ಅಂಕಣಗಳು

ರಿಕ್ಷಾಗಳಿಗೆ ಮೀಟರು ಎಲ್ಲೆಡೆ ತಕರಾರು

Published On :

ಬೆಳಗಾವಿಯಲ್ಲಿ ಪೊಲೀಸರು ಮತ್ತು ಆರ್‌ಟಿಓ ಅಧಿಕಾರಿಗಳು ಇನ್ನು ಮುಂದೆ ಕಡ್ಡಾಯವಾಗಿ ರಿಕ್ಷಾಗಳು ಮೀಟರ್ ಬಳಸಲೇ ಬೇಕು ಎಂದು ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಸೂಕ್ತ ಸಲಹೆ ನೀಡಿದ್ದಾರೆ. ಇದು ಮೊದಲನೆಯ ಪ್ರಕಟಣೆ ಅಲ್ಲ. ಇಂಥ ನಿರ್ಣಯಗಳು ಹಲವು ಸಲ ಈ ಮೊದಲು ಜಾರಿ ಆಗಿವೆ. ಆದರೆ ಸೂಕ್ತ ಅನುಷ್ಠಾನ ಮಾತ್ರ ಮರೀಚಿಕೆ. ಇರಲಿ, ಈ ಬಾರಿಯ ನಿರ್ಣಯ ವ್ಯವಸ್ಥಿತವಾಗಿ, ಕಟ್ಟುನಿಟ್ಟಾಗಿ ಜಾರಿಗೆ ಬರಲಿ ಎಂದೇ ಸಾಮಾನ್ಯ ನಾಗರಿಕರ ಬಯಕೆ.
ಇದೇ ಮಾದರಿಯ ನಿರ್ಣಯ, ಪ್ರಕಟಣೆ ಮತ್ತು ಒಂದೆರಡು ದಿನಗಳ ಮಟ್ಟಿನ ಆಚರಣೆ ನಮ್ಮ ಧಾರವಾಡ-ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಹಲವು ಸಲ ಬಂದು ಹೋಗಿದ್ದನ್ನು ನಾಗರಿಕರು ಕಂಡುಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ ಈ ನಿರ್ಣಯಕ್ಕೆ ಅಂದರೆ ಕಡ್ಡಾಯವಾದ ಮೀಟರ್ ಬಳಕೆ ಮತ್ತು ಯೋಗ್ಯ ಸಮವಸ್ತ್ರ ಆಟೋ ಚಾಲಕರಿಗೆ ಕಡ್ಡಾಯವಾಗಿತ್ತು. ಆಗ ಅಲ್ಲಲ್ಲಿ ಈ ಮೀಟರ್‌ಗಳ ರಿಪೇರಿ ಕೆಲಸ ಕೂಡಾ ಭರದಿಂದ ಸಾಗಿತ್ತು. ಒಮ್ಮೆ ಅಂತೂ ಮೀಟರ್ ಉಪಯೋಗಿಸಲು ನಿರಾಕರಿಸಿದ ಆಟೋ ನಂಬರು ಸಂಬಂಧಿಸಿದ ಪೊಲೀಸರಿಗೆ ತಿಳಿಸಿದರೆ ಅವರು ಆ ಆಟೋವನ್ನು ಹಿಡಿದು ತಂದು ಒಂದೆರಡು ದಿನ ಅಲ್ಲಿಯೇ ಕೂಡಿಹಾಕುತ್ತಿದ್ದರು. ಮತ್ತು ಆಟೋಚಾಲಕನಿಗೆ ದಂಡ ವಿಧಿಸುವ ಶಿಕ್ಷೆ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯೋಗ್ಯ ಮೀಟರ್ ಇಲ್ಲದ ವಾಹನಗಳೇ ಅಧಿಕವಾಗಿವೆ. ತೋರಿಕೆಗೆ ಮೀಟರ್ ಮಾದರಿಯ ಒಂದು ಡಬ್ಬಾ ಆಟೋಗಳಲ್ಲಿ ವಿರಾಜಿಸುತ್ತಿರುತ್ತದೆ. ಯಾವುದೇ ಸಮಯದಲ್ಲಿ ಯಾವುದೇ ಅಂತರಕ್ಕೆ ಆಟೋ ಇಲ್ಲದೆ ಅಲ್ಲಲ್ಲಿ ಹೋಗುವುದು ಬರುವುದು ಅಸಾಧ್ಯವಿದ್ದವರು ಆಟೋ ಚಾಲಕರು ಹೇಳಿದ ಬಾಡಿಗೆ ಕೊಡದೆ ಗತ್ಯಂತರವಿಲ್ಲ.
ಮೀಟರ್ ಕಡ್ಡಾಯ ಮಾಡಿ, ಪ್ರಿಪೇಡ್ ಕೌಂಟರುಗಳನ್ನು ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೇ ಸ್ಟೇಷನ್ ಹೊರಗಡೆ ಪ್ರಾರಂಭಿಸಿದರು ಸಂಬಂಧಿಸಿದ ಅಧಿಕಾರಿಗಳು. ಆದರೆ ಬಹಳ ದಿನಗಳಿಂದ ಅವು ಕಾರ್ಯನಿರ್ವಹಿಸದೆ ಖಾಲಿ ಡಬ್ಬಾ ಆಗಿ ನಿಂತಿವೆ. ಇತ್ತಿತ್ತಲಾಗಿ ರಿಕ್ಷಾವಾಲಾಗಳ ಉಪಟಳ ಮಿತಿ ಮೀರಿದೆ. ಹೆಂಗಸರು ಮತ್ತು ವೃದ್ಧರ ಶೋಷಣೆಗೆ ಯಾವ ಮಿತಿಯೂ ಇಲ್ಲ. ಕಾಯಿದೆ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ ಎಂದು ಬೀಗುತ್ತಿರುವ ಪೊಲೀಸ್ ಇಲಾಖೆ ಮತ್ತು ಆರ್.ಟಿ.ಓ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅವಳಿ ನಗರಗಳಲ್ಲಿ ಕಾರಣ ಸುಲಭವಾಗಿ ಊಹಿಸುವಂತಿದೆ.
ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರತಂದು ತಪ್ಪಿತಸ್ಥರ ಕಾಯ್ದೆ ಪರಿಪಾಲನೆ ಮಾಡದವರ ವಿರುದ್ಧ ಕಠೋರ ಕ್ರಮ ಜರುಗಿಸಲು ಮುಂದಾಗಲಿ, ಸಾರ್ವಜನಿಕರ ನ್ಯಾಯಯುತ ಹಿತ ಕಾಪಾಡಲಿ.

- ದೀಕ್ಷಿತ ಯ.ಚಿ
ಧಾರವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.