ಚಿಕ್ಕ ಸ್ಫೋಟ, ದೊಡ್ಡ ಆಟ!
ಹತಾಶೆ ಅತಿಯಾದಾಗ ವ್ಯಂಗ್ಯಕ್ಕೆ ಮೊರೆ ಹೋಗುತ್ತೇವೆ. ಪರಿಸ್ಥಿತಿ ಎಂಥ ಗಂಭೀರದ್ದೇ ಆಗಿದ್ದರೂ ಆ ಕುರಿತ ಯಾವ ಗಹನ ವಿಶ್ಲೇಷಣೆಯಿಂದಲೂ ಫಾಯಿದೆ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾದಾಗ ಮಾಡೋದೇನು? ನಮ್ಮ ದೈನೇಸಿ ಸ್ಥಿತಿಯನ್ನು ಗೇಲಿ ಮಾಡಿಕೊಳ್ಳುವುದು. ಇದೂ ಆಕ್ರೋಶ ಹೊರಹಾಕುವ ವಿಧಾನವೇ. ಬಾಂಬ್ ಸ್ಫೋಟಗಳು ನಮ್ಮ ದೇಶದಲ್ಲಿ ಆಗುತ್ತಲೇ ಇರುತ್ತವೆ, ಅವನ್ನು ತಡೆಯುವ ಉಸಾಬರಿ ಯಾರಿಗೂ ಬೇಕಿಲ್ಲ ಎಂಬಂತೆ ಆಗುತ್ತಿದೆ. ಬಿಹಾರದ ಬೋಧ್ಗಯಾದಲ್ಲಿ ಆದ ಬಾಂಬ್ಸ್ಫೋಟ ಈ ಅಸಹಾಯಕ ಸರಣಿಗೆ ಒಂದು ಸೇರ್ಪಡೆ ಅಷ್ಟೆ. ಪ್ರಚಲಿತ ವಿದ್ಯಮಾನಗಳಿಗೆ ಮೊನಚು ವ್ಯಂಗ್ಯದ ಉಡುಗೆ ತೊಡಿಸುವ ಜನಪ್ರಿಯ 'ಫೇಕಿಂಗ್ ನ್ಯೂಸ್' ಜಾಲತಾಣವು ಬಾಂಬ್ಸ್ಫೋಟದ ಸುದ್ದಿಗೆ ಬೀಸಿರುವ ಚಾಟಿ, ಗಂಭೀರ ಘಟನೆಯನ್ನು ಗೇಲಿ ಮಾಡುವಂತೆ ತೋರಿದರೂ ವಾಸ್ತವದಲ್ಲಿ ವ್ಯವಸ್ಥೆ ನಗೆಪಾಟಲಿಗೆ ಒಳಗಾಗುತ್ತಿರುವುದನ್ನು ಸಶಕ್ತವಾಗಿ ಬಿಂಬಿಸಿದೆ.
---
ಗಯಾ, ಬಿಹಾರ: ಬೋಧ್ಗಯಾದಲ್ಲಿ ಬಾಂಬ್ಸ್ಫೋಟವಾದ ಬೆನ್ನಲ್ಲೆ ರಾಜಕೀಯ ಹೇಳಿಕೆಗಳು ಹಾರಾಡುತ್ತಿರುವುದನ್ನು ಗಮನಿಸಿರುವ ಉಗ್ರವಾದಿಗಳು, ಇನ್ನು ಮುಂದೆ ತಾವು ಇದೇ ಮಾದರಿಯನ್ನು ಅನುಸರಿಸುವುದಾಗಿ ಘೋಷಿಸಿದ್ದಾರೆ. ಭಾರತದ ಸಮಾಜವನ್ನು ಕದಡುವ ಉತ್ತಮ ಮಾರ್ಗ ಇದೇ ಆಗಿದೆ ಎಂಬ ಅಭಿಪ್ರಾಯ ಅವರದ್ದು.
'ನಾವು ಜನರನ್ನು ಕೊಲ್ಲುವ ಅಗತ್ಯವಿಲ್ಲ. ಇದೇ ಬಗೆಯ ಸಣ್ಣಪುಟ್ಟ ಸ್ಫೋಟಗಳ ಮೂಲಕ ಜನರು ಘಾಸಿಗೆ ಒಳಗಾಗುವಂತೆ ಮಾಡಿದರೆ ಸಾಕು. ಉಳಿದ ಕೆಲಸವನ್ನು ಭಾರತದ ರಾಜಕಾರಣಿಗಳು ಮತ್ತು ವಿಶ್ಲೇಷಕರು ಮಾಡುತ್ತಾರೆ' ಎಂದು ಉಗ್ರವಾದಿಯೊಬ್ಬ ಫೇಕಿಂಗ್ ನ್ಯೂಸ್ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾನೆ. (ಈ ಉಗ್ರವಾದಿಯ ಹೆಸರನ್ನು ಉಲ್ಲೇಖಿಸಿದರೆ ಕೋಮುವಾದಿ ಎಂಬ ಪಟ್ಟ ಪಡೆಯಬೇಕಾಗುತ್ತದೆ ಎಂದು ಈ ಜಾಲತಾಣವು ಹೆಸರನ್ನು ಬಳಸಿಲ್ಲ!)
'ಜನರನ್ನು ಕೊಲ್ಲುವ ಮೂಲೋದ್ದೇಶದಿಂದ ನಾವೇನೂ ವಿಚಲಿತರಾಗಿಲ್ಲ. ಆದರೂ ವೆಚ್ಚಕ್ಕೆ ತಕ್ಕ ಫಲಿತಾಂಶ ಸಿಗುವ ಮಾರ್ಗವನ್ನು ನಾವು ಆಯ್ದುಕೊಳ್ಳಲಿದ್ದೇವೆ. ಹೆಚ್ಚಿನ ಜನರನ್ನು ಕೊಲ್ಲುವುದಕ್ಕೆ ನಾವು ಆತ್ಮಹತ್ಯಾ ಬಾಂಬರ್ಗಳನ್ನು ಗಡಿಯಾಚೆಯಿಂದ ಕರಸಿಕೊಳ್ಳಬೇಕಾಗುತ್ತದೆ. ಹಣದುಬ್ಬರದ ಬಿಸಿ ಭಯೋತ್ಪಾದನೆಯನ್ನೂ ತಟ್ಟಿರುವುದರಿಂದ ತರಬೇತು ಸುಲಭವಲ್ಲ. ಹೀಗಾಗಿ ಬೋಧ್ಗಯಾದಲ್ಲಿ ನಡೆಸಿದಂತೆ ಸಣ್ಣಮಟ್ಟದ ಸ್ಫೋಟ ಕೈಗೊಂಡು ಜನರಲ್ಲಿ ಗೊಂದಲ ಬಿತ್ತಲಾಗುವುದು' ಎಂದು ಉಗ್ರವಾದಿ ವಕ್ತಾರ ಹೇಳಿದ್ದಾನೆ.
ಮುಂದುವರಿದು ವಿವರಣೆ ನೀಡಿರುವ ಆತ- 'ಉಗ್ರವಾದಿ ಕೃತ್ಯದಲ್ಲಿ ಹೆಚ್ಚಿನ ಮಂದಿ ಪ್ರಾಣ ಕಳೆದುಕೊಂಡರೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ರಾಜಕಾರಣಿಗಳು ಆ ನಿಟ್ಟಿನಲ್ಲಿ ಹೇಳಿಕೆ ಕೊಡುವುದಕ್ಕೆ ಹಿಂಜರಿಯುತ್ತಾರೆ. ಜನರ ಆಕ್ರೋಶವನ್ನು ಎದುರಿಸಬೇಕಾದ ಭಯ ಹುಟ್ಟಿ ನಾಲಗೆ ಬಿಗಿ ಹಿಡಿದುಕೊಳ್ಳುತ್ತಾರೆ. ಆದರೆ ಕಡಿಮೆ ತೀವ್ರತೆ ಬಾಂಬ್ ಸ್ಫೋಟವಾದಾಗ ವಿರೋಧಿ ಗುಂಪುಗಳೆಲ್ಲ ಪರಸ್ಪರ ವ್ಯತಿರಿಕ್ತವಾದ ಹೇಳಿಕೆಗಳನ್ನು ಎಗ್ಗಿಲ್ಲದೆ ಒಗಾಯಿಸುತ್ತಾರೆ. ಇದರಿಂದ ಭಾರತೀಯ ಸಮಾಜದಲ್ಲಿ ಗೊಂದಲ ಉಂಟಾಗಿ ಎಲ್ಲರ ಮೇಲೂ ಅನುಮಾನ ಶುರುವಾಗುತ್ತದೆ. ಅತಿ ಕಡಿಮೆ ಬೆಲೆ ತೆತ್ತು ಭಾರತವನ್ನು ಅಸ್ಥಿರ- ಅಸ್ತವ್ಯಸ್ತ ಸಮಾಜವನ್ನಾಗಿಸುವ ಉಪಾಯ ಎಷ್ಟೊಂದು ಸರಳವಾಗಿದೆ' ಎಂದು ಉಗ್ರವಾದಿಯು ಚಿಕ್ಕ ಸ್ಫೋಟದ ದೊಡ್ಡ ಲಾಭಗಳನ್ನು ಬಿಚ್ಚಿಟ್ಟಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

