ಕೊನೆಯ ಮನುಷ್ಯನ ದೇಹದಲ್ಲಿ ಜೀವಪಸೆ ಇರುವವರೆಗೂ ಹೋರಾಟ...
1962ರಲ್ಲಿ ಭಾರತದ ಮೇಲೆ ಚೀನಾ ಆಕ್ರಮಣ ನಡೆಸಿದಾಗ ಹಿಮಪರ್ವತದ ನೆತ್ತಿಯ ಮೇಲೆ ತಮಗಿರುವ ಅತ್ಯಂತ ಸೀಮಿತ ಪರಿಕರಗಳ ಎಡೆಯಲ್ಲೂ ಅಸಾಧಾರಣ ಧೈರ್ಯ ಮೆರೆದು ಹುತಾತ್ಮರಾದ ಭಾರತ ಸೇನೆಯ '13 ಕುಮಾವುನ್' ಪಡೆಯ 114 ಹುತಾತ್ಮರನ್ನು ನೆನಪಿಸಿಕೊಳ್ಳುವಾಗಲೆಲ್ಲ, 'ದೆ ಫಾಟ್ ಟು ದಿ ಲಾಸ್ಟ್ ಮ್ಯಾನ್, ಲಾಸ್ಟ್ ರೌಂಡ್' ಎಂಬ ಪದಗಳೇ ಹೊರಹೊಮ್ಮುತ್ತವೆ. ಗುಂಡುಗಳೆಲ್ಲ ಖಾಲಿಯಾದಾಗಲೂ ಶರಣಾಗುವ ಬಗ್ಗೆ ಚಿಂತಿಸದೆ, ಬಂದೂಕಿನ ಮೊನೆಯಲ್ಲೆ ವೈರಿಗಳನ್ನು ತಿವಿಯುವುದಕ್ಕೆ ಮುಂದಾದವರು, ಕೈ-ಕೈ ಮಿಲಾಯಿಸುವ ಹಂತದಲ್ಲೂ ಕಾದಾಡಿದವರು ಅವರು.
ಅಂಥದೇ ಒಂದು ವಾಕ್ಯ ಭಾರತೀಯ ಸೇನೆಯ ಕೊರಳಿನಿಂದ ಮೊನ್ನೆ ಹೊರಹೊಮ್ಮಿತ್ತು. 'ಕೊನೆ ಮನುಷ್ಯ ಹೊರಬರುವವರೆಗೂ ನಮ್ಮ ಹುಡುಗರು ನಿರ್ಗಮಿಸುವುದಿಲ್ಲ' ಎಂದು ಧೃಡವಾಗಿ ನುಡಿದಿದ್ದರು ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್. ಸಂದರ್ಭ ಮಾತ್ರ ಬೇರೆಯದಾಗಿತ್ತು. ಅಂದು ವೈರಿಗಳನ್ನು ಹೊಡೆದು ಹಣಿಯಬೇಕಿದ್ದ ಸಂದರ್ಭದಲ್ಲಿ 'ಟು ದಿ ಲಾಸ್ಟ್ ಮ್ಯಾನ್' ಎಂಬ ಉದ್ಘೋಷ ವೀರಸಂಕಲ್ಪದ ರೀತಿ ಹೊರಹೊಮ್ಮಿತ್ತು. ಮೊನ್ನೆ ಉತ್ತರಾಖಂಡವು ಪ್ರಳಯದಂಥ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲೂ ನಮ್ಮ ಯೋಧರ ಪಾಳಯದಿಂದ ಅನುರಣಿಸಿದ್ದು 'ಟು ದಿ ಲಾಸ್ಟ್ ಮ್ಯಾನ್..' ಎಂಬ ಸಂಕಲ್ಪವೇ. ಆಶಯ ಭಿನ್ನ. ಅಲ್ಲಿ ವೈರಿಯನ್ನು ಸಂಹರಿಸಿ ದೇಶ ಕಾಯಬೇಕಿದ್ದ ವೀರಾವೇಶ. ಇಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿ, ಅವರಿಗೆ ಆಹಾರ-ನೀರು, ತ್ವರಿತ ವೈದ್ಯಕೀಯ ಅಗತ್ಯಗಳನ್ನು ಪೂರೈಸಿ ರಾಷ್ಟ್ರದ ಆತ್ಮಸಮ್ಮಾನವನ್ನು ಎತ್ತಿಹಿಡಿಯಬೇಕಾದ ಹೊಣೆಗಾರಿಕೆ. ಉತ್ತರಾಖಂಡದ ಚಿತ್ರ ರಣರಂಗಕ್ಕಿಂತ ಭೀಕರವಾಗಿಯೆ ಇತ್ತು. ವೈರಿಯ ಪ್ರಾಣಹರಣಕ್ಕೆಂದು ಪ್ರತಿಯೋಧನೂ ತನ್ನ ಎದೆಗೂಡಿನಲ್ಲಿ ಕಟ್ಟಿಕೊಂಡಿರುವ ಉತ್ಕರ್ಷವನ್ನು ಇಲ್ಲಿ ಜನಸಾಮಾನ್ಯರನ್ನು ಹುಡುಕಿ ರಕ್ಷಣೆ ಮಾಡುವ ಕಾರ್ಯಕ್ಕೆಂದು ಸವೆಸುತ್ತಿದ್ದ. ಕೇವಲ ಒಂದು ನಿರ್ದಿಷ್ಟ ಜಾಗದಲ್ಲಿ ಕುಸಿದು ಕುಳಿತವರನ್ನು ಮೇಲೆತ್ತುವ, ಬೆಂಕಿಗೆ ಸಿಲುಕಿದ ಬಹುಮಹಡಿ ಕಟ್ಟಡವೊಂದರಿಂದ ಜನರನ್ನು ಬಚಾವು ಮಾಡಿ ತರುವ ಗುರಿಯಂತಹುದಲ್ಲ ಇದು. ಭುಸುಗುಟ್ಟಿ ನುಗ್ಗಿದ ನೀರು ಉತ್ತರಾಖಂಡದ ಚಹರೆಯನ್ನೆ ಬದಲಿಸಿತ್ತು. ಎಲ್ಲವೂ ಬುಡಮೇಲಾಗಿ ತಡಕಿದರಷ್ಟೆ ತೆಗೆದುಕೊಳ್ಳುತ್ತಿತ್ತು ಬದಲಾದ ಮಗ್ಗುಲುಗಳ ನಕಾಶೆ. ತೊಂಬತ್ತಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿಹೋಗಿದ್ದವು. ಬೆಟ್ಟ-ಕಣಿವೆಗಳನ್ನೆ ಹೊದ್ದ ಉತ್ತರಾಖಂಡದ ಕೇದಾರನಾಥ, ರಾಮ್‌ಬರಾ, ಗುಪ್ತಕಾಶಿ, ಜಂಗಲ್‌ಚೆಟ್ಟಿ, ರುದ್ರಪ್ರಯಾಗ ಪ್ರದೇಶಗಳ ಪರ್ವತಕ್ಕೆ ತಾಗಿಕೊಂಡ ರಸ್ತೆಗಳೆಲ್ಲ ಪಾತಾಳ ಕಂಡಿದ್ದವು. ಭಾರತದ ಮೂಲೆ- ಮೂಲೆಗಳಿಂದ ಬಂದ ಯಾತ್ರಿಗಳು ಮತ್ತು ಸ್ಥಳೀಯರು ಸೇರಿದಂತೆ ಎಂಬತ್ತು ಸಾವಿರಕ್ಕೂ ಹೆಚ್ಚುಮಂದಿ ಮೇಘಸ್ಫೋಟಕ್ಕೆ ತತ್ತರಿಸಿ ದಿಕ್ಕುಗಾಣದೆ ನಿಂತಿದ್ದರು. ನಿಂತ ನೆಲೆಯನ್ನೇ ಅಲ್ಲಾಡಿಸುತ್ತಿರುವ ನೀರು, ಬಾಯಾರಿಕೆ ನೀಗಿಸಿಕೊಳ್ಳಲು ಮಾತ್ರ ತೊಟ್ಟೂ ದಕ್ಕುತ್ತಿರಲಿಲ್ಲ. ನಿತ್ರಾಣವಾಗಿ ಕುಸಿದವರು, ಕೊಚ್ಚಿಹೋದವರು, ಇದ್ದ ಪದಾರ್ಥಗಳೆಲ್ಲ ಕಲಬೆರಕೆಯಾಗಿ ಕಲುಷಿತಗೊಂಡ ಸಂತ್ರಸ್ತ ನೆಲ ಹಾಗೂ ಈ ಎಲ್ಲ ಕಾರಣಗಳಿಂದಾಗಿಯೆ ಸಾಂಕ್ರಾಮಿಕ ರೋಗ ಅಪ್ಪಿಕೊಳ್ಳುವ ಭೀತಿ...
'ಓ ದೇವರೇ... ನಿನ್ನ ದರ್ಶನ ಕೋರಿ ವರವ ಕೊಡೆಂದು ಮಡಿಲೊಡ್ಡಲು ಬಂದವರಿಗೆ ವಿನಾಶದ ರುದ್ರನರ್ತನ ತೋರಿಸಿಬಿಟ್ಟೆಯಲ್ಲ?' ಹೇಗೊ ಪಾರಾಗಿ ತುಸು ಎತ್ತರದ ಜಾಗಗಳಲ್ಲಿ ನಿಂತು ಕೆಳಗಿನ ಪ್ರವಾಹವನ್ನು ನೋಡಿದವರಿಗೆಲ್ಲ ಆ ಕ್ಷಣದಲ್ಲಿ ರುದ್ರತಾಂಡವದ ಪದಾಘಾತದಿಂದ ತಪ್ಪಿಸಿಕೊಂಡು ಶಿವನ ಹೆಗಲಿಗೆ ಆತುಕೊಂಡ ಭಾವ ಕಾಡಿದ್ದಿದ್ದಿರಬಹುದು. ಬಹುಶಃ ಅಲ್ಲಲ್ಲಿ ಜಮೆಯಾಗಿದ್ದ ಆ ಅಷ್ಟೂ ಜೀವಗಳು ತಮ್ಮ ಮನದಲ್ಲಿ ಪ್ರಾಣವನ್ನೇ ನೆಲೆಯಾಗಿಸಿ ಆರ್ತದನಿಯಲ್ಲಿ ಬೇಡಿಕೊಂಡ ಸಾಲುಗಳು ಇಷ್ಟೆ: 'ಇನ್ನಾದರೂ ಶಾಂತನಾಗು- ಕರುಣೆ ತೋರು.' ಅವರೆಲ್ಲ ದಯಾಮಯಿ ಭಗವಂತನಿಗೆ ಬಿನ್ನಹಗೈಯುತ್ತ ಆಕಾಶದತ್ತ ಮುಖ ಮಾಡಿದರಷ್ಟೆ. ಆದರೆ ಆವ ರೂಪದಲಿ ಬಂದಾನು ಭಗವಂತ?
ಮುಂದಿನ ಲೋಕಸಭೆ ಚುನಾವಣೆಗಾಗಿ ಅದಾಗಲೇ ತಾಲೀಮಿನ ಗುಂಗಿಗೆ ಬಿದ್ದಂತಿರುವ ರಾಜಕಾರಣ. ಅವರೆಲ್ಲ ತಮ್ಮಲ್ಲಿ ಯಾರ್ಯಾರು ಫೋಟೊ ಫ್ರೇಮ್‌ಗೆ ಬರಬೇಕು ಎಂಬುದನ್ನು ನಿರ್ಧರಿಸಿಕೊಂಡು ತಮ್ಮ ಬಹುಪರಾಕು ಗಣವನ್ನು ಕಟ್ಟಿಕೊಂಡು ಅಲ್ಲಿಗೆ ಬರಬೇಕು. ಹಲವು ಪ್ರಮುಖರು ಬೇರೆ ಬೇರೆ ದೇಶಗಳಿಗೆ ಹೋದವರಿದ್ದಾರೆ. ಪ್ರವಾಹಸ್ಥಳಕ್ಕೆ ಬಂದಾದ ಮೇಲೂ 'ನಾ ಮೊದಲೋ- ನೀ ಮೊದಲೋ' ಎಂಬ ವಾಗ್‌ವೈಖರಿಗಳಾಗಬೇಕು. 'ನಮ್ಮ ಪಕ್ಷವೆ ಭೇಷು- ನಿಮ್ಮದೇನು ಬುರ್ನಾಸು' ಎಂಬ ಧಾಟಿಯಲ್ಲಿ ನಾನಾ ಪಕ್ಷಗಳ ನೇತಾರರೆಲ್ಲ ಚುಚ್ಚಿ ಕಚ್ಚಾಡಬೇಕು. ಇವೆಲ್ಲದರ ನಡುವೆ ಈ ನಾಯಕರು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡವರಿಗೆ ನಿರ್ದೇಶನ ನೀಡಬೇಕು. ವ್ಯವಸ್ಥೆಯಲ್ಲಿ ಅವರ ಉಪಸ್ಥಿತಿ ಮತ್ತು ಆದೇಶಗಳು ಅನಿವಾರ್ಯವೆ ಆದರೂ ಇವರನ್ನೇ ನೆಚ್ಚಿಕೊಂಡರೆ ಬದುಕಿಲ್ಲ.
ಇಂಥ ಕಟುವಾಸ್ತವವು ಜತೆಗಿರಲು.... ಆವೇಶದಲ್ಲಿ ಕುಣಿದು ನಂತರ ಪೊರೆವವಗೆ ಸಹಜವಾದ ಕರುಣಾರಸದ ರಭಸಕ್ಕೆ ತಾನೇ ಸಿಲುಕಿದಂತಿರುವ ದೇವರಿಗೂ ಬಿಕ್ಕಟ್ಟು ಎದುರಾಗಿತ್ತು! ಕುಸಿದ ಕಣಿವೆಗಳ ತಳಕ್ಕೆ, ಜರಿದ ಬೆಟ್ಟಗಳ ನಾಜೂಕು ಪಕ್ಕಕ್ಕೆ, ತಾನು ಯಾವ ಮುಖ ಹೊತ್ತು ಹೋಗಲಿ? ಹತಾಶೆಯ ಕಾರ್ಮೋಡಗಳೇ ಕವಿದಿದ್ದ ಅಂಥ ಭಯಾವಹ ಸನ್ನಿವೇಶದಲ್ಲಿ ದೇವರು ಅಳೆದೂ ತೂಗಿ ಮುಗುಳ್ನಕ್ಕ!
ಅಷ್ಟೇ!
ಆರ್ತವಾಗಿ ಆಗಸ ದಿಟ್ಟಿಸುತ್ತಿದ್ದ ಸಂತ್ರಸ್ತರ ಮುಖದ ನೆರಿಗೆಗಳನ್ನು ಸಡಿಲಗೊಳಿಸುವಂತೆ ಆಕಾಶದಲ್ಲಿ ರೆಕ್ಕೆಗಳು ಫಡಫಡಿಸಿದವು! ಎಚ್‌ಎಎಲ್ ಧ್ರುವ್, ಎಮ್‌ಐ-17, ಎಮ್‌ಐ 26, ಚೀತಾಸ್, ಸಿ-130... ಮಬ್ಬು ಹರಿಯದ ಶೀತಲ ನರಕಗಳಲ್ಲಿ ಸಿಕ್ಕಿಕೊಂಡವರನ್ನು ಬದುಕೆಂಬ ಸ್ವಪ್ನಸೌಧಕ್ಕೆ ಹೊತ್ತೊಯ್ಯಲು ಬಂದ ಕಿನ್ನರನಂತೆ ಹಾರಿಬಂದಿತ್ತು ಇಂಡಿಯನ್ ಏರ್‌ಫೋರ್ಸ್. ಶುರುವಾಗಿತ್ತು ಆಪರೇಷನ್ ರಾಹತ್. ಭೂಸೇನೆ, ಏರ್‌ಫೋರ್ಸ್ ಮತ್ತು 'ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್' ಕಣಕ್ಕಿಳಿದಿದ್ದವು. ರಕ್ಷಣಾ ಕಾರ್ಯ ಹಲವು ಆಯಾಮಗಳಲ್ಲಿ ತೆರೆದುಕೊಂಡಿತು. ಎಲ್ಲೆಲ್ಲೊ ಹರಡಿಕೊಂಡಿದ್ದ ಜನರನ್ನು ಒಂದು ಪ್ರದೇಶದಲ್ಲಿ ಒಟ್ಟುಗೂಡಿಸುವುದು, ಮತ್ತೆಲ್ಲೂ ಹೋಗಲಾಗದ ಮಂದಿಯನ್ನು ಏರ್‌ಲಿಫ್ಟ್ ಮಾಡುವುದು, ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಔಷಧ-ಆಹಾರ ಸಾಮಗ್ರಿಗಳನ್ನು ವಿತರಿಸುವುದು. ಅವರು ಪ್ರವಾಹ ದಾಟುವುದಕ್ಕೆ ಹಗ್ಗದ ಸೇತುವೆಗಳನ್ನು ಕಟ್ಟಿಕೊಟ್ಟರು. ಕಡಿದಾದ ಬೆಟ್ಟಗಳ ಅಂಚು ಹಿಡಿದು ಸಾಗುವುದಕ್ಕೆ ಭಯಗ್ರಸ್ತ ಜೀವಗಳ ಕಾಲು ನಡುಗಿದಾಗ ಯೋಧರೆಲ್ಲ ಸೇರಿ ಪ್ರಪಾತದ ಬದಿ ಮಾನವ ಸರಪಣಿ ರೂಪಿಸಿ ದಾಟಿಸಿದರು. ಆ ಅವಸರದಲ್ಲೂ ತಮ್ಮವರನ್ನು ಕಳೆದುಕೊಂಡು ತಲ್ಲಣಿಸಿಹೋಗಿದ್ದವರಿಗೆ ಸಾಂತ್ವನದ ಮಾತುಗಳನ್ನಾಡಿದರು. ನಡೆಯಲಾರದೆ ಕುಸಿದವರನ್ನು ಜೋಲಿಯಲ್ಲಿ ಎತ್ತಿಕೊಂಡು ಹೆಲಿಕಾಪ್ಟರ್‌ಗೆ ತಲುಪಿಸಿದರು. ಒಂದೆರಡು ದಿನಗಳ ಮಾತಲ್ಲ, ವಾರಗಟ್ಟಲೆ ಮುಂದುವರಿಯಿತು ರಕ್ಷಣಾ ಕಾರ್ಯ. ಪ್ರತಿದಿನ ಕತ್ತಲಾಗುತ್ತಿದ್ದಂತೆ ತಮ್ಮ ನೆಲೆಗಳಿಗೆ ವಾಪಸಾಗಿ ಕಣ್ತುಂಬ ನಿದ್ರಿಸಿ ರಿಚಾರ್ಜ್ ಆಗುವ ಸರಳ ದಾರಿಯ ಆಯ್ಕೆಯೇ ಇರಲಿಲ್ಲ. ಐಎಎಫ್, ಭೂಸೇನೆ, ಐಟಿಬಿಪಿ ಸಿಬ್ಬಂದಿಯೆಲ್ಲ ರಾತ್ರಿ ಊಟದ ತಾಟುಗಳನ್ನು ಹಿಡಿದುಕೊಂಡು ಸುತ್ತಲೂ ಕೂರುತ್ತಿದ್ದರು. ತುತ್ತು ಹೊಟ್ಟೆಗಿಳಿಸಿಕೊಳ್ಳುತ್ತಲೆ ಅವತ್ತಿನ ರಕ್ಷಣಾ ಕಾರ್ಯದ ಪರಾಮರ್ಶೆ. ತಾವು ಹೋದ ಸ್ಥಳಗಳಲ್ಲಿ ಎದುರಿಸಿದ ಸವಾಲುಗಳನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಅದುವೇ ಮರುದಿನದ ರಕ್ಷಣಾ ಕಾರ್ಯದ ಯೋಜನೆಗೆ ಇಂಧನ. ಪೈಲಟ್‌ಗಳು ತಾವು ಅನುಸರಿಸಿದ ಮಾರ್ಗದಲ್ಲಿ ಎದುರಾದ ಸಂಕಷ್ಟಗಳನ್ನು ಹರವಿಟ್ಟು ಆ ಅನುಭವದ ಆಧಾರದಲ್ಲಿ ಮುಂದೆ ಯಾವ ಮಾರ್ಗ ಅನುಸರಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತಿದ್ದರು. ಹಿಂದಿನ ರಾತ್ರಿಯ ಚರ್ಚೆಗಳನ್ನು ಆಧರಿಸಿಯೆ ತೆರೆದುಕೊಳ್ಳುತ್ತಿತ್ತು ಪ್ರತಿ ಬೆಳಗಿನ ಕಾರ್ಯಾಚರಣೆಯ ಹಾದಿ. ಭೂಸೇನೆಯ 8 ಸಾವಿರ ಸಿಬ್ಬಂದಿ ಹಾಗೂ ವಾಯುಸೇನೆಯ 61 ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದ ಸೇನೆಯ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ ಇದು.
'ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯಾರ ಆದೇಶಗಳಿಗೂ ಕಾಯಬೇಡಿ ಎಂದು ಹೇಳಿದ್ದೇನೆ. ಮೂರೂ ಘಟಕಗಳು ಅತ್ಯುತ್ತಮ ಮೇಳೈಕೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸೇನೆಯ ನಮ್ಮ ಕೆಲ ಹುಡುಗರು ತಮ್ಮವರನ್ನು ಭೇಟಿಯಾಗುವುದಕ್ಕೆಂದು ಪಡೆದಿದ್ದ ರಜೆಯನ್ನು ರದ್ದು ಮಾಡಿ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಧುಮುಕಿದ್ದಾರೆಂಬುದು ಗೊತ್ತಿರಲಿ. ರಸ್ತೆ ಮತ್ತು ಸಂವಹನ ಸಂಪರ್ಕಗಳೇ ಇಲ್ಲದ ಸ್ಥಿತಿಯಲ್ಲಿ ಶೌರ್ಯದಿಂದ ಮುನ್ನುಗ್ಗುತ್ತಿರುವ ಹುಡುಗರಿಗೆ ಶಹಭಾಸ್ ಹೇಳುವುದಕ್ಕೆ ನಾನಿಲ್ಲಿ ಬಂದಿದ್ದೇನೆ' ಎಂದಿದ್ದರು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್.
ಜನರ ರಕ್ಷಣೆಗೆ ತ್ರಾಣವನ್ನಷ್ಟೆ ಅಲ್ಲ ಪ್ರಾಣವನ್ನೂ ತೆತ್ತರು ನಮ್ಮ ಯೋಧರು. ಅದೊಂದು ಮಂಗಳವಾರ ಕೆಟ್ಟ ವಾತಾವರಣದ ನಡುವೆಯೆ ಪಟ್ಟುಬಿಡದೆ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಹೆಲಿಕಾಪ್ಟರ್ ಅಫಘಾತವಾಗಿ ಅದರಲ್ಲಿದ್ದ 20 ಮಂದಿ ಮರಣಿಸಿದರು. ಈ ಪೈಕಿ ಐಎಎಫ್‌ನ ಐವರು, ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್‌ನ ಒಂಬತ್ತು ಮಂದಿ ಹಾಗೂ ಐಟಿಬಿಪಿಯ ಆರು ಸಿಬ್ಬಂದಿ ಹುತಾತ್ಮರಾದರು. ಆ ದುರಂತದಲ್ಲಿ ಮಡಿದ ಇಬ್ಬರು ಯೋಧರೊಂದಿಗೆ ಕೆಲದಿನಗಳ ಹಿಂದೆ ವರದಿಗಾರಿಕೆಗೆ ತೆರಳಿದ್ದ 'ದ ವೀಕ್'ನ ಪತ್ರಕರ್ತೆ ನಿಖಿತಾ ಡೊವಲ್ ದಾಖಲಿಸಿರುವ ಅಕ್ಷರಗಳು ಮನ ಕಲಕುತ್ತವೆ. ಅವರು ಬರೆಯುತ್ತಾರೆ- 'ಅದು ಜೂನ್ 23ರ ಮಧ್ಯಾಹ್ನ 3 ಗಂಟೆ ಸಮಯ. ವಿಂಗ್ ಕಮಾಂಡರ್ ಡ್ಯಾರಿಲ್ ಕ್ಯಾಸ್ಟೆಲಿನೊ ಕನ್ಯಾಪ್ರಯಾಗದ ಗೌಚಾರ್ ಏರ್‌ಸ್ಟ್ರಿಪ್‌ನಲ್ಲಿ ಚಾಪರ್ ಇಳಿಸಿದ್ದರು. ಬದ್ರಿನಾಥಕ್ಕೆ ಹೋಗಿ ನಾಲ್ವರನ್ನು ರಕ್ಷಿಸಿ ಬಂದಿದ್ದ ಅವರು ಹವಾಮಾನ ವರದಿ ಎಚ್ಚರಿಕೆ ಸೂಚಿಸುತ್ತಿದ್ದರೂ ಮತ್ತೊಂದು ರೌಂಡ್‌ಗೆ ಉತ್ಸುಕರಾದರು. ಏರ್‌ವೈಸ್‌ಮಾರ್ಷಲ್ ಎಸ್‌ಆರ್‌ಕೆ ನಾಯರ್ ಬಳಿ- ಸರ್, ಇನ್ನೊಂದು ರೌಂಡ್ ಹೋಗಿ ಹದಿನೈದೆ ನಿಮಿಷದಲ್ಲಿ ಬಂದುಬಿಡುತ್ತೇನೆ ಎಂದರು. ಕ್ಯಾಸ್ಟಲಿನೊ ಹಾಗೂ ಸರ್ಜಂಟ್ ಸುಧಾಕರ್ ಯಾದವ್ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸುವುದಕ್ಕೆ ಹೋಗಿದ್ದ ಆ ರೌಂಡ್‌ನಲ್ಲಿ ವೀಕ್ ನಿಯತಕಾಲಿಕದ ನಮ್ಮ ತಂಡವೂ ಇತ್ತು....'
'ಎರಡು ದಿನಗಳ ನಂತರ ಎನ್‌ಡಿಆರ್‌ಎಫ್, ಐಎಎಫ್, ಐಟಿಬಿಪಿಯ ಸಿಬ್ಬಂದಿಯೊಂದಿಗೆ ಕ್ಯಾಸ್ಟೆಲಿನೊ ಮತ್ತು ಯಾದವ್ ಕೇದಾರನಾಥಕ್ಕೆ ಹೋಗಿದ್ದರು. ಪ್ರವಾಹಕ್ಕೆ ಸಿಲುಕಿ ಸತ್ತವರ ಶವಸಂಸ್ಕಾರಕ್ಕೆ ಕಟ್ಟಿಗೆಗಳನ್ನು ತಲುಪಿಸಿ ಹಿಂದಿರುಗುತ್ತಿರುವಾಗ ಕಡಿದಾದ ಪರ್ವತ ಶ್ರೇಣಿ ನಡುವೆ ಹೆಲಿಕಾಪ್ಟರ್ ಅಪಘಾತವಾಗಿ ಅದರಲ್ಲಿದ್ದ ಇಪ್ಪತ್ತು ಮಂದಿಯೂ ಇನ್ನಿಲ್ಲವಾದರು. ಕೊನೆಯ ಮನುಷ್ಯನನ್ನು ಬಚಾವು ಮಾಡುವವರೆಗೂ ನಮ್ಮ ಸವಾರಿ ನಡೆದೇ ಇರುತ್ತದೆ ಎಂದು ಏರ್‌ಚೀಫ್ ಮಾರ್ಷಲ್ ಎನ್. ಎ. ಕೆ. ಬ್ರೌನ್ ಭರವಸೆ ನೀಡಿದ್ದರು. ಆ ಮಾತುಗಳನ್ನು ನಿಜವಾಗಿಸುವುದಕ್ಕೆ ಯೋಧರು ಪ್ರಾಣವನ್ನೇ ಅರ್ಪಿಸಿದರು.'
ಇಂಥ ಚಿತ್ರಣಗಳನ್ನೆಲ್ಲ ಎದುರಿಗಿರಿಸಿಕೊಂಡಾಗ ಉತ್ತರಾಖಂಡದ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ತಮಗೆ ಕ್ರೆಡಿಟ್ ಸಲ್ಲಲಿ ಎಂಬ ಪ್ರಯತ್ನದಲ್ಲಿರುವ ರಾಜಕೀಯ ವರ್ಗ ಅಸಹ್ಯ ತರಿಸದೆ ಇದ್ದೀತೆ? ಹೊಳೆದಾಟಿಸಿದ ಈ ಅನನ್ಯ ಅಂಬಿಗರ ಋಣಭಾರ ಎದೆಮೇಲೆ ಕುಳಿತಿರಲಿ ಯಾವತ್ತೂ. ಅವರ ಋಣ ತೀರಿಸುವುದಕ್ಕೆ ನಾವೆಲ್ಲ ನಮ್ಮ ನಿತ್ಯ ಕಾಯಕದಲ್ಲಿ ಪ್ರಾಮಾಣಿಕರಾಗಿರುವುದೊಂದೆ ಮಾರ್ಗ. ಅವರು ತಮ್ಮ ಕರ್ತವ್ಯವನ್ನು ಲೋಪವಿಲ್ಲದಂತೆ ನಿಭಾಯಿಸಿದ್ದಾರೆ. ಕರ್ತವ್ಯವೆಂಬ ದೇವರ ಬಗ್ಗೆ ಅವರಷ್ಟೇ ತೀವ್ರತರವಾದ ಕಾಳಜಿ ನಮ್ಮೆಲ್ಲರಲ್ಲಿ ಒಡಮೂಡುವಂತಾಗಲಿ.
- ಚೈತನ್ಯ ಹೆಗಡೆ
cchegde@gmail.com