ಮನೆ ತುಂಬಾ ಜನ ಇದ್ರೆ ಕಷ್ಟಗಳು ಕಡಿಮೆ...

Updated on: 

ಸಾಮಾನ್ಯವಾಗಿ, ಊರಿಂದ ಫೋನ್ ಮಾಡುವುದು ಅಮ್ಮನ ಕೆಲಸವೇ. ಅಮ್ಮ, ಚೆನ್ನಾಗಿದೀಯ ತಾನೆ ಎಂದು ಆರಂಭಿಸಿ, ಬೆಳಗ್ಗೆ ತಿಂಡಿ ತಿಂದೆಯಾ?  ತುಂಬಾ ಚಳಿ ಇದೆಯಾ? ಶೀತದ ಕಾರಣಕ್ಕೆ ತಲೆ ನೋವು ಬರ್ತಿದೆಯೋ ಹೇಗೆ ಎಂದೆಲ್ಲ ವಿಚಾರಿಸುತ್ತಾಳೆ. ಆಫೀಸಿಗೆ ಹೋಗುವಾಗ, ಆ ಕಡೆಯಿಂದ ಬರುವಾಗ ಹುಷಾರು. ಪಿ.ಜಿ.ಯಲ್ಲಿ ಊಟ ಚೆನ್ನಾಗಿಲ್ಲ ಅಂತ ಯಾವ್ಯಾವುದೋ ಹೋಟೆಲಿಗೆ ಹೋಗಿ ಆರೋಗ್ಯ ಕೆಡಿಸ್ಕೋಬೇಡ ಎಂದೆಲ್ಲ ಬುದ್ದಿ ಹೇಳುತ್ತಾಳೆ. ಆನಂತರ ಇವರು ಮಾತಾಡ್ತಾರಂತೆ ಎನ್ನುತ್ತಾ ಅಪ್ಪನ ಕೈಗೆ ಫೋನ್ ದಾಟಿಸುತ್ತಾಳೆ.
ಊರಿಂದ ಫೋನ್ ಬಂದರೆ ಪ್ರತಿ ಸಂದರ್ಭದಲ್ಲಿ ಆಗುವುದೇ ಹೀಗೆ. ಅಮ್ಮನ ಬದಲಿಗೆ ಅಪ್ಪನೇ ಫೋನ್ ಮಾಡುತ್ತಾರೆ ಎಂದರೆ ಏನೋ ವಿಶೇಷ ಸುದ್ದಿ ಇದೆ ಎಂದೇ ಅರ್ಥ. ವಾರದ ಹಿಂದೆ ಹೀಗೇ ಆಯಿತು. ಅಮ್ಮ ಕಾಲಿಂಗ್ ಎಂಬ ಸಂದೇಶವನ್ನು ಮೊಬೈಲ್ನ ಪರದೆಯಲ್ಲಿ ಕಂಡು-'ಹಲೋ, ಎಂದಾಗ- 'ಅಮ್ಮ ಪಕ್ಕದ ಮನೆಗೆ ಹೋಗಿದಾಳಮ್ಮ. ನಿಂಗೆ ಒಂದು ಸುದ್ದಿ ಹೇಳಲಿಕ್ಕಿದೆ. ನಮ್ಮೂರ ಸೀತಾರಾಮಯ್ಯ ಇದ್ದಾರಲ್ಲ, ಅದೇ ಶಾನುಭೋಗ ಸೀತಾರಾಮಯ್ಯನವರು... ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಚಿಕಿತ್ಸೆಗೆ ಅಂತ ಜಯದೇವ ಆಸ್ಪತ್ರೆಗೆ ಸೇರಿಸಿದ್ದಾರೆ. ಊರಲ್ಲಿ ಬಿಟ್ಟೂ ಬಿಡದೆ ಮಳೆ ಸುರೀತಿದೆ. ಹಾಗಾಗಿ ವಿಪರೀತ ಕೆಲಸ. ಅಷ್ಟು ದೂರ ಬಂದು ಹೋಗೋದು ನಮಗಂತೂ ಕಷ್ಟ. ಹೇಗಿದ್ರೂ ನೀನು ಅಲ್ಲೇ ಇದೀಯಲ್ಲ; ಹೋಗಿ ಮಾತಾಡಿಸಿಕೊಂಡು ಬಾ' ಎಂದರು. ಹಿಂದೆಯೇ ಒಂದು ಫೋನ್ ನಂಬರ್ ಕೊಟ್ಟು, ಆಸ್ಪತ್ರೆಗೆ ಹೋಗಿ ಈ ನಂಬರ್ಗೆ ಕಾಲ್ ಮಾಡು. ಯಾರಾದ್ರೂ ಬಂದು ನಿನ್ನನ್ನು ವಾರ್ಡ್ಗೆ ಕರ್ಕೊಂಡು ಹೋಗ್ತಾರೆ ಎಂದರು.
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಅಜ್ಜನಂತೆ ಕಂಡಿದ್ದವರು ಸೀತಾರಾಮಯ್ಯನವರು. ಅವರು ಗಾಂಧೀಜಿಯ ಅನುಯಾಯಿಯಂತೆ. ಗಾಂಧೀಜಿಯನ್ನು ಪ್ರತ್ಯಕ್ಷ ಕಂಡಿದ್ದವರಂತೆ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಗಣರಾಜ್ಯೋತ್ಸವದಂದು ಶಾಲೆಯ ಮಕ್ಕಳಿಗೆ ಚಾಕೊಲೇಟ್ ಕೊಡುವುದು ಹಾಗೂ ಊರಲ್ಲಿ ಯಾರದೇ ಮನೆಯ ಮಗು ಎಸ್ಸೆಸ್ಸೆಲ್ಸಿ ಪಾಸ್ ಆದರೆ, ಅವರ ಮನೆಗೇ ಹೋಗಿ ನಗದು ಬಹುಮಾನ ನೀಡಿ ಡಿಗ್ರಿ ಮುಗಿಸಿ ಊರಿಗೆ ಒಳ್ಳೇ ಹೆಸರು ತರಬೇಕು ಎಂದು ಶುಭ ಹಾರೈಸುವುದು ಸೀತಾರಾಮಯ್ಯನವರ ಅಭ್ಯಾಸವಾಗಿತ್ತು. ಮತ್ತೊಂದು ವಿಶೇಷವೆಂದರೆ, ಅವರ ಮನೆಯಲ್ಲಿ ಯಾವಾಗಲೂ ವಿಪರೀತ ಎನ್ನುವಷ್ಟು ಜನ ಇರುತ್ತಿದ್ದರು. ಅದನ್ನು ಕಂಡವರೆಲ್ಲ, ಇದೇನು ಮನೆಯೋ ಇಲ್ಲ ಛತ್ರವೋ? ಇಷ್ಟೊಂದು ಜನರನ್ನು ಸೀತಾರಾಮಯ್ಯನವರ ಹೆಂಡತಿ ಹೇಗಾದ್ರೂ ನಿಭಾಯಿಸ್ತಾರೋ ಎನ್ನುತ್ತಿದ್ದರು. ಹೇಳಿ ಕೇಳಿ ಇದು ಇಳಿವಯಸ್ಸು. ಇಂಥ ಸಂದರ್ಭದಲ್ಲಿ ಹಾರ್ಟ್ ಅಟ್ಯಾಕ್ ಆಗಿದೆ ಅಂದರೆ ಬಹುಶಃ ಅಜ್ಜ ಈ ಹೊತ್ತಿಗೆ ಕೋಮಾಕ್ಕೆ ಹೋಗಿರಬಹುದು. ಅವರನ್ನು ಐಸಿಯುನಲ್ಲಿ ಇರಿಸಿರಬಹುದು. ಸೀತಾರಾಮಯ್ಯನವರ ಪತ್ನಿ, ದಿಕ್ಕು ತೋಚದೆ ಒಂದು ಮೂಲೆಯಲ್ಲಿ ಕೂತಿರಬಹುದು. ಇಂಥ ಸಂದರ್ಭದಲ್ಲಿ ಅವರು ನನ್ನನ್ನು ಗುರುತಿಸುತ್ತಾರಾ? ಮಾತಾಡಿಸುತ್ತಾರಾ? ಒಂದು ವೇಳೆ ಅವರು ಮಾತೇ ಆಡದಿದ್ರೆ ಏನು ಮಾಡುವುದು ಎಂದೆಲ್ಲ ಲೆಕ್ಕಾಚಾರ ಹಾಕುತ್ತಲೇ ಆಸ್ಪತ್ರೆ ತಲುಪಿಕೊಂಡೆ.
ಅಲ್ಲಿ, ಸೀತಾರಾಮಯ್ಯನವರ ಕುಟುಂಬದ ಹಲವರಿದ್ದರು. ಯಾರ ಮುಖದಲ್ಲೂ ದುಗುಡದ ಭಾವವಿರಲಿಲ್ಲ. ಸೀತಾರಾಮಯ್ಯನವರ ಹೆಂಡತಿ -'ಈಗ ಬಂದ್ಯಾ? ಊರಿಂದ ಅಪ್ಪ ಫೋನ್ ಮಾಡಿದ್ರಾ? ಯಜಮಾನ್ರಿಗೆ ಏನೂ ತೊಂದರೆಯಿಲ್ಲವಂತೆ. ಈಗ ನಿದ್ರೆ ಮಾಡ್ತಾ ಇದಾರೆ. ನಾಲ್ಕು ದಿನದ ನಂತರ ಡಿಸ್ಚಾರ್ಜ್ ಮಾಡಬಹುದೇನೋ' ಎಂದರು. ಅವರೊಂದಿಗೆ ಅದೂ ಇದೂ ಹರಟುತ್ತಾ ಕೂತವಳಿಗೆ ಸಂಜೆಯಾಗಿದ್ದೇ ತಿಳಿಯಲಿಲ್ಲ. ಈ ಮಧ್ಯೆ ಯಾರೋ ಕಾಫಿ ತಂದು ಕೊಟ್ಟರು. ಇನ್ಯಾರೋ ಜ್ಯೂಸ್ ತಂದಿಟ್ಟರು. ಮತ್ತಿಬ್ಬರು ಚುರುಮುರಿಯನ್ನು ಪಾರ್ಸಲ್ ತಂದು ಎಲ್ಲರಿಗೂ ಹಂಚಿದರು. ಊಹುಂ, ಅಲ್ಲಿದ್ದ ಯಾರೊಬ್ಬರೂ ಸೀತಾರಾಮಯ್ಯನವರ ಆರೋಗ್ಯದ ಬಗ್ಗೆ ಹೆದರಿದಂತೆ ಕಾಣಲೇ ಇಲ್ಲ. ಕುಟುಂಬದ ಹಿರಿಯರೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದಾಗಲೂ, ಹೀಗೆ ಸ್ಥಿತಪ್ರಜ್ಞರಂತೆ ಇರುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಬಿಟ್ಟೂ ಬಿಡದೆ ಕಾಡಿತು. ಹೊರಡುವ ಮುಂಚೆ, ರಾಯರ ಪತ್ನಿಗೆ ಹಾಗಂತ ಕೇಳಿ ಬಿಟ್ಟೆ. ಅವರು, ನನ್ನೊಂದಿಗೆ ನಾಲ್ಕು ಹೆಜ್ಜೆ ನಡೆದು ಬಂದು ಹೇಳಿದರು: 'ನಮ್ಮ ಯಜಮಾನರಿಗೆ ಎಂಟು ಜನ ಅಕ್ಕ ತಂಗಿ. ಅವತ್ತಿನ ಕಾಲಕ್ಕೆ ಮನೇಲಿ ತುಂಬಾ ಬಡತನವಿತ್ತಂತೆ. ತಮ್ಮ ಚೆನ್ನಾಗಿರಲಿ ಎಂಬ ಆಸೆಯಿಂದ, ಅಕ್ಕ ತಂಗಿಯರೆಲ್ಲ ತಾವು ಉಪವಾಸವಿದ್ದು ತಮ್ಮನನ್ನು ಚೆನ್ನಾಗಿ ಬೆಳೆಸಿದರಂತೆ. ನಮ್ಮ ಯಜಮಾನರು ಇದ್ಯಾವುದನ್ನೂ ಮರೆಯಲಿಲ್ಲ. ಮದುವೆಯಾದಾಗ ಇದೆಲ್ಲವನ್ನೂ ಹೇಳಿ, ಸಂದರ್ಭ ಬಂದರೆ ನಿನ್ನನ್ನು ಬಿಟ್ಟು ಬದುಕಬಲ್ಲೆ. ಆದ್ರೆ ಅಕ್ಕ ತಂಗಿಯರನ್ನು ಬಿಟ್ಟು ಬದುಕಲಾರೆ ಅಂದುಬಿಟ್ಟರು. ಮದುವೆಯ ನಂತರವೂ ಬಡತನದಲ್ಲೇ ಇದ್ದ ಅಕ್ಕಂದಿರ ಮಕ್ಕಳನ್ನು ವರ್ಷಕ್ಕೆ ಇಬ್ಬರಂತೆ ಕರೆ ತಂದರು. ಈ ಮಧ್ಯೆ ನನ್ನ ತವರಿನಲ್ಲೂ ಬಡತನವಿತ್ತು. ಯಜಮಾನರ ಮನಸ್ಸು ದೊಡ್ಡದು. ಅವರ ಕರುಣೆ ನನ್ನ ತವರಿನ ಮೇಲೂ ಬಿತ್ತು. ಪರಿಣಾಮ, ನನ್ನ ತಮ್ಮಂದಿರು, ತಂಗಿಯರೂ ನಮ್ಮ ಮನೆಗೇ ಬಂದರು. ಇರುವುದನ್ನು ಎಲ್ಲರೂ ಹಂಚಿಕೊಂಡೆವು. ಯಜಮಾನರು ಎಲ್ಲರಿಗೂ ಸಮಾನ ಮನ್ನಣೆ ನೀಡಿ ಎಲ್ಲರನ್ನೂ ಓದಿಸಿದರು. ಇವತ್ತು ನಮ್ಮ ಕುಟುಂಬದ ಎಲ್ಲರೂ ಒಳ್ಳೆಯ ನೌಕರಿಯಲ್ಲಿದ್ದಾರೆ. ಯಜಮಾನರ ಯೋಗಕ್ಷೇವು ವಿಚಾರಿಸಲು ಎಲ್ಲರೂ ಓಡಿ ಬಂದಿದ್ದಾರೆ. ಹಣ, ಶಿಫಾರಸುಗಳಿಗೆ ಕೊರತೆ ಬಂದಿಲ್ಲ. ಎಲ್ಲರನ್ನೂ ಒಮ್ಮೆಗೇ ಕಂಡ ಯಜಮಾನರೂ ಖುಷಿಯಾಗಿದ್ದಾರೆ. ಹೃದಯಾಘಾತದಿಂದ ತುಂಬ ಬೇಗ ಚೇತರಿಸಿಕೊಂಡಿದ್ದಾರೆ. ಈ ಮಕ್ಕಳೆಲ್ಲಾ ಓಡಾಡೋದು, ಉಪಚರಿಸುವುದನ್ನು ನೋಡಿದ್ರೆ ಯಾರಿಗೆ ತಾನೇ ಸಾಯುವ ಮನಸ್ಸು ಬರ್ತದೇ ಹೇಳು?'
ಅವಿಭಕ್ತ ಕುಟುಂಬ ನಮ್ಮದಾದರೆ ಎಂಥ ಸಂಕಟವನ್ನೂ ಸುಲಭವಾಗಿ ಎದುರಿಸಬಹುದು ಎಂಬ ಸರಳ ಸತ್ಯ ಸೀತಾರಾಮಯ್ಯನವರ ಪತ್ನಿಯ ಮಾತುಗಳಿಂದ ಅರ್ಥವಾಯಿತು. ಈ ದಿನಗಳಲ್ಲಿ, ಗಂಡ, ಮನೆ, ಮಕ್ಕಳು ಎಂದು ಪ್ರತ್ಯೇಕ ದ್ವೀಪವಾಗುತ್ತಿರುವ ಕುಟುಂಬಗಳಿಗೆ ಹೀಗೆಲ್ಲ ಸಂಭ್ರಮಪಡುವ ಸೌಭಾಗ್ಯವಿಲ್ಲ ಎನ್ನಿಸಿ ವಿಷಾದವೂ ಆಯಿತು. ಬಹುಷಃ ನಾಳೆ ಅಥವಾ ನಾಡಿದ್ದು ಅಪ್ಪ ಫೋನ್ ಮಾಡಬಹುದು. ಆಗ ಇದೆಲ್ಲವನ್ನೂ ಹೇಳಬೇಕು....

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com