'ವಿಷಯ ಏನೆಂದರೆ, ನಮಗೆ ಶೋಭೆ ತರುವ ಅಧ್ಯಕ್ಷರು ಬೇಕೋ ಅಥವಾ ಪ್ರತಿದಿನವು ಅವರನ್ನು ಸಮರ್ಥಿಸಿಕೊಳ್ಳುವಂಥ ಸನ್ನಿವೇಶಕ್ಕೆ ತಳ್ಳುವವರು ಬೇಕೋ?' ನಿತಿನ್ ಗಡ್ಕರಿಯವರ ಬದಲಾಗಿ ರಾಜ್ನಾಥ್ ಸಿಂಗ್ರನ್ನು ಅಧ್ಯಕ್ಷ ಸ್ಥಾನಕ್ಕೆ ಕೂಡಿಸುವ ಮುನ್ನ ಬಿಜೆಪಿಯ ಹಿರಿಯ ನಾಯಕರೊಬ್ಬರು ನಮಗೆ ಹೇಳಿದ್ದು ಹೀಗೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಿತಿನ್ ಗಡ್ಕರಿಯವರ ಪೂರ್ತಿ ಗ್ರೂಪ್ನ ಸಂಶಯಾಸ್ಪದ ವ್ಯವಹಾರಗಳ ಬಗ್ಗೆ ಆರೋಪ ಕೇಳಿಬಂದಾಗಿನಿಂದಲೂ ಬಿಜೆಪಿ ನಾಯಕರಿಗೆ ತಲೆನೋವು ಶುರುವಾಗಿತ್ತು. ಈ ಆರೋಪಗಳಿಂದಾಗಿ ಪಕ್ಷದ ಮುಖಕ್ಕೆ ಮಸಿ ಬಿದ್ದಿದೆ ಎನ್ನುವುದು ಹಿರಿಯ ನಾಯಕರಿಗೂ ತಿಳಿದಿತ್ತು. ಖಾಸಗಿಯಾಗಿ ಅವರುಗಳು ಗಡ್ಕರಿ ಬಗ್ಗೆ ವಟಗುಟ್ಟಿದರಾದರೂ, ಸಾರ್ವಜನಿಕವಾಗಿ ನಿರ್ಬಂದಗಳಿಗೊಳಪಟ್ಟು ಸಮರ್ಥನೆಗೆ ನಿಂತಿದ್ದರು.
ಅಷ್ಟಾಗಿಯೂ ಗಡ್ಕರಿಯವರನ್ನು ಮುತುವರ್ಜಿ ವಹಿಸಿ ಆಯ್ಕೆ ಮಾಡಿದ್ದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು. ಎರಡನೆಯ ಅವಧಿಗೂ ಗಡ್ಕರಿಯವರು ಆ ಸ್ಥಾನದಲ್ಲಿ ಭದ್ರವಾಗಿ ಕುಳಿತುಕೊಳ್ಳುವಂತೆ ಮಾಡಲು ಪಕ್ಷದ ಸಂವಿಧಾನದಲ್ಲೇ ತಿದ್ದುಪಡಿ ಮಾಡಲು ಬಿಜೆಪಿಯ ಮೇಲೆ ಒತ್ತಡ ತರಲೂ ಪ್ರಯತ್ನಿಸಿದ್ದರು. ಅವರು ಹೀಗೆ ಮಾಡಿದ್ದು ಬಿಜೆಪಿಯ ಮೇಲೆ ಆರ್ಎಸ್ಎಸ್ನ ಹಿಡಿತ ಕೈತಪ್ಪಿಹೋಗದಿರಲಿ ಎಂಬ ಕಾರಣಕ್ಕೆ. ಆ ಮೂಲಕ ದೆಹಲಿಯ ಬಿಜೆಪಿ ಮುಖ್ಯ ಕಚೇರಿಯ ವ್ಯವಹಾರಗಳಲ್ಲಿ ನಾಗಪುರವೂ ತುಸು ಮಟ್ಟಿಗೆ ಪಾತ್ರ ವಹಿಸಬೇಕು ಎನ್ನುವುದು ಅವರ ಉದ್ದೇಶವಾಗಿತ್ತು.
ನಿತಿನ್ ಗಡ್ಕರಿ ಅವರನ್ನು ಮರು ಆಯ್ಕೆ ಮಾಡದೆ, ಅವರ ಸ್ಥಾನದಲ್ಲಿ ರಾಜ್ನಾಥ್ ಸಿಂಗ್ ಅವರನ್ನು ತಂದು ಕೂರಿಸುವ ನಿರ್ಧಾರವನ್ನು ಪಕ್ಷದ ಆಂತರಿಕ ವಲಯ ಸ್ವಾಗತಿಸುತ್ತಿದೆಯಾದರೂ, ಗಡ್ಕರಿ ಅವರ ಬೆಂಬಲಿಗರಿಗೆ ಮಾತ್ರ ಈ ನಡೆ ಆಘಾತವುಂಟುಮಾಡಿದೆ. ಕೊನೆಯ ನಿರ್ಧಾರ ಹೊರಬಿದ್ದದ್ದು ಆರ್ಎಸ್ಎಸ್ ಮುಖ್ಯಸ್ಥರ ಒಪ್ಪಿಗೆಯ ನಂತರವೇ ಆದರೂ, ಮಂಗಳವಾರದ ನಿರ್ಧಾರ ಆರ್ಎಸ್ಎಸ್-ಬಿಜೆಪಿಯ ಸಂಬಂಧಕ್ಕೆ ಧಕ್ಕೆಯಂತೂ ಉಂಟುಮಾಡಲಿದೆ. ಜನಪ್ರಿಯ ಅಭಿಪ್ರಾಯಕ್ಕೆ, ಪಕ್ಷ ಅಥವಾ ಪರಿವಾರ ಸಂವೇದನಾಶೂನ್ಯವಾಗಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿ ಈ ನಡೆಯ ಮೂಲಕ ಸಾರ್ವಜನಿಕರಿಗೆ ಮತ್ತು ತನ್ನ ಬೆಂಬಲಿಗರಿಗೆ ಕಳುಹಿಸಿದೆ. ಈಗ ಪಕ್ಷಕ್ಕೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಈಗದು ಯಾವ ಹಿಂಜರಿಕೆಯೂ ಇಲ್ಲದೆ ಕಾಂಗ್ರೆಸ್ನ ಭ್ರಷ್ಟಾಚಾರಗಳ ಮೇಲೆ ಬಿರುಸಾದ ಪ್ರಹಾರ ಮಾಡಬಹುದು. ಈ ಹಿಂದೆ ಗಡ್ಕರಿ ಅವರ ಪೂರ್ತಿ ಗ್ರೂಪ್ನ ವಿರುದ್ಧ ಆರೋಪ ಕೇಳಿಬಂದಾಗಿನಿಂದ ಬಿಜೆಪಿಗೆ ಕೈ ಕಾಲು ಕಟ್ಟಿಹಾಕಿದಂತಾಗಿತ್ತು. ಪಕ್ಷದ ಅಧ್ಯಕ್ಷರ ವಿರುದ್ಧವೇ ಆರೋಪ ಕೇಳಿಬಂತಾದ್ದರಿಂದ ಕಾಂಗ್ರೆಸ್ನ ವಿರುದ್ಧ ಹರಿಹಾಯಲು ಬಿಜೆಪಿಗೆ ಸಾಧ್ಯವಾಗಲೇ ಇಲ್ಲ. ಅದರಲ್ಲೂ ಮುಖ್ಯವಾಗಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ನಡೆಸಿದ ಡೀಲ್ ಕುರಿತು ಬಿಜೆಪಿಗೆ ತುಟಿ ಬಿಚ್ಚಲಾಗಿರಲಿಲ್ಲ. ಈಗ ಗಡ್ಕರಿ ಅವರ ಜಾಗದಲ್ಲಿ ಕ್ಲೀನ್ ಇಮೇಜ್ ಹೊತ್ತ ರಾಜನಾಥ್ ಸಿಂಗ್ ಬಂದು ಕುಳಿತಿದ್ದಾರೆ. ಬಿಜೆಪಿ ಕಾಂಗ್ರೆಸ್ನ ವಿರುದ್ಧ ಯುದ್ಧ ಸಾರಲು ಎಲ್ಲಾ ಸಿದ್ಧತೆ ಶುರುಮಾಡಿಕೊಳ್ಳಲಿದೆ.
ಗಡ್ಕರಿ ಅವರನ್ನು ರಕ್ಷಿಸಿಕೊಳ್ಳುವ ಭರದಲ್ಲಿ ತಾನು ಬಹಳ ಬಯಲಿಗೆ ಬಂದು ಬಿಟ್ಟೆ ಎನ್ನುವುದು ಮೋಹನ್ ಭಾಗವತ್ ಅವರಿಗೆ ತಡವಾಗಿಯಾದರೂ ಮನವರಿಕೆಯಾಗಿದೆ ಎನ್ನುತ್ತವೆ ಮೂಲಗಳು. ಇದು ಮುಂದುವರಿದಿದ್ದರೆ ಭಾಗವತ್ ಅಷ್ಟೇ ಅಲ್ಲದೆ ಆರ್ಎಸ್ಎಸ್ನ ಹೆಸರೂ ಕೆಡುವ ಅಪಾಯದಲ್ಲಿತ್ತು. ಗಡ್ಕರಿಯವರ ಪೂರ್ತಿ ಗ್ರೂಪ್ನ ಪ್ರಶ್ನಾರ್ಹ ವ್ಯವಹಾರಗಳ ಕುರಿತು ಸಂಘ ಪರಿವಾರದಲ್ಲೇ ಅಪಸ್ವರಗಳು ಕೇಳಬರತೊಡಗಿದ್ದವು. ಗಡ್ಕರಿ ಅವರನ್ನು ಮರು ನೇಮಕ ಮಾಡಬೇಕು ಎಂದೇ ರೂಪಿಸಲಾಗಿದ್ದ ಒಮ್ಮತದ ಪ್ರಹಸನದಿಂದಾಗಿ ಅನೇಕ ಬಿಜೆಪಿಯ ನಾಯಕರು ಅಸಂತುಷ್ಟರಾಗಿದ್ದರಾದರೂ, ಏನಾದರೂ ಮಾತನಾಡಿದರೆ ನಾಗ್ಪುರದಿಂದ ಹಿಂದೇಟು ತಿನ್ನಬೇಕಾಗುತ್ತದೆಂದು ಸುಮ್ಮನಿದ್ದರು. ಆದರೂ ಕೊನೆಗೆ ಈ ರೀತಿಯ ಕಠಿಣ ನಿರ್ಧಾರ ಪ್ರಕಟಗೊಳ್ಳಲು ಮುಖ್ಯ ಕಾರಣರಾದವರು ಎಲ್.ಕೆ. ಆಡ್ವಾಣಿ. ಗಡ್ಕರಿಯವರ ಮರು ಆಯ್ಕೆಯನ್ನು ಆಡ್ವಾಣಿ ಬಹಳ ದಿನದಿಂದಲೂ ವಿರೋಧಿಸುತ್ತಲೇ ಬಂದಿದ್ದರು.
ಪಕ್ಷದಲ್ಲಿ ಆಡ್ವಾಣಿ ಅವರ ಸ್ಥಾನಮಾನ ಮತ್ತು ನೈತಿಕ ಅಧಿಕಾರ ಎಷ್ಟು ಮಟ್ಟಿಗೆ ಇದೆಯೆಂದರೆ ಅವರ ಮಾತನ್ನು ಸುಲಭವಾಗಿ ಕಡೆಗಣಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ 60 ವರ್ಷ ಕಳೆದಿರುವ ವ್ಯಕ್ತಿ ಅವರು. ಹಾಗೆ ನೋಡಿದರೆ ಸಂಘ ಪರಿವಾರದಲ್ಲಿರುವ ಹಿರಿಯ ನಾಯಕರಿಗಿಂತಲೂ ಎಲ್ಲಾ ರೀತಿಯಲ್ಲಿ ಆಡ್ವಾಣಿ ಹಿರಿಯರು. ಪಕ್ಷ ಈ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ಅವರ ಶ್ರಮವೂ ಬಹಳಷ್ಟಿದೆ. ವಿವಿಧ ದಿಕ್ಕುಗಳಿಂದ ಒತ್ತಡ ಬಂದರೂ ಕೂಡ ಆಡ್ವಾಣಿ ತಮ್ಮ ನಿಲುವನ್ನು ಬದಲಾಯಿಸಲು ಒಪ್ಪಲಿಲ್ಲ. ಸಾರ್ವಜನಿಕ ಜೀವನದಲ್ಲಿ ಅಪ್ರಾಮಾಣಿಕತೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಅವರು ತಯಾರಿಲ್ಲ. ಆಡ್ವಾಣಿ ಅವರ ಮನಸ್ಥಿತಿಯನ್ನು ಅವರ ವ್ಯಕ್ತಿತ್ವವೇ ಸ್ಪಷ್ಟವಾಗಿ ತೋರಿಸುತ್ತದೆ. ಮಂಗಳವಾರ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರು ಗಡ್ಕರಿಯವರೊಂದಿಗೆ ವೇದಿಕೆ ಹಂಚಿಕೊಂಡರಾದರೂ, ಅವರು ತಮ್ಮ ನಿಲವನ್ನು ಬದಲಿಸುವುದಿಲ್ಲ ಎನ್ನುವುದು ಅವರನ್ನು ನೋಡಿದ ಕೂಡಲೇ ತಿಳಿಯುವಂತ್ತಿತ್ತು.
ಇದಕ್ಕೆ ಪೂರಕವಾಗಿ ಗಡ್ಕರಿಯವರ ಪೂರ್ತಿ ಗ್ರೂಪ್ನೊಂದಿಗೆ ಬೆಸುಗೆ ಹೊಂದಿರುವ 7 ಕಂಪೆನಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಯ ಸಮೀಕ್ಷಾ ವರದಿಗಳು ಹೊರಬಿದ್ದಾಗ, ಇಷ್ಟು ದಿನಗಳಿಂದ ಹಿಡಿದಿಟ್ಟುಕೊಂಡಿದ್ದ ಅಸಹನೆಯನ್ನು ಬಿಜೆಪಿ ಬಹಿರಂಗಗೊಳಿಸಿತು. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ತಂದು ಕೂರಿಸುವುದೇ ಸೂಕ್ತ ನಡೆಯೆಂದು ಬಿಜೆಪಿಯ ನಾಯಕರಿಗೆ ಅನಿಸಿತು. ಆರ್ಎಸ್ಎಸ್ಗೂ ಕೂಡ ಬಿಜೆಪಿಯ ಅಧ್ಯಕ್ಷಗಿರಿಗೆ ರಾಜ್ನಾಥ್ ಸಿಂಗ್ ಅವರ ಹೆಸರು ಪರ್ಯಾಯವಾಗಿ ಕಂಡಿತು. ಹಾಗಾಗೇ ಈ ಕುರಿತು ಹಿರಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಎಮ್ ವೆಂಕಯ್ಯ ನಾಯ್ಡು ಮತ್ತು ನರೇಂದ್ರ ಮೋದಿಯವರೊಂದಿಗೆ ಚರ್ಚಿಸಲಾಯಿತು.
ವ್ಯಂಗ್ಯವೆಂದರೆ, ಮಂಗಳವಾರ ನಾಲ್ಕು ಗಂಟೆಯವರೆಗೂ ಗಡ್ಕರಿಯವರು, ತಮ್ಮನ್ನೇ ಮರು ಆಯ್ಕೆ ಮಾಡಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಇದಕ್ಕೂ 5 ನಿಮಿಷ ಮೊದಲು, ಓ.ಪಿ ಕೊಹ್ಲಿ ಅವರು ಪೂರ್ತಿ ಗ್ರೂಪ್ನೊಂದಿಗೆ ನಂಟು ಹೊಂದಿದ್ದ 7 ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ ವಿಷಯದ ಕುರಿತು ಮಾತನಾಡಿದ್ದರು. ಗಡ್ಕರಿಯವರ ಪರವಾಗಿ ನೀಡಿದ ಹೇಳಿಕೆಯಲ್ಲಿ: 'ಬಿಜೆಪಿ ಅಧ್ಯಕ್ಷರಾಗಿ ಗಡ್ಕರಿ ಮರು ಚುನಾವಣೆ ಎದುರಿಸುತ್ತಿರುವ ಸಮಯದಲ್ಲೇ ಐಟಿ ಇಲಾಖೆ ದಾಳಿ ಮಾಡಿರುವುದನ್ನು ನೋಡಿದರೆ, ಬಿಜೆಪಿ ವಲಯದಲ್ಲಿ ಗೊಂದಲ ಸೃಷ್ಟಿಸುವುದಕ್ಕಾಗಿ ಆಡಳಿತಾರೂಢ ಯುಪಿಎ ಸರ್ಕಾರ ಮಾಡಿದ ಹುನ್ನಾರವಿದು ಎನ್ನುವುದು ಸ್ಪಷ್ಟವಾಗುತ್ತದೆ' ಎಂದು ಹೇಳಿದ್ದರು.
ಅದಾದ ಕೆಲವೇ ಕ್ಷಣಗಳ ನಂತರ ಎಲ್ಲ ಚಿತ್ರಣಗಳೂ ವೇಗವಾಗಿ ಬದಲಾಗತೊಡಗಿದವು. ಚಿಕ್ಕ ಸಭೆಯೊಂದನ್ನು ನಡೆಸಲಾಯಿತು, ನಿರಂತರವಾಗಿ ಫೋನ್ಗಳು ರಿಂಗಣಿಸತೊಡಗಿದವು. ಇವೆಲ್ಲದರ ಫಲವಾಗಿ 'ತಿದ್ದುಪಡಿಮಾಡಲಾದ' ಹೇಳಿಕೆಯೊಂದು ಸಂಜೆ 4.40ರ ಸುಮಾರಿಗೆ ಹೊರಬಿತ್ತು. ಅದರಲ್ಲಿ 'ಎರಡನೆಯ ಅವಧಿಗೆ ಗಡ್ಕರಿಯವರ ಮರು ಆಯ್ಕೆ' ಎನ್ನುವ ಸಾಲು, 'ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಈ ಸಮಯದಲ್ಲಿ' ಎಂದು ಬದಲಾಗಿತ್ತು!
ಗಡ್ಕರಿ ಮರು ಆಯ್ಕೆಯಾಗುವುದಿಲ್ಲ ಎನ್ನುವುದಕ್ಕೆ ಈ ಹೇಳಿಕೆ ಚಿಕ್ಕ ಸುಳಿವಾಗಿತ್ತು. ಮಂಗಳವಾರ ಸಂಜೆ ಮುಂಬೈಯಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆಗೆ, ವಿರೋಧದ ಅಲೆಗಳು ತಮ್ಮ ವಿರುದ್ಧ ತಿರುಗಿವೆ ಎನ್ನುವುದು ಗಡ್ಕರಿಯವರಿಗೆ ಸ್ಪಷ್ಟವಾಗಿತ್ತು. ದೆಹಲಿ ದರ್ಬಾರ್ನೊಂದಿಗಿನ ಅವರ ಸಂಬಂಧ ಕುತೂಹಲಕರ ಘಟ್ಟದಲ್ಲಿದ್ದ ಸಮಯವದು. ಮೊದಲಿನಿಂದಲೂ ಗಡ್ಕರಿಯವರಿಗೆ ದೆಹಲಿ ಎಂದರೆ ಇಷ್ಟವಿರಲಿಲ್ಲ. ಈಗ ತಾನೂ ಅವರನ್ನು ಇಷ್ಟ ಪಡುತ್ತಿಲ್ಲ ಎನ್ನುವುದನ್ನು ದೆಹಲಿ, ತೋರಿಸಿದೆ.
ವಿಮಾನದಿಂದಿಳಿದ ಕೆಲವೇ ನಿಮಿಷಗಳಲ್ಲಿ ಅವರು ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದರು. ತಮ್ಮ ವಿರುದ್ಧ ಕಟ್ಟುಕತೆಗಳನ್ನು ಅದು ಹೆಣೆಯುತ್ತಿದೆ ಎಂದು ದೂರಿದರಾದರು, ಆ ಕ್ಷಣದ ಸತ್ಯ ಅವರ ಸುತ್ತ ಹೆಣೆದುಕೊಂಡುಬಿಟ್ಟಿತು. ಇದರ ಅರಿವಾಗುತ್ತಿದ್ದಂತೆಯೇ 'ನನ್ನಿಂದಾಗಿ ಪಕ್ಷಕ್ಕೆ ತೊಂದರೆಯಾಗುವುದು ನನಗಿಷ್ಟವಿಲ್ಲ. ಅಧ್ಯಕ್ಷನಾಗಿದ್ದ ಸಮಯದಲ್ಲಿ ನನಗೆ ಎಲ್ಲಾ ರೀತಿಯಿಂದಲೂ ಸಹಕಾರ ಕೊಟ್ಟ ಸಹೋದ್ಯೋಗಿಗಳಿಗೆ ಮತ್ತು ಬಿಜೆಪಿಯ ಕಾರ್ಯಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ. ನನ್ನ ಪಕ್ಷದ ಸೇವೆಗಾಗಿ ನಾನು ನಿಷ್ಠೆಯಿಂದ ದುಡಿಯುವುದನ್ನು ಮುಂದುವರಿಸುತ್ತೇನೆ. ಈ ನಿರ್ಧಾರವನ್ನು ನನ್ನ ಸಹೋದ್ಯೋಗಿಗಳಿಗೆ ಅದಾಗಲೇ ತಿಳಿಸಿದ್ದೇನೆ' ಎಂದು ಮಾತು ಮುಗಿಸಿದರು.
ಈ ಮಾತುಗಳು ಮುಕ್ತಾಯವಾಗುತ್ತಿದ್ದ ಹಾಗೆ ಗಡ್ಕರಿಯವರ ಪಾಲಿಗೆ ಅಧ್ಯಕ್ಷ ಕಚೇರಿಯ ಬಾಗಿಲು ಮುಚ್ಚಿಕೊಂಡಿತು!
- ಸಂಜಯ್ ಸಿಂಗ್, ಫಸ್ಟ್ಪೋಸ್ಟ್ ಜಾಲತಾಣ