ತಿದ್ದದ ಬುದ್ಧಿಜೀವಿಗಳು ಗುರು ಸ್ಥಾನದಲ್ಲಿ ಹೇಗೆ ನಿಂತಾರು?
ಬುದ್ಧಿ ಹೇಳದ ತಂದೆ/ ಬಿದ್ದಿರಲು ಬಾರದ ತಾಯಿ
ಕದ್ದಾಗ ಎದ್ದೊದೆಯದ ಗುರುವು ತಾ
ಬದುಕಿದ್ದು ಸತ್ತಂತೆ/ ಗುರುಸರ್ವಜ್ಞ
ಗುರುಸರ್ವಜ್ಞ ಪ್ರೇರಿತ ಈ ತ್ರಿಪದಿಯ ವಚನದ ತಿರುಳು ಏನೆಂದರೆ ಮಗ ತಪ್ಪನ್ನು ಎಸಗಿದರೆ ತಂದೆ ತಿಳಿಹೇಳುತ್ತಾನೆ. ಮತ್ತೊಮ್ಮೆ ತಪ್ಪನ್ನು ಮಾಡಿದರೆ ಕೂಡಲೇ ದಂಡಿಸಿ ಸರಿ ದಾರಿಗೆ ತರುತ್ತಾನೆ. ಹಾಗೇ ಗುರುವು ಸಹ. ಇದು ಪ್ರಪಂಚದ ಯಾವುದೇ ಮೂಲೆಯಲ್ಲೂ ಕಂಡುಬರುವ ಲೋಕ ನೀತಿ ಸಾರುವ ವರ್ತನೆ. ಕಾರಣ ಸ್ಪಷ್ಟ ಅವರಿಗೆ ತನ್ನ ಮಗ ಹಾಗೂ ತನ್ನ ಶಿಷ್ಯನೆಂಬ ಸ್ವಾರ್ಥ, ಅನುಕಂಪ, ಹೊಣೆಗಾರಿಕೆ, ಪ್ರೀತಿ ಎಲ್ಲವೂ ಆಗಿರುತ್ತದೆ. ಆದರೆ ಆ ಮಗು ಪದೇ ಪದೆ ತಪ್ಪನ್ನು ಎಸಗಿ ಲೋಕ ಕಂಟಕನಾದರೂ ಅದನ್ನು ಮೌನವಾಗಿ ಸಹಿಸಿಕೊಂಡು ಕೂರುವುದು ಆತನ ದುರ್ವರ್ತನೆಗಳಿಗೆ ಪರೋಕ್ಷವಾಗಿ ಪ್ರಚೋದಿಸಿ, ಬೆಂಬಲಿಸಿದಂತೆಯೇ ಸರಿ. ಇದು ಆ ತಂದೆ ಮತ್ತು ಗುರುಗಳಿಗೆ ಆ ಬಾಲಕನ ಮೇಲಿನ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಸೂಚನೆ.
ಭಾರತದಲ್ಲಿ ಮುಸಲ್ಮಾನರನ್ನು ಮುತುವರ್ಜಿ ವಹಿಸುವ ಪಾತ್ರ ನಿಭಾಯಿಸುತ್ತಿರುವುದು ಮಾತ್ರ ಜಾತ್ಯಾತೀತರೆಂಬ ಬುದ್ದಿಜೀವಿಗಳು, ಪ್ರಗತಿಪರರು ಮತ್ತು ಕೋಮು ಸೌಹಾರ್ಧ ಭೋದಿಸುವ ಮಹಾನ್ (!) ಚಿಂತಕರು. ಮತ್ತು ಕೆಲ ಪತ್ರಕರ್ತರು. ಜತೆಯಲ್ಲಿ ವೋಟ್ಬ್ಯಾಂಕ್ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು. ಇವರ ವರ್ತನೆಗಳು ಹೇಗಿರುತ್ತದೆ ನೋಡಿ. ಯಾವುದೇ ಒಂದು ಹಿಂದೂ ಸಂಘಟನೆಯಾಗಲಿ, ಹಿಂದೂವೇ ಆಗಲಿ ತನ್ನ ಮೇಲಾದ ಯಾವುದೇ ತೆರನಾದ ಆಕ್ರಮಣಕ್ಕೆ ಪ್ರತಿಕ್ರಿಯಿಸಿ ನಡೆದರೆ ಕೂಡಲೇ ಎಲ್ಲರೂ ಒಗ್ಗೂಡಿ ಕೇಸರಿ ಭಯೋತ್ಪಾದನೆ ಎಂದು ಎದೆ ಬಡಿದುಕೊಂಡು ಗೋಳಿಡುತ್ತಾರೆ, ಪ್ರತಿಭಟಿಸುತ್ತಾರೆ. ಆ ಮೂಲಕ ಹಿಂದೂಗಳು ಮತ್ತೊಮ್ಮೆ ಹೀಗೆ ವರ್ತಿಸದಿರಲಿ, ತಪ್ಪೆಸಗದಿರಲಿ ಎಂಬ ಕಾಳಜಿ ಮತ್ತು ಹೊಣೆಗಾರಿಕೆ ಪ್ರದರ್ಶಿಸುತ್ತಾರೆ. ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿಯಾದ ಸ್ಫೋಟ ಪ್ರಕರಣದಲ್ಲಿ ಆರ್ಎಸ್ಎಸ್ ಕೈವಾಡವಿದೆ ಎನ್ನುವ ಮೂಲಕ ಸಂಸದ ಎಚ್ ವಿಶ್ವನಾಥ್ ಅವರು ತಮಗಿರುವ ಹಿಂದೂಗಳ ಪರ ಮುಂಜಾಗ್ರತೆಯ ತುಡಿತವನ್ನು ತೋರಿದ್ದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಭಯೋತ್ಪಾದಕರ ಸಂಚಿನ ದಾಳಿಗಳು ಕಾಲಾನುಕ್ರಮವಾಗಿ ಬೆಂಗಳೂರೂ ಸೇರಿದಂತೆ ದೇಶದ ವಿವಿದೆಡೆ ಮರುಕಳಿಸುತ್ತಲೇ ಇವೆ. ಆದರೆ ಯಾವುದೇ ಸ್ವಯಂಘೋಷಿತ ಬುದ್ಧಿಜೀವಿಗಳಾಗಲಿ, ಚಿಂತಕರಾಗಲಿ ಅಥವಾ ಅಲ್ಪಸಂಖ್ಯಾತರನ್ನು ಓಲೈಸುವ ಪಿತೃಪಕ್ಷಗಳ ಮುಖಂಡರಾಗಲಿ ಮುಸ್ಲಿಂ ಭಯೋತ್ಪಾದನೆಯನ್ನು ಖಂಡಿಸಿದ್ದಾಗಲಿ, ಧಿಕ್ಕಾರ ಹಾಕಿದ್ದಾಗಲೀ 'ಬ್ಯಾಡ್ರಪ್ಪಾ ನಿಮಗಿದಲ್ಲಾ' ಎಂದು ಪ್ರತಿಭಟಿಸುವ ಹೇಳಿಕೆ ನೀಡಿದ್ದಾಗಲಿ ಕಂಡು ಬರುತ್ತಿಲ್ಲ.
ಹಿಂದೂಗಳು ತಪ್ಪೆಸಗಿದಾಗ ಮಾತ್ರ ಬಾಯಿಬಾಯಿ ಬಡಿದುಕೊಂಡು ಪ್ರತಿಕ್ರಿಯಿಸುವ ಇವರುಗಳು ಭೋಧಗಯಾದಲ್ಲಿ ದೇವಾಲಯದ ಮೇಲಿನ ಭಯೋತ್ಪಾದಕರ ದಾಳಿಯಾಗಿ ಮೂರು ದಿನಗಳು ಕಳೆದರೂ ಒಬ್ಬೇ ಒಬ್ಬ 'ಪಿತೃಪಕ್ಷ'ದವರು ಅಮಾನುಷ ಕೃತ್ಯವನ್ನು ಖಂಡಿಸಿ ಪ್ರತಿಭಟಿಸುವ ಹೊಣೆಗಾರಿಕೆ ತೋರದಿರುವುದು ಮಾತ್ರ ದುರಂತ. ಅದೇ ಈ ಕೃತ್ಯದಲ್ಲಿ ಒಬ್ಬೇ ಒಬ್ಬ ಹಿಂದೂ ವ್ಯಕ್ತಿಯ ಹೆಸರು ಇಣುಕಿದ್ದರೂ 'ಅಯ್ಯೋ ಬೌದ್ಧ ಧರ್ಮದ ದೇವಾಲಯದ ಮೇಲಿನ ದಾಳಿ ಅಂದರೆ ಅದು ಬೌದ್ಧ ಧರ್ಮದ ಮೇಲಿನ ದಾಳಿ. ಅಂದರೆ ಅದು ಡಾ. ಅಂಬೇಡ್ಕರ್ ಅವರ ಧರ್ಮದ ಮೇಲಿನ ದಾಳಿ. ಅಂದರೆ ಅದು ದಲಿತರ ಮೇಲಿನ ದಾಳಿ' ಎಂದು ಇಡೀ ದೇಶದ ದಲಿತ ಸಮುದಾಯವನ್ನೇ ಎತ್ತಿ ಕಟ್ಟಲಾಗುತ್ತಿತ್ತು. ಆಗ 'ಪಿತೃಪಕ್ಷ'ಗಳ ಬೇಳೆಯೂ ಬೆಂದು ಸೀಕಲಾಗುತ್ತಿತ್ತು.
ಪಾಪ..ಇವರಿಗೆ ಹಿಂದೂಗಳು ಎಂದೂ ದಾರಿ ತಪ್ಪಿ ನಡೆಯಬಾರದು, ನಡೆಯಕೂಡದು. ಮತ್ತು ಅದನ್ನು ಸಹಿಸುವುದೂ ಅಸಾಧ್ಯ. ಆದರೆ ಅದೇ ದಾರಿ ತಪ್ಪಿದ ಮುಸ್ಲಿಂ ಯುವಕರು ಯಾವುದೋ ಪೂರ್ವಗ್ರಹದ ಪೈಶಾಚಿಕ ಮನಸ್ಥಿತಿಗೆ ಬಲಿಯಾಗಿ ದೇಶದಾದ್ಯಂತ ಬಾಂಬುಗಳನ್ನಿಟ್ಟು ಮುಗ್ಧ ಅಮಾಯಕರನ್ನು ಕೊಲ್ಲುತ್ತಿದ್ದರೆ ಮಾತ್ರ ಇವರುಗಳ್ಯಾರೂ ಅದನ್ನು ವಿರೋಧಿಸುವ ಗುಣವನ್ನು ತೋರುತ್ತಿಲ್ಲ. ಅಂದರೆ ಹಿಂದೂಗಳು ಸದಾ ಸಂಭಾವಿತರಾಗಿ ಬದುಕಬೇಕು. ಆದರೆ ಹಾದಿತಪ್ಪಿದ, ಹಾದಿ ತಪ್ಪುತ್ತಿರುವ ಭಯೋತ್ಪಾದಕ ಮುಸ್ಲಿಮರೆಲ್ಲಾ ಕಂಳಂಕಿತರಾಗಿ ನೇಣುಗಂಬವೇರಿ ಸರ್ವನಾಶವಾಗಲಿ ಎಂಬ ಪರೋಕ್ಷ ಹಂಬಲ ಇವರದಾಗಿರುವುದು ಅನಾವರಣವಾಗುತ್ತಿದೆ.
ಇಂತಹ ಸೋಗಲಾಡಿಗಳ ಅಸ್ತಿತ್ವವಿರುವುದೇ ಅಲ್ಪಸಂಖ್ಯಾತರ ಹೀನಾಯ ಸ್ಥಿತಿಯ ಪಯಣದಲ್ಲಿ. ಇವರಿಗೆಲ್ಲಾ ಅಫ್ಜಲ್ ಗುರು, ಕಸಬ್ರಂತಹ ಹಾದಿ ತಪ್ಪಿದ ಮನಸ್ಸುಗಳ ಹಿಂದಿನ ನೋವು ಅರ್ಥವಾಗುತ್ತದೆ. ಅದು ಅವರು ನೇಣುಗಂಬದ ಸಮೀಪ ಬಂದು ನಿಂತಾಗ ಮಾತ್ರ. ದುರಂತವೆಂದರೆ ಕಾಫಿರ (ಮುಸ್ಲಿಮೇತರ ಧರ್ಮ) ರನ್ನು ಕೊಲ್ಲಿ ಎಂಬ ಮಂತ್ರವನ್ನು ಜಪಿಸುವ ಭಯೋತ್ಪಾದಕರು ಹಿಂದೂ ದೇವಾಲಯಗಳಲ್ಲದೆ ಡಾ. ಅಂಬೇಡ್ಕರ್ ಅವರು ಗೌರವಿಸಿ ಸ್ವೀಕರಿಸಿದ ಬೌದ್ಧಧರ್ಮದ ದೇವಾಲಯದ ಮೇಲೆಯೂ ದಾಳಿನಡೆಸಿ ಭಾರತದ ಬುದ್ದಿಜೀವಿಗಳಿಗಿಂತ ತಾವೇ ನಿಜವಾದ ಜಾತ್ಯತೀತರು ಎಂದು ಸಾಬೀತು ಪಡಿಸಿದ್ದಾರೆ. ರಾಷ್ಟ್ರಪತಿಯಾಗಿ ಡಾ. ಅಬ್ದುಲ್ ಕಲಾಮ್ರಂತಹ ಮುಸ್ಲಿಂ ಧರ್ಮದ ಮಹಾಶ್ರೇಷ್ಠರನ್ನು ಕೂರಿಸಿ ನಮ್ಮ ದೇಶವು ಧರ್ಮಾತೀತವಾದ ನಿಲುವನ್ನು ಜಗತ್ತಿಗೇ ತೋರಿದೆ. ಅದೂ ಹಿಂದೂ ಪಕ್ಷವೆಂಬ ಕಳಂಕ ಹೊಂದಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ. ಹೀಗಿರುವಾಗ ಪದೇ ಪದೆ ದಾಳಿ ನಡೆಸುತ್ತಿರುವ ಭಯೋತ್ಪಾದಕರು ಆ ಮೂಲಕ ಭಾರತದಲ್ಲಿನ ಮುಸ್ಲಿಂ ಭಾಂದವರಿಗೆ ಅವಮಾನಿಸುತ್ತಿದ್ದಾರಲ್ಲವೇ? ಇವುಗಳನ್ನು ನೋಡಿ ಪಿತೃಪಕ್ಷ ಜೀವಿಗಳು ಮೌನವಾಗಿರುವುದು ಮಾತ್ರ ಮೇಲಿನ ವಚನದಲ್ಲಿನ ಪಾತ್ರಕ್ಕೆ ನಿದರ್ಶನದಂತೆ ತೋರುತ್ತದಲ್ಲವೇ?
ಭಾರತದಲ್ಲಿ ಭಯೋತ್ಪಾದಕರ ದಾಳಿ ನಿರಂತರವಾಗಿ ಆಚರಣೆಯಲ್ಲಿರಬೇಕು. ಆಗ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುತ್ತಿರುಬೇಕು, ಇದರಿಂದ ಮುಸಲ್ಮಾನ ಸಮುದಾಯಕ್ಕೆ ಋಣಾತ್ಮಕ ಸಂದೇಶ ರವಾನೆಯಾಗಬೇಕು. ಅಲ್ಪಸಂಖ್ಯಾತ ಎಂಬ ಪದವು ಮಲೀನಗೊಳ್ಳುತ್ತಿರಬೇಕು, ಈ ಮಧ್ಯೆ ರಾಜಕಾರಣದ ತಪ್ಪಲೆ ಒಲೆಯ ಮೇಲೆ ಉರಿಯುತ್ತಿರಬೇಕು. ಈ ಚಕ್ರ ಭಾರತದಲ್ಲಿ ನಿರಂತರ ಸುತ್ತುತ್ತಲೇ ಇರಬೇಕು. ಇಂತಹ ಚಕ್ರಗಳ ಮೇಲೆ ದೇಶದ ರಾಜಕೀಯ ಸಾಗಬೇಕು. ಆದ್ದರಿಂದ ತೊಡೆಯ ಮೇಲಿನ ಕುರದಂತೆ ಕಾಡುತ್ತಿರುವ ಎಲ್ಲಾ ಕೋಮಿನ ಭಯೋತ್ಪಾದನೆಯನ್ನು ಜಾತ್ಯತೀತ ಮತ್ತು ಧರ್ಮಾತೀತವಾಗಿ ಖಂಡಿಸಿ ದೇಶದ ಪ್ರಜಾಪ್ರಭುತ್ವವನ್ನು ತನ್ನ ಮಗನಂತೆ, ತನ್ನ ಶಿಷ್ಯನಂತೆ ಕಾಣುವ ನೈತಿಕ ಹೊಣೆಗಾರಿಕೆಯನ್ನು ಎಲ್ಲರೂ ತೋರಬೇಕಿದೆ.
- ದೇ.ವಿ. ಮಹೇಶ್ವರಹಂಪಿ
athavaibhava1336@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

