ನೀರಿನ ದಾರಿ ತಪ್ಪಿಸಿ ಬದುಕು ಹಳಿ ತಪ್ಪಿದ ಕಥೆ ಇದು. ನೀವು ನಂಬಬೇಕು. ಪಕ್ಕಾ ಮಲೆನಾಡಿನ ಮಡಿಲು, ಅಡಕೆಯ ಅರಮನೆ ಎನಿಸಿಕೊಂಡಿದ್ದ ಈ ಪಟ್ಟಣ ಈ ಬಾರಿ ಬೇಸಿಗೆಯಿಂದಾರಂಭಿಸಿ ಮೊನ್ನೆ ಮೊನ್ನೆ ಬಿಟ್ಟೂ ಬಿಡದೇ ಸುರಿದ ಮಳೆಯ ದಿನಗಳವರೆಗೂ ಬಕ್ಕ ಬಾಯಾರಿ ಇನ್ನಿಲ್ಲದಂತೆ ಪರಿತಪಿಸಿತ್ತು. ಸದಾ ಸಮೃದ್ಧತೆಯಿಂದ ಕಂಗೊಳಿಸುತ್ತಿದ್ದ ಊರಿನಲ್ಲಿ ಟ್ಯಾಂಕರ್ಗಳ ಆರ್ಭಟ ಮಿತಿ ಮೀರಿ ಹೋಗಿತ್ತು. ಕೊಡ ನೀರಿಗೂ ಜನ ಪೈಪೋಟಿಗೆ ಬಿದ್ದು ಹಣ ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದಿಡೀ ಪಟ್ಟಣ ನೀರಿಲ್ಲದೇ ಮಕಾಡೆ ಮಲಗಿ ನೆಲ ಗಬರಿದರೂ ಹನಿ ನೀರು ಸಿಗದೇ ಹೋಯಿತು. ಕಂಡ ಕಂಡಲ್ಲಿ ಬೋರ್ವೆಲ್ ಕೊರೆಯುವ ಯಂತ್ರಗಳು ಹಗಲೂ ರಾತ್ರಿ ಸದ್ದು ಮಾಡಿದವು. ಉಳ್ಳವರು ಬೋರ್ವೆಲ್ಗಳನ್ನು ಕೊರೆಸಿದರಯ್ಯಾ, ನಾನೇನು ಮಾಡಲಯ್ಯಾ, ಬಡವನಯ್ಯಾ? ಎಂಬ ಅಳಲು ಸಾಮಾನ್ಯರದ್ದಾಗಿತ್ತು. ದಿಕ್ಕು ಕಾಣದೇ ದಿಕ್ಕುದಿಕ್ಕಿಗೆ ಬೈಕ್ಗಳಿಗೆ, ಸೈಕಲ್ಗಳಿಗೆ ಬಿಂದಿಗೆ ಕಟ್ಟಿಕೊಂಡು ನೀರಿಗಾಗಿ ಅಲೆದಾಡಿದ್ದರು ಜನ. ಅಷ್ಟಾದರೂ ನೀರು ಸಿಗಬೇಕಾದಷ್ಟು ಸಿಗಲಿಲ್ಲ. ಇಡೀ ಆಡಳಿತ ಯಂತ್ರ ಸಮಸ್ಯೆಗೆ ಪರಿಹಾರ ಕಾಣದೇ ಕಂಗಾಲಾಗಿ ಕುಳಿತದ್ದು ಸುಳ್ಳಲ್ಲ. ಮೂವತ್ತು ಮೂವತ್ತೈದು ಅಡಿ ತೆರೆದ ಬಾವಿಗಳಲ್ಲೇ ನೀರು ಲಾಸ್ಯವಾಡುತ್ತಿದ್ದ ಪಟ್ಟಣದಲ್ಲಿ ಆರು ನೂರು ಅಡಿ ಕೊಳವೆಬಾವಿಗಳೂ ಏದುಸಿರು ಬಿಟ್ಟವೇ ವಿನಃ ನೀರಿನ ಪಸೆ ಕಾಣಲಿಲ್ಲ. ಮಾಡಿದ್ದುಣ್ಣೋ ಮಾರಾಯ!
ಹೌದು, ದಟ್ಟ ಮಲೆನಾಡಿನ ಹೃದಯದಂತಿರುವ ಸಾಗರ ಪಟ್ಟಣ ಈ ಬೇಸಿಗೆಯಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದವನಂತೆ ಮುಖ ಮಾಡಿಕೊಂಡು ಕುಳಿತಿತ್ತು. ಹೆಸರೇ ಸಾಗರ, ನೀರಿಗೆ ಬರ! ತೀರಾ ಇತ್ತೀಚಿನ ವರ್ಷಗಳಲ್ಲಿ ಸಾಗರಕ್ಕೆ ಬೇಸಿಗೆಯ ದಾಹ ಕಾಡಲಾರಭಿಸಿದೆ. ಅದು ಈ ವರ್ಷ ಭಯಂಕರವಾಗಿ ಕಾಡಿ, ಮಲೆನಾಡಿಗರನ್ನು ಕಂಗಾಲಾಗಿಸಿದ್ದು ಸುಳ್ಳಲ್ಲ. ಸ್ವಯಂಕೃತ ಅಪರಾಧ ಎಂಬ ಆರೋಪವನ್ನು ತಲೆತಗ್ಗಿಸಿ ಒಪ್ಪಿಕೊಳ್ಳುವ ಅನಿವಾರ್ಯತೆಗೆ ಅಲ್ಲಿನ ಜನತೆ ಬಂದು ತಲುಪಿದ್ದಾರೆ. ಕಾರಣ ಕೆರೆಯನ್ನು ನುಂಗಿ ನೀರು ಕುಡಿದದ್ದು, ನೀರಿನ ದಾರಿ ತಪ್ಪಿಸಿದ್ದು, ಊರಿನ ಹೂಳನ್ನು ಕೆರೆಯಂಗಳಕ್ಕೆ ತಂದು ತುಂಬಿಸಿ ಸರ್ಕಸ್ ಮಾಡಿದ್ದು! ಮಾಡೋದನ್ನೆಲ್ಲಾ ಮಾಡಿ ಮಳ್ಳಿ ಥರಾ ಮಳೆಗಾಲದಲ್ಲಿ ಮುಸುಕು ಹೊದ್ದು ಮಲಗಿಬಿಟ್ಟರೆ ನಿಸರ್ಗ ತನ್ನ ಮುನಿಸು ತೋರದೇ ಹೋದೀತೆ?
ಸಾಗರದಲ್ಲಿ ಆದದ್ದೂ ಅದೇ. ಆಧುನಿಕ ಅಭಿವೃದ್ಧಿಯಲ್ಲಿ ಅಲ್ಲಿನ ಬೇಸಿಗೆಯ ಬದುಕು ಹಾದಿ ತಪ್ಪಿರುವುದು ಸ್ಪಷ್ಟ. ಹಾಗೆಯೇ ನೀರು ಸಹ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನುಗ್ಗುವ ನೀರನ್ನು ತಡೆಯುವುದು ಪ್ರಯಾಸವೇ ಸರಿ. ಬೇಕಿದ್ದರೆ ಮೊನ್ನೆಮೊನ್ನೆಯ ಉತ್ತರಾಖಂಡ್ನ ಪ್ರವಾಹದ ಹಾವಳಿ ನೆನಪಿಸಿಕೊಳ್ಳಿ. ಅಚ್ಚರಿಯ ಸಂಗತಿಯೆಂದರೆ. ಇಷ್ಟೆಲ್ಲ ಇದ್ದಾಗ್ಯೂ ನೀರಿಗೆ ಅದರದೇ ಆದ ಮಾರ್ಗವೆಂಬುದೊಂದಿರುತ್ತದೆ. ಅದರದೇ ಆದ ಹರಿವಿರುತ್ತದೆ, ನಡೆ ಇರುತ್ತದೆ, ನೆಲೆಯೂ ಇರುತ್ತದೆ. ನೀರು ನುಗ್ಗಿದರೆ ಎಂಥ ಶಕ್ತಿಯೂ ಅದನ್ನು ತಡೆಯಲಾಗದು ಎಂಬುದು ಸತ್ಯ. ಆದರೆ ಅಂಥ ನೀರನ್ನೇ ನಾವಿಂದು ಹಾದಿ ತಪ್ಪಿಸುತ್ತಿದ್ದೇವೆ. ಪರಿಣಾಮ ಜಲ ನೆಮ್ಮದಿಯೆಂಬುದು ಹಳಿ ತಪ್ಪುತ್ತಿದೆ. ದಾರಿ ಮಾಡಿಕೊಳ್ಳುವ ಭರದಲ್ಲಿ ನೀರಿನ ಓಟಕ್ಕೆ ರಹದಾರಿ ಕೊಡುತ್ತಿರುವ ವಿಚಾರವಿದು. ಮೇಲ್ನೋಟಕ್ಕೆ ನಮ್ಮ ಗ್ರಹಿಕೆಗೆ ಸಿಗದೇ ಹೋಗುತ್ತಿರುವ ಸಂಗತಿಯೂ ಹೌದು. ಹಾಗೆಂದು ಅದು ಬೀರುತ್ತಿರುವ ವ್ಯತಿರಿಕ್ತ ಪರಿಣಾಮ ಮಾತ್ರ ಗಂಭೀರವಾದುದು. ಇದು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾದುದಲ್ಲ. ಹಳ್ಳಿ ಹಾದಿಗಳಿಂದಾರಂಭಿಸಿ ಹೆದ್ದಾರಿಗಳವರೆಗೆ ಎಲ್ಲಕ್ಕೂ ಇದೇ ಮಾತು ಅನ್ವಯ. ಅದರಲ್ಲೂ ಹೊಸ ರಸ್ತೆಗಳ ಸಂದರ್ಭದಲ್ಲೇ ನೀರನ್ನು ಅಡ್ಡ ಹತ್ತಿಸುವ ಅಪಾಯ ಹೆಚ್ಚು. ಆದರೆ ಇದನ್ನು ಬಹುತೇಕ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ.
ಸಂಪರ್ಕದ ದೃಷ್ಟಿಯಿಂದ ಸುಲಭವೆನಿಸುವ ನೇರಕ್ಕೆ ನಾವು ರಸ್ತೆಗಳನ್ನು ನಿರ್ಮಿಸುವುದು ಸಹಜ. ಯಾವುದೇ ರಸ್ತೆ ನಿರ್ಮಾಣ ಮಾಡುವಾಗಲೂ ನಾವು ತಕ್ಷಣಕ್ಕೆ ಯೋಚಿಸುವುದೇನು? ಎಲ್ಲಿ ರಸ್ತೆ ಕೊಂಡೊಯ್ದರೆ ಹತ್ತಿರವಾದೀತು, ಬಳಸಿಕೊಂಡು ಹೋಗುವ ಬದಲು ನೇರವಾಗಿ ನಿರ್ಮಿಸಲು ಯಾವ ಜಾಗ ಸೂಕ್ತ, ಹೆಚ್ಚು ಏರು, ಇಳಿಗಳಿಲ್ಲದೇ ಸಮತಟ್ಟಾದ ಪ್ರದೇಶ ಎಲ್ಲಿ ದೊರಕೀತು, ಅಕ್ಕ ಪಕ್ಕದಲ್ಲಿ ಗಟ್ಟಿ ಜಾಗವಿದೆಯೇ, ಹೆಚ್ಚು ಮರ -ಗಿಡಗಳಿಲ್ಲದೇ ಸುಲಭವಾಗಿ ಕಾಮಗಾರಿ ಮುಗಿಸಲು ಯಾವ ಕಡೆ ಸಾಧ್ಯವಾದೀತು, ಹೆಚ್ಚು ಜನ ದಟ್ಟಣೆಯ ಕೇಂದ್ರ ಯಾವುದು...ಸಾಮಾನ್ಯವಾಗಿ ಇವಿಷ್ಟೇ ಅಂಶಗಳನ್ನು ಪರಿಗಣಿಸಿ ರಸ್ತೆ ನಿರ್ಮಾಣ ಮಾಡುವುದು ಸಂಪ್ರದಾಯ. ಯಾರೂ ಸಹ ತಾವು ರಸ್ತೆ ನಿರ್ಮಿಸಲು ಆಯ್ದುಕೊಂಡ ಜಾಗದಲ್ಲಿ ಮೊದಲಿಂದಲೂ ನೀರು ಓಡಾಡುತ್ತಿದೆ, ರಸ್ತೆ ನಿರ್ಮಾಣದಿಂದ ಅದರ ಸಂಪರ್ಕ ಕಡಿದು ಹೋಗುತ್ತದೆ ಎಂಬುದನ್ನು ಯೋಚಿಸುವುದೇ ಇಲ್ಲ. ವಾಸ್ತವವಾಗಿ ಇಂದಿನ ಬಹಳಷ್ಟು ಬಂಜರು ಭೂಮಿಗಳ ಅಸ್ತಿತ್ವಕ್ಕೆ ರಸ್ತೆಗಳೂ ಕಾರಣವಾಗುತ್ತಿದೆ. ಗಮನಿಸಬೇಕಾದ ಸತ್ಯವೆಂದರೆ ಕೆರೆ ಅಂಗಳಗಳೇ ಇಂದು ಹೆದ್ದಾರಿಗಳಿಗೆ ಅತ್ಯಂತ ಸುಲಭ ತುತ್ತಾಗುತ್ತಿವೆ. ಆಗುತ್ತಿರುವುದಿಷ್ಟೇ, ಕೆರೆಗಳ ನಡುವೆ ರಸ್ತೆಯನ್ನು ಸುಲಲಿತವಾಗಿ ಮತ್ತು ನೇರವಾಗಿ ಕೊಂಡೊಯ್ಯಬಹುದು. ಹೆಚ್ಚು ಶ್ರಮಪಡಬೇಕಾದ ಅಗತ್ಯವಿರುವುದಿಲ್ಲ. ಒಂದಷ್ಟು ಮಣ್ಣನ್ನು ತಂದು ಸುರಿದರೆ ಮುಗಿಯಿತು. ರಸ್ತೆ ಸಿದ್ಧವಾದಂತೆಯೇ. ಇನ್ನೂ ಒಂದು ಸಂಗತಿಯೆಂದರೆ, ಬಹುತೇಕ ಕಡೆ ಕೆರೆಗಳು ಯಾರದೇ ಖಾಸಗೀ ಸ್ವತ್ತಾಗಿಲ್ಲದಿರುವುದರಿಂದ ವಿರೋಧ, ಆಕ್ಷೇಪಣೆಗಳೂ ವ್ಯಕ್ತವಾಗುವುದಿಲ್ಲ. ಹೀಗಾಗಿ ಅಡೆ ತಡೆಗಳಿಲ್ಲದೇ ಕಾಮಗಾರಿ ಮುಗಿಸಿಬಿಡಬಹುದು. ಇಂಥ ಬಹಳಷ್ಟು ಉದಾಹರಣೆಗಳು ರಾಜ್ಯದೆಲ್ಲೆಡೆ ಇವೆ. ಹೀಗೆ ರಸ್ತೆಗಳನ್ನು ನಿರ್ಮಿಸಿ ಎಷ್ಟೋ ಕೆರೆಗಳೇ ನಾಮಾವಶೇಷವಾದದ್ದೂ ಇವೆ. ಹಾಗೆ ದಾರಿ ನಿರ್ಮಿಸಿ ಕೆರೆ ನಾಮಾವಶೇಷ ಮಾಡುವ ಹಾದಿಯಲ್ಲೇ ಇದ್ದಾರೆ ಸಾಗರದ ಮಂದಿ. ಪರಿಣಾಮ ಮಲೆನಾಡಿನ ಪಟ್ಟಣದಲ್ಲೇ ಕುಡಿಯುವ ನೀರಿಗೆ ಬರ.
ಹಾಗೆ ನೋಡಿದರೆ ಇಡೀ ಪಟ್ಟಣದ ಹುಟ್ಟು, ಬೆಳವಣಿಗೆಗಳಿಗೆ ಕಾರಣವೇ ಅಲ್ಲಿನ ಗಣಪತಿ ಕೆರೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕೆರೆಯ ವಿನಾಶಕ್ಕೆ ನಾಂದಿ ಹಾಡಿದ್ದು ಬೆಂಗಳೂರು-ಹೊನ್ನಾವರ ರಾಜ್ಯ ಹೆದ್ದಾರಿ. ಸರಿ ಸುಮಾರು ಆರು ದಶಕಗಳ ಹಿಂದೆ ವಿಶಾಲ ಕೆರೆಯ ಹೃದಯವನ್ನೇ ಬಗೆದುಕೊಂಡು ಹೊರಟಿತ್ತು ಕಪ್ಪು ರಸ್ತೆ. ಕೆಲಸವೇನೋ ಸುಲಲಿತವಾಗಿ ಮುಗಿಯಿತು. ಆದರೆ ನೀರಿನ ಹರಿವಿಗೆ ಅಡ್ಡಲಾಗಿ ಹಾದು ಹೋದ ರಸ್ತೆ ತಡೆಗೋಡೆಯಾಗಿ ಕೆಲಸಮಾಡಲಾರಂಭಿಸಿತು. ಹೀಗಾಗಿ ಕೆರೆಗೆ ಹರಿದು ಬರುತ್ತಿದ್ದ ನೀರಿನ ಮಾರ್ಗ ಬದಲಾಯಿತು. ಇಂದು ರಸ್ತೆಯ ಎಡಭಾಗ ಸಂಪೂರ್ಣ ಹೂಳುತುಂಬಿಕೊಂಡು ಹೊಸ ಬಡಾವಣೆಯಾಗಿ ನಳನಳಿಸುತ್ತಿದೆ(?). ಕೆರೆ ಮಾತ್ರ ಆಗಿನ ಅರ್ಧದಷ್ಟೂ ಉಳಿದಿಲ್ಲ. ಸಾಗರ ನೀರಿನ ಬರ ಎದುರಿಸುತ್ತಿದೆ.
ಇದು ಹೀಗೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಸಾಗರದ ಇತಿಹಾಸವನ್ನೊಮ್ಮೆ ನೀವು ಹಿಂದಿರುಗಿ ನೋಡಬೇಕು. ಈಗಿನ ಸಾಗರವೆಂಬುದು ಬರೀ ಸಾಗರವಾಗಿರಲಿಲ್ಲ. ಅದು ಸದಾಶಿವ ಸಾಗರ. ನಿಜವಾಗಿ ಸಮೃದ್ಧ ಜಲಸನ್ನಿಧಿಯೊಂದರ ಹೆಸರದು. ಅದು ಅಕ್ಷರಶಃ ಸಾಗರವೇ ಆಗಿತ್ತು. ಕ್ರಿಸ್ತ ಶಕ 1592 ರಿಂದ 1629ರ ವರೆಗೆ ಇಕ್ಕೇರಿಯನ್ನು ಆಳಿದ ಸಮರ್ಥ ದೊರೆ ವೆಂಕಟಪ್ಪ ನಾಯಕ. ಇವನ ಅಜ್ಜ ಸದಾಶಿವ ನಾಯಕ ಇಕ್ಕೇರಿಯ ಎರಡನೇ ದೊರೆ. ದೊರೆ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕನ ಹೆಸರಿನಲ್ಲಿ 'ಕೆಳದಿ ಇಕ್ಕೇರಿ'
ಪಟ್ಟಣದ ಮಧ್ಯದಲ್ಲಿ ತನ್ನ ಪಿತಾಮಹನ ಹೆಸರಿನಲ್ಲಿ ಪೇಟೆ ಹಾಗೂ ಪಟ್ಟಣವನ್ನು ಕಟ್ಟಿಸಿ, ಆ ಪಟ್ಟಣಕ್ಕೆ 'ಸದಾಶಿವಸಾಗರ'ವೆಂದು ನಾಮಕರಣ ಮಾಡಿದ. ಅಲ್ಲಿ ಮಹಾಗಣಪತಿಯನ್ನ ಪ್ರತಿಷ್ಠೆ ಮಾಡಿ, ಪಕ್ಕದಲ್ಲೇ ಸುಂದರವಾದ ಕೆರೆಯನ್ನೂ ಕಟ್ಟಿಸಿದ. ಅದೇ ಈಗಿನ ಗಣಪತಿ ಕೆರೆ. ಅದರ ಪಕ್ಕದಲ್ಲಿಯೇ ದೊಡ್ಡ ಮಹಡಿಯ ಮನೆ. ಅಲ್ಲಿಯೇ ಮನ ಸೆಳೆಯುವ ಚಂದನವನವೆಂಬ (ಚಂದ್ರ ಮಾವಿನ ಕೊಪ್ಪಲು) ಉದ್ಯಾನ. ಇಷ್ಟೇ ಅಲ್ಲ, ವೆಂಕಟಪ್ಪ ನಾಯಕ ಗಣಪತಿಯ ಪೂಜೆಗೆ ಶ್ರೇಷ್ಠವಾದ ಭೂಮಿಯನ್ನು ಕಲ್ಪಿಸಿಕೊಟ್ಟಿದ್ದನು ಎನ್ನುತ್ತದೆ ಇತಿಹಾಸ (ಕೆಳದಿ ನೃಪ ವಿಜಯ, ಪುಟ 131, ಪಂಚಮಾಶ್ವಾಸ, ಸಂ. ಕೆಳದಿ ಗುಂಡಾ ಜೋಯ್ಸ).
ಇದಕ್ಕೆ ಪುರಾವೆಯೊದಗಿಸುತ್ತದೆ ಇಟಲಿ ಪ್ರವಾಸಿ ಪಿಯೆತ್ರೋ ದೆಲ್ಲಾ ವಲ್ಲೆ ಅನ್ನುವವನ ಪ್ರವಾಸ ಕಥನ. ಆತ ಭಾರತಕ್ಕೆ ಬಂದವನು ಗೋವಾದ ಮೂಲಕ ಕ್ರಿ. ಶ. 1623ರಲ್ಲಿ ಇಕ್ಕೇರಿಗೆ ಬರುತ್ತಾನೆ. ಅಲ್ಲದೆ ತನ್ನ ಪ್ರವಾಸ ಕಥನದಲ್ಲಿ ಇಕ್ಕೇರಿ, ಅಲ್ಲಿಯ ದೊರೆ, ಜನ ಜೀವನ ಇತ್ಯಾದಿಗಳ ಕುರಿತು ಬರೆಯುತ್ತಾನೆ. ಅಲ್ಲದೆ ದೊರೆ ವೆಂಕಟಪ್ಪ ನಾಯಕ ಹೊಸದಾಗಿ ನಿರ್ಮಾಣ ಮಾಡಿದ 'ಸಾಘೇರ್ ಪಟ್ಟಣ'ದ ಬಗ್ಗೆ, ಅಲ್ಲಿ ನಿರ್ಮಾಣವಾದ ದೊಡ್ಡ ಕೊಳದ ಬಗ್ಗೆ ಹೇಳುತ್ತಾನೆ. ಅಂದರೆ ನಾವು ಈಗ ನೋಡುತ್ತಿರುವ ಸಾಗರ ಮತ್ತು ಗಣಪತಿ ಕೆರೆ 1623ರ ಸುಮಾರಿಗೆ ನಿರ್ಮಾಣವಾದದ್ದು. ಈಗ ಸುಮಾರು 400 ವರ್ಷಗಳಿಂದ ಉಳಿದುಕೊಂಡು ಬಂದ ಈ ಕೆರೆ ಇದೀಗ ತನ್ನ ಅಂತಿಮ ದಿನ ಎಣಿಸುತ್ತಿದೆ.
ನಿಜವಾಗಿ ಕೆರೆ ಅವಸಾನಕ್ಕೆ ಇನ್ನೊಂದು ಕಾರಣ ಅವ್ಯಾಹತ ಒತ್ತುವರಿ. ಸರಕಾರೀ ಲೆಕ್ಕದ ಪ್ರಕಾರ 24 ಎಕರೆ 38 ಗುಂಟೆ ಇರುವ ಈ ಕೆರೆ ಸುಂದರ ಸರೋವರದ ರೀತಿಯಲ್ಲಿ ಸುತ್ತಲಿನ ಪರಿಸರದ ಮೆರುಗನ್ನು ಹೆಚ್ಚಿಸಿತ್ತು. ಕನ್ನಡದ ಹೆಸರಾಂತ ಬರಹಗಾರ ನಾ.ಡಿಸೋಜ ಅವರ ಪ್ರಕಾರ ಸುಮಾರು 60 ವರ್ಷಗಳ ಹಿಂದೆ ಹೊಸ ಬಿ. ಎಚ್. ರಸ್ತೆ ಮಾಡಬೇಕೆಂಬ ಹುರುಪಿನಲ್ಲಿ ಕೆರೆಯ ಈ ತುದಿಯಲ್ಲಿ ರಸ್ತೆಗೆ ಮಣ್ಣು ತುಂಬಿ ನಡುವೆ ಒಂದು ಮೋರಿಯನ್ನು ಆ ತುದಿಯಲ್ಲಿ ಒಂದು ಸೇತುವೆಯನ್ನು ಮಾಡಲಾಯಿತು. ಆಗಲೂ ಕೆರೆ ವಿಶಾಲವಾಗಿಯೇ ಇತ್ತು. ಕೆರೆಯ ಬಲಭಾಗದ ತುದಿಯನ್ನು ಕೆರೆಯ ಕಣ್ಣು ಎಂದು ಕರೆಯುತ್ತಿದ್ದರು. ಈ ಕೆರೆಯ ಮೇಲ್ ಬದಿಯಲ್ಲಿ ಇವೆ ಎಂದು ಹೇಳಲಾಗುವ ಏಳು ಕೆರೆಗಳು (ಆವಿನ ಹಳ್ಳಿಯವರೆಗೆ) ತುಂಬಿಕೊಂಡ ನಂತರ ನೀರು ಇಲ್ಲಿ ತುಂಬಿಕೊಳ್ಳುತ್ತಿತ್ತು. ಈಗ ಕೆಲ ದಶಕಗಳ ಹಿಂದೆ ಈ ಊರಿಗೆ ಬಂದ ಒಂದು ಸರ್ಕಸ್ನವರಿಗೆ ಪುರ ಸಭೆ ಅನುಮತಿ ನೀಡಿ ಕೆರೆಯ ಈ ಭಾಗದಲ್ಲಿ ಮಣ್ಣು ತುಂಬಿ ಅದನ್ನ ಬಳಸಿಕೊಳ್ಳಲು ಪರವಾನಿಗೆ ಕೊಡಲಾಯಿತು. ಅಲ್ಲಿಂದ ಈ ಕೆರೆಯ ಇತಿಶ್ರೀ ಪ್ರಾರಂಭವಾಯಿತು ಎಂದು ವಿಷಾದಿಸುತ್ತಾರೆ ಡಿಸೋಜಾ ಸರ್.
ಒತ್ತುವರಿ, ರಸ್ತೆ ಜಾಗ, ಸರ್ಕಸ್ ಕಂಪನಿಗಾಗಿ ಮಣ್ಣು ತುಂಬಿದ ಪ್ರದೇಶದ ಹೊರತಾಗಿಯೂ ಅಳಿದುಳಿದ ಕೆರೆಯ ಬಗೆಗಾದರೂ ನಗರಸಭೆಗೆ, ಜನರಿಗೆ, ಜನ ಪ್ರತಿನಿಧಿಗಳಿಗೆ ಕಾಳಜಿ ಇದೆಯೇ ಅಂದರೆ ಅದೂ ಇಲ್ಲ. ಈ ಬದಿಯಲ್ಲಿ ಆಗಲೇ ಹುಲ್ಲು, ಹೂಳು ಬೆಳೆದಿದೆ. ಇನ್ನು ಕೆಲ ವರ್ಷಗಳಲ್ಲಿ ಈ ಸ್ಥಳವನ್ನ ಮುಚ್ಚಿ ಸೈಟು ಮಾಡುವ ಕರಾಮತ್ತು ನಡೆದಿದೆ ಏನೋ ಅನಿಸುತ್ತದೆ. ಕೆರೆಯನ್ನ ಹಿಂದಿನಿಂದಲೂ ಅತಿಕ್ರಮಿಸಿಕೊಂಡೇ ಬರಲಾಗುತ್ತಿದೆ. ಈ ಅತಿಕ್ರಮಣ ಇಂದಿಗೂ ಮುಂದುವರಿದಿದೆ. ಮಠಗಳು, ಮಸೀದಿ ಎನ್ನದೇ ಜಾತ್ಯಾತೀತವಾಗಿ ಸಾಂಸ್ಥಿಕವಾಗಿ, ವೈಯಕ್ತಿವಾಗಿ ಒತ್ತುವರಿ ನಡೆದಿದೆ ಎಂದು ವಿವರಿಸುತ್ತಾರೆ ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಐ.ವಿ ಹೆಗಡೆ ಅವರು.
ನಿಜವಾಗಿ ಏನಾಗುತ್ತಿದೆ? ನೀರಿಗೆ ಅದರದೇ ಆದ ಆವರಣವೊಂದಿರುತ್ತದೆ. ಅದನ್ನು ಅಚ್ಚುಕಟ್ಟು ಪ್ರದೇಶವೆಂದು ಗುರುತಿಸಲಾಗುತ್ತದೆ. ಸುತ್ತಲು ಬೀಳುವ ಮಳೆ ನಿರ್ದಿಷ್ಟ ಮಾರ್ಗದಲ್ಲಿ ಕೆಳ ಪ್ರದೇಶದತ್ತ ಸಹಜವಾಗಿ ಹರಿದು ಬಂದು ಸೇರುತ್ತಿರುತ್ತದೆ. ಮಧ್ಯೆ ಎಂಥದೇ ಅಡ್ಡಿಯಾದರೂ ಥಟ್ಟನೆ ನೀರು ಮಾರ್ಗ ಬದಲಿಸಿ ಹೊರಟುಬಿಡುತ್ತದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲೂ ಇದೇ ಆಗುತ್ತದೆ. ಒತ್ತುವರಿ, ಕಟ್ಟಡ ನಿರ್ಮಾಣಗಳಿಂದಲೂ ಇದೇ ಪರಿಣಾಮ. ಮೇಲಿನಿಂದ ಹರಿಯುವ ನೀರಿಗೆ ಅಡ್ಡಲಾಗಿ ರಸ್ತೆ ಅಥವಾ ಯಾವುದೇ ನಿರ್ಮಾಣ ಬಂದಾಕ್ಷಣ ಅದು ಅದರಗುಂಟವೇ ತನ್ನ ಹರಿವನ್ನು ಮುಂದುವರಿಸುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ತೋಡುವ ಚರಂಡಿಗಳು ಹರಿವಿಗೆ ಇನ್ನಷ್ಟು ವೇಗ ಒದಗಿಸುತ್ತದೆ. ಹೀಗಾಗಿ ನೀರಿನ ವಿಚಾರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುವ ಯಾವುದೇ ನಿರ್ಮಿತಿ ಒಂದು ಪ್ರದೇಶದ ಜಲ ಮೂಲವನ್ನು ದಿಕ್ಕು ತಪ್ಪಿಸಿ ಮತ್ತೆಲ್ಲಿಗೋ ಕೊಂಡೊಯ್ದು ಬಿಡುತ್ತವೆ. ಇದರಿಂದ ಸ್ವಾಭಾವಿಕವಾಗಿಯೇ ಅಚ್ಚುಕಟ್ಟು ಪ್ರದೇಶ ಕಳೆದುಕೊಳ್ಳುವ ಕೆರೆ, ಬಾವಿಗಳು ಬತ್ತಲಾರಂಭಿಸುತ್ತವೆ. ಸಾಗರದಲ್ಲಿ ಆಗಿದ್ದೂ ಇದೆ. ಹೀಗಾಗಿಯೇ ಇಲ್ಲೀಗ ಕೃತಕ ಬರ ನಿರ್ಮಾಣವಾಗಿದೆ.
ಸಾಗರ ರಾಜ್ಯದ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಕ್ಷೇತ್ರ. ನೂತನ ಸ್ಪೀಕರ್ ತುರ್ತಾಗಿ ತಮ್ಮ ಕ್ಷೇತ್ರದ ಕೆರೆಯ ಬಗ್ಗೆ ಅದರ ಉಳಿವಿನ ಬಗ್ಗೆ ಮಾತನಾಡಬೇಕಿದೆ. ಸಮಾಧಾನದ ಸಂಗತಿ ಎಂದರೆ ಸ್ವಲ್ಪ ಸ್ವಲ್ಪ ಮಾತನಾಡಿದ್ದಾರೆ. ಆದರೆ ಸ್ಪೀಕರ್ ಅವರ ಈ ಮಾತು ಲೌಡ್ ಸ್ಪೀಕರ್ ಆಗಬೇಕಿದೆ. ಕೆರೆಯನ್ನ ಉಳಿಸಲು ಒಂದು ಧೃಡ ನಿರ್ಧಾರ ಮಾಡಿ, ಒತ್ತುವರಿ ತೆರವುಗೊಳಿಸಲು ಅವರು ಆದೇಶಿಸಿದ್ದಾರೆ. ನ್ಯಾಯಾಲಯ ಸಹ ಈ ಬಗ್ಗೆ ಬಹು ಹಿಂದೆಯೇ ತೀರ್ಪಿತ್ತಿದೆ. ಸಾಗರದ ಗಣಪತಿ ಕೆರೆಯ ನೀರೇ ಊರಿನ ಅಂತರ್ಜಲವನ್ನು ಬತ್ತದಂತೆ ಇಟ್ಟಿತ್ತು. ಯಾವಾಗ ಕೆರೆಯ ಜಲದ ಕಣ್ಣು ತುಂಡಾಯಿತೋ, ಒತ್ತುವರಿ ಹೆಚ್ಚಿ ಕೆರೆಯ ಅಸ್ತಿತ್ವಕ್ಕೇ ಧಕ್ಕೆ ಬಂದಿತೋ ಆಗ ಊರಿನ ಬಾವಿಗಳು ಬತ್ತಲಾರಂಭಿಸಿದವು. ಈ ಕೆರೆಯ ಮೇಲಿನಿಂದ ಬೀಸಿ ಬರುವ ಗಾಳಿಯೇ ಸಾಗರವನ್ನು ತಂಪಾಗಿಟ್ಟಿತ್ತು. ಸಾಗರ ಈ ಬೇಸಿಗೆಯಲ್ಲಿ ಬಿಸಿಗೆ ಬೆಂಡಾಗಿದ್ದರೆ ಮತ್ತದಕ್ಕೆ ಕಾರಣವೂ ಕೆರೆಯ ವಿನಾಶ. ಸಾಗರದ ಮಂದಿ ಇನ್ನಾದರೂ ಕಣ್ಣು ತೆರೆದು ಮುಚ್ಚಿ ಹೋಗಿರುವ ಕೆರೆಯ ಕಣ್ಣನ್ನು ತೆರವು ಮಾಡಲೂ ಮುಂದಾಗಬೇಕು. ಅದಿಲ್ಲದಿದ್ದರೆ ಮಲೆನಾಡಿನ ಸೆರಗಿನ ಇನ್ನೊಂದು ಪಟ್ಟಣ ಬರದ ಬೀಡಾಗುವುದರಲ್ಲಿ ಅನುಮಾನವಿಲ್ಲ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in