ಅಂಕಣಗಳು

ವಿಶೇಷ ಸ್ಥಾನಮಾನ ಹರಪನಹಳ್ಳಿಗೇಕಿಲ್ಲ?

Published On :

ಹೈದ್ರಾಬಾದ್ ಕರ್ನಾಟಕಕ್ಕೆ 'ವಿಶೇಷ ಸ್ಥಾನಮಾನ' ನೀಡುವ ಸಂವಿಧಾನ ತಿದ್ದುಪಡಿಗೆ ರಾಷ್ಟ್ರಪತಿಗಳು ಸಹಿ ಹಾಕುವುದರ ಮೂಲಕ ಆ ಭಾಗದ ಜನರ ಬಹು ವರ್ಷಗಳ ಕನಸು ನನಸಾದಂತಾಗಿದೆ. ನಿಜಾಮರ ಆಳ್ವಿಕೆಯಲ್ಲಿ ನಲುಗಿ ಹೋಗಿ ಅತ್ಯಂತ ಹಿಂದುಳಿದ ಪ್ರದೇಶವೆಂದೇ ಗುರುತಿಸಿಕೊಂಡ ಈ ಭಾಗದ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಘಟ್ಟ ಎನ್ನಬಹುದು. ಕರ್ನಾಟಕದ ಅತಿ ಹಿಂದುಳಿದು ಜಿಲ್ಲೆಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಮತ್ತು ಬೀದರಗಳನ್ನೊಳಗೊಂಡಿದೆ ಹೈದ್ರಾಬಾದ್ ಕರ್ನಾಟಕ. ಈಗಾಗಲೇ ನೆರೆಯ ಆಂಧ್ರ ಪ್ರದೇಶದ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿದರ್ಭ ಭಾಗಗಳಿಗೆ ವಿಶೇಷ ಸ್ಥಾನಮಾನ ದೊರೆತಿರುವುದರಿಂದ ಅಂಥದ್ದೇ ಸ್ಥಾನಮಾನ ಹೈದ್ರಾಬಾದ್ ಕರ್ನಾಟಕಕ್ಕೆ ದೊರೆಯಬೇಕು ಎಂಬ ಹೋರಾಟ ನಿರಂತರವಾಗಿ ನಡೆದುಕೊಂಡೇ ಬಂದಿತ್ತು. ಕಡೆಗೂ ಸಂಸತ್ತು, ಸಂವಿಧಾನದ 371 ನೇ ಜೆ ವಿಧಿಗೆ ಒಪ್ಪಿಗೆ ನೀಡಿತು.
ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ್ದೇನೊ ಸಂತಸದ ಸಂಗತಿ. ಆದರೆ 16 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಲಾಯಿತು. ಆದ್ದರಿಂದ ಜಿಲ್ಲೆಗಳ ಲೆಕ್ಕಾಚಾರದಲ್ಲಿ ಬಳ್ಳಾರಿ ಜಿಲ್ಲೆ ವಿಶೇಷ ಸ್ಥಾನಮಾನಕ್ಕೆ ಸೇರಿದ್ದರೂ ಬಳ್ಳಾರಿಯಿಂದ  ಹೊರಗೆ ಬಂದ ಹರಪನಹಳ್ಳಿ ತಾಲೂಕು ಮಾತ್ರ 371 ಜೆ ಕಲಂನಿಂದ ಹೊರಗೇ ಉಳಿಯಬೇಕಾಯಿತು.  ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದ ನಂತರವೂ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ(ಎಚ್.ಕೆ.ಡಿ.ಪಿ.) ಅಡಿಯಲ್ಲಿ ಅಭಿವೃದ್ದಿ ಕಾರ್ಯಕ್ಕೆ ಅನುದಾನ ಪಡೆಯುತ್ತಲೇ ಬಂದಿದೆ. ಈಗಲೂ ಅನುದಾನ ಪಡೆಯುತ್ತಲಿದೆ. ಭೌಗೋಳಿಕವಾಗಿ ದಾವಣಗೆರೆ ಜಿಲ್ಲೆಗೆ ಸೇರಿದೆಯೇ ಹೊರತು ಅದರ ಮೊದಲಿನ ಆರ್ಥಿಕ ಮತ್ತು ನೈಸರ್ಗಿಕ ಸ್ಥಿತಿ-ಗತಿಗಳು, ಬರಗಾಲದ ಬವಣೆ ಬಳ್ಳಾರಿ ಜಿಲ್ಲೆಯ ಸ್ಥಿತಿಯಂತೆ ದುಸ್ತರವಾಗಿದೆ.
ಪ್ರಾದೇಶಿಕ ಅಸಮತೋಲನೆಯ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕು ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತೀ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆದ್ದರಿಂದ 371 ಜೆ ತಿದ್ದು ಪಡಿಯ ವಿಶೇಷ ಸ್ಥಾನಮಾನ ಪಡೆಯಲು ಎಲ್ಲಾ ಅರ್ಹತೆ ಅದಕ್ಕಿದೆ. ಆರ್ಥಿಕವಾಗಿ ಅತ್ಯಂತ ಹಿಂದುಳಿದವರೇ ಹೆಚ್ಚು ಇರುವುದರಿಂದ ಇಲ್ಲಿಯ ಜನರು ಹೊಟ್ಟೆಪಾಡಿಗಾಗಿ ಕಾಫಿ ಸೀಮೆ, ನೀರಾವರಿ ಪ್ರದೇಶ, ಮಂಗಳೂರು -ಬೆಂಗಳೂರು ಕಡೆ ಗುಳೇ ಹೋಗುತ್ತಾರೆ. ಇದರಿಂದ ಅವರ ಮಕ್ಕಳ ಶಿಕ್ಷಣಕ್ಕೂ ಕುತ್ತು ಬಂದಿದೆ.
ಹರಪನಹಳ್ಳಿ ತಾಲೂಕಿನಲ್ಲಿರುವ ಕೇಂದ್ರ ಸರ್ಕಾರದ ಇಲಾಖೆಗಳಾದ ಅಂಚೆ ಮತ್ತು ದೂರವಾಣಿ ಇಲಾಖೆಗಳು ಈಗಲೂ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹರಪನಹಳ್ಳಿ ತಾಲೂಕು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ ಹಾಗೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೂ ಬಳ್ಳಾರಿಗೆ ಸೇರಿದೆ. ಆದ್ದರಿಂದ ಕೇವಲ ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟ ಒಂದೇ ಕಾರಣಕ್ಕೆ ಹರಪನಹಳ್ಳಿ ತಾಲೂಕನ್ನು  ವಿಶೇಷ ಸ್ಥಾನಮಾನ ದಿಂದ ಕೈ ಬಿಟ್ಟಿರುವುದು  ಅನ್ಯಾಯವಾಗುತ್ತದೆ.
ಈ ಕುರಿತು ಹರಪನಹಳ್ಳಿ ತಾಲೂಕು ಸೇರ್ಪಡೆಗೆ ಶಾಸಕ ಎಂ.ಪಿ.ರವೀಂದ್ರ ಅವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ಈಚೆಗೆ ಜರುಗಿ ಹೋರಾಟದ ರೂಪ ರೇಷೆ ಗಳನ್ನು ಚರ್ಚೆ ಮಾಡಿತು. ವಿವಿಧ ಮಠಾಧೀಶರು ಸಹ ಬೀದಿಗಿಳಿಯಲು ಸಿದ್ಧರಾಗಿದ್ದಾರೆ. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವುದಕ್ಕಿಂತ ಮುಂಚೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರಕ್ಕೆ ವಿವರವಾಗಿ ಮಾಹಿತಿ ನೀಡಿ 371 ಜೆ ಕಲಂಗೆ ಹರಪನಹಳ್ಳಿ ತಾಲೂಕನ್ನು  ಸೇರ್ಪಡೆ  ಮಾಡಿ ತಾಲೂಕಿನ ಹಿತ ಕಾಪಾಡಬೇಕೆಂಬುದು ಇಲ್ಲಿಯ ಜನತೆಯ ಆಶಯ.

- ಬಿ.ರಾಮಪ್ರಸಾದ್ ಗಾಂಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.