ಹೊಸ ಅವತಾರದಲ್ಲಿ ಸಿದ್ದರಾಮಯ್ಯ: ಅಗ್ನಿ ಪರೀಕ್ಷೆ

ಕಳೆದ ಏಪ್ರಿಲ್‌ವರೆಗೂ ಸಿದ್ದರಾಮಯ್ಯ ಅವರು ರಾಜ್ಯ ವಿಧಾನ ಸಭೆಯಲ್ಲಿ...
Updated on: 

ಕಳೆದ ಏಪ್ರಿಲ್‌ವರೆಗೂ ಸಿದ್ದರಾಮಯ್ಯ ಅವರು ರಾಜ್ಯ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ, ವಿಧಾನ ಮಂಡಲದ ಒಳಗೆ- ಹೊರಗೆ ಹಿಂದಿನ ಮೂರು ಸರ್ಕಾರಗಳ ಲೋಪದೋಷಗಳನ್ನೆಲ್ಲ ಪಟ್ಟಿ ಮಾಡಿ, ಅಂದಿನ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ಆ ಕೆಲಸವನ್ನು ಅವರು ಎಷ್ಟು ಸಮರ್ಥವಾಗಿ ನಿರ್ವಹಿಸಿದರೋ ಇಲ್ಲವೋ ಎನ್ನುವ ವಿಚಾರ ಬೇರೆ. ಆ ವಿವಾದಕ್ಕೆ ತೀರ್ಪಿನ ಮಾನದಂಡ ಯಾವುದೂ ಇಲ್ಲ. ಸಿದ್ದರಾಮಯ್ಯ ಆಗ ಮಾಡಿದ ಟೀಕೆಗಳಿಗೆ ಅಂದಿನ ಸಿಎಂಗಳು, ಸರ್ಕಾರದ ಅಧಿಕಾರಿಗಳು ಕೊಟ್ಟ ಕಡತಗಳನ್ನು ಆಧರಿಸಿ ಒದಗಿಸಿದ ಮಾಹಿತಿ, ಟಿಪ್ಪಣಿಗಳನ್ನು ಗಮನಿಸಿ ತಮ್ಮ ರಾಜಕೀಯ ನಿಲವಿಗೆ ತಕ್ಕಂತೆ ಸಮಾಧಾನ ಹೇಳಿದ್ದರು.
ಈಗ ಅದೇ ಸಿದ್ದರಾಮಯ್ಯ ಮುಖ್ಯಮಂತ್ರಿ. ಕಡತ, ದಾಖಲೆಗಳೆಲ್ಲ ಅವರ ಕೈಯಲ್ಲೇ ಇರುವುದರಿಂದ, ಹಿಂದೆ ಪ್ರಸ್ತಾಪವಾಗಿದ್ದ ಪ್ರಶ್ನೆಗಳೇ ಮತ್ತೆ ಮತ್ತೆ ಪ್ರಸ್ತಾಪವಾಗುವ ಸನ್ನಿವೇಶದಲ್ಲಿ ಈಗಿನ ಮುಖ್ಯಮಂತ್ರಿ ನಿಜವಾಗಿಯೂ ಅನೇಕ ಸಂದರ್ಭದಲ್ಲಿ ಪೇಚಿನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು. ಹಿಂದೆ ಅವರಿಗಿದ್ದ ಖಾಸಗಿ ಮಾಹಿತಿಗೂ, ಈಗಿರುವ ಅಧಿಕೃತ ಮಾಹಿತಿಗೂ ವ್ಯತ್ಯಾಸವಿದ್ದರೆ, ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಯಮವನ್ನು ಅವರು ಪ್ರದರ್ಶಿಸಬೇಕು. ಅದೇ ಮುತ್ಸದ್ದಿತನದ ಮೊದಲ ಲಕ್ಷಣ.
 ನಿಜ. ಈಗಿನ ವಿಧಾನ ಮಂಡಲದ ಅಧಿವೇಶನದಲ್ಲಿ ಆಗಾಗ ರಾಜಕೀಯವಾಗಿ ಚಕಮಕಿ, ವಾಗ್ಯುದ್ಧಗಳೇ ನಡೆದರೂ ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಪೇಚಿನಲ್ಲಿ ಸಿಕ್ಕಿ ಬೀಳುವ ಪರಿಸ್ಥಿತಿ ಬಂದಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯೇ ಹಾಗಿದೆ. ಹಿಂದೆ ಇದ್ದ ಎಲ್ಲ ಸಮಸ್ಯೆಗಳೂ ಹಾಗೇ ಉಳಿದಿವೆ. ರಾಜಕೀಯವಾಗಿ ಹೊಸದಾದ ಬೆಳವಣಿಗೆಗಳೇನೂ ಆಗಿಲ್ಲ. ಸಿದ್ದರಾಮಯ್ಯ ಅವರು ತಮ್ಮಸ್ಥಾನದಲ್ಲಿ ಭದ್ರವಾಗಿ ಪ್ರತಿಷ್ಠಾಪನೆಯಾಗಿದ್ದಾರೆ. ಅದು ಮಧುಚಂದ್ರದ ಮೊದಲ ದಿನಗಳ ಅನುಭವ. ಈಗಾಗಲೇ ರಾಜಕೀಯ ಪಕ್ಷಗಳಲ್ಲಿ ಮುಂದಿನ ಲೋಕಸಭೆ ಚುನಾವಣೆಯ ಸಿದ್ಧತೆ ಮಾನಸಿಕವಾಗಿ ಆರಂಭವಾಗಿದೆ. ಆದ್ದರಿಂದ ಯಾರಿಗೂ ಸಾಮಾನ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಜಗಳವಾಡಲು ಮನಸ್ಸೂ ಇಲ್ಲ, ವಾತಾವರಣವೂ ಅದಕ್ಕೆ ಅನುಕೂಲವಾಗಿಲ್ಲ.
 ಈಗಲೇ ಲೋಕಸಭೆ ಚುನಾವಣೆ ನಡೆದರೆ ರಾಜ್ಯದಿಂದ ಕಾಂಗ್ರೆಸ್ಸಿನ "ಬಹುಮಂದಿ ನೂತನ ಸಂಸತ್ ಸದಸ್ಯರು ದೆಹಲಿಗೆ ಹೋಗಬಹುದೆಂದೇ" ಎಲ್ಲ ಸಮೀಕ್ಷೆಗಳೂ ಹೇಳುತ್ತಿವೆ. ಸಾಮಾನ್ಯ ಜನರ ಅನಿಸಿಕೆಯೂ ಹಾಗೇ ಇರಬಹುದು. ಮೇ ನಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ರೀತಿಯಲ್ಲೇ ಬೆಂಬಲ ನೀಡಿದ್ದ ಜನ ಜುಲೈ- ಆಗಸ್ಟ್ ವೇಳೆಗೆ ಅಭಿಪ್ರಾಯವನ್ನು ಬದಲಾಯಿಸಬೇಕಾದಂತಹ ಮಹತ್ವದ ರಾಜಕೀಯ ಘಟನೆಗಳೇನೂ ನಡೆದಿಲ್ಲ. ಕಾಂಗ್ರೆಸ್ಸಿನ ಬಯಕೆಯಂತೆ, ಕನಿಷ್ಠ ಪಕ್ಷ 28 ಕ್ಷೇತ್ರಗಳಲ್ಲಿ 20ರಲ್ಲಿ ಗೆಲ್ಲಬೇಕು. ಸದ್ಯದ ವಾತಾವರಣದಲ್ಲಿ ಅದೇನೂ ಅಸಾಧ್ಯವಾದದ್ದೇನೂ ಅಲ್ಲ. ವಿಧಾನ ಸಭೆ ಚುನಾವಣೆಯ ಮತದಾನದ ಸ್ವರೂಪವೇ ಮುಂದುವರಿಯಲೇ ಬೇಕೆಂದೇನೂ ಇಲ್ಲ. ಆದರೆ ಅದು ಮುಂದೆಯಾದರೂ ಬದಲಾಗಬೇಕಾದರೆ  ಏನಾದರೂ ಕಾರಣ ಬೇಕಲ್ಲ. ಅದು ಸದ್ಯಕ್ಕೆ ಕಂಡು ಬರುತ್ತಿಲ್ಲ.

ಜಾತಿಗಳ ಲೆಕ್ಕಚಾರ:
ನಿಜ. ವಿಧಾನ ಸಭೆ ಚುನಾವಣೆಯ ಅನಂತರ ರಾಜ್ಯದ ಪ್ರಭಾವಿ, ಪ್ರಬಲ ಜಾತಿಗಳ ನಾಯಕರ ಶಕ್ತಿ ಕುಂದಿದೆ. ರಾಜಕೀಯ ಶಕ್ತಿ ಹಾಗೂ ಅಧಿಕಾರ ಅವರ ಕೈ ತಪ್ಪಿದೆ. ಸಹಜವಾಗಿಯೇ ಆ ವರ್ಗದ ನಾಯಕರಲ್ಲಿ ರಾಜಕೀಯ ಅಧಿಕಾರ ತಮ್ಮ ಕೈ ತಪ್ಪಿಹೋದದಕ್ಕೆ ವಿಷಾದವಿದೆ. ಕೋಪವೂ ಇದೆ. ಅದಕ್ಕೆ ಕಾರಣರಾದವರ ವಿಚಾರದಲ್ಲಿ ದ್ವೇಷವೂ ಇದೆ. ಆದರೆ ಅದರ ಪ್ರದರ್ಶನಕ್ಕೆ ವೇದಿಕೆಗಳಿಲ್ಲ. ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯ ಅವರು ಈಗ ರಾಜ್ಯಾಧಿಕಾರದಲ್ಲಿ ವಸ್ತುಶಃ- ಅಕ್ಷರಶಃ, ಖಾತೆಗಳ ರೂಪದಲ್ಲಿ ಅರ್ಧದಷ್ಟನ್ನು ಹಿಡಿದಿಟ್ಟುಕೊಂಡಿದ್ದಾರೆ. ಅದರ ಜತೆಗೇ ಮುಖ್ಯಮಂತ್ರಿಯ ವಿಶೇಷ ಸ್ಥಾನ-ಮಾನವೂ ಇರುವುದರಿಂದ ಹೆಚ್ಚು ಕಡಿಮೆ ಸರ್ಕಾರದ ಮೇಲಿನ ಸಂಪೂರ್ಣ ಹಿಡಿತವನ್ನು ಅವರು ಗಳಿಸಿದ್ದಾರೆ. ಇದು ಸಾಧ್ಯವಾಗಿದ್ದು ವೀರಶೈವ ಮತಗಳು ಒಡೆದು ಹೋಗಿದ್ದು ಹಾಗೂ ಒಕ್ಕಲಿಗರ ಮತಗಳು ಒಂದೇ ಕಡೆ ಗುಡ್ಡೆಯಾಗಿ ಬಿದ್ದಿದ್ದರಿಂದ. ಬಿಜೆಪಿಗಂತೂ ಮಗ್ಗುಲು ಮುರಿದಂತಾಗಿದೆ. ಈಗ ಆ ಪಕ್ಷದ ನಾಯಕರ ರಾಜಕೀಯ ಚಿಂತನೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚಲನವಲನ, ಮಾತು, ಹಾವಭಾವಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಬೇರೆ ಯಾವ ವಿಚಾರಕ್ಕೂ ಜಾಗ ಇದ್ದಂತಿಲ್ಲ.
 ಈಗ ವಿಧಾನ ಸಭೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೆಳಕಿಗೆ ಬರುತ್ತಿರುವ ಹಲವು ಬಿಜೆಪಿ ನಾಯಕರ, ಮಾಜಿ ಮಂತ್ರಿಗಳ ವರ್ತನೆ ನಿಜಕ್ಕೂ ಯಾರನ್ನಾದರೂ ಬೆರಗುಗೊಳಿಸಬೇಕು. ಇಂತಹ ಸ್ಫೋಟಕಗಳನ್ನು ವಿಧಾನ ಸಭೆಯಲ್ಲಿ ಆ ಪಕ್ಷದ ಅಳಿದುಳಿದ ನಾಯಕರು ಎದುರಿಸಲೇಬೇಕು. ಆದರೆ ಅದಕ್ಕೆ ಬೇಕಾದ ಸಿದ್ಧತೆ ಪಕ್ಷಕ್ಕೆ ಇದ್ದಂತಿಲ್ಲ. ಈಗಲೂ ಬಿಜೆಪಿ ಯಡಿಯೂರಪ್ಪ ಪಕ್ಷದ ವಿಲೀನವನ್ನು ಬಯಸುವುದೋ ಅಥವಾ ಮೈತ್ರಿ ಮಾತ್ರವೋ ಎನ್ನುವ ತೀರ್ಮಾನವೂ ಅಂತಿಮವಾಗಿ ಯಡಿಯೂರಪ್ಪ ಅವರ ಕೈಯಲ್ಲೇ ಇರುವಂತಿದೆ.

ಬೆಂಗಳೂರು ಗ್ರಾಮೀಣ - ಮಂಡ್ಯ:  ಬೆಂಗಳೂರು ಗ್ರಾಮೀಣ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಂತೂ ಯಾರಿಗೂ ಬೇಡವಾದ, ಯಾರೂ ನಿರೀಕ್ಷದೇ ಇದ್ದ ವಿಷಯವೇ. ಇನ್ನು ಹತ್ತೇ ತಿಂಗಳ (ಅದೂ ಅನುಮಾನ) ಅವಧಿಯ ಸದಸ್ಯತ್ವಕ್ಕೆ ಯಾರೂ ಹಾತೊರೆಯುವುದಿಲ್ಲ. ಆ ಚುನಾವಣೆ ನಡೆಯುವುದೇ ಇಲ್ಲ ಎಂದೇ ಬಹುತೇಕ ಮಂದಿ ಭಾವಿಸಿದ್ದರು.
ವಾಸ್ತವದಲ್ಲಿ ಈ ಉಪ ಚುನಾವಣೆಗೆ ಯಾವುದೇ ರಾಜಕೀಯ ಮಹತ್ವ ಇಲ್ಲದೇ ಹೋದರೂ ದೇವೇಗೌಡರ ಕುಟುಂಬದ ಪ್ರತಿಷ್ಠೆಗೆ ಇದು ದೊಡ್ಡ ಸವಾಲೇ. ಬೆಂಗಳೂರು ಗ್ರಾಮೀಣ ಕ್ಷೇತ್ರವನ್ನು ನಾಲ್ಕು ವರ್ಷಗಳ ಹಿಂದೆ ಕುಮಾರಸ್ವಾಮಿ ಸುಲಭವಾಗಿ ಗೆದ್ದಿದ್ದರು. ಈಗಲೂ ಅಲ್ಲಿ ಜಾತ್ಯತೀತ ಜನತಾ ದಳದ ಬೇರುಗಳು ಗಟ್ಟಿಯಾಗಿವೆ. ಕ್ಷೇತ್ರಗಳ ಪುನಾರಚನೆಯ ಅನಂತರ ಮಂಡ್ಯ ಲೋಕಸಭೆ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಂತೆಯೇ ಆಗಿದೆ. ಅಲ್ಲಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಾಜಿ ಮಂತ್ರಿ ಚೆಲುವರಾಯಸ್ವಾಮಿ ಸುಲಭವಾಗಿ ಗೆದ್ದಿದ್ದರು. ಇವೆರಡೂ ಒಕ್ಕಲಿಗರ ಸೀಮೆಯ ಹೃದಯದಂತಹ ಪ್ರದೇಶಗಳೇ.
ಹಿಂದಿದ್ದಂತೆ ಕಾಂಗ್ರೆಸ್ಸಿಗೆ ಈ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ. ಹುಡುಕಬೇಕು. ಬಿಜೆಪಿಗೆ ಈ 2 ಕ್ಷೇತ್ರಗಳಲ್ಲಿ ಬೇರುಗಳಿಲ್ಲ. ಆದ್ದರಿಂದ ಜೆಡಿಎಸ್‌ಗೇ ಹೆಚ್ಚು ಅನುಕೂಲ ಇರುವುದು ನಿಜ. ಇದರಲ್ಲಿ ಎರಡು ಮಾತಿಲ್ಲ. ಆದರೂ ಪಕ್ಷದ, ಗೌಡರ ಕುಟುಂಬದ ಪ್ರಶ್ನೆಯಾಗಿ ಈ ಉಪ ಚುನಾವಣೆ ಪರಿವರ್ತನೆಯಾಗಿರುವುದರಿಂದ ಇದು ಜೆಡಿಎಸ್‌ನ ಶಕ್ತಿ ಪರೀಕ್ಷೆಯೇ. ಕಾಂಗ್ರೆಸ್ಸಿನಲ್ಲಿ, ಡಿ.ಕೆ. ಶಿವಕುಮಾರ್‌ಗೆ ಈ ಕ್ಷೇತ್ರದಲ್ಲಿ ಪ್ರಭಾವವಿದೆ. ಆದರೆ ಅವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದೇ ಇರುವ ಹಿನ್ನೆಲೆಯಲ್ಲಿ, ಅವರೂ ಕಾಂಗ್ರೆಸ್ ನಾಯಕರ ಚಲನವಲನವನ್ನು ಮೌನವಾಗಿಯೇ ಗಮನಿಸುತ್ತಿದ್ದಾರೆ. ಅವರೇನಾದರೂ ಅಖಾಡಕ್ಕೆ ಇಳಿದರೆ ಮಾತ್ರ ಚುನಾವಣೆಗೆ ರಂಗು ಬರುವುದು. ಶಿವಕುಮಾರ್ ಮಂತ್ರಿಯಾಗುವುದು, ಬಿಡುವುದು ತಮ್ಮ ಕೈಯಲ್ಲಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಂತ್ರಿಮಂಡಲದಲ್ಲಿ ಅವರು ನಾಲ್ಕು ಸ್ಥಾನಗಳನ್ನು ಖಾಲಿ ಬಿಟ್ಟುಕೊಂಡಿದ್ದಾರೆ. ಅದಕ್ಕಾಗಿ ಕೆಲವು ಖಾತೆಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಆದರೆ ಆ ಸ್ಥಾನಗಳನ್ನು ತುಂಬುವುದರಲ್ಲಿ ಅವರ ಪಾತ್ರ ಕಡಿಮೆಯಾಗುವಂತೆ ಕಂಡು ಬರುತ್ತಿದೆ.

 ಶಾಸಕರ ದೂರು ದುಮ್ಮಾನ: ಹೌದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಆರಿಸಿದ ಕೆಲವು ಮಂತ್ರಿಗಳ ವಿರುದ್ಧ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಟೀಕೆ ಮಾಡಿರುವುದು ನಿಜ. ಹಿರಿಯ ಶಾಸಕರ ದೃಷ್ಟಿಯಲ್ಲಿ ಹೊರಗಿನಿಂದ ಬೇರೆ ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್ಸಿಗೆ ಬಂದು ಆಕಸ್ಮಿಕವಾಗಿ ಮಂತ್ರಿಗಳಾಗಿರುವ ಕೆಲವರ ವರ್ತನೆ ಸರಿಯಾಗಿಲ್ಲ. ಅವರಲ್ಲಿ ಕೆಲವರು ಅಹಂಕಾರದಿಂದ ವರ್ತಿಸುತ್ತಾರೆ. ಶಾಸಕರ ಶಿಫಾರ್ಸುಗಳ ವಿಚಾರದಲ್ಲಿ (ಅಧಿಕಾರಿಗಳ ವರ್ಗ ಇತ್ಯಾದಿ) ಪಕ್ಷದ ಹಿತದ ಚಿಂತನೆಯನ್ನು ಪ್ರದರ್ಶಿಸುತ್ತಿಲ್ಲ. ಈಗ ಸೋತಿರುವ- ಹಿಂದಿನ ಬಿಜೆಪಿ ಶಾಸಕರು ಆರಿಸಿದ ಅಧಿಕಾರಿಗಳೇ ಮುಂದುವರೆದಿದ್ದಾರೆ ಎನ್ನುವ ದೂರು-ದುಮ್ಮಾನದ ಪ್ರದರ್ಶನವಾಯಿತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ ಅವರ ಸಮ್ಮುಖದಲ್ಲೇ ಈ ವಿಚಾರ ಪ್ರಸ್ತಾಪವಾಯಿತು. ಸರ್ಕಾರ ಬದಲಾದಾಗ, ಶಾಸಕರು ಬದಲಾದಾಗ, ಇಂತಹ ಮಾತುಗಳು ಕೇಳಿ ಬರುವುದು ಸಹಜವೇ. ಅಂದರೆ ವಿಧಾನ ಮಂಡಲದ ಅಧಿವೇಶನ ಮುಗಿದ ಅನಂತರ ರಾಜ್ಯದಲ್ಲಿ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಗೆ ವೇದಿಗೆ ಸಜ್ಜಾಗುತ್ತಿದೆ ಎಂದೇ ಅರ್ಥ. ಅದು ವಾಸ್ತವ ರಾಜಕೀಯತೆಯ ಅನಿವಾರ್ಯತೆ. ಇನ್ನೊಂದು ವಾರದೊಪ್ಪತ್ತಿನಲ್ಲಿ ವಿಧಾನ ಮಂಡಲದ ಅಧಿವೇಶನ ಮುಗಿದ ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪೂರ್ಣ ಗಮನವನ್ನು ಆಕರ್ಷಿಸಬೇಕಾದ್ದು ರುಪಾಯಿಗೊಂದು ಕೇಜಿ. ಅಕ್ಕಿಯ ವಿತರಣೆಯ ವ್ಯವಸ್ಥೆ. ಇಡೀ ರಾಜ್ಯದಲ್ಲಿ 98 ಲಕ್ಷ ಜನರಿಗೆ ಈ ವ್ಯವಸ್ಥೆಯ ಸೌಲಭ್ಯವನ್ನು ತಲುಪಿಸುವುದು ಸುಲಭವಲ್ಲ.
ಸಿದ್ದರಾಮಯ್ಯ ಅವರ ಆಡಳಿತ ವ್ಯವಸ್ಥೆಯ ಮೇಲಿನ ಹಿಡಿತಕ್ಕೆ ಆಗಸ್ಟ್‌ನಲ್ಲಿ ಆರಂಭವಾಗುವ ಈ ರುಪಾಯಿಗೊಂದು ಕೇಜಿ ಕಿಲೋ ಅಕ್ಕಿಯ ವಿತರಣೆಯೇ ಅಗ್ನಿ ಪರೀಕ್ಷೆ. ಲೋಕಸಭೆ ಉಪಚುನಾವಣೆಯಲ್ಲ.

ಕಿಡಿಗೇಡಿತನ: ಯೋಜನಾ ಆಯೋಗದ ಮಂಗಳವಾರದ ಪ್ರಕಟಣೆಯಂತೆ, ದೇಶದ ಜನರಲ್ಲಿ ಈಗ ಶೇಕಡಾ 26.93ರಷ್ಟು ಜನ ಮಾತ್ರ ಬಡವರು. ಹಾಗಿದ್ರೆ ಕೇಂದ್ರ ಸರ್ಕಾರ ಆಹಾರ ಭದ್ರತಾ ವ್ಯವಸ್ಥೆಯಂತೆ ಶೇಕಡಾ 67 ರಷ್ಟು "ಬಡಜನರಿಗೆ" ಅತಿ ಅಗ್ಗದ ದರದಲ್ಲಿ ಧಾನ್ಯ ಪೂರೈಕೆಗೆ ಎರಡು ಲಕ್ಷ ಕೋಟಿ ರುಪಾಯಿಗೂ ಹೆಚ್ಚಿನ ಹಣವನ್ನು ಒದಗಿಸಿರುವುದೇಕೆ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com