ಮಾನವೀಯತೆ ಮೆರೆದವರು ಮಾಧ್ಯಮಗಳಿಗೆ ಕಾಣಿಸಲಿಲ್ಲವೇ?
ಉತ್ತರಾಖಂಡದ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರದಲ್ಲಿ ಭಯಾನಕ ಮಳೆ ಮತ್ತು ನೆರೆಯಿಂದಾಗಿ ಆದ ವಿನಾಶಕ್ಕೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಗಳಿಗೆ ಅದು ಪ್ರಳಯಕ್ಕಿಂತಲೂ ಕಡಿಮೆಯೇನೂ ಆಗಿರಲಿಲ್ಲ. ತನ್ನ ಮಗಳನ್ನು ಗಟ್ಟಿಯಾಗಿ ಹಿಡಿದುಕೊಂಡೇ ತಾಯಿಯೊಬ್ಬಳು ಮಂದಾಕಿನಿಯ ಪ್ರವಾಹದಲ್ಲಿ ಕೊಚ್ಚಿಹೋದಳು, ಔಷಧವಿಲ್ಲದೆ ವೃದ್ಧನೊಬ್ಬ ತನ್ನ ಮಗನ ತೊಡೆಯ ಮೇಲೆಯೇ ಮಲಗಿ ಅಂತ್ಯಕಂಡ; ತನ್ನ ತಂದೆಗೆ ಅಂತ್ಯ ಸಂಸ್ಕಾರ ಮಾಡುವ ಅವಕಾಶವೂ ಆ ಮಗನಿಗೆ ಸಿಗಲಿಲ್ಲ. ಬದುಕುಳಿದವರು ಎತ್ತರದ ಸ್ಥಳಗಳಲ್ಲಿ ನಿಂತು ನದಿಯಲ್ಲಿ ವಾಹನಗಳು, ಜನ-ಜಾನುವಾರುಗಳು ಆಟಿಕೆಗಳಂತೆ ಹರಿದುಹೋಗುವುದನ್ನು ಭಯಭೀತರಾಗಿ ನೋಡಿದರು. ಈ ಲೇಖನವನ್ನು ನಾನು ಸೋನಪ್ರಯಾಗ ಮತ್ತು ಅಲ್ಲಿಂದ ಗುಪ್ತಕಾಶಿಯವರೆಗೂ ಕಾಲ್ನಡಿಗೆಯಲ್ಲಿ ಸಂಚರಿಸಿದ ಆಯಾಸದ ನಡುವೆಯೂ ಬರೆಯಲು ಪ್ರಯತ್ನಿಸುತ್ತೇದ್ದೇನೆ. ಆದರೆ ಏನು ಬರೆಯಬೇಕೋ ತಿಳಿಯುತ್ತಿಲ್ಲ, ಸರಿಯಾದ ಪದಗಳಿಗಾಗಿ ಪರದಾಡುತ್ತಿದ್ದೇನೆ, ಆ ದುರಂತಮಯ ದೃಶ್ಯಗಳೆಲ್ಲ ನನ್ನ ಕಣ್ಣನ್ನು ಮಂಜಾಗಿಸುತ್ತಿವೆ.
ಋಷಿಕೇಷದಿಂದ ಗುಪ್ತ ಕಾಶಿಯವರೆಗೆ ಎಲ್ಲೇ ಕಣ್ಣುಹರಿಸಿದರೂ, ಕಳೆದು ಹೋದ ತಮ್ಮ ಪ್ರೀತಿಪಾತ್ರರ ಫೋಟೋಗಳನ್ನು ಹಿಡಿದು ನಿಂತುಕೊಂಡವರು ಕಾಣಿಸುತ್ತಿದ್ದರು. ತಂದೆ, ತಾಯಿ, ಅಣ್ಣ, ಅತ್ತಿಗೆ, ಚಿಕ್ಕಪ್ಪ, ಮಕ್ಕಳು, ಇಡೀ ಪರಿವಾರ ಅಥವಾ ಆಪ್ತಗೆಳೆಯರನ್ನು ಕಳೆದುಕೊಂಡ ಜನರನ್ನು ನೋಡಿದಾಗ ಬಿಕ್ಕಿ ಬಿಕ್ಕಿ ಅಳುವಂತಾಗುತ್ತಿತ್ತು. 'ಇವರನ್ನು ನೋಡಿದ್ದೀರಾ?', 'ಸರ್ ಇವರೆಲ್ಲಾದರೂ ಕಾಣಿಸಿದರಾ?' ಎಂದು ಅವರು ಎದುರಾದವರನ್ನೆಲ್ಲ ಕೇಳುತ್ತಿದ್ದರು. ಬಹುಶಃ ಆ ನೋವು ಅವರೊಂದಿಗೆ ಜೀವನಪರ್ಯಂತ ಉಳಿದುಹೋಗುತ್ತದೇನೋ? ಇಂಥ ಸಮಯದಲ್ಲಿ ನಿಷ್ಠುರ ದಿಲ್ಲಿ ಸರ್ಕಾರ ಮತ್ತು ಮಾಧ್ಯಮಗಳ ವಿಚಾರವನ್ನು ಪ್ರಸ್ತಾಪಿಸುವುದೇ ಬೇಡವೆನಿಸುತ್ತಿದೆ. ಮೂರು ದಿನಗಳವರೆಗೆ ಅವರಿಗೆ ಈ ವಿನಾಶದ ಗಂಭೀರತೆಯೇ ಅರ್ಥವಾಗಲಿಲ್ಲ. 'ರಾಹುಲ್-ನಿತೀಶ್, ಮೋದಿ-ಅಡ್ವಾಣಿ' ಎನ್ನುವ ಚರ್ಚೆಯೇ ಮಾಧ್ಯಮಗಳಿಗೆ ಪ್ರಮುಖವಾಗಿತ್ತು.
ಪಾಕಿಸ್ತಾನದಲ್ಲಿ ಚುನಾವಣೆಗಳಾದಾಗಲೆಲ್ಲ ಇಸ್ಲಾಮಾಬಾದಿಗೆ ದೌಡಾಯಿಸುವ ಈ ಚಾನೆಲ್ಗಳ ಅತಿ ಆಡಂಬರದ ಆ್ಯಂಕರ್ಗಳು, ಸಂಪಾದಕರು ಮತ್ತು ಹಿರಿಯ ವರದಿಗಾರರು ದಿನ ರಾತ್ರಿಯೆನ್ನದೆ ಖುದ್ದು ವರದಿ ಮಾಡುತ್ತಾರೆ. ಆದರೆ ಉತ್ತರಾಖಂಡದ ವಿಷಯದಲ್ಲಿ ಮಾತ್ರ ಇವರ್ಯಾರೂ ತಮ್ಮ ಚಾನೆಲ್ಗಳಿಂದ ಹೊರಗೆ ಕಾಲಿಡಲಿಲ್ಲ. ಜ್ಯೂನಿಯರ್ ರಿಪೋರ್ಟರ್ಗಳು, ಪ್ರಾಂತೀಯ ಸ್ಟ್ರಿಂಗರ್ಗಳು ಮತ್ತು ಸ್ಥಾನೀಯ ಜನರಿಂದಲೇ ವರದಿ ತರಿಸಿಕೊಂಡು ಬಿತ್ತರಿಸಿದರು. ಆ ವರದಿಗಳಲ್ಲಾದರೂ ಏನಿತ್ತು? 'ಉತ್ತರಾಖಂಡದಲ್ಲಿ ಹೇಗೆ ಲೂಟಿ ನಡೆಯುತ್ತಿದೆ, ಕೂಲಿಗಳು ಎಷ್ಟು ಹಣ ಕೀಳುತ್ತಿದ್ದಾರೆ' ಎನ್ನುವ ಕೆಲವು ಅಮಾನುಷ ದುರ್ವ್ಯವಹಾರಗಳನ್ನೇ ಪ್ರಮುಖ ಸುದ್ದಿ ಎಂದು ಪದೇ ಪದೇ ತೋರಿಸಿ ಉತ್ತರಾಖಂಡದ ಹೆಸರನ್ನು ಕೆಡಿಸುತ್ತಲೇ ಹೋದರು. ಆದರೆ ತಾವೇ ಶೋಕದಲ್ಲಿ ಮುಳುಗಿದ್ದರೂ ಹಲವಾರು ಯಾತ್ರಿಗಳಿಗೆ ತಮ್ಮ ಮನೆಗಳಲ್ಲಿ ಆಶ್ರಯ ಕೊಟ್ಟ ಸ್ಥಳೀಯರ ಔದಾರ್ಯವನ್ನು ಇವರೇಕೆ ತೋರಿಸಲಿಲ್ಲ? ತಮ್ಮ ಜೀವ ಅಪಾಯದಲ್ಲಿದ್ದರೂ ಇನ್ನೊಂದು ಜೀವವನ್ನು ಉಳಿಸುವಂತಹ 'ಮಾನವೀಯ ಮೌಲ್ಯಗಳ ಮೆರವಣಿಗೆ' ಅದೇಕೆ ನಮ್ಮ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲ?
ಸಹಾಯ ಕಾರ್ಯದಲ್ಲಿ ಬಹುತೇಕ ಸ್ಥಳೀಯ ಸಂಘಟನೆಗಳು ಪಾಲ್ಗೊಂಡಿದ್ದವು. ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಎಲ್ಲರಿಗಿಂತಲೂ ಮೊದಲೇ ಗೌರಿಕುಂಡ ಮತ್ತು ಸೋನಪ್ರಯಾಗಕ್ಕೆ ತೆರಳಿ ರಕ್ಷಣಾ ಕಾರ್ಯಕ್ಕಿಳಿದರು. ಸೈನಿಕರ ಜೊತೆಗೆ ಸೇರಿ ವೃದ್ಧಯಾತ್ರಿಗಳನ್ನು ಬೆನ್ನ ಮೇಲೆ ಹೊತ್ತೋ ಅಥವಾ ಚಾದರವನ್ನೇ ಸ್ಟ್ರೆಚರ್ನಂತೆ ಬಳಸಿಯೋ ಅವರನ್ನು ಹೆಲಿಪ್ಯಾಡ್ವರೆಗೆ ತಲುಪಿಸಿದರು. ದೌರ್ಭಾಗ್ಯವೆಂದರೆ, ಎಂದಿನಂತೆ ಅವರ ಸೇವೆ ದೆಹಲಿಯ ಪೂರ್ವಾಗ್ರಹಪೀಡಿತ ಮಾಧ್ಯಮಗಳ ದೃಷ್ಟಿಗೆ ಮಾತ್ರ ಬೀಳಲಿಲ್ಲ. ಆರ್ಎಸ್ಎಸ್ನ ವರಿಷ್ಠ ನಾಯಕ 88 ವರ್ಷದ ಡಾ. ನಿತ್ಯಾನಂದ ಅವರು ಪರಿಹಾರ ಕಾರ್ಯದ ದೇವತೆಯಾದರು. ಹತ್ತಾರು ಟ್ರಕ್ಗಳಲ್ಲಿ ಸಾಮಾನು ತುಂಬಿಕೊಂಡ ನೂರಾರು ಆರ್ಎಸ್ಎಸ್ ಕಾರ್ಯಕರ್ತರು, ಬದರಿನಾಥ್, ಜೋಷಿಮಠ, ಹರ್ಷಿಲ್, ಗಂಗೋತ್ರಿ, ಮನೇರಿ, ಗುಪ್ತಕಾಶಿ, ಸೋನಪ್ರಯಾಗ, ಗೌರಿಕುಂಡ, ವಾಸುಕೀನಾಥ್ನಂತಹ ಪ್ರದೇಶಗಳಿಗೆ ತೆರಳಿ ಸೈನಿಕರಿಗೆ ಸಹಾಯ ಮಾಡಿದರು. ನೆರೆ ಬಂದ ಮೊದಲ ಮೂರು ದಿನಗಳಲ್ಲಿ ಎಲ್ಲಾ ರಸ್ತೆಗಳನ್ನೂ ಬಂದ್ ಮಾಡಲಾಗಿತ್ತು. ಆದರೆ ಸ್ವಯಂಸೇವಕರು 40-50 ಕಿಲೋಮೀಟರ್ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಪರಿಹಾರ ಸಾಮಗ್ರಿ ತಲುಪಿಸಿ, ಅಲ್ಲಿ ಸಿಕ್ಕಿಬಿದ್ದಿದ್ದ ಯಾತ್ರಿಗಳನ್ನು ರಕ್ಷಿಸಿದರು.
ಗುಪ್ತಕಾಶಿ ಮತ್ತು ಉಖಿಮಠದಂತಹ ಕ್ಷೇತ್ರಗಳು ಕೇದಾರನಾಥಕ್ಕೆ ಎಲ್ಲಾ ರೀತಿಯಿಂದಲೂ ಕೇಂದ್ರೀಯ ಸ್ಥಾನಗಳಂತಿವೆ. ಈ ಪ್ರದೇಶಗಳಿಂದಲೇ ಕೇದಾರನಾಥಕ್ಕೆ ಪಂಡಿತರು, ಸಾಮಗ್ರಿಗಳು, ಮಂದಿರ ಸಮಿತಿಯ ಹೆಚ್ಚು ಸದಸ್ಯರು, ಕರ್ಮಚಾರಿಗಳು, ವ್ಯಾಪಾರಿಗಳು ಮತ್ತು ಯಾತ್ರಿಗಳಿಗೆ ಸಹಾಯ ಮಾಡುವ ಕಾರ್ಯಕರ್ತರು ಹೋಗುತ್ತಾರೆ. ಇಲ್ಲಿಂದಲೇ ಎಲ್ಲಾ ತರಹದ ಸಾಮಾನುಗಳನ್ನು ಕೇದಾರನಾಥಕ್ಕೆ ಒದಗಿಸಲಾಗುತ್ತದೆ. ಈ ಪ್ರದೇಶಗಳಲ್ಲೀಗ ಉಳಿದೆಲ್ಲಡೆಗಿಂತಲೂ ಹೆಚ್ಚಿನ ಶೋಕ ಮಡುಗಟ್ಟಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ವಾಸಿಸುವವರಲ್ಲೇ ದುರ್ಮರಣಕ್ಕೀಡಾದವರು ಅತಿ ಹೆಚ್ಚು. ಕಣ್ಮರೆಯಾದ ತಮ್ಮ ಮಕ್ಕಳು ಮತ್ತೆ ಬಂದು ಬಾಗಿಲು ತಟ್ಟುತ್ತಾರೇನೋ ಎನ್ನುವ ಭರವಸೆಯಲ್ಲೇ ಎಷ್ಟೋ ಪೋಷಕರು ಕಾದಿದ್ದಾರೆ. ಇಷ್ಟು ವಿಪತ್ತು ಎದುರಾದರೂ ಕೂಡ ಆ ಗ್ರಾಮವಾಸಿಗಳು ಯಾತ್ರಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವರಂತೂ ಮನೆಯಲ್ಲಿ ದಿನಸಿ ಮುಗಿದು ಹೋದಾಗ ತಮ್ಮ ಹೊಲಗಳಿಗೆ ತೆರಳಿ ಆಲುಗಡ್ಡೆಗಳನ್ನು ಹೊತ್ತುತಂದು, ಬೇಯಿಸಿ, ಯಾತ್ರಿಗಳಿಗೆ ತಿನ್ನಲು ಕೊಟ್ಟಿದ್ದಾರೆ. ದೇವರ ದರ್ಶನಕ್ಕೆ ಬಂದ ಯಾತ್ರಿಗಳಿಗೆ ಈ ಗ್ರಾಮವಾಸಿಗಳೇ ದೇವತೆಗಳಂತೆ ಕಂಡರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ನರೇಂದ್ರ ಮೋದಿಯವರು ನನಗೆ ಫೋನ್ ಮಾಡಿದಾಗ ನಾವೆಲ್ಲ ಡೆಹ್ರಾಡೂನ್ನ ಸಂಘದ ಕಾರ್ಯಾಲಯದಲ್ಲಿ ಪರಿಹಾರ ಕಾರ್ಯದ ಬಗ್ಗೆ ಚರ್ಚೆ ನಡೆಸಿದ್ದೆವು. ಈ ವಿಪತ್ತಿನ ಸುದ್ದಿ ಅವರ ಕಿವಿಗೆ ಬೀಳುತ್ತಿದ್ದಂತೆಯೇ ನನಗೆ ಫೋನ್ ಮಾಡಿ ನಾವಿದ್ದಲ್ಲಿಗೆ ಬರುತ್ತಿರುವುದಾಗಿ ಹೇಳಿದರು. ಅವರು ಬರುತ್ತಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆಯೇ ಇಡೀ ಉತ್ತರಾಖಂಡಕ್ಕೆ ಉತ್ಸಾಹದ ಅಲೆಯೊಂದು ಅಪ್ಪಳಿಸಿದಂತಾಯಿತು. ನಾವು ಮರುದಿನ ಗುಪ್ತಕಾಶಿಗೆ ತೆರಳಿದೆವು. ಮೋದಿಯವರು ಅಲ್ಲಿಗೆ ಬಂದರಾದರೂ ಸರ್ಕಾರದ ಅನುಮತಿ ಸಿಗದೇ ಇದ್ದುದರಿಂದ ಅವರ ಹೆಲಿಕಾಪ್ಟರ್ಗೆ ಕೆಳಕ್ಕಿಳಿಯಲು ಸಾಧ್ಯವಾಗಲಿಲ್ಲ. ಆದರೂ ಅವರ ಉಪಸ್ಥಿತಿಯಿಂದ ವಾತಾವರಣದಲ್ಲಿ ಗುಣಾತ್ಮಕ ಬದಲಾವಣೆ ಆಗಿತ್ತು.
ಪಶ್ಚಿಮ ಬಂಗಾಳ ಸರ್ಕಾರ ತನ್ನ ಇಬ್ಬರು ಮಂತ್ರಿಗಳನ್ನು ಯಾತ್ರಿಗಳ ಸಹಾಯಕ್ಕಾಗಿ ಕಳುಹಿಸಿತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಕುಮಾರ್ ಚೌಹಾಣ್ ಮತ್ತು ಕ್ಯಾಬಿನೆಟ್ ಸಚಿವ ಲಕ್ಷ್ಮಿ ನಾರಾಯಣ ಶರ್ಮ ವರಿಷ್ಠ ಅಧಿಕಾರಿಗಳೊಂದಿಗೆ ಋಷಿಕೇಶ, ಹರಿದ್ವಾರ ಮತ್ತು ಇನ್ನುಳಿದ ನೆರೆಪೀಡಿತ ಪ್ರದೇಶಗಳಿಗೆ ತೆರಳಿ ಯಾತ್ರಿಕರನ್ನು ರಕ್ಷಿಸಲು ಬಹುವಾಗಿ ಶ್ರಮಿಸಿದರು. ಬಿಹಾರ ಸರ್ಕಾರ ಕೂಡ ಡೆಹ್ರಾಡೂನ್ನಲ್ಲಿ ಯಾತ್ರಿಗಳಿಗಾಗಿ ಸಹಾಯ ಕೇಂದ್ರವನ್ನು ತೆರೆಯಿತು. ಪಂಜಾಬ್ ಸರ್ಕಾರ ತನ್ನ 6 ಕ್ಯಾಬಿನೆಟ್ ಮಂತ್ರಿಗಳನ್ನು ಮತ್ತು ಅನೇಕ ಬಸ್ಗಳನ್ನು ಗೊಂವಿದಘಾಟ್ನಲ್ಲಿದ್ದ ಯಾತ್ರಿಗಳಿಗಾಗಿ ಕಳುಹಿಸಿಕೊಟ್ಟಿತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಸರ್ಕಾರಗಳೂ ಕೂಡ ಒಳ್ಳೆಯ ಕೆಲಸವನ್ನು ಮಾಡಿದವು. ಬಿಜೆಪಿಯವರೇ ಆಗಲಿ ಅಥವಾ ಕಾಂಗ್ರೆಸ್ಸಿನವರೇ ಆಗಿರಲಿ ಅವರು ಮಾಡಿದ ಪ್ರಯತ್ನವನ್ನು ಶ್ಲಾಘಿಸಲೇಬೇಕು.
ಭೂಸೇನೆ, ವಾಯುಸೇನೆ, ಪೊಲೀಸರು, ಸ್ಥಳೀಯ ಪ್ರಶಾಸನದ ಕರ್ಮಾಚಾರಿಗಳೆಲ್ಲರ ಸಹಯೋಗ ಅಭಿನಂದರ್ನಾಹವಾದದ್ದು. ಇಂಥ ಸಮಯದಲ್ಲಿ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದು, ಭಾರತೀಯರ ಮನೋಬಲವನ್ನು ಕುಗ್ಗಿಸುವುದು ಸರಿಯಲ್ಲ. ಇನ್ನು ಭೂಸೇನೆ, ವಾಯುಸೇನೆ ಮತ್ತು ಖಾಸಗಿ ಕಂಪನಿಗಳ ಪೈಲಟ್ಗಳನ್ನಂತೂ ದೇವತೆಗಳ ರೂಪದಲ್ಲಿ ನೋಡಲಾಯಿತು ಎನ್ನುವುದು ಬೇರೇ ಮಾತು. ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಮೃತಪಟ್ಟ ಸೈನಿಕರನ್ನು ಸಾಕ್ಷಾತ್ ಶಿವನ ಸ್ವರೂಪವೆಂದೇ ಈಗ ಭಾವಿಸಲಾಗುತ್ತಿದೆ. ದೌರ್ಭಾಗ್ಯವೆಂದರೆ ಇಂಥ ಸಮಯದಲ್ಲಿ ವಿಪತ್ತುಗಳನ್ನೆದುರಿಸಲು ತ್ವರಿತ ವ್ಯವಸ್ಥೆ ಇಲ್ಲದೇ ಇರುವುದು ಮತ್ತು ಮೂಲಭೂತ ಸೌಕರ್ಯಗಳ ಅಭಾವ ನಮ್ಮ ಭಾರತೀಯ ಶಾಸನ ವ್ಯವಸ್ಥೆಯನ್ನು ಅಣುಕಿಸುತ್ತಾ ನಿಂತಿದ್ದವೆನ್ನುವುದು. ಈಗ ನಮ್ಮ ಗಮನವನ್ನು ಪುನರ್ನಿರ್ಮಾಣದತ್ತ ಹರಿಸಬೇಕಿದೆ. ಇಂಥ ಕರುಣಾಜನಕ ಪರಿಸ್ಥಿತಿ ಮತ್ತೊಮ್ಮೆ ಉದ್ಭವವಾಗದಂತೆ ನೋಡಿಕೊಳ್ಳುವುದರಲ್ಲೇ ಸಾರ್ಥ್ಯಕ್ಯವಿದೆ. ನಿಂದೆ ಮತ್ತು ಕಟು ಪ್ರಹಾರಗಳ ಅಭಿಯಾನಗಳಲ್ಲಿ ಅಲ್ಲ!
- ತರುಣ್ ವಿಜಯ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

