ಸೌಲಭ್ಯಕ್ಕಾಗಿ ಹುತಾತ್ಮನ ತಂದೆಯ ಹೋರಾಟ
ಕಾರ್ಗಿಲ್ ಯುದ್ಧದಂಥ ಸಂದರ್ಭಗಳನ್ನು ಹೊರತುಪಡಿಸಿ ಗಡಿಯಲ್ಲಿನ ಚಕಮಕಿಗಳಿಗೆ ಯೋಧರು ಪ್ರಾಣ ನೀಡುತ್ತಾರೆ. ಅಂಥ ಯೋಧರ ಕುಟುಂಬಗಳಿಗೆ ನಿರೀಕ್ಷಿತ ನೆರವು ಸಿಕ್ಕಿಲ್ಲ.
2002 ಜೂನ್ 30 ರಂದು ಲಡಾಖ್ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಹಾಸನ ಜಿಲ್ಲೆಯ ಸಕಲೇಶಪುರದ ವೀರಯೋಧ ಎ.ಕೆ. ಸಾಗರ್ ಕುಟುಂಬ ಈಗಲೂ ಮಡಿದ ಯೋಧರಿಗೆ ಕಾನೂನುಬದ್ಧವಾಗಿ ನೀಡಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹರ ಸಾಹಸ ಮಾಡುತ್ತಿದೆ. ತಮ್ಮ ಮಗ ಉಗ್ರರ ವಿರುದ್ಧ ಹೋರಾಡಿ ಮಡಿದರೆ, ನಾವು ಸರ್ಕಾರದ ಸವಲತ್ತು ಪಡೆಯಲು ಹೋರಾಡಬೇಕಿದೆ ಎಂದು ನೋವಿನಿಂದ ನುಡಿಯುತ್ತಾರೆ ತಂದೆ.
ಇತ್ತೀಚೆಗೆ ಹೈ ಕೋರ್ಟ್ ಯುದ್ಧದಲ್ಲಿ ಮಡಿದ ಹಾಗೂ ನಿವೃತ್ತರಾದ ಸೈನಿಕರನ್ನು ಅವಲಂಬಿಸಿದ ಕುಟುಂಬಗಳಿಗೆ ಸ್ಥಳೀಯವಾಗಿ ಕನಿಷ್ಠ ಪಕ್ಷ 5 ರಿಂದ 10 ಎಕರೆಯವರೆಗೆ ಭೂಮಿ ನೀಡಬೇಕೆಂದು ಆದೇಶಿಸಿದೆ. ಸಾಗರ್ ತಂದೆ ಕುಮಾರೇಗೌಡರಿಗೆ ಪಿಂಚಣೆ ಬರುತ್ತದೆ ಹೊರತು ಇನ್ನೇನೂ ಇಲ್ಲ. ನಿವೇಶನ ಕೇಳಿದರೂ ನೀಡಿಲ್ಲ.
ತಾಗಿತು ಪಾಕ್ ಉಗ್ರರ ಗುಂಡು: 19 ವರ್ಷ ವಯಸ್ಸಿನಲ್ಲಿಯೇ ಸೇನೆಗೆ ಸೇರಿದ ಸಾಗರ್ ಚಂಡೀಗಢದಲ್ಲಿ 2 ವರ್ಷ ಕರ್ತವ್ಯ ನಿರ್ವಹಿಸಿದ ನಂತರ ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಪಾಕಿಸ್ತಾನದ ಉಗ್ರರು ಭಾರತದ ಗಡಿ ಪ್ರವೇಶಿಸಿದರು. ಅವರನ್ನು ಹಿಮ್ಮೆಟ್ಟಿಸುವ ಯುದ್ಧದಲ್ಲಿ ಭಾಗಿಯಾದಾಗ ಸಾಗರ್ಗೆ ಗುಂಡು ತಾಗಿತ್ತು. ಆಗ ನಾಲ್ಕು ತಿಂಗಳ ರಜೆಗೆ ಸಕಲೇಶಪುರಕ್ಕೆ ಆಗಮಿಸಿದ್ದರು. ನಂತರ ಮತ್ತೆ ಕಾರ್ಯಕ್ಕೆ ಮರಳಿದಾಗ ಲಡಾಖ್ನಲ್ಲಿ ಅಡಗಿ ಕುಳಿತ ಪಾಕ್ ಪಾತಕಿಗಳ ಗುಂಡಿಗೆ 25 ವರ್ಷದ ಸಾಗರ್ ಬಲಿಯಾದರು.
19 ವರ್ಷಗಳಾದರೂ ಕೃಷಿ ಭೂಮಿ ಸಿಕ್ಕಿಲ್ಲ: ಸಾಗರ್ ಅವರ ತಂದೆ ಕುಮಾರೇಗೌಡ ಅವರಿಗೆ ಪಿಂಚಣಿ ಹೊರತುಪಡಿಸಿ, ಬೇರೆ ಯಾವ ಸಹಾಯವನ್ನು ಸರ್ಕಾರ ನೀಡಿಲ್ಲ. ಕೃಷಿ ಭೂಮಿ, ನಿವೇಶನಗಳಿಗೆ ಅರ್ಜಿ ಸಲ್ಲಿಸಿದರೂ ಫಲ ನೀಡಿಲ್ಲ. ಒಂದು ಸಮಾಧಾನದ ಸಂಗತಿ ಎಂದರೆ ಸ್ಥಳೀಯರೇ ಸೇರಿ 2009-10ರಲ್ಲಿ ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಸಾಗರ್ ಪ್ರತಿಮೆ ನಿರ್ಮಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಸಾಗರ್ ಅಂತ್ಯಕ್ರಿಯೆ ನಡೆದ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಮಾರನಹಳ್ಳಿ ಸಮೀಪ 4 ಗುಂಟೆ ಜಮೀನು ನೀಡಿ, ಅಲ್ಲಿ ಪ್ರತಿಮೆ ಸ್ಥಾಪಿಸಿ ಸುಂದರ ಉದ್ಯಾನವನ ಮಾಡಲು ಯೋಜನೆಯಿತ್ತು. ಅದರೆಡೆಗೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ.
- ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

