ಹೀಗಾದರೆ ಸಾಮಾನ್ಯ ಕನ್ನಡಿಗನ ಸ್ಥಿತಿ ಏನು?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಬೆಂಗಳೂರಿನ ಮುಖ್ಯ ಅಂಚೆ ಕಚೇರಿಗೆ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಹೋಗಿದ್ದಾಗ ಅಲ್ಲಿನ ಕರ್ನಾಟಕ ಅಂಚೆ ವೃತ್ತದ ಪ್ರಧಾನ ಅಂಚೆ ಪ್ರಬಂಧಕಿ ಹಿಲ್ಡಾ ಅಬ್ರಾಹಂ ಅವರು ಚಂದ್ರು ಅವರ ಮೇಲೆ ಹರಿಹಾಯ್ದರೆನ್ನುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಮೊದಲಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಇಲಾಖೆಗಳು ಜನರಿಗೆ ಸರಿಯಾದ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ನಿರ್ಮಾಣವಾದುವುಗಳು. ಅಂಚೆ ಇಲಾಖೆ ಇರಬಹುದು ಅಥವಾ ರೈಲ್ವೆ ಇಲಾಖೆಯಿರಬಹುದು, ಅದರ ಮೂಲ ಉದ್ದೇಶ ಜನರಿಗೆ ಸಹಾಯವಾಗುವಂತೆ ಕೆಲಸ ಮಾಡುವುದಾಗಿರಬೇಕು. ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಕೇಂದ್ರ ಸರ್ಕಾರದ ಇಲಾಖೆಗಳು ಕೆಲಸ ಮಾಡುವ ಪರಿಯೇ ಇದು.
ಆದರೆ ಭಾರತದಲ್ಲಿ ಮಾತ್ರವೇ, ಕೇಂದ್ರ ಸರ್ಕಾರದ ಇಲಾಖೆಗಳು ಜನರ ಮೇಲೆ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾದ ಹಿಂದಿಯನ್ನು ಹೇರುವುದು ತಮ್ಮ 'ಪ್ರಯಾರಿಟಿ ಲಿಸ್ಟ್' ನಲ್ಲಿ ಇಟ್ಟುಕೊಂಡಿರುವುದು ಬಹಳ ಸಂದರ್ಭಗಳಲ್ಲಿ ನಮಗೆ ಗೋಚರವಾಗಿದೆ. ಮೊದಲಿಗೆ ಕೇಂದ್ರ ಸರ್ಕಾರಗಳು ಮಾಡಿಕೊಂಡು, ಪಾಲಿಸಿಕೊಂಡು ಬಂದಿರುವ ತ್ರಿಭಾಷಾ ಸೂತ್ರವಾದರೂ ಏಕೆ ಬೇಕಿದೆ? ಕನ್ನಡ ನೆಲದಲ್ಲಿ ಹಿಂದಿ ಭಾಷೆಯ ಬಳಕೆ ಯಾರ ಉಪಯೋಗಕ್ಕಾಗಿ?
ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವ ರಾಜ್ಯ ಸರ್ಕಾರದ ಸಂಸ್ಥೆಯ ಅಧ್ಯಕ್ಷರ ವಿರುದ್ಧವೇ ಕೇಂದ್ರ ಇಲಾಖೆಗಳು ಈ ರೀತಿ ಧೋರಣೆ ತಾಳಿದರೆ, ಜನ ಸಾಮಾನ್ಯರಿಗೆ ಈ ಕೇಂದ್ರ ಸರ್ಕಾರದ ಇಲಾಖೆಗಳಿಂದ ಯಾವ ನ್ಯಾಯ ದೊರೆಯಲು ಸಾಧ್ಯ?
ಭಾರತವು ಸರಿಯಾದ ಒಕ್ಕೂಟವಾಗಬೇಕೆಂದರೆ, ಈ ತ್ರಿಭಾಷಾ ಸೂತ್ರದಂತಹ ಅರ್ಥವಿಲ್ಲದ ಪದ್ಧತಿಗಳು ರದ್ದಾಗಬೇಕು. ಎಲ್ಲ ರಾಜ್ಯಗಳಲ್ಲಿಯೂ ತಂತಮ್ಮ ಭಾಷೆಗಳಿಗೆ ಮಾತ್ರ ಮಾನ್ಯತೆ ಸಿಗಬೇಕಿದೆ. ಇವತ್ತಿನ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ದಿನೇ ದಿನೇ ಹೆಚ್ಚುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ.
ಈಗಾಗಲೇ ತಮಿಳಿನಾಡು, ಒಡಿಶಾ, ಪಶ್ಚಿಮ ಬಂಗಾಳ ಮುಂತಾದ ರಾಜ್ಯದ ನಾಯಕರುಗಳು ಈ ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಂತ ಬೀಗುತ್ತಿರುವ ರಾಜಕಾರಣಿಗಳು ಇದರ ವಿರುದ್ಧ ದನಿ ಎತ್ತಬೇಕಿದೆ.
ಒಂದು ಕೇಂದ್ರ ಸರ್ಕಾರದ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಆಗಿಲ್ಲ ಅನ್ನುವ ಮಟ್ಟಿಗಷ್ಟೇ ಅಲ್ಲ, ಈ ಹಿಂದಿ ಹೇರಿಕೆಯ ದುಷ್ಪರಿಣಾಮಗಳು ಹರಡಿರುವುದು. ಕೇಂದ್ರ ಸರ್ಕಾರದಲ್ಲಿ ಕೆಲಸಗಳು ಸಿಗಬೇಕೆಂದರೆ ಹಿಂದಿಯ ಜ್ಞಾನ ಕಡ್ಡಾಯವಾಗಿದೆ. ಎಲ್ಲ ರಾಜ್ಯಗಳು ಕೇಂದ್ರಕ್ಕೆ ತೆರಿಗೆ ಕಟ್ಟಿದ್ದರೂ ನಮ್ಮನ್ನು ಮೂರನೇ ದರ್ಜೆಯ ಪ್ರಜೆಗಳಂತೆ ಕೇಂದ್ರ ಸರ್ಕಾರ ಮತ್ತದರ ಇಲಾಖೆಗಳು ನೋಡುವುದೇ ಆದರೆ, ನಾವು ನಿಜಕ್ಕೂ ಈ ಅಸಂಬದ್ಧ ಒಕ್ಕೂಟದಲ್ಲಿರಬೇಕೆ ಅನ್ನುವ ಪ್ರಶ್ನೆ ಕನ್ನಡಿಗರನ್ನು ಒಳಗೊಂಡಂತೆ ಎಲ್ಲ ಹಿಂದಿಯೇತರ ಭಾಷಿಕರಲ್ಲಿ ಮೂಡುವ ದಿನಗಳು ಬಂದರೆ ಆಶ್ಚರ್ಯವಿಲ್ಲ ಅನ್ನಿಸುತ್ತದೆ.
- ಅಮರನಾಥ ಶಿವಶಂಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

