ಅಂಕಣಗಳು

ಪುರಾಣಿ ಪೋಡು ಸೋಲಿಗರ ಪಾಡು

Published On :

ದೇಶದಲ್ಲೇ ಎರಡನೆ ಅತಿ ಶುಷ್ಕಪ್ರದೇಶ ಕರ್ನಾಟಕ. ಮೊದಲನೆಯದು ರಾಜಸ್ಥಾನ. ಹಾಗೆಯೇ ರಾಜಧಾನಿಗೆ ಹತ್ತಿರವಿದ್ದರೂ ದೂರವಾಗಿ ಉಳಿದಿರುವ ಅತಿ ಹಿಂದುಳಿದ ಜಿಲ್ಲೆ ಚಾಮರಾಜನಗರ. ಅಲ್ಲಿ ಸೌಲಭ್ಯಗಳಿಂದ ಸತತವಾಗಿ ವಂಚಿತರಾದ ಜನರಿದ್ದಾರೆಂದರೆ ಆಶ್ಚರ್ಯವಾಗಬಹುದು.
ನಾನು ಇತ್ತೀಚೆಗೆ 'ಸೋಲಿಗರಿಂದ ಚುನಾವಣೆ ಬಹಿಷ್ಕಾರ' ಎಂಬ ಪತ್ರಿಕಾ ವರದಿ ಓದಿ ವಿಚಲಿತನಾದೆ. ಬಹುಶಃ ದಿನಾಂಕ ಮೇ 5 ರಂದು ನಡೆದ ಚುನಾವಣೆ ನಡೆಯದಿದ್ದರೆ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನಾಂಗದ ಸೋಲಿಗರಿರುವ ಪುರಾಣಿ ಪೋಡು ಹೊರ ಜಗತ್ತಿನ ನಾಗರಿಕರಿಗೆ ಗೋಚರವಾಗುತ್ತಲಿರಲಿಲ್ಲ. ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಅನಾದಿ ಕಾಲದಿಂದಲೂ ಸೋಲಿಗರು ವಾಸವಿದ್ದಾರೆ. ಹಾಲಿ ಈ ಪೋಡಿನಲ್ಲಿ 115 ಕುಟುಂಬಗಳಿವೆ. ನಾಲ್ಕು ತಿಂಗಳ ಹಿಂದೆಯಷ್ಟೇ ಆ ಪೋಡಿನೊಳಗೆ ಓಡಾಡಿ ಬಂದಿದ್ದೆ. ಆಗತಾನೆ ಆನೆ ಘೀಳಿಗೆ ಸಿಕ್ಕಿ ಕೈಮುರಿದು ಕೊಂಡು ತಮಿಳುನಾಡಿನ ತಾಳವಾಡಿಯಲ್ಲಿ ಕೈಗೆ ಪಟ್ಟು ಹಾಕಿಸಿಕೊಂಡು ಬಂದಿದ್ದ ಸಿದ್ದೇಗೌಡ ಹೇಳಿದ ಮಾತು ನೆನಪಾಯ್ತು. 'ನಾವ್ಯಾಕೆ ಇಲ್ಲಿ ಹುಟ್ಬಿಟ್ವೊ ಗೊತ್ತಿಲ್ಲ. ಈ ಕಾಡಿನಲ್ಲಿ ಮಕ್ಕಳು ಮರಿ ಸಾಕೋದು ತುಂಬಾ ಕಷ್ಟ. ನಮ್ಮಂತವರಿಗೂ ಕಾಡು ಪ್ರಾಣಿಗಳಿಂದ ತಪ್ಪಿಸ್ಕೊಂಡು ಬದ್ಕೋದು ಸಾಕಾಗಯ್ತೆ. ನೋಡಿ ಸ್ವಾಮಿ ಆ ನಂಜಮ್ಮನಿಗೂ ಆನೆ ಎತ್ತಿ ಬಿಸಾಕ್ಬಿಟ್ಟು ಹತ್ತು ವರ್ಷ ಆಯ್ತು. ಕೈ ಕಾಲಿಲ್ದೆ ಸತ್ತ ಹೆಣದಂಗೆ ಒಂದ್ಕಡೆ ಬಿದ್ದವ್ಳೆ. ನಮ್ಜನ ಕೂಲಿ ಕಂಬ್ಳ ಮಾಡೋಕೆ ಓಯ್ತರೆ. ಗಂಡಾಳು ಹೆಣ್ಣಾಳು ಮೂರ್ಕಾಸು ಆರ್ಕಾಸು ದುಡಿಯೋಕೆ ಅಂತ ಹೋದವ್ರು ಹಿಂದಕ್ಕೆ ಬರೋದು ಗ್ಯಾರಂಟಿ ಇಲ್ಲ. ಇನ್ನು ಮುದುಕ್ರು ಮೋಟ್ರು ಕತೆ ಕೇಳ್ಬೇಡಿ! ಗತಿ ಇಲ್ದಂಗಾಗವ್ರೆ. ಸ್ವಾಮಿ, ನೋಡಿ ಇವ ದೊಡ್ಡ ನಂಜೇಗೌಡ. ನಮ್ಮ ಸೋಲಿಗರಲ್ಲೇ ಚೆನ್ನಾಗಿ ಬಾಳಿ ಬದುಕಿದ ಮನುಷ್ಯ ನೋಡಿ ಹೆಂಗಾಗವ್ನೆ... ಅವ್ನೆಂಡ್ತಿ ರಂಗಮ್ಮ ಕಾಯಿಲೆಯಿಂದ ನರಳ್ತಾ ಅವ್ಳೆ...' ಅಂದ.
ನಾನು ಅವ್ರಿದ್ದ ಜೋಪಡಿಯ ಹೊರಗೆ ಚಪ್ಪಲಿ ಬಿಟ್ಟು, ಒಳಹೊಕ್ಕಿ ನೋಡಿದರೆ ಗವ್ವೆನ್ನುವ ಕತ್ತಲಿನ ಒಂದು ಕೊಠಡಿ ಮನೆ. ನೇತುಬಿದ್ದ ಚಿಂದಿ ಬಟ್ಟೆ, ಸೌದೆ ಒಲೆ ಮುಂದೆ ಹರಡಿದ ನಾಲ್ಕೈದು ಪಾತ್ರೆ ಲೋಟ, ಒಂದು ಸಣ್ಣ ಪೆಟ್ಟಿಗೆ, ಎಂದೂ ಸುಣ್ಣ ಕಾಣದ ಒಳಗೋಡೆ. ನನ್ನ ಕ್ಯಾಮರಾ ಪ್ಲಾಶ್ ಆದಾಗ ಮಾತ್ರ ಇದೆಲ್ಲ ಕಣ್ಣಿಗೆ ಕಾಣಲು ಸಾಧ್ಯವಾಯ್ತು. ಗುಹೆಯಂತಿರುವ ಈ ಕಿರುಮನೆಯಲ್ಲಿ ಮುದುಕ ಮುದುಕಿ ಎರಡು ಮೂರು ತಿಂಗಳಿಗೊಮ್ಮೆ ಬರುವ ವೃದ್ಧಾಪ್ಯವೇತನ ನಂಬಿ ಕಾಲ ಹಾಕುವುದನ್ನು ನೋಡಿ ಕರುಳು ಕಿತ್ತು ಬರುವಂತಾಯ್ತು. ಅವರ ಚರಾಸ್ತಿಗೆ ಯಾರೂ ಹತ್ತು ರೂಪಾಯಿ ಕೊಡುವುದಿಲ್ಲ. ಆಸ್ತಿ ಪಾಸ್ತಿ ಹೋಗಲಿ ಜೀವನೋಪಾಯಕ್ಕೆ ಯಾವುದೇ ದಿಕ್ಕಿಲ್ಲದವರಾಗಿದ್ದಾರೆ. ದೊಡ್ಡನಂಜೇಗೌಡ ತನ್ನ ವಯಸ್ಸಿನಲ್ಲಿ ತಾನು ದುಡಿದು ತಂದದ್ದನ್ನು ತನ್ನ ಕುಟುಂಬಕ್ಕಲ್ಲದೆ ಊರಿನ ಯಾವುದೇ ಕುಟುಂಬದವರು ಒಲೆ ಹಚ್ಚಿಲ್ಲ ಅಂತ ಗೊತ್ತಾದ್ರೆ ಅವ್ರಿಗೆ ತನ್ನಲ್ಲಿರುವುದನ್ನೆಲ್ಲಾ ಕೊಟ್ಟು ಸಲಹುತ್ತಿದ್ದುದನ್ನು ಸ್ಮರಿಸುತ್ತಾರೆ. ಪುಣ್ಯಾತ್ಮ ನಮ್ಮನ್ನ ಸಾಕಿದ್ದಾನೆ ಅಂತಾರೆ. ಆದರೆ ಇವತ್ತು ಅಂಥಹ ಪರೋಪಕಾರಿ ತ್ಯಾಗಿಯ ಗತಿ ಚಿಂತಾಜನಕವಾಗಿದೆ. ರಾಗಿ ತಂದು ತಾನೇ ರಾಗಿ ಬೀಸೊ ಕಲ್ಲಲ್ಲಿ ರಾಗಿ ಬೀಸಿ ಹಿಟ್ಟು ಮಾಡಿ ಹೆಂಡತಿ ಸಾಕುತ್ತಿದ್ದಾನೆ. ಈ ಪೋಡಿನವರು ಯಾರಾದರೂ ಆರೋಗ್ಯ ಕೆಟ್ಟರೆ ಎಂಟು ಕಿಲೋಮೀಟರ್ ದೂರದ ಬೆಟ್ಟಹತ್ತಿ ಹೋಗಿ ಇಲಾಜು ಮಾಡಿಕೊಳ್ಳಬೇಕು. ಯಾರಾದರೂ ಹುಷಾರು ತಪ್ಪಿದರೆ ಇಬ್ಬರು ಹೊತ್ತುಕೊಂಡು ಬೆಟ್ಟದ ಆಸ್ಪತ್ರೆಗೆ ಹೋಗಬೇಕು.
ಆ ಜನರ ಬಡತನದ ಬದುಕಿನ ಬವಣೆ ಏನೆಂದು ನೋಡಿ ತಿಳಿಯಬೇಕಷ್ಟೆ. 55 ಕುಟುಂಬಕ್ಕೆ ಮಾತ್ರ ಒಂದೆರಡು ಎಕರೆ ಬೆಜ್ಜಲು ಜಮೀನಿದೆಯಷ್ಟೆ. ರಾಗಿ ಜೋಳ ಮಳೆ ಬಿದ್ದರೆ ಆಗುತ್ತೆ. ಹಂದಿ ಆನೆಗಳು ಹಾಳು ಮಾಡದಿದ್ದರೆ ಉಳಿದದ್ದು ಮಾತ್ರ ಅವರ ಪಾಲಿಗೆ. ಉಳಿದವರು ಕೂಲಿ ಕಂಬಳಕ್ಕಾಗಿ 6-7 ಕಿ.ಮೀ ದೂರದ ಹಳ್ಳಿಗಳಿಗೆ ಹೋಗಿ ಬರಬೇಕು. ಕಾಡುದಾಟಿ ಪ್ರತಿದಿನ ಹೋಗಿ ಬರಲು ಆಗುವುದಿಲ್ಲ. ಅದಕ್ಕಾಗಿ ಕೆಲಸ ಸಿಕ್ಕಿರುವ ಊರಿನಲ್ಲೆ ಬೀಡು ಬಿಡುತ್ತಾರೆ. ವಿದ್ಯಾವಂತರಾದವರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಉದ್ಯೋಗ ಪಡೆದುಕೊಂಡು ತಕ್ಕಮಟ್ಟಿನ ಜೀವನ ಸಾಗಿಸುವುದನ್ನು ಬಿಟ್ಟರೆ ಉಳಿದವರಲ್ಲಿ ಉದ್ದೇಶಿತ ಪ್ರಮಾಣದ ಅಭಿವೃದ್ಧಿ ಕಾಣಬೇಕಿದೆ.
ಒಂದು ವಾರದ ಹಿಂದೆಯಷ್ಟೆ ಗಾಣಿಗ ಮಂಗಲದ ಗಂಗಮ್ಮನಿಗೆ 2ಲಕ್ಷ ರು. ಪರಿಹಾರ ಧನ ತಲುಪಿಸಿದ್ದೇವೆಂದು ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿಗಳಿಂದ ಸುದ್ದಿ ತಿಳಿದೆ. ಅದು ಅಷ್ಟು ಸುಲಭದಲ್ಲಿ ನೆರವೇರಿದ್ದಲ್ಲ. ಸರ್ಕಾರದಲ್ಲಿ ಸಂಬಂಧಪಟ್ಟವರ ಸಂಪರ್ಕ ಮಾಡಿ ಪತ್ರವನ್ನು ಬೆನ್ನು ಹತ್ತಬೇಕಾಯ್ತು. ಅಂದುಕೊಂಡಷ್ಟು ಶೀಘ್ರವಾಗಿ ಆಗದಿದ್ದರೂ ಆರು ತಿಂಗಳೊಳಗಾಗಿ ಗಂಗಮ್ಮನಿಗೆ ಎರಡು ಲಕ್ಷ ರೂಪಾಯಿ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಕೆಲಸ ಮಾಡಿದ ಪುಣ್ಯ ನಿಮಗೆ ಅಂತ ಬೊಮ್ಮಯ್ಯ ತಿಳಿಸಿದಾಗ ನನಗೂ ಸಮಾಧಾನವಾಯ್ತು.
ಅವಶ್ಯ ಆಹಾರ ಪದಾರ್ಥಗಳಾದ ಉಪ್ಪು, ಖಾರ, ಎಣ್ಣೆ ಏನು ಬೇಕಾದರೂ ಮೈಲಿಗಟ್ಟಲೆ ಕಾಡು ದಾಟಿ ಪಟ್ಟಣದಿಂದ ತಂದು ಅಡಿಗೆಮಾಡುವ ಪರಿಸ್ಥಿತಿ ಇವರದು. ಈ ವಿಷಯ ತಿಳಿದು ಅವರಿಗಾಗಿ ಒಂದು ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಿಕೊಡಲು ಸರ್ಕಾರದ ಮಟ್ಟದಲ್ಲಿ ನಾನೊಂದು ವೈಯಕ್ತಿಕ ಕೋರಿಕೆ ಸಲ್ಲಿಸಿದ್ದಾಯ್ತು. ಆದರೆ ಅದಕ್ಕೊಂದು ನಕಾರಾತ್ಮಕ ಉತ್ತರ ಬಂತೇ ಹೊರತು ಅವರಿಗಾಗಿ ಅಕ್ಕಿ ರಾಗಿ ಬೇಳೆ ಒದಗಿಸುವ ವ್ಯವಸ್ಥೆ ಆಗಲಿಲ್ಲ.
ಹೀಗೆ ಹತ್ತು ಹಲವು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳು ಜೀವನಾದ್ಯಂತ ಆವರಿಸಿಕೊಂಡು ಅನಿಶ್ಚಿತ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನರ ಬಗ್ಗೆ ಮನಕರಗುವ ಕಾಲ ದೂರವೇ ಉಳಿದಿದೆ. ನನಗಾದ ಆಶ್ಚರ್ಯವೆಂದರೆ ದಿನಾಂಕ 05.05.2013 ರಂದು ಪುರಾಣಿ ಪೋಡಿನ 380 ಸೋಲಿಗ ಮತದಾರರು ಮತಹಾಕಲು ಬಹಿಷ್ಕಾರ ಮಾಡಿದ್ದಾರೆಂಬ ಸುದ್ದಿ ಹೊರಬಿದ್ದಾಗ. ಜಿಲ್ಲೆಯ ಅಧಿಕಾರಿಗಳಿಂದ ಮನ ಒಲಿಸಲು ಸಾಧ್ಯವಾಗಲಿಲ್ಲವಂತೆ. ಹಾಗಾದ್ರೆ ಇದನ್ನು ಪ್ರತಿಭಟನೆಯ ಹಂತಕ್ಕೆ ದೂಡಿದವರ ಮೇಲಿನ ಆಕ್ರೋಶ ಎಂದು ಹೇಳಬಹುದು. ಅವರು ತಮಗಾಗಿರುವ ನೋವನ್ನು ಈ ರೀತಿ ತೋರಿಸಬಲ್ಲರೆಂದು ನನಗನಿಸಿರಲಿಲ್ಲ.  ಮುಗ್ಧ ಜನರೂ ಒಂದಿಲ್ಲೊಂದು ದಿನ ಸಿಡಿದೇಳುವರರು ಎಂಬುದಕ್ಕೆ ಇದು ನಿದರ್ಶನ. ಯಾರ ಗೋಜಿಗೂ ಬರದೆ ತಮ್ಮಷ್ಟಕ್ಕೆ ತಾವು ಕಾಡು ಜೀವನದಲ್ಲಿರುವ ಜನರನ್ನು ಉಳಿಸಿಕೊಳ್ಳುವ ನಾಗರಿಕ ಸ್ಪಂದನ ನಮ್ಮಲ್ಲಿ ಹುಟ್ಟಬೇಕಿದೆ.
ಚುನಾವಣೆ ಬಹಿಷ್ಕರಿಸಿದ ಸುದ್ದಿ, ಸುದ್ದಿಯಾಗಿಯೇ ಉಳಿಯಿತಷ್ಟೇ. ಆದರೆ ಇದರ ಆಂತರ್ಯವೇನೆಂದು ತಿಳಿಯುವ ಕುತೂಹಲ ಹುಟ್ಟಿತು. ಪುರಾಣಿ ಪೋಡಿನ ಮತಗಟ್ಟೆಗೆ ಸೇರಿದ ತಮ್ಮಡಿ ಮುತ್ತೇಗೌಡನ ಪೋಡು, ಬೆಜ್ಜಗಾಡ, ಗುಡ್ಡೆ ಊರು, ಎಂಟಟ್ಟಿ ಸಾಲು, ಸಿದ್ದನ ಗುಡ್ಡೆ, ಸಾಗರೆ ಗುಡ್ಡೆ, ಮತ್ತು ಬದ್ರನ ಗುಡ್ಡೆ, ಇವೆಲ್ಲ ಸೇರಿದರೆ 115 ಕುಟುಂಬಗಳಲ್ಲಿ 380 ಮತದಾರರಿದ್ದಾರೆ.  ಮತದಾನ ಕೇಂದ್ರಕ್ಕೆ ಒಬ್ಬರೂ ಬಂದು ಮತಹಾಕದಿರಲು ಕಾರಣ ಹಲವು. ಆ ಊರಿಗೆ ರಸ್ತೆ ಮಾಡಿಸಿಲ್ಲ, ವಿದ್ಯುತ್ ಇಲ್ಲ. ಚುನಾವಣೆ ಎರಡು ದಿನ ಇದೆ ಎನ್ನುವಾಗ ಸೋಲಿಗ ಮಹದೇವಮ್ಮ(55) ಆನೆ ಅಟ್ಟಿಸಿಕೊಂಡು ಬಂದಿದ್ದರಿಂದ ಬಿದ್ದು ಮಂಡಿ ಮುರಿದು ಮಂಡಿಚಿಪ್ಪು ಊನವಾಗಿ ಹೋಗಿದೆ. ಯಾರೂ ಕೇಳುವವರಿಲ್ಲದೆ ಗಿಡಮೂಲಿಕೆ ಔಷಧಿಗೆ ಮೊರೆ ಹೋಗಿ ಮೂಲೆ ಸೇರಿದ್ದಾಳೆ. 'ಕೊನೆ ಪಕ್ಷ ಓಟು ಕೇಳೋಕೂ ಯಾರು ಬರಲಿಲ್ಲ. ನಾವು ಅಷ್ಟು ನಿಕೃಷ್ಟವೆಂದು ಭಾವಿಸಿದ್ದಾರಾ? ಅಭ್ಯರ್ಥಿಗಳು ಯಾರು ಅಂತಾನೂ ನಮಗೆ ಗೊತ್ತಿಲ್ಲ. ಹಾಗಿದ್ಮೇಲೆ ನಾವ್ಯಾಕ್ ಮತ ಹಾಕ್ಬೇಕು' ಅಂತ ಅವರ ಮನವೊಲಿಸಲು ಯತ್ನಿಸಿದ ಅಧಿಕಾರಿಗಳಿಗೆ ಹೇಳಿ ಕಳಿಸಿದ್ದಾರೆ. ಅವರಿಗಿರುವ ಜಿಗುಪ್ಸೆ ಬೇಸರ ಎಷ್ಟಿರಬಹುದು ಎಂಬುದನ್ನು ಮನಗಾಣಬೇಕು.
ಸರ್ಕಾರದ ಉದ್ದೇಶಿತ ಯೋಜನೆಗಳನ್ನು ಜನರು ಒಪ್ಪಿ ಸಹಕರಿಸಬೇಕೆಂದರೆ ಅವರ ಕಷ್ಟ ಸುಖಗಳನ್ನು ಕೇಳುವ ಸಕ್ರಿಯವಾಗಿ ಪರಿಹರಿಸುವ ವ್ಯವಸ್ಥೆ ನಿರ್ಮಾಣವಾಗಬೇಕು. ಆಗ ಮಾತ್ರ Inclusive Development ಆಗಲು ಸಾಧ್ಯ. ಇಲ್ಲದಿದ್ದರೆ ಜನ ಬೇಸತ್ತು ತಿರಸ್ಕರಿಸುವುದು ನಿಶ್ಚಿತ ಎಂಬ ಕಾಡಿನ ಬುಡಕಟ್ಟು ಜನರು ಒಂದು ನಿರ್ದಿಷ್ಟ ಸಂದೇಶವನ್ನು ಚುನಾವಣೆ ಬಹಿಷ್ಕರಿಸುವುದರ ಮೂಲಕ ನಾಡಿನ ಸಮಾಜವನ್ನು ಜಾಗೃತಗೊಳಿಸಿದ್ದಾರೆ ಎನ್ನಬಹುದು. ಎಲ್ಲಕ್ಕೂ ಮಿಗಿಲಾಗಿ ಗಾಂಧೀಜಿಯವರು ಅನುಸರಿಸಿದ ಸತ್ಯಾಗ್ರಹವನ್ನು, ಅಹಿಂಸಾ ಮಾರ್ಗದ ಮೂಲಕ ಬುಡಕಟ್ಟಿನ ಜನರು ಪ್ರದರ್ಶಿಸಿದ್ದನ್ನು ಪ್ರಶಂಸಿಸಬೇಕನಿಸುತ್ತದೆ.

- ಡಾ. ಬಿ.ಎಸ್. ಕೃಷ್ಣಪ್ರಸಾದ್ ಸದಸ್ಯರು,
ಕರ್ನಾಟಕ ಲೋಕಸೇವಾ ಆಯೋಗ
krishnaprasadz@yahoo .co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.