಿಕೊಂಡೇ ಬಂದಿದ್ದ ರಾಹುಲ ಗಾಂಧಿ ಅವರ "ಕಿರೀಟ ಧಾರಣೆ".
ಜೈಪುರದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿನ ಮಹಾಧಿವೇಶನದಲ್ಲಿ ರಾಹುಲ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ ಪ್ರಕ್ರಿಯೆಗೆ ಮೀಸಲಾದ ಸಮಯದಲ್ಲಿ ಪ್ರತಿಶತ ಹತ್ತರಷ್ಟೂ ಕೇಂದ್ರ ಸರ್ಕಾರದ ನೂತನ ಸುಧಾರಣೆ ನೀತಿಗೆ ಬೆಂಬಲ ನೀಡಿದ ನಿರ್ಣಯಕ್ಕೆ ಸಿಗಲಿಲ್ಲ.
ಇದು ಭವಿಷ್ಯದಲ್ಲಿ ಈಗಿನ ಸರ್ಕಾರದ ವ್ಯವಸ್ಥೆಯೇ ಮುಂದುವರಿದರೆ ದೇಶದ ಆದ್ಯತೆಗಳೇನು ಎನ್ನುವುದರ ಸೂಚನೆ ರಾಹುಲ ಗಾಂಧಿ ಅವರು ಈಗ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡರೋ ಅಥವಾ ಪರಿಸ್ಥಿತಿಯ ಪಿತೂರಿ ಅವರ ತಲೆಯ ಮೇಲೆ ಆ ಜವಾಬ್ದಾರಿಯನ್ನು ಹೊರಿಸಿದೆಯೋ ಎನ್ನುವುದು ಗೊತ್ತಾಗುತ್ತಿಲ್ಲ.
ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಹದಿನಾಲ್ಕು ತಿಂಗಳಿದೆ ಅಂದರೂ ಆಯಿತು. ಕಾಲವೇನೂ ಹಿಗ್ಗುವುದಿಲ್ಲ ಅಥವಾ ಕುಗ್ಗುವುದಿಲ್ಲ. ಈ ಅವಧಿಯಲ್ಲಿ ಹತ್ತು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಬೇಕಾಗಿದೆ.
ಈ ಚುನಾವಣೆಯ ಮಾಲೆಯಲ್ಲಿ ಕಾಂಗ್ರೆಸ್ ಗೆಲ್ಲಬಲ್ಲ ರಾಜ್ಯಗಳೂ ಇವೆ. ಸೋಲುವ ಸಂಭವವಿರುವ ರಾಜ್ಯಗಳೂ ಇವೆ. ಕೆಲವು ಕಡೆ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸಬಹುದು. ಉಳಿದ ಕಡೆಗಳಲ್ಲಿ ಸೂಕ್ತ- ಹೊಸ ಸಂಗಾತಿಗಳ ಆಯ್ಕೆ ಅನಿವಾರ್ಯ. ಅದೆಲ್ಲವನ್ನು ಪಕ್ಷದ ಈಗಿನ ನಾಯಕರ ಜತೆಯಲ್ಲೇ ನಿಭಾಯಿಸಬೇಕಾಗಿರುವ ರಾಹುಲ ಗಾಂಧಿ ಅಗ್ನಿ ಪರೀಕ್ಷೆಗೆ ಸಿದ್ಧವಾಗಬೇಕಾಗಿದೆ. ಅವರ ಅಮ್ಮನಿಂದ ಅಥವಾ ಅವರಿಗೆ ಸಲಹೆ ನೀಡುತ್ತಿರುವ ಹಳಬರಿಂದ ಹೆಚ್ಚು ನೆರವನ್ನು ನಿರೀಕ್ಷಿಸುವಂತಿಲ್ಲ.
ರಾಹುಲ ಗಾಂಧಿ ಅವರ ಆತ್ಮೀಯ ಹಾಗೂ ಆಧುನಿಕ ಯುವ ಸಂಗಾತಿಗಳಲ್ಲಿ ಉತ್ಸಾಹ- ಚೈತನ್ಯ ಇರಬಹುದು. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಾಗುವ ಜ್ಞಾನವೂ ಇರಬಹುದು. ಆದರೆ ಅವರಿಗೆ ಬೇರು ಮಟ್ಟದ ಜಾತಿ ರಾಜಕೀಯದ ತಲೆ-ಬುಡವೂ ಗೊತ್ತಿರಲಿಕ್ಕಿಲ್ಲ.
ಇಂತಹ ಪರಿಸ್ಥಿತಿ ದೇಶದ ರಾಜಕೀಯದ ಮೇಲೆ ದೀರ್ಘ ಕಾಲೀನ ಪರಿಣಾಮ ಬೀರುವುದಂತೂ ಖಂಡಿತ. ಆ ಪರಿಣಾಮ ಒಳ್ಳೆಯ ರೀತಿಯಲ್ಲೇ ಆಗಬೇಕೆಂದೇನೂ ಇಲ್ಲ.
ಭಾರತೀಯ ಜನತಾ ಪಾರ್ಟಿ ತನ್ನ ನೂತನ ಅಧ್ಯಕ್ಷ ರಾಜನಾಥ ಸಿಂಗ್ ಅವರನ್ನು ಆರಿಸಿಕೊಂಡ ರೀತಿ-ನೀತಿಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಅದರ ಈಗಿನ ಚಹರೆಯೇ ಸಂಪೂರ್ಣವಾಗಿ ಬದಲಾಗುವ ಸಂಭವವೂ ಇದೆ.
ಹೀಗೆ ದೇಶದ ಅತಿ ದೊಡ್ಡ ಹಾಗೂ ಪ್ರಭಾವಿ ಪಕ್ಷಗಳಲ್ಲಿ ಕಂಡುಬಂದಿರುವ ಗುಣಾತ್ಮಕ ಮಾರ್ಪಾಟುಗಳ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಈಗಲೇ ಸಾಧ್ಯವಾಗಲಿಕ್ಕಿಲ್ಲ. ಅದಕ್ಕೆ ಇನ್ನು ಸಮಯ ಬೇಕು.
ಇದರ ನಡುವೆಯೇ ಕರ್ನಾಟಕದ ರಾಜಕೀಯ ಬದಲಾವಣೆಗಳೂ ವಿಚಿತ್ರವಾದ ಸ್ವರೂಪವನ್ನೇ ಪಡೆಯುತ್ತಿವೆ. ಅದರ ಪರಿಣಾಮ ಸ್ಪಷ್ಟವಾಗಿ ಗೊತ್ತಾಗುವುದಕ್ಕೆ ಇನ್ನು ಬಹುಕಾಲ ಬೇಕಾಗಿಲ್ಲ.
ಯಾರ ಕೈಗೆ ರಾಜಿನಾಮೆ? ರಾಜ್ಯದಲ್ಲಿ ಈಗಾಗಲೇ ಚುನಾವಣೆಯ ಮುನ್ನಾ ದಿನದ ಚಟುವಟಿಕೆಗಳು ಸಾಕಷ್ಟು ಚುರುಕಾಗಿಯೇ ನಡೆಯುತ್ತಿರುವುದು ನಿಜ. ಈಗಲೂ ಅದರ ಕೇಂದ್ರವಿರುವುದು ಭಾರತೀಯ ಜನತಾ ಪಾರ್ಟಿ ಹಾಗೂ ಅದರಿಂದ ಸಿಡಿದೆದ್ದು ಹೊರಬಿದ್ದಿರುವ ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಜನತಾ ಪಕ್ಷಗಳಲ್ಲೇ.
ಐರಾವಣ- ಮೈರಾವಣರ ನಡುವಣ ಭೀಕರ ಕದನದಲ್ಲಿ ಸಿಕ್ಕಿ ಬಿದ್ದಿರುವ ಬಿಜೆಪಿ ಪರಿವಾರದ ಮುಂದಿರುವ ಅತಿ ದೊಡ್ಡ ಹಾಗೂ ಪ್ರಮುಖ ಪ್ರಶ್ನೆ ಎಂದರೆ, ಜಗದೀಶ ಶೆಟ್ಟರ್ ಅವರ ಸರ್ಕಾರ ಇನ್ನೆಷ್ಟು ದಿನ ಉಳಿದೀತು ಎನ್ನುವುದು. ಅದಕ್ಕೆ ಹೊಂದಿಕೊಂಡಂತೆಯೇ ಇರುವ ಪ್ರಶ್ನೆ ಎಂದರೆ, ಮುಖ್ಯಮಂತ್ರಿಯಾಗಿ, ವಿತ್ತ ಇಲಾಖೆಯ ಖಾತೆಯನ್ನು ಹೊತ್ತಿರುವ ಜಗದೀಶ ಶೆಟ್ಟರ್ ತಮ್ಮ ಮೊದಲ ಹಾಗೂ ಕೊನೆಯ ಬಜೆಟ್ಟನ್ನು ಮಂಡಿಸುತ್ತಾರಾ? ಎನ್ನುವುದು.
ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಬಿಜೆಪಿ ಶಾಸಕರು (ಸಂಖ್ಯಾಬಲ ಎಷ್ಟೇ ಇರಲಿ) ತಮ್ಮ ಡೋಲಾಯಮಾನ ನಿಲವನ್ನು ಬದಲಾಯಿಸಿ, ಖಚಿತವಾದ ನಿಲವನ್ನು ಪ್ರಕಟಿಸುವವರೆಗೂ ಈ ಯಕ್ಷ ಪ್ರಶ್ನೆಗಳು ಉಳಿದೇ ಬಿಡುತ್ತವೆ.
ಯಡಿಯೂರಪ್ಪ ಬೆಂಬಲಿಗರು ಬಿಜಿಪಿಯನ್ನು ತೊರೆದು ಕಜಪವನ್ನು ಸೇರಿಕೊಳ್ಳುವ ಪ್ರಕ್ರಿಯೆ ಒಂದಲ್ಲ ಒಂದು ರೀತಿಯಲ್ಲಿ ಬುಧವಾರ ಬೆಳಿಗ್ಗೆಯೇ ಆರಂಭವಾದರೂ, ಅದು ತನ್ನ ತರ್ಕಬದ್ಧ ಅಂತಿಮ ಹಂತವನ್ನು ಮುಟ್ಟಬೇಕಾದರೆ ಸ್ವಲ್ಪ ಸಮಯ ಬೇಕಾಗಬಹುದು. ಅದಕ್ಕೆ ಬೇಕಾದಷ್ಟು ವ್ಯಕ್ತಿಗತ ಕಾರಣಗಳಿರಬಹುದು.
ಈಗ ಪ್ರಕಟವಾಗುತ್ತಿರುವ ಹೇಳಿಕೆಗಳು, ನಂಬಲರ್ಹವಾದ ಮೂಲಗಳ ಖಚಿತ ಅನಿಸಿಕೆಗಳು ಹಾಗೂ ಇಲ್ಲದ ರಾಜಕೀಯ ಪಾಂಡಿತ್ಯ ಆಧರಿತ ಭವಿಷ್ಯವಾಣಿ ಏನನ್ನಾದರೂ ಹೇಳಿಕೊಳ್ಳಲಿ. ಈಗಾಗಲೇ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಂತೆ ಆಗಿದೆ.
ಬುಧವಾರ ಹದಿಮೂರು ಮಂದಿ ಯಡಿಯೂರಪ್ಪ ಬೆಂಬಲಿಗ ಶಾಸಕರು ತಮ್ಮ ರಾಜಿನಾಮೆ ಕೊಡಲು ವಿಧಾನ ಸೌಧಕ್ಕೆ ಬಂದಾಗ, ಅದನ್ನು ಪಡೆಯಲು ಅಲ್ಲಿ ಸ್ಪೀಕರ್ ಬೋಪಯ್ಯ ಇರಲಿಲ್ಲ. ಸ್ಪೀಕರ್ ರಾತ್ರಿಯೇ ವಿದೇಶ (ನೇಪಾಳ?) ಪ್ರವಾಸಕ್ಕೆ ಹೋಗಿದ್ದರಂತೆ.
ಇದು ಸ್ಪಷ್ಟವಾಗಿ ರಾಜ್ಯ ಬಿಜೆಪಿ ನಾಯಕರು ರೂಪಿಸಿದ್ದ ತಂತ್ರಗಾರಿಕೆ. ಆದರೆ ಪಂಚಾಂಗ ಹೋದರೆ ನಕ್ಷತ್ರ ಹೋಗುವುದಿಲ್ಲವಲ್ಲ. ರಾಜಿನಾಮೆ ಪತ್ರಗಳನ್ನು ಸಲ್ಲಿಸಲೇಬೇಕೆನ್ನುವ ಹಠ ಶಾಸಕರಲ್ಲಿದ್ದರೆ, ಅದನ್ನು ಈಡೇರಿಸಿಕೊಳ್ಳಲು ಸಂವಿಧಾನದತ್ತ ನಿಯಮಗಳಂತೆ ಅವಕಾಶವಿದೆ. ತಂತ್ರಗಾರಿಕೆಯಿಂದಲೇ ಸರ್ಕಾರವನ್ನು ಉಳಿಸಿಕೊಳ್ಳುವುದು ಅಸಾಧ್ಯ.
ಈಶ್ವರಪ್ಪ ಹಾರಾಟ: ರಾಜಕೀಯವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಇನ್ನೊಂದು ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಪಕ್ಷದ ಕರ್ನಾಟಕ ಪ್ರದೇಶ ಸಮಿತಿಯ ಅಧ್ಯಕ್ಷ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಪರ್ವಕಾಲದ ಅವೇಳೆಯಲ್ಲಿ ತಮ್ಮ ಹೊಸ ವರಸೆಯ ದರ್ಶನವನ್ನು ಮಾಡಿಸಿದ್ದಾರೆ.
ಬಿಜೆಪಿಗೆ, ರಾಜ್ಯದಲ್ಲಿ ಚುನಾವಣೆಗೆ ಮುನ್ನ ತನ್ನ ಮುಖ್ಯಮಂತ್ರಿಯ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಡಿಯೂರಪ್ಪ ಅವರ ನಿರ್ಗಮನದಿಂದ ಉಂಟಾದ ಪರಿಸ್ಥಿತಿ ಅದು.
ಆ ಪರಿಸ್ಥಿತಿಯನ್ನು, ಪಕ್ಷದ ಕೇಂದ್ರ ಸಮಿತಿಯ ಕಾರ್ಯದರ್ಶಿ ಹಾಗೂ ಲೋಕಸಭೆ ಸದಸ್ಯ ಎಚ್.ಎನ್. ಅನಂತಕುಮಾರ್ ಅವರು ಕೆಲವರ ಜತೆ ಸಮಾಲೋಚನೆ ನಡೆಸಿ, ಜಗದೀಶ ಶೆಟ್ಟರ್ ಅವರ ಹೆಸರನ್ನೇ ಹೇಳಿ, ಅದೇ ಅಂತಿಮ ಹೆಸರು ಎನ್ನುವಂತೆ ಮಾಡಿ ನಿಭಾಯಿಸಿದರು.
ಪಕ್ಷದ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಇದು ಹಿಡಿಸಲಿಲ್ಲ. ಅದು ಸಹಜವೇ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ತಮ್ಮನ್ನು ಕ್ಯಾರೇ ಅನ್ನದೇ, ಉತ್ತರ ಧಾರವಾಡದ ಲೋಕಸಭೆ ಸದಸ್ಯ ಪ್ರಹ್ಲಾದ ಜೋಷಿ ಅವರನ್ನಷ್ಟೇ ಕೇಳಿ ಶೆಟ್ಟರ್ ಹೆಸರನ್ನು ಪ್ರಕಟಿಸಿದ್ದು ಶೆಟ್ಟರ್ ಹಿತವನ್ನು ಕಾಯುವ ದೃಷ್ಟಿಯಿಂದ ಅಲ್ಲ ತಮ್ಮ (ಅನಂತಕುಮಾರ್) ಹಿತವನ್ನು ಸಾಧಿಸಿಕೊಳ್ಳುವ ದೃಷ್ಟಿಯಿಂದ ಎನ್ನುವುದು ಈಶ್ವರಪ್ಪ ಅವರ ಕೋಪಕ್ಕೆ ಕಾರಣ.
ಕೇವಲ ಉಪಚಾರಕ್ಕೇ ಆದರೂ ತಮ್ಮ ಹೆಸರನ್ನೂ ಪರಿಗಣಿಸಿದ ಪ್ರಸ್ತಾಪವನ್ನು ಮಾಡಲಿಲ್ಲವಲ್ಲ ಎನ್ನುವ ಕೊರಗಿನ ಜತೆಯಲ್ಲೇ ಅನಂತಕುಮಾರ್ ಮತ್ತು ಪ್ರಹ್ಲಾದ ಜೋಷಿ ಅವರಿಬ್ಬರೂ ಬ್ರಾಹ್ಮಣರೇ ಆಗಿರುವುದನ್ನು ಧೈರ್ಯವಾಗಿ ಪ್ರಸ್ತಾಪಿಸುವ ಸ್ಥಿತಿಯಲ್ಲೂ ಈಶ್ವರಪ್ಪ ಇರಲಿಲ್ಲ. ನಿಜಕ್ಕೂ ಇದೊಂದು ವಿಪರ್ಯಾಸ.
ಅನಂತಕುಮಾರ್ ಮತ್ತು ಪ್ರಹ್ಲಾದ ಜೋಷಿ ಅವರಿಬ್ಬರೂ ಈಗಾಗಲೇ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರ ಜತೆಯಲ್ಲೇ ಅವರು ಈಗ ಈಶ್ವರಪ್ಪ ಅವರ ಕೋಪವನ್ನೂ ಎದುರಿಸಬೇಕು.
ನಿಜ. ಅವರಿಬ್ಬರಿಗೂ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವೇ ಇಲ್ಲ. ಅದು ಜಾತಿ ರಾಜಕೀಯದ ಕಠೋರ ಜನತಾಂತ್ರಿಕ ಸತ್ಯ. ಜಗದೀಶ ಶೆಟ್ಟರ್ ಅವರೇ ಈಗ ತಮಗೆ ದೊರೆತಿರುವ ಸ್ಥಾನವನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಮುಂದಾಗಬೇಕು. ಹೋರಾಟ ಅಂದರೆ ತಂತ್ರಗಾರಿಕೆ ಅಲ್ಲ.
ಕರ್ನಾಟಕದ ಮಧ್ಯಮ ವರ್ಗಗಳಲ್ಲಿ ಈಗ ನಿಧಾನವಾಗಿ ಆದರೆ ಸ್ಪಷ್ಟವಾಗಿ ಬಿಜೆಪಿಯ ವಿರುದ್ಧದ ಅಭಿಪ್ರಾಯ ಹೆಪ್ಪುಗಟ್ಟುತ್ತಿರುವಂತಿದೆ. ಆ ವರ್ಗ ಬಿಜೆಪಿಯ ಒಂದು ಓಟು ಬ್ಯಾಂಕ್ ಆಗಿತ್ತು.
ಭ್ರಷ್ಟಾಚಾರದ ಆರೋಪಗಳು, ಪಕ್ಷದ ಶಿಸ್ತು, ಜನತಾಂತ್ರಿಕ ನಿಯಮಗಳನ್ನು ಗಾಳಿಗೆ ತೂರಿದ್ದು, ರಾಜಕೀಯ ಅನೈತಿಕತೆ ಹಾಗೂ ಅಪ್ರಾಮಾಣಿಕತೆ ಬಿಜೆಪಿಯನ್ನು, ಅದರ ಜನಬೆಂಬಲವನ್ನು ತೊರೆದಿರುವುದು ನಿಜ.
ಈ ಒಡಕಿನ ಪರಿಣಾಮ ಬಿಜೆಪಿಯ ವರಿಷ್ಠರ ಚಿಂತನೆಯ ಕ್ರಮದ ಮೇಲೂ ಆಗಿದೆ. ಇಂತಹ ಸನ್ನಿವೇಶಗಳಲ್ಲೂ ಪಕ್ಷ ತನ್ನ ಏಕತೆಯ ಸ್ವರೂಪದ ಮುಖವಾಡವನ್ನು ಧರಿಸದೇ ಹೋದರೆ, ಆ ಪಕ್ಷ ಪ್ರತಿನಿಧಿಸುವ ಸಮುದಾಯಗಳೂ ಪಕ್ಷದ ಕೈ ಬಿಡುತ್ತವೆ.
ನಿಜ. ಭಾರತೀಯ ಜನತಾ ಪಕ್ಷ, ರಾಜ್ಯದಲ್ಲಿ ಶೇಕಡಾ ಏಳೆಂಟು ಮತಗಳು, ವಿಧಾನ ಸಭೆಯಲ್ಲಿ ಒಂದೆರಡು ಸ್ಥಾನಗಳ ಸ್ಥಿತಿಯಿಂದ ವಿಧಾನ ಸಭೆಯಲ್ಲಿ ಬಹುಮತವನ್ನು ಸಾಧಿಸುವ ಅಂಚನ್ನು ತಲುಪಿತ್ತು. ಉತ್ತರ ಕರ್ನಾಟಕದಲ್ಲಿ ಒಂದು ಹೊಸ ಓಟು ಬ್ಯಾಂಕನ್ನು ಸ್ಥಾಪಿಸಿಕೊಂಡಿತ್ತು.
ಆ ಅನುಕೂಲ ವಾತಾವರಣವನ್ನು ಪಕ್ಷದ ಬೆಳವಣಿಗೆಗೆ ಬಳಸದೇ, ಅದನ್ನು ಸ್ವಂತ ಹಿತಕ್ಕೆ ಬಳಸುವ ಕೆಲವರ ಪ್ರಯತ್ನ ಪಕ್ಷಕ್ಕೇ ಮಾರಕವಾಗುವಂತೆ ಮಾಡಿದ್ದೂ ಆ ಪಕ್ಷದ ನಾಯಕರೇ.
ಇನ್ನುಳಿದಿರುವ ಏಳೆಂಟು ವಾರಗಳಲ್ಲಿ ಈಗಿನ ವಾತಾವರಣವನ್ನು ಬದಲಾಯಿಸುವಂತಹ ಪ್ರಚಾರ ಯಂತ್ರವನ್ನು ಸೃಷ್ಟಿಸುವುದು ಪಕ್ಷಕ್ಕೆ ಸಾಧ್ಯವಾದರೂ, ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವ ಕಾರ್ಯಕರ್ತರ ಅಭಾವವನ್ನು ತುಂಬುವುದು ಕಷ್ಟ.
ಕಿಡಿಗೇಡಿತನ: ರಾಜ್ಯದ ಆಡಳಿತದ ಗುಣಮಟ್ಟ ಎಷ್ಟರ ಮಟ್ಟಿಗೆ ಕುಸಿದಿದೆ ಎಂದರೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಒದಗಿಸಿರುವ ಹಣವನ್ನು ಬಳಸಲಿಕ್ಕೆ ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನು ಜನ ಗಮನಿಸುವುದಿಲ್ಲ ಎಂದು ಭಾವಿಸಲಾದೀತೇ?
-ಸತ್ಯ
anisikeprabha@gmail.com