ಇರುವೆ ಮೇಲೆ ಬ್ರಹ್ಮಾಸ್ತ್ರವೇ?
ಜುಲೈ 4ರ ಸಂಚಿಕೆಯ ವಕ್ರತುಂಡೋಕ್ತಿಯಲ್ಲಿ 'ಫೋನ್ ಕರೆ ಬಂದಾಗ, ಹೆಂಗಸರು ಕುರ್ಚಿ ಹುಡುಕುತ್ತಾರೆ' ಎಂಬುದಾಗಿ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಮಾತು. ಫೋನ್ ಕರೆ ಬಂದಾಗ, ಹೆಂಗಸರು ಆ ಕರೆಗೆ ಉತ್ತರಿಸುತ್ತಾ, ಅಡುಗೆ ಮಾಡುತ್ತಾ, ಪಕ್ಕದ ಮನೆಯ ಜಗಳಕ್ಕೂ ಕಿವಿಕೊಡುತ್ತಾ, ಗಂಡು ಮಕ್ಕಳಿಗೆ ಸಹಸ್ರ ನಾಮಾರ್ಚನೆ ಹಾಕುತ್ತಾ, ಏಕಕಾಲಕ್ಕೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಆದರೆ ಗಂಡಸರು ಫೋನ್ ಕರೆ ಬಂದಾಗ, ಕೇಳಿದರೂ ಕೇಳಿಸದಂತೆ ನಟಿಸುತ್ತಾ, ಪೇಪರನ್ನು ತೂತಾಗುವಂತೆ ದಿಟ್ಟಿಸುತ್ತಾ, ಕುರ್ಚಿ ಬಿಟ್ಟೇಳದೆ, ಜಾಣ ಕಿವುಡನ್ನು ಚೆನ್ನಾಗಿ ಪ್ರದರ್ಶಿಸುತ್ತಾರೆ. ಹೀಗೆ ಗಂಡಸರು ನಾಟಕ ಮಾಡುತ್ತಿದ್ದರೆ, ಹೆಂಗಸರು ಏನು ಮಾಡಲು ಸಾಧ್ಯ?
ಅಂದ ಹಾಗೆ, ಕೊಕ್ಕಡದ ಭಟ್ರು ಹಾಗೂ ಶ್ರೀವತ್ಸ ಜೋಷಿಯವರ ಸಾಹಿತ್ಯಿಕದ ಕುರಿತಾದ ತಿಕ್ಕಾಟ (?)ದ ತೀರ್ಮಾನ ಇನ್ನೂ ಆಗಿಲ್ಲ ಯಾಕೆ? ಅಂತಿಮ ತೀರ್ಮಾನವನ್ನು ವಸುಧೇಂದ್ರರಿಗೆ ವಹಿಸಿದ್ದರೆ ಚೆನ್ನಾಗಿತ್ತು. ಸಾಮಾನ್ಯ ತಮ್ಮ ಎಲ್ಲ ಲೇಖನಗಳಲ್ಲೂ ಆ 'ಪದ' ಪ್ರಯೋಗ ಮಾಡಿ, ಸಾಕಷ್ಟು ಮಡಿವಂತರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡಾ, ವಸುಧೇಂದ್ರರು ತಮ್ಮ ಸಾಹಿತ್ಯಿಕ ಕೃಷಿಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ, ಕನ್ನಡಪ್ರಭದ ಇತರ ಎಲ್ಲಾ ಅಂಕಣಗಳಿಗಿಂತ ತಪ್ಪಾಯ್ತು ತಿದ್ಕೋತೀವಿ ಎಂಬ ಕಾಲೆಳೆವ ಅಂಕಣವೇ ತುಂಬ ಇಷ್ಟವಾಗುತ್ತಿದೆ.
- ಜಯಶ್ರೀ ಕೆ., ಮೈಸೂರು
ದಿನಾಂಕ 08.07.2013ರ ಕ.ಪ್ರ. ಪತ್ರಿಕೆಯಲ್ಲಿ ಕಸ-ರಸ ವಿಭಾಗದಲ್ಲಿ 'ಹಳೆಯ ಹೂ ಕುಂಡದ ಬಳಕೆ' ಎಂದು 'ಇರುವೆಗಳನ್ನು ಓಡಿಸಲು' ಸಲಹೆ ನೀಡಲಾಗಿದೆ. ಇರುವೆಗಳಿರುವೆಡೆಯಲ್ಲಿ ಕುಂಡವನ್ನು ಬೋರಲು ಹಾಕಿ ಬಿಸಿ ನೀರು ಸುರಿಯಿರಿ. ಆಗ ಇರುವೆಗಳು ಸಾಯುತ್ತವೆ ಎಂದೂ ಹೇಳಲಾಗಿದೆ. ಇರುವೆಗಳೂ ಸಹ ಪರಿಸರದ ಭಾಗವಲ್ಲವೆ? ಅವುಗಳನ್ನು ಸಾಯಿಸಲು ಅಥವಾ ಆ ರೀತಿ ಸಲಹೆ ನೀಡಲು ನಿಮಗೇನು ಹಕ್ಕಿದೆ? ಇರುವೆಗಳಿಂದ ಯಾವುದೇ ಮಾರಕ-ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. ಪರಿಸರದ ಇತರ ಜೀವಿಗಳನ್ನು ಹೀನಾಯವಾಗಿ ನೋಡಿ ಅವುಗಳ ನಾಶಕ್ಕೆ ಕಾರಣವಾಗುತ್ತಿರುವ ಮನುಷ್ಯನಿಗೆ ಮತ್ತೊಂದು ಜೀವಿಯನ್ನು ಸಾಯಿಸಲು ಹೀಗೆ ಸಲಹೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಇರುವೆಗಳು ಯಾವಾಗಲೂ ಒಂದೇ ಸ್ಥಳದಲ್ಲಿ ಇರುವುದಿಲ್ಲ. ಇರುವೆಗಳಿರುವ ಕಡೆ ಸಕ್ಕರೆ ಅಥವಾ ರವೆ ಹಾಕಿದರೆ ಇಲ್ಲವಾಗುತ್ತವೆ. ಇರುವೆಗಳ ಕಾಟ ವಿಪರೀತವಾಗಿದ್ದರೆ ಅರಿಶಿನದ ಪುಡಿ ಸಿಂಪಡಿಸಿದರೆ ಜಾಗ ಖಾಲಿ ಮಾಡುತ್ತವೆ ಎಂದು ನಮ್ಮ ಹಿರಿಯರು ಹೇಳಿ ಇರುವೆಗಳ ಬಗ್ಗೆ ಪ್ರೀತಿ ಮೂಡಿಸುತ್ತಿದ್ದರು. ಅವೂ ಬದುಕಲು ಬಿಡುತ್ತಿದ್ದರು. ಇದೇನು? ಬಿಸಿ ನೀರು ಸುರಿಯುವುದು ಇಂತಹ ಕ್ರೂರ ಕೆಲಸವನ್ನು ಕಸ-ರಸವೆಂದು ಪ್ರಕಟಿಸುವುದು ಸರಿಯಲ್ಲ. ಇತರ ಜೀವಿಗಳಿಗೆ ಮಾರಕವಲ್ಲದ ಹಾಗೂ ಪರಿಸರಕ್ಕೆ ಪೂರಕವಾದ ಕಸ-ರಸವನ್ನಷ್ಟೇ ಆಯ್ಕೆ ಮಾಡಿದರೆ ಉತ್ತಮ.
- ಕೆ. ನಿರ್ಮಲ ಮರಡಿಹಳ್ಳಿ, ಡಾನ್ಬೋಸ್ಕೋ ಎಜುಕೇಷನ್ಸ್
ಚಿತ್ರದುರ್ಗ-577 501., ದೂ. 99015 27137
ಕನ್ನಡಪ್ರಭದಲ್ಲಿ "ಮಾಹಿತಿ ಪ್ರಭ" ಅದ್ಭುತವಾಗಿ ಮೂಡಿ ಬರುತ್ತಿದೆ. ವಿಷಯಗಳು ಒಂದೇ ಎರಡೇ-ಹಲವಾರು! ಯು ಅಪ್ನಿಂದ ಲಾಭ., ಹೆಲ್ಮೆಟ್ ಉಪಯೋಗ., ಮುಂಗಾರು ಮಂದಹಾಸ., ತೆರಿಗೆ ಒಂಬುಡ್ಸ್ಮನ್., ಕಾರು ಕೊಳ್ಳುವುದು ಹೇಗೆ?, ಪಾಸ್ವರ್ಡ್ ಗೊಂದಲಕ್ಕೆ ತೆರೆ., ಆರೋಗ್ಯ ಕಾಳಜಿ., ಸೋಲಾರ್ ನಿರ್ವಹಣೆ., ಮಕ್ಕಳ ವೆಚ್ಚಕ್ಕೆ ತೆರಿಗೆ ವಿನಾಯ್ತಿ., ರೇಷ್ಮೆ ಬಟ್ಟೆಗಳ ರಕ್ಷಣೆ., ಸಿಗರೇಟ್ ಲೋಕದ ಸುತ್ತ, ಇತರೆ-ಇತರೆ-ಇತರೆ... ನಮ್ಮಂತಹ 'ಅಜ್ಞ'ರಿಗೆ ನಿಜಕ್ಕೂ ತಜ್ಞ ಮಾಹಿತಿಗಳ ಕಣಜ!
- ಕೆ. ಶ್ರೀನಿವಾಸರಾವ್, ಸುಖಶಯನ ಡಿಲಕ್ಸ್ ಲಾಡ್ಜ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ, 583131
ಜುಲೈ 14ರ ಕನ್ನಡಪ್ರಭದ ಸಾಪ್ತಾಹಿಕ ಪ್ರಭ ಸಂಚಿಕೆಯಲ್ಲಿ ಮೂಡಿ ಬಂದ ಕೆ.ಕೆ. ಗಂಗಾಧರನ್ ಅವರ ಆರ್.ಎಂ.ಎಸ್. (ರೈಲ್ವೆ ಮೇಲ್ ಸರ್ವೀಸ್)ಗೆ 150ರ ಸಂಭ್ರಮ. 'ಓಲೆಯ ತಂದೆನು' ಲೇಖನ ಮಾಹಿತಿ ಪೂರ್ಣವಾಗಿತ್ತು. 50 ಪೈಸೆಯ (ಅಂದಿನ 15 ಪೈಸೆ) ಪೋಸ್ಟ್ ಕಾರ್ಡನ್ನು ಸಹಾ ದೂರದ ರಾಜ್ಯಗಳಲ್ಲಿರುವ ಹಳ್ಳಿಗಳಲ್ಲಿರುವ ವ್ಯಕ್ತಿಗಳಿಗೆ ತಲುಪಿಸಲು ಅಂಚೆನೌಕರರು ತೋರುವ ಕಾಳಜಿ, ಪಡುವ ಶ್ರಮ ನಿಜಕ್ಕೂ ಶ್ಲಾಘನೀಯ.
- ಫ್ಯಾಷನ್ ಡಿಸೈನರ್ ಮಧು, ಹಾಸನ, 99457- 37427
'ದಾಸ ಸಾಹಿತ್ಯ' ಅಂಕಣದಲ್ಲಿ ಪ್ರಕಟವಾದಂತೆ, ಜಯಂತ್ ಕಾಯ್ಕಿಣಿಯವರು ಟೀ ಪ್ರೇಮ ಡೈವೋರ್ಸ್ಗೆ ದಾರಿ ಮಾಡಿಕೊಡದಂತೆ ಥರ್ಮಾಸ್ ಫ್ಲಾಸ್ಕ್ ತಂದಿಟ್ಟುಕೊಂಡಿದ್ದು ಪದೇ ಪದೆ ಟೀ ಕೇಳುವ ಗಂಡಂದಿರನ್ನು ಕಟ್ಟಿಕೊಂಡಿರುವ ಹೆಣ್ಣು ಮಕ್ಕಳಿಗಷ್ಟೇ ಗೊತ್ತಿರಲು ಸಾಧ್ಯ. ನನ್ನಂತೆ ಕಾಯ್ಕಿಣಿಯವರಿಗೂ "ನೀರುಟೀ" ಇಷ್ಟವಾದದ್ದು ಟೀ ಸವಿದಷ್ಟೇ ಖುಷಿ ನೀಡಿತು.
- ಪ್ರಮೀಳಾ ಮಹಾದೇವ್, ದೊಡ್ಡಬಳ್ಳಾಪುರ
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

