ಅಂಕಣಗಳು

ಶೌಚಾಲಯ ಜಾಗೃತಿ ಬರೀ ಘೋಷಣೆಯಿಂದ ಆಗದು

Published On :

ಜುಲೈ1ರ ಕನ್ನಡಪ್ರಭ ಪತ್ರಿಕೆಯ ಪುಟ 8ರಲ್ಲಿ ಪ್ರಕಟವಾದ '2022ಕ್ಕೆ ಬಯಲು ಶೌಚಾಲಯ ಮುಕ್ತ ರಾಜ್ಯ' ಎಂಬ ವರದಿಯ ಕುರಿತು ನನ್ನ ಪ್ರತಿಕ್ರಿಯೆ.
ಶೌಚಕ್ಕಾಗಿ  ಮಹಿಳೆಯರು ಸೂರ್ಯಾಸ್ತ ತನಕ ಕಾಯಬೇಕು. ಇಲ್ಲವೆ ಸೂರ್ಯೋದಯದ ಮುನ್ನ ಶೌಚ ಮುಗಿಸಿಕೊಳ್ಳಬೇಕು. ಇಲ್ಲವೇ ಊರ ಹೊರಗಿನ ಜಾಲಿಕಂಟಿಗಳ ಹಿಂದೆ ಅಂಜುತ್ತ ಕುಳಿತುಕೊಳ್ಳಬೇಕು. ಪುರುಷರು ಆ ಮಾರ್ಗದಲ್ಲಿ ಬಂದರೆ ತಲೆ ಬಾಗಿಸಿಕೊಂಡು ಎದ್ದು ನಿಲ್ಲಬೇಕು. ಇದು ಭಾರತದ ಅನೇಕ ಗ್ರಾಮಗಳ ಮಹಿಳೆಯರ ಪರಿಸ್ಥಿತಿ.
ಇಂಥ ಅವಮಾನದಿಂದ ಮಹಿಳೆಯರನ್ನು ಮುಕ್ತಗೊಳಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಬಯಲು ಶೌಚ ಮುಕ್ತ ಗ್ರಾಮಗಳನ್ನು ಮಾಡಲು ಯೋಚಿಸಿದೆ. ಇದಕ್ಕಾಗಿ 920 ಕೋಟಿ ರುಪಾಯಿಗಳ ವೆಚ್ಚದಲ್ಲಿ 10 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಚಿಂತಿಸಿದೆ. 2022ಕ್ಕೆ ಅಲ್ಲ 2222 ಆದರೂ ರು. 920 ಕೋಟಿ ರುಪಾಯಿಗಳನ್ನು ದ್ವಿಗುಣಗೊಳಿಸಿದರೂ ಈ ಮೇಲಿನ ಪರಿಸ್ಥಿತಿ ಬದಲಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನಾನು ಸರ್ಕಾರದ ಯೋಜನೆಗಳನ್ನು ದೂಷಿಸುತ್ತಿಲ್ಲ. ಆದರೆ ಕೆಲವು ಯೋಜನೆಗಳು ಅನುಷ್ಠಾನವಾಗುವಲ್ಲಿ ಎಡವಿವೆ. ಅದರಲ್ಲಿ ಶೌಚಾಲಯ ನಿರ್ಮಾಣವೂ ಒಂದು. ಈ ಕುರಿತ ವೈಯಕ್ತಿಕ ಗ್ರಹಿಕೆ ಮತ್ತು ಈ ವಿಷಯವಾಗಿ ಕೆಲವರನ್ನು ವಿಚಾರಿಸಿದಾಗ ಕಂಡು ಬಂದ ಅಂಶಗಳು ಹೀಗಿವೆ.
ಒಂದು ಮನೆಯವರು ಸರ್ಕಾರದ ಅನುದಾನದಿಂದ ಶೌಚಾಲಯ ಕಟ್ಟಿಸಿಕೊಳ್ಳಬೇಕಾದರೆ ಮೊದಲು ಪಂಚಾಯ್ತಿಗೆ ಹೋಗಿ ವಿಚಾರಿಸಬೇಕು. ಅಲ್ಲಿ ಸರಿಯಾದ ಮಾಹಿತಿಯನ್ನು ಕೊಡುವುದಿಲ್ಲ. ಒಂದು ವಾರ ಅಲೆದಾಡಿಸಿದ ನಂತರ ಮಾಹಿತಿ ಒದಗಿಸುತ್ತಾರೆ. ಶೌಚಾಲಯ ಕಟ್ಟಿಕೊಳ್ಳಬೇಕಾದರೆ ಮೊದಲು ಕಟ್ಟಿಸಿಕೊಳ್ಳುವವರೇ ಹಣವನ್ನು ಖರ್ಚು ಮಾಡಬೇಕು. ನಂತರ ಕಟ್ಟಿಸಿದ ಶೌಚಾಲಯದ ಫೋಟೋ ಮತ್ತು ಖರ್ಚಾದ ಹಣದ ವಿವರವನ್ನು ಒದಗಿಸಬೇಕು. ನಂತರ ಆ ಹಣ ಬರಲು ಆರು ತಿಂಗಳಾದರೂ ಬೇಕಾಗುತ್ತದೆ. ಸರ್ಕಾರದಿಂದ ಬಂದ ಅನುದಾನವನ್ನು ಫಲಾನುಭವಿಗಳಿಗೆ ಕೊಡಲು ಪಂಚಾಯ್ತಿ ಕಡೆಯಿಂದ ಹಣವನ್ನು ಕೇಳಲಾಗುತ್ತದೆ. ಕೊಡದಿದ್ದರೆ ಅನುದಾನವನ್ನು ಕೊಡುವುದಿಲ್ಲ. ವೃಥಾ ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ. ಅದಕ್ಕೂ ಮೊದಲು ಆದಾಯ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ದಾಖಲೆಗಳಿಗಾಗಿ ತಹಸೀಲ್ದಾರ್ ಕಚೇರಿಗೆ ಅಲೆಯಬೇಕಾಗುತ್ತದೆ. ಇಷ್ಟೆಲ್ಲ ರಗಳೆ ಬೇಡ ಎಂದು ಶೌಚಾಲಯ ಕಟ್ಟಿಸಿಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಅಷ್ಟಕ್ಕೂ ಹಳ್ಳಿಯಲ್ಲಿರುವ ಜನರಿಗೆ ಶೌಚಾಲಯ ಕಟ್ಟಿಸಿಕೊಳ್ಳುವುದರಿಂದ ಅನುಕೂಲಗಳಾಗಲಿ ಅಥವಾ ಬಯಲು ಶೌಚಾಲಯದಿಂದ ಆಗುವ ಆರೋಗ್ಯ ಸಂಬಂಧಿತ ತೊಂದರೆಗಳಾಗಲಿ ಇವುಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಇನ್ಫೋಸಿಸ್ ಫೌಂಡೇಷನ್ ವತಿಯಿಂದಲೂ ಶೌಚಾಲಯ ಕಟ್ಟಿಸಿಕೊಳ್ಳುವವರಿಗೆ ಧನಸಹಾಯ ಮಾಡಲಾಗುತ್ತದೆ. ಆದರೆ ಮೊದಲು ಫಲಾನುಭವಿಗಳು ಹತ್ತು ಸಾವಿರ ರುಪಾಯಿಗಳನ್ನು ಡೆಪಾಸಿಟ್ ಇಡಬೇಕು.
ಸರ್ಕಾರದ ಯೋಜನೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಯೋಜನೆಗಳು, ಗುರಿ, ಉದ್ದೇಶಗಳು ಒಳ್ಳೆಯವೇ ಆಗಿವೆ. ಆದರೆ ಅನುಷ್ಠಾನದ ವಿಧಾನದಲ್ಲಿ ಸ್ವಲ್ಪ ಅಡಚಣೆಯಾಗಿದೆ. ಅದೇನೆಂದರೆ ಸರ್ಕಾರವು ಸೂಚಿಸುವ ಫಲಾನುಭವಿಗಳು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಹೆಚ್ಚೂ ಕಡಿಮೆ ಬಿಪಿಎಲ್ ಕಾರ್ಡ್ ಹೊಂದಿದವರೆಂದರೆ ಕೂಲಿ ಮಾಡುವ ಜನರು. ದಿನವೂ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಶ್ರಮ ಪಡುವ ಜನರು ಇನ್ನೂ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡಿ ಶೌಚಾಲಯ ಕಟ್ಟಿಸಿಕೊಂಡು ಅದಕ್ಕೆ ಬರುವ ಅನುದಾನವನ್ನು ಪಡೆಯಲು ಅಲ್ಲಿ ಇಲ್ಲಿ ಅಲೆದಾಡಲು ಇಷ್ಟಪಡುವುದಿಲ್ಲ ಆದೂ ತಮ್ಮ ದುಡಿಮೆಯನ್ನು ಬಿಟ್ಟು. ಹೀಗಾಗಿ ಈ ಶೌಚಾಲಯದ ಯೋಜನೆ ಸಫಲವಾಗುತ್ತಿಲ್ಲ.  ನಿಜವಾಗಲೂ ನಮ್ಮ ರಾಜ್ಯ '2022ಕ್ಕೆ ಬಯಲು ಶೌಚಾಲಯ ಮುಕ್ತ ರಾಜ್ಯ'ವಾಗಬೇಕಾದರೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕೆಂದು ನನ್ನ ಅನಿಸಿಕೆ.
-ಮೊದಲು ಬಯಲು ಶೌಚಾಲಯದಿಂದ ಆಗುವ ಆರೋಗ್ಯ ಸಂಬಂಧಿತ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಬೇಕು.
-ಹಾಗೆಯೇ 90ರ ದಶಕದಲ್ಲಿ ಸರ್ಕಾರವೇ ಪ್ರತಿ ಮನೆಯ ಸಮೀಕ್ಷೆ ಮಾಡಿ, ಸ್ಥಳವನ್ನು ಗುರ್ತಿಸಿ, ಶೌಚಾಲಯಗಳನ್ನು ನಿರ್ಮಾಣ ಮಾಡಿ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಅದರಂತೆ ಈಗ ಈ ಕಾರ್ಯವನ್ನು ನರೇಗಾ ಯೋಜನೆಯಡಿ ಅಳವಡಿಸಿದರೆ ಶೌಚಾಲಯ ನಿರ್ಮಾಣದ ಜೊತೆಗೆ ಜನರಿಗೆ ಉದ್ಯೋಗವನ್ನು ಒದಗಿಸಿದಂತಾಗುತ್ತದೆ. ಕೇವಲ ಅನುದಾನ ಕೊಟ್ಟರೆ ಸಾಲದು.
ಈ ಮೇಲಿನ ಎರಡು ಅಂಶಗಳನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತರಾದರೆ ನಮ್ಮ ರಾಜ್ಯ ಬಯಲು ಶೌಚಾಲಯಮುಕ್ತ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಆಗ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಿ ಎಲ್ಲರೂ ಆರೋಗ್ಯಯುತ ಜೀವನ ಸಾಗಿಸಬಹುದು.

- ಅಂಬಮ್ಮ ಪ್ರತಾಪ್‌ಸಿಂಗ್
ರಾಯಚೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.