ಅಂಕಣಗಳು

ಸ್ವಾವಲಂಬನೆಯಿಂದಲೇ ಸಮಾನತೆ ಸಾಧ್ಯವಲ್ಲವೇ?

Published On :

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುವಾಗ ನಡೆದ ಒಂದು ಘಟನೆಯನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಒಂದು ದಿನ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಗ್ರಾಮದ ರೇಣುಕ ಎನ್ನುವವರು ಬೆಂಗಳೂರಿನಲ್ಲಿರುವ ತಮ್ಮ ಬಂಧುಗಳೊಡನೆ ನನ್ನನ್ನು ಕಾಣಲು ಕಚೇರಿಗೆ ಬಂದರು. ತಾವು ಹದಿನಾಲ್ಕನೇ ವಯಸ್ಸಿನಲ್ಲಿಯೇ ಮದುವೆಯಾಗಿ, ನಂತರ ಮೂರು ಮಕ್ಕಳ ತಾಯಿಯಾಗಿ, ಸಂಸಾರದ ತಾಪತ್ರಯಗಳು ಬಹಳ ಹೆಚ್ಚಾಗಿ, ದಿಕ್ಕುಗಾಣದೆ ಜೀವವನ್ನೇ ಕಳೆದುಕೊಂಡು ಬಿಡಬೇಕು ಎನಿಸಿದಾಗ ಅವರ ಬೆಂಗಳೂರಿನ ಬಂಧುಗಳು ಅವರನ್ನು ನನ್ನ ಬಳಿ ಬಲವಂತದಿಂದ ಕರೆತಂದರೆಂದೂ, ನಾನು ಏನಾದರೂ ದಾರಿ ತೋರಿಸಬೇಕೆಂದು ಹೇಳುತ್ತಾ ಅಳತೊಡಗಿದರು. ಅವರನ್ನು ಸಮಾಧಾನ ಪಡಿಸಿ, ಕುಡಿಯಲು ಪಾನೀಯವನ್ನು ತರಿಸಿಕೊಟ್ಟು, ಅವರ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದೆ. ನಿಮಗೆ ಯಾವ ಕಸುಬು ಬರುತ್ತದೆ ಎಂದು ಕೇಳಿದೆ. ಅವರ ಬಂಧುಗಳು ಹೇಳಿದರು, 'ಬಹಳ ಚೆನ್ನಾಗಿ ಕವುದಿ ಅಥವಾ ರಜಾಯಿ ಅಥವಾ ಹಚ್ಚಡವನ್ನು ಹೊಲೆಯುತ್ತಾರೆ' ಎಂದು. ತಕ್ಷಣ ನನ್ನ ಮನಸ್ಸಿನಲ್ಲಿ ಎರಡು ಆಲೋಚನೆಗಳು ಹೊಳೆದವು. ಒಂದು ಸ್ತ್ರೀಶಕ್ತಿಯ ಸಾಫಲ್ಯದ್ದು. ಮತ್ತೊಂದು ನಾನು ಎಂದೋ ಓದಿದ ಒಂದು ಕಥೆಯದ್ದು. ಮೊದಲು ಕಥೆಯ ಬಗ್ಗೆಯೇ ಹೇಳುತ್ತೇನೆ. ಬಹಳ ಹಿಂದಿನ ಕಾಲದಲ್ಲಿ, ಒಂದೂರಿನಲ್ಲಿ.....ವರ, ವಧುವಿನ ತಂದೆಗೆ ವಧು ದಕ್ಷಿಣೆಯಾಗಿ ಹಸುಗಳನ್ನು ಕೊಟ್ಟು ಮದುವೆ ಮಾಡಿಕೊಳ್ಳಬೇಕಾಗಿತ್ತು. ಹೆಣ್ಣು ಸುಂದರವಾಗಿ, ಒಳ್ಳೆ ಕೆಲಸ ಮಾಡುವವಳಾದರೆ ಅವಳಿಗೆ ಐದರಿಂದ ಆರು ಹಸುಗಳನ್ನು ಕೊಟ್ಟು ಮದುವೆಯಾಗುತ್ತಿದ್ದರು. ಇಲ್ಲದಿದ್ದರೆ ಒಂದು ಅಥವಾ ಎರಡು ಹಸುಗಳನ್ನು ಕೊಡುತ್ತಿದ್ದರು. ಆ ಊರಿನಲ್ಲಿ ಒಬ್ಬ ಬಡ ಹುಡುಗಿ ಇದ್ದಳು.
ಅವಳು ಉತ್ತಮ ಕೆಲಸಗಾರ್ತಿಯಾದರೂ ನೋಡಲು ಸುಮಾರಾಗಿದ್ದುದರಿಂದ ಎರಡು ಹಸುಗಳ ಬೇಡಿಕೆಯನ್ನು ಅವಳ ತಂದೆ ಇಡುತ್ತಿದ್ದ. ಕೊನೆಗೆ ಒಂದಾದರೂ ಸರಿ ಎಂದು ಹೇಳುತ್ತಿದ್ದ! ಪರ ಊರಿನ ಸಾಹುಕಾರನೊಬ್ಬ ಒಂದು ವಾರ ಆ ಊರಿಗೆ ಬಂದು ತಂಗಿ, ಎಲ್ಲರ ಮನೆಯ ಹೆಣ್ಣುಗಳ ಗುಣ ಮತ್ತು ಕೆಲಸವನ್ನು ಪರೀಕ್ಷೆ ಮಾಡಿ ಆ ಬಡ ಹುಡುಗಿಯನ್ನು ತಾನು ಮದುವೆಯಾಗುವುದಾಗಿಯೂ, ತಾನು ಎಂಟು ಹಸುಗಳನ್ನು ಕೊಡಲು ಸಿದ್ಧನೆಂದೂ ತಿಳಿಸಿದ. ಆ ಮಾತನ್ನು ಕೇಳಿದಂದಿನಿಂದ ಆ ಹುಡುಗಿ ಉತ್ತಮವಾಗಿ ಕಾಣುವಂತೆ ಅಲಂಕಾರ ಮಾಡಿಕೊಂಡು ಆತ್ಮವಿಶ್ವಾಸದಿಂದ ಬೆಳಗತೊಡಗಿದಳು. ಅವಳ ಆಂತರಿಕ ಸೌಂದರ್ಯವನ್ನು ಗಮನಿಸಿದ ಆ ಸಾಹುಕಾರ ಅವಳ ಆತ್ಮವಿಶ್ವಾಸವನ್ನೇ ಬದಲಾಯಿಸಿದ. ಅಂತೆಯೇ ರೇಣುಕಾರವರ ಆಂತರಿಕ ಶಕ್ತಿಯನ್ನು ನಾನು ಸ್ತ್ರೀಶಕ್ತಿ ಯೋಜನೆಯ ಸಹಾಯದಿಂದ ಬಡಿದೆಬ್ಬಿಸಬೇಕೆಂದು ನಿರ್ಧರಿಸಿದೆ. ರೇಣುಕಾರವರಿಗೆ 'ನಿಮಗೆ ಎಷ್ಟು ಜನ ಸ್ನೇಹಿತರು ಅಥವಾ ಬಂಧುಗಳು ಇದ್ದಾರೆ, ಅವರೆಲ್ಲರಿಗೂ ಕವುದಿ ಮಾಡಲು ಬರುವುದಾ?' ಎಂದು ಕೇಳಿದಾಗ, 'ಕೆಲವರಿಗೆ ಬರುತ್ತದೆ, ಕೆಲವರಿಗೆ ಹೇಳಿಕೊಡಬಲ್ಲೆ' ಎಂದರು. ತಕ್ಷಣ ಹಳಿಯಾಳದ ಅಂಗನವಾಡಿಯ ಕಾರ್ಯಕರ್ತೆಯನ್ನು ಸಂಪರ್ಕಿಸಿ, ರೇಣುಕಾರವರಿಗೆ ಸ್ತ್ರೀಶಕ್ತಿ ಯೋಜನೆಯ ಬಗ್ಗೆ ಸಂಪೂರ್ಣ ತರಬೇತಿ ಕೊಡಬೇಕೆಂದು ಆದೇಶ ನೀಡಿದೆ. ತಿಂಗಳಿಗೊಮ್ಮೆಯಾದರೂ ರೇಣುಕಾರವರು ನನ್ನನ್ನು ಸಂಪರ್ಕಿಸಬೇಕೆಂದು ಹೇಳಿ ಕಳುಹಿಸಿಕೊಟ್ಟೆ.
ಒಂದು ತಿಂಗಳಿನ ಒಳಗೆ ಅವರು ನನಗೊಂದು ಕವುದಿಯನ್ನೂ ತೆಗೆದುಕೊಂಡು ಕಾಣಲು ಬಂದರು. 'ರೇಣುಕಾ ಸ್ತ್ರೀಶಕ್ತಿ ಮಹಿಳಾ ಸಂಘ'ವನ್ನು ಸ್ಥಾಪಿಸಿ, ತಾವೇ ಅಧ್ಯಕ್ಷರಾಗಿ, ಇನ್ನೂ 19 ಮಂದಿಯನ್ನು ಸದಸ್ಯರನ್ನಾಗಿ ಮಾಡಿಕೊಂಡು, ಪ್ರತಿಯೊಬ್ಬರೂ ವಾರ ವಾರ ಸೇರಿ, ಹಣ ಉಳಿತಾಯ ಪ್ರಾರಂಭಿಸಿ, ಬ್ಯಾಂಕಿನಲ್ಲಿ ಖಾತೆಯನ್ನು ತೆಗೆದು, ಕವುದಿ ಮಾಡುವ ವ್ಯವಹಾರವನ್ನು ಆರಂಭಿಸಿದ್ದರು! ಅವರ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಆರು ತಿಂಗಳ ಬಳಿಕ ಅವರ ಜೀವನವೇ ಬದಲಾಗಿ ಹೋಗಿತ್ತು. ಅವರೇ ಬೇರೆಯವರಿಗೆ ಮಾದರಿಯಾಗಿಬಿಟ್ಟಿದ್ದರು. ಒಂದು ತುಂಡು ಬಟ್ಟೆಯೂ ನಷ್ಟವಾಗದಂತೆ ಅವರ ಕವುದಿ ತಯಾರಿಕೆಗೆ ಹೋಗುತ್ತಿತ್ತು. ಇಲಾಖೆಯ ನೆರವಿನಿಂದ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದರು. ಬ್ಯಾಂಕಿನಿಂದ ಸಾಲವನ್ನೂ ಸಹ ಪಡೆದಿದ್ದರು. ಒಂದು ವರ್ಷದ ನಂತರ ಅವರ ವ್ಯವಹಾರ ದುಪ್ಪಟ್ಟುಗೊಂಡು, ಯಶಸ್ಸಿನ ಹೆಜ್ಜೆಯಲ್ಲಿ ನೆಮ್ಮದಿಯಾಗಿದ್ದರು.
ಪ್ರತಿಯೊಬ್ಬ ಮಹಿಳೆಯಲ್ಲಿ ಸುಪ್ತವಾಗಿರುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಾಮರ್ಥ್ಯ ಅತ್ಯದ್ಭುತವಾದುದು. ಮಹಿಳೆಯಿಲ್ಲದೆ ಮನೆ, ಸಮಾಜ, ದೇಶ, ಅಷ್ಟೇ ಏಕೆ ಮಾನವನ ಅಸ್ತಿತ್ವವೂ ಕುಸಿದು ಬೀಳುತ್ತದೆ. ಮಹಿಳೆ ಮಾಡಲಾಗದ ಕೆಲಸ ಯಾವುದೂ ಇಲ್ಲ. ಈಗ ನಾವು ಮಾಡಬೇಕಾಗಿರುವ ಅತಿ ಮುಖ್ಯವಾದ ಕೆಲಸವೆಂದರೆ, ಈ ಸುಪ್ತ ಶಕ್ತಿಯನ್ನು ಬಡಿದೆಬ್ಬಿಸಿ ಚಲನಾತ್ಮಕ ಶಕ್ತಿಯಾಗಿ ಪರಿವರ್ತನೆ ಮಾಡುವುದು. ಹಾಗೆ ಮಾಡಿದಾಗ ಮಹಿಳೆಯ ಜೀವನ ಮತ್ತು ಮಾನವ ಕುಲದ ಬದುಕು ಅರ್ಥಪೂರ್ಣವಾಗುತ್ತದೆ.
ಅಜ್ಞಾನ, ಅವಿದ್ಯೆ, ಮೂಢನಂಬಿಕೆ, ಹಿಂಸೆ, ಅನೈತಿಕ ಚಟುವಟಿಕೆಗಳಿಗೆ ಮುಖ್ಯ ಕಾರಣ ಬಡತನ ಎಂದು ಹೇಳುತ್ತಾರೆ. ಈ ವಿಷವರ್ತುಲವನ್ನು ಬದಲಿಸಿ ಅದಕ್ಕೆ ಉತ್ಕೃಷ್ಟತೆಯ  ರೂಪ ಕೊಡುವುದು ಪ್ರತಿಯೊಬ್ಬರಿಂದಲೂ ಸಾಧ್ಯ. ತಾನು ಬದಲಾಗಬೇಕು ಎಂಬ ಭಾವನೆ ಅವರಲ್ಲಿ ಮೂಡಬೇಕು ಅಷ್ಟೆ. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಯೋಜನೆ ಉತ್ತಮವಾಗಿ ಕೆಲಸ ಮಾಡಬಲ್ಲದು. ಕೇವಲ ಸರ್ಕಾರ, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ಇದರಲ್ಲಿ ಭಾಗಿಯಾದರೆ ಸಾಲದು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ತನ್ನ ಯಶಸ್ಸಿನೊಂದಿಗೆ ಇನ್ನೊಬ್ಬರ ಕೈ ಹಿಡಿದರೆ ಸ್ತ್ರೀಶಕ್ತಿ ಸಾಫಲ್ಯವಾಗುವುದು ಸುಲಭಸಾಧ್ಯ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಎಂದಿನ ತನಕ ನಾವು ಪರಾವಲಂಬಿಗಳಾಗಿರುತ್ತೇವೆಯೋ ಅಂದಿನವರೆಗೂ ನಾವು ಸ್ವಂತ ಬಲದಿಂದ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಎಂದು ನಾವು ಯಾರನ್ನೂ ದೂಷಿಸದೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವ ನಿರ್ಧಾರ ಮಾಡುತ್ತೇವೋ ಅಂದಿನಿಂದ ನಾವು ವಿಫಲರಾಗುವುದಿಲ್ಲ. ಇದೇ ಸ್ತ್ರೀಶಕ್ತಿ ಸಂಘಟನೆಯ ಮೂಲ ಮಂತ್ರ. 2001 ರಲ್ಲಿ ಸರ್ಕಾರ ಸ್ತ್ರೀ ಶಕ್ತಿ ಮಹಿಳಾ ಗುಂಪುಗಳನ್ನು ರಚಿಸಿ, ಸಂಘಟನೆಯ ಅನುಕೂಲಗಳನ್ನು ತಿಳಿಸಿ, ತಮ್ಮ ತಾಪತ್ರಯಗಳಿಗೆ ಹೇಗೆ ತಾವೇ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಬಗ್ಗೆ ಬಡಮಹಿಳೆಯರಿಗೆ ತರಬೇತಿ ಕೊಟ್ಟು ಸಾಫಲ್ಯವನ್ನು ಪಡೆಯಲು ಅನುವು ಮಾಡಿ ಕೊಟ್ಟಿದೆ.  ಪ್ರತಿಯೊಂದು ಸ್ತ್ರೀಶಕ್ತಿ ಗುಂಪುಗಳೂ ಒಂದು ಮಹತ್ತರ ಕ್ರಾಂತಿಯನ್ನೇ ಮಾಡಿವೆ. ಮೊದಲನೆಯದಾಗಿ, ತಮ್ಮದೇ ಸಾಮಾಜಿಕ ಹಿನ್ನೆಲೆಯಿರುವವರೆಲ್ಲರೂ ಒಂದಾಗಿ ಗುಂಪುಗಳನ್ನು ಮಾಡಿಕೊಂಡು, ಪರಸ್ಪರ ನಂಬಿಕೆಯ ಆಧಾರದ ಮೇಲೆ ಒಬ್ಬಳೇ ಮಾಡಲಾಗದುದನ್ನು ಒಗ್ಗಟ್ಟಿನಿಂದ ಮಾಡಿ ತೋರಿಸಬಹುದು ಎಂದು ಅರಿತುಕೊಂಡಿದ್ದಾರೆ.  ಬ್ಯಾಂಕ್ ಖಾತೆ ತೆರೆಯಲೋಸುಗ ಓದು, ಬರಹ ಕಲಿತಿದ್ದಾರೆ. ಇದರಿಂದಾಗಿ ಸ್ವಾವಲಂಬನೆಯ ಮೊದಲ ಹೆಜ್ಜೆ ಹಾಕಿದ್ದಾರೆ. ಮನೆಯ ಸಣ್ಣಪುಟ್ಟ ಕೆಲಸಗಳಿಗಾಗಲೀ, ಮಗುವಿನ ಚಿಕಿತ್ಸೆಗಾಗಲೀ, ಸಾಮಾಜಿಕ ಭಾಧ್ಯತೆಗಾಗಲೀ, ಅವಳು ಯಾರನ್ನೂ ಬೇಡುತ್ತಾ ಕುಳಿತುಕೊಳ್ಳಬೇಕಾಗಿಲ್ಲ. ತಾನೇ ಬೇರೆಯವರಿಗೆ ಹಣ ಸಹಾಯ ಮಾಡುವಷ್ಟು ಬೆಳೆದು ನಿಂತಿದ್ದಾಳೆ. ಅವಳಲ್ಲಿ ಬೇರೆಯವರಂತೆ ಶೋಷಿಸುವ ಮನೋಭಾವ ಖಂಡಿತ ಇಲ್ಲ. ಸಾಲದಿಂದ ಮುಕ್ತಿಯ ಜೊತೆ ತಾನೇ ನಿರ್ಧಾರ ತೆಗೆದುಕೊಳ್ಳಬಲ್ಲೆ ಎಂಬ ಆತ್ಮ ವಿಶ್ವಾಸ, ಅವಳು ಸಬಲೀಕರಣದತ್ತ ನಡೆಯಲು ಮಾರ್ಗದರ್ಶಿಯಾಗುತ್ತದೆ. ಅಂದಿನಿಂದ ಅವಳು ಹಿಂತಿರುಗಿ ನೋಡದೆ ಒಬ್ಬಳೇ ಅಥವಾ ಗುಂಪಿನಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಿ ಸ್ವಾವಲಂಬಿಯಾಗುತ್ತಾಳೆ. ಇಡೀಗುಂಪು ಇತರರ ಕಷ್ಟ ಸುಖಗಳು, ಸುತ್ತಮುತ್ತಲಿನ ಸಮಾಜದ ಬಗ್ಗೆಯೂ ಅಲೋಚಿಸಲು ಆರಂಭಿಸುತ್ತದೆ.
ಇಂದು ಕರ್ನಾಟಕದಲ್ಲಿ ಒಂದು ಲಕ್ಷ ನಲವತ್ತು ಸಾವಿರ ಸ್ತ್ರೀ ಶಕ್ತಿ ಗುಂಪುಗಳಿವೆ. ಇಪ್ಪತ್ತೊಂದು ಲಕ್ಷ ಸದಸ್ಯರಿದ್ದಾರೆ. ಯೋಜನೆ ಪ್ರಾರಂಭವಾದಾಗಿನಿಂದ ಇಂದಿನವರೆಗೆ ಅವರು 1118.05 ಕೋಟಿ ರುಪಾಯಿಗಳನ್ನು ಉಳಿಸಿದ್ದಾರೆ. 1,20,155 ಜನರು ಬ್ಯಾಂಕಿನಿಂದ 1305.97 ಕೋಟಿ ರು.ಗಳ ಸಾಲವನ್ನು ಪಡೆದಿದ್ದಾರೆ. ಹಲವಾರು ಆದಾಯ ಗಳಿಸುವ ಚಟುವಟಿಕೆಗಳಿಗೆ ಅವರ ಆಂತರಿಕ ಸಾಲ 3215.88 ಕೋಟಿ ರು.ಗಳು. ಅವರು ಬ್ಯಾಂಕಿನ ಸಾಲವನ್ನು ಶೇಕಡಾ 99ರಷ್ಟು ಮರುಪಾವತಿ ಮಾಡಿದ್ದಾರೆ. ಇದಕ್ಕಿಂತ  ಮಹಿಳಾ ಸಬಲೀಕರಣದ ಉದಾಹರಣೆ ಬೇರೆಲ್ಲಿ ಸಿಗುತ್ತದೆ?
ಸಂಗ್ರಹಿಸಿದ ಹಣವನ್ನು ಸದುಪಯೋಗ ಪಡಿಸಿ ಬಂಡವಾಳವನ್ನು ಹಾಕಿ ಹೆಚ್ಚೆಚ್ಚು ಆದಾಯವನ್ನು ಗಳಿಸಲು ಮಹಿಳೆಯರಿಗೆ ಸರಿಯಾದ ಸಹಾಯ ಮಾಡಬೇಕಾಗುತ್ತದೆ. ಅವರು ಪಾರಂಪರಿಕವಾಗಿ ತಯಾರಿಸಿದ ಸಾಮಗ್ರಿಗಳನ್ನು ಮಾರಾಟ ಮಾಡಲು ತೊಂದರೆ ಅನುಭವಿಸುತ್ತಿದ್ದರು. ಅದಕ್ಕಾಗಿ 2008-09ರಿಂದ ಸರ್ಕಾರದ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳನ್ನು ಬಲಪಡಿಸಲಾಗುತ್ತಿದೆ. ಎಲ್ಲ ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳೂ ಈ ಒಕ್ಕೂಟದಲ್ಲಿ ಭಾಗಿಯಾಗಬೇಕೆಂಬುದು ಆಶಯ. ಅವರಿಗೆ ಮಾರುಕಟ್ಟೆಯ ಹೊಂದಾಣಿಕೆ, ಕೌಶಲ್ಯ ಅಭಿವೃದ್ಧಿ, ವೃತ್ತಿ ತರಬೇತಿ, ಸ್ವ-ಉದ್ಯೋಗ ಮಾರ್ಗದರ್ಶನ, ಮಹಿಳಾ ಅಭಿವೃದ್ಧಿ ಯೋಜನೆಯ ಅನುಷ್ಠಾನ ಮುಂತಾದವುಗಳ ಬಗ್ಗೆ ಅವಕಾಶ ಕಲ್ಪಿಸಿಕೊಡಲಾಯಿತು. ತಾಲೂಕು ಮಟ್ಟದಲ್ಲಿ ಸ್ತ್ರೀಶಕ್ತಿ ಮಾರುಕಟ್ಟೆಗಳನ್ನು ಕಟ್ಟಲು ಸರ್ಕಾರ ಅನುದಾನ ಒದಗಿಸಿತು.
ಅಬಲೆಯಿಂದ ಸಬಲೆ, ಸಂಘಟನೆಯಿಂದ ಸುರಕ್ಷತೆ, ಸಾಮರ್ಥ್ಯದಿಂದ ಸ್ವಾವಲಂಬನೆ, ಸ್ವಾವಲಂಬನೆಯಿಂದ ಸಮಾನತೆ, ಸಮಾನತೆಯಿಂದ ಸಮೃದ್ಧಿ, ಸಮೃದ್ಧಿಯಿಂದ ಸ್ತ್ರೀ ಶಕ್ತಿ ಸಾಫಲ್ಯವಲ್ಲವೆ?
(ಮುಂದುವರೆಯುವುದು)


- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.